ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಾಲಿವುಡ್‌ನ ಪ್ರಗತಿಪರ ನಿರ್ದೇಶಕ ಬಿ.ಆರ್.ಚೋಪ್ರಾ

ಪೋಸ್ಟ್ ಶೇರ್ ಮಾಡಿ

ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರ ಯಾದಿಯಲ್ಲಿ ಬಿ.ಆರ್‌.ಚೋಪ್ರಾ ಹೆಸರೂ ಪ್ರಸ್ತಾಪವಾಗುತ್ತದೆ. ಹಿಂದಿಯ ಮೊದಲ ಬಹುತಾರಾಗಣದ ಸಿನಿಮಾ ‘ವಕ್ತ್‌’ ನಿರ್ದೇಶಕ ಬಿ.ಆರ್.ಚೋಪ್ರಾ. ರೊಮ್ಯಾಂಟಿಕ್‌ ಸಿನಿಮಾಗಳ ಮೂಲದ ದೊಡ್ಡ ಹೆಸರು ಮಾಡಿದ ತಮ್ಮ ಕಿರಿಯ ಸಹೋದರ ಯಶ್ ಚೋಪ್ರಾ ಅವರಿಗೆ ಸಿನಿಮಾ ಮೇಕಿಂಗ್ ಕಲಿಸಿದವರು ಬಲ್‌ದೇವ್ ರಾಜ್ ಚೋಪ್ರಾ (ಬಿ.ಆರ್‌.ಚೋಪ್ರಾ). ಹಿಂದಿ ಕಿರುತೆರೆಯ ಮಹತ್ವದ ಸರಣಿ ‘ಮಹಾಭಾರತ’ ರೂಪಿಸಿದ ಖ್ಯಾತಿಯೂ ಅವರ ಹೆಸರಿನಲ್ಲಿದೆ. ಬಿ.ಆರ್.ಚೋಪ್ರಾ ನಿರ್ದೇಶನದಲ್ಲಿ ಗುರುತಿಸಬಹುದಾದ ಐದು ಪ್ರಮುಖ ಚಿತ್ರಗಳಿವು.

ಅಫ್ಸಾನಾ (1951): ನಟ ಅಶೋಕ್‌ ಕುಮಾರ್ ಈ ಚಿತ್ರದ ದ್ವಿಪಾತ್ರಗಳಲ್ಲಿ ನಟಿಸಿದ್ದರು. ತಂತ್ರಜ್ಞಾನದ ಕೊರತೆಯಿದ್ದ ಆ ದಿನಗಳಲ್ಲಿ ಡಬಲ್ ರೋಲ್‌ ಸಿನಿಮಾ ಮಾಡುವುದು ಸುಲಭವಾಗಿರಲಿಲ್ಲ. ಚೋಪ್ರಾ ಅವರು ಬುದ್ಧಿವಂತಿಕೆಯಿಂದ ಸಿನಿಮಾ ಮಾಡಿ ಯಶಸ್ವಿಯಾಗಿದ್ದರು. ಈ ಯಶಸ್ಸು ಮುಂದೆ ಡಬಲ್ ರೋಲ್ ಸಿನಿಮಾಗಳ ತಯಾರಿಕೆಗೆ ಬುನಾದಿ ಹಾಕಿಕೊಟ್ಟಿತು. ಚೋಪ್ರಾ ಅವರ ನೆಚ್ಚಿನ ನಟ ಅಶೋಕ್‌ ಕುಮಾರ್‌. ‘ಅಫ್ಸಾನಾ’ ನಂತರ ಕಾನೂನ್‌, ಏಕ್ ಹೀ ರಾಸ್ತಾ ಮತ್ತು ಗುಮ್ರಾಹ್‌ ಚಿತ್ರಗಳಲ್ಲಿ ಇವರು ಮತ್ತೆ ಜೊತೆಯಾಗಿದ್ದರು.

ನಯಾ ದೌರ್‌ (1957): ಭಾರತೀಯ ಚಿತ್ರರಂಗದ ಸಂದರ್ಭದಲ್ಲೇ ಇದು ಪ್ರಮುಖ ಪ್ರಯೋಗವೆಂದು ಹೆಸರಾಗಿದೆ. ಔದ್ಯೋಗೀಕರಣದಿಂದ ಗ್ರಾಮೀಣ ಭಾರತದ ಮೇಲಾಗುವ ಪರಿಣಾಮಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿತ್ತು. ಚಿತ್ರದ ನಾಯಕಿಯಾಗಿದ್ದ ಮಧುಬಾಲಾ ಕೊನೆಯ ಹಂತದಲ್ಲಿ ಬದಲಾಗಿ ಅವತ ಜಾಗಕ್ಕೆ ವೈಜಯಂತಿಮಾಲಾ ಬಂದದ್ದೇ ವಿವಾದವಾಗಿ ಚಿತ್ರವ ವಸ್ತು ಹಿನ್ನೆಲೆಯಲ್ಲಿ ಉಳಿಯುವಂತಾಯ್ತು. ಓ.ವಿ.ನಯ್ಯರ್‌ ಸಂಗೀತ ಸಂಯೋಜನೆಯ ಮಧುರ ಹಾಡುಗಳು ಚಿತ್ರದ ಹೈಲೈಟ್‌.

ಸಾಧನಾ (1958): ತಮ್ಮ ಸಮಕಾಲೀನ ಚಿತ್ರತಯಾರಕರಲ್ಲಿ ಪ್ರಗತಿಪರ ಧೋರಣೆಯ ನಿರ್ದೇಶಕ ಎಂದೇ ಕರೆಸಿಕೊಂಡವರು ಬಿ.ಆರ್.ಚೋಪ್ರಾ. ಸಾಧನಾ ಚಿತ್ರದಲ್ಲಿ ಅವರು ವೇಶ್ಯೆಯರ ಸಮಸ್ಯೆ, ಅವರ ಪುನರ್ವಸತಿ ಕುರಿತು ಚರ್ಚಿಸಿದ್ದರು. ಮುಂದೆ ಅವರು ‘ಧೂಲ್ ಕಾ ಫೂಲ್‌’ ಚಿತ್ರದಲ್ಲಿ ತಾಯಿಯಾಗುವ ಅವಿವಾಹಿತ ಮಹಿಳೆ, ‘ನಿಕಾಹ್‌’ ಚಿತ್ರದಲ್ಲಿ ಇಸ್ಲಾಮಿಕ್ ಕಾನೂನುಗಳು ಮಹಿಳೆಯರನ್ನು ಹೇಗೆ ಸಂಕಷ್ಟಕ್ಕೀಡು ಮಾಡುತ್ತವೆ ಎಂದು ಚರ್ಚಿಸಿದ್ದರು. ಆ ಕಾಲಕ್ಕೆ ಅವರ ಈ ಸಿನಿಮಾ ವಸ್ತು ಸಾಕಷ್ಟು ಮೆಚ್ಚುಗೆ ಮತ್ತು ವಿವಾದಕ್ಕೆ ಕಾರಣವಾಗಿದ್ದವು.

ಗುಮ್ರಾಹ್‌ (1963): ದಾಂಪತ್ಯ ಬದುಕಿನಿಂದಾಚೆ ಪ್ರಿಯಕರನೆಡೆ ಮನಸು ಹೊರಳಿಸುವ ಯುವತಿಯ ಕಥಾನಕ. ಇಂಥದ್ದೊಂದು ಬೋಲ್ಡ್‌ ಕಥಾವಸ್ತುವಿನ ಮೊದಲ ಬಾಲಿವುಡ್ ಸಿನಿಮಾ. ಮಾಲಾ ಸಿನ್ಹಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಇಂತಹ ಕತೆಗಳ ಮತ್ತಷ್ಟು ಸಿನಿಮಾಗಳಿಗೆ ದಾರಿ ಮಾಡಿಕೊಟ್ಟಿತು. ಇದೇ ಮಾಲಾ ಸಿನ್ಹಾ ಅವರು ಚೋಪ್ರಾ ಅವರ ‘ಧೂಲ್‌ ಕಾ ಫೂಲ್‌’ ಚಿತ್ರದ ಮಹತ್ವದ ಪಾತ್ರದಲ್ಲೂ ನಟಿಸಿದ್ದರು.

ನಿಕಾಹ್‌ (1982): ಷರಿಯಾ ಕಾನೂನನ್ನು ದಿಟ್ಟತನದಿಂದ ಪ್ರಶ್ನಿಸಿದ್ದ ಕತೆಯ ಚಿತ್ರ ಹಲವು ಕಾರಣಗಳಿಂದಾಗಿ ಮುಖ್ಯವಾಯ್ತು. ಪಾಕಿಸ್ತಾನ್ ಮೂಲದ ನಟಿ ಸಲ್ಮಾ ಆಘಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದೀಪಕ್ ಪರಾಶರ್‌ ಆಕೆಯ ಪತಿ ಪಾತ್ರದಲ್ಲಿದ್ದರು. ಮೂರು ಬಾರಿ ತಲಾಖ್ ಹೇಳಿ ಪತ್ನಿಯನ್ನು ದೂರ ಮಾಡುವ ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದ್ದರು ಬಿ.ಆರ್.ಚೋಪ್ರಾ. ಆ ವರ್ಷ ತೆರೆಕಂಡ ಸೂಪರ್‌ಸ್ಟಾರ್‌ಗಳ ಚಿತ್ರಗಳೊಂದಿಗೆ ‘ನಿಕಾಹ್‌’ ಸ್ಪರ್ಧಿಸಿ ಗೆಲುವು ದಾಖಲಿಸಿತ್ತು.

ಬಿ.ಆರ್.ಚೋಪ್ರಾ | ಜನನ: 22/04/1914 | ನಿಧನ: 05/11/2008

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಕಾಲಿಕವಾಗಿ ಅಗಲಿದ ನಟ ರಂಗಾ

ಬೆಂಗಳೂರು ಮೂಲದ ರಂಗಾ ಎಸ್ಸೆಸ್ಸೆಲ್ಸಿ ಓದಿದ ನಂತರ ಸರ್ಕಾರದ ಹೌಸಿಂಗ್‌ ಬೋರ್ಡ್‌ನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಆಗಿನ್ನೂ ಅವರಿಗೆ 19