ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಒರಿಜಿನಲ್ ಹೀಮ್ಯಾನ್ ದಾರಾ ಸಿಂಗ್!

ನಟ - ನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಅರವತ್ತು, ಎಪ್ಪತ್ತರ ದಶಕಗಳಲ್ಲಿ ಹಿಂದಿ ಆ್ಯಕ್ಷನ್ ಸಿನಿಮಾಗಳ ರಾಜ ಎಂದೇ ಕರೆಸಿಕೊಂಡಿದ್ದವರು ಧಾರಾ ಸಿಂಗ್‌. ಪಂಜಾಬ್‌ನ ಗ್ರಾಮವೊಂದರ ಯುವಕ ಸಿನಿಮಾ ಹೀರೋ ಆಗುವುದು ಸುಲಭವಿರಲಿಲ್ಲ. ಬೆಳ್ಳಿತೆರೆ ಪ್ರವೇಶಿಸುವ ಮುನ್ನ ಅವರು ಕುಸ್ತಿ ಪಟುವಾಗಿ ಹೆಸರಾಗಿದ್ದರು. ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಗಳಲ್ಲಿ ದೇಶ-ವಿದೇಶಗಳ ಕುಸ್ತಿ ಪಟುಗಳನ್ನು ಮಣಿಸಿದ್ದರು. ಕುಸ್ತಿ ಅಖಾಡದಲ್ಲಿ ಹೆಸರು ಮಾಡಿದ ಅವರು ಛಲ, ಕಠಿಣ ಪರಿಶ್ರಮದಿಂದ ಭಾರತೀಯ ಚಿತ್ರರಂಗದ ಒರಿಜಿನಲ್ ಹೀಮ್ಯಾನ್‌ ಎಂದು ಕರೆಸಿಕೊಂಡರು. ಬಹುಭಾಯ್ ಮಿಸ್ತ್ರಿ ನಿರ್ಮಾಣದ ‘ಕಿಂಗ್‌ಕಾಂಗ್‌’ (1962) ಸಿನಿಮಾ ದಾರಾಗೆ ಚಿತ್ರರಂಗದಲ್ಲಿ ಸ್ಥಾನ ಕಲ್ಪಿಸಿತು. ದುರದೃಷ್ಟವತಾಶ್ ದಾರಾ ಬಿ-ಕ್ಲಾಸ್‌ನ ಚಿಕ್ಕ ಬಜೆಟ್ ಸಿನಿಮಾಗಳಿಗಷ್ಟೇ ಸೀಮಿತರಾದರು. ಸ್ಟಾರ್ ನಾಯಕಿಯರೊಂದಿಗೆ ನಟಿಸುವ ಅವಕಾಶ ಅವರಿಗೆ ಒದಗಿಬರಲಿಲ್ಲ. ಇದಕ್ಕೆ ನಟಿ ಮುಮ್ತಾಜ್‌ ಹೊರತಾಗಿದ್ದರು ಎನ್ನುವುದು ವಿಶೇಷ. ತಮ್ಮ ಸಿನಿಮಾ ಜೀವನದ ಆರಂಭದಲ್ಲಿ ಆಕೆ ದಾರಾ ಸಿಂಗ್‌ರ 16 ಚಿತ್ರಗಳಲ್ಲಿ ನಾಯಕಿಯಾಗಿದ್ದರು!

80ರ ದಶಕದ ನಂತರ ದಾರಾ ಸಿಂಗ್ ಬೆಳ್ಳಿತೆರೆಯಿಂದ ಕಿರುತೆರೆಯತ್ತ ಹೊರಳಿದರು. ಭಾರತೀಯ ಕಿರುತೆರೆಯ ಮಹತ್ವದ ಪ್ರಯೋಗ ‘ರಾಮಾಯಣ’ದಲ್ಲಿ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡರು. ಬೆಳ್ಳಿತೆರೆಯಲ್ಲಿ ಸಿಗದ ಜನಪ್ರಿಯತೆ ಮತ್ತು ಖ್ಯಾತಿ ಅವರಿಗೆ ಕಿರುತೆರೆಯಲ್ಲಿ ಸಿಕ್ಕಿತು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದಾರಾ ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮೇ ಮಾ ಪಂಜಾಬ್ ದೀ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದರು. ‘ಹದ್ ಕರ್ ದಿ’ ಸೇರಿದಂತೆ ಕೆಲವು ಕಿರುತೆರೆ ಪ್ರಯೋಗಗಳು ಅವರಿಗೆ ಹೆಸರು ತಂದುಕೊಟ್ಟವು.

ದಾರಾ ಅವರ ಆರಂಭದ ಆ್ಯಕ್ಷನ್ ಚಿತ್ರಗಳಾದ ‘ಸ್ಯಾಮ್ಸನ್’, ‘ಹಮ್ ಏಕ್ ಹೈ’, ‘ರುಸ್ತುಂ’, ‘ಶೆರ್ದಿಲ್’, ‘ಜಾಲ್‌ಸಾಜ್’, ‘ತೂಫಾನ್’, ‘ಶೇರ್-ಎ-ವತನ್’ ಬಾಕ್ಸ್‌ ಆಫೀಸ್‌ನಲ್ಲಿ  ದೊಡ್ಡ ಗೆಲುವು ದಾಖಲಿಸಿದ್ದವು. ದಾರಾ ಕೆಲವು ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲೂ ನಟಿಸಿದ್ದಾರೆ. ‘ಸಿಕಂದರ್-ಎ-ಆಜಾಮ್’, ‘ಹರ್ ಹರ್ ಮಹದೇವ್’, ‘ವೀರ್ ಭೀಮ್‌ಸೇನ್‌’, ‘ವೀರ್ ಬಜರಂಗಿ’, ‘ಮಹಾಭಾರತ್’ ಈ ಮಾದರಿಯಲ್ಲಿ ಅವರ ಜನಪ್ರಿಯ ಸಿನಿಮಾಗಳು. ದಾರಾ ಸಿಂಗ್ ನಿರ್ದೇಶಕರೂ ಹೌದು. ‘ಉಂಖಿಲಿ ಮುಟ್ಟಿಯಾರ್’ (1983), ‘ರುಸ್ತುಂ’ (1982), ‘ಭಕ್ತಿ ಮೇ ಶಕ್ತಿ’ (1978), ‘ಧ್ಯಾನು ಭಗತ್’ (1978), ‘ಸವಾ ಲಕ್ ಸೆ ಏಕ್ ಲಡಾನ್’ (1976), ‘ಭಗತ್ ಧನ್ನಾ ಜಟ್’ (1974), ‘ಮೇರಾ ದೇಶ್ ಮೇರಾ ಧರ್ಮ್’ (1973), ‘ನಾನಕ್ ದುಖಿಯಾ ಸಬ್ ಸನ್ಸಾರ್‌’ (1970) ಅವರು ನಿರ್ದೇಶಿಸಿದ ಚಿತ್ರಗಳು. ‘ಕರಣ್’ (1990) ಅವರ ನಿರ್ಮಾಣದ ಸಿನಿಮಾ. 1983ರಲ್ಲಿ ದಾರಾ ಕುಸ್ತಿಯಿಂದ ನಿವೃತ್ತರಾಗಿದ್ದರು. 2003-09ರ ಅವಧಿಯಲ್ಲಿ ದಾರಾ ಅವರಿಗೆ ರಾಜ್ಯ ಸಭಾ ಸದಸ್ಯತ್ವದ ಗೌರವ ಸಿಕ್ಕಿತ್ತು. ಭಾರತೀಯರಿಗೆ ಹನುಮಾನ್‌ ಆಗಿ ಸ್ಮರಣೀಯರಾಗಿರುವ ದಾರಾ 2012ರ ಜುಲೈ 12ರಂದು ಅಗಲಿದರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮೇರು ತಾರೆ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ