ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕನ್ನಡ ಚಿತ್ರರಂಗದ ಅವಧೂತ ‘ಜಿ.ವಿ.ಅಯ್ಯರ್’

ಪೋಸ್ಟ್ ಶೇರ್ ಮಾಡಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ, ಲೇಖಕ)

ಕನ್ನಡ ಚಿತ್ರರಂಗದ ಆಚಾರ್ಯ ಪುರುಷರು ಎನ್ನಿಸಿಕೊಂಡ ಜಿ.ವಿ.ಅಯ್ಯರ್ ಅಭಿನಯ, ಸಾಹಿತ್ಯ, ನಿರ್ದೇಶನ, ನಿರ್ಮಾಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ದುಡಿದು ಚಿತ್ರರಂಗಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದವರು. ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದವರು.

ಗಣಪತಿ ವೆಂಕಟರಮಣ ಅಯ್ಯರ್ ಹುಟ್ಟಿದ್ದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 1917ರ ಸೆಪ್ಟಂಬರ್ 3ರಂದು. ಅವರ ಪೂರ್ವಜರು ವೈಭವದ ಜೀವನವನ್ನು ನಡೆಸಿದವರು. ಅವರ ತಾತ ಖುಷ್ಕಿ ಬೇಸಾಯ ಬಿಟ್ಟು ಕಪಿಲಾ ಜಲಾನಯನ ಪ್ರದೇಶದ ಉಳಿದ ರೈತರಂತೆ ರಸಬಾಳೆ ಬೆಳೆಯಲು ಹೋದರು. ಬಾಳೆ ತೋಟದ ಅಯ್ಯರ್ ಎಂಬ ಹೆಸರೇನೋ ಬಂತು. ಆದರೆ ಪ್ರಯೋಗ ಕೈ ಕೊಟ್ಟಿತು. ಆಸ್ತಿ ಎಲ್ಲವೂ ನಷ್ಟವಾಯಿತು. ಅಯ್ಯರ್ ತಂದೆ ಗಣಪತಿ ಅಯ್ಯರ್ ಮತ್ತು ತಾಯಿ ಭಾಗೀರಥಿ. ಇವರ ಕಾಲಕ್ಕೆ ಬಡತನದ ಬದುಕು ಬಂದಿತು. ತಂದೆ ತಾಲ್ಲೋಕು ಕಚೇರಿಯಲ್ಲಿ ಅರ್ಜಿ ಬರೆದು ಕೊಟ್ಟು ಬದುಕುತ್ತಿದ್ದರು. ಅಯ್ಯರ್ ಓದಿದ್ದು ನ್ಯಾಷನಲ್ ಹೈಸ್ಕೂಲಿನಲ್ಲಿ. ಬಿ.ವಿ.ಕೆ.ಶಾಸ್ತ್ರಿ, ಇ.ಆರ್.ಸೇತೂರಾಂ, ಎನ್.ಶ್ರೀಕಂಠಯ್ಯ, ಪಾಪಣ್ಣ ಮೊದಲಾದವರು ಅವರ ಸಹಪಾಠಿಗಳು.

ಹೈಸ್ಕೂಲ್ ದಿನಗಳಲ್ಲೇ ರಂಗಭೂಮಿಯ ಆಕರ್ಷಣೆ. 1936ರಲ್ಲಿ ಕೈಲಾಸಂ ನಂಜನಗೂಡಿಗೆ ಭೇಟಿ ನೀಡಿದಾಗ ಅದಕ್ಕೊಂದು ರೂಪ ಬಂದಿತು. ಎಲ್ಲಾ ಸಂಪ್ರದಾಯವನ್ನು ಮುರಿದು ಹೊಸ ರೀತಿಯಲ್ಲಿ ನೋಡಲು ಕೈಲಾಸಂ ಕಲಿಸಿದರು. ಅಯ್ಯರ್ ಮನೆತನ ಪೂಜೆ ಪುನಸ್ಕಾರಗಳಿಗೆ ಹೆಸರಾಗಿದ್ದು. ಮಗ ಹೀಗೆ ನಾಟಕ ಎಂದು ತಿರುಗುವುದನ್ನು ನೋಡಿ ತಂದೆ, ಕಟ್ಟಿ ಹಾಕಲು ಉಪನಯನ ಮಾಡಿ ವೇದಾಧ್ಯಯನ ಮಾಡಿಸಿದರು. ಆದರೆ ಹತ್ತು ವರ್ಷದ ಬಾಲಕ ಅಯ್ಯರ್ ಗುಬ್ಬಿ ಕಂಪನಿ ಕದ ತಟ್ಟಿದರು. ಕಂಪನಿ ಜೊತೆ ಊರೂರು ಅಲೆದಿದ್ದಾಯಿತು. ಆದರೆ ಸ್ಟೇಜ್ ಏರುವ ಕನಸು ನನಸಾಗಲೇ ಇಲ್ಲ. ಸಿಕ್ಕಿದ್ದು ಬರೀ ಪೋಸ್ಟರ್ ಬರೆಯುವ, ಅಂಟಿಸುವ ಕೆಲಸ. ಅಲ್ಲಿಂದ ಮುಂದಿನ ದಾರಿ ಹುಡುಕಲು ಅಯ್ಯರ್ ಮುಂಬೈಗೆ ಹೋದರು. ಪ್ರಭಾತ್ ಕಂಪನಿ ಸೇರಿ ನಟರಾಗುವ ಕನಸು ಕಂಡರು. ಆದರೆ ಪ್ರಭಾತ್ ಬಾಗಿಲು ತೆರೆಯಲೇ ಇಲ್ಲ. ಸಿಕ್ಕಿ ಬಿದ್ದಿದ್ದು ಲಿಂಗ ಅಯ್ಯರ್ ಹೋಟಲ್ ಮಾಲೀಕನಿಗೆ. ಅಲ್ಲಿ ಮಾಣಿಯ ಕೆಲಸವೇನೋ ಸಿಕ್ಕಿತು. ಹಾಗೆ ಸಲಿಂಗಕಾಮದ ಪರೀಕ್ಷೆಯೂ ಎದುರಾಯಿತು. ಸಿನಿಮಾ ಕನಸು ಕಾಣುತ್ತಲೇ ಸರಿಸುಮಾರು ಒಂದು ವರ್ಷಗಳ ಕಾಲ ಈ ಕಷ್ಟವನ್ನು ಅಯ್ಯರ್ ಎದುರಿಸಿದರು. ಅಯ್ಯರ್ ಅಣ್ಣನ ಮಗ ಪುಣೆಯಲ್ಲಿ ಮಿಲಿಟರಿ ಅಧಿಕಾರಿ. ಅವನ ಕಣ್ಣಿಗೆ ಬಿದ್ದು ಮಿಲಿಟರಿ ದರ್ಪಕ್ಕೆ ಅಯ್ಯರ್ ಸಿಕ್ಕಿ ಬಿದ್ದರು. 1932ರಲ್ಲಿ ಪ್ಲೇಗ್ ಪುಣೆ ನಗರವನ್ನು ಪ್ರವೇಶಿಸಿದಾಗ ಅಯ್ಯರ್‌ಗೆ ಬಿಡುಗಡೆ ಸಿಕ್ಕಿತು.

ಮನೆಗೆ ಮರಳಿದ ಜಿ.ವಿ.ಅಯ್ಯರ್‌ಗೆ ನೀಲಕಂಠ ರಾವ್ ಎನ್ನುವ ಗುರುವೊಬ್ಬ ಸಿಕ್ಕಿದ. ಅವರಿಂದ ದೇವಿ ಆರಾಧನೆ, ಶ್ರೀಚಕ್ರ ಅರ್ಚನೆ ಎಲ್ಲವನ್ನೂ ಅರಿತರು. ದೇವಸ್ಥಾನದ ಜಗುಲಿಯ ಮೇಲೆ ಯಂತ್ರ – ಮಂತ್ರ – ತಾಯಿತ ಉದ್ಯೋಗದಲ್ಲಿ ನಿರತರಾದರು. ಒಂದು ಕಡೆ ಕುಳಿತು ಕೊಳ್ಳುವ ಜಾಯಮಾನ ಅವರದಲ್ಲ. ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಶಾಲೆಯಲ್ಲಿ ಕಾರ್ಪೆಂಟರಿ ಕಲಿತರು. ಆದರೆ ಮತ್ತೆ ಗುಬ್ಬಿ ಕಂಪನಿ ಕರೆಯಿತು. ವೀರಣ್ಣನವರು ಮೈದಡವಿ ಬರಮಾಡಿಕೊಂಡರು. ಆರು ತಿಂಗಳು ಕಾದ ನಂತರ ಶ್ರೀಕೃಷ್ಣಗಾರುಡಿಯಲ್ಲಿ ಧರ್ಮರಾಯನಿಗೆ ಆಶೀರ್ವದಿಸುವ ಧೌಮ್ಯ ಮಹರ್ಷಿಗಳ ಪಾತ್ರ ದೊರೆಯಿತು. ಆದರೆ ಮಾತು ಮರೆತು ಹೋಗಿ ಅದು ಅಭಾಸವೆನ್ನಿಸಿಕೊಂಡಿತು. ಆರು ತಿಂಗಳು ಬಣ್ಣದ ಹಚ್ಚದ ಶಿಕ್ಷೆಯೂ ದೊರಕಿತು. ಅಯ್ಯರ್ ಛಲಗಾರರು ಮತ್ತೆ ಕಾಡಿ ಬೇಡಿ ಪಾತ್ರವನ್ನು ಗಿಟ್ಟಿಸಿಕೊಂಡರು. ‘ಸುಭದ್ರಾ ಪರಿಣಯ’ದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿ ಸೈ ಎನ್ನಿಸಿಕೊಂಡರು. ಚಿಕ್ಕ ಚಿಕ್ಕ ಪಾತ್ರಗಳಿಂದ ಗಮನ ಸೆಳೆಯುತ್ತಾ ಕೊನೆಗೆ ಕುರುಕ್ಷೇತ್ರ ನಾಟಕದ ದುರ್ಯೋಧನನ ಪಾತ್ರದ ಮೂಲಕ ಗಟ್ಟಿಯಾದರು. ಸಮಯ ಸಿಕ್ಕಾಗ ನಾಟಕ ಬರೆಯುವ ಹವ್ಯಾಸವೂ ಆರಂಭವಾಯಿತು. ಬೇಡರ ಕಣ್ಣಪ್ಪ ಮತ್ತು ಸಾಹುಕಾರ ನಾಟಕಗಳು ಹುಟ್ಟಿದ್ದು ಹೀಗೆ.

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಚಿತ್ರದಲ್ಲಿ ಜಿ.ವಿ.ಅಯ್ಯರ್‌, ಉದಯಕುಮಾರ್, ಸತ್ಯಭಾಮಾ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ರಂಗಭೂಮಿಯಲ್ಲೇ ದಿನ ದೂಡುತ್ತಿದ್ದ ಅಯ್ಯರ್ ಅವರಿಗೆ ಎಂ.ವಿ.ರಾಜಮ್ಮನವರ ‘ರಾಧಾರಮಣ’ಚಿತ್ರದ ಮೂಲಕ ಅಭಿನಯದ ಅವಕಾಶ ದೊರಕಿತು. ಇದೇ ವೇಳೆಗೆ ಸುಂದರಂಬಾಳ್ ಅವರೊಂದಿಗೆ ವಿವಾಹವೂ ಆಯಿತು. ‘ರಾಧಾರಮಣ’ದ ನಂತರ ಇನ್ನೊಂದು ಚಿತ್ರ ದೊರಕಲಿಲ್ಲ. ನಾಟಕ ಕಂಪನಿಯೂ ಕೈ ಹಿಡಿಯಲಿಲ್ಲ. ನಂಜನಗೂಡಿಗೆ ಮರಳಿದರು. ತಮ್ಮನ ಬಾಳೆ ಹಣ್ಣಿನ ಮಂಡಿಯಲ್ಲಿ ಕೆಲಸಕ್ಕೆ ನಿಂತರು. ಹರಿಕಥೆ ಮಾಡುವುದನ್ನು ಕಲಿತರು, ಕೊನೆಗೆ ಟೈಪಿಂಗ್ ಷಾರ್ಟ್ ಹ್ಯಾಂಡ್ ಕಲಿತು ಕಾರಕೂನರಾದರು. ಯಾವುದೂ ಕೈ ಹಿಡಿಯಲಿಲ್ಲ. ರಂಗಭೂಮಿಯ ಗೆಳೆಯ ಬಾಲಕೃಷ್ಣ ‘ಚನ್ನಪ್ಪನವರು ಕಂಪನಿ ಆರಂಭಿಸಿದ್ದಾರೆ ಬಾ’ ಎಂದು ಕಾಗದ ಬರೆದರು. ಅಯ್ಯರ್ ಎಲ್ಲವನ್ನೂ ಬಿಟ್ಟು ಗುಬ್ಬಿ ಕಂಪನಿಗೆ ಮತ್ತೆ ಬಂದರು. ಈ ಸಲ ಬೇಡರ ಕಣ್ಣಪ್ಪ ಜಯಭೇರಿ ಹೊಡೆಯಿತು. ಎಚ್.ಎಲ್.ಎನ್.ಸಿಂಹ ಅದನ್ನು ಚಲನಚಿತ್ರವಾಗಿಸಿದಾಗ ಅಯ್ಯರ್ ಮತ್ತೆ ಚಿತ್ರರಂಗಕ್ಕೆ ಬಂದರು. ಇಲ್ಲಿಂದ ಮುಂದೆ ವಿಶ್ವನಾಥ ಶೆಟ್ಟರ ಪರಿಚಯವಾಯಿತು. ಕನ್ನಡವನ್ನು ಸರಿಯಾಗಿ ಬಲ್ಲದ ಆದರೆ ತಾಂತ್ರಿಕ ವಿಷಯದಲ್ಲಿ ಗಟ್ಟಿಗರಾದ ಟಿ.ವಿ.ಸಿಂಗ್ ಠಾಕೂರ ನಿರ್ದೇಶಕರಾಗಿ ‘ಸೋದರಿ’ ಚಿತ್ರದ ಸಿದ್ಧತೆ ನಡೆಸಿದ್ದರು. ಅಯ್ಯರ್ ಸಾಹಿತ್ಯ ಬರೆದರು. ಮುಂದೆ ಜಗಜ್ಯೋತಿ ಬಸವೇಶ್ವರದವರೆಗೂ ಈ ನಂಟು ಮುಂದುವರೆಯಿತು. ಈ ವೇಳೆಗೇ ಡಬ್ಬಿಂಗ್ ಸಮಸ್ಯೆ ಎದುರಾಗಿದ್ದು ಕಲಾವಿದರೊಡಗೂಡಿ ಕರ್ನಾಟಕದಾದ್ಯಂತ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸನ್ನು ಪಡೆದರು. ಈ ಕಲಾವಿದರ ಸಂಘದಿಂದಲೇ ‘ರಣಧೀರ ಕಂಠೀರವ’ ನಿರ್ಮಾಣವಾಯಿತು. ಎನ್.ಸಿ.ರಾಜನ್ ಹೆಸರಿಗೆ ಚಿತ್ರದ ನಿರ್ದೇಶಕರಾದರೂ ಸಂಪೂರ್ಣವಾಗಿ ಹೊಣೆ ಹೊತ್ತವರು ಅಯ್ಯರ್ ಅವರೇ. ಅಲ್ಲಿಂದ ಮುಂದೆ ಬಿ.ಎಸ್.ರಂಗಾ ಮತ್ತು ಬಿ.ಆರ್.ಪಂತಲು ಅವರ ಚಿತ್ರಗಳ ಹಿಂದಿನ ಶಕ್ತಿಯಾಗಿ ದುಡಿದರು. ದಶಾವತಾರ, ಕಿತ್ತೂರು ಚೆನ್ನಮ್ಮ ಅವರ ಶಕ್ತಿಗೆ ನಿದರ್ಶನವಾದ ಚಿತ್ರಗಳು.

ಅಯ್ಯರ್ ಬೇರೆ ಬೇರೆಯವರ ಹೆಸರಿನಲ್ಲಿ ನಿರ್ದೇಶನ ಮಾಡಿದ್ದರೂ ಸ್ವತಂತ್ರ್ಯ ನಿರ್ದೇಶಕರಾಗುವ ಅವಕಾಶ ಸಿಕ್ಕಿಯೇ ಇರಲಿಲ್ಲ. ತಾವೇ ಅಂತಹ ಅವಕಾಶ ಕಲ್ಪಿಸಿಕೊಂಡರು. ನಿರ್ಮಾಣಕ್ಕೆ ಇಳಿದರು. ಬಿ.ವಿ.ಕಾರಂತರಿಂದ ಕಿಶನ್ ಚಂದ್ ಅವರ ‘ಭೂದಾನ’ದ ಕಥೆಯನ್ನು ಕೇಳಿಸಿಕೊಂಡಿದ್ದರು. ಶಿವರಾಮ ಕಾರಂತರ ಚೋಮನ ದುಡಿ ಮತ್ತು ಪ್ರೇಮ್‌ಚಂದ್ ಅವರ ‘ಗೋದಾನ’ ಕೃತಿಗಳ ತಿರುಳನ್ನು ಸೇರಿಸಿ ತಮ್ಮದೇ ಶೈಲಿಯಲ್ಲಿ ಕಥೆ ಸಿದ್ದಪಡಿಸಿದರು. ಕಾರಂತರ ಕಾದಂಬರಿಗೆ ಹೆಚ್ಚು ಹತ್ತಿರ ಎನ್ನಿಸಿದ್ದರಿಂದ ಅನುಮತಿ ಕೇಳಿದರು.‘ಇದು ನಿನ್ನದೇ ಕಥೆ, ಅನುಮತಿ ಅಗತ್ಯವಿಲ್ಲ’ ಎಂದರು ಕಾರಂತರು. ‘ಭೂದಾನ’ 1962ರಲ್ಲಿ ನಿರ್ಮಾಣವಾಯಿತು.ರಾಜ್ ಕುಮಾರ್, ಉದಯ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಒಟ್ಟಾಗಿ ಅಭಿನಯಿಸಿದ ಮೊದಲ ಚಿತ್ರ ಇದು. ಕನ್ನಡದಲ್ಲಿ ಯಶಸ್ಸನ್ನು ಸಾಧಿಸಿದ್ದಲ್ಲದೆ ತಮಿಳಿನಲ್ಲೂ ನಿರ್ಮಾಣಗೊಂಡು ಜಯಭೇರಿ ಬಾರಿಸಿತು.

‘ತಾಯಿ ಕರುಳು’ ಅದೇ ವರ್ಷ ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರ ತಮ್ಮನ್ನು ಬೆಳ್ಳಿತೆರೆಗೆ ತಂದ ಎಂ.ವಿ.ರಾಜಮ್ಮನವರಿಗೆ ಮಹತ್ವದ ಪಾತ್ರವನ್ನು ನೀಡುವುದೇ ಉದ್ದೇಶವಾಗಿದ್ದ ಚಿತ್ರದಲ್ಲಿ ತಾಯಿಯ ವ್ಯಕ್ತಿತ್ವದ ಹಿರಿಮೆ ಚಿತ್ರಿತವಾಗಿತ್ತು. ಚಿತ್ರದ ‘ಬಾ ತಾಯೆ ಭಾರತಿಯೆ’ ಗೀತೆ ಇಂದಿಗೂ ಜನಪ್ರಿಯ. ‘ಲಾಯರ್ ಮಗಳು’ ಅವರ ಮುಂದಿನ ಚಿತ್ರ ವಂದನಾ ದ್ವಿಪಾತ್ರದಲ್ಲಿದ್ದ ಚಿತ್ರಕ್ಕೆ ಉದಯ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಇಬ್ಬರು ನಾಯಕರು. ಕೃಷ್ಣಮೂರ್ತಿ ಪುರಾಣಿಕರ ‘ದೇವರ ಕೂಸು’ ಕಾದಂಬರಿಯನ್ನು ಆಧರಿಸಿ ಅಯ್ಯರ್ ನಿರ್ಮಿಸಿ ನಿರ್ದೇಶಿಸಿದ ಚಿತ್ರ ‘ಬಂಗಾರಿ’ ಕಲ್ಯಾಣ್ ಕುಮಾರ್, ವಂದನಾ ಪ್ರಮುಖ ಪಾತ್ರದಲ್ಲಿದ್ದ ಚಿತ್ರದಲ್ಲಿ ಆದವಾನಿ ಲಕ್ಷ್ಮೀಬಾಯಿಯವರಿಗೆ ಪ್ರಮಖ ಪಾತ್ರವಿತ್ತು. ಅಯ್ಯರ್ ಅವರ ಮುಂದಿನ ಚಿತ್ರ ‘ಪೋಸ್ಟ್ ಮಾಸ್ಟರ್’ ಆಗ ತಾನೆ ಜನಪ್ರಿಯವಾಗುತ್ತಿದ್ದ ಪೋಸ್ಟ್ ಮಾಸ್ಟರ್ ಉದ್ಯೋಗದ ಘನತೆಯನ್ನು ಹೇಳುವ ಚಿತ್ರ. ಇದು ಅಯ್ಯರ್ ಅವರ ಸಾಮಾಜಿಕ ಚಿತ್ರಗಳಲ್ಲಿ ಪ್ರಮುಖವಾದದ್ದು ಎನ್ನಿಸಿಕೊಂಡಿದೆ.

ಬಿ.ಎಸ್.ರಂಗಾ ಅವರು ತಮ್ಮ ‘ವಿಕ್ರಂ ಪ್ರೊಡಕ್ಷನ್ಸ್’ನಲ್ಲಿ ನಿರ್ಮಿಸಿ ಜಿ.ವಿ.ಅಯ್ಯರ್ ನಿರ್ದೇಶಿಸಿದ ಚಿತ್ರ ‘ಕಿಲಾಡಿ ರಂಗ’. ರಾಜ್ ಕುಮಾರ್, ಉದಯ ಕುಮಾರ್, ಭಾರತಿ, ವಂದನಾ ಪ್ರಮುಖ ತಾರಾಗಣದಲ್ಲಿದ್ದ ಚಿತ್ರ ಜನಪದ ಶೈಲಿಯಲ್ಲಿ ಸಾಹಸದ ಕಥೆ ಹೇಳಿದ ವಿಶಿಷ್ಟ ಪ್ರಯೋಗವಾಗಿತ್ತು. ಕಲಾವಿದೆ ವಂದನಾ ನಿರ್ಮಿಸಿದ ಜಿ.ವಿ.ಅಯ್ಯರ್ ನಿರ್ದೇಶಿಸಿದ ಚಿತ್ರ ‘ಮೈಸೂರು ಟಾಂಗಾ’. ಟಾಂಗಾವಾಲಿಯಾಗಿ ಅವರೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಪತ್ತೇದಾರಿಕೆಗೆ ಬಂದ ಪ್ರಕಾಶ್ ಸಮಸ್ಯೆಯಲ್ಲಿ ಸಿಕ್ಕಿಕೊಂಡಾಗ ಟಾಂಗಾವಾಲಿಯೇ ಪರಿಹರಿಸುವ ವಿಶಿಷ್ಟ ವಸ್ತುವನ್ನು ಇದು ಹೊಂದಿತ್ತು. ವಂದನಾ ಅವರ ಜೊತೆಗೆ ಕಲ್ಯಾಣ್ ಕುಮಾರ್, ಬಾಲಕೃಷ್ಣ, ನರಸಿಂಹ ರಾಜು, ದಿನೇಶ್ ಮೊದಲಾದವರು ಅಭಿನಯಿಸಿದ್ದರು. ಸಾಮಾಜಿಕ ಚಿತ್ರಗಳ ಸರಣಿಯಲ್ಲಿ ಅಯ್ಯರ್ ನಿರ್ದೇಶಿಸಿದ ಕೊನೆಯ ಚಿತ್ರ ‘ನಾನೇ ಭಾಗ್ಯವತಿ’. ಇದನ್ನು ಅವರು ಸಿಂಗ್ ಠಾಕೂರ್ ಅವರೊಂದಿಗೆ ಜಂಟಿಯಾಗಿ ನಿರ್ದೇಶಿಸಿದ್ದರು. ಕಲ್ಯಾಣ್ ಕುಮಾರ್, ಉದಯಕುಮಾರ್, ಭಾರತಿ, ಕಲ್ಪನಾ, ನರಸಿಂಹ ರಾಜು ಮೊದಲಾದವರು ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ಗಂಗಾಧರ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಇಲ್ಲಿಯವರೆಗೂ ವಾಣಿಜ್ಯ ಚಿತ್ರಗಳ ಹಾದಿಯಲ್ಲಿ ಸಾಗುತ್ತಿದ್ದ ಜಿ.ವಿ.ಅಯ್ಯರ್ ತಮ್ಮ ಅವಧೂತ ಗುಣಕ್ಕೆ ತಕ್ಕಂತೆ ಅದನ್ನು ಜಾಡಿಸಿ ಎಸೆದು ಹೊಸ ಪ್ರಯೋಗ ಮಾಡಿದ ಚಿತ್ರ ‘ಚೌಕದ ದೀಪ’. ವೇಶ್ಯಾ ಸಮಸ್ಯೆಯನ್ನು ವಿಭಿನ್ನ ಶೈಲಿಯಲ್ಲಿ ಪರಿಶೀಲಿಸಿದ ಚಿತ್ರ ಇದು. ವೇಶ್ಯೆಯ ಜೀವನದಲ್ಲಿ ರಂಗುರಂಗಿನ ಜಗತ್ತಲ್ಲದೆ ಇನ್ನೊಂದು ಮುಖವೂ ಇದೆ ಎಂದು ತೋರಿಸುವುದು ಇದರ ಉದ್ದೇಶ. ಗಂಗಾಧರ, ಅನಂತರಾಂ ಮಚ್ಚೇರಿ.ಪಂಢರಿ ಬಾಯಿ, ಇಂದ್ರಾಣಿ, ವರಲಕ್ಷ್ಮಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದರು.  ಡೆಂಕರ್ ಲೀನ್ಸ್ ಅವರ ‘ಹಾರ್ಡ್ ಫ್ಯಾಕ್ಟರ್ಸ್‌’ ಇದಕ್ಕೆ ಪ್ರೇರಣೆ. ತಂದೆಯ ತನ್ನ ಸ್ವಂತ ಮಗಳೊಡನೆ ಅನೈತಿಕ ಸಂಬಂಧ ಹೊಂದುವ ಚಿತ್ರದ ಒಂದು ದೃಶ್ಯ ಪ್ರೇಕ್ಷಕರ ತೀವ್ರ ಆಕ್ರೋಶಕ್ಕೆ ಒಳಗಾಯಿತು. ಇಲ್ಲಿಂದ ಅವರು ಸುಮಾರು ಮೂರು ವರ್ಷಗಳ ಅಜ್ಞಾತ ವಾಸವನ್ನು ಅನುಭವಿಸಿದರು. ದೆಹಲಿಗೆ ಹೋಗಿ ಬಿ.ವಿ.ಕಾರಂತರ ಒಡನಾಟದಲ್ಲಿದ್ದು ಹವ್ಯಾಸಿ ರಂಗಭೂಮಿಯ ಹೊಸ ಪ್ರಯೋಗಗಳಿಂದ ಪ್ರೇರಿತರಾದರು. ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಓದಿ ಚಲನಚಿತ್ರವಾಗಿಸಲು ಸಿದ್ದರಾದರು. ಅಯ್ಯರ್ ತಾವು ನಿರ್ಮಾಪಕರಾಗಿ ಮಾತ್ರ ಉಳಿದು ಕಾರಂತರು – ಗಿರೀಶ್ ಕಾರ್ನಡ್‌ರಿಂದ ಚಿತ್ರ ನಿರ್ದೆಶಿಸಿದರು.

ಜಿ.ವಿ.ಅಯ್ಯರ್ ಅವರು ನಿರ್ದೇಶಿಸಿದ ಶ್ರೇಷ್ಠ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ‘ಹಂಸಗೀತೆ’. ತ.ರಾ.ಸು ಅವರ ಕಾದಂಬರಿಗಳ ಮಾತುಗಳನ್ನೆಲ್ಲಾ ತೆಗೆದು ಸಂಗೀತದ ಮೂಲಕವೇ ಚಿತ್ರವನ್ನು ರೂಪಿಸಿದರು. ಬದುಕಿನ ಪರಿಸರವೇ ನಾದದ ಮೂಲ ಎನ್ನುವಂತೆ ಚಿತ್ರದುರ್ಗದ ಕೋಟೆಯನ್ನು ಕ್ಯಾನ್ವಾಸ್ ಆಗಿ ಬಳಸಿಕೊಂಡರು. ಭೈರವಿ ವೆಂಕಟಸುಬ್ಬಯ್ಯನ ಹಮ್ಮು ಬಿಮ್ಮು, ಹುಡುಕಾಟ, ಏಳ್ಗೆ ಎಲ್ಲವೂ ಇಲ್ಲಿ ಕಂಡವು. ಅಶುಭ ಸೂಚಕವಾಗಿ ಹಾಲಕ್ಕಿ ಕೂಗನ್ನು ಬಳಸಿದರು. ಜಂಟಿಸ್ವರವನ್ನು ಕೋಟೆ ಕಲ್ಲುಗಳಿಂದ ಕಟ್ಟಿದರು. ವೆಂಕಣ್ಣ-ಚಂದ್ರಾಳ ಅಗಲಿಕೆಗೆ ಮೃದಂಗದ ಧ್ವನಿ ರೂಪಕವಾಯಿತು. ಏಳ್ಗೆಗೆ ಆರೋಹಣ ಬಳಿಸಿದಂತೆ ಪತನಕ್ಕೆ ಅವರೋಹಣವನ್ನು ಬಳಸಿದರು. ಅನಂತ್ ನಾಗ್, ರೇಖಾದಾಸ್, ಬಿ.ವಿ.ಕಾರಂತ್ ಸೊಗಸಾದ ಅಭಿನಯವನ್ನು ನೀಡಿದರು. ನಿಮಾಯ್ ಘೋಷ್ ಕಲೆಗಾರಿಕೆ ಕೃಷ್ಣಮೂರ್ತಿಗಳ ಕಲಾ ನಿರ್ದೇಶನ ಚಿತ್ರದ ಭಿನ್ನತೆಗೆ ಕಾರಣವಾದವು.

ಕಾಮರೂಪಿಯವರ ‘ಕುದುರೆ ಮೊಟ್ಟೆ’ ಸಾಕಷ್ಟು ಗಮನ ಸೆಳೆದ ಕಾದಂಬರಿ. ಇದು ಅಸಂಗತಗಳ ಚಿತ್ರಣದ ಮೂಲಕವೇ ತಾನು ಕಂಡಿದ್ದು ಮಾತ್ರ ಸತ್ಯವೆ? ಎನ್ನುವ ಪ್ರಶ್ನೆಯನ್ನು ಎತ್ತುತ್ತದೆ. ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶವನ್ನು ವ್ಯಕ್ತಿಯ ನೆಲೆಯಲ್ಲಿ ನೋಡಿದ ಪ್ರಯೋಗ ಅಯ್ಯರ್ ಅವರ ಮುಂದಿನ ಚಿತ್ರವಾಯಿತು. ಇಲ್ಲಿ ನಿರೂಪಣೆಗೆ ಮಹತ್ವ ಸಿಕ್ಕಿತು. ಆದರೆ ಚಿತ್ರ ಉತ್ಸವಗಳಿಂದಾಚೆ ಪ್ರದರ್ಶನಗೊಳ್ಳಲೇ ಇಲ್ಲ. ಅಯ್ಯರ್ ನಿರೀಕ್ಷಿಸಿದ ಚರ್ಚೆ ಸಾಧ್ಯವಾಗಲಿಲ್ಲ. ‘ನಾಳೆಗಳನ್ನು ಮಾಡುವವರು’ ನಿರ್ಮಾಣದಲ್ಲಿ ಪ್ರಯೋಗಶೀಲತೆ ತಂದ ಚಿತ್ರ. ಇದು ವಿ.ಆರ್.ಕೆ.ಪ್ರಸಾದ್ ಅವರ ‘ಪ್ರೇಮಕಾಮ’ ಮತ್ತು ಎಸ್.ದಿವಾಕರ್ ಅವರ ‘ಇತಿಹಾಸ’ ಮೂರು ಚಿತ್ರಗಳನ್ನು ಒಂದೇ ಸೆಟ್, ರೇಖಾದಾಸ್ ಅವರೊಬ್ಬರೇ ನಾಯಕಿಯಾಗಿಸಿ ಚಿತ್ರೀಕರಿಸಲು ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ‘ನಾಳೆಗಳನ್ನು ಮಾಡುವವರು’ ಮುಖವಾಡವನ್ನು ಹೊತ್ತ ಹಳೆ ತಲೆಮಾರು ಮತ್ತು ಮುಕ್ತ ಚಿಂತನೆಯ ಹೊಸ ತಲೆಮಾರಿನ ನಡುವಿನ ಸಂಘರ್ಷದ ಕಥೆ. ಲೈಂಗಿಕ ಸ್ವಾತಂತ್ರ್ಯ, ವಿವಾಹೇತರ ಸಂಬಂಧಗಳು, ಹುಟ್ಟು ಸಾವು ಹೀಗೆ ಬದುಕಿನ ಹಲವು ಮುಖಗಳ ಚಿತ್ರಣ ಇಲ್ಲಿದೆ. ಈ ಎರಡೂ ಚಿತ್ರಗಳಲ್ಲಿನ ನಾವಿನ್ಯತೆ ಮಾನವೀಯ ಸಂಬಂಧಗಳನ್ನು ರೂಪಕಗಳ ಮೂಲಕ ಹೇಳಿದ ಕ್ರಮ ಗಮನ ಸೆಳೆಯಿತು. ಇದೇ ಕಾಲದಲ್ಲಿ ಬಂದ ವಾಲ್ ಪೋಸ್ಟರ್‌ನಲ್ಲಿ ನಾಯಕ-ನಾಯಕಿ ಇರಲಿಲ್ಲ. ವಾಲ್ ಪೋಸ್ಟರ್‌ಗಳೇ ಚಿತ್ರದ ಕೇಂದ್ರವಾಗಿತ್ತು. ಈ ಮೂರು ಪ್ರಯೋಗಶೀಲ ಚಿತ್ರಗಳು ಮುಂದಿನ ಅಯ್ಯರ್ ಅವರ ಬೆಳವಣಿಗೆಗೆ ಚಿಮ್ಮು ಹಲಿಗೆಯಾಯಿತು.

‘ಆದಿ ಶಂಕರಾಚಾರ್ಯ’ ಸಂಸ್ಕೃತ ಸಿನಿಮಾದ ಚಿತ್ರೀಕರಣ ಸಂದರ್ಭ. ಕೃಷ್ಣನ ವೇಷಧಾರಿ ಬಾಲನಟಿ ಮಾಳವಿಕ ಜೊತೆ ಅಯ್ಯರ್‌ (ಫೋಟೊ ಕೃಪೆ: ನಟಿ ಮಾಳವಿಕ ಅವಿನಾಶ್‌)

ಅಯ್ಯರ್ ಅವರ ವೃತ್ತಿ ಜೀವನದ ಮೂರನೇ ಮಜಲು ‘ಆದಿ ಶಂಕರಾಚಾರ್ಯ’ ಚಿತ್ರದಿಂದ ಆರಂಭವಾಯಿತು. ಶಂಕರಾಚಾರ್ಯರನ್ನು ಪವಾಡಗಳಿಂದ ಹೊರ ತಂದು ನೈಜವಾದ ನೆಲೆಯಲ್ಲಿ ತಾತ್ವಿಕ ಘಟ್ಟಗಳಾಗಿ ಚಿತ್ರ ವಿಶ್ಲೇಷಿಸಿತು. ಶಂಕರರ ಹುಟ್ಟಿನಿಂದಲೇ ಜ್ಞಾನ ಮತ್ತು ಮೃತ್ಯು ಜೊತೆಯಾಗುತ್ತಾರೆ. ಸನ್ಯಾಸ ಹೊತ್ತಿನಲ್ಲಿ ನಚಿಕೇತನ ನೃತ್ಯನಾಟಕದ ನಚಿಕೇತನ ಪಾತ್ರಧಾರಿಯ ಸಾವಿನಿಂದ ಶಂಕರರ ಮನಸ್ಸು ಕದಡಿ ಹೋದ ಚಿತ್ರಣ ಬರುತ್ತದೆ. ಗೋವಿಂದ ಭಗವತ್ಪಾದರ ಆಶ್ರಮದಲ್ಲಿ ಭಾಷ್ಯೆಗಳ ಕುರಿತ ಸೂಕ್ಷ್ಮ ಚಿತ್ರಣವಿದೆ. ವಾರಣಾಸಿಯಲ್ಲಿ ಶಂಕರರು ಚಾಂಡಾಲನ ಕಾಲನ್ನೇ ಹಿಡಿಯುತ್ತಾರೆ. ಶಂಕರರ ಬ್ರಹ್ಮಸೂತ್ರವನ್ನು ಬಾದರಾಯಣರೇ ಬಂದು ಪರಿಶೀಲಿಸುವ ಸುಂದರ ದೃಶ್ಯವಿದೆ. ಕುಮಾರಿಲ ಭಟ್ಟರ ಪ್ರಸಂಗದಲ್ಲೂ ಇಂತಹ ಸೂಕ್ಷ್ಮಗಳಿವೆ. ಮಂಡನ ಮಿಶ್ರರ ಮನೆಗೆ ಶಂಕರರು ಬರುತ್ತಾರೆ. ಸಂವಾದದಲ್ಲಿ ಗಿಳಿಗೆ ದ್ರಾಕ್ಷಿ ಹಣ್ಣನ್ನು ತಿನ್ನಿಸುವುದು ಚಿತ್ರದ ಮಹತ್ವದ ಸನ್ನಿವೇಶ. ಗಿಳಿಗಳು ಸಾಮಾನ್ಯವಾಗಿ ತಿನ್ನುವುದು ಹಣ್ಣು ಮೆಣಸಿನ ಕಾಯಿ, ನೆಲ್ಲಿಕಾಯಿ ಇಲ್ಲಿ ಹೊಸ ಚಿಂತನೆಯ ಪ್ರಸ್ತಾಪವಿದೆ. ಹಿಮಾಲಯದ ಗಿರಿಶಿಖರಗಳ ವನ ಸಂಪದಗಳ ವಿವಿಧ ಕೋನಗಳ ಚಿತ್ರೀಕರಣವಂತೂ ಶಂಕರರ ಅಧ್ಯಾತ್ಮಿಕ ಚಿಂತನೆಗಳ ಬೇರೆ ಬೇರೆ ಮಜಲನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಮೂಡಿ ಬಂದ ಚಿತ್ರಕ್ಕೆ ಸ್ವರ್ಣ ಕಮಲದ ಗೌರವವೂ ದೊರಕಿತು. ‘ಮದ್ವಾಚಾರ್ಯ’ ಕನ್ನಡದಲ್ಲಿ ಮೂಡಿ ಬಂದಿತು. ಇಲ್ಲಿಯೂ ಪವಾಡಗಳನ್ನು ಬದಿಗೆ ಇಟ್ಟರು. ಅವರ ತಂದೆಯ ಪಾತ್ರಕ್ಕೆ ಹೊಸ ನೆಲೆ ಕೊಟ್ಟರು. ಇಲ್ಲಿನ ಸಂಗೀತ ಪ್ರಯೋಗಗಳೂ ಗಮನ ಸೆಳೆದವು. ಉಡುಪಿ ಕಡಲ ತೀರದಲ್ಲಿ ಬಿರುಗಾಳಿ ಬೀಸುವುದಿಲ್ಲ ಹಾಯದೋಣಿ ತೊನೆಯುವುದಿಲ್ಲ, ಅಂಬಿಗರು ಕೂಗುವುದಿಲ್ಲ ಎನ್ನುವುದರಿಂದ ಹಿಡಿದು ಮಧ್ವಾಚಾರ್ಯರು ಅಪ್ಪಟ ಮಾಧ್ವರಂತೆ ಢಾಳಾಗಿ ಅಂಗಾರ ಅಕ್ಷತೆ ಹಚ್ಚಿ ಕೊಳ್ಳುವುದಿಲ್ಲ ಎನ್ನುವವರೆಗೂ ಆಕ್ಷೇಪಗಳು ಬಂದವು, ಆದರೆ ಅಯ್ಯರ್ ಇವನ್ನೆಲ್ಲಾ ಮೀರಿ ತತ್ವದ ನೆಲೆಯಲ್ಲಿ ಸಾಗಿಯಾಗಿತ್ತು. ರಾಮಾನುಜಾಚಾರ್ಯ ತಮಿಳು ಚಿತ್ರ. ಇಲ್ಲಿಯೂ ಹೊಸ ಪ್ರಯೋಗಗಳು ಬಂದವು. ಜಾತಿ ಪದ್ದತಿಯನ್ನು ವಿಶ್ಲೇಷಿಸಿದ ಕ್ರಮ ಬಹಳ ಭಿನ್ನವಾಗಿತ್ತು. ಆಚಾರ್ಯತ್ರಯರ ಚಿತ್ರಗಳ ಮೂಲಕ ಅಯ್ಯರ್  ಬಹಳ ಮುಖ್ಯವಾದ ಸಾಂಸ್ಕೃತಿಕ ದಾಖಲಾತಿಯನ್ನಂತೂ ಮಾಡಿದರು.

‘ಭಗವದ್ಗೀತೆ’ ಸಂಸ್ಕೃತ ಚಿತ್ರ. ಇಲ್ಲಿನ ತಾತ್ವಿಕ ನೆಲೆಗೆ ಕಥನದ ಸಾಧ್ಯತೆಯನ್ನೂ ನೀಡಿದರು. ಇದರ ಚಿತ್ರೀಕರಣ ಬಹುತೇಕ ವೆಲ್ಲೂರಿನ ಕೋಟೆ ಮತ್ತು ದೇವಸ್ಥಾನಗಳಲ್ಲಿ ನಡೆಯಿತು. ಕುಂಡಲಿನಿಯಂತಹ ಯೋಗಿಕ ರೂಪಕಗಳನ್ನು ಈ ಪರಿಸರದಲ್ಲೇ ಅಯ್ಯರ್ ಕಂಡುಕೊಂಡರು. ಪ್ರಾರಂಭದಲ್ಲಿ ಸೃಷ್ಟಿಯನ್ನು ಬ್ರಹ್ಮಾಂಡ ಕಲ್ಪನೆಯ ಮೂಲಕ ತೋರಿಸಿದ್ದು ಹೊಸ ಪ್ರಯೋಗವಾಗಿತ್ತು. ಮನುಷ್ಯನ ಅಂತರಿಕ ಗುಣ ಸ್ವಭಾವವೇ ಭಗವದ್ಗಿತೆಯ ಸಾರ ಎನ್ನುವಂತೆ ಅಯ್ಯರ್ ಚಿತ್ರಿಸಿದ್ದರು. ‘ವಿವೇಕಾನಂದ’ ಚಿತ್ರದಲ್ಲಿ ಹೇಮಾ ಮಾಲಿನಿ, ವಿಕ್ಟರ್ ಬ್ಯಾನರ್ಜಿ, ಮಿಥುನ್ ಚಕ್ರವರ್ತಿ, ಮೀನಾಕ್ಷಿ ಶೇಷಾದ್ರಿ ಮೊದಲಾದವರ ಅದ್ದೂರಿ ತಾರಾಗಣ ಇತ್ತು. ಕನ್ಯಾಕುಮಾರಿಯಿಂದ ಹಿಮಾಲಯದವರೆಗಿನ ಸುಂದರ ಛಾಯಾಗ್ರಹಣವೂ ಇತ್ತು. ರಾಮಕೃಷ್ಣ ಮತ್ತು ವಿವೇಕಾನಂದರ ಭಿನ್ನತೆಯನ್ನು ತೋರಿದರು. ಅವರಿಗೆ ಲೌಕಿಕದ ಮೂಲಕ ಅಲೌಕಿಕ ಸಿದ್ದಿಸುವ ಕ್ರಮವನ್ನು ಸೆರೆ ಹಿಡಿದರು. ಸಲೀಲ್ ಚೌಧರಿ ಸಂಗೀತ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಏಸುದಾಸ್ ಅವರ ಹಾಡುಗಾರಿಕೆ ಚಿತ್ರಕ್ಕೆ ಇತ್ತು. ಆದರೆ ಗಲ್ಲಾ ಪೆಟ್ಟಿಗೆ ಮತ್ತು ಕಲಾತ್ಮಕತೆಯ ಇರುಕಿನಲ್ಲಿ ಚಿತ್ರ ಸಿಕ್ಕಿಕೊಂಡು ಎರಡೂ ಕಡೆಯಲ್ಲಿ ಸೋಲನ್ನು ಕಂಡಿತು.

ಇಲ್ಲಿಂದ ಮುಂದೆ ಮಂಜುಭಾರ್ಗವಿಯವರಿಗಾಗಿ ‘ಶಾಂತಲಾ’ ಚಿತ್ರೀಕರಿಸಲು ಪ್ರಯತ್ನಿಸಿದರು. ಅದು ಕೈಗೂಡಲಿಲ್ಲ. ಕೃಷ್ಣಲೀಲೆ, ಕಾದಂಬರಿಗಳು ಕಿರುತೆರೆ ಧಾರವಾಹಿಗಳಾದವು. ರಾಮಾಯಣವನ್ನು ರೂಪಕಗಳ ನೆಲೆಯಲ್ಲಿ ನೋಡಲು ಪ್ರಯತ್ನಿಸಿದರು. ಸೀತೆಯನ್ನು ವಿಜ್ಞಾನದ ಸಂಕೇತವಾಗಿಸಿದರೆ ರಾವಣನನ್ನು ವಿಜ್ಞಾನಿಯಾಗಿಸಿದರು. ರಾಮ ಅಧ್ಯಾತ್ಮದ ನೆಲೆಗೆ ಬಂದ. ಹೀಗೆ ಎಲ್ಲಾ ಪಾತ್ರಗಳಿಗೂ ಗುಣದ ರೂಪ ನೀಡಿ ಹೊಸ ಮಾದರಿಯಲ್ಲಿ ಕಥೆ ಹೇಳಲು ಪ್ರಯತ್ನಿಸಿದರು. ಕಲಾವಿದರ ಹುಡುಕಾಟಕ್ಕಾಗಿ ಮುಂಬೈಗೆ ಹೋದರು. ಅಲ್ಲಿಯೇ ಅನಾರೋಗ್ಯಕ್ಕೆ ಒಳಗಾಗಿ 2003ರ ಜನವರಿ 21ರಂದು ನಿಧನರಾದರು. ಕನ್ನಡ ಚಿತ್ರರಂಗದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮಹಾನ್ ಚೇತನ ಇಹ ಬದುಕಿನ ಯಾತ್ರೆಯನ್ನು ಮುಗಿಸಿತು.

ಗೀತ ರಚನೆಕಾರರಾಗಿ ಅಯ್ಯರ್ ತಮ್ಮ ವೃತ್ತಿ ಜೀವನದ ಆರಂಭ ಘಟ್ಟದಲ್ಲಿ ವಾಣಿಜ್ಯ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಅಯ್ಯರ್ ಅದರ ಭಾಗವಾಗಿ ಚಿತ್ರಗೀತೆಗಳನ್ನೂ ಬರೆದರು. ಅವರು ನಿರ್ದೇಶಕರೂ ಆಗಿದ್ದರಿಂದ ಚಿತ್ರದ ಭಾಗವಾಗಿಯೇ ಚಿತ್ರಗೀತೆಗಳು ಬರುವ ಪ್ರಯೋಗವನ್ನು ಮಾಡಿದರು. ‘ಕಣ್ತರೆದು ನೋಡು’ ಚಿತ್ರದಲ್ಲಿ ‘ಬಂಗಾರದೊಡವೆ ಬೇಕೆ?’ ಗೀತೆ ಪ್ರಕೃತಿಯ ಕುರಿತ ಗೀತೆಯಾದರೆ ನಾಯಕಿ ಅದನ್ನು ತನ್ನ ಕುರಿತು ಎಂದುಕೊಳ್ಳುತ್ತಾರೆ. ಎರಡೂ ಅರ್ಥಕ್ಕೂ ಗೀತೆ ಒಗ್ಗುವಂತಿದೆ. ‘ಅಮ್ಮ’ ಚಿತ್ರದ ‘ಬಂಗಾರವಾಗಲಿ ನಿನ್ನ ಬಾಳೆಲ್ಲಾ’ ಸಂಭಾಷಣೆಯ ಮುಂದುವರಿಕೆಯಾಗಿಯೇ ಮೂಡಿ ಬರುತ್ತದೆ. ‘ಕಿತ್ತೂರು ಚೆನ್ನಮ್ಮ’ದ  ‘ತಾಯಿ ದೇವಿಯನು’ ‘ದಶಾವತಾರ’ದ ‘ವೈದೇಹಿ ಏನಾದಳು’ ಸೊಗಸಾಗಿ ಭಾವನೆಗಳನ್ನು ಅಂಡರ್ ಪ್ಲೇ ಮಾಡುತ್ತದೆ. ಅಯ್ಯರ್ ಪ್ರೇಮಗೀತೆಗಳ ಮಟ್ಟಿಗೆ ಪ್ರಯೋಗಶೀಲರು ‘ನಯನದಲಿ ದೊರೆಯಿರಲು’ ರೂಪಕವಾಗಿ ಕೂಡ ಸುಂದರವಾಗಿದೆ. ‘ಗಾಳಿಗೋಪುರ’ದ ‘ನನ್ಯಾಕೆ ನೀ ಹಾಂಗೆ ನೋಡುವೆ’ ಸಂಭಾಷಣಾ ಶೈಲಿಯಲ್ಲೇ ಬೆಳೆಯುವ ಗೀತೆ. ಇಂದ್ರಿಯ ಗಮ್ಯ ವಿವರಗಳನ್ನು ನೀಡುತ್ತಲೇ ಅನುಭೂತಿಯ ಮಟ್ಟಕ್ಕೆ ಇದು ಏರುತ್ತದೆ.

ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ

ನಲ್ಲೆಯ ಈ ದೇಹ ಝಲ್ಲೆನ್ನದೆ

ನೀ ಬಂದು ಬಳಿ ಬಂದು ನಗೆ ಬೀರಿದೆ

ಜೇನಂಥ ಎದೆ ಹಿಂಡಿ ಚೆಲ್ಲಾಡಿದೆ

ಎಂಬ ಸಾಲುಗಳನ್ನು ಗಮನಿಸಬಹುದು.‘ಗಂಡೊಂದು ಹೆಣ್ಣಾರು’ ಚಿತ್ರದಲ್ಲಿನ ‘ಬೆಳದಿಂಗಳಾಗಿ ಬಂದೆ’, ‘ಪೋಸ್ಟ್ ಮಾಸ್ಟರ್’ ಚಿತ್ರದ ‘ಇಂದೇನು ಹುಣ್ಣಿಮೆಯೋ’ ಇಂತಹ ಸುಂದರ ಪ್ರೇಮಗೀತೆಗಳ ಸಾಲಿನಲ್ಲಿ ನಿಲ್ಲುತ್ತವೆ. ‘ನಂಬಿದೆ ನಿನ್ನ ನಾದ ದೇವತೆಯೆ’ ಗೀತೆಯ ಮೂಲಕ ತಾತ್ವಿಕತೆಯನ್ನೂ ಅಯ್ಯರ್ ಅವರು ಹಿಡಿದಿದ್ದರು. ಜಿ.ವಿ.ಅಯ್ಯರ್ ಅವರ ಗೀತೆಗಳಲ್ಲಿ ಬಹಳ ಮುಖ್ಯವಾಗಿರುವುದು ಕನ್ನಡ ಪರ ಗೀತೆಗಳು. ಚಿತ್ರಗೀತೆಗಳ ಮೂಲಕ ಏಕೀಕರಣದ ಆಶಯವನ್ನು ಬಿಂಬಿಸಿದವರಲ್ಲಿ ಅವರು ಪ್ರಮುಖರು. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ, ಕಲಿಯಿರೊಂದು ಪಾಠವನ್ನು ಕನ್ನಡದ ಮಕ್ಕಳೆ, ಕರಿ ಮಣ್ಣು ನೆಲ ಹೊನ್ನು, ಕಾವೇರಿ ಜಲ ಚೆನ್ನ, ಶರಣು ಕಾವೇರಿ ತಾಯೆ, ನಾ ಹುಟ್ಟಿ ಬೆಳೆದ ಕನ್ನಡ ನಾಡು ಹೀಗೆ ಹಲವಾರು ಕನ್ನಡಭಿಮಾನದ ಗೀತೆಗಳನ್ನು ಅವರು ಬರೆದರು.‘ಯಾವೆಣ್ಣೆಯಾದರೂ ಬೆಳಗುವುದೇ ಗುರಿ ಎಂಬ ಸತ್ವವನ್ನು ನೀ ಎತ್ತಿ ತೋರು ಬಾ ತಾಯೆ’ಯಂತಹ ಮಹತ್ವದ ಪ್ರತಿಮೆಗಳು ಈ ಗೀತೆಗಳಲ್ಲಿವೆ. ‘ಬಂಗಾರಿ’ ಚಿತ್ರದ ನತ್ತೊಂದು ಜಾರಿತು ಕನ್ನಡ ನೆಲದ ವೈವಿಧ್ಯತೆಯನ್ನು ಬಿಂಬಿಸುವ ವಿಶಿಷ್ಟ ಗೀತೆ. ‘ಬಾ ತಾಯೆ ಭಾರತಿಯೆ’ ಈ ಸರಣಿ ಗೀತೆಗಳಲ್ಲಿ ಶ್ರೇಷ್ಟವಾದದ್ದು. ಕರ್ನಾಟಕದ ಹಿರಿಮೆಯನ್ನು ಭಾರತ ಮಾತೆಯ ಮಗಳು ಎನ್ನುವ ನೆಲೆಯಲ್ಲಿ ವರ್ಣಿಸುವ ಈ ಗೀತೆ ಜಿ.ವಿ.ಅಯ್ಯರ್ ಅವರ ರಚನೆಯಲ್ಲದೆ ಕವಿಗಳ ರಚನೆಯಾಗಿದ್ದರೆ ನಾಡಗೀತೆಯ ಹೆಗ್ಗಳಿಕೆಯನ್ನು ಪಡೆಯುತ್ತಿತ್ತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.