ಹಿಂದಿ ಸಿನಿಮಾದ ಯಶಸ್ವೀ ರೊಮ್ಯಾಂಟಿಕ್ ಜೋಡಿಗಳಲ್ಲೊಂದು ರಾಜ್‍ಕಪೂರ್ – ನರ್ಗಿಸ್ ಜೋಡಿ. ನಾಯಕಿ ಪ್ರಧಾನ ಚಿತ್ರಗಳಲ್ಲಿ ಯಶಸ್ಸು ಕಂಡ ಪ್ರತಿಭಾವಂತ ನಟಿ. ಅವರ ಜನ್ಮನಾಮ ಫಾತಿಮಾ ರಷೀದ್. ಹುಟ್ಟಿದ್ದು ಜೂನ್ 1, 1929ರಂದು. ಅವರ ತಾಯಿ ಜದ್ದಾನ್‍ಬಾಯಿ ಹಿಂದೂಸ್ತಾನಿ ಸಂಗೀತಗಾರ್ತಿ. ಆಗಿನ ಕಾಲಕ್ಕೆ ನಟಿ, ಚಿತ್ರನಿರ್ಮಾಪಕಿ, ಸಂಗೀತ ಸಂಯೋಜಕಿಯಾಗಿ ಹೆಸರು ಮಾಡಿದ್ದವರು. ತಂದೆ ಉತ್ತಮ್‍ಚಂದ್ ಮೋಹನ್‍ಚಂದ್ ಅವರಿಗೆ ಹಿಂದಿ ಚಿತ್ರರಂಗದ ಒಡನಾಟವಿತ್ತು. ನರ್ಗಿಸ್ `ತಲಾಷ್-ಎ-ಹಕ್’ (1935) ಚಿತ್ರದಲ್ಲಿ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದರು. ಐದು ವರ್ಷದ ಹುಡುಗಿ ಆಗ ಬೇಬಿ ನರ್ಗಿಸ್ ಎಂದೇ ಹೆಸರಾಗಿದ್ದರು.
ಮೆಹಬೂಬ್ ನಿರ್ದೇಶನದ `ತಕ್ದೀರ್’ (1943) ಚಿತ್ರದೊಂದಿಗೆ ನರ್ಗಿಸ್ ನಾಯಕಿಯಾದರು. ಆದರೆ ಅವರಿಗೆ ಹೆಸರು ತಂದುಕೊಟ್ಟದ್ದು ರಾಜ್‍ಕಪೂರ್ ಸಿನಿಮಾಗಳು. ರಾಜ್‍ಕಪೂರ್ – ನರ್ಗಿಸ್ ಜೋಡಿಯ `ಬರ್ಸಾತ್’, `ಅಂದಾಝ್’, `ಆವಾರಾ’, `ಶ್ರೀ 420′, `ಅನ್‍ಹೋನಿ’ ಚಿತ್ರಗಳು ದೊಡ್ಡ ಯಶಸ್ಸು ಕಂಡವು. ಈ ಜೋಡಿಯ ಹಲವು ಸಿನಿಮಾಗಳು ಸಾರ್ವಕಾಲಿಕ ರೊಮ್ಯಾಂಟಿಕ್ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿವೆ. ತೆರೆ ಮೇಲೆ ಪ್ರೇಮಿಗಳಾಗಿದ್ದ ಈ ಜೋಡಿ ತೆರೆಯಾಚೆಗೂ ಪ್ರೀತಿಯ ಸುಳಿಗೆ ಸಿಕ್ಕಿತ್ತು. ಕಪೂರ್ ಕುಟುಂಬ ಮದುವೆಗೆ ಸಮ್ಮತಿ ನೀಡಲಿಲ್ಲ. ಕೊನೆಗೆ ನರ್ಗಿಸ್ ತಮ್ಮ `ಮದರ್ ಇಂಡಿಯಾ’ ಚಿತ್ರದ ಸಹನಟ ಸುನೀಲ್ ದತ್‍ರನ್ನು ವಿವಾಹವಾದರು.

`ಬಬೂಲ್’, `ಜೋಗನ್’ ಸಿನಿಮಾ ಪಾತ್ರಗಳು ನರ್ಗಿಸ್‍ಗೆ ಕ್ಲಾಸಿಕ್ ಹೀರೋಯಿನ್ ಪಟ್ಟ ತಂದಿತ್ತವು. ಆದರೆ ಅವರ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಪಾತ್ರ `ರಾಧಾ’. 1957ರಲ್ಲಿ ತಯಾರಾದ `ಮದರ್ ಇಂಡಿಯಾ’ ಚಿತ್ರದ ಪಾತ್ರವಿದು. ಶ್ರೇಷ್ಠ ನಟಿ ವಿಭಾಗದಲ್ಲಿ ಈ ಪಾತ್ರ ಅಕಾಡೆಮಿ ಪುರಸ್ಕಾರಕ್ಕೂ ನಾಮನಿರ್ದೇಶನಗೊಂಡಿತ್ತು. `ಮದರ್ ಇಂಡಿಯಾ’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ನರ್ಗಿಸ್ ಫಿಲ್ಮ್‍ಫೇರ್ ಹಾಗೂ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದರು. ರಾಷ್ಟ್ರ ಪ್ರಶಸ್ತಿ ಆರಂಭವಾದ ವರ್ಷದಲ್ಲೇ ಶ್ರೇಷ್ಠ ನಟಿ ವಿಭಾಗದಲ್ಲಿ ನರ್ಗಿಸ್ ಪುರಸ್ಕೃತರಾದರು. `ರಾತ್ ಔರ್ ದಿನ್’ (1967) ಚಿತ್ರದ ಅಭಿನಯಕ್ಕಾಗಿ ಅವರಿಗೆ ಈ ಗೌರವ ಸಂದಿತ್ತು.

ಪತಿ ಸುನೀಲ್ ದತ್ ಜೊತೆ ನರ್ಗಿಸ್ `ಅಜಂತಾ ಆರ್ಟ್ಸ್ ಕಲ್ಚರಲ್ ಟ್ರೂಪ್’ ಆರಂಭಿಸಿದ್ದರು. ಚಿತ್ರರಂಗದ ಮುಂಚೂಣಿ ತಾರೆಯರು, ಸಂಗೀತ ನಿರ್ದೇಶಕರು ಈ ತಂಡದಲ್ಲಿದ್ದರು. ನರ್ಗಿಸ್ ಆಗಿಂದಾಗ್ಗೆ ತಮ್ಮ ತಂಡದೊಂದಿಗೆ ದೇಶ – ವಿದೇಶಗಳಲ್ಲಿ ಸ್ಟೇಜ್ ಷೋಗಳನ್ನು ಆಯೋಜಿಸುತ್ತಿದ್ದರು. ಚಿತ್ರರಂಗದಿಂದ ದೂರವಾದ ನಂತರ ನರ್ಗಿಸ್ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1980ರಲ್ಲಿ ರಾಜ್ಯಸಭಾ ಸದಸ್ಯತ್ವದ ಗೌರವ ಅವರದಾಗಿತ್ತು. 1958ರಲ್ಲಿ ನರ್ಗಿಸ್‍ಗೆ `ಪದ್ಮಶ್ರೀ’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ನರ್ಗಿಸ್ ಮತ್ತು ಸುನೀಲ್ ದತ್ ದಂಪತಿಗೆ ಮೂವರು ಮಕ್ಕಳು – ಸಂಜಯ್, ನಮ್ರತಾ ಮತ್ತು ಪ್ರಿಯಾ. ಪುತ್ರ ಸಂಜಯ್ ದತ್ `ರಾಕಿ’ (1982) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಸಂಜಯ್ ಇಂದಿಗೂ ಬಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ರಾಜಕೀಯದತ್ತ ಹೊರಳಿದ ನರ್ಗಿಸ್ – ಸುನೀಲ್ ದತ್ ಪುತ್ರಿ ಪ್ರಿಯಾ 2005ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಮತ್ತೊಬ್ಬ ಪುತ್ರಿ ನಮ್ರತಾ ನಟ ಕುಮಾರ್ ಗೌರವ್ ಅವರನ್ನು ವರಿಸಿದ್ದಾರೆ. ಪಿತ್ತಜನಕಾಂಗ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ನರ್ಗಿಸ್ 1981 ಮೇ 3ರಂದು ಕೊನೆಯುಸಿರೆಳೆದರು. ನರ್ಗಿಸ್‍ರ ನೆನಪಿಗಾಗಿ `ನರ್ಗಿಸ್ ದತ್ ಮೆಮೋರಿಯಲ್ ಕ್ಯಾನ್ಸರ್ ಫೌಂಡೇಷನ್’ ಅಸ್ತಿತ್ವಕ್ಕೆ ಬಂತು. ರಾಷ್ಟ್ರೀಯ ಐಕ್ಯತೆ ಸಾರುವ ಶ್ರೇಷ್ಠ ಸಿನಿಮಾ ಪ್ರಶಸ್ತಿಯನ್ನು ಪ್ರತೀ ವರ್ಷ ನರ್ಗಿಸ್ ಹೆಸರಿನಲ್ಲಿ ನೀಡಲಾಗುತ್ತಿದೆ. ಈ ಮೂಲಕ ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ನಟಿಗೆ ಗೌರವ ಸಂದಾಯವಾಗುತ್ತಿದೆ.
