ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಜೆಮಿನಿ ಗಣೇಶನ್

ನಟ
ಪೋಸ್ಟ್ ಶೇರ್ ಮಾಡಿ

ಅಭಿಮಾನಿಗಳಿಂದ ‘ಕಾದಲ್‌ ಮನ್ನನ್‌’ ಎಂದು ಕರೆಸಿಕೊಂಡಿದ್ದ ತಮಿಳಿನ ಜನಪ್ರಿಯ ಹೀರೋ. ಶಿವಾಜಿ ಗಣೇಶನ್‌ ಮತ್ತು ಎಂಜಿಆರ್‌ ಸಮಕಾಲೀನರಾದ ಜೆಮಿನಿ ಗಣೇಶನ್‌ ರೊಮ್ಯಾಂಟಿಕ್ ಪಾತ್ರಗಳಲ್ಲಿ ಜನಮೆಚ್ಚುಗೆ ಪಡೆದ ನಟ. ‘ಮಿಸ್ ಮಾಲಿನಿ’ (1947) ಮೊದಲ ಸಿನಿಮಾ. ‘ಮನಂ ಪೋಲಾ ಮಾಂಗಲ್ಯಂ’ ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ಸ್ಟಾರ್‌ ಪಟ್ಟಕ್ಕೇರಿದರು. ‘ಮಿಸ್ ಮೇರಿ’ (1957) ಚಿತ್ರದೊಂದಿಗೆ ಹಿಂದಿಗೆ ಪದಾರ್ಪಣೆ ಮಾಡಿದ ಗಣೇಶನ್‌ ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದರು. ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡದ ಒಟ್ಟು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜೆಮಿನಿ ಗಣೇಶನ್‌ – ಸಾವಿತ್ರಿ, ತಮಿಳು ಬೆಳ್ಳಿತೆರೆಯ ಜನಪ್ರಿಯ ಜೋಡಿಗಳಲ್ಲೊಂದು

ಜೆಮಿನಿ ಗಣೇಶನ್‌ ಅವರ ಜನ್ಮನಾಮ ರಾಮಸ್ವಾಮಿ ಗಣೇಶನ್‌. ನಟನಾಗುವ ಮುನ್ನ ಅವರು ಜೆಮಿನಿ ಸ್ಟುಡಿಯೋದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು. ಹಾಗಾಗಿ ಬೆಳ್ಳಿತೆರೆ ಪ್ರವೇಶಿಸಿದಾಗ ತಮ್ಮ ಹೆಸರಿನ ಮುಂದೆ ‘ಜೆಮಿನಿ’ ಸೇರಿಸಿಕೊಂಡರು. ಈ ಹೆಸರು ಕೊನೆಯವರೆಗೂ ಹಾಗೆಯೇ ಉಳಿಯಿತು. ಎಂಜಿಆರ್ ಮತ್ತು ಶಿವಾಜಿ ಗಣೇಶನ್‌ ತಮಿಳು ಚಿತ್ರರಂಗವನ್ನು ಆಳುತ್ತಿದ್ದಾಗ ಗಣೇಶನ್ ತಮ್ಮದೇ ಒಂದು ಪ್ರತ್ಯೇಕ ಮಾರ್ಗ ಕಂಡುಕೊಂಡರು. ಈ ಬುದ್ಧಿವಂತಿಕೆಯ ನಡೆ ಅವರಿಗೆ ತಮಿಳುಚಿತ್ರರಂಗದಲ್ಲಿ ಭದ್ರಸ್ಥಾನ ಕಲ್ಪಿಸಿತು.

ತಮಿಳು ಚಿತ್ರರಂಗದ ಮೂವರು ಜನಪ್ರಿಯ ನಾಯಕನಟರು – ಶಿವಾಜಿ ಗಣೇಶನ್‌, ಜೆಮಿನಿ ಗಣೇಶನ್‌, ಎಂಜಿಆರ್‌

ಎಂಜಿಅರ್‌ ತೆರೆಮೇಲೆ ಮತ್ತು ತೆರೆಯಾಚೆಗೂ ಪ್ರಭಾವಶಾಲಿ ವ್ಯಕ್ತಿಯಾಗಿ ಬೆಳೆದರೆ ಶಿವಾಜಿ ಗಣೇಶನ್‌ ತಮ್ಮ ನಟನಾ ಕೌಶಲ್ಯದಿಂದ ಬೆಳಗುತ್ತಿದ್ದರು. ಇವರಿಬ್ಬರ ಮಧ್ಯೆ ಜೆಮಿನಿ ಗಣೇಶನ್ ಚಾಕೋಲೇಟ್‌ ಬಾಯ್‌ ಎಂದು ಕರೆಸಿಕೊಂಡು ರೊಮ್ಯಾಂಟಿಕ್ ಹೀರೋ ಆದರು. ‘ಪೆಣ್ಣಿನ್ ಪೆರುಮೈ’, ‘ವೀರಪಾಂಡ್ಯ ಕಟ್ಟಬೊಮ್ಮನ್‌’, ಕಪ್ಪಲೊಟ್ಟಿಯ ತಮಿಳನ್‌’, ‘ಪತಿಭಕ್ತಿ’, ‘ಪವ ಮನ್ನಿಪ್ಪು’, ‘ಪಾರ್ಥಲ್‌ ಪಸಿ ಥೀರಂ’ ಚಿತ್ರಗಳಲ್ಲಿ ಗಣೇಶನ್‌ ಅವರು ಶಿವಾಜಿ ಗಣೇಶನ್‌ ಅವರೊಂದಿಗೆ ನಟಿಸಿದ್ದಾರೆ. ಎಂಜಿಅರ್‌ ಜೊತೆ ಗಣೇಶನ್‌ ನಟಿಸಿದ ಏಕೈಕ ಸಿನಿಮಾ ‘ಮುಹರಾಸಿ’.

‘ಕಲತ್ತೂರ್‌ ಕನ್ನಮ್ಮ’ ಚಿತ್ರದಲ್ಲಿ ಬಾಲನಟ ಕಮಲ ಹಾಸನ್‌ ಜೊತೆ ಗಣೇಶನ್‌

ಗಣೇಶನ್‌ ಮತ್ತು ಸಾವಿತ್ರಿ, ತಮಿಳು ಬೆಳ್ಳಿತೆರೆಯ ಸೂಪರ್‌ಹಿಟ್‌ ಜೋಡಿಗಳಲ್ಲೊಂದು. ಈ ಜೋಡಿಯ ‘ಕಲತ್ತೂರ್ ಕನ್ನಮ್ಮ’ ಚಿತ್ರದೊಂದಿಗೆ ಕಮಲ ಹಾಸನ್‌ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದರು. ಆಗ ಕಮಲ್‌ಗೆ ಐದು ವರ್ಷ. ತೆರೆ ಮೇಲಷ್ಟೇ ಅಲ್ಲದೆ ನಿಜಬದುಕಿನಲ್ಲೂ ಜೆಮಿನಿ ಗಣೇಶನ್‌ ರೊಮ್ಯಾಂಟಿಕ್‌ ವ್ಯಕ್ತಿ. ಅವರಿಗೆ ನಾಲ್ವರು ಪತ್ನಿಯರು. ಅಲಮೇಲು ಅವರನ್ನು ಕೈಹಿಡಿದಾಗ ಗಣೇಶನ್‌ರಿಗೆ 19 ವರ್ಷವಷ್ಟೆ. ನಟನಾಗಿ ಜನಪ್ರಿಯರಾಗುತ್ತಿದ್ದಂತೆ ತಮ್ಮೊಂದಿಗೆ ಜೋಡಿಯಾಗಿ ನಟಿಸಿದ ಪುಷ್ಟವಲ್ಲಿ ಮತ್ತು ಸಾವಿತ್ರಿ ಅವರನ್ನು ಮದುವೆಯಾದರು. ಸಾವಿತ್ರಿ ಜೊತೆಗಿನ ಅವರ ದಾಂಪತ್ಯ ವಿವಾದಗಳಿಂದಲೇ ಸುದ್ದಿಯಲ್ಲಿತ್ತು. ಮುಂದೆ 78ರ ಇಳಿವಯಸ್ಸಿನಲ್ಲಿ 36ರ ಜ್ಯೂಲಿಯಾನಾರನ್ನು ವರಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಬಾಲಿವುಡ್‌ ಜನಪ್ರಿಯ ನಟಿ ರೇಖಾ ಅವರು ಗಣೇಶನ್ ಮತ್ತು ನಟಿ ಪುಷ್ಪವಲ್ಲಿ ಪುತ್ರಿ. ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ಜೆಮಿನಿ ಗಣೇಶನ್‌ ಅವರಿಗೆ ಪದ್ಮಶ್ರೀ ಗೌರವ ಸೇರಿದಂತೆ ಪ್ರತಿಷ್ಠಿತ ಗೌರವಗಳು ಸಂದಿವೆ.

ಜೆಮಿನಿ ಗಣೇಶನ್‌ | ಜನನ: 17/11/1920 | ನಿಧನ: 22/03/2005

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು