ಕನ್ನಡ ಚಿತ್ರನಿರ್ಮಾಪಕ, ವಿತರಕ ಅಬ್ಬಯ್ಯನಾಯ್ಡು ಅವರ ಜೀವನವೇ ಒಂದು ಸಿನಿಮಾ ಚಿತ್ರಕಥೆಯಂತಿದೆ. ಆಂಧ್ರದ ಚಿತ್ತೂರಿನ ರಂಗಾಪುರಂ ಗ್ರಾಮದ ಬಡ ಕೃಷಿಕ ಕುಟುಂಬದ ಮಗ ಅಬ್ಬಯ್ಯನಾಯ್ಡು. ಕೆಲಸ ಅರಸುತ್ತಾ ಕುಟುಂಬ ಬೆಂಗಳೂರಿಗೆ ಬಂದು ನೆಲೆನಿಂತಿತು. ಅಬ್ಬಯ್ಯನಾಯ್ಡು ಓದಿದ್ದು ಎರಡನೇ ತರಗತಿಯಷ್ಟೆ. ಚಿಕ್ಕಂದಿನಲ್ಲೇ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಹಗಲು ವೇಳೆ ಇಟ್ಟಿಗೆ, ಮಣ್ಣು ಹೊರುತ್ತಿದ್ದ ಅವರು ಸಂಜೆ ಶಾಲೆಗೆ ಹೋಗಿ ಕನ್ನಡ ಓದುವಷ್ಟರ ಮಟ್ಟಿಗೆ ಅಕ್ಷರ ಕಲಿತರು. ಕಟ್ಟಡ ಕೆಲಸದಲ್ಲಿ ದುಡಿದ ಪುಡಿಗಾಸು ಕೂಡಿಟ್ಟು ಸಿನಿಮಾ ನೋಡುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.
ಅವರಿಗೆ ಹನ್ನೆರೆಡು ವರ್ಷವಾಗುತ್ತಿದ್ದಂತೆ ಗಾರೆ ಕೆಲಸಕ್ಕೆ ಬಡ್ತಿ ಸಿಕ್ಕಿತು. ಕೆಲವು ವರ್ಷ ಕೆಲಸ ಮಾಡಿ ಹಣ ಕೂಡಿಟ್ಟುಕೊಂಡು ನಟನಾಗುವ ಉಮೇದಿನೊಂದಿಗೆ ಮದರಾಸಿಗೆ ಹೋದರು. ಸಾಕಷ್ಟು ಅಡೆತಡೆಗಳ ಮಧ್ಯೆ ತಮ್ಮ ಮಧು ಆರ್ಟ್ ಫಿಲಂಸ್ ಬ್ಯಾನರ್‌ನಡಿ ‘ಹೂವು ಮುಳ್ಳು’ (1968) ಸಿನಿಮಾ ನಿರ್ಮಿಸಿದರು. ಉದಯಕುಮಾರ್ ನಾಯಕನಟ. ಈ ಚಿತ್ರದಲ್ಲಿ ಸ್ವತಃ ತಾವೂ ಒಂದು ಪ್ರಮುಖ ಪಾತ್ರ ನಿರ್ವಹಿಸಿದರು. ಮುಂದೆ ಕೆಲಸ ವರ್ಷ ನಿರ್ಮಾಣ ಸಾಧ್ಯವಾಗಲಿಲ್ಲ. 1981ರಲ್ಲಿ ಅವರ ಸಂಸ್ಥೆಯಿಂದ ತಯಾರಾದ ‘ತಾಯಿಯ ಮಡಿಲಲ್ಲಿ’ ಬಹುದೊಡ್ಡ ಯಶಸ್ಸು ಕಂಡಿತು. ‘ತ’ ಅಕ್ಷರ ತಮಗೆ ಅದೃಷ್ಟ ತಂದುಕೊಡುತ್ತದೆ ಎಂದು ಭಾವಿಸಿದ ಅವರು ಅದೇ ಅಕ್ಷರದಿಂದ ಆರಂಭವಾಗುವ ಶೀರ್ಷಿಕೆಗಳಡಿ ಸಿನಿಮಾಗಳನ್ನು ನಿರ್ಮಿಸಿದರು. ತಾಯಿಯ ನುಡಿ, ತಾಳಿಯ ಭಾಗ್ಯ, ತಾಯಿಯ ಕನಸು, ತಾಯಿಯ ಹೊಣೆ, ತಾಳಿಯ ಆಣೆ, ತವರು ಮನೆ, ತಾಯಿಗೊಬ್ಬ ಕರ್ಣ, ತಾಳಿಗಾಗಿ, ತಾಯವ್ವ.. ಹೀಗೆ. ಕಾಕತಾಳೀಯ ಎನ್ನುವಂತೆ ಈ ಚಿತ್ರಗಳೂ ಯಶಸ್ಸು ಕಂಡವು. ಕೌಟುಂಬಿಕ ಕಥಾನಕಗಳ ಈ ಚಿತ್ರಗಳು ವಿಶೇಷವಾಗಿ ಹೆಂಗಳೆಯರ ಮನಗೆದ್ದವು.

ಶಂಕರ್‌ನಾಗ್ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಅಬ್ಬಯ್ಯನಾಯ್ಡು ಅವರಿಗಾಗಿ ‘ಸೀತಾರಾಮು’ ನಿರ್ಮಿಸಿ ಗೆದ್ದರು. ಈ ಚಿತ್ರದೊಂದಿಗೆ ಶಂಕರ್‌ನಾಗ್ ಅವರಿಗೆ ವ್ಯಾಪಾರಿ ಚಿತ್ರಗಳ ನಾಯಕನಾಗಿ ಭದ್ರ ನೆಲೆ ಸಿಕ್ಕಿತು. ಅಬ್ಬಯ್ಯನಾಯ್ಡು ನಿರ್ಮಾಣದ ಚಿತ್ರಗಳೊಂದಿಗೆ ಚರಣ್‌ರಾಜ್ ಮತ್ತು ವಿನೋದ್ ಆಳ್ವ ನಾಯಕನಟರಾಗಿ ಜನಪ್ರಿಯತೆ ಗಳಿಸಿದರು. ಸುದೀರ್ಘ ವಿರಾಮದ ನಂತರ ತೆರೆಗೆ ಮರಳಿದ ಹಿರಿಯ ನಟರಾದ ಕಲ್ಯಾಣ್‌ಕುಮಾರ್ ಮತ್ತು ರಾಜೇಶ್ ಅವರಿಗೆ ಅಬ್ಬಯ್ಯನಾಯ್ಡು ಚಿತ್ರಗಳಲ್ಲಿನ ಉತ್ತಮ ಪಾತ್ರಗಳು ಗೆಲುವು ತಂದುಕೊಟ್ಟವು. ಅವರು ಕೂಡ ತಮ್ಮ ಚಿತ್ರಗಳಲ್ಲಿ ತಮಗೆ ಹೊಂದಿಕೆಯಾಗುವಂತಹ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ಕನ್ನಡ ಭಾಷೆಯ ಬಗ್ಗೆ ಅಪಾರ ಒಲವಿದ್ದ ಅಬ್ಬಯ್ಯನಾಯ್ಡು ತಮ್ಮ ಚಿತ್ರಗಳಲ್ಲಿ ನಾಡು – ನುಡಿಯ ಕುರಿತ ಹಾಡುಗಳನ್ನು ಬರೆಸುತ್ತಿದ್ದರು. ಡಾ.ರಾಜಕುಮಾರ್ ಅವರಿಗಾಗಿ ‘ರಾಜ ನನ್ನ ರಾಜ’ ಚಿತ್ರವೂ ಸೇರಿದಂತೆ 20 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಬ್ಬಯ್ಯನಾಯ್ಡು ಅವರ ಮತ್ತೊಂದು ಮಹತ್ವದ ಕೊಡುಗೆ ಎಂದರೆ ‘ಮಧು ಆರ್ಟ್ಸ್ ಸ್ಟುಡಿಯೋ’. ಈ ಸ್ಟುಡಿಯೋ ಅಬ್ಬಯ್ಯ ನಾಯ್ಡು ಸ್ಟುಡಿಯೋ ಎಂದೇ ಹೆಸರಾಗಿದೆ. ಎರಡು ದೊಡ್ಡ ಫ್ಲೋರ್‌ಗಳು, ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಈ ಸ್ಟುಡಿಯೋದಲ್ಲಿ ಇಂದಿಗೂ ಸಿನಿಮಾ ಹಾಗೂ ಕಿರುತೆರೆ ಕಾರ್ಯಕ್ರಮಗಳಿಗೆ ಚಿತ್ರೀಕರಣ ನಡೆಯುತ್ತದೆ.
ಅಬ್ಬಯ್ಯನಾಯ್ಡು | ಜನನ: 1937 | ನಿಧನ: 22/04/1999
(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)
