ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಪೂರ್ವ ಸಿನಿಮಾ ಛಾಯಾಗ್ರಾಹಕ ಮಾರ್ಕಸ್ ಬರ್ಟ್ಲೀ

ಪೋಸ್ಟ್ ಶೇರ್ ಮಾಡಿ

ಆಂಗ್ಲೋ-ಇಂಡಿಯನ್‌ ಮಾರ್ಕಸ್ ಬರ್ಟ್ಲೀ ದಕ್ಷಿಣ ಭಾರತದ ಸಿನಿಮಾರಂಗದ ಮೇರು ಸಿನಿಮಾ ಛಾಯಾಗ್ರಾಹಕ. ಅವರ ತಂದೆ ಆಸ್ಟ್ರೇಲಿಯಾ ಮೂಲದವರು, ತಾಯಿ ರಾಜಸ್ತಾನಿ. ಶಾಸ್ತ್ರಬದ್ಧ ಛಾಯಾಗ್ರಹಣ ಕಲಿಸಲು ಭಾರತದಲ್ಲಿ ಆಗ ಯಾವುದೇ ಸಂಸ್ಥೆಗಳಿರಲಿಲ್ಲ. ಮೂಲತಃ ಕ್ಯಾಮರಾ ಕಲೆಯ ಬಗ್ಗೆ ಅಪಾರ ಆಸಕ್ತಿಯಿದ್ದ ಮಾರ್ಕಸ್‌ ಇಲ್ಲಿನ ಅನುಭವಿ ಛಾಯಾಗ್ರಾಹಕರಲ್ಲಿ ಕೆಲಸ ಕಲಿತರು. ಮುಂದೆ ಸಿನಿಮಾಗಳಲ್ಲಿ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದರು. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಮಾರ್ಕಸ್‌ ದೃಶ್ಯಕಾವ್ಯಗಳನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಸಿನಿಮಾ ಛಾಯಾಗ್ರಹಣಕ್ಕೆ ಅವರಿಂದ ಅಪೂರ್ವ ಕೊಡುಗೆ ಸಂದಿದೆ.

ಚಿಕ್ಕಂದಿನಲ್ಲೇ ಅವರಿಗೆ ಫೋಟೋಗ್ರಫಿ ಬಗ್ಗೆ ಆಸಕ್ತಿಯಿತ್ತು. ಮುಂದೆ ಮುಂಬಯಿಯಲ್ಲಿ ‘ಟೈಮ್ಸ್ ಆಫ್‌ ಇಂಡಿಯಾ’ ಪತ್ರಿಕೆಗೆ ಫೋಟೋಗ್ರಾಫರ್‌ ಆಗಿ ಕೆಲಸ ನಿರ್ವಹಿಸಿದರು. ಇದೇ ಅವಧಿಯಲ್ಲಿ ಅವರು ಸಿನಿಮಾಟೋಗ್ರಫಿ ಅಭ್ಯಾಸ ಮಾಡಿದರು. ಮುಂದೆ ಬ್ರಿಟೀಷ್ ಮೂವೀ ಟೋನ್‌ಗೆ ‘ನ್ಯೂಸ್‌ ರೀಲ್ ಕ್ಯಾಮರಾಮನ್‌’ ಆಗಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಭಾರತೀಯ ಮತ್ತು ವಿದೇಶಿ ಸಿನಿಮಾಗಳನ್ನು ಅಭ್ಯಸಿಸುವ ಅವಕಾಶ ಲಭಿಸಿತು. ಅಲ್ಲಿ ಲೈಟಿಂಗ್‌ ಮತ್ತು ಫೋಟೋಗ್ರಫಿ ತಂತ್ರಗಳನ್ನು ಮನವರಿಕೆ ಮಾಡಿಕೊಂಡರು.

‘ಮಾಯಾಬಜಾರ್’ ಶೂಟಿಂಗ್ ಸೆಟ್‌ನಲ್ಲಿ ಮಾರ್ಕಸ್‌

1941ರಲ್ಲಿ ಮಾರ್ಕಸ್‌ ಅವರಿಗೆ ‘ತಿರುವಲ್ಲುವರ್‌’ ತಮಿಳು ಚಿತ್ರಕ್ಕೆ ಛಾಯಾಗ್ರಾಹಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮದರಾಸಿನಲ್ಲಿ ನೆಲೆ ನಿಂತ ಅವರು ಇದಾದ ನಂತರ ಮತ್ತೆರೆಡು ತಮಿಳು ಚಿತ್ರಗಳಿಗೆ ಛಾಯಾಗ್ರಾಹಣ ನಿರ್ವಹಿಸಿದರು. 1944ರಲ್ಲಿ ಮದರಾಸಿನ ಪ್ರತಿಷ್ಠಿತ ವಾಹಿನಿ ಸ್ಟುಡಿಯೋ ಸೇರಿದ ಅವರು ಆ ಸ್ಟುಡಿಯೋ ನಿರ್ಮಾಣದ ಸಿನಿಮಾಗಳ ಅಧಿಕೃತ ಛಾಯಾಗ್ರಾಹಕರಾದರು. ಅಲ್ಲಿ ಅವರ ಮೊದಲು ಸಿನಿಮಾ ‘ಸ್ವರ್ಗ ಸೀಮಾ’ (ತೆಲುಗು). ಕಲಾವಿದರ ಮೂಡ್‌ಗೆ ಸರಿಹೊಂದುವಂತಹ ಲೈಟಿಂಗ್ ಮಾಡಿದರು. ಕ್ಲಾಶ್‌ಅಪ್‌ ಶಾಟ್‌ವೊಂದರಲ್ಲಿ ನಟಿ ಬಿ.ಜಯಮ್ಮ ಅವರ ಮುಖದ ಮೇಲೆ ಸರಿದು ಹೋಗುವ ಎಲೆಯ ನೆರಳನ್ನು ಹಿಡಿದಿಟ್ಟರು. ಇದು ಆಗ ತೆಲುಗು ಸಿನಿಮಾ ಛಾಯಾಗ್ರಹಣಕ್ಕೆ ಹೊಸತು. ಈ ಪ್ರಯೋಗ ತಂತ್ರಜ್ಞರ ಮೆಚ್ಚುಗೆಗೆ ಪಾತ್ರವಾಯ್ತು.

ಮಾರ್ಕಸ್‌ ತಮಗೆ ಒದಗಿಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳಲಿಲ್ಲ. ಸಿನಿಮಾ ಆಯ್ಕೆಯಲ್ಲಿ ಅವರು ತುಂಬಾ ಚ್ಯೂಸಿಯಾಗಿದ್ದರು. ವಾಹಿನಿ ಬ್ಯಾನರ್‌ನಡಿ ತಯಾರಾದ ‘ಯೋಗಿ ವೇಮನ’ ಮತ್ತು ‘ಗುಣಸುಂದರಿ ಕಥಾ’ ಚಿತ್ರಗಳಿಗೆ ಕೆಲಸ ಮಾಡಿದರು. ವಿಜಯಾ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ತಯಾರಾದ ‘ಸಾವುಕಾರು’, ‘ಪಾತಾಳ ಭೈರವಿ’, ‘ಪೆಳ್ಳಿ ಚೇಸಿ ಚೂಡು’, ‘ಚಂದ್ರಹಾರಂ’, ‘ಮಿಸ್ಸಮ್ಮ’, ‘ಮಾಯಾ ಬಜಾರ್‌’, ‘ಜಗದೇಕ ವೀರುನಿ ಕಥಾ’, ‘ಗುಂಡಮ್ಮ ಕಥಾ’ ಮತ್ತಿತರ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದರು.

ಅಪಾರ ಮೆಚ್ಚುಗೆಗೆ ಪಾತ್ರವಾದ ‘ಮಾಯಾಬಜಾರ್‌’ ಚಿತ್ರದ ಹಾಡಿನ ಮಾರ್ಕಸ್‌ ಸಿನಿಮಾಟೋಗ್ರಫಿ

‘ಪಾತಾಳ ಭೈರವಿ’ ಚಿತ್ರದಲ್ಲಿನ ಅವರ ಟ್ರಿಕ್‌ ಫೋಟೋಗ್ರಫಿ ಒಂದು ದೊಡ್ಡ ಮಾದರಿಯಾಯ್ತು. ಈ ಚಿತ್ರದ ಹಾಡಿನ ಸನ್ನಿವೇಶಗಳಲ್ಲಿ ನೆರಳು – ಬೆಳಕಿನೊಂದಿಗೆ ಅವರು ಭಿನ್ನ ಮೂಡ್‌ಗಳನ್ನು ಸೃಷ್ಟಿಸಿದರು. ಕ್ಲೈಮ್ಯಾಕ್ಸ್‌ನಲ್ಲಿ ಮಾಯಾ ಮಹಲ್ ಹಾರುವಂತೆ ಇಲ್ಯೂಷನ್‌ ಸೃಷ್ಟಿಸಿದ್ದರು. ವಾಸ್ತವದಲ್ಲಿ ಈ ಸೆಟ್‌ ಸ್ಟುಡಿಯೋದ ಟೇಬಲ್‌ ಮೇಲೆ ಸೃಷ್ಟಿಯಾಗಿತ್ತು! ‘ಚಂದ್ರಹಾರಂ’ ಚಿತ್ರದಲ್ಲಿನ ಛಾಯಾಗ್ರಹಣ ಅವರ ವೃತ್ತಿಬದುಕಿನ ಮೈಲುಗಲ್ಲು. ಈ ಸಿನಿಮಾದ ‘ಕಲುವಲು ಚಂದ್ರುಡು’ ನೃತ್ಯದ ಸನ್ನಿವೇಶ ಬಿಬಿಸಿಯಲ್ಲಿ ಪ್ರಸಾರವಾಗಿತ್ತು.

‘ಮಾಯಾಬಜಾರ್‌’ ಚಿತ್ರದಲ್ಲಿ ಸೆರೆಹಿಡಿದ ಸನ್ನಿವೇಶಗಳು ಮಾರ್ಕಸ್‌ ಅವರ ಪರಿಣತಿಗೆ ಸಾಕ್ಷಿಯಾಗಿವೆ. ‘ಲಹಿರಿ ಲಹಿರಿ ಲೋ’ ಹಾಡಿನ ಚಿತ್ರೀಕರಣ, ಶಶಿರೇಖಾಳ ಕೆಲವು ಸನ್ನಿವೇಶಗಳು, ಅಭಿಮನ್ಯು ರಥಕ್ಕೆ ಬೆಂಕಿ ಹತ್ತಿದ ದೃಶ್ಯ, ಘಟೋದ್ಘಜನ ಪರಿಚಯದ ಸನ್ನಿವೇಶಗಳು ಅವರ ಟ್ರಿಕ್ ಫೋಟೋಗ್ರಫಿಯಲ್ಲಿ ವಿಶೇಷ ಮೆರುಗು ಪಡೆದುಕೊಂಡಿವೆ. ತಾಂತ್ರಿಕವಾಗಿ ಅಷ್ಟೇನೂ ಸವಲತ್ತುಗಳಿಲ್ಲದ ಆ ದಿನಗಳಲ್ಲಿ ಅವರು ಸೃಷ್ಟಿಸಿದ ಸನ್ನಿವೇಶಗಳು ಇಂದಿನ ಛಾಯಾಗ್ರಾಹಕರಿಗೂ ಅಭ್ಯಾಸಕ್ಕೆ ಯೋಗ್ಯವಾಗಿವೆ.

ಮಲಯಾಳಂ ಚಿತ್ರರಂಗದ ಮೈಲುಗಲ್ಲು ಸಿನಿಮಾಗಳಲ್ಲೊಂದು ಎಂದು ಪರಿಗಣಿಸುವ ‘ಚೆಮೀನ್‌’ ಛಾಯಾಗ್ರಹಣ ಮಾರ್ಕಸ್‌ ಅವರದೇ. ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಈ ಚಿತ್ರದ ಯಶಸ್ಸಿನಲ್ಲಿ ಛಾಯಾಗ್ರಹಣದ ಪಾಲು ಹಿರಿದು ಎಂದು ಆ ಚಿತ್ರದ ನಿರ್ದೇಶಕ ರಾಮು ಕ್ಯಾರಿಯಟ್ ಹೇಳಿಕೊಂಡಿದ್ದರು. ‘ಶಾಂತಿ ನಿಲಯಂ’ ಚಿತ್ರದ ಶ್ರೇಷ್ಠ ಸಿನಿಮಾಟೋಗ್ರಫಿಗೆ ಮಾರ್ಕಸ್‌ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು.

ಶಿಸ್ತಿನ ವ್ಯಕ್ತಿಯಾಗಿದ್ದ ಮಾರ್ಕಸ್‌ ಶೂಟಿಂಗ್ ಸೆಟ್‌ನಲ್ಲಿ ನಿಶ್ಯಬ್ಧವನ್ನು ಅಪೇಕ್ಷಿಸುತ್ತಿದ್ದರು. ಅವರನ್ನು ಅರ್ಥ ಮಾಡಿಕೊಂಡಿದ್ದ ಅವರ ಸಹೋದ್ಯೋಗಿಗಳು ಹಾಗೆಯೇ ನಡೆದಕೊಳ್ಳುತ್ತಿದ್ದರು. ದಿಲೀಪ್ ಕುಮಾರ್ ಅವರಂತಹ ದೊಡ್ಡ ನಾಯಕನಟ ಕೂಡ ಮಾರ್ಕಸ್‌ ಅವರ ಶಿಸ್ತಿಗೆ ಹೆದರಿ ಸರಿಯಾದ ಸಮಯಕ್ಕೆ ಸೆಟ್‌ಗೆ ಹಾಜರಾಗುತ್ತಿದ್ದರು. ಕೆ.ವಿ.ರೆಡ್ಡಿ ಅವರಂತಹ ಮೇರು ನಿರ್ದೇಶಕ ಮಾರ್ಕಸ್‌ರ ಶಿಸ್ತಿಗೆ ತಲೆಬಾಗುತ್ತಿದ್ದರು. ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳುತ್ತಿದ್ದ ಅವರು ತಮಗೆ ಸಮಾಧಾನವಾಗದ ಹೊರತು ಶಾಟ್‌ ತೆಗೆಯುತ್ತಿರಲಿಲ್ಲ. ಇದರಿಂದ ಅವರು ನಿಧಾನಿ ಎನ್ನುವ ಮಾತೂ ಇತ್ತು. ಆದರೆ ಅವರು ಕಾಲ್‌ಶೀಟ್‌ಗೆ ತೊಂದರೆಯಾಗದಂತೆ ಕೆಲಸ ಮುಗಿಸಿಕೊಡುತ್ತಿದ್ದರು. ಪ್ರಚಾರವನ್ನು ಬಯಸದ ಅವರು ಭಾನುವಾರಗಳನ್ನು ತಮ್ಮ ಕ್ಯಾಮೆರಾಗಳ ರಿಪೇರಿಗೆ ಮೀಸಲಿಡುತ್ತಿದ್ದರು.

ತೆರೆಯ ಮೇಲೆ ಅದ್ಭುತಗಳನ್ನು ಸೃಷ್ಟಿಸಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದ್ದ ಛಾಯಾಗ್ರಾಹಕ ಮಾರ್ಕಸ್‌ ಬರ್ಟ್ಲೀ. ಸಿನಿಮಾ ಮಾಧ್ಯಮಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ.

ಮಾರ್ಕಸ್‌ ಬರ್ಟ್ಲೀ | ಜನನ: 22/04/1917 | ನಿಧನ: 14/03/1998

(ಮಾಹಿತಿ ಕೃಪೆ: ಸಿನೆಮಾಯ ಬಜಾರ್‌)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರಗೀತೆಗಳ ಹಿಂದಿನ ಕಣ್ಣು ‘ಚಿಟ್ಟಿಬಾಬು’

ಚಿತ್ರಗೀತೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆಳ್ಳಿತೆರೆಯಲ್ಲಿ ಮೂಡಿಸಿದ ಚಿಟ್ಟಿ ಬಾಬು ಅವರಂತಹ ಛಾಯಾಗ್ರಾಹಕರು ಭಾರತೀಯ ಚಿತ್ರರಂಗದಲ್ಲಿಯೇ ಬೆರಳೆಣಿಕೆಯಷ್ಟು. ಇಂದು

ಶಶಿಕಪೂರ್

ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವೀರಾಜ್ ಕಪೂರ್ ಅವರ ಮೂರನೇ ಪುತ್ರ ಶಶಿಕಪೂರ್. ಕಪೂರ್ ಸಹೋದರರ ಪೈಕಿ ಚಿಕ್ಕವರು.