ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕನ್ನಡ ಚಿತ್ರರಂಗದ ಮೊದಲ ನಿರ್ದೇಶಕ ವೈ.ವಿ.ರಾವ್

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ದಕ್ಷಿಣ ಭಾರತದ ಖ್ಯಾತ ಚಿತ್ರನಿರ್ದೇಶಕ ವೈ.ವಿ.ರಾವ್‌ (30/05/1903 – 13/02/1979). ಅವರ ಜನ್ಮದಿನವಿಂದು. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ (1934) ನಿರ್ದೇಶಕರೂ ಆದ ವೈ.ವಿ.ರಾವ್ ಕುರಿತ ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ಅವರ ಬರಹ.

ವೈ.ವಿ.ರಾವ್ ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ದ ನಿರ್ದೇಶಕರು. ಮೂಕಿ ಚಿತ್ರದ ಕಾಲದಿಂದಲೂ ಸಕ್ರಿಯರಾಗಿದ್ದು ಭಾರತೀಯ ಚಿತ್ರರಂಗದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡವರು. ಯರಗುಪಾಡ ವೆಂಕಟೇಶ್ವರ ರಾವ್ ಎನ್ನುವ ಪೂರ್ಣ ನಾಮಧೇಯದ ವೈ.ವಿ.ರಾವ್ ಆಂದ್ರ ಪ್ರದೇಶದ ನೆಲ್ಲೂರಿನ ಸಮೀಪದ ಯರಗುಪಾಡದವರು. ತಂದೆ ಗೋಪಾಲರಾಯರು ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಬೋದೇವಿ. ಈ ದಂಪತಿಗಳ ಎರಡನೇ ಮಗನಾಗಿ ವೈ.ವಿ.ರಾವ್ 1903ರ ಮೇ 30ರಂದು ಜನಿಸಿದರು. ಚಿಕ್ಕಂದಿನಿಂದಲೇ ವೈ.ವಿ.ರಾವ್ ಅಭಿನಯಿಸಿಲು ಆರಂಭಿಸಿದ್ದರು. ಶಾಲಾ ಕಾಲೇಜುಗಳಲ್ಲಿ ಅವರ ಅಭಿನಯ ಜನಪ್ರಿಯವಾಗಿತ್ತು. ವೇದಂ ವೆಂಕಟರಾಯ ಶಾಸ್ತ್ರಿಗಳ ‘ಪ್ರತಾಪ ರುದ್ರಮ್’ ಮತ್ತು ‘ಬೊಬ್ಬುಲಿ’ ನಾಟಕಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿ ಎಳವೆಯಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು.

ಅವರಿಗೆ ಆಗಲೇ ಚಿತ್ರರಂಗದಿಂದ ಆಹ್ವಾನಗಳು ಬಂದಿದ್ದವು. ಆದರೆ ಅವರ ಕುಟುಂಬದ ಹಿನ್ನೆಲೆ ಇದಕ್ಕೆ ಪ್ರೋತ್ಸಾಹಕರವಾಗಿರಲಿಲ್ಲ. ತಂದೆ ಗೋಪಾಲ ರಾಯರು ಮಗ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ವಿರೋಧವಾಗಿದ್ದರು. ಅಣ್ಣ ರಾಮರಾಯರು ವಕೀಲರಾಗಿದ್ದರು. ವೆಂಕಟ ರಾಯರು ವೈದ್ಯರಾಗಬೇಕು ಎನ್ನುವುದು ತಂದೆಯವರ ಆಸೆಯಾಗಿತ್ತು. ಹೀಗಾಗಿ ಆ ಕಾಲದ ವೈದ್ಯ ಶಿಕ್ಷಣ ಎಲ್.ಎಂ.ಪಿಯನ್ನು ಓದುತ್ತಿದ್ದರು. ಆದರೆ ಎರಡು ಘಟನೆಗಳು ಅವರ ಜೀವನ ಮಾರ್ಗವನ್ನು ಬದಲಾಯಿಸಿದವು. ಅವರಿಗೆ ಅಂದಿನ ಪದ್ದತಿಯಂತೆ ವಿವಾಹವಾಗಿತ್ತು. ರಾಜಂಪೇಟೆಯ ಸರಸ್ವತಿ ಅವರ ಮಡದಿ. ಆದರೆ ಮದುವೆಯಾಗಿ ಒಂದು ವರ್ಷವಾಗುವ ಮೊದಲೇ ಪತ್ನಿ ಸಿಡುವು ರೋಗದಿಂದ ತೀರಿಕೊಂಡರು. ಇದಾದ ಒಂದೇ ವರ್ಷದಲ್ಲಿ ತಂದೆ ಕೂಡ ತೀರಿಕೊಂಡರು. ಈ ಎರಡು ಸಾವುಗಳು ರಾವ್ ಅವರನ್ನು ವೈದ್ಯ ಶಿಕ್ಷಣದಿಂದ ವಿಮುಖರಾಗುವಂತೆ ಮಾಡಿದವು.

ವೈದ್ಯಶಿಕ್ಷಣದಿಂದ ವಿಮುಖವಾಗಿ ಚಿತ್ರರಂಗದ ಕಡೆ ಬರಲು ಆಸಕ್ತಿಯೊಂದೇ ಕಾರಣವಾಗಿರಲಿಲ್ಲ. ಸೂಕ್ತ ಅವಕಾಶ ದೊರಕಿದ್ದೂ ಕಾರಣವಾಗಿತ್ತು. ಮುಂಬೈನ ಲಕ್ಷ್ಮೀ ಪಿಕ್ಚರ್ಸ್‌ ನಿರ್ದೆಶಕ ಚೌಧರಿಯವರು ರಾವ್ ಅವರ ಅಭಿನಯ ನೋಡಿ ಪ್ರಭಾವಿತರಾಗಿ ಚಿತ್ರರಂಗಕ್ಕೆ ಬರಲು ಆಹ್ವಾನ ನೀಡಿದರು. ತಮ್ಮ ಆಸಕ್ತಿಯ ಕ್ಷೇತ್ರ ಎಂಬ ಅಭಿಲಾಷೆ ಒಂದು ಕಡೆಯಾದರೆ ಎರಡು ಸಾವುಗಳಿಂದ ಮನನೊಂದಿದ್ದ ಕಾರಣ ಆ ವಾತಾವರಣದಿಂದ ದೂರವಾಗಲು ಸಾಧ್ಯವಾಗುತ್ತದೆ ಎನ್ನುವ ಇನ್ನೊಂದು ಕಾರಣದಿಂದ ಮುಂಬೈಗೆ ಹೋಗುವುದನ್ನು ರಾವ್ ಆಯ್ಕೆ ಮಾಡಿಕೊಂಡರು. ಅದು ಮೂಕಿ ಚಿತ್ರಗಳ ಕಾಲ. ಚೌಧರಿಯವರು ತಯಾರಿಸಿದ ನೀರಾ ಮತ್ತು ಆಶಾ ಎಂಬ ಮೂಕಿ ಚಿತ್ರಗಳಿಗೆ ವೈ.ವಿ.ರಾವ್ ನಾಯಕರಾಗಿ ಅಭಿನಯಿಸಿದ್ದಲ್ಲದೆ ಸಹನಿರ್ದೆಶಕನ ಕೆಲಸವನ್ನೂ ಕೂಡ ಮಾಡಿದರು. ಛಾಯಾಗ್ರಹಣ, ವರ್ಣಾಲಾಂಕಾರಗಲ್ಲದೆ ಲ್ಯಾಬೋರೇಟರಿಯಲ್ಲಿ ಕೂಡ ವೈ.ವಿ.ರಾವ್ ಅನುಭವವನ್ನು ಪಡೆದರು.

ಮುಂದೆ ಭಾರತೀಯ ಚಿತ್ರರಂಗದ ಮೊದಲ ವಾಕ್ಚಿತ್ರ ‘ಅಲಂ ಆರಾ’ ನಿರ್ಮಾಪಕರಾದ ಆರ್ದೇಶರ್‌ ಇರಾನಿಯವರ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ‘ಬುಲ್ ಬುಲ್ ಪರಸ್ತಾನ್’ವಾಯೇಜ್ ಆಫ್ ಸಬ್ಸಿನಾ’ ಸೇರಿದಂತೆ ಏಳು ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿ ಚಿತ್ರರಂಗದ ಸಮಗ್ರ ಅನುಭವವನ್ನು ಪಡೆದುಕೊಂಡರು. ಇದೇ ವೇಳೆಗೆ ವೈ.ವಿ.ರಾವ್ ಅವರ ತಾಯಿ ಅನಾರೋಗ್ಯದ ಸಮಸ್ಯೆಯಿಂದ ಬಳಲಿದರು. ತಾಯಿಯನ್ನು ನೋಡಲು ಊರಿಗೆ ಬಂದ ಅವರನ್ನು ಕುಟುಂಬದವರು ದೂರದ ಮುಂಬೈ ಬದಲು ಹತ್ತಿರದ ಸ್ಥಳದಲ್ಲಿ ಕೆಲಸವನ್ನು ಅರಸುವಂತೆ ಸೂಚಿಸಿದರು. ಆಗ ಮುಂಬೈನಂತೆ ಮದರಾಸು ಕೂಡ ಚಿತ್ರ ಚಟುವಟಿಕೆಗಳ ತಾಣವಾಗಿ ಬೆಳೆಯುತ್ತಿತ್ತು. ಚಿತ್ರರಂಗ ಬಿಡಲು ಇಚ್ಚಿಸದ ರಾವ್ ಅವರು ಮದರಾಸಿನಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಬಯಸಿದರು.

ರಘುಪತಿ ಪ್ರಕಾಶ್ ಅವರ ಸಂಸ್ಥೆಯಲ್ಲಿ ಕಲಾವಿದರಾಗಿ ಸಹ ನಿರ್ದೇಶಕರಾಗಿ ರಾವ್ ತಮ್ಮ ಭವಿಷ್ಯವನ್ನು ಕಂಡುಕೊಂಡರು. 1930ರಲ್ಲಿ ಬಿಡುಗಡೆಯಾದ ‘ಗರುಡ ಗರ್ವಭಂಗ’ ಚಿತ್ರದಲ್ಲಿ ವಿಷ್ಣುವಿನ ಪಾತ್ರದಲ್ಲಿ ಅವರು ಜನಪ್ರಿಯರಾದರು. ಅಲ್ಲಿಂದ ಮುಂದೆ ನಲವತ್ತಕ್ಕೂ ಹೆಚ್ಚು ಮೂಕಿ ಚಿತ್ರಗಳಲ್ಲಿ ಅವರು ನಾಯಕರಾಗಿ ಅಭಿನಯಿಸಿದರು. ಜ್ಞಾನಸುಂದರಿ, ಲಂಕಾದಹನ, ಸಾರಂಗಧರ, ಧರ್ಮಪತ್ನಿ, ಪ್ರಮೀಳಾರ್ಜುನ ಅವರಿಗೆ ಹೆಸರು ತಂದು ಕೊಟ್ಟು ಚಿತ್ರಗಳು. ಶ್ರೀಕೃಷ್ಣನ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಹ ಕಲಾವಿದ ಎಂಬ ಖ್ಯಾತಿ ದೇಶದೆಲ್ಲೆಡೆ ಹರಡಿತು. ಆದರೆ ಬೇರೆ ಕಡೆಯಿಂದ ಬಂದ ಅವಕಾಶಗಳನ್ನು ರಾವ್ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಿರುವಾಗ ಗುಬ್ಬಿ ವೀರಣ್ಣನವರು ತಮ್ಮ ಸ್ನೇಹಿತರೊಂದಿಗೆ ರೂಪಿಸಿದ್ದ ‘ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್’ ಸಂಸ್ಥೆಯ ಮೂಲಕ ‘ಹರಿಮಾಯೆ’ ಎಂಬ ಮೂಕಿ ಚಿತ್ರವನ್ನು ತಯಾರಿಸಲು ಉದ್ದೇಶಿಸಿದರು. ಅದಕ್ಕೆ ವೈ.ವಿ.ರಾವ್ ಅವರನ್ನೇ ನಿರ್ದೇಶಕರಾಗುವಂತೆ ಕೋರಿಕೊಂಡರು. ಬದಲಾವಣೆಯ ಅಪೇಕ್ಷೆಯಲ್ಲಿದ್ದ ರಾವ್ ಅವರೂ ಈ ಅವಕಾಶವನ್ನು ಒಪ್ಪಿಕೊಂಡರು. ಇದು ಅವರು ಕನ್ನಡ ಚಿತ್ರರಂಗದ ಸಂಪರ್ಕಕ್ಕೆ ಬರಲು ಕಾರಣವಾಯಿತು. ಈ ಚಿತ್ರ ಬೆಂಗಳೂರಿನ ಸೆಲೆಕ್ಟ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೂರು ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡಿತು. ಈ ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ನಾಯಕರಾಗಿ ಪರಿಚಿತರಾದರೆ ಬಿ.ಜಯಮ್ಮ, ಜಿ.ಸುಂದರಮ್ಮ, ಗುಬ್ಬಿ ವೀರಣ್ಣನವರೂ ಅಭಿನಯಸಿದ್ದರು.

ಕನ್ನಡದ ಮೊದಲ ವಾಕ್ಚಿತ್ರ ‘ಸತಿಸುಲೋಚನ’ ನಾಗೇಂದ್ರ ರಾಯರು ಮತ್ತು ಷಾ ಚಮನ್ ಲಾಲ್ ಡುಂಗಾಜಿಯವರಯವರ ಸಂಯುಕ್ತ ಪ್ರಯತ್ನದಿಂದ ರೂಪುಗೊಂಡಿತು. ಮೊದಲ ವಾಕ್ಚಿತ್ರದ  ನೇತೃತ್ವ ವಹಿಸುವವರು ತಾಂತ್ರಿಕ ಪರಿಣತಿಯನ್ನು ಉಳ್ಳವರೇ ಆಗಬೇಕಾಗಿತ್ತು. ರಾವ್ ಅವರು ನಾಗೇಂದ್ರ ರಾಯರ ಜೊತೆ ಅರ್ದೇಶಿರ್‌ ಇರಾನಿಯವರ ಕಂಪನಿಯಲ್ಲಿ ಕೆಲಸ ಮಾಡಿದ್ದರು. ‘ಹರಿಮಾಯೆ’ ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ಅಭಿನಯಿಸಿದ್ದರು. ಇಬ್ಬರೂ ಹತ್ತಿರದಿಂದ ವೈ.ವಿ.ರಾವ್ ಅವರ ಕಾರ್ಯಕ್ಷಮತೆಯನ್ನು ಗಮನಿಸಿದ್ದರು. ಹೀಗಾಗಿ ನಿರ್ದೇಶಕರಾಗಿ ರಾವ್ ಅವರ ಹೆಸರು ಸರ್ವಾನುಮತದಿಂದ ಪರಿಗಣಿಸಲ್ಪಟ್ಟಿತು. ವೈ.ವಿ.ರಾವ್ ಹೀಗೆ ಕನ್ನಡದ ಮೊದಲ ವಾಕ್ಚಿತ್ರದ ನಿರ್ದೇಶಕರಾದರು. ರಾಮಾಯಣದ ಯದ್ಧಕಾಂಡದಲ್ಲಿ ಉಲ್ಲೇಖಿತವಾಗಿರುವ ಇಂದ್ರಜಿತುವಿನ ಪತ್ನಿ ಸುಲೋಚನೆಯ ಸಣ್ಣ ಎಳೆಯನ್ನು ಹಿಡಿದುಕೊಂಡು ಬೆಳ್ಳಾವೆ ನರಹರಿರಾಯರು ಕಥೆಯನ್ನು ರೂಪಿಸಿದರು.

‘ಸತಿ ಸುಲೋಚನ’ ಸಿನಿಮಾ ತಂಡ. ಮಧ್ಯೆ ಸೂಟ್ ಹಾಕಿ ಕುಳಿತಿರುವವರು ನಿರ್ದೇಶಕ ವೈ.ವಿ.ರಾವ್‌.

ಭಾರತದ ಉಳಿದ ವಾಕ್ಚಿತ್ರಗಳಿಗೆ ಹೋಲಿಸಿದರೆ ‘ಸತಿ ಸುಲೋಚನ’ದಲ್ಲಿ ಹಲವಾರು ಚಮತ್ಕಾರದ ಸನ್ನಿವೇಶಗಳಿದ್ದವು. ಹೊರಾಂಗಣ ಸನ್ನಿವೇಶಗಳು ಅದರಲ್ಲಿಯೂ ಯುದ್ದದ ಸನ್ನಿವೇಶಗಳಿದ್ದವು. ಟ್ರಿಕ್ ಶಾಟ್‌ಗಳಿದ್ದವು. ಇದನ್ನೆಲ್ಲಾ ತಾಂತ್ರಿಕ ಪರಿಣತಿಯಿಂದ ರಾವ್ ಅವರು ಚಿತ್ರೀಕರಿಸಿದರು. ಇದರಲ್ಲಿ ಲಕ್ಷ್ಮಣನ ಪಾತ್ರವನ್ನೂ ಅವರು ನಿರ್ವಹಿಸಿದ್ದರು. ಅವರ ಮಡದಿ ಚಿನ್ನ ರಾಜಮ್ಮ ‘ಸತಿ ಸುಲೋಚನ’ ಚಿತ್ರದಲ್ಲಿ ಊರ್ಮಿಳೆಯ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಹದಿನಾರು ಗೀತೆಗಳಿದ್ದವು. ಕೊಲ್ಹಾಪುರದ ‘ಛತ್ರಪತಿ ಸಿನಿಟೋನ್’ನಲ್ಲಿ ಚಿತ್ರೀಕರಣಗೊಂಡ ‘ಸತಿ ಸುಲೋಚನ’ 1934ರ ಮಾರ್ಚಿ 3ರಂದು ಬೆಂಗಳೂರಿನ ‘ಪ್ಯಾರಾಮೌಂಟ್’ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಇದರ ನೇತಾರರು ಎಂಬ ಕೀರ್ತಿ ವೈ.ವಿ.ರಾವ್ ಅವರದಾಯಿತು. ಆಗಿನ ಕಾಲಕ್ಕೆ ಚಿತ್ರದ ಬಜೆಟ್ ನಲವತ್ತು ಸಾವಿರ ರೂಪಾಯಿಗಳಾಗಿತ್ತು.

ವೈ.ವಿ.ರಾವ್ ಅವರಿಗಿದ್ದ ತಾಂತ್ರಿಕ ಪರಿಣತಿ ಚಿತ್ರದ ಯಶಸ್ಸಿಗೆ ಕಾರಣವಾಯಿತು. ಚಿತ್ರದಲ್ಲಿ ಇನ್ನೂ ಕೆಲವು ಸ್ವಾರಸ್ಯಕರ ಸಂಗತಿಗಳಿದ್ದವು. ಸುಲೋಚನೆಯ ಪಾತ್ರಧಾರಿ ತ್ರಿಪುರಾಂಬ ಕಣ್ಣಿನಲ್ಲಿ ನೀರು ಬರದಿದ್ದಾಗ ಹಸಿಮೆಣಸಿನ ಕಾಯಿಯನ್ನು ಹಾಕಿ ಉಜ್ಜಲಾಯಿತು. ಆಗಲೂ ಕಣ್ಣು ಕೆಂಪಾದವೇ ಹೊರತು ನೀರು ಬರಲಿಲ್ಲ. ಕೊನೆಗೆ ಕಣ್ಣಿಗೆ ನೀರು ಚುಮುಕಿಸಿ ಕಣ್ಣೀರಿನ ಎಫೆಕ್ಟ್ ತರಲಾಗಿತ್ತು. ಆಂಜನೇಯನು ಸಂಜೀವಿನಿ ಪರ್ವತವನ್ನು ಹೊತ್ತು ತರುವುದು, ಇಂದ್ರಜಿತು ಮಾಯಾ ಸೀತೆಯನ್ನು ನಿರ್ಮಾಣ ಮಾಡಿ ರಾಮ ಲಕ್ಷ್ಮಣರ ಎದುರಿಗೇ ಕೊಲ್ಲುವುದು, ಇಂದ್ರಜಿತುವಿನ ತಲೆ ನೆಲವನ್ನು ಸೋಕದೆ ಸುಲೋಚನೆಯ ಬೊಗಸೆಯಲ್ಲಿ ಬೀಳುವುದು ಮೊದಲಾದ ಟ್ರಿಕ್ ಶಾಟ್‌ಗಳು ಸಿನಿಮಾದಲ್ಲಿ ಇದ್ದವು. ಚಿತ್ರ ಆರುವಾರಗಳ ಹೌಸ್‌ಪುಲ್ ಪ್ರದರ್ಶನ ಕಂಡಿತು. ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಕಟ್ಟಿಕೊಂಡು ಬರುವವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಇತ್ತು.

ಸತಿಸುಲೋಚನದ ನಂತರ ರಾವ್ ಅವರು ನಿರ್ದೇಶಿಸಿದ ಚಿತ್ರ ತಮಿಳಿನ ‘ಚಿಂತಾಮಣಿ’. ಇದರ ನಾಯಕಿಯಾಗಿದ್ದವರು ಕನ್ನಡದ ಪ್ರಸಿದ್ದ ರಂಗ ಕಲಾವಿದೆ ಅಶ್ವತ್ಥಮ್ಮ. ಅವರು ಈ ವೇಳೆಗಾಗಲೇ ಕನ್ನಡದ ‘ಸದಾರಮೆ’ ಚಿತ್ರದಲ್ಲಿ ಅಭಿನಯಿಸಿ ಹೆಸರು ಮಾಡಿದ್ದರು. ಈ ಚಿತ್ರದಲ್ಲಿ ಅವರ ಗಾಯನ ಮತ್ತು ಅಭಿನಯ ದಕ್ಷಿಣ ಭಾರತದಲ್ಲೆಲ್ಲಾ ಜನಪ್ರಿಯವಾಯಿತು. ಅವರ ನೀಳ ಕೇಶ ವಿನ್ಯಾಸವಂತೂ ಮಾದರಿಯಾಗಿ ಬಿಟ್ಟಿತು. ಈ ಚಿತ್ರದ ನಾಯಕರಾದ ತ್ಯಾಗರಾಜ ಭಾಗವತರ್ ಕೂಡ ಸ್ಟಾರ್ ಆಗಿ ಬಿಟ್ಟರು. ಚಿಂತಾಮಣಿ ಎನ್ನುವ ದೇವದಾಸಿ ಮತ್ತು ಬಿಲ್ವಮಂಗಲ ಎನ್ನುವ ಶ್ರೀಮಂತ ತರುಣನ ನಡುವಿನ ಪ್ರೇಮ ಪ್ರಕರಣವೇ ಚಿತ್ರದ ವಸ್ತು. ವೈ.ವಿ.ರಾವ್ ಅವರು ನಾಯಕನ ಸ್ನೇಹಿತ ಮನೋಹರ ಎನ್ನುವ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಈ ಚಿತ್ರ ನಿರ್ಮಾಪಕರಿಗೆ ದುಡ್ಡಿನ ಸುರಿಮಳೆಯನ್ನೇ ತಂದಿತು. ಸೇಲಂನಲ್ಲಿ ಈ ಚಿತ್ರದಿಂದ ಬಂದ ಲಾಭದಿಂದ ಕಟ್ಟಿದ ಚಿತ್ರಮಂದಿರಕ್ಕೆ ‘ಚಿಂತಾಮಣಿ’ ಎಂದೇ ಹೆಸರಿಡಲಾಯಿತು. ರಾವ್ ಅವರು ಈ ಚಿತ್ರದಿಂದ ಬಂದ ಲಾಭದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮತ್ತು ಮದರಾಸಿನಲ್ಲಿ ಮನೆಯನ್ನು ಕಟ್ಟಿದರು. ತಮ್ಮ ಸಂಸ್ಥೆಯ ಚಿತ್ರೀಕರಣ ಘಟಕಕ್ಕೆ ‘ಚಿಂತಾಮಣಿ’ ಎಂದೇ ಹೆಸರನ್ನು ಇಡಲಾಯಿತು.

‘ಜಗದೀಶ್ ಫಿಲಂಸ್’ ಎಂಬ ಸ್ವಂತ ನಿಮಾಣ ಸಂಸ್ಥೆ ಸ್ಥಾಪಿಸಿದ ವೈ.ವಿ.ರಾವ್ ಅವರು 1934ನೇ ಇಸವಿಯಲ್ಲಿ ‘ಮಳ್ಳಿ ಪೆಳ್ಳಿ’ ತೆಲಗು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಇದೂ ಕೂಡ ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಗಳಿಸಿತು. ನಂತರ ‘ವಿಶ್ವಮೋಹಿನಿ’ ತ್ರಿಕೋನ ಪ್ರೇಮದ ವಸ್ತುವುಳ್ಳ ಚಿತ್ರವನ್ನು ರಾವ್ ನಿರ್ಮಿಸಿದರು. ಆ ಕಾಲದಲ್ಲಿಯೇ ಚಿತ್ರನಟಿಯೊಬ್ಬಳ ಬದುಕಿನ ವೈರುಧ್ಯಗಳನ್ನು ತೋರಿಸಿದ್ದು ಈ ಚಿತ್ರದ ಸಾಧನೆ. ಈ ಎರಡು ಸಾಮಾಜಿಕ ಚಿತ್ರಗಳ ನಂತರ ವಿಡಂಬನೆಯನ್ನು ಪ್ರಧಾನವಾಗಿ ಹೊಂದಿದ ವಿಭಿನ್ನ ಚಿತ್ರ ‘ತಾಸಿಲ್ದಾರ್’ ಅನ್ನು  ರಾವ್ ನಿರ್ದೇಶಿಸಿದರು.

1941ರಲ್ಲಿ ವೈ.ವಿ.ರಾವ್ ‘ಸಾವಿತ್ರಿ’ ಚಿತ್ರ ನಿರ್ದೇಶಿಸಿದರು. ಪುರಾಣ ಪ್ರಸಿದ್ದವಾದ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಪ್ರಸಿದ್ದ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮೀ ಅವರು ನಾರದನ ಪಾತ್ರದಲ್ಲಿ ಅಭಿನಯಿಸಿ ಎಂಟು ಸೊಗಸಾದ ಗೀತೆಗಳನ್ನು ಹಾಡಿದ್ದರು. ಸಾವಿತ್ರಿಯ ಪಾತ್ರದಲ್ಲಿ ಶಾಂತ ಅಪ್ಟೆ ಕಾಣಿಸಿಕೊಂಡಿದ್ದರೆ ಸತ್ಯವಾನ್ ಆಗಿ ಸ್ವತಃ ವೈ.ವಿ.ರಾವ್ ಅವರೇ ಅಭಿನಯಿಸಿದ್ದರು. ರಾವ್ ಅವರು ಮುಂದೆ ನಿರ್ದೇಶಿಸಿದ ಚಿತ್ರ ‘ಲವಂಗಿ’. ಮೊಗಲ್ ದೊರೆ ಷಹಜಹಾನನ ಕಾಲದಲ್ಲಿ ಇದ್ದ ಜಗನ್ನಾಥ ಕವಿಯ ಜೀವನ ಚಿತ್ರಣವನ್ನು ಹೊಂದಿದ್ದ ಈ ಚಿತ್ರ ಕೂಡ ಯಶಸ್ಸು ಪಡೆದುಕೊಂಡಿತು.

‘ಮಳ್ಳಿ ಪೆಳ್ಳಿ’ (1939) ತೆಲುಗು ಚಿತ್ರದಲ್ಲಿ (Photo Courtesy: Telugu Cinema Prapamcham)

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ನಿರ್ದೇಶಿಸಿದ್ದ ರಾವ್ ಇನ್ನೊಂದು ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದು 22 ವರ್ಷಗಳ ನಂತರ. 1956ರಲ್ಲಿ ತೆರೆ ಕಂಡ ‘ಭಾಗ್ಯಚಕ್ರ’ವನ್ನು ಅವರು ನಿರ್ದೇಶಿಸುವ ಹೊತ್ತಿಗೆ 61 ಕನ್ನಡ ಚಿತ್ರಗಳು ಬಂದಿದ್ದವು. ಈ ಚಿತ್ರದ ಮೂಲಕ ಗೀತಪ್ರಿಯ ಚಿತ್ರಸಾಹಿತಿಯಾಗಿ ಪರಿಚಿತರಾದರು. ಖ್ಯಾತ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಚಿತ್ರಕಥೆ ಬರೆದಿದ್ದರು. ಆಗಲೇ ಹಿಂದಿ ಚಿತ್ರರಂಗದ ಅನುಭವನ್ನು ಪಡೆದಿದ್ದ ಅವರು ಶಾಟ್ ಡಿವಿಜನ್‌ಗಳನ್ನು ರೂಪಿಸಿದ್ದರು. ಸಾಮಾಜಿಕ ವಸ್ತುವನ್ನು ಹೊಂದಿದ್ದ ಚಿತ್ರ ಹಲವು ಪ್ರಯೋಗಶೀಲ ಅಂಶಗಳನ್ನು ಹೊಂದಿತ್ತು.

ವೈ.ವಿ.ರಾವ್ ಅವರು ನಿರ್ದೇಶಿಸಿದ ಮೂರನೇ ಕನ್ನಡ ಚಿತ್ರ ‘ನಾಗಾರ್ಜುನ’ ಮೂರು ಭಾಷೆಗಳಲ್ಲಿ ನಿರ್ಮಾಣಗೊಂಡ ಈ ಚಿತ್ರದ ನಿರ್ಮಾಪಕರು ಮಲ್ಲಿಕಾರ್ಜುನ. ಅವರು ಬೆಂಗಳೂರಿನ ‘ಶಿವಾಜಿ’ ಚಿತ್ರಮಂದಿರದ ಮಾಲೀಕರು ‘ಶ್ರೀಕೃಷ್ಣ ಗಾರುಡಿ’ ಮೊದಲಾದ ಚಿತ್ರಗಳ ನಿರ್ಮಾಪಕರೂ ಮೇಯರ್ ಕೂಡ ಆಗಿದ್ದ ರಾಜಕಾರಣಿ ನಾಗಣ್ಣನವರ ಪುತ್ರ. ಮೂರೂ ಭಾಷೆಗಳಿಗೂ ವೈ.ವಿ.ರಾವ್ ಅವರೇ ನಿರ್ದೇಶಕರು. ಎಲ್ಲಾ ಅವತರಣಿಕೆಗೂ ರಾಜನ್ – ನಾಗೇಂದ್ರ ಅವರೇ ಸಂಗೀತ ನೀಡಿದ್ದರು. ರಾಜ್ ಕುಮಾರ್ ಅರ್ಜುನ ಮತ್ತು ನಾಗಾರ್ಜುನ ಹೀಗೆ ದ್ವಿಪಾತ್ರವನ್ನು ವಹಿಸಿದ್ದರು. ಬಲರಾಮನಾಗಿ ಅಶ್ವತ್ಥ್ ಅಭಿನಯಿಸಿದ್ದರೆ ಸುಭದ್ರೆಯಾಗಿ ಹರಿಣಿ ಅಭಿನಯಿಸಿದ್ದರು. ಕೃಷ್ಣನಾಗಿ ಕಾಂತರಾವ್  ಪಾರ್ವತಿಯಾಗಿ ಸಂಧ್ಯಾ ಉಲೂಪಿಯಾಗಿ ವರಲಕ್ಷ್ಮಿ ಎಲ್ಲಾ ಅವತರಣಿಕೆಯಲ್ಲಿಯೂ ಇದ್ದರು. ವಿಷ್ಣುವರ್ಧನ್ ಅವರ ತಂದೆ ಎಚ್.ಎಲ್.ನಾರಾಯಣರಾಯರು ಸಂಭಾಷಣೆ ರಚಿಸಿದ್ದರು. ‘ನಾಗಾರ್ಜುನ’ ಯಶಸ್ಸಿನ ನಂತರ ವೈ.ವಿ.ರಾವ್ ಅವರು ‘ಜಗದೀಶ್ವರಿ ಫಿಲಂಸ್’ ಎಂಬ ಲಾಂಛನವನ್ನು ಸ್ಥಾಪಿಸಿ ‘ಹೆಣ್ಣಿನ ಬಾಳು ಕಣ್ಣೀರು’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ತಾವೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ರಾಜ್ ಕುಮಾರ್, ಎಚ್.ಪಿ.ಸರೋಜ, ಆದವಾನಿ ಲಕ್ಷ್ಮೀದೇವಿ, ಹರಿಣಿ, ಅಶ್ವತ್ಥ್, ನರಸಿಂಹ ರಾಜು ಮೊದಲಾದವರು ಪ್ರಮುಖ ತಾರಾಗಣದಲ್ಲಿದ್ದರು. ಚಿತ್ರ ಸಂಪೂರ್ಣವಾದರೂ ಬಿಡುಗಡೆಯಾಗಲಿಲ್ಲ.

1971ರಲ್ಲಿ ವೈ.ವಿ.ರಾವ್ ಅವರು ‘ಜಿವಿತ್ ಆಮಚಿ ಆಶಾಂ’ ಕೊಂಕಣಿ ಚಿತ್ರವನ್ನು ನಿರ್ದೇಶಿಸಿದರು. ಪ್ರೀಮಿಯರ್ ಸ್ಟುಡಿಯೋ, ಬೃಂದಾವನ ಗಾರ್ಡನ್, ಜೋಗದಲ್ಲಿ ಚಿತ್ರೀಕರಣ ನಡೆಯಿತು. ಇದು ರಾವ್ ಅವರ ಕೊನೆಯ ಬೆಳ್ಳಿತೆರೆಯ ನಂಟಾಯಿತು. ಈ ಚಿತ್ರ ಬಂದ ಎರಡು ವರ್ಷದ ನಂತರ ಎಂದರೆ  1979ರ ಫೆಬ್ರವರಿ 13ರಂದು ಬೆಂಗಳೂರಿನ ತಮ್ಮ ಮಲ್ಲೇಶ್ವರಂನ ಮನೆಯಲ್ಲಿ ವೈ.ವಿ.ರಾವ್ ಕೊನೆಯುಸಿರೆಳೆದರು. ವೈ.ವಿ.ರಾವ್ ಅವರಿಗೆ ಅಂತರ್ಜಲ ಕಂಡು ಹಿಡಿಯುವ ಕೌಶಲ್ಯ ಕೂಡ ಇತ್ತು. ತಾಲ್ಲೋಕು ಪಂಚಾಯತಿ ಹಾಗೂ ಜಿಲ್ಲಾ ಆಡಳಿತಗಳೂ ಕೂಡ ಅವರ ನೆರವನ್ನು ಪಡೆದಿದ್ದವು. ಇಂದಿಗೂ ಅವರ ಮನೆಯಲ್ಲಿ ಅಂತರ್ಜಲ ಶೋಧನೆಗೆ ಬಂದ ಬೇಡಿಕೆ ಪತ್ರಗಳು, ಶೋಧನೆಗೆ ಸಂಭಾವನೆ ನೀಡಿದ ದಾಖಲೆಗಳು ಲಭ್ಯವಿದೆ.

ವೈ.ವಿ.ರಾವ್ ಮೊದಲ ಮಡದಿ ರಾಜಂಕೇರಿಯ ಸರಸ್ವತಿ ಮದುವೆಯಾದ ವರ್ಷದಲ್ಲೇ ಸಿಡುಬು ರೋಗದಿಂದ ನಿಧನರಾದರು. ಎರಡನೇ ಮಡದಿ ರಾಜಮ್ಮ ಮಕ್ಕಳಾಗದ ಚಿಂತೆಯಲ್ಲಿ ತವರನ್ನು ಸೇರಿ 1970ರಲ್ಲಿ ನಿಧನರಾದರು. ಮೂರನೇ ಮಡದಿ ಚಿನ್ನ ರಾಜಮ್ಮ ಕಲಾವಿದೆ ಕೂಡ ‘ಚಿಂತಾಮಣಿ’, ‘ಸತಿ ಸುಲೋಚನಾ’ಚಿತ್ರಗಳಲ್ಲಿ ಅವರು ಅಭಿನಯಸಿದ್ದಾರೆ. ಈ ಮಡದಿಯಿಂದ ಜನಿಸಿದ ಮೊದಲ ಮಗಳು ಸರಸ್ವತಿ ಆರನೇ ವಯಸ್ಸಿನಲ್ಲಿ ಅಕಾಲ ಮೃತ್ಯುವಿಗೆ ಒಳಗಾದಳು. ಎರಡನೇ ಮಗಳು ವಿಜಯಲಕ್ಷ್ಮಿ ಕೊನೆಯ ದಿನಗಳಲ್ಲಿ ತಂದೆಯನ್ನು ಕಾಪಾಡಿದವರು. ನಾಗೇಶ್ವರ ರಾವ್ ಈ ಮಗಳ ಮಗ. ಶಶಿರೇಖಾ ಮತ್ತು ಜಮುನ ಹೆಣ್ಣು ಮಕ್ಕಳಾದರೆ ಮಧುಕರ ರಾವ್ ಎರಡನೇ ಮಗ. ವೈ.ವಿ.ರಾವ್ ಅವರ ಬೆಂಗಳೂರಿನ ಮನೆಯನ್ನು ಕಿರುತೆರೆ ಧಾರಾವಾಹಿಗಳ ಚಿತ್ರೀಕರಣಕ್ಕೆ ನೀಡುವ ಮೂಲಕ ಮಗಳು ವಿಜಯಲಕ್ಷ್ಮಿ ಬಣ್ಣದ ನಂಟನ್ನು ಉಳಿಸಿಕೊಂಡಿದ್ದಾರೆ. ನಾಲ್ಕನೇ ಹೆಂಡತಿ ರುಕ್ಮಿಣಿಯವರ ಮಗಳು ಜ್ಯೂಲಿ ಲಕ್ಷ್ಮಿಯವರಂತೂ  ಕಲಾವಿದೆಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಮಗಳು ಐಶ್ವರ್ಯ ಕೂಡ ಕಲಾವಿದೆ. ವೈ.ವಿ.ರಾವ್ ಅವರ ಅಣ್ಣ ಹನುಮಂತ ರಾವ್ ಅವರ ಮಗ ರಾಮಚಂದ್ರ ರಾವ್, ಅವರ ನೆನೆಪನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದು 2003ರಲ್ಲಿ ವೈ.ವಿ.ರಾವ್ ಅವರ ಜನ್ಮಶತಮಾನೋತ್ಸ ಆಚರಿಸಿದ್ದರು.

ಪುತ್ರಿ ಲಕ್ಷ್ಮಿಯೊಂದಿಗೆ (ಪಂಚಭಾಷಾ ತಾರೆ ಲಕ್ಷ್ಮಿ) ವೈ.ವಿ.ರಾವ್‌.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ) ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ

ಮೆಥೆಡ್ ಆಕ್ಟರ್ ಎಸ್‌ವಿಆರ್

ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್‌ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ವಿ.ಸೋಮಶೇಖರ್

ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ವಿ.ಸೋಮಶೇಖರ್‌ ಅವರ ಹುಟ್ಟೂರು. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ಅವರಿಗೆ ಶಾಲೆ ಓದುತ್ತಿದ್ದಾಗಲೇ ಸಿನಿಮಾದೆಡೆ ವ್ಯಾಮೋಹ ಶುರುವಾಗಿತ್ತು.