ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ ಅವರು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ವಿದ್ಯಾಭ್ಯಾಸ ಮಾಡುತ್ತಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರಿಗೆ ನಟನೆ, ನಿರ್ದೇಶನದ ಬಗ್ಗೆ ಆಸಕ್ತಿ ಮೊಳೆಯಿತು. ಓದು ಮುಗಿದ ನಂತರ ಕೆಲಕಾಲ ನಾಟಕ ಕಂಪನಿಗಳಲ್ಲಿ ವೃತ್ತಿ ಕಲಾವಿದರಾಗಿ ಕೆಲಸ ಮಾಡಿದರು.
ಅವರು ಚಿತ್ರರಂಗಕ್ಕೆ ಪರಿಚಯವಾಗಿದ್ದು ನಿರ್ದೇಶನ ಸಹಾಯಕರಾಗಿ. ಆರಂಭದ ದಿನಗಳಲ್ಲಿ ಪುಟ್ಟಣ್ಣ ಕಣಗಾಲರ ಕಪ್ಪು ಬಿಳುಪು, ಮಲ್ಲಮ್ಮನ ಪವಾಡ, ಗೆಜ್ಜೆಪೂಜೆ, ಕರುಳಿನ ಕರೆ, ಶರಪಂಜರ, ಸಾಕ್ಷಾತ್ಕಾರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದರು. ಆಗ ಕಂಠದಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಗಿರೀಶ್ ಕಾರ್ನಾಡ್ ನಿರ್ದೇಶನದ ‘ಕಾಡು’ ಚಿತ್ರದಲ್ಲಿ ಹಿಂದಿ ನಟ ಅಮರೀಶ್ ಪುರಿ ಅವರಿಗೆ ಅರಸು ಕಂಠ ಸೂಕ್ತವಾಗಿ ಹೊಂದಿಕೆಯಾಗಿತ್ತು. ಕಾರ್ನಾಡರೇ ನಿರ್ದೇಶಿಸಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ‘ಪೆರ್ಮಾಡಿ’ ಪಾತ್ರ ಅರಸು ನಟನಾ ಬದುಕಿಗೆ ತಿರುವು ನೀಡಿತು. ಖಳ, ಪೋಷಕ ಪಾತ್ರಗಳ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

‘ಚಕ್ರ’, ‘ಸಂಗ್ಯಾ ಬಾಳ್ಯಾ’, ‘ಸೂಪರ್ ನೋವಾ 459’, ‘ಸಂಗಮ ಸಾಕ್ಷಿ’ (ತುಳು) ಅವರ ನಿರ್ದೇಶನದ ಚಿತ್ರಗಳು. ‘ಅಂತ’ ತೆಲುಗು ಅವತರಣಿಕೆ ‘ಅಂತಂ ಕಾದಿದಿ ಆರಂಭಂ’, ಕಮಲ ಹಾಸನ್‌ರ ‘ಪುನ್ನಗೈಮನ್ನನ್’ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಭಾರತೀಯ ಸಿನಿಮಾದ ಖ್ಯಾತ ಸಂಕಲನಕಾರ ಸುರೇಶ್ ಅರಸ್ ಅವರು ಸುಂದರ ಕೃಷ್ಣ ಅರಸ್ ಅವರ ಸೋದರಸಂಬಂಧಿ. ಹಿರಿಯ ಪುತ್ರ ನಾಗೇಂದ್ರ ಅರಸ್ ಸಂಕಲನಕಾರ, ಚಿತ್ರನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 1993ರ ನವೆಂಬರ್ 10ರಂದು ತಮ್ಮ 52ನೇ ವಯಸ್ಸಿನಲ್ಲಿ ಸುಂದರ ಕೃಷ್ಣ ಅರಸ್ ನಮ್ಮನ್ನು ಅಗಲಿದರು.
(ಮಾಹಿತಿ ಕೃಪೆ: ರುಕ್ಕೋಜಿ ರಾವ್ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)
(ಫೋಟೊಗಳು: ಪ್ರಗತಿ ಅಶ್ವತ್ಥನಾರಾಯಣ)