ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

ಪೋಸ್ಟ್ ಶೇರ್ ಮಾಡಿ

ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಯಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಟಿ.ಜಿ.ಲಿಂಗಪ್ಪ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು ಸಂಗೀತ ಮತ್ತು ಆಫ್ರಿಕನ್‌ ಜ್ಯಾಸ್‌ ಅವರಿಗೆ ಪ್ರಿಯವಾಗಿತ್ತು. ಆಫ್ರಿಕನ್‌ಜ್ಯಾಸ್‌ ಒಂದರ ಪ್ರೇರಣೆಯಿಂದ ಅವರು ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ‘ಚಳಿ ಚಳಿ ಮೈಯಲಿ’ಯಂತಹ ಬಹಳ ವಿಭಿನ್ನವಾದ ಗೀತೆಯನ್ನು ಸಂಯೋಜಸಿದ್ದರು.

(ಬರಹ: ಎನ್.ಎಸ್.ಶ್ರೀಧರ ಮೂರ್ತಿ, ಲೇಖಕ)

ಕರ್ನಾಟಕಿ ಪದ್ದತಿಯಎಪ್ಪತ್ತೆರಡೂ ಮೇಳಕರ್ತರಾಗಗಳಲ್ಲಿ ಚಿತ್ರಗೀತೆಗಳಿಗೆ ಸ್ವರಸಂಯೋಜನೆ ಮಾಡಿರುವ ಏಕೈಕ ಸಂಗೀತ ನಿರ್ದೇಶಕ ತಾವು ಎಂದು ಒಮ್ಮೆ ಟಿ.ಜಿ.ಲಿಂಗಪ್ಪ ನನ್ನ ಬಳಿ ಹೆಮ್ಮೆಯಿಂದ ಹೇಳಿದ್ದರು. ಇದು ಕೇವಲ ಹೆಮ್ಮೆಯಾಗಿರಲ್ಲಿಲ್ಲ. ಅದಕ್ಕೆ ಸೂಕ್ತ ದಾಖಲೆಗಳೂ ಅವರ ಬಳಿಗೆ ಇದ್ದವು. ನನ್ನ ಮಟ್ಟಿಗೆ ಇಂತಹ ಹಲವು ಮೊದಲುಗಳಲ್ಲಿ ಅವರು ಅಗ್ರಗಣ್ಯರು. ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ ಎಲ್ಲಾ ಸಂಗೀತ ನಿರ್ದೇಶಕರೂ ಹಿಂದೂಸ್ತಾನಿಯ ಹಿನ್ನೆಲೆಯಿಂದ ಬಂದವರೇ. ಕರ್ನಾಟಕಿ ಕಂಪನ್ನು ಅರಳಿಸಿದವರಲ್ಲಿ ಲಿಂಗಪ್ಪನವರೇ ಪ್ರಮುಖರು. ಗೀತರಚನೆಕಾರರಿಂದ ಗೀತೆಗಳನ್ನು ಬರೆಸಿ ನಂತರ ಅದಕ್ಕೆ ಸಂಗೀತ ನೀಡುತ್ತಿದ್ದ ವಿಭಿನ್ನ ಶೈಲಿ ಅವರದು. ಅಪಾರರಾಗ ನಿಷ್ಟೆಯಿದ್ದರೂ ಅದನ್ನು ಭಾವಕ್ಕೆ ಅನುಗುಣವಾಗಿ ಮೀರಬಲ್ಲವರಾಗಿದ್ದರು. ‘ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ಶೋಕಕ್ಕೆ ಹೊಂದುವ ದರ್ಬಾರಿ ಕಾನಡ ರಾಗದಲ್ಲಿ ಪ್ರೇಮಗೀತೆ ‘ಬಹು ಜನ್ಮದ ಪೂಜಾಫಲ’ವನ್ನು ಸಂಯೋಜಿಸಿದಾಗ ಸಂಗೀತ ಬಲ್ಲ ಚಿತ್ರದ ನಿರ್ಮಾಪಕರ ಪಂತಲು ಅವರೇ ಬೆಚ್ಚಿ ಬಿದ್ದಿದ್ದರು. ಆದರೆ ತಮ್ಮ ಸಂಯೋಜನೆ ಶಕ್ತಿ ಅರಿತಿದ್ದ ಲಿಂಗಪ್ಪ ಬದಲಾಯಿಸಲಿಲ್ಲ. ಮುಂದೆ ಆ ಗೀತೆ ಜಯಭೇರಿ ಬಾರಿಸಿದ್ದು ನಮಗೆಲ್ಲಾ ಗೊತ್ತೇ ಇದೆ.

ಟಿ.ಜಿ.ಲಿಂಗಪ್ಪನವರು ಮೂಲತ: ತಮಿಳುನಾಡಿನ ತಿರುಚನಾಪಳ್ಳಿಯವರು. ಹುಟ್ಟಿದ್ದು 1927ರ ಆಗಸ್ಟ್ 22ರಂದು. ತಂದೆ ಟಿ.ಆರ್.ಗೋವಿಂದ ರಾಜಲುನಾಯ್ಡು, ತಾಯಿಗೌರಿ. ಗೋವಿಂದರಾಜಲು ಮೂಲತ: ಸಂಗೀತಕಲಾವಿದರು. ಹಾರ್ಮೋನಿಯಂ ನುಡಿಸುತ್ತಿದ್ದ ಅವರು ಸ್ಥಳೀಯ ನಾಟಕ ತಂಡಗಳಿಗೆ ಹಿನ್ನೆಲೆ ಸಂಗೀತ ಕಲಾವಿದರಾಗಿ ಹೋಗುತ್ತಿದ್ದರು. ಇದು ಲಿಂಗಪ್ಪನವರ ಮೇಲೆ ಪ್ರಭಾವ ಬೀರಿತು. ಚಿಕ್ಕವರಿದ್ದಾಗಲೇ ಹಾರ್ಮೋನಿಯಂ, ತಬಲ ಮೇಲೆ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ಹೈಸ್ಕೂಲಿನವರಗೆ ವ್ಯಾಸಂಗ ಮಾಡಿದ ಲಿಂಗಪ್ಪನವರು ಶಾಲೆಯಲ್ಲಿ ತಮಿಳು ಮಾಧ್ಯಮದಲ್ಲಿ ಕಲಿತರು, ಮನೆ ಮಾತು ತೆಲುಗು, ಕನ್ನಡ ಚಿತ್ರರಂಗಕ್ಕೆ ಬಂದ ಮೇಲೆ ಕನ್ನಡವನ್ನೂ ಚೆನ್ನಾಗಿ ಕಲಿತರು. ಲಿಂಗಪ್ಪನವರು ಹೆತ್ತವರಿಗೆ ಎರಡನೇ ಮಗ. ಇವರ ಅಣ್ಣ ಗಿರಿರಾಜ್ ಸೆಲ್ಲೋ ಕಲಾವಿದರು. ‘ಕಸ್ತೂರಿ ನಿವಾಸ’ದ ಜನಪ್ರಿಯ ಗೀತೆ ‘ಆಡಿಸಿ ನೋಡು ಬೀಳಿಸಿ ನೋಡು’ ಅರಂಭದಲ್ಲಿ ಕೇಳುವುದು ಇವರದೇ ಸೆಲ್ಲೋ. ಇನ್ನು ತಮ್ಮ ಟಿ.ಜಿ.ವೆಂಕಟೇಶ್ ಮೆಂಡೋಲಿನ್ ಮತ್ತು ಸಂತೋರು ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರು.

ಲಿಂಗಪ್ಪನವರು ಒಂದು ರೀತಿಯಲ್ಲಿ ಬಾಲಪ್ರತಿಭೆ. ಆರನೇ ವರ್ಷಕ್ಕೇ ಹಾರ್ಮೋನಿಯಂ ಕಲಿತ ಲಿಂಗಪ್ಪನವರು ಹನ್ನೊಂದನೇ ವಯಸ್ಸಿಗೇ ಸುಲಲಿತವಾಗಿ ಗಿಟಾರ್, ಪಿಯಾನೋ ನುಡಿಸಬಲ್ಲವರಾಗಿದ್ದರು. ಚೆನ್ನೈನ ಶರ್ಮ ಬ್ರದರ್ಸ್‌ ಮೂಲಕ ಚಿತ್ರರಂಗದ ನಂಟು ಬೆಳೆಯಿತು. ಸಹ ಕಲಾವಿದರಾಗಿ ಪ್ರವೇಶ ಪಡೆದರೂ ಬಹುಬೇಗ ಸಹ ಸಂಗೀತ ನಿರ್ದೇಶಕರಾದರು. 1952ರಲ್ಲಿ ‘ಮೋಹನ ಸುಂದರಂಬಾಳ್’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದಾಗ ಅವರ ವಯಸ್ಸು ಕೇವಲ ಇಪ್ಪತ್ತೈದು. ಈ ಚಿತ್ರದ ಮೂಲಕವೇ ಪಂತಲು ಅವರ ಪರಿಚಯವಾಗಿದ್ದು. ಮುಂದೆ ಅತಿ ನಿಕಟವಾದ ಸಂಬಂಧವಾಯಿತು. ಪಂತಲು ಅವರು ‘ಪದ್ಮಿನಿ ಪಿಕ್ಚರ್ಸ್’ಮೂಲಕ ನಿರ್ಮಿಸಿದ ಎಲ್ಲಾ ಚಿತ್ರಗಳಿಗೂ ಪಂತಲು ಅವರದೇ ಸಂಗೀತ. ಇಂತಹ ಇನ್ನೊಂದು ಉದಾಹರಣೆ ದೊರಕುವುದು ಕಷ್ಟ. ಪಂತಲು ಅವರ ‘ಮೊದಲ ತೇದಿ’ ಚಿತ್ರದ ಮೂಲಕವೇ ಲಿಂಗಪ್ಪನವರು ಕನ್ನಡಕ್ಕೆ ಬಂದರು.‘ರತ್ನಗಿರಿ ರಹಸ್ಯ’ ಮತ್ತು ‘ಸ್ಕೂಲ್ ಮಾಸ್ಟರ್’ ಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ‘ಅಮರ ಮಧುರ ಪ್ರೇಮ’ ಒಂದು ಕಾಲದಲ್ಲಿ ಎಲ್ಲರ ಬಾಯಲ್ಲಿಯೂ ಗುನುಗುತ್ತಿದ್ದ ಹಾಡು.

‘ಕಿತ್ತೂರು ಚೆನ್ನಮ್ಮ’ ಚಿತ್ರದ ದೃಶ್ಯ

‘ಸ್ಕೂಲ್ ಮಾಸ್ಟರ್’ ಸಿನಿಮಾಕ್ಕೆ ಸಂಗೀತ ಕೊಟ್ಟಾಗ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪನವರು ಇನ್ನೂ ಅವಿವಾಹಿತರು. ಸ್ನೇಹಿತ ಜಿ.ಕೆ.ವೆಂಕಟೇಶ್‌ ಅವರ ಮದುವೆಯಲ್ಲಿ ಅವರ ಕಣ್ಣಿಗೆ ಒಬ್ಬ ಸುಂದರ ಯುವತಿ ಬಿದ್ದಳು. ಒಮ್ಮೆ ನೋಡಿದರೂ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಹ ಚೆಲುವು. ಲಿಂಗಪ್ಪನವರು ಅಲ್ಲಿಯೇ ಮನಸೋತರು. ಈ ಹುಡುಗಿ ವಿವರ ಪತ್ತೆ ಮಾಡಿ ವಧು ಪರೀಕ್ಷೆಯ ಸಿದ್ದತೆಯೂ ನಡೆಯಿತು. ವಧು ಪರೀಕ್ಷೆಗೆ ಸ್ನೇಹಿತನ ಮನೆಯವರೊಂದಿಗೆ ಜಿ.ಕೆ.ವೆಂಕಟೇಶ್‌ ಅವರೂ ಬಂದಿದ್ದರು. ಈ ಯಾವ ಹಿನ್ನೆಲೆಯೂ ಗೊತ್ತಿಲ್ಲದ ಹುಡುಗಿ ‘ಭಾಮೆಯ ನೋಡಲು ತಾ ಬಂದ’ ಗೀತೆಯನ್ನೇ ಹಾಡಿ ಬಿಟ್ಟಳು. ಇದರ ಕರ್ತೃ ಎದುರಿಗೇ ಹಾಡುತ್ತಿರುವೆ ಎನ್ನುವುದು ಅವಳಿಗೆ ಗೊತ್ತಿರಲಿಲ್ಲ. ಅವಳು ಹಾಡನ್ನು ಮುಗಿಸಿದ ಕೂಡಲೇ ಜಿ.ಕೆ.ವೆಂಕಟೇಶ್ ಕೇಳಿದರು ‘ಈ ಹಾಡನ್ನು ಕ್ರಿಯೇಟ್ ಮಾಡಿದ್ದು ಯಾರುಗೊತ್ತಾ’ ಪಾಪ ಆ ಹುಡುಗಿಗೆ ಏನು ಗೊತ್ತು, ಆ ಕಾಲದಎಲ್ಲಾ ಹುಡುಗಿಯರು ವಧು ಪರೀಕ್ಷೆಯಲ್ಲಿ ಹಾಡುತ್ತಿದ್ದಂತೆಯೇ ಹಾಡಿದ್ದಳು. ವೆಂಕಟೇಶ್ ನಕ್ಕು ಹೇಳಿದರು. ‘ನಿನ್ನಲು ನೋಡಲು ಬಂದಿದ್ದಾನಲ್ಲ ಆ ಗಂಡು ಕಂಪೋಸ್ ಮಾಡಿದ ಹಾಡುಇದು’ ಎಲ್ಲರೂ ತಮ್ಮ ನಗುವನ್ನುಅದಕ್ಕೆ ಬೆರೆಸಿದಾಗ ಆ ಹುಡುಗಿ ನಾಚಿ ಒಳಗೆ ಓಡಿದಳು. ಅಷ್ಟೇ ಅಲ್ಲ ಒಳ ಕೋಣೆಯಲ್ಲಿ ತನ್ನ ತೀರ್ಮಾನವನ್ನೂ ಪ್ರಕಟಿಸಿದಳು ‘ನಾನು ಅವರನ್ನೇ ಮದುವೆ ಆಗುತ್ತೇನೆ’. ಆ ಹುಡುಗಿಗೆ ಆಗಲೂ ಗೊತ್ತಿರಲಿಲ್ಲ ಮದುವೆ ಮನೆಯಲ್ಲಿ ತನ್ನನ್ನು ನೋಡಿ ಮೆಚ್ಚಿಯೇ ಗಂಡು ತನ್ನನ್ನು ಹುಡುಕಿಕೊಂಡು ಬಂದಿರುವುದು ಎಂದು. ಹೀಗೆ ಲಿಂಗಪ್ಪನವರು ಕಾಂತಮ್ಮನವರನ್ನು ಮದುವೆಯಾದರು. ಕಾಂತಮ್ಮನವರು ಮುಂದೆ ಗಂಡನನ್ನೇ ಗುರುವಾಗಿ ಸ್ವೀಕರಿಸಿ ವೀಣೆ ಕಲಿತು ಅದರಲ್ಲಿ ವಿದ್ವತ್ ಸಂಪಾದಿಸಿಕೊಂಡರು. ‘ಹಾಡಿನಿಂದ ನನಗೆ ಮಡದಿ ದೊರೆತಳು’ ಎಂದು ಟಿ.ಜಿ.ಲಿಂಗಪ್ಪನವರು ಯಾವಾಗಲು ತಮಾಷೆಯಾಗಿ ಹೇಳುತ್ತಲೇ ಇದ್ದರು.

‘ಕಿತ್ತೂರುಚೆನ್ನಮ್ಮ’ ಚಿತ್ರದಲ್ಲಿ ಅಕ್ಕಮಹಾದೇವಿಯವರ ‘ತನುಕರದವರಲ್ಲಿ’ ವಚನವನ್ನು ಅಳವಡಿಸಿದರು. ಆಗ ವಚನ ಗಾಯನಕ್ಕೆ ಒಂದು ಪದ್ಧತಿ ರೂಪುಗೊಂಡಿತ್ತು. ಲಿಂಗಪ್ಪನವರು ಅದನ್ನು ಬಿಟ್ಟು ಶುಭಪಂತುವರಾಳಿ ಎಂಬ ಶುದ್ಧ ಕರ್ನಾಟಕಿ ರಾಗದಲ್ಲಿ ಸ್ವರ ಸಂಯೋಜಿಸಿದರು. ಇದು ಆ ಕಾಲದಲ್ಲಿ ವಿವಾದಕ್ಕೆ ಕಾರಣವೂ ಆಯಿತು. ಆದರೆ ವಿವಾದ ಮರೆತು ಹೋಗಿ ಇಂದಿಗೂ ಹಾಡಿನ ಜನಪ್ರಿಯತೆ ಉಳಿದಿದೆ. ವಿವಾದ ಮರೆತೇ ಹೋಗಿದೆ. ‘ಬಬ್ರುವಾಹನ’ ಚಿತ್ರಕ್ಕೆ ‘ಯಾರು ತಿಳಿಯರು ನಿನ್ನ ಭುಜಫಲದ’ ಕಂದಪದ್ಯಕ್ಕೆ ಲಿಂಗಪ್ಪನವರು ವಿಶಿಷ್ಟವಾಗಿ ಸ್ವರ ಸಂಯೋಜಿಸಿದರು. ‘ಸಂಪೂರ್ಣ ರಾಮಾಯಣ’ ಚಿತ್ರಕ್ಕೆ ಸ್ವರ ಸಂಯೋಜನೆ ಮಾಡಿದ್ದ ಅವರಿಗೆಇಂತಹ ಸಂಯೋಜನೆಗಳು ಕರಗತವಾಗಿದ್ದವು. ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಗಳಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು ಸಂಗೀತ ಮತ್ತು ಆಫ್ರಿಕನ್‌ ಜ್ಯಾಸ್‌ ಅವರಿಗೆ ಪ್ರಿಯವಾಗಿತ್ತು. ಆಫ್ರಿಕನ್‌ಜ್ಯಾಸ್‌ ಒಂದರ ಪ್ರೇರಣೆಯಿಂದ ಅವರು ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ‘ಚಳಿ ಚಳಿ ಮೈಯಲಿ’ಯಂತಹ ಬಹಳ ವಿಭಿನ್ನವಾದ ಗೀತೆಯನ್ನು ಸಂಯೋಜಸಿದ್ದರು.

ಟಿ.ಜಿ.ಲಿಂಗಪ್ಪ

ಹೆಚ್ಚಾಗಿ ಬಿಳಿ ಪಂಚೆ ಮತ್ತು ಬಿಳಿ ಜುಬ್ಬ ಧರಿಸುತ್ತಿದ್ದ ಟಿ.ಜಿ.ಲಿಂಗಪ್ಪನವರು ತಮ್ಮನ್ನು ‘ವೈಟ್‌ ಅಂಡ್ ವೈಟ್’ ಎಂದು ಕರೆದುಕೊಳ್ಳುತ್ತಿದ್ದರು. ಅವರ ಜೀವನ ಕೂಡ ಹೀಗೆಯೇ ಒಂದು ಕಳಂಕವಿಲ್ಲದೆ ಪರಿಶುದ್ದವಾಗಿತ್ತು. ಈ ವಿಷಯಕ್ಕೆ ಒಂದು ಸಲ ಸುಮ್ಮನೆ ಅವರನ್ನು ರೇಗಿಸಿದಾಗ ರಂಗುರಂಗಿನ ಶರ್ಟ್ ಧರಿಸಿದ ಅವರ ಪೋಟೋವನ್ನು ನನಗೆ ನೀಡಿದ್ದರು. ಇವತ್ತಿಗೂ ಅದು ಅಮೂಲ್ಯ ಆಸ್ತಿಯಾಗಿ ನನ್ನ ಬಳಿ ಉಳಿದುಕೊಂಡಿದೆ. ಲಿಂಗಪ್ಪನವರ ವ್ಯಕ್ತಿತ್ವವೇ ಯಾರೊಡೆನೆಯೂ ಹೆಚ್ಚು ಮಾತಾಡದೆ ಇರುವುದು. ಸಂಗೀತವೇ ಅವರ ಬದುಕಾಗಿತ್ತು. ಅವರ ಅಪರೂಪದ ಮಾತೂ ಕೂಡ ಒಂದು ರೀತಿಯಲ್ಲಿ ಸಂಗೀತದ ರೀತಿಯಲ್ಲಿಯೇ ಇರುತ್ತಿತ್ತು. ಮೆಲುದನಿಯಲ್ಲಿ ಅವರು ‘ಶ್ರೀಧರ್’ ಎಂದು ಕರೆಯುತ್ತಿದ್ದ ಸ್ವರ ಏಕೋ ಇತ್ತೀಚೆಗೆ ಬಹಳ ಕಾಡುತ್ತಿದೆ. ಹಲವು ವಿಚಾರಗಳನ್ನು ಕೆಲವೇ ವಾಕ್ಯಗಳಲ್ಲಿ ಹೇಳುವುದು ಅವರಿಗೆ ಸಹಜವಾಗಿ ಸಿದ್ದಿಸಿತ್ತು. ಆಕಸ್ಮಾತ್ ನನ್ನ ಮನಸ್ಸು ಬೇರೆ ಕಡೆ ಚಲಿಸಿದರೂ ಅವರಿಗೆ ಗೊತ್ತಾಗಿ ಬಿಡುತ್ತಿತ್ತು. ‘ನಿನಗೆ ಮೂಡ್‌ ಇಲ್ಲ ಬಿಡು, ಇನ್ನೊಮ್ಮೆ ಮಾತನಾಡೋಣ’ ಎಂದು ಮಾತುಕತೆಯನ್ನು ನಿಲ್ಲಿಸಿಯೇ ಬಿಡುತ್ತಿದ್ದರು. ಆಹಾರದ ವಿಚಾರದಲ್ಲಿಯೂ ಅವರು ಮಿತವಾಗಿದ್ದರು. ಮಧ್ಯಾಹ್ನದ ಊಟ ನಿಖರವಾಗಿ 1.30ಕ್ಕೆ ಇಪ್ಪತ್ತು ನಿಮಿಷಗಳಲ್ಲಿ ಊಟ ಮುಗಿಯ ಬೇಕು. ರೆಕಾರ್ಡಿಂಗ್‌ ಇದ್ದಾಗಲೂ ಈ ಕ್ರಮ ತಪ್ಪುತ್ತಿರಲಿಲ್ಲ. ಅಲ್ಲಿಯೂ ಮನೆ ಊಟವೇ ಆಗಬೇಕು. ಎಂತಹ ಅನಿವಾರ್ಯತೆಯಲ್ಲೂ ಹೋಟಲ್‌ ತಿನಿಸುಗಳನ್ನು ಮುಟ್ಟುತ್ತಿರಲಿಲ್ಲ. ಆಗ ಹೆಚ್ಚಾಗಿ ಮದ್ರಾಸಿನಲ್ಲಿಯೇ ರೆಕಾರ್ಡಿಂಗ್‌ ಇರುತ್ತಿದ್ದರಿಂದ ಈ ಕ್ರಮಕ್ಕೆ ಭಂಗ ಬಂದಿದ್ದೂ ಕಡಿಮೆ. ಬಂದರೂ ಬಾಳೆ ಹಣ್ಣು ತಿಂದು ಹಸಿವನ್ನು ಹಿಂಗಿಸಿ ಕೊಳ್ಳುತ್ತಿದ್ದರೇ ಹೊರತು ಸ್ಟುಡಿಯೋ ಊಟ ಮುಟ್ಟುತ್ತಿರಲಿಲ್ಲ. ರಾತ್ರಿಯ ಊಟ 8.30ಕ್ಕೆ ಆಗಬೇಕು. ಮೀನು ಅದರಲ್ಲಿಯೂ ಸಮುದ್ರದ ಮೀನು ಅವರಿಗೆ ಪ್ರಿಯವಾದದ್ದು. ಊಟದಲ್ಲಿ ಖಾರ ಕಡಿಮೆ ಇರಬೇಕು. ಕೊನೆ ದಿನಗಳಲ್ಲಿ ಡಯಾಬಿಟೀಸ್ ಬಂದರೂ ಮೊದಲಿಂದಲೂ ಸಿಹಿ ಮುಟ್ಟುತ್ತಿರಲಿಲ್ಲ.

ಅವರು ಹೋಟಲ್ ತಿನಿಸಿಗೆ ಮನಸೋತಿದ್ದು ಬೆಂಗಳೂರಿನ ಎಂ.ಟಿ.ಆರ್‌ಗೆ ಮಾತ್ರ. ಮಗಳ ಮನೆಗೆ ಬಂದಾಗ ಇಲ್ಲಿನ ಖಾರಾಬಾತ್‌ ತಿನ್ನಲು ಬರುವುದನ್ನು ತಪ್ಪಿಸುತ್ತಿರಲಿಲ್ಲ. ಮದ್ಯಪಾನ, ಧೂಮಪಾನ ಹೀಗೆ ಯಾವ ಅಭ್ಯಾಸವೂ ಇಲ್ಲದ ಲಿಂಗಪ್ಪನವರಿಗೆ ಸದಾ ಎಲೆ ಅಡಿಕೆ ಹಾಕುವ ಅಭ್ಯಾಸ ಕೊನೆಯವರೆಗೂ ಇತ್ತು. ಇದರ ಜೊತೆಗೆ ಚೂರು ಸೆಂಟೆಡ್‌ ಚೂರು. ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಕಾಫಿ ತಪ್ಪಿಸುತ್ತಿರಲಿಲ್ಲ. ಅದೂ ಮಿತಿ ಮೀರುತ್ತಿರಲಿಲ್ಲ. ಅವರಿಗೆ ಪ್ರಿಯವಾದ ಹವ್ಯಾಸ ಚೆನ್ನೈನ ಮನೆಯಲ್ಲಿದ್ದಾಗ ಎರಡು ಕಿಲೂ ಮೀಟರ್‌ ದೂರದಲ್ಲಿದ್ದ ಬೀಚಿಗೆ ಕಾರ್‌ ಡ್ರೈವ್‌ ಮಾಡಿಕೊಂಡು ಹೋಗಿ ಒಂಟಿಯಾಗಿ ಕುಳಿತು ಅಲೆಗಳನ್ನು ನೋಡುವುದು. ಸಾಮಾನ್ಯವಾಗಿ ಸಂಜೆ ಐದರಿಂದ ಏಳರವರೆಗಿನ ಸಮಯ ಇದಕ್ಕೆ ಮೀಸಲು. ಲಿಂಗಪ್ಪನವರು ಗುಂಪಿನಲ್ಲಿ ಇರುತ್ತಿದ್ದದ್ದು ಕಡಿಮೆ, ಅದರಲ್ಲಿಯೂ ಬಿಸಿ ಬಿಸಿ ಚರ್ಚೆಗಳು ನಡೆದರೆ ಅಲ್ಲಿಂದ ಎದ್ದು ಬಂದು ಬಿಡುತ್ತಿದ್ದರು. ಮಧ್ಯ ಪ್ರವೇಶಿಸಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿರಲಿಲ್ಲ. ತಮ್ಮ ಸ್ವರ ಸಂಯೋಜನೆಗಳನ್ನು ತೆಲುಗು ತಮಿಳು ಚಿತ್ರಗಳು ಕದ್ದಾಗ ಕೂಡ ಅವರು ವಿವಾದ ಮಾಡದೆ ‘ಸತ್ಯ ಇಂದಲ್ಲ ನಾಳೆ ತಿಳಿಯುತ್ತದೆ’ ಎನ್ನುತ್ತಿದ್ದರು. ಅವರ ‘ಸಂಪೂರ್ಣ ರಾಮಾಯಣ’ ಹಿಂದಿಗೆ ಡಬ್‌ ಆದಾಗ ಸ್ವರ ಸಂಯೋಜನೆ ಹಾಗೆ ಬಳಸಿಕೊಂಡರೂ ಅವರ ಹೆಸರನ್ನು ಹಾಕಲಿಲ್ಲ. ಹಲವರು ಕೋರ್ಟಿಗೆ ಹೋಗುವಂತೆ ಸೂಚಿಸಿದರೂ ಲಿಂಗಪ್ಪನವರು ಒಪ್ಪಲಿಲ್ಲ. ಅದಕ್ಕಿಂತ ಕಠೋರ ಸನ್ನಿವೇಶ ‘ಹಂಸಗೀತೆ’ ಚಿತ್ರದ್ದು. ಈ ಚಿತ್ರಕ್ಕೆ ಸಂಪೂರ್ಣವಾಗಿ ಸಂಗೀತವನ್ನು ನೀಡಿದ್ದು ಲಿಂಗಪ್ಪನವರು. ಆದರೆ ಅವರಿಗೆ ಒಂದು ಮಾತನ್ನೂ ಹೇಳದೆ ಗುಟ್ಟಾಗಿ ಕೊನೆ ಗಳಿಗೆಯಲ್ಲಿ ಬಾಲಮುರಳಿ ಕೃಷ್ಣ ಅವರ ಬಳಿ ಫೈನಲ್‌ ಟಚ್ ನೀಡಿಸಿದ ಜಿ.ವಿ.ಅಯ್ಯರ್‌ ತೆರೆಯ ಮೇಲೆ ಅವರ ಹೆಸರನ್ನೇ ಸಂಗೀತ ನಿರ್ದೇಶಕರು ಎಂದು ತೋರಿಸಿದರು. ಅದಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತು. ಆದರೆ ಚಿತ್ರದಲ್ಲಿ ಸಂಪೂರ್ಣವಾಗಿ ಇದ್ದಿದ್ದು ಲಿಂಗಪ್ಪನವರ ಸ್ವರ ಸಂಯೋಜನೆ ಮತ್ತು ಅವರು ಮಾಡಿದ ಗೀತೆಗಳೇ. ಬೇರೆ ಯಾರೇ ಆಗಿದ್ದರೂ ಅದನ್ನು ದೊಡ್ಡ ವಿವಾದ ಮಾಡುತ್ತಿದ್ದರು. ಆದರೆ ಲಿಂಗಪ್ಪನವರು ಒಂದು ಮಾತನ್ನು ಆಡದೆ ‘ನನ್ನ ಹೆಸರಿಲ್ಲದಿದ್ದರೂ ನನ್ನ ಸಂಯೋಜನೆಗೆ ರಾಷ್ಟ್ರಪ್ರಶಸ್ತಿ ಬಂದಿತಲ್ಲ ಅದೇ ಸಂತೋಷ’ ಎಂದು ಬಿಟ್ಟರು.

ಕಿರಿಯರು ಎಂದರೆ ಅವರಿಗೆ ಬಹಳ ಪ್ರೀತಿ. ಎ.ಆರ್.ರೆಹಮಾನ್ 1990ರಲ್ಲಿ ಸರೋದ್ ವಾದಕರನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ತಮಗಿಂತ ಬಹು ಕಿರಿಯರಾದ ಅವರ ಸಂಯೋಜನೆಗೆ ಸರೋದ್ ನುಡಿಸಿದ್ದರು. ಹೀಗೆ ಇಳಯ ರಾಜಾ, ಜಿ.ಕೆ.ವೆಂಕಟೇಶ್, ದೇವ ಮೊದಲಾದ ಸಂಗೀತ ನಿರ್ದೇಶಕರಿಗೂ ಕೂಡ ಅವರು ಪಕ್ಕ ವಾದ್ಯ ನುಡಿಸಿದ್ದಾರೆ. ‘ಬಂಗಾರದ ಮನುಷ್ಯ’ ಚಿತ್ರದ ‘ಬಾಳ ಬಂಗಾರ ನೀನು’ ಗೀತೆಗೆ ಸರೋದ್ ನುಡಿಸಿದವರು ಲಿಂಗಪ್ಪನವರೇ. ಹೆಸರಿಗೆ ಒದ್ದಾಡುವ ಚಿತ್ರರಂಗದಲ್ಲಿ ಎಂದೂ ಹೆಸರಿಗೆ ಆಸೆ ಪಡದೆ ಅವಧೂತನಂತಿದ್ದರು. ತಮ್ಮ ಸನ್ಮಾನ ಸಮಾರಂಭಗಳಲ್ಲಿ ಕೂಡ ಹೆಚ್ಚು ಮಾತಾಡದೆ ಒಂದೆರಡು ಹಾಡುಗಳನ್ನು ಹೇಳುತ್ತಿದ್ದರು. ಆದರೆ ಅವರಿಗೆ ಕೋಪ ಬರುತ್ತಿದ್ದದ್ದು ಸಂಗೀತ ಸಂಯೋಜನೆ ಸಂದರ್ಭದಲ್ಲಿ ಗಾಯಕರಿಂದ ಹಿಡಿದು ಪ್ರತಿ ವಾದ್ಯ ಕೂಡ ಅವರ ಪರಿಕಲ್ಪನೆ ಅಂತೆಯೇ ಬರಬೇಕು. ಕೊಂಚ ವ್ಯತ್ಯಾಸವಾದರೂ ಅವರಿಗೆ ಸಾತ್ವಿಕ ಕೋಪ ಬರುತ್ತಿತ್ತು. ಎಪ್ಪತ್ತರಡನೇ ವಯಸ್ಸಿನಲ್ಲಿ ಲಿಂಗಪ್ಪನವರು ನಮ್ಮನ್ನು ಅಗಲಿದರು. ಒಂದು ದಿನವೂ ಕಾಹಿಲೆಯಿಂದ ನರಳಲಿಲ್ಲ. ಸದಾಚಟುವಟಿಯಿಂದಲೇ ಇದ್ದರು. ಹಿಂದಿನ ದಿನ ಕೂಡ ಅಭಿಮಾನಿಗಳೊಬ್ಬರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2002ರ ಫೆಬ್ರವರಿ 5ರ ಶನಿವಾರ ಬೆಳಿಗ್ಗೆ ನಾಲ್ಕೂವರೆಗೆ ಎದೆ ನೋವು ಕಾಣಿಸಿಕೊಂಡಿತು. ಅವರೊಂದಿಗೆ ಮಡದಿ ಮತ್ತು ಮಗಳು ಶ್ರೀಕಲಾ ಇದ್ದರು. ಎಲ್ಲರೂ ಆತಂಕದಿಂದ ಓಡಿ ಬಂದರು. ನೀರು ಕೇಳಿದವರು ತರುವುದರೊಳಗಾಗಿ ಕುಸಿದು ಬಿದ್ದಿದ್ದರು. ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಅಧ್ಯಾಯ ಮುಕ್ತಾಯವಾಗಿತ್ತು. ಅವರ ಅಂತಿಮ ಯಾತ್ರೆಯಲ್ಲಿ ಜನಸಾಗರವೇ ಸೇರಿತ್ತು. ಅವರ ಮಗ ಕಿಶೋರ್ ಸರೋದ್ ಮತ್ತು ಸಿತಾರ್ ನುಡಿಸುತ್ತಾರೆ. ಹಂಸಲೇಖ, ಗುರುಕಿರಣ್, ಮನೋಮೂರ್ತಿ ಮೊದಲಾದ ಸಂಗೀತ ನಿರ್ದೇಶಕರೊಡನೆ ಕಾರ್ಯ ನಿರ್ವಹಿಸುತ್ತಾ ತಂದೆಯ ಹಾದಿಯಲ್ಲಿಯೇ ಸಾಗಿದ್ದಾರೆ. ಅವರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗುವ ಅವಕಾಶ ಇನ್ನೂ ಸಿಕ್ಕಿಲ್ಲ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ) ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ

ಮೆಥೆಡ್ ಆಕ್ಟರ್ ಎಸ್‌ವಿಆರ್

ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್‌ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ವಿ.ಸೋಮಶೇಖರ್

ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ವಿ.ಸೋಮಶೇಖರ್‌ ಅವರ ಹುಟ್ಟೂರು. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ಅವರಿಗೆ ಶಾಲೆ ಓದುತ್ತಿದ್ದಾಗಲೇ ಸಿನಿಮಾದೆಡೆ ವ್ಯಾಮೋಹ ಶುರುವಾಗಿತ್ತು.