ಕನ್ನಡ ಸಿನಿಮಾ ಪೋಸ್ಟರ್‌ಗಳ ಮೇಲೆ ‘ಮಸ್ತಾನ್’ ಹೆಸರು ನೋಡದ ಸಿನಿಪ್ರೇಮಿಗಳು ಇರಲಿಕ್ಕಿಲ್ಲ. ಸಿನಿಮಾ ಪ್ರಚಾರ ವಿನ್ಯಾಸದಲ್ಲಿ ದೊಡ್ಡ ಹೆಸರು ಮಾಡಿದ್ದ ಮಸ್ತಾನ್ ಸ್ವಭಾವತಃ ತುಂಬಾ ಸಂಕೋಚ, ಸರಳ ವ್ಯಕ್ತಿ. ಹಾಗಾಗಿ ಸಾಮಾನ್ಯವಾಗಿ ಅವರು ಸಿನಿಮಾ ಸಮಾರಂಭಗಳಿಗೆ ಬರುತ್ತಿರಲಿಲ್ಲ. ಬಂದರೂ ಮಾಧ್ಯಮಗಳ ಕಣ್ಣಿಗೆ ಬೀಳದೆ ತಮ್ಮ ಪಾಡಿಗೆ ತಾವಿರುತ್ತಿದ್ದರು. ಬಹುಪಾಲು ಕನ್ನಡ ಮತ್ತು ಕೆಲವು ತೆಲುಗು ಮತ್ತು ತಮಿಳು ಸಿನಿಮಾಗಳು ಸೇರಿದಂತೆ ಸುಮಾರು 2000ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ವಿನ್ಯಾಸಕಾರರಾಗಿ ಅವರು ಕೆಲಸ ಮಾಡಿದ್ದಾರೆ. ಮಸ್ತಾನ್ ಮೂರು ಸಿನಿಮಾಗಳ ನಿರ್ದೇಶಕರೂ ಹೌದು. ‘ಶುಕ್ಲಾಂಬರಧರಂ’, ‘ಕಲ್ಲೇಶಿ ಮಲ್ಲೇಶಿ’ ಮತ್ತು ‘ಸಿತಾರ’ ಅವರ ನಿರ್ದೇಶನದ ಚಿತ್ರಗಳು.
ಕನ್ನಡ ಚಿತ್ರರಂಗ ಕಂಡ ಮತ್ತೊಬ್ಬ ಖ್ಯಾತ ಪೋಸ್ಟರ್ ವಿನ್ಯಾಸಕಾರ ಗಂಗಾಧರ್ ಅವರ ಶಿಷ್ಯ ಮಸ್ತಾನ್. ಆಂಧ್ರಮೂಲದ ಮಸ್ತಾನ್ ಓದಿದ್ದು ಪಿಯೂಸಿ. ಚಿಕ್ಕಂದಿನಲ್ಲೇ ಅವರಿಗೆ ಚಿತ್ರಕಲೆಯ ಬಗ್ಗೆ ಒಲವು. ಗಂಗಾಧರ್ ಅವರಲ್ಲಿ ಕೆಲಸ ಮಾಡಿದ್ದು ಮಸ್ತಾನ್ ಅವರಿಗೆ ವರವಾಯ್ತು. ಐದು ವರ್ಷಗಳ ಕಾಲ ಗಂಗಾಧರ್ ಅವರಲ್ಲಿ ಕೆಲಸ ಮಾಡಿದ ಮಸ್ತಾನ್ ಸ್ವತಂತ್ರ್ಯವಾಗಿ ಪೋಸ್ಟರ್ ವಿನ್ಯಾಸ ಮಾಡಿದ ಮೊದಲ ಸಿನಿಮಾ ‘ನೀ ಬರೆದ ಕಾದಂಬರಿ’ (1985). ಅಲ್ಲಿಂದ ಮುಂದೆ ಸಾಲು, ಸಾಲು ಸಿನಿಮಾಗಳಿಗೆ ಅವರು ವಿನ್ಯಾಸಕಾರರಾಗಿ ಕೆಲಸ ಮಾಡಿದರು. ‘ಸ್ವಾಭಿಮಾನ’ದಿಂದ ‘ಸಿಪಾಯಿ’ವರೆಗೆ ನಟ ರವಿಚಂದ್ರನ್ ಸಂಸ್ಥೆಯ ಎಲ್ಲಾ ಚಿತ್ರಗಳಿಗೂ ಅವರು ಪ್ರಚಾರ ವಿನ್ಯಾಸಕರು. ಪೆನ್ ಡ್ರಾಯಿಂಗ್‌ನಲ್ಲಿ ಮಸ್ತಾನ್ ಅವರಿಗೆ ವಿಶೇಷ ಪರಿಣತಿಯಿತ್ತು ಎಂದು ಅವರ ಶಿಷ್ಯರು ಗುರುತಿಸುತ್ತಾರೆ.

“ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಅದ್ಭುತ ವಿನ್ಯಾಸಗಳಿಂದ ಸಿನಿಪ್ರೇಮಿಗಳನ್ನು ಮೋಡಿ ಮಾಡಿದವರು ಮಸ್ತಾನ್” ಎನ್ನುತ್ತಾರೆ ನಟ, ಈಶ್ವರಿ ಚಿತ್ರನಿರ್ಮಾಣ ಸಂಸ್ಥೆಯ ಬಾಲಾಜಿ. “ನಮ್ಮ ಸಂಸ್ಥೆಯ ಮತ್ತು ಅಣ್ಣ ರವಿಚಂದ್ರನ್ ಅಭಿನಯದ ಬಹುಪಾಲು ಚಿತ್ರಗಳಿಗೆ ಅವರು ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಕೆಲಸದೆಡೆಗಿನ ಅವರ ಬದ್ಧತೆ, ಶಿಸ್ತು ಅನುಕರಣೀಯ. ನಮ್ಮ ಸಂಸ್ಥೆಯ ಸಿನಿಮಾಗಳ ಪೋಸ್ಟರ್ ವಿನ್ಯಾಸದ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತಾ ಇದ್ದುದು. ವಿನ್ಯಾಸ ಬದಲಿಸುವಂತೆ ಹೇಳಿದರೆ ಒಂದಿಷ್ಟೂ ಬೇಸರ ಮಾಡಿಕೊಳ್ಳದೆ ಒಂದಕ್ಕೆ ಮೂರ್ನಾಲ್ಕು ವಿನ್ಯಾಸಗಳನ್ನು ಮಾಡಿಕೊಡುತ್ತಿದ್ದರು. ಕನ್ನಡ ಚಿತ್ರರಂಗದ ಅಪರೂಪದ ಹಾಗೂ ಪ್ರತಿಭಾವಂತ ವಿನ್ಯಾಸಕಾರನನ್ನು ನಾವು ಕಳೆದುಕೊಂಡೆವು” ಎನ್ನುತ್ತಾರೆ ಬಾಲಾಜಿ.
ಮಸ್ತಾನ್ ವಿನ್ಯಾಸ ಕೆಲವು ಪೋಸ್ಟರ್‌ಗಳಿವು…