
ಲೇಖಕ
ದಾಸರಿ ನಾರಾಯಣರಾವು 150 ಚಿತ್ರಗಳನ್ನು ನಿರ್ದೇಶಿಸಿ, 25 ಚಿತ್ರಗಳನ್ನು ನಿರ್ಮಿಸಿದ್ದಾರೆ. ನಟನಾಗಿ, ರಾಜಕಾರಣಿಯಾಗಿ, ಪರ್ತಕರ್ತನಾಗಿ ತಮ್ಮದೇ ಆದ ಛಾಪು ಮೂಡಿಸಿದ ವ್ಯಕ್ತಿ. ಇಂದು ದಾಸರಿಯವರ (04/05/1942 – 30/05/2017) ಸಂಸ್ಮರಣಾ ದಿನ. – ಮೋಹನ್ ಬಾಬು ಬಿ.ಕೆ. ಅವರ ಬರಹ.
ದಾಸರು ನಾರಾಯಣ ರಾವು ಅಸಾಮಾನ್ಯ ವ್ಯಕ್ತಿ, ದೈತ್ಯ ಪ್ರತಿಭೆ. ತೆಲುಗು ಚಿತ್ರರಂಗದಲ್ಲಿ ಅಪಾರ ಕೀರ್ತಿ, ಯಶಸ್ಸು ಕಂಡವರು. ಅವರು 150 ಸಿನಿಮಾಗಳನ್ನು ನಿರ್ದೇಶಿಸಿ, 25 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ ಸಂಯೋಜನೆ, ಟಿವಿ ದಾರಾವಾಹಿಗಳ ನಿರ್ದೇಶನದಲ್ಲೂ ಅವರ ಗುರುತಿದೆ. ನಟನಾಗಿ, ರಾಜಕಾರಣಿಯಾಗಿ, ಪತ್ರಕರ್ತನಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ವ್ಯಕ್ತಿ.
ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳು ಚಿತ್ರಗಳನ್ನು ಸಹಾ ನಿರ್ದೇಶಿಸಿ ಖ್ಯಾತರಾಗಿದ್ದರು. 2006ರಲ್ಲಿ ಕೇಂದ್ರದ ಕಲ್ಲಿದ್ದಲು ಶಾಖೆಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಆಂಧ್ರದಲ್ಲಿ ‘ಉದಯಂ’ ಪತ್ರಿಕೆ ಹುಟ್ಟುಹಾಕಿದ್ದರು. ಒಬ್ಬ ವ್ಯಕ್ತಿ 150 ಸಿನಿಮಾಗಳನ್ನು ನಿರ್ದೇಶಿಸುವುದು ಎಂದರೆ ಸುಲಭವಲ್ಲ. ತೆಲುಗಿನ ಬಹುತೇಕ ಎಲ್ಲ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಕೀರ್ತಿ ಇವರದ್ದು.
ಮೂರು ರಾಷ್ಟ್ರಪ್ರಶಸ್ತಿ, ಮೂರು ಬಾರಿ ಫಿಲ್ಮ್‌ಫೇರ್ ಪುರಸ್ಕಾರ ಪಡೆದಿರುವ ದಾಸರಿಯವರಿಗೆ 2001ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಗೌರವ ಸಲ್ಲಿಸಿದೆ. ನಂದಿ ಪುರಸ್ಕಾರಗಳು ಸೇರಿದಂತೆ ಹತ್ತು – ಹಲವು ಮನ್ನಣೆ ಸಂದಿವೆ. ಇವರ ನಿರ್ದೇಶನದ ಅನೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ, ಅವುಗಳಲ್ಲಿ ಪ್ರಮುಖವಾಗಿ ಪ್ರೇಮಾಭಿಷೇಕಂ, ಬೊಬ್ಬಿಲಿ ಪುಲಿ, ಸರ್ದಾರ್ ಪಾಪಾರಾಯುಡು, ಶಿವರಂಜನಿ, ಮೇಘ ಸಂದೇಶಂ, ಕಂಟೇ ಕುತೂರನೇ ಕನು, ಒಸೆಯ್ ರಾಮುಲಮ್ಮ, ತಾಂಡ್ರ ಪಾಪಾರಾಯುಡು, ವಿಶ್ವನಾಥನಾಯಕುಡು, ಲಂಕೇಶ್ವರುಡು, ಬ್ರಹ್ಮಪುತ್ರುಡು, ಟೂ ಟೌನ್ ರೌಡಿ ಮುಂತಾದವು.
ಕನ್ನಡದಲ್ಲಿ ಸ್ವಪ್ನ, ಪೊಲೀಸ್ ಪಾಪಣ್ಣ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಿಂದಿಯಲ್ಲಿ ಸುಮಾರು 20 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 75 ವರ್ಷಗಳ ಜೀವನ ನಡೆಸಿದ ದಾಸರಿಯವರು 2017 ಮೇ 30ರಂದು ಅನಾರೋಗ್ಯದಿಂದ ನಮ್ಮನ್ನು ಆಗಲಿ ಇಂದಿಗೆ 4 ವರ್ಷಗಳಾಯಿತು. ಅವರು ನಮ್ಮನ್ನಗಲಿದರೂ ಅವರ ಚಿತ್ರಗಳು ನಮ್ಮೊಡನೆ ಇದ್ದು ಅವರ ನೆನಪನ್ನು ಹಸಿರಾಗಿಸಿವೆ.
