ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರಗೀತೆಗಳಿಗೊಂದು ಭಾಷೆ ಕೊಟ್ಟ ಗುರುದತ್

ನಟ - ನಿರ್ದೇಶಕ
ಪೋಸ್ಟ್ ಶೇರ್ ಮಾಡಿ
ಶ್ರೀಧರಮೂರ್ತಿ
ಎನ್‌.ಎಸ್‌.
ಲೇಖಕ

ಗುರುದತ್ ಚಿತ್ರಗೀತೆಗಳನ್ನು ಸಿನಿಮಾ ಗ್ರಾಮರ್ ಒಳಗೆ ತಂದರು. ಅದನ್ನು ಚಿತ್ರೀಕರಿಸಲೂ ಕೂಡ ಒಂದು ಮಾದರಿ ರೂಪಿಸಿದರು. ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರು ಗುರುದತ್ ಕಲ್ಪನೆಗಳಿಗೆ ಮೂರ್ತ ರೂಪ ಕೊಟ್ಟು ಬೆಳ್ಳೆತೆರೆ ಮೇಲೆ ದೃಶ್ಯಕಾವ್ಯ ಸೃಷ್ಟಿಸಿದರು.

ಗುರುದತ್ ಬರೋದಕ್ಕೆ ಮೊದಲು ಕೂಡ ಭಾರತೀಯ ಚಿತ್ರರಂಗದಲ್ಲಿ ಚಿತ್ರಗೀತೆಗಳು ಇದ್ದವು. ಆದರೆ ಅವು ಒಂದೂ ರಂಗಗೀತೆಗಳ ವಿಡಿಯೋ ವರ್ಷನ್ ತರಹ ಇರುತ್ತಿದ್ದವು. ಕೆಲವೊಮ್ಮೆ ಹಾಡೇ ಮುಖ್ಯವಾಗಿ ಕಥೆಗೆ ಸಂಬಂಧವೇ ಇಲ್ಲದಂತೆ ಇರುತ್ತಿದ್ದವು. ಗುರುದತ್ ಚಿತ್ರಗೀತೆಗಳನ್ನು ಸಿನಿಮಾ ಗ್ರಾಮರ್ ಒಳಗೆ ತಂದರು. ಅದನ್ನು ಚಿತ್ರೀಕರಿಸಲೂ ಕೂಡ ಒಂದು ಮಾದರಿ ರೂಪಿಸಿದರು.

ಗುರುದತ್ ಜನಿಸಿದ್ದು 1925ರ 9ನೇ ಜುಲೈ ರಂದು ಬೆಂಗಳೂರಿನಲ್ಲಿ. ತಂದೆ ಶಿವಶಂಕರ್ ರಾವ್ ಪಡಕೋಣೆ ಮತ್ತು ತಾಯಿ ವಸಂತಿ ಪಡಕೋಣೆ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಎಂದರೆ ಅವರ ನಿಜವಾದ ಹೆಸರು ವಸಂತ ಕುಮಾರ್ ಶಿವಶಂಕರ್ ಪಡಕೋಣೆ. ಬಾಲ್ಯದಲ್ಲಿ ನಡೆದ ಒಂದು ಆಕ್ಸಿಡೆಂಟ್‌ನಲ್ಲಿ ಅವರು ಬದುಕಿದ್ದೇ ಹೆಚ್ಚು. ಅದು ದೋಷ ಎಂದು ಹೇಳಿದ ಪುರೋಹಿತರು ಹೆಸರು ಬದಲಾಯಿಸಲು ಸೂಚಿಸಿದರು. ಆಗ ಮನೆಯಲ್ಲಿ ಗುರುದತ್ ಎಂದು ಕರೆಯಲಾಯಿತು. ಆ ಹೆಸರೇ ಮುಂದೆ ಸ್ಥಿರವಾಗಿ ಬಿಟ್ಟಿತು. ಮೂಲತ: ಕಾರವಾರದವರಾದ ಗುರುದತ್ ಅವರ ಹೆತ್ತವರು ಮುಂದೆ ಕೊಲ್ಕತ್ತಾ ಸಮೀಪದ ಭವಾನಿಪುರದಲ್ಲಿ ನೆಲೆಸಿದರು. ಹೀಗಾಗಿ ಗುರುದತ್ ಅವರ ಶಿಕ್ಷಣ ನಡೆದಿದ್ದು ಬಂಗಾಳಿಯಲ್ಲಿ. ಬಂಗಾಳಿಯನ್ನು ಚೆನ್ನಾಗಿ ಓದಿ ಬರೆಯಲು ಕಲಿತಿದ್ದ ಗುರುದತ್ ಚಿತ್ರಗಳ ಮೇಲೆ ಬಂಗಾಳಿ ಸಾಹಿತ್ಯದ ಪ್ರಭಾವ ಇದೆ.ಟೆಲಿಪೋಮ್ ಅಪರೇಟರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಗುರುದತ್ ಅವರಿಗೆ ಅವರ ಚಿಕ್ಕಪ್ಪ ಪುಣೆಯ ಪ್ರಭಾತ್ ಕಂಪನಿಯಲ್ಲಿ ಕೆಲಸ ಕೊಡಿಸಿದರು. ಅಲ್ಲಿಂದ ಬೆಳ್ಳಿತೆರೆ ನಂಟು ಆರಂಭವಾಯಿತು. 1946ರಲ್ಲಿ ನಿರ್ದೇಶಕರ ವಿಶ್ರಾಂ ಭಂಡೆಕರ್ ಅವರಿಗೆ ಸಹಾಯಕರಾಗುವ ಅವಕಾಶ ಗುರುದತ್ ಅವರಿಗೆ ದೊರಕತು. ಪಿ.ಎಲ್.ಸಂತೋಷಿಯವರ ‘ಹಮ್ ಏಕ್ ಹೈ’ ಚಿತ್ರಕ್ಕೆ ಗೀತೆಗಳನ್ನು ಪಿಕ್ಚರೈಸ್ ಮಾಡುವ ಮೂಲಕ ಗುರುದತ್ ಗಮನ ಸೆಳೆದರು.

1952ರಲ್ಲಿ ಗುರುದತ್ ನಿರ್ದೇಶಿಸಿದ ಚಿತ್ರ ‘ಜಾಲ್’  ತೆರೆ ಕಂಡಿತು. ದೇವ್ ಆನಂದ್ – ಗೀತಾ ಬಾಲಿ ಪ್ರಮುಖ ಪಾತ್ರದಲ್ಲಿದ್ದರು. ಎಸ್.ಡಿ.ಬರ್ಮನ್ ಅವರ ಸಂಗೀತ ಚಿತ್ರದ ಇನ್ನೊಂದು ಮುಖ್ಯವಾದ ಸಂಗತಿ. ಚಿತ್ರದ ಯೇ ರಾತ್ ಯೇ ಚಾಂದಿನಿ ಫಿರ್ ಕಹಾಂ, ಬುರಾ ಹೈ ಜಮಾನಾ ಧೋಖಾ ನ ಖಾನಾ ಮೊದಲಾದ ಗೀತೆಗಳು ಬಹಳ ಜನಪ್ರಿಯವಾದವು. ಈ ಚಿತ್ರದ ಮೂಲಕ ವಿ.ಕೆ.ಮೂರ್ತಿ, ಗುರುದತ್ ಅವರಿಗೆ ಛಾಯಾಗ್ರಾಹಕರಾದರು. ಅವರಿಬ್ಬರದು ಜಗತ್ತು ಕಂಡ ಶ್ರೇಷ್ಟ ಸಿನಿಮಾ ಜೋಡಿಗಳಲ್ಲಿ ಒಂದಾಗಿದೆ. ಜಾಲ್ ನಂತರ ಬಂದ ಚಿತ್ರ ಬಾಜ್. ಇದು ಹದಿನಾರನೇ ಶತಮಾನದ ಘಟನೆಯನ್ನು ಆದರಿಸಿದ್ದು. ಪೋರ್ಚುಗೀಸರ ಅಧಿಪತ್ಯದ ವಿರುದ್ದ ಬಂಡಾಯವೇಳುವ ಸಾಹಸಿ ಹೆಣ್ಣೊಬ್ಬಳ ಕಥೆ ಇದು. ಗುರುದತ್ ಅವರೇ ಚಿತ್ರದ ಹೀರೋ ಆದರೂ ಗೀತಾ ಬಾಲಿ ನಾಯಕಿ. ಚಿತ್ರದ ಒತ್ತು ಆಕ್ಷನ್ ಮೇಲಿರಲಿಲ್ಲ. ಪ್ರೇಮಕ್ಕೆ ಮಹತ್ವವಿತ್ತು. ಪ್ರೇಕ್ಷಕರು ‘ಜಾಲ್’ ಮಾದರಿಯನ್ನೇ ನಿರೀಕ್ಷಿಸಿದ್ದರು. ಪರಿಣಾಮ ಚಿತ್ರ  ಗೆಲ್ಲಲಿಲ್ಲ. ಗುರುದತ್ ಸಾಲ ತೀರಿಸುವುದೇ ಕಷ್ಟವಾಗಿ ಹಿನ್ನೆಡೆಯನ್ನು ಅನುಭವಿಸಿದರು. ಈ ಸಿನಿಮಾ ಗುರುದತ್ ಅವರ ಪರ್ಸನಲ್ ಲೈಫ್‌ನಲ್ಲಿ ಟರ್ನಿಂಗ್ ಪಾಯಿಂಟ್ ಎನ್ನಿಸಿಕೊಳ್ತು. ಗುರುದತ್ ಮತ್ತು ಗೀತಾ ಅವರ ನಡುವೆ ಲವ್ ಮೂಡಿದ್ದು ಮಾತ್ರವಲ್ಲ ಎಲ್ಲರಿಗೂ ಆಶ್ಚರ್ಯ ಆಗೋವಷ್ಟು ಬೇಗ ಅವರಿಬ್ಬರು ಮದ್ವೆ ಕೂಡ ಆದರು.

ಗುರುದತ್ ಡೈರಕ್ಟ್ ಮಾಡಿದ ಮುಂದಿನ ಚಿತ್ರ ‘ಆರ್‌ಪಾರ್’. ಇದು ವರ್ಗ ಸಂಘರ್ಷದ ಕಥೆಯನ್ನು ಹೊಂದಿದ್ದರೂ ಪ್ರಣಯಕ್ಕೆ ಒತ್ತು ನೀಡಲಾಗಿತ್ತು. ಗುರುದತ್ ಸಾಲ ತೀರಿಸುವುದು ಅಗತ್ಯವಾದ್ದರಿಂದ ಒಂದೆರಡು ಸರಳ ಚಿತ್ರಗಳನ್ನು ಮಾಡಬೇಕು ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಓ.ಪಿ.ನಯ್ಯರ್ ಸಂಗೀತದಲ್ಲಿ ಚಿತ್ರದ ಸುನ್ ಸುನ್ ಜಾಲಿಯಾ, ಮೊಹಬ್ಬತ್ ಕರ್ ಲೋ ಜೀ ಭರ್ ಲೋ ಮೊದಲಾದ ಗೀತೆಗಳು ಜನಪ್ರಿಯವಾದವು. ಗುರುದತ್, ಶ್ಯಾಮಾ ಪ್ರಮುಖ ಪಾತ್ರಗಳಲ್ಲಿದ್ದರು. ಇದರಲ್ಲಿನ ಕಾರ್ ಛೇಸಿಂಗ್ ದೃಶ್ಯ ಹಾಲಿವುಡ್ ಚಿತ್ರಗಳಿಗೆ ಸರಿಸಮವಾಗಿತ್ತು. ಚಿತ್ರ ಬಾಕ್ಸ್ ಆಫೀಸಿನಲ್ಲಿ ಜಯಭೇರಿ ಹೊಡೆಯಿತು. ‘ಆರ್ ಪಾರ್’ ನಂತರ ‘ಥಂಡಿ ಹವಾ ಕಾಲೀ ಘಟಾ’ ಗೀತೆಗಾಗಿ ಇಂದಿಗೂ ಪ್ರಸಿದ್ಧವಾಗಿರುವ ‘ಮಿಸ್ಟರ್ ಅಂಡ್ ಮಿಸೆಸ್ 55’ ಬಂದಿತು. ಗುರುದತ್, ಮಧುಬಾಲಾ, ಲಲಿತಾ ಪವಾರ್, ಜಾನಿವಾಕರ್, ಉಮಾದೇವಿ, ಕುಂಕುಮ್ ಪ್ರಮುಖ ಪಾತ್ರದಲ್ಲಿದ್ದರು. ಚಿತ್ರದಲ್ಲಿ ಮೂರ್ತಿಯವರ ಕೈಚಳಕ ಎದ್ದು ಕಾಣುವಂತಿತ್ತು. ಈಜುಕೊಳದಲ್ಲಿ ಚಿತ್ರೀಕರಣಗೊಂಡ ‘ಥಂಡೀ ಹವಾ’ ಗೀತೆಯಲ್ಲಿನ ರೂಪಕಗಳು ಅವರ ಬೆಳಕಿನ ವಿನ್ಯಾಸಕ್ಕೆ ಸಾಕ್ಷಿ ಎನ್ನಿಸುವಂತಿದೆ. ‘ಮಿಸ್ಟರ್ ಎಂಡ್ ಮಿಸೆಸ್ 55’ ದೊಡ್ಡ ಪ್ರಮಾಣದಲ್ಲಿ ಗೆಲುವನ್ನು ಸಾಧಿಸಿತು.

‘ಮಿಸ್ಟರ್ ಅಂಡ್ ಮಿಸಸ್ 55’ ಜೊತೆಯಲ್ಲಿಯೇ ‘ಸಿ.ಐ.ಡಿ’ ಬಂದಿತು.ಈ ವೇಳೆಗೆ ಗುರುದತ್ ತಮ್ಮ ಮಾಸ್ಟರ್ ಪೀಸ್ ‘ಪ್ಯಾಸಾ’ರೂಪಿಸುವ ಸಿದ್ದತೆಯಲ್ಲಿದ್ದರು. ಈ ಚಿತ್ರದ ಮಹತ್ವದ ಸಂಗತಿ ಎಂದರೆ ವಹೀದಾ ರಹಮಾನ್ ಅವರು ಗುರುದತ್ ಕ್ಯಾಂಪ್‌ ಪ್ರವೇಶಿಸಿದ್ದು. ಯಾವ ದೃಷ್ಟಿಯಿಂದ ವಿಶ್ಲೇಷಿಸಿದರೂ ಗುರುದತ್ ನೀಡಿದ ಸರ್ವಶ್ರೇಷ್ಠ ಚಿತ್ರ  ‘ಪ್ಯಾಸಾ’.  ಟೈಮ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಜಗತ್ತಿನ ಸರ್ವಶ್ರೇಷ್ಠ  ನೂರು ಚಿತ್ರಗಳ ಪಟ್ಟಿಯಲ್ಲಿ ‘ಪ್ಯಾಸಾ’ ಕೂಡ ಸೇರಿದೆ. ಚಿತ್ರದಲ್ಲಿ ಹಲವು ದೃಶ್ಯಕಾವ್ಯಗಳಿವೆ. ನಾಯಕನನ್ನು ಮಾನಸಿಕ ರೋಗಿಗಳ ಶಿಬಿರದಲ್ಲಿ ಬಂಧಿಯಾಗಿರಿಸಿ ಹೊರಜಗತ್ತಿಗೆ ಅವನು ಸತ್ತಿದ್ದೇನೆ ಎಂದು ಹೇಳಿ ಸಂತಾಪ ಸೂಚಕ ಸಭೆಯನ್ನು ಸ್ನೇಹಿತರು ಮತ್ತು ಸಂಬಂಧಿಗಳು ಏರ್ಪಡಿಸಿರುತ್ತಾರೆ. ಅವನ ಆಸ್ತಿಯನ್ನು ಕಬಳಿಸುವ ಈ ಸಂಚನ್ನು ವಿಫಲಗೊಳಿಸಲು ನಾಯಕ ಶಿಬಿರದಿಂದ ತಪ್ಪಿಸಿಕೊಂಡು ಸಂತಾಪ ಸೂಚಕ ಸಭೆಯನ್ನು ತಲುಪುತ್ತಾನೆ. ಇಲ್ಲಿ ಹೊನಲು ಬೆಳಕಿನಲ್ಲಿ ಮಿಂದ ಮಾನವ ಆಕೃತಿಯಂತೆ ಚಿತ್ರಿಕೆ ರೂಪುಗೊಳ್ಳುತ್ತದೆ. ಬೆಳಕಿನ ಒಂದು ಸಣ್ಣ ಕಿಡಿ ಕತ್ತಲೆಯನ್ನು ಹೇಗೆ ಕೊನೆಗೊಳಿಸಬಲ್ಲದು ಎನ್ನುವುದನ್ನು ಇದು ಬಿಂಬಿಸುತ್ತದೆ. ಅವನ ಮುಖದ ಮೇಲೆ ಬೀಳುತ್ತಿರುವ ಮಂದ ಬೆಳಕು ಸತ್ಯವನ್ನು ಸಾರುವ ಜ್ಯೋತಿಯಂತೆ ದೃಶ್ಯವನ್ನು ಮಾರ್ಪಡಿಸಿದೆ. ಇದನ್ನು ಸಹಿಸಿದ ಖಳಪಾತ್ರಗಳು ಕತ್ತಲನ್ನು ಇನ್ನಷ್ಟು  ಹರಡಲು ಪ್ರಯತ್ನಿಸುತ್ತವೆ.

ಮುಂದೆ ಬಂದಿದ್ದು ಭಾರತದ ಮೊದಲ ಸಿನಿಮಾ ಸ್ಕೋಪ್ ಸಿನಿಮಾ ‘ಕಾಗಜ್ ಕೆ ಪೂಲ್‌’. ಚಿತ್ರದ ಕಥೆ ಬಹಳ ವರ್ಷಗಳಿಂದ ಗುರುದತ್ ಮನಸ್ಸಿನಲ್ಲಿತ್ತು. ಅದೊಂದು ರೀತಿಯಲ್ಲಿ ಬಣ್ಣದ ಬದುಕಿನ ಒಳಹೊರಗನ್ನು ತೆರೆದಿಡುವ ಪ್ರಯತ್ನ. ಈ ಕತೆಗೂ, ಗುರುದತ್ ವೈಯಕ್ತಿಕ ಬದುಕಿಗೂ ಹಲವು ಹೋಲಿಕೆಗಳಿದ್ದವು. ಒಂದು ಅರ್ಥದಲ್ಲಿ ತನ್ನ  ಆತ್ಮಕಥನವನ್ನೇ ಗುರುದತ್ ಈ ಚಿತ್ರದ ಮೂಲಕ ನೀಡಿದ್ದರು. ‘ಕಾಗಜ್ ಕೆ ಪೂಲ್’ ಚಿತ್ರದ ಮಹತ್ವ ಇರೋದು ಅದು ನೀಡಿದ ಸಿನಿಮ್ಯಾಟಿಕ್ ಈಡಂಗಳಲ್ಲಿ. ಒಂದು ಕಡೆ ಚಿತ್ರರಂಗದ ವೈಭವಗಳು, ರಂಗುರಂಗಿನ ಸೆಟ್‌ಗಳು, ಕಲಾವಿದರ ವಿಭಿನ್ನ ಮನೋವ್ಯಾಪಾರಗಳು. ತಾರೆಯರ ಬಣ್ಣದ ಸಂಭ್ರಮ ಇದ್ದರೆ. ಇನ್ನೊಂದು ಕಡೆ ಚಿತ್ರರಂಗದ ದುರಾಸೆ -ಸಮಯ ಸಾಧಕತನ, ತಣ್ಣಗಿನ ಕ್ರೌರ್ಯ ಇವುಗಳಿದ್ದವು. ನಾಯಕನ ಬದುಕು ಚಿತ್ರರಂಗದಲ್ಲಿ ಮತ್ತು ವೈಯಕ್ತಿಕವಾಗಿ ಎರಡೂ ಕಡೆಯೂ ದುರಂತದಲ್ಲಿತ್ತು. ಆದರೆ ಮುಂದೆ ಶತಮಾನದ ಚಿತ್ರ ಎಂದು ಕರೆಸಿಕೊಂಡ ‘ಕಾಗಜ್ ಕೆ ಪೂಲ್‌’ ಬಿಡುಗಡೆಯಾದಾಗ ನಿರಾಶಾದಾಯಕ ಪ್ರತಿಕ್ರಿಯೆಯನ್ನು ಕಂಡಿತ್ತು. ಅದರಲ್ಲಿ ಮಸಾಲೆ ಇರಲಿಲ್ಲ. ವೈಭವೀಕರಣ ಇರಲ್ಲಿಲ್ಲ. ಚಿತ್ರರಂಗದ ಕಹಿ ಅನುಭವಗಳ ಚಿತ್ರಣವಿತ್ತು. ಬದುಕಿನ ಕಠೋರ ಸತ್ಯಗಳ ಅನಾವರಣವಿತ್ತು. ಪ್ರೀಮಿಯರ್ ದಿನವೇ ಕಟುವಾದ ಪ್ರತಿಕ್ರಿಯೆಗಳು ಬಂದವು. ಪತ್ರಿಕೆಗಳಲ್ಲಿಯೂ ಉತ್ತಮ ಬೆಂಬಲ ಸಿಕ್ಕಲಿಲ್ಲ. ಆದರೆ ಇದರಲ್ಲಿನ ಸಾರ್ವಕಾಲಿಕ ಅಂಶಗಳನ್ನು ಮನಗಂಡ ಅದೇ ಪ್ರೇಕ್ಷಕರು ಹದಿನೈದು ವರ್ಷಗಳ ನಂತರ ಚಿತ್ರದ ಹಲವು ನೆಲೆಗಳನ್ನು ಗುರುತಿಸಿ ಮೆಚ್ಚಿದರು. 1970ರಲ್ಲಿ ಚಿತ್ರ ಮತ್ತೆ ಬಿಡುಗಡೆಯಾದಾಗ ಜನ ಮೆಚ್ಚಿಕೊಂಡರು. ಮಾಸ್ಟರ್ ಪೀಸ್ ಎಂದು ಕೊಂಡಾಡಿದರು. ಆದರೆ ಅದನ್ನು ನೋಡಿ ಆನಂದಿಸಲು ಗುರುದತ್ ಇರಲಿಲ್ಲ.

‘ಕಾಗಝ್ ಕೆ ಫೂಲ್‌’ ಸಿನಿಮಾ ಚಿತ್ರೀಕರಣದಲ್ಲಿ ಗುರುದತ್‌, ವಿ.ಕೆ.ಮೂರ್ತಿ (Photo Courtesy: Film History Pics)

ಚಿತ್ರದ ಮರೆಯಲಾಗದ ದೃಶ್ಯ ಎಂದರೆ ‘ವಕ್ತ್ ನೇ ಕಿಯಾ’ ಗೀತೆಯದು. ಇಲ್ಲಿ ಚಿತ್ರದ ನಾಯಕಿ ವಹೀದಾ ರಹಮಾನ್ ಮುಖದ ಮೇಲೆ ಬೆಳಕು ಬೀಳುವಂತಹ ಸಂಯೋಜನೆಯನ್ನು ಕಾಣುತ್ತೇವೆ. ಅದು ಆ ಕಾಲಕ್ಕೆ ಕ್ರಾಂತಿಕಾರಿ ಎನ್ನಿಸಬಲ್ಲ ಪ್ರಯೋಗವಾಗಿತ್ತು. ಏಕೆಂದರೆ ಇಂತಹ ಬೆಳಕಿನ ಪ್ರಯೋಗವನ್ನು ದೆವ್ವಗಳನ್ನು ತೋರಿಸುವಾಗ ಮಾತ್ರ ಮಾಡುತ್ತಿದ್ದರು. ಅದು ಅಸಹಜ ಚಿತ್ರಣ ಎನ್ನುವ ಅರ್ಥದಲ್ಲಿ. ಇಂತಹ ಪ್ರಯತ್ನದಲ್ಲಿ  ಗುರುದತ್‌ ಪ್ರಯೋಗಶೀಲತೆಯನ್ನು ಬೆರೆಸಿದರು. ಇಲ್ಲಿ ನಾಯಕಿಯ ಭಾವ ತುಮುಲವನ್ನು ಸೆರೆಹಿಡಿಯಲು ಇಂತಹ ಸಂಯೋಜನೆಯನ್ನು ಮಾಡಲು ಇಲ್ಲಿ ಬೆಳಕು ಚಲಿಸಿ ಇನ್ನೊಂದು ಕಡೆ ಮುಸುಕಾಗುವ ಪ್ರಯೋಗವನ್ನೂ ಮಾಡಲಾಗಿತ್ತು. ಈ ಗೀತೆಯಲ್ಲಿ ಬರುವ ರೂಪಕಗಳು ಚಿತ್ರಜಗತ್ತಿನ ಕರಾಳತೆಯನ್ನು ತೆರೆದಿಡುವಂತಿದ್ದವು. ಕೊನೆಗೆ ಒಂಟಿಯಾಗಿ ಕುಸಿತಿರುವ ನಾಯಕ, ಅವನ ಮೇಲೆ ಬೀಳುವ ಬಿಸಿಲು ಕೋಲು ಇಡೀ ಚಿತ್ರದ ಸಾರವೇ ಈ ಚಿತ್ರಣದಲ್ಲಿತ್ತು. ಬೆಳಕಿನ ಕಿರಣಗಳ ಮೂಲಕ ಎರಡು ಪಾತ್ರಗಳ ನಡುವಿನ ಸಂವಹನವನ್ನು ಹಿಡಿದಿಟ್ಟಿರುವುದು ತಾಂತ್ರಿಕವಾಗಿಯೂ ಮಹತ್ವದ್ದು ಎನ್ನಿಸಬಲ್ಲ ಪ್ರಯೋಗ. ಚಲನಚಿತ್ರ ಪ್ರಪಂಚದಲ್ಲಿನ ವಿಚಿತ್ರಗಳನ್ನು ಸೆರೆಹಿಡಿಯುವ ಪ್ರಯತ್ನ ಡಿಫರೆಂಟ್ ಡೈಮೆನ್‌ಷನ್ ಪಡೆದುಕೊಂಡು ಮಲ್ಟಿಪಲ್ ಫೇಸಸ್‌ನ ಹೇಳಿತ್ತು. ‘ಕಾಗಜ್ ಕೆ ಪೂಲ್’ ಸೋಲಿನ ಸಂದರ್ಭದಲ್ಲಿಯೇ ಗುರುದತ್ ಅವರ ವೈಯಕ್ತಿಕ ಜೀವನದಲ್ಲಿಯೂ ತಲ್ಲಣದ ಅಲೆಗಳು ಎದ್ದಿದ್ದವು. ಗೀತಾ ಮಕ್ಕಳನ್ನೂ ಕರೆದುಕೊಂಡು ತವರು ಮನೆಗೆ ಹೋಗಿದ್ದರು. ಗುರುದತ್ ಕೂಡ ಮನೆಯನ್ನು ಒಡೆಸಿ ಹಾಕಿ ಬೇರೆ ಕಡೆ ಇರಲು ಆರಂಭಿಸಿದ್ದರು. ಕೆಲವು ತಿಂಗಳು ಗುರುದತ್ ಪಾಲಿಗೆ ನಿಜವಾಗಿಯೂ ಕರಾಳ ದಿನಗಳಾಗಿದ್ದವು. ಲಕ್ಷಾಂತರ ರೂಪಾಯಿಗಳ ನಷ್ಟವಾಗಿತ್ತು. ಸಾಲಗಾರರ ಕಾಟದಿಂದ ಹೊರಗೆ ಓಡಾಡುವುದು ಕಷ್ಟ. ಮನೆಯಲ್ಲಿಯೂ ನೆಮ್ಮದಿ ಇಲ್ಲ.

ಗುರುದತ್ ಅವರ  ಶ್ರೇಷ್ಠಚಿತ್ರವಾಗಿ ಮೂಡಿ ಬಂದಿದ್ದು  ‘ಸಾಹಿಬ್ ಬೀಬಿ ಔರ್ ಗುಲಾಮ್’.  ಒಂದು ಅರ್ಥದಲ್ಲಿ ಈ ಚಿತ್ರಕ್ಕಾಗಿ ಗುರುದತ್ ತನ್ನ ಕಲಾಭಿರುಚಿಯ ಸರ್ವಸ್ವವನ್ನೂ ಧಾರೆ ಎರೆದಿದ್ದರು. ಮೂರ್ತಿಯವರು ಅದಕ್ಕೆ ಭಾಷ್ಯವನ್ನು ಬರೆದಿದ್ದರು. ಈ ವಸ್ತು ಬಂಗಾಳಿಯಲ್ಲಿ ಬಿಮಲ್ ಮಿತ್ರಾ ಅವರು ಬರೆದ ಕಾದಂಬರಿಯನ್ನು ಆಧರಿಸಿತ್ತು. ಇದು ಕಾದಂಬರಿಯಾಗಿ ಕೂಡ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ‘ಸಾಹಿಬ್ ಬೀಬಿ ಔರ್ ಗುಲಾಮ್’ 20ನೇ ಶತಮಾನದ ಪ್ರಾರಂಭದಲ್ಲಿ ಬಂಗಾಳಿ ಶ್ರೀಮಂತ ಜಮೀನ್ದಾರಿ ಕುಟುಂಬ ಒಂದರಲ್ಲಿ ನಡೆಯುವ ಕತೆ. ಇದರಲ್ಲಿ ಆ ಕಾಲದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿದ್ದ ಶೋಷಣೆ ಸಮಾಜದಲ್ಲಿನ ವರ್ಗ ಸಂಘರ್ಷ, ಶ್ರೀಮಂತಿಕೆಯ ದಬ್ಬಾಳಿಕೆ ಎಲ್ಲವನ್ನೂ ಇದು ಎಳೆಎಳೆಯಾಗಿ ಬಿಡಿಸಿಡುತ್ತದೆ. ಈ ಸಿನಿಮಾನ ಗುರುದತ್ ತಾವು ಡೈರೆಕ್ಟ್ ಮಾಡದೆ  ಅಬ್ರಾರ್ ಅಲ್ವಿಯವನರನ್ನು ನಿರ್ದೇಶಕರಾಗಿಸಿದರು. ಹೀಗಿದ್ದರೂ ಚಿತ್ರದುದ್ದಕ್ಕೂ ಗುರುದತ್ ಛಾಪು ಕಾಣಿಸುತ್ತಿತ್ತು. ಛೋಟಿ ಬಹು ಪಾತ್ರದಲ್ಲಿ ಮೀನಾ ಕುಮಾರಿ, ಭೂತನಾಥನಾಗಿ ಗುರುದತ್, ಛೋಟಿ ಬಾಬು ಆಗಿ ರಹಮಾನ್, ಜಾಬಾ ಆಗಿ ವಹೀದಾ ರಹಮಾನ್, ಮೀನೂ ಮಮ್ತಾಜ್, ಸಫ್ರು, ಧುಮಾಲ್, ನಾಜಿರ್ ಹುಸೇನ್ ಅವರು ತಾರಾಗಣದಲ್ಲಿದ್ದರು. ಶಕೀಲ್ ಬಾದಾಯೂನಿ ಗೀತೆಗಳನ್ನು ಬರೆದಿದ್ದು, ಹೇಮಂತ್ ಕುಮಾರ್ ಸಂಗೀತ ನೀಡಿದ್ದರು. ಚಿತ್ರದಲ್ಲಿ ಬಹಳ ಮುಖ್ಯವಾದದ್ದು ಪಾಳು ಬಿದ್ದ ಹವೇಲಿ. ಕೊಲ್ಕತ್ತಾದಿಂದ ಸುಮಾರು ನಲವತ್ತು ಕಿಲೋ ಮೀಟರ್ ದೂರದಲ್ಲಿ ಧನ್‌ಕುರಿಯಾ ಎಂಬ ಸಣ್ಣ ಊರಿತ್ತು. ಅಲ್ಲಿ ಗೈನೆ ಸಹೋದರರ ಒಡೆತನದಲ್ಲಿ ಸಣ್ಣ ಹವೇಲಿ ಇತ್ತು. ಸುತ್ತ ಮುತ್ತಾ ತೋಟವಿದ್ದ ಈ ದೊಡ್ಡ ಕಂಬಗಳ ಕಟ್ಟಡ ಅಕ್ಷರಶ: ಪಾಳು ಬಿದ್ದಿತ್ತು. ಅದನ್ನು ಮರು ನಿರ್ಮಾಣ ಮಾಡ ಬೇಕಾಯಿತು. ಚಿತ್ರದಲ್ಲಿ ಎರಡು ಮಾದರಿಯ ಪ್ರಸಂಗಗಳು ಬರುತ್ತವೆ. ಒಂದು ಬಂಗಲೆಯಲ್ಲಿ ವೈಭವದ ಬದುಕು ನಡೆಯುತ್ತಿದ್ದ ಕಾಲ, ಇನ್ನೊಂದು ಅದು ಪಾಳು ಬಿದ್ದ ನಂತರ ನಡೆಯುವ ಪ್ರಸಂಗಗಳ ಚಿತ್ರಣ. ಮೊದಲಿಗೆ ಪಾಳು ಬಿದ್ದ ನಂತರ ನಡೆಯುವ ಘಟನೆಗಳನ್ನು ಚಿತ್ರೀಕರಿಸಲಾಯಿತು. ನಂತರ ಬಂಗಲೆಯನ್ನು ಅಚ್ಚುಕಟ್ಟು ಮಾಡಿ ವೈಭವದ ಸ್ಥಿತಿಯ ಚಿತ್ರೀಕರಣವನ್ನು ಮಾಡಲಾಯಿತು. ಎರಡರ ನಡುವೆ ಇರುವುದು ಕೇವಲ ವಿವರಗಳ ವ್ಯತ್ಯಾಸವಲ್ಲ. ಭಾವನಾತ್ಮಕ ನೆಲೆಯಲ್ಲಿನ ವ್ಯತ್ಯಾಸ. ವ್ಯಕ್ತಿಗಳು ಸಮಾನವಾಗಿರುವ ಕಡೆ ಕೂಡ ಭಾವನಾ ಪ್ರಪಂಚವೇ ಬೇರೆ. ಇದನ್ನು ಬಹಳ ಸೂಕ್ಷ್ಮವಾಗಿ ಗುರುದತ್ ತೋರಿಸಿದ್ದರು.

ಚಿತ್ರದ ಸ್ವರೂಪದಲ್ಲಿ ಶೀರ್ಷಿಕೆಗಳು ಮುಗಿದ ನಂತರ ತೆರೆಯ ಮೇಲೆ ಕಾಣುವ ಮೊದಲ ದೃಶ್ಯದಲ್ಲಿ ಪ್ರಾಚ್ಯವಸ್ತು ಇಲಾಖೆ ನಡೆಸುತ್ತಿರುವ ಭೂಶೋಧನಾ ಕಟ್ಟಡದಲ್ಲಿ ಕೆಲಸಗಾರರು ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಅಲ್ಲೊಂದು ಪಾಳು ಬಿದ್ದ ಬಂಗಲೆ ಇದೆ. ಇಂತಹದ್ದೊಂದು ಡಾಕ್ಯುಮೆಂಟರಿ ರಿಯಾಲಿಸಂ ಮೂಲಕ ಚಿತ್ರ ಆರಂಭವಾಗುತ್ತದೆ. ಅದೇ ಛಾಯೆಯಲ್ಲಿಯೇ ಸಾಗುತ್ತದೆ. ಅಗಾಧವಾದ ಪಾಳುಗೋಡೆಗಳ ನಡುವೆ ನಾಯಕ ಕಾಣಿಸಿ ಕೊಳ್ಳುತ್ತಾನೆ, ಆ ಬೃಹತ್ ಕಟ್ಟಡದ ನಡುವೆ ಅವನು ಕುಬ್ಜನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ಅನುಸಂಧಾನದಲ್ಲಿ ಇತಿಹಾಸ ಮತ್ತು ವರ್ತಮಾನಗಳು ಮುಖಾಮುಖಿಯಾಗುತ್ತಿವೆ. ವರ್ತಮಾನವನ್ನು ಅಮುಖ್ಯವಾಗಿಸುವ ಚಿತ್ರದ ಉದ್ದೇಶ ಹೀಗೆ ಆರಂಭದಲ್ಲಿಯೇ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುತ್ತದೆ. ಚಿತ್ರದಲ್ಲಿ ನಾಯಕ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಾ ಹೋಗುತ್ತೇನೆ. ಆದರೆ ವಾಸ್ತವದಲ್ಲ ಅವನು ವರ್ತಮಾನದಿಂದ ದೂರ ಸಾಗುತ್ತಿದ್ದಾನೆ. ಮುಂದೆ ಸಾಗಿದಂತೆ ದೂರದಲ್ಲೆಲ್ಲೂ ಗುನುಗುತ್ತಿರುವ ಸಂಗೀತ ಹತ್ತಿರವಾಗುತ್ತದೆ. ಹೆಣ್ಣಿನ ಧ್ವನಿಯ ಪಿಸುಮಾತು ಕ್ರಮೇಣ ಗೀತೆಯಾಗಿ ಮಾರ್ಪಡುತ್ತದೆ. ಆ ಧ್ವನಿಯನ್ನು ಗುರುತಿಸಿದ ನಾಯಕನ ತುಟಿಗಳಿಂದ ಅಪ್ರಯತ್ನಾಪೂರ್ವಕವಾಗಿ ಬರುವ ಮಾತುಗಳು ‘ಛೋಟಿ ಬಹು’. ಹೀಗೆ ಕಥೆಗೆ ಚಾಲನೆ ಸಿಕ್ಕುತ್ತದೆ. ಕಲಾತ್ಮಕವಾಗಿ ಮೂಡಿ ಬಂದಿದ್ದರೂ ಈ ದೃಶ್ಯ ನೈಜತೆಯಿಂದ ದೂರವಾಗಿಲ್ಲ. ಇಂತಹದೊಂದು ಹೊಂದಾಣಿಕೆ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿಯೇ ಅಸಾಧಾರಣವಾದದ್ದು. ಮೂರ್ತಿ ಕ್ಯಾಮರಾ ಚಮತ್ಕಾರ ಅರಿವಿಗೆ ಬರುವುದೇ ಇಂತಹ ದೃಶ್ಯಗಳಲ್ಲಿ.

‘ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರಕ್ಕೆ ಜೀವ ತುಂಬಿದ್ದು ಗೀತೆಗಳು. ಶಕೀಲ್ ಬಾದಾಯೂನಿ ಅವರ ಗೀತೆಗಳಿಗೆ ಸಂಗೀತ ನೀಡಿದ್ದವರು ಹೇಮಂತ್ ಕುಮಾರ್. ನ ಜಾವೋ ಸೆಂಯ್ಯಾ, ಮೇರಿ ಬಾತ್ ರಹೀ, ಕಹೀ ದೂರ್ ಸೇ, ಸಖೀ ಆಜ್ ಮುಝೆ ಎಲ್ಲವೂ ಇಂದಿಗೂ ಮರೆಯಲಾಗದ ಗೀತೆಗಳ ಸಾಲಿಗೆ ಸೇರಿವೆ. ಈ ಎಲ್ಲಾ ಗೀತೆಗಳನ್ನು ವಿ.ಕೆ.ಮೂರ್ತಿಯವರ ಕ್ಯಾಮರಾ ಅಮರ ದೃಶ್ಯಕಾವ್ಯವನ್ನಾಗಿಸಿದೆ. ನ ಜಾವೋ ಸೈಯ್ಯಾ ಚುರಾಕೆ ಬೈಯ್ಯಾ ಗೀತೆಯಲ್ಲಿ ಕ್ಲೋಸ್ ಅಪ್‌ಗಳ ಸೆರೆಮಾಲೆಯನ್ನೇ ಕಾಣಬಹುದು. ಭಾವನೆಗಳ ಪಲ್ಲಟವನ್ನು ಇಷ್ಟು ಉತ್ಕಟವಾಗಿ ಹಿಡಿದಿಟ್ಟ ಇನ್ನೊಂದು ಚಿತ್ರಿಕೆ ಭಾರತೀಯ ಚಿತ್ರರಂಗದಲ್ಲಿಯೇ ಇಲ್ಲ. ಈ ಹೆಗ್ಗಳಿಕೆಗೆ ಮೂರ್ತಿಯವರ ಕ್ಯಾಮರಾ ಕಣ್ಣು ಮತ್ತು ಮೀನಾ ಕುಮಾರಿ ಅವರ ಅಭಿನಯ ಎರಡೂ ಕಾರಣವಾಗಿದೆ. ಗೋವಿಂದ್ ನಿಹಲಾನಿ ಗುರುತಿಸಿರುವಂತೆ ಈ ಹಾಡಿನುದ್ದಕ್ಕೂ ಮೂರ್ತಿಯವರು 50 MM ಮತ್ತು 75 MM ಲೆನ್ಸ್‌ಗಳನ್ನು ಬಳಸಿದ್ದಾರೆ. ಇದೊಂದು ಅತ್ಯಂತ ಭಾವೋತ್ಕಟತೆಯ ಸನ್ನಿವೇಶ. ಇಲ್ಲಿ ತನ್ನನ್ನು ನಿರಾಕರಿಸಿದ ಛೋಟಿ ಬಾಬು ಕುರಿತು ಕೋಪ, ಹತಾಶೆ, ತಿರಸ್ಕಾರ, ಜಿಗುಪ್ಸೆ ಎಲ್ಲವೂ ಛೋಟಿ ಬಹು ಮುಖದಲ್ಲಿ  ಏಕಕಾಲಕ್ಕೆ ಬರಬೇಕು. ಇದನ್ನು ಈ ಬೆಳಕಿನ ಸಂಯೋಜನೆ ಸಾಧಿಸಿ ಕೊಟ್ಟಿತ್ತು. ಸಾಖಿಯಾ ಆಜ್ ಮುಜೆ ನೀಂದ್ ನಹಿಂ ಆಯೇಗೀ ಗೀತೆಯಲ್ಲಿ ಮೀನೂ ಮಮ್ತಾಜ್ ಸುತ್ತಲೂ ನರ್ತಕಿಯರು ನರ್ತಿಸುತ್ತಿದ್ದಾರೆ. ಇಲ್ಲಿ ಸ್ಪಷ್ಟವಾಗಿ ಕಾಣುವುದು ಮೀನೂ ಮಮ್ತಾಜ್‌ಳ ಮುಖ ಮಾತ್ರ. ಉಳಿದಂತೆ ನರ್ತಕಿಯರ ನೆರಳುಗಳೇ ಸುತ್ತಲೂ ತಿರುಗುತ್ತಿರುತ್ತವೆ. ಇದೊಂದು ಬಹು ಮಹತ್ವದ ಪ್ರಯೋಗ.

‘ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ದೊಡ್ಡ ರೀತಿಯಲ್ಲಿ ಗೆದ್ದಿತು. ಚಿತ್ರಕ್ಕೆ ಫಿಲ್ಮ್‌ಫೇರ್‌ ಪ್ರಶಸ್ತಿಗಳ ಸುರಿಮಳೆಯೇ ಆಯಿತು. 1962ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಮಾತ್ರವಲ್ಲದೆ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಗ್ರಹಕ ಗೌರವಗಳೂ ದೊರಕಿದವು. 1963ರ ಬರ್ಲಿನ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. 1963ರ ಸಾಲಿನ ರಾಷ್ಟ್ರ ಪ್ರಶಸ್ತಿ ಕೂಡ ಚಿತ್ರಕ್ಕೆ ದೊರಕಿತು. ಆದರೆ ಈ ಎಲ್ಲಾ ಸಂಭ್ರಮಗಳು ಗುರುದತ್ ಉತ್ಸಾಹವನ್ನು ಹೆಚ್ಚಿಸಲಿಲ್ಲ ಎನ್ನುವುದು ಕಹಿಸತ್ಯ. ‘ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರೀಕರಣ ತಾಕಲಾಟದಲ್ಲಿಯೇ ನಡೆದಿತ್ತು. ಚಿತ್ರೀಕರಣದ ನಡುವೆಯೇ ಸಾಂಸಾರಿಕ ಸಮಸ್ಯೆಗಳಿಂದ ಗುರುದತ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಗ ಮೂರ್ತಿಯವರೇ ಸಮಾಧಾನ ಮಾಡಿದ್ದರು. ಗೀತಾದತ್ ಜೊತೆ ಕೂಡ ಚರ್ಚಿಸಿದ್ದರು. ವಹೀದಾ ರಹಮಾನ್ ಕುರಿತ ಗುರದತ್ ಸಂಬಂಧದ ಕುರಿತು ತಾಕಲಾಟ ನಡೆಯುತ್ತಿತ್ತು. ಈ ಎಲ್ಲಾ ಗೊಂದಲಗಳ ನಡುವೆಯೇ ಬಹುನಿರೀಕ್ಷಿತ ಬಣ್ಣದ ಚಿತ್ರ ‘ಕನೀಜ್’ ಆರಂಭವಾಯಿತು.ಅದೊಂದು ರೀತಿ ಡ್ರಾಮ್ಯಾಟಿಕ್ ರಿಯಲಿಸಂನ ಚಿತ್ರ. ಕೆಲವು ಫ್ಯಾಂಟಸಿ ಅಂಶಗಳೂ ಇದ್ದವು. ಗುರುದತ್ ಅವರೇ ನಾಯಕ, ಸಿಮಿ ಅಗರವಾಲ್ ನಾಯಕಿ, ಒಂದು ವಾರ ಶೂಟಿಂಗ್ ಆಗಿತ್ತು. ಎಲ್ಲಾ ಸರಿಯಾಗಿ ಸಾಗುತ್ತಿರುವಾಗಲೇ ಗುರುದತ್ 1964ರ ಅಕ್ಟೋಬರ್ 10ರಂದು ಆತ್ಮಹತ್ಯೆ ಮಾಡಿಕೊಂಡರು. ಈ ಮೊದಲೂ ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಸಿದ್ದ ಅವರು ಈ ಸಲ ಸಫಲರಾಗಿದ್ದರು. ವೈಯಕ್ತಿಕ ಜೀವನದ ಸಮಸ್ಯೆಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಈ ಮೂಲಕ ಭಾರತೀಯ ಚಿತ್ರರಂಗ ಕಂಡ ಅಪರೂಪದ ಜೋಡಿ ಅನಿರೀಕ್ಷಿತವಾಗಿ ಕೊನೆಗೊಂಡಿತು. ಗುರುದತ್ ಆತ್ಮಹತ್ಯೆ ಮಾಡಿಕೊಂಡ  ಕೆಲವು ಸಮಯಕ್ಕೇ ಗೀತಾ ಕೂಡ ತೀರಿಕೊಂಡರು. ಅವರ ಮೂವರು ಮಕ್ಕಳಲ್ಲಿ ತರುಣ್‌ಗೆ ಚಿತ್ರರಂಗದತ್ತ ಆಸಕ್ತಿ ಇತ್ತು. ಒಂದು ಚಿತ್ರದ ನಿರ್ಮಾಣ ಮಾಡಿದರು. ಅದಕ್ಕೂ ಮೂರ್ತಿಯವರದೇ ಛಾಯಾಗ್ರಹಣ. 12 ರೀಲ್‌ಗಳ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಅವರೂ ಆತ್ಮಹತ್ಯೆ ಮಾಡಿಕೊಂಡರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ