ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಕಾಲಿಕವಾಗಿ ಅಗಲಿದ ನಟ ರಂಗಾ

ಪೋಸ್ಟ್ ಶೇರ್ ಮಾಡಿ

ಬೆಂಗಳೂರು ಮೂಲದ ರಂಗಾ ಎಸ್ಸೆಸ್ಸೆಲ್ಸಿ ಓದಿದ ನಂತರ ಸರ್ಕಾರದ ಹೌಸಿಂಗ್‌ ಬೋರ್ಡ್‌ನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಆಗಿನ್ನೂ ಅವರಿಗೆ 19 ವರ್ಷ. ಉದ್ಯೋಗದಲ್ಲಿದ್ದುಕೊಂಡೇ ‘ವಾಹಿನಿ ಕಲಾವಿದರು’ ಹೆಸರಿನ ಹವ್ಯಾಸಿ ರಂಗತಂಡವೊಂದನ್ನು ಕಟ್ಟಿ ನಾಟಕಗಳನ್ನು ಮಾಡತೊಡಗಿದರು. ತಮ್ಮ ತಂಡದಿಂದ ಮದುವೆ ಮಾರ್ಕೆಟ್‌, ಜನ್ಮಭೂಮಿ, ಸಂಸಾರ ನೌಕ.. ನಾಟಕಗಳನ್ನು ಪ್ರದರ್ಶಿಸಿದರು. ಇದೇ ಅವಧಿಯಲ್ಲಿ ‘ಹಿರಣ್ಣಯ್ಯ ಮಿತ್ರಮಂಡಳಿ’ಯ ‘ಲಂಚಾವತಾರ’ ನಾಟಕದೊಂದಿಗೆ ವೃತ್ತಿ ರಂಗಭೂಮಿ ಪ್ರವೇಶಿಸಿದರು. ನಾಟಕದಲ್ಲಿ ಇವರ ಪಾತ್ರ ನೋಡಿದ ಚಿತ್ರನಿರ್ದೇಶಕ ಎಸ್‌.ಕೆ.ಅನಂತಚಾರಿ ಅವರು ತಮ್ಮ ‘ಮಾವನ ಮಗಳು’ (1965) ಚಿತ್ರದ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದರು. ಮುಂದೆ ಪ್ರೇಮಮಯಿ, ಮಧುಮಾಲತಿ ಚಿತ್ರಗಳಲ್ಲಿ ನಟಿಸಿದ ಅವರು ‘ಧನಪಿಶಾಚಿ’ ಚಿತ್ರದಲ್ಲಿ ನಾಯಕನಟನಾದರು.

ನಿರ್ದೇಶಕ ಎಂ.ಆರ್‌.ವಿಠಲ್‌ ಅವರ ಹಣ್ಣೆಲೆ ಚಿಗುರಿದಾಗ, ನಕ್ಕರದೇ ಸ್ವರ್ಗ ಮನಸ್ಸಿದ್ದರೆ ಮಾರ್ಗ, ಮಾರ್ಗದರ್ಶಿ ಚಿತ್ರಗಳಲ್ಲಿ ಅವರಿಗೆ ಉತ್ತಮ ಪಾತ್ರಗಳು ಸಿಕ್ಕವು. ಸಿನಿಮಾರಂಗದಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರಿ ನೌಕರಿ ತೊರೆದು ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಕಡಿಮೆ ಅವಧಿಯಲ್ಲೇ ಖಳ, ಪೋಷಕ ಪಾತ್ರಗಳ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ‘ಪುನರ್ಜನ್ಮ’ ಚಿತ್ರದ ಉತ್ತಮ ನಟನೆಗೆ ಅವರಿಗೆ ರಾಜ್ಯಪ್ರಶಸ್ತಿ ಲಭಿಸಿತು. ಸಿನಿಮಾಗಳಲ್ಲಿ ಉತ್ತಮ ಅವಕಾಶಗಳು ಸಿಗುತ್ತಿದ್ದ ಹೊತ್ತಲ್ಲಿ ಆಕಸ್ಮಿಕವೊಂದು ಸಂಭವಿಸಿದ್ದು ವಿಪರ್ಯಾಸ. 1973ರ ಜುಲೈ 22ರಂದು ರಂಗಾ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೀಡಾದರು. ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಜುಲೈ 23ರಂದು ಅವರು ಇಹಲೋಕ ತ್ಯಜಿಸಿದಾಗ ಅವರಿಗೆ 38 ವರ್ಷವಷ್ಟೆ. ರಂಗಾ ನಟನೆಯ ಕೌಬಾಯ್ ಕುಳ್ಳ, ಮನೆ ಬೆಳಗಿದ ಸೊಸೆ, ಎಡಕಲ್ಲು ಗುಡ್ಡದ ಮೇಲೆ ಚಿತ್ರಗಳು ಅವರ ನಿಧನಾನಂತರ ತೆರೆಕಂಡವು.

(ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ) ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ

ಮೆಥೆಡ್ ಆಕ್ಟರ್ ಎಸ್‌ವಿಆರ್

ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್‌ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ವಿ.ಸೋಮಶೇಖರ್

ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ವಿ.ಸೋಮಶೇಖರ್‌ ಅವರ ಹುಟ್ಟೂರು. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ಅವರಿಗೆ ಶಾಲೆ ಓದುತ್ತಿದ್ದಾಗಲೇ ಸಿನಿಮಾದೆಡೆ ವ್ಯಾಮೋಹ ಶುರುವಾಗಿತ್ತು.