ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತಾಜಾತನದ ನಿರೂಪಣೆಯ ನಿರ್ದೇಶಕ ಮಹೇಂದ್ರನ್

ಪೋಸ್ಟ್ ಶೇರ್ ಮಾಡಿ

ಸಿನಿಮಾರಂಗಕ್ಕೆ ಬರುವ ಯಾವುದೇ ಇರಾದೆ-ಕನಸುಗಳೂ ಇಲ್ಲದಿದ್ದ ಮಹೇಂದ್ರನ್ (ಮೂಲ ಹೆಸರು ಜಾನ್ ಅಲೆಕ್ಸಾಂಡರ್) ತಮಿಳರು ಮರೆಯಲಾಗದ ‘ಮುಳ್ಳುಮ್ ಮಲರುಮ್’, ‘ಉದಿರಿ ಪೂಕ್ಕಳ್’, ‘ನೆಂಜತ್ತೈ ಕಿಳ್ಳಾದೆ’ ಚಿತ್ರಗಳನ್ನು ಕೊಟ್ಟರು. ‘ರೌಡಿ’ ಪಾತ್ರಗಳಲ್ಲಿ ಕಳೆದು ಹೋಗಬಹುದಾಗಿದ್ದ ರಜನೀಕಾಂತ್‌ರಲ್ಲಿದ್ದ ಕಲಾವಿದನನ್ನು ಹೊಳೆಯುವಂತೆ ಮಾಡಿದ ನಿರ್ದೇಶಕರಲ್ಲಿ ಕೆ.ಬಾಲಚಂದರ್‌ರಷ್ಟೇ ಪಾಲು ಮಹೇಂದ್ರನ್ , ಎಸ್.ಪಿ.ಮುತ್ತುರಾಮನ್ (‘ಭುವನ ಒರು ಕೇಳ್ವಿಕುರಿ’ ಚಿತ್ರದ ನಿರ್ದೇಶಕರು) ಅವರದ್ದೂ ಇದೆ. ಕೆ.ಬಿ ಯವರಂತೆ ‘aggressive’ ಅಲ್ಲದ ಮಹೇಂದ್ರನ್, ಎಲೆಮರೆಯ ಕಾಯಾಗಿಯೇ ಉಳಿದರು. ಹೆಚ್ಚು ಪ್ರಚಾರ ಬಯಸಲಿಲ್ಲ.

ಮಹೇಂದ್ರನ್ ಸಿನಿಮಾ ರಂಗಕ್ಕೆ ಬಂದದ್ದೂ ಆಕಸ್ಮಿಕವೇ. 60ರ ದಶಕದಲ್ಲಿ, ಕಾರೈಕ್ಕುಡಿಯ ಅಳಗಪ್ಪ ಕಲಾ ಕಾಲೇಜಿನಲ್ಲಿ ಅವರು ಅರ್ಥಶಾಸ್ತ್ರದ ಆನರ್ಸ್ ಓದುತ್ತಿದ್ದ ಸಂದರ್ಭ. ಕಾಲೇಜಿನ ಸಮಾರಂಭವೊಂದಕ್ಕೆ ಮುಖ್ಯ ಅತಿಥಿಯಾಗಿ ಸೂಪರ್ ಸ್ಟಾರ್ ಎಂಜಿಆರ್ ಆಗಮಿಸಿದ್ದರು. ಭಾಷಣ ಸ್ಪರ್ಧೆಗಳಲ್ಲಿ ಸಾಮಾನ್ಯವಾಗಿ ಪ್ರಥಮ ಸ್ಥಾನ ಗಿಟ್ಟಿಸುತ್ತಿದ್ದ ಮಹೇಂದ್ರನ್ ಗೆ ಮಾತನಾಡುವ ಅವಕಾಶ ಸಿಕ್ಕಿತು. ಮುಖ್ಯ ಅತಿಥಿಯ ಮುಂದೆಯೇ ತಮಿಳು ಸಿನಿಮಾದ ಕಟು ವಿಮರ್ಶೆ ಮಾಡಿಬಿಟ್ಟರು ಮಹೇಂದ್ರನ್. ಅಧ್ಯಾಪಕ ವರ್ಗ ಆಭಾಸಕ್ಕೊಳಗಾಗಿತ್ತು. ಆದರೆ ತಮ್ಮ ಭಾಷಣದಲ್ಲಿ ಎಂಜಿಆರ್, ಮಹೇಂದ್ರನ್ ರ ಗುಣಗಾನ ಮಾಡಿದರು. ‘ನಿನ್ನಂತೆ ಯೋಚಿಸುವ, ವಿಮರ್ಶಿಸುವ ಯುವಕರು ಇಂದು ತಮಿಳು ಸಿನಿಮಾಗೆ ಅವಶ್ಯವಿದ್ದಾರೆ. ನೀನೇಕೆ ಸಿನಿಮಾ ವಿಮರ್ಶೆ ಬರೆಯಬಾರದು’ ಎಂದು ಬೆನ್ನು ತಟ್ಟಿದರು. ಮಹೇಂದ್ರನ್ ಕಾಲೇಜಿನ ‘ಸ್ಟಾರ್’ ಆಗಿಬಿಟ್ಟರು.!

‘ಲಾಯರ್’ ಆಗುವ ಇಚ್ಚೆ ಇದ್ದ (ಅವರ ತಂದೆಯ ಆಸೆಯೂ ಅದೇ ಆಗಿತ್ತು) ಮಹೇಂದ್ರನ್ ಮದರಾಸಿನ ರೈಲು ಹತ್ತಿದರು. ಅಲ್ಲಿನ ಕಾನೂನು ಕಾಲೇಜಿಗೆ ದಾಖಲಾದರು. ಕೆಲವೇ ದಿನಗಳಲ್ಲಿ ‘ಈ ವೃತ್ತಿ ತನ್ನದಲ್ಲ’ ಎಂಬುದನ್ನು ಮನಗಂಡರು. ಅಷ್ಟರಲ್ಲಿ ಸಂಸಾರದ ಆರ್ಥಿಕ ಪರಿಸ್ಥಿತಿಯೂ ಹದಗೆಡಲಾರಂಭಿಸಿತ್ತು. ಊರಿಗೆ ವಾಪಸಾಗುವ ಯೋಚನೆ ಮಾಡಿದರು. ಕಾರೈಕ್ಕುಡಿಯವರೇ ಆದ ವಳ್ಳಿಯಪ್ಪನ್ ಸಿನಿಮಾ ಪತ್ರಿಕೆಯೊಂದನ್ನು ಪ್ರಕಟಿಸುತ್ತಿದ್ದರು. ‘ಎಂಜಿಆರ್ ಹೇಳಿದ್ದು ಮರೆತೆಯಾ.. ನನ್ನ ಪತ್ರಿಕೆಯಲ್ಲಿ ಸಿನಿಮಾ ವಿಮರ್ಶೆ ಬರಿ. ಸರಿಹೋಗದಿದ್ದರೆ ನಂತರ ಊರಿಗೆ ಹೋಗುವಿಯಂತೆ’ ಎಂದ ವಳ್ಳಿಯಪ್ಪನ್, ಮಹೇಂದ್ರನ್ ರನ್ನು ಉಪಸಂಪಾದಕರನ್ನಾಗಿ ಸೇರಿಸಿಕೊಂಡರು. ಮಹೇಂದ್ರನ್ ರ ಚಿತ್ರ ವಿಮರ್ಶೆ, ಅವರ ನೇರ – ನಾಟುವ ಶೈಲಿಯ ಬರಹಗಳು ಜನಪ್ರಿಯವಾದವು. ಎಂಜಿಆರ್ ರೊಡನೆ ವಳ್ಳಿಯಪ್ಪನ್ ರಿಗೆ ಒಳ್ಳೆಯ ಸಂಬಂಧವಿತ್ತು. ಒಮ್ಮೆ ಭೇಟಿಯಾಗಿದ್ದಾಗ, ಎಂಜಿಆರ್ ‘ನಿಮ್ಮ ಪತ್ರಿಕೆಯಲ್ಲಿ ಬರುವ ವಿಮರ್ಶೆ ಬಹಳ ಚೆನಾಗಿರುತ್ತೆ.. ಯಾರದು ಬರೆಯೋದು?’ ಎಂದರು. ವಳ್ಳಿಯಪ್ಪನ್ ತಮ್ಮ ‘ಶಿಷ್ಯ’ನಂತಿದ್ದ ಮಹೇಂದ್ರನ್ ಬಗ್ಗೆ ಅವನ ಹಿನ್ನಲೆಯ ಬಗ್ಗೆ ಹೇಳಿದೊಡನೆಯೇ ಎಂಜಿಆರ್ ಹರ್ಷಗೊಂಡರು. ‘ಆ ಹುಡುಗ ಗೊತ್ತು..ನನ್ನನ್ನು ಭೇಟಿಯಾಗಲು ತಿಳಿಸಿ’ ಎಂದರು.

ಎಂಜಿಆರ್‌ ಜೊತೆ ಮಹೇಂದ್ರನ್

ಮಹೇಂದ್ರನ್ ಗೆ ಅವಕಾಶ ಹುಡುಕಿ ಬಂದಿತ್ತು. ತಡಮಾಡದೇ ಎಂಜಿಆರ್ ರನ್ನು ಭೇಟಿಯಾದರು. ‘ನನ್ನ ಈಗಿನ ಸಿನಿಮಾಗೆ ನಿನ್ನದೇ ಚಿತ್ರಕಥೆ -ಸಂಭಾಷಣೆ.’ ಎನ್ನುತ್ತಾ ಕಥೆಯೊಂದರ ಎಳೆ ಹೇಳಿದರು. ಆದರೆ ಸಿನಿಮಾ ತಡವಾಯಿತು. ಎಂಜಿಆರ್ ಆಗ ಇನ್ನೂ ನಾಟಕ ಕಂಪನಿಗಳಲ್ಲಿ ಸಕ್ರಿಯರಾಗಿದ್ದರು. ‘ಸಿನಿಮಾ ತಡ ಆಗಲಿ ಬಿಡು ಪರವಾಗಿಲ್ಲ… ನಮ್ಮ ಕಂಪನಿ ನಾಟಕಕ್ಕೆ ಮೊದಲು ಒಂದು ಕಥೆ ಬರಿ. ಅದನ್ನು ನಾಟಕ ಮಾಡೋಣ. ಚೆನ್ನಾಗಿ ಬಂದರೆ ಸಿನಿಮಾನೂ ಮಾಡೋಣ’ ಎಂದು ಪ್ರೋತ್ಸಾಹಿಸಿದರು. ರಾತ್ರಿ ಹಗಲು ಕುಳಿತು ಮಹೇಂದ್ರನ್ ಕಥೆ ಸಿದ್ದಪಡಿಸಿದರು. ಎಂಜಿಆರ್ ಮುದಗೊಂಡರು. ‘ಇದನ್ನು ಸಿನಿಮಾ ಮಾಡಿಬಿಡೋಣ’ ಎಂದ ಎಂ ಜಿ ಆರ್, ಸಿನಿಮಾ ತಯಾರಿಕೆ ಆರಂಭಿಸಿದರು. ಸಾವಿತ್ರಿ ನಾಯಕಿಯಾದರು. ಮಹೇಂದ್ರನ್ ಹರ್ಷಕ್ಕೆ ಪಾರವೇ ಇಲ್ಲ. ಮೂರು ದಿನಗಳ ಚಿತ್ರೀಕರಣವಾದ ಮೇಲೆ, ‘ಈ ಸಿನಿಮಾ ಬೇಡಾರೀ..ನಾಟಕಕ್ಕೆ ಬರೆದ ಕಾನ್ಸೆಪ್ಟ್ ಇದು….ಸಿನಿಮಾ ಆಗಲ್ಲ’ ಎಂದ ನಿರ್ಮಾಪಕ ಕೈಚೆಲ್ಲಿದರು. ಸಿನಿಮಾ ಅಲ್ಲಿಗೇ ನಿಂತುಹೋಯಿತು. ಎಂಜಿಆರ್ ಧೈರ್ಯ ತುಂಬಿದರು. ‘ಇಂತಹದಕ್ಕೆಲ್ಲಾ ಸಿದ್ದನಾಗಿರಬೇಕು… ಸಿನಿಮಾದವರದು ನಾಟಕದವರದೆಲ್ಲಾ ಇದೇ ಕಥೇನೆ.’ ಎಂದರು. ತಮ್ಮ ಮುಂದಿನ ಚಿತ್ರಕ್ಕೆ ಮಹೇಂದ್ರನ್ ರನ್ನು ಸಹಾಯಕ ನಿರ್ದೇಶಕನಾಗಿ ನೇಮಿಸಿಕೊಂಡರು. ‘ಕಾಂಚಿತಲೈವನ್’ ಎಂಬ ಈ ಚಿತ್ರದ ತುಂಬೆಲ್ಲಾ ಕರುಣಾನಿಧಿಯೇ ಆಕ್ರಮಿಸಿಕೊಂಡಿದ್ದರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ‘ಕರುಣಾ’ಮಯ. ಕರುಣಾನಿಧಿಯವರ ಸೋದರಿಯ ಮಗ ‘ಮುರಸೋಲಿ’ ಮಾರನ್ ಚಿತ್ರದ ನಿರ್ಮಾಪಕ. ಮಾರನ್ ಬೇಡವೆನ್ನಲಿಲ್ಲ. ಮಹೇಂದ್ರನ್ ಅನುಭವಕ್ಕೇನೂ ಧಕ್ಕೆ ಬರಲಿಲ್ಲ. ಸಿನಿಮಾದ ಮಾಯಾಲೋಕವನ್ನು ಮಹೇಂದ್ರನ್ ಕಂಡರು. ಮೂಕವಿಸ್ಮಿತರಾದರು. ಭವಿಷ್ಯದ ಸದಭಿರುಚಿಯ ಚಿತ್ರ ನಿರ್ದೇಶಕನೊಬ್ಬ ತಮಿಳು ಚಿತ್ರರಂಗ ಪ್ರವೇಶಿಸಿದ.

ಸಂಗೀತ ಸಂಯೋಜಕ ಇಳಯರಾಜ, ಗಾಯಕ ಯೇಸುದಾಸ್ ಜೊತೆ

ಮಹೇಂದ್ರನ್ ಅವಸರಿಸಲಿಲ್ಲ. 1964ರ ಸುಮಾರಿನಲ್ಲಿ ಕಥೆಗಾರರಾಗಿ 78ರವರೆಗೂ ಬರಹದಲ್ಲಿಯೇ ತೊಡಗಿಕೊಂಡಿದ್ದರು. ತಮ್ಮೆಲ್ಲಾ ಸಮಕಾಲೀನ ನಿರ್ದೇಶಕರ ಚಿತ್ರಗಳನ್ನೂ ಸೂಕ್ಷ್ಮವಾಗಿ ಗಮನಿಸಿದರು. ಸಿನಿಮಾದ ವ್ಯಾಕರಣ ಕಲಿತರು. ಎಂಜಿಆರ್ – ಕರುಣಾನಿಧಿಯ ಆಕರ್ಷಣ – ವಿಕರ್ಷಣಗಳನ್ನು, ಎರಡೂ ಬಣಗಳ ಉಪೋದ್ಘಾತಗಳನ್ನು ಮೂಕಪ್ರೇಕ್ಷಕನಾಗಿ ಕಂಡರು. ದಾರಿ ತಪ್ಪುತ್ತಿದ್ದ ತಮಿಳು ರಾಜಕೀಯವನ್ನು ದೂರ ಇರಿಸಿದ ಮಹೇಂದ್ರನ್, ತಮಿಳು ಸಿನಿಮಾದ ಮೇಲೆ ಗಮನ ಕೇಂದ್ರೀಕರಿಸಿದರು. ತಮ್ಮ ಕಲಿಕೆ ಒಂದು ಘಟ್ಟ ತಲುಪಿತು ಎಂದು ಮನವರಿಕೆಯಾದಾಗ ತಾವೇ ಚಿತ್ರ ನಿರ್ದೇಶನಕ್ಕಿಳಿದರು. ಆಗ ಬಂದ ಚಿತ್ರವೇ ‘ಮುಳ್ಳುಮ್ ಮಲರುಮ್’.. (ಮುಳ್ಳೂ ಅರಳುತ್ತದೆ). ಬಾಲುಮಹೇಂದ್ರ ಚಿತ್ರದ ಛಾಯಾಗ್ರಾಹಕರಾದರು. ಬಾಲು ನಿರ್ದೇಶಕರಾಗಿ, ತಂತ್ರಜ್ಞರಾಗಿ ಅಪಾರ ಅನುಭವಗಳಿಸಿದ್ದರು. ‘ಮುಳ್ಳುಮ್ ಮಲರುಮ್’ ಗೆ ರಜನೀಕಾಂತ್ ನಾಯಕ ಎಂದಾಗ, ಹೌಹಾರಿದ ನಿರ್ಮಾಪಕ ವೇಲು ಚೆಟ್ಟಿಯಾರ್ ’ಆಗೋದೇ ಇಲ್ಲ..ಅಷ್ಟು ಕಪ್ಪು ಅವನು.. ಅವನನ್ನ ಹೀರೋ ಮಾಡೋದಾ? ಅಲ್ಲದೇ ಅವನು ಮಾಡಿರೋದೆಲ್ಲಾ ಬರೀ ರೌಡಿ -ಪೊರಕಿ ಪಾತ್ರಗಳು…ಕೆ.ಬಿ ಸಾರ್ ಕೂಡಾ ಅವನನ್ನು ಹೆಚ್ಚಾಗಿ ‘ನೆಗಟಿವ್’ ಆಗಿ ತೋರಿಸಿದ್ದಾರೆ. ಇನ್ನ್ಯಾರನ್ನಾದರೂ ನೋಡಿ’. ಎಂದು ಕೈ ಆಡಿಸಿಬಿಟ್ಟರು. ಛಲ ಬಿಡದ ಮಹೇಂದ್ರನ್, ‘ಇಲ್ಲಿ ನಾನು ಹೇಳಲು ಹೊರಟಿರುವುದು ಕೂಡಾ ಒಬ್ಬ ‘ಕಪ್ಪು’ ಎನಿಸುವ ಮನುಷ್ಯನ ಕುರಿತಾಗಿಯೇ. ಇದಕ್ಕೆ ರಜನೀನೆ ಆಗಬೇಕು. ಅಲ್ಲದೇ ಪ್ರತಿಭೆ ಕೆಲವರಲ್ಲಿ ಸುಪ್ತವಾಗಿರುತ್ತದೆ. ಅವಕಾಶ ಸಿಕ್ಕಾಗ ಮಾತ್ರ ಪ್ರಕಟವಾಗುವ ಪ್ರತಿಭೆಗಳೂ ಇವೆ. ನನಗೂ 25 ವರ್ಷದ ಅನುಭವವಿದೆ. ನನ್ನ ಜೊತೆಗೆ ಬಾಲು ಇದ್ದಾರೆ. ರಜನಿ ನನ್ನ ಚಿತ್ರದ ಪಾತ್ರಕ್ಕೆ ಹೇಳಿ ಮಾಡಿಸಿಟ್ಟಂತಿದ್ದಾನೆ. ನಿರ್ಮಾಪಕ ಯಾರೇ ಆದರೂ ಈ ಪಾತ್ರ ರಜನಿಗೆ… ಅದು ಶತಃಸಿದ್ಧ.” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.

ನಟ ರಜನೀಕಾಂತ್‌ ಜೊತೆ

ವೇಣು ಕೊನೆಗೆ ಒಪ್ಪಿದರು. ‘ಕಾಳಿ’ಯ ಪಾತ್ರಕ್ಕೆ ರಜನಿ ಜೀವ ತುಂಬಿ ಅಭಿನಯಿಸಿದರು. ಚಿತ್ರೀಕರಣ ಶೃಂಗೇರಿ, ಕಿಗ್ಗ, ಊಟಿಗಳಲ್ಲಿ ನಡೆಯಿತು. ಚಿತ್ರ ಬಿಡುಗಡೆಯಾಯಿತು. ಮೊದಲೆರಡು ದಿನ ಅಷ್ಟಕ್ಕಷ್ಟೇ ಆಗಿದ್ದ ಪ್ರೇಕ್ಷಕರ ಸ್ಪಂದನೆ ನಂತರ ವೇಣು ಚೆಟ್ಟಿಯಾರ್ -ಮಹೇಂದ್ರರನ್ನೂ ವಿಸ್ಮಿತಗೊಳಿಸಿತು. ‘ಕಾಳಿ’ ಪಾತ್ರದ ರಜನಿ, ವಲ್ಲಿಯಾಗಿ ಶೋಭಾ ತಮಿಳು ಪ್ರೇಕ್ಷಕರನ್ನು ದಂಗುಬಡಿಸಿದ್ದರು. ಶರತ್ ಬಾಬು ಎಂದಿನ ಸೊಗಸಾದ ಅಭಿನಯ ನೀಡಿದ್ದರು. ರಾಜಾ ಸಂಯೋಜನೆಯ ‘ಸೆಂತಾಳಮ್ ಪೂವಿಲ್’ ಎಂಬ ಹಾಡು ವರ್ಷ ಕಾಲ ತಮಿಳರ ಬಾಯಲ್ಲಿ ಗುನುಗಾಡುತ್ತಿತ್ತು. ರಜನಿಯಲ್ಲೊಬ್ಬ ಕಲಾವಿದನಿದ್ದಾನೆ ಎಂಬುದರ ಅರಿವಾಯಿತು.

ಚಿತ್ರೀಕರಣದ ಸಮಯದಿಂದ ಚಿತ್ರ ಬಿಡುಗಡೆಯಾಗುವವರೆಗೂ ಮಹೇಂದ್ರನ್ ರ ಬೆನ್ನಿಗೆ ನಿಂತವರು ಬಾಲು ಮಹೇಂದ್ರ. ತಾವೇ ಅದ್ಭುತ ನಿರ್ದೇಶಕರಾಗಿದ್ದರೂ, ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ಹೊಸಬನನ್ನು ಪ್ರೋತ್ಸಾಹಿಸಿದ ಬಾಲು ಅವರ ಮನೋಭಾವ ಪ್ರಶಂಸಾರ್ಹ. ಮಹೇಂದ್ರರಿಗೆ ನಿರ್ದೇಶಕನಾಗಿ ಭದ್ರ ಅಡಿ ಊರಲು ಅನುವಾದ ‘ಮುಳ್ಳುಮ್ ಮಲರುಮ್’ ಹಲವು ಪಾಠಗಳನ್ನೂ ಕಲಿಸಿತು. ಶೃಂಗೇರಿ ಸುತ್ತಮುತ್ತಲಿನ ಪರಿಸರ ಕಂಡು ಮಹೇಂದ್ರನ್ ಮೂಕವಿಸ್ಮಿತರಾದರು. ಹಲವು ನಿರ್ದೇಶಕರಿಗೆ ಶೃಂಗೇರಿಯ ಬಗ್ಗೆ ತಿಳುವಳಿಕೆ ನೀಡಿದ್ದರು. ಹೊಡಿ, ಬಡಿ, ಕಟ್ಟು, ಕೊಲ್ಲು ತರದ ಕಥೆಗಳಿಂದ, ಉದ್ದುದ್ದದ ಸಂಭಾಷಣೆಗಳಿಂದ, ಅಸಂಬದ್ಧ ತಿರುವುಗಳಿಂದ ಜಾಳಾದ ಸಿನಿಮಾಗಳಿಂದ ತಮಿಳು ಪ್ರೇಕ್ಷಕನನ್ನು ಮುಕ್ತಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಹೇಂದ್ರನ್ ಮಾಡಿದ್ದರು. ‘ವಿಶುಯಲ್ಸ್’ನಿಂದ ಚಿತ್ರ ಹೇಳುವ ಪರಂಪರೆಯೊಂದನ್ನು ಮಹೇಂದ್ರ ಪುನಃಶ್ಚೇತನಗೊಳಿಸಿದರು. (ಬಾಲು ಮಹೇಂದ್ರ ಈ ಪರಂಪರೆ ಆರಂಭಿಸಿದವರು). ‘ಉತಿರಿ ಪೂಕ್ಕಳ್’, ಮಹೇಂದ್ರನ್ ನಿರ್ದೇಶಿಸಿದ ಮತ್ತೊಂದು ಮೈಲಿಗಲ್ಲೆನಿಸಿದ ಚಿತ್ರ.

ನಟ ತ್ಯಾಗರಾಜನ್, ನಟಿ ಸುಹಾಸಿನಿ ಜೊತೆ (Photo Courtesy: New Indian Express)

‘ನೆಂಜತ್ತೈ ಕಿಳ್ಳಾದೆ’ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯಿತು. ಅಶೋಕ್ ಕುಮಾರ್ ತಮ್ಮ ಕ್ಯಾಮೆರಾ ಕುಸುರಿಗೆ ರಾಷ್ಟ್ರ ಪ್ರಶಸ್ತಿ ಪಡೆದರು. ಸುಹಾಸಿನಿ ಸಿನಿಮಾಟೊಗ್ರಫಿಯ ವಿದ್ಯಾರ್ಥಿನಿ. ಅಶೋಕ್ ಕುಮಾರ್ ಬಳಿ ಕ್ಯಾಮರ ಸಹಾಯಕಿಯಾಗಿ ವೃತ್ತಿ ಆರಂಭಿಸಿದ ಸುಹಾಸಿನಿ ನಟಿಯಾಗುತ್ತೇನೆಂದು ಬಯಸಿರಲಿಲ್ಲ. ಅರಳು ಹುರಿದಂತೆ ತಮಿಳು -ಇಂಗ್ಲೀಷ್ ಮಾತನಾಡುತ್ತಿದ್ದ ಸುಹಾಸಿನಿಯನ್ನು, ‘ನೆಂಜತ್ತೈಕ್ಕಿಳ್ಳಾದೆ’ ಯ ‘ವಿಜಿ’ ಪಾತ್ರಕ್ಕೆ ಒಪ್ಪಿಸಿದರು ಮಹೇಂದ್ರನ್. ಸಿನಿಮಾ ಅಭೂತ ಪೂರ್ವ ಯಶಸ್ಸು ಗಳಿಸಿತು. ಕೋಕಿಲಾ ಮೋಹನ್ ತಮ್ಮ ಸ್ಟಾರ್ ಪಟ್ಟ ಭದ್ರಪಡಿಸಿಕೊಂಡರು. ಸುಹಾಸಿನಿ ಎಂಬ ಮನೋಜ್ಞ ಅಭಿನಯದ ನಟಿಯ ಪ್ರವೇಶವಾಯಿತು.

ಪುಟ್ಟಣ್ಣನವರ ‘ಕಥಾಸಂಗಮ’ದ ಕಥಾ ಶೈಲಿ ಮಹೇಂದ್ರನ್ ರನ್ನು ಬಹಳ ತಟ್ಟಿತ್ತು. ತಮ್ಮ ಪ್ರೀತಿಪಾತ್ರ ರಜನಿಯನ್ನು ಒಪ್ಪಿಸಿ ’ಕೈ ಕುಡುಕ್ಕುಮ್ ಕೈ’ ಎಂಬ ರೀಮೇಕ್ ಮಾಡಿದರು. ಮೂಲಚಿತ್ರದ ‘ಮುನಿತಾಯಿ’ಯ ಭಾಗವನ್ನು ಮಾತ್ರ ಬಳಸಿಕೊಂಡರು. ಪುಟ್ಟಣ್ಣ ಬಗ್ಗೆ ಬಹಳ ಗೌರವ – ಆದರಗಳನ್ನು ಹೊಂದಿದ್ದರು. ವರ್ಷಗಳ ಹಿಂದೆ ಮಹೇಂದ್ರನ್ ರ ಆತ್ಮಕಥೆ ‘ಸಿನಿಮಾವುಮ್ ನಾನುಮ್’ ಬಿಡುಗಡೆಯಾಯಿತು. ಸದಭಿರುಚಿಯ ಚಿತ್ರವೊಂದನ್ನು ನೋಡಿದ ಅನುಭವ ಕೊಡುವ ಅವರ ಆತ್ಮಕಥೆಯಲ್ಲಿ, ಸಿನಿಮಾ ಬಗ್ಗೆ ಅವರಿಗಿರುವ ಪ್ರೀತಿ ಕಣ್ಣಿಗೆ ಕಟ್ಟುತ್ತದೆ. ‘ಇಂದು ನಾನೇನಾದರೂ ಕಲಿತಿದ್ದರೆ ಅದಕ್ಕೆ ಕಾರಣೀಭೂತರಾಗಿರುವುದು ಮಹೇಂದ್ರನ್’ ಎಂದು ಸ್ವತಃ ಮಣಿರತ್ನಂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಹೇಂದ್ರನ್ ಒಳ್ಳೆಯ ನಟರೂ ಆಗಿದ್ದರು. ಸಿನಿಮಾದ ಅಕ್ಷರ ಕಲಿತೊಡನೇ ‘ನಿರ್ದೇಶಕ’ನ ಪಟ್ಟಕ್ಕೆ ಎಗರುವ ಯುವ ನಿರ್ದೇಶಕರಿಗೆ, ‘ಮರೋಚರಿತ್ರ’ದ ಮೊದಲ ಸೀನ್, ‘ಪ್ರೇಮಾಭಿಷೇಕಂ’ನ ಎರಡನೇ ಸೀನ್, ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ನ ಕೊನೆಯ ಸೀನ್ ಗಳನ್ನು ಕಸಿ ಮಾಡಿ ರಾತ್ರೋರಾತ್ರಿ ಸ್ಕ್ರಿಪ್ಟ್ ಬರೆದು ಬೀಸಾಡಿ ಬಿಡುವ ‘ಕಥಾ ಸೃಷ್ಟಿಕರ್ತ’ರಿಗೆ, ಮಹೇಂದ್ರನ್ ಸದಾ ‘ಕೇಳ್ವಿಕುರಿ’ (ಪ್ರಶ್ನಾರ್ಥಕ ಚಿಹ್ನೆ) ಯಾಗಿ ಕಾಡುತ್ತಾರೆ. ಆರೋಗ್ಯಪೂರ್ಣ ಸಿನಿಮಾ ಬೆಳೆಯಲು ಇಂತಹ ಪ್ರಶ್ನಾರ್ಥಕ ಚಿಹ್ನೆಗಳ ಸಂಖ್ಯೆ ಬೆಳೆಯಬೇಕಿದೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಪೇಷನ್ಸ್ ಕೂಪರ್

ಭಾರತದ ಮೊದಲ ಸಿನಿಮಾ ಸ್ಟಾರ್‌ಗಳಲ್ಲಿ ನಟಿ ಪೇಷನ್ಸ್ ಕೂಪರ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಕೊಲ್ಕೊತ್ತಾ ಮೂಲದ ಆಂಗ್ಲೋ ಇಂಡಿಯನ್‌ ಪೇಷನ್ಸ್

‘ಜ್ಯುಬಿಲಿ ಸ್ಟಾರ್’ ರಾಜೇಂದ್ರ ಕುಮಾರ್

ಬೆಳ್ಳಿತೆರೆಗೆ ಪರಿಚಯವಾದ ಆರಂಭದ ದಿನಗಳಲ್ಲಿ ರಾಜೇಂದ್ರಕುಮಾರ್ ತೀವ್ರ ಹಿನ್ನೆಡೆ ಅನುಭವಿಸಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಅವರ ಸಾಲು, ಸಾಲು ಚಿತ್ರಗಳು ಯಶಸ್ವಿಯಾದವು.

ಮೀನಾ ಕುಮಾರಿ

ಹಣೆಯ ಮೇಲೆ ಮುಂಗುರುಳು, ಒಡಲಾಳದ ನೋವನ್ನು ಹೊರಹಾಕುವಂಥ ದನಿ.. ದುರಂತ ನಾಯಕಿಯ ಚಿತ್ರಣದ ಇಮೇಜ್‍ಗೆ ಮೀನಾಕುಮಾರಿ ಒಗ್ಗಿಹೋಗಿದ್ದರು. ಹಿಂದಿ ಚಿತ್ರರಂಗದ