ಹಿಂದಿ ಸಿನಿಮಾದ ಜನಪ್ರಿಯ ಹಾಸ್ಯನಟಿ ಟುನ್ ಟುನ್. ಹಿನ್ನೆಲೆ ಗಾಯಕಿಯೂ ಆಗಿದ್ದ ಅವರ ನಿಜ ನಾಮಧೇಯ ಉಮಾದೇವಿ ಖತ್ರಿ. ಉತ್ತರ ಪ್ರದೇಶದ ಸಾಂಪ್ರದಾಯಕ ಪಂಜಾಬಿ ಕುಟುಂಬದಲ್ಲಿ (1923, ಜುಲೈ11) ಜನಿಸಿದರು. ಚಿಕ್ಕಂದಿನಲ್ಲೇ ತಂದೆ – ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಉಮಾ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. ಉಮಾ ತಮ್ಮ 13ರ ಹರೆಯದಲ್ಲಿ ಮುಂಬೈಗೆ ಬಂದಿಳಿದಿದ್ದರು. ಮನೆಯಿಂದ ಓಡಿ ಬಂದಿದ್ದ ಅವರು ಸೀದಾ ಹೋಗಿದ್ದು ಸಂಗೀತ ಸಂಯೋಜಕ ನೌಶಾದ್‌ರಲ್ಲಿಗೆ. ತಮಗೆ ಹಾಡಲು ಬರುತ್ತದೆಂದು ಹೇಳಿಕೊಂಡ ಆಕೆ, ಅವಕಾಶ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು! ಬೆದರಿಕೆಗೆ ಹೆದರಿದ ನೌಶಾದ್ ಆಕೆಗೆ ಆಶ್ರಯ ನೀಡಿದರು. `ವಾಮಿಕ್ ಆಜ್ರಾ’ (1946) ಚಿತ್ರದೊಂದಿಗೆ ಉಮಾ ಗಾಯನ ಅಭಿಯಾನ ಆರಂಭವಾಯಿತು.

ಮೇರು ಸಂಗೀತ ಸಂಯೋಜಕ ನೌಶಾದ್ ಆಲಿ, ಉಮಾರನ್ನು ಉತ್ತಮ ಗಾಯಕಿಯಾಗಿ ರೂಪಿಸುವಲ್ಲಿ ಯಶಸ್ವಿಯಾದರು. ಮುಂದೆ ಆಕೆಗೆ ಹೆಸರಾಂತ ಗಾಯಕ – ಗಾಯಕಿಯರಾದ ನೂರ್ ಜಹಾನ್, ರಾಜ್‌ಕುಮಾರಿ, ಖುರ್ಷಿದ್, ಜೊಹ್ರಾಭಾಯ್ ಅಂಬಾಲೇವಾಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭ್ಯವಾಯ್ತು. 1947ರಲ್ಲಿ ಉಮಾ, `ದರ್ದ್’ ಚಿತ್ರಕ್ಕಾಗಿ `ಅಫ್ಸಾನಾ ಲಿಖ್ ರಹೀ ಹೂ…’ ಹಾಗೂ ಚಿತ್ರದ ಇತರೆ ಗೀತೆಗಳಿಗೆ ದನಿಯಾದರು. ಸುರಯ್ಯಾ ನಟಿಸಿದ್ದ ಈ ಚಿತ್ರ ಹಾಡುಗಳಿಂದಲೇ ಯಶಸ್ವಿಯಾಯ್ತು. ಉಮಾ ಮೇರು ಗಾಯಕಿಯಾಗಿ ಹೊರಹೊಮ್ಮಿದರು (ಆಗಿನ್ನೂ ಲತಾ ಮಂಗೇಶ್ಕರ್ ಪ್ರವೇಶವಾಗಿರಲಿಲ್ಲ). ಮುಂದೆ ನೌಶಾದ್ ತಮ್ಮ ಪ್ರತೀ ಸಿನಿಮಾಗಳ ಎರಡು ಗೀತೆಗಳನ್ನಾದರೂ ಅವರಿಂದ ಹಾಡಿಸುತ್ತಿದ್ದರು.

ಉಮಾರ `ಅಫ್ಸಾನಾ ಲಿಖ್ ರಹೀ ಹೂ…’ ಹಾಡಿನ ಯಶಸ್ಸಿನಲ್ಲಿ ಮತ್ತೊಂದು ಕಥೆಯೂ ಇದೆ. ಪಾಕಿಸ್ತಾನ್‌ನಲ್ಲಿ ನೆಲೆಸಿದ್ದ ಮೋಹನ್ ಆ ಹಾಡಿನಿಂದ ಪ್ರಭಾವಿತರಾಗಿ ಭಾರತಕ್ಕೆ ಬಂದಿಳಿದರು. ಮುಂದೆ ಉಮಾರನ್ನು ವರಿಸಿದ ಅವರು ಇಲ್ಲಿಯೇ ನೆಲೆನಿಂತದ್ದು ವಿಶೇಷ! ಈ ದಾಂಪತ್ಯಕ್ಕೆ ಇಬ್ಬರು ಹೆಣ್ಣುಮಕ್ಕಳು ಜನಿಸಿದರು. ಮೋಹನ್ 1992ರಲ್ಲಿ ನಿಧನರಾದರು. `ದರ್ದ್’ ಚಿತ್ರದ ಯಶಸ್ಸಿನ ನಂತರ ಉಮಾ ಮುಂದೆ `ಅನೋಖಿ ಅದಾ’ (1948), `ಚಂದ್ರಲೇಖಾ’ (1948) ಚಿತ್ರಗಳಲ್ಲೂ ಗೆಲುವಿನ ಸವಿ ಕಂಡರು. ಲತಾ ಮಂಗೇಶ್ಕರ್, ಆಶಾ ಬೋಂಸ್ಲೆ ಗಾಯಕಿಯರಾಗಿ ಗುರುತಿಸಿಕೊಳ್ಳುತ್ತಿದ್ದಂತೆ ಉಮಾಗೆ ಅವಕಾಶಗಳು ಕಡಿಮೆಯಾದವು. ನೌಶಾದ್ ಸಲಹೆಯಂತೆ ಉಮಾ ನಟನೆಯತ್ತ ಹೊರಳಿದರು. ಬಬ್ಲಿ ವ್ಯಕ್ತಿತ್ವದ ಉಮಾಗೆ ಉತ್ತಮ ಕಾಮಿಕ್ ಟೈಮಿಂಗ್ ಇತ್ತು. ತಮ್ಮ ಸ್ನೇಹಿತ, ನಟ ದಿಲೀಪ್ ಕುಮಾರ್ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ದಿಲೀಪ್‌ರ `ಬಾಬೂಲ್’ (1950) ಚಿತ್ರದೊಂದಿಗೆ ಉಮಾ ನಟಿಯಾದರು. ಕಾಮಿಡಿ ಪಾತ್ರಗಳಿಗೆ ಹೊಂದಿಕೆಯಾಗುವಂತೆ ಆಕೆಗೆ `ಟುನ್ ಟುನ್’ ಎಂದು ನಾಮಕರಣ ಮಾಡಿದ್ದೇ ದಿಲೀಪ್. ಹಾಗೆ ಹಿಂದಿ ಚಿತ್ರರಂಗದಲ್ಲಿ ಹಾಸ್ಯನಟಿಯೊಬ್ಬರ ಉದಯವಾಯಿತು.

ಗುರುದತ್‌ರ ಕ್ಲಾಸಿಕ್ ಚಿತ್ರಗಳಾದ `ಆರ್ ಪಾರ್’, `ಮಿಸ್ಟರ್ ಅಂಡ್ ಮಿಸೆಸ್ 55′, `ಪ್ಯಾಸಾ’ ಚಿತ್ರಗಳು ಟುನ್ ಟುನ್ ನಟನಾ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟವು. 60, 70ರ ದಶಕಗಳ ಹಿಂದಿ ಚಿತ್ರರಂಗದ ಪ್ರಮುಖ ಹಾಸ್ಯನಟಿಯಾಗಿ ಅವರು ಹೊರಹೊಮ್ಮಿದರು. ಐದು ದಶಕಗಳ ತಮ್ಮ ಸಿನಿಮಾ ಜೀವನದಲ್ಲಿ ಆಕೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸಮಕಾಲೀನ ಶ್ರೇಷ್ಠ ಹಾಸ್ಯನಟರಾದ ಭಗವಾನ್ ದಾದಾ, ಅಘಾ, ಸುಂದರ್, ಮುಕ್ರಿ, ದುಮಾಲ್, ಜಾನಿ ವಾಕರ್, ಕೆಶ್ಟೋ ಮುಖರ್ಜಿ ಅವರೊಂದಿಗೆ ಟುನ್ ಟುನ್ ನಟಿಸಿದ್ದಾರೆ. ಟುನ್‌ಟುನ್ ಕಾಣಿಸಿಕೊಂಡ ಕೊನೆಯ ಹಿಂದಿ ಸಿನಿಮಾ `ಕಸಮ್ ದಂಡೇ ಕಿ’ (1990). 60, 70ರ ದಶಕಗಳಲ್ಲಿ ಟುನ್ ಟುನ್ ದೊಡ್ಡ ಜನಪ್ರಿಯತೆ ಗಳಿಸಿದ್ದ ನಟಿ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ದಪ್ಪಗಿನ ಹೆಂಗಸರನ್ನು `ಟುನ್ ಟುನ್’ ಎಂದೇ ಕರೆಯುವಷ್ಟು! ತಮ್ಮ 80ನೇ ವಯಸ್ಸಿನಲ್ಲಿ (2003, ನವೆಂಬರ್ 24) ಟುನ್ ಟುನ್ ಅಗಲಿದರು.
