ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

ಪೋಸ್ಟ್ ಶೇರ್ ಮಾಡಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ)

ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ ಮಾಡಿದಂತಹ ವಂಶ. ಇವರ ಹಿರಿಯರು ಮೈಸೂರು ಸಂಸ್ಥಾನದ ರಾಜ ಪುರೋಹಿತರಾಗಿದ್ದರು. ಕು.ರ.ಸೀಯವರ ತಂದೆ ಕುಮಾರಸ್ವಾಮಿ ಶಾಸ್ತ್ರಿಗಳೂ ಕೂಡ ಅರಮನೆ ಪುರೋಹಿತರಾಗಿದ್ದರು. ಜಯಚಾಮರಾಜೇಂದ್ರ ಒಡೆಯರು ಮತ್ತು ಅವರಿಬ್ಬರ ಸೋದರಿಯರ ವಿವಾಹ ಮಹೂರ್ತವನ್ನು ಅವರು ನಿಶ್ಚಯಿಸಿದ್ದರು. ತೆಲುಗು, ಕನ್ನಡ, ಸಂಸ್ಕೃತ ಮೂರೂ ಭಾಷೆಗಳಲ್ಲಿ ಕೂಡ ಪ್ರಾವಿಣ್ಯತೆಯನ್ನು ಪಡೆದಿದ್ದರು. ಸುಬ್ಬಮ್ಮ ಅವರ ಅಂತರಂಗವನ್ನು ಅರಿತ ಸತಿ. ದುರ್ಗಾಂಬ ಮತ್ತು ವಿಶಾಲಾಕ್ಷಿ ಎಂಬ ಇಬ್ಬರು ಹೆಣ್ಣಮಕ್ಕಳಿದ್ದರೂ ಗಂಡು ಮಗುವಿನ ಹಂಬಲ ಅವರನ್ನು ಸೆಳೆಯುತ್ತಿತ್ತು. ನವಗ್ರಹ ಹೋಮದಲ್ಲಿ ಶಾಸ್ತ್ರಿಗಳು ನಿರತರಾದಾಗ ಹೋಮಕುಂಡದಿಂದ ಜ್ವಾಲೆ ಮಡದಿಯ ಗರ್ಭವನ್ನು ಪ್ರವೇಶಿಸಿದ ಅನುಭವವಾಯಿತಂತೆ. 1920ರ ಸೆಪ್ಟಂಬರ್ 22ರಂದು ಗಂಡುಮಗುವಿನ ಜನನವಾಯಿತು. ಹೋಮದ ಅನುಭವದ ನೆನಪಾಗಿ ರವಿ ಮತ್ತು ತಂದೆಯ ಹೆಸರಾದ ಸೀತಾರಾಮ ಶಾಸ್ತ್ರಿ ಎರಡೂ ಸೇರಿ ಮಗುವಿನ ಹೆಸರು ರವಿ ಸೀತಾರಾಮ ಶಾಸ್ತ್ರಿ ಎಂದಾಯಿತು. ಮುಂದೆ ಇನ್ಷಿಯಲ್‌ನಲ್ಲಿ ಸೇರಿ ಕು.ರ.ಸೀತಾರಾಮ ಶಾಸ್ತ್ರಿ ಎಂದಾಯಿತು.

ಕು.ರ.ಸೀ ಬಾಲ್ಯದಿಂದಲೂ ವೇದ ಅಧ್ಯಯನದಲ್ಲೇ ನಿರತರು. ಅರಮನೆಯ ಒಡನಾಟವೂ ಅವರಿಗೆ ಲಭಿಸಿತು. ಇದರ ಜೊತೆಗೆ ವೆಸ್ಲಿಯನ್ ಶಾಲೆಯಲ್ಲಿ ಆಧುನಿಕ ಶಿಕ್ಷಣವೂ ದೊರಕಿತು. ಅಪಾರ ಪ್ರತಿಭಾವಂತರಾದ ಅವರಿಗೆ ಹನ್ನೆರಡನೇ ವರ್ಷಕ್ಕೇ ಕಾವ್ಯರಚನೆಯೂ ಸಿದ್ದಿಸಿತು. ಅಭಿನಯದಲ್ಲೂ ಆಸಕ್ತಿ ಶಾಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅವರ ಪ್ರತಿಭೆ ಗಮನಿಸಿ ದೇವುಡು ನರಸಿಂಹ ಶಾಸ್ತ್ರಿಗಳು ಪ್ರೋತ್ಸಾಹ ನೀಡಿದರು. ಸೆಂಟ್ರಲ್ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಕಲಿಯುವಾಗ ಇಂಗ್ಲೀಷ್ ಸಾಹಿತ್ಯದ ಕಡೆಗೆ ಕೂಡ ಒಲವು ಹರಿಯಿತು. ಗಮಕ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‌ ಪಡೆದ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಕೂಡ ಪ್ರವೇಶಿಕೆಯನ್ನು ಪಡೆದರು.

1937ರಲ್ಲಿ ಕು.ರ.ಸೀ ತಮ್ಮ ನಾಲ್ವರು ಸ್ನೇಹಿತರೊಡಗೂಡಿ ಯುನೈಟೆಡ್ ಜಾಲಿ ಅಮೆಚ್ಯೂರ್ಸ್‌ ಆರಂಭಿಸಿದರು. ಅವರದೇ ‘ವರದಕ್ಷಿಣೆ’ ನಾಟಕ ಸಾಕಷ್ಟು ಹೆಸರನ್ನು ಮಾಡಿತು. ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ಹಿಂದೂಸ್ತಾನ್ ಏರೋ ನಾಟಿಕ್ಸ್ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಸೇರಿಕೊಂಡರು. ಇದಾದ ಆರು ತಿಂಗಳಲ್ಲೇ ಲೆಕ್ಕ ಪತ್ರ ಇಲಾಖೆಯ ಉಪನಿಯಂತ್ರಕ ಅಧಿಕಾರಿಯಾಗಿದ್ದ ಟಿ.ವಿ.ಎಸ್.ನಾರಣ್ಣಯ್ಯನವರ ಮಗಳು ಪದ್ಮಿನಿ ದೇವಿಯನ್ನು ವಿವಾಹವಾದರು. ಮಾವನವರ ಬೆಂಬಲ ಇದ್ದಿದ್ದರಿಂದ ಹಲವು ಉದ್ಯೋಗ ಬದಲಾಯಿಸಿ ಬೆಳಗಾವಿಯ ರಾಜಾಲಖಮ ಗೌಡ ಕಾಲೇಜಿನಲ್ಲಿ ಕಾನೂನು ಕಲಿಯಲು ತೊಡಗಿದರು. ಅನೇಕ ಪ್ರಶಸ್ತಿಗಳ ಸುರಿಮಳೆಯನ್ನೇ ಅವರು ಇಲ್ಲಿ ಪಡೆದುಕೊಂಡರು. ಈ ಅವಧಿಯಲ್ಲೇ ಅವರಿಗೆ ಗುಬ್ಬಿ ವೀರಣ್ಣನವರ ಪರಿಚಯವಾಯಿತು. ರಂಗಭೂಮಿಯ ಕಡೆಗೆ ಅವರ ಬದುಕು ಚಲಿಸಿತು. ‘ಹೇಮರೆಡ್ಡಿ ಮಲ್ಲಮ್ಮ’ ಚಿತ್ರದ ಮೂಲಕ ಚಿತ್ರರಂಗದ ಪರಿಚಯವೂ ಆಯಿತು.

‘ಹೇಮರೆಡ್ಡಿ ಮಲ್ಲಮ್ಮ’ ಗುಬ್ಬಿ ಕಂಪನಿಯಲ್ಲಿ ಪ್ರಸಿದ್ಧವಾಗಿದ್ದ ನಾಟಕ. ಮೂಲ ನಾಟಕವನ್ನು ರಚಿಸಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿಗಳೇ ಚಿತ್ರದ ಸಾಹಿತ್ಯ ರಚಿಸಿದ್ದರು. ಹೊನ್ನಪ್ಪನವರಿಗೆ ಚಿತ್ರದಲ್ಲಿ ಈಶ್ವರನ ಪಾತ್ರ ನೀಡಲಾಗಿತ್ತು. ಮಲ್ಲಮ್ಮನ ಭಕ್ತಿಯನ್ನು ಪರೀಕ್ಷೆ ಮಾಡುವ ಕೊನೆಗೆ ಆಕೆಗೆ ಒಲಿಯುವ ಪರಶಿವನ ಪಾತ್ರ ಇಡೀ ಚಿತ್ರದ ಜೀವನಾಡಿಯಾಗಿತ್ತು. ಆಗ ತಾನೆ ಚಿತ್ರರಂಗವನ್ನು ಪ್ರವೇಶಿಸಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳು ಮಲ್ಲಮ್ಮನ ಮೈದುನ ವೇಮನನ ಪಾತ್ರವನ್ನು ಮಾಡಿದ್ದರು. ವೇಮನ ಕೆಟ್ಟ ಮಾರ್ಗಕ್ಕೆ ಇಳಿದವನು. ಅತಿ ದುಂದು ವೆಚ್ಚದ ಜೊತೆಗೆ ಲಲಿತ ಎನ್ನುವ ವೇಶ್ಯೆಯ ಸಹವಾಸ ಕೂಡ ಇದೆ. ಸರಸದಲ್ಲಿ ಮೈಮರೆತಿರುವ ಸನ್ನಿವೇಶದಲ್ಲಿ ಲಲಿತ ಅವನ ಸಂಗಡ   ‘ನಿಮ್ಮ ಅತ್ತಿಗೆಯ ಮೂಗಿನಲ್ಲಿರುವ ಬೆಲೆ ಬಾಳುವ ಮೂಗತಿ ಬೇಕು’ ಎಂದು ಕೇಳಿ ಬಿಡುತ್ತಾಳೆ. ಅದಕ್ಕೆ ಒಪ್ಪಿ ಬಂದ ವೇಮನನಿಗೆ ಅದನ್ನು ಕೇಳುವುದು ಹೇಗೆ ಎನ್ನುವ ಜಿಜ್ಞಾಸೆ. ಊಟ ಮಾಡುವಾಗ ಈ ಗೊಂದಲದಿಂದಲೇ ಅತ್ತಿಗೆಯ ಮುಖವನ್ನೇ ನೋಡುತ್ತಿರುತ್ತಾನೆ. ಮೈದನನ ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲವನ್ನು ಅರ್ಥ ಮಾಡಿಕೊಂಡ ಮಲ್ಲಮ್ಮನೇ ‘ಏನು ಬೇಕು ನಿನಗೆ?’ಎಂದು ಕೇಳುತ್ತಾಳೆ. ಅವನು ತೊದಲುತ್ತಾ ‘ಮೂಗುತಿ’ ಎಂದಾಗ, ಯಾರಿಗೆ ಎಂದು ಕೂಡ ಕೇಳದೆ ತೆಗೆದು ಕೊಡುತ್ತಾಳೆ.

ಅದು ಸಿಕ್ಕಿದೆ ಎನ್ನುವ ಸಂಭ್ರಮದಲ್ಲಿ ತೆಗೆದುಕೊಂಡು ಓಡಿ ಬರುತ್ತಿರುವಾಗ ಅದು ಬಿದ್ದು ಕಳೆದು ಹೋಗುತ್ತದೆ. ವೇಮನ ಹುಚ್ಚನಂತೆ ಅದನ್ನು ಹುಡುಕುತ್ತಿರುವಾಗ ಅಲ್ಲಿಗೆ ಪರಶಿವನು ಜಂಗಮನ ರೂಪದಲ್ಲಿ ಬರುತ್ತಾನೆ. ಈ ಪಾತ್ರವನ್ನು ಹೊನ್ನಪ್ಪ ಭಾಗವತರ್ ನಿರ್ವಹಿಸಿದ್ದರು. ‘ಬಣ್ಣ ಬಣ್ಣದ ಬಟ್ಟೆಗಳಿಂದ ಮುಚ್ಚಿದ ಮಾಂಸದ ಮುದ್ದೆಯ ಮೇಲೆ ಎಂತಹ ಮೋಹ’ ಎಂದು ಮಾತನ್ನು ಆರಂಭಿಸಿ ‘ಮೋಹಭರಿತವೀ ಮಾನವ ಜನ್ಮ, ದೇಹಸುಖವನೇ ಸದಾ ಬಯಸವುದು’ ಎಂದು ಹಾಡುತ್ತಾರೆ. ಈ ಗೀತೆ ಬಹಳ ಜನಪ್ರಿಯವಾಗಿತ್ತು. ಇದನ್ನು ಕೇಳಲೆಂದೇ ಸಿನಿಮಾಕ್ಕೆ ಎರಡು ಮೂರು ಸಲ ಬರುತ್ತಿದ್ದ ಪ್ರೇಕ್ಷಕರಿದ್ದರು.  ನಂತರ ಚಿತ್ರದಲ್ಲಿ ಜಂಗಮರು ವೇಮನನ್ನು ಸಮಾಧಾನ ಮಾಡಿ ಸುಲಭವಾಗಿ ಮೂಗತಿ ಹುಡುಕಿಕೊಡುತ್ತಾರೆ. ‘ಯಾರಿಗಪ್ಪ ಇದು’ಎಂದೂ ಕೂಡ ಕೇಳುತ್ತಾರೆ. ಮೂಗತಿ ಸಿಕ್ಕ ಸಂಭ್ರಮದಲ್ಲಿ ವೇಮನ ಇದ್ದ ವಿಷಯವನ್ನು ತಿಳಿಸುತ್ತಾನೆ. ಆಗ ಅವರು ‘ತುಂಬಾ ಒಳ್ಳೆಯದು, ಆದರೆ ಇಷ್ಟು ಬೆಲೆ ಬಾಳುವ ಮೂಗತಿಯನ್ನು ಸುಮ್ಮನೆ ಕೊಡಬೇಡ. ಹಗಲಿನಲ್ಲಿ ಅವಳು ನಿನ್ನೆದುರು ಪೂರ್ಣ ಬೆತ್ತಲಾಗಿ ನಿಂತುಕೊಳ್ಳಬೇಕು ಎಂದು ಕೇಳು, ಇದರಿಂದ ಅವಳಿಗೆ ಪ್ರೀತಿ ಇದೆಯೋ ಇಲ್ಲವೋ ಗೊತ್ತಾಗುತ್ತದೆ.’ಎನ್ನುತ್ತಾರೆ ‘ತುಂಬಾ ಒಳ್ಳೆಯ ಸಲಹೆ’ ಎಂದು ಮೆಚ್ಚಿಕೊಂಡ ಹೋದ ವೇಮನ ಅದನ್ನೇ ಮಾಡುತ್ತಾನೆ. ಅವಳೇನೋ ಬೆತ್ತಲಾಗುತ್ತಾಳೆ. ಆದರೆ ಅದನ್ನು ನೋಡಿದ ವೇಮನ ವೈರಾಗ್ಯವನ್ನು ತಳೆದು ತಪಸ್ಸಿಗೆ ಹೋಗುತ್ತಾನೆ. ಮುಂದೆ ವೇಮನ ಕವಿಯೆಂದು ಹೆಸರು ಮಾಡುತ್ತಾನೆ. ಇಡೀ ದೃಶ್ಯದ ಕಲ್ಪನೆ ಹೊನ್ನಪ್ಪ ಭಾಗವರ್ ಅವರದೇ ಆಗಿತ್ತು. ‘ಹೆಣ್ಣೊಬ್ಬಳನ್ನು ಸಂಪೂರ್ಣ ಬೆತ್ತಲಾಗಿ ನೋಡಿದ ಪುರುಷ ಒಂದೋ ತತ್ವಜ್ಞಾನಿಯಾಗುತ್ತಾನೆ ಇಲ್ಲವೆ ಹುಚ್ಚನಾಗುತ್ತಾನೆ’ ಎನ್ನುವ ತಾತ್ವಿಕ ಚಿಂತನೆಯ ಎಳೆಯನ್ನು ಹೊನ್ನಪ್ಪನವರು ಇಲ್ಲಿ ಜೋಡಿಸಿದ್ದರು.

ಈ ಸನ್ನಿವೇಶವೇನೋ ಚೆನ್ನಾಗಿ ಬಂದಿತು. ಆದರೆ ಇದರ ಪರಿಣಾಮ ಬೇರೆ ರೀತಿಯಲ್ಲಾಯಿತು. ಲಲಿತಾಳು  ಬೆತ್ತಲಾಗುವ ಸನ್ನಿವೇಶವನ್ನು ನೆರಳಿನಲ್ಲಿ ತೋರಿಸಲಾಗಿತ್ತು. ನಂಜನಗೂಡು ಜಯಮ್ಮ ಎಂಬ ಕಲಾವಿದೆ ಈ ಪಾತ್ರವನ್ನು ನಿರ್ವಹಿಸಿದ್ದರು. ಅದರಿಂದ ವಿವಾದವೇ ಉಂಟಾಯಿತು. ಪತ್ರಿಕೆಗಳು, ಪ್ರೇಕ್ಷಕರೂ ಎಲ್ಲರ ಕಡೆಯಿಂದಲೂ ತೀವ್ರವಾದ ಟೀಕೆಗಳು ಬಂದವು. ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದ ಹಾರ್ಮೋನಿಯಂ ಶೇಷಗಿರಿರಾಯರು ಚಿತ್ರತಂಡದಿಂದ ಹೊರಬಂದರು. ಮುಂದೆ ಚಿತ್ರರಂಗವನ್ನೇ ಬಿಟ್ಟು ರಂಗಭೂಮಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಿಗಿಸಿಕೊಂಡರು. ಈ ಅನಿರೀಕ್ಷಿತ ವಿದ್ಯಮಾನದಿಂದ ಚಿತ್ರದ ಸಂಗೀತ ನಿರ್ದೇಶನ ವಿಭಾಗದಲ್ಲಿ ತೊಂದರೆ ಉಂಟಾಯಿತು. ಆಗ ಹೊನ್ನಪ್ಪ ಭಾಗವರೇ ಉಳಿದ ಭಾಗಗಳ ಸಂಗೀತ ನಿರ್ದೇಶನ ಮಾಡಿದ್ದಲ್ಲದೆ ಆರು ಗೀತೆಗಳಿಗೂ ರಾಗ ಸಂಯೋಜನೆ ಮಾಡಿದರು. ಇದರಲ್ಲಿ ನಾಲ್ಕು ಗೀತೆಗಳನ್ನು ಅವರೇ ಹಾಡಿದ್ದರು. ಅದರಲ್ಲಿ ‘ನಾರಿಯ ಮೋಹದಿ ದಾರಿಯ ಕಾಣದೆ’ ಎನ್ನುವ ಗೀತೆ ರಾಗಮಾಲಿಕೆಯಲ್ಲಿತ್ತು. ಘನ ಪಂಚಕ ರಾಗಗಳಾದ ನಾಟ, ಗೌಳ, ಅರಭಿ, ವರೌಳಿ ರಾಗಗಳನ್ನು ಇದರಲ್ಲಿ ಬಳಸಲಾಗಿತ್ತು. ಆದರೆ ಈ ಗೀತೆಯೂ ಸೇರಿದಂತೆ ಎರಡು ಗೀತೆಗಳು ಚಿತ್ರ ಬಿಡುಗಡೆಯಾದಾಗ ಇರಲಿಲ್ಲ. ಹೊನ್ನಪ್ಪನವರು ಈ ಕುರಿತು ಕಾರಣ ಕೇಳಿದಾಗ ವೀರಣ್ಣನವರಿಂದ ಸರಿಯಾದ ಉತ್ತರ ದೊರಕಲಿಲ್ಲ.  ಈ ಚಿತ್ರದಿಂದ ಕು.ರಾ.ಸೀಯವರಿಗೆ  ದೊರಕಿದ ದೊಡ್ಡ ಲಾಭವೆಂದರೆ ಹೊನ್ನಪ್ಪ ಭಾಗವತರ್ ಅವರ  ಗೆಳೆತನ ದೊರಕಿದ್ದು. ಮುಂದೆ ಕು.ರ.ಸೀಯವರಿಗೆ  ಚಿತ್ರರಂಗದಲ್ಲಿ ಉನ್ನತ ಸ್ಥಾನವನ್ನು ತಲುಪಲು ಈ ಗೆಳೆತನ ಕಾರಣವಾಯಿತು.

ಚಿತ್ರೀಕರಣದ ನಡುವೆ ಬಿಡುವು ದೊರೆತಾಗ ಕೊಯಮತ್ತೂರಿನಲ್ಲಿಯೇ ‘ಗೋರಾ ಕುಂಬಾರ’ಚಿತ್ರದ ಸಿದ್ದತೆಗಳನ್ನು ನಡೆಸಬೇಕು ಎಂದು ಹೊನ್ನಪ್ಪ ಭಾಗವತರ್ ನಿರ್ಧರಿಸಿದರು. ಆಗ ಎಲ್ಲಾ ಕನ್ನಡ ಚಿತ್ರಗಳಿಗೂ ಮದ್ರಾಸಿನ ವಾದ್ಯಗೋಷ್ಠಿಯನ್ನೇ ಬಳಸಲಾಗುತ್ತಿತ್ತು. ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅರಿಯದಿದ್ದರಿಂದ ಹಲವು ತಪ್ಪುಗಳಾಗುತ್ತಿದ್ದವು. ‘ಹೇಮರೆಡ್ಡಿ ಮಲ್ಲಮ್ಮ’ಚಿತ್ರದ ಸಂದರ್ಭದಲ್ಲಿ ಇದು ಹೊನ್ನಪ್ಪನವರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ಅವರು ಕನ್ನಡ ವಾದ್ಯಗೋಷ್ಠಿಯನ್ನೇ ತಮ್ಮ ಚಿತ್ರದಲ್ಲಿ ಬಳಸಲು ನಿರ್ಧರಿಸಿದರು. ಅದು ಆ ಕಾಲದಲ್ಲಿ ಬಹಳ ದೊಡ್ಡ ಸಾಹಸವೇ ಆಗಿತ್ತು. ಕನ್ನಡ ನಾಡಿನಲ್ಲಿ ಧ್ವನಿಮುದ್ರಣದ ಸೌಲಭ್ಯ ಇರದಿದ್ದರಿಂದ ವಾದ್ಯಗೋಷ್ಠಿಯವರನ್ನು ಮದ್ರಾಸಿಗೆ ಕರೆಸುವುದು ಆರ್ಥಿಕವಾಗಿ ಕೂಡ ದುಬಾರಿಯದಾಗಿತ್ತು. ಆದರೆ ಕನ್ನಡ ಚಿತ್ರರಂಗಕ್ಕೆ ಸ್ವಾವಲಂಭನೆ ನೀಡುವ ಕನಸಿನಲ್ಲಿ ಹೊನ್ನಪ್ಪನವರು ಈ ಸಾಹಸಕ್ಕೆ ಸಿದ್ದರಾದರು. ಮದ್ರಾಸಿಗಿಂತಲೂ ಕೊಯಮತ್ತೂರಿನಲ್ಲಿ ಸ್ಟುಡಿಯೋ ಬಾಡಿಗೆ ಕಡಿಮೆ ಇದ್ದಿದ್ದರಿಂದ ಅಲ್ಲಿಯೇ ಧ್ವನಿಮುದ್ರಣ ಮಾಡಲು ನಿರ್ಧರಿಸಿದರು. ಬೆಂಗಳೂರಿನಲ್ಲಿದ್ದಾಗ ಕೆಲವು ಸ್ನೇಹಿತರನ್ನು ಸೇರಿಸಿಕೊಂಡು ‘ಭಾರತ ವಾದ್ಯಗೋಷ್ಠಿ’ ಎನ್ನುವ ಸಂಗೀತ ತಂಡವನ್ನು ಸ್ಥಾಪಿಸಿದ್ದರು. ಅದು ತನ್ನ ಕಾರ್ಯಸಾಧನೆಯಿಂದ ಜನಪ್ರಿಯತೆಯನ್ನು ಗಳಿಸಿತ್ತು. ಈ ತಂಡವನ್ನೇ ಚಿತ್ರದಲ್ಲಿ ಬಳಸಲು ಹೊನ್ನಪ್ಪನವರು ನಿರ್ಧರಿಸಿದರು.

ಹದಿನೈದು ಜನರ ತಂಡವನ್ನು ಕೊಯಮತ್ತೂರಿಗೆ ಕರೆಸಿ ಅವರ ಊಟ ವಸತಿ ವ್ಯವಸ್ಥೆಗಳನ್ನು ನೋಡಿಕೊಳ್ಳುವುದರೊಂದಿಗೆ ಚಿತ್ರರಂಗದ ಪರಿಚಯವೇ ಇಲ್ಲದ ಅವರಿಗೆ ಅದಕ್ಕಾಗಿ ತರಬೇತಿ ನೀಡುವ ಹೊಣೆಗಾರಿಕೆಯನ್ನೂ ಹೊನ್ನಪ್ಪನವರೇ ವಹಿಸಿಕೊಂಡರು. ಈ ಸಂದರ್ಭದಲ್ಲಿಯೇ ಚಿತ್ರದ ಚಿತ್ರಕಥೆ-ಸಂಭಾಷಣೆಯನ್ನು ರಚಿಸಿ ಗೀತೆಗಳ ಧ್ವನಿಮುದ್ರಣವನ್ನೂ ಮಾಡೋಣ ಎಂದು ಹುಣಸೂರು ಕೃಷ್ಣಮೂರ್ತಿಗಳಿಗೆ ಹೇಳಿ ಕಳುಹಿಸಿದರು. ಹುಣಸೂರು ಕೃಷ್ಣಮೂರ್ತಿಗಳು ಮೈಸೂರಿನಲ್ಲಿ ಕಥೆಯನ್ನು ಸಿದ್ದ ಪಡಿಸಿಕೊಂಡು ಬಂದಿದ್ದರು. ಅದನ್ನು ಹೊನ್ನಪ್ಪನವರೂ, ಬೊಮ್ಮನ್.ಡಿ.ಇರಾನಿಯವರಿಗೆ ಒಂದು ರೀಡಿಂಗ್ ನೀಡಿದರು. ಅದು ಆಗ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಯನ್ನು ಪಡೆದಿದ್ದ ಭಕ್ತನನ್ನು ಭಗವಂತ ಪರೀಕ್ಷಿಸುವುದು ಮತ್ತು ಕೊನೆಯಲ್ಲಿ ಅವನಿಗೆ ಒಲಿಯುವುದು ಈ ಮಾದರಿಯಲ್ಲಿಯೇ ಇದ್ದಿತು. ಇದನ್ನು ಕೇಳಿದ ನಂತರ ಹೊನ್ನಪ್ಪನವರು ‘ಇದು ಮಾಮೂಲಿ ಭಕ್ತಿಯ ಕಥೆಯಾಯಿತು, ನನಗೆ ಬೇಕಾಗಿದ್ದು ಬೇರೆ, ಗೋರಾ ಕುಂಬಾರನು ಸಾಮಾಜಿಕವಾಗಿ ಕೆಳವರ್ಗದಿಂದ ಬಂದವನು. ಅವನು ಭಕ್ತಿಯ ಪಥದಲ್ಲಿ ನಡೆಯುವುದನ್ನು ಮೇಲ್ವರ್ಗದವರು ಸಹಿಸುವುದಿಲ್ಲ. ಆ ತಳಮಳಗಳು ಬೇಕು, ಬರೀ ಭಕ್ತಿಯ ಭಾವುಕತೆ ಇಲ್ಲಿನ ಉದ್ದೇಶವಲ್ಲ’ಎಂದರು. ಹುಣಸೂರು ಕೃಷ್ಣಮೂರ್ತಿಗಳು ಅಚ್ಚರಿ ಪಡುತ್ತಾ ‘ಭಕ್ತಿ ಎಂದರೆ ಭಕ್ತಿ, ಅದರಲ್ಲಿ ಕೆಳವರ್ಗ ಎಂದರೆ ಏನು? ಮೇಲ್ವರ್ಗ ಎಂದರೆ ಏನು?ಈ ಕಥೆ ಮರಾಠಿಯಲ್ಲಿ ಕೂಡ ಚಿತ್ರವಾಗಿದೆ ಅದನ್ನು ನಾನು ನೋಡಿದ್ದೇನೆ. ಅಲ್ಲಿ ಕೂಡ ನೀವು ಹೇಳುವಂತಹ ಲಕ್ಷಣಗಳಿಲ್ಲ’ಎಂದರು. ಹುಣಸೂರರು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬಂದಿದ್ದರು. ಅವರಿಗೆ ಕೆಳವರ್ಗದ ತಳಮಳಗಳು ಗೊತ್ತಿರಲಿಲ್ಲ. ಆದರೆ ಹೊನ್ನಪ್ಪನವರು ಕೆಳವರ್ಗದಿಂದ ಬಂದಿದ್ದರಿಂದ ಈ ನೋವಿನ ಅನುಭವವನ್ನು ಪಡೆದಿದ್ದರು. ಇದನ್ನು ಅರ್ಥ ಮಾಡಿಸಲು ಎಷ್ಟೇ ಪ್ರಯತ್ನಿಸಿದರೂ ಹುಣಸೂರರು ತಮ್ಮ ಕಥೆಯಿಂದ ಒಂದಿಂಚೂ ಅಲುಗಲಿಲ್ಲ.

ಕೊನೆಗೊಂದು ದಿನ ಮಾತನಾಡಿದ್ದ ಹಣಕ್ಕೆ ಚೆಕ್ ನೀಡಿ ಹುಣಸೂರರಿಗೆ ‘ನನ್ನ ಚಿತ್ರದ ಉದ್ದೇಶ ಬೇರೆಯಾಗಿದೆ, ಅದು ನಿಮಗೆ ಅರ್ಥವಾಗುತ್ತಿಲ್ಲ. ಹೀಗಾಗಿ ನಾನು ಬೇರೆಯವರಿಂದ ನನ್ನ ಚಿತ್ರಕ್ಕೆ ಸಾಹಿತ್ಯ ಬರೆಸುತ್ತಿದ್ದೇನೆ. ನೀವು ಮೈಸೂರಿಗೆ ಹೊರಡಬಹುದು’ ಎಂದುಬಿಟ್ಟರು. ಆ ಕಾಲದಲ್ಲಿ ಹುಣಸೂರು ಕೃಷ್ಣಮೂರ್ತಿಗಳು ಕನ್ನಡದಲ್ಲಿ ಬಹು ಬೇಡಿಕೆಯಲ್ಲಿದ್ದ ಚಿತ್ರಸಾಹಿತಿಗಳು. ಅವರನ್ನು ಬೇಡ ಎನ್ನುವುದು ದೊಡ್ಡ ರಿಸ್ಕ್ ಆಗಿತ್ತು. ಆದರೆ ಹೊನ್ನಪ್ಪನವರು ತಮ್ಮ ಧ್ಯೇಯಕ್ಕಾಗಿ ಇಂತಹ ರಿಸ್ಕ್ ತೆಗೆದುಕೊಂಡಿದ್ದರು. ಇದರ ಜೊತೆಗೆ ಹುಣಸೂರರ ಚಿತ್ರಕಥೆ – ಸಂಭಾಷಣೆಯನ್ನು ಬಳಸದಿದ್ದರೂ ಒಪ್ಪಂದದಂತೆ ಅವರಿಗೆ ಪೂರ್ತಿ ಸಂಭಾವನೆಯನ್ನು ನೀಡಿ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದರು. ಮುಂದೆ ಬಹಳ ವರ್ಷಗಳ ನಂತರ ಹುಣಸೂರು ಕೃಷ್ಣಮೂರ್ತಿಗಳು ಡಾ.ರಾಜ್ ಕುಮಾರ್, ಲೀಲಾವತಿ, ಮಂಜುಳಾ ಅವರ ತಾರಾಗಣದಲ್ಲಿ ‘ಭಕ್ತ ಕುಂಬಾರ’ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರಕ್ಕೂ ಹೊನ್ನಪ್ಪ ಭಾಗವತರ್ ಅವರ ‘ಗೋರಾ ಕುಂಬಾರ’ಚಿತ್ರಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಿದರೆ ಹೊನ್ನಪ್ಪನವರ ಸಾಮಾಜಿಕ ಕಾಳಜಿಯ ನೆಲೆಗಳು ಅರಿವಿಗೆ ಬರುತ್ತವೆ.

ಹುಣಸೂರು ಕೃಷ್ಣಮೂರ್ತಿಗಳು ಬೇಡ ಎಂದೇನೋ ಹೊನ್ನಪ್ಪನವರು ನಿರ್ಧರಿಸಿದ್ದರು. ಆದರೆ ಅವರ ಬದಲಿಗೆ ಬೇರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕಷ್ಟವಾಗಿತ್ತು. ಕೆಲವು ಚಿತ್ರಸಾಹಿತಿಗಳು ಬರೆಯಲು ಒಪ್ಪಿದರೂ ಕೊಯಮತ್ತೂರಿಗೆ ಬರಲು ಒಪ್ಪಲಿಲ್ಲ. ಹೀಗಿರುವಾಗ ಹೊನ್ನಪ್ಪನವರಿಗೆ  ‘ಹೇಮರೆಡ್ಡಿ ಮಲ್ಲಮ್ಮ’ಚಿತ್ರದಲ್ಲಿ ವೇಮನನ ಪಾತ್ರವನ್ನು ವಹಿಸಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳ ನೆನಪಾಯಿತು. ಚಿತ್ರಗೀತೆಗಳ ಧ್ವನಿಮುದ್ರಣ ಮತ್ತು ಚಿತ್ರಕಥೆಯನ್ನು ಸಿದ್ದಗೊಳಿಸುವುದಕ್ಕಾಗಿ ಕೊಯಮತ್ತೂರಿನಲ್ಲಿ ಆಫೀಸು ತೆಗೆದು ವಾದ್ಯಗೋಷ್ಠಿಯವರ ಖರ್ಚು ವೆಚ್ಚವನ್ನು ವರ್ಷವಿಡೀ ವಹಿಸಿಕೊಂಡಿದ್ದರ ಪರಿಣಾಮ ಆಗಲೇ ಮೂವತ್ತು ಸಾವಿರ ರಾಪಾಯಿಗಳು ಹೊನ್ನಪ್ಪನವರ ಕೈ ಬಿಟ್ಟಿತ್ತು. ಇನ್ನೂ ಚಿತ್ರವೇ ಆರಂಭವಾಗಿಲ್ಲ, ಈಗಲೇ ಇಷ್ಟು ಹಣ ಖರ್ಚಾಗಿದೆ ಮುಂದೆ ಹೇಗೆ ಎಂಬ ಭಯ ಅವರನ್ನು ಕಾಡಿತು. ಆದರೆ ಈ ವೇಳೆಗಾಗಲೇ ಕನ್ನಡ ನಾಡಿನ ಪತ್ರಿಕೆಗಳೆಲ್ಲವೂ ಚಿತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಚಾರವನ್ನು ನೀಡಿದ್ದವು.‘ಆಗಲೇ ಚಿತ್ರೀಕರಣ ಮದ್ರಾಸಿನಲ್ಲಿ ಆರಂಭವಾಗಿದೆ’ಎನ್ನುವ ಮಾದರಿಯ ಸುದ್ದಿಗಳೂ ಪ್ರಕಟವಾಗಿದ್ದವು. ಈ ಹಂತದಲ್ಲಿ ಹಿಂದೆ ಸರಿಯುವುದು ಸರಿಯಲ್ಲ ಎಂದು ನಿರ್ಧರಿಸಿ ಹೊನ್ನಪ್ಪ ಭಾಗವತರ್ ಅವರು ಮದ್ರಾಸಿನಲ್ಲಿ ಆಫೀಸನ್ನು ಆರಂಭಿಸಿದರು.

ಈಗ ನಿರ್ದೇಶಕ ಮತ್ತು ಚಿತ್ರದ ಪಾಲುದಾರ ಬೊಮ್ಮನ್.ಡಿ.ಇರಾನಿಯವರ ತೊಂದರೆಗಳು ಆರಂಭವಾದವು. ಅವರಿಗೆ ಕೊಯಮತ್ತೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದೇ ಇಷ್ಟವಿರಲಿಲ್ಲ. ಮುಂಬೈನಲ್ಲಿ ಅದನ್ನು ನಡೆಸಬೇಕು ಎಂದು ಅವರು ಬಯಸಿದ್ದರು. ಅಷ್ಟೇ ಅಲ್ಲದೆ ನಾಯಕಿಯ ಪಾತ್ರಕ್ಕೆ ಆಗ ‘ಸುಹಾಗ್ ರಾತ್’, ‘ನೀಲ್ ಕಮಲ್’ಮೊದಲಾದ ಚಿತ್ರಗಳಿಂದ ಹೆಸರಾದ ಬಾಲಿವುಡ್ ತಾರೆ  ಬೇಗಂ ಪಾರಾ ಅವರನ್ನು ಹಾಕಿ ಕೊಳ್ಳುವುದಾಗಿ ನಿರ್ಧರಿಸಿ ಮಾತುಕತೆ ನಡೆಸಿಕೊಂಡು ಬಂದಿದ್ದರು. ಇದರಿಂದ ಹೊನ್ನಪ್ಪನವರಿಗೆ ದಿಗ್ಭ್ರಾಂತಿಯಾಯಿತು. ಆಗ ಬೇಗಂ ಪಾರಾ ಗ್ಲಾಮರ್ ಪಾತ್ರಗಳಿಗೆ ಹೆಸರು ಮಾಡಿದ್ದರು. ಇದು ಭಕ್ತಿ ಪ್ರಧಾನ ಚಿತ್ರ, ನಮಗೆ ಬೇಕಾಗಿರುವುದು ಭಾವಪೂರ್ಣ ಅಭಿನಯ ಎಂದರೆ ಬೊಮ್ಮನ್ ಇರಾನಿಯವರು ಒಪ್ಪಲಿಲ್ಲ. ಭಕ್ತಿ ಚಿತ್ರದಲ್ಲಿ ಗ್ಲಾಮರ್ ಇರಬಾರದು ಎಂದು ಏನಿದೆ? ಅವರಿದ್ದರೆ ಚಿತ್ರವನ್ನು ಬೇರೆ ಭಾಷೆಗಳಿಗೂ ಡಬ್ ಮಾಡಬಹುದು ಎಂದರು. ಈ ವಿಚಾರದಲ್ಲಿ ವಾದ ವಿವಾದಗಳು ನಡೆದು ಕೊನೆಗೆ ಕುಂಬಾರನ ಎರಡನೇ ಹೆಂಡತಿಯ ಪಾತ್ರಕ್ಕೆ ಪಾರಾ ಅವರನ್ನು ಹಾಕಿಕೊಳ್ಳುವುದಾಗಿಯೂ ಆ ಚಿತ್ರೀಕರಣವನ್ನೂ ಮುಂಬೈನಲ್ಲಿಯೇ ನಡೆಸುವುದಾಗಿಯೂ ನಿರ್ಧಾರವಾಯಿತು. ಮೊದಲ ಹೆಂಡತಿ ಪಾತ್ರಕ್ಕೆ ಮೂಕಿ ಚಿತ್ರಗಳಿಂದಲೂ ಹೆಸರು ಮಾಡಿದ್ದ ‘ವಸಂತ ಸೇನೆ’ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಲಕ್ಷ್ಮೀಬಾಯಿ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣದಿಂದ ಇದು ಇರಾನಿಯವರಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಹೊನ್ನಪ್ಪನವರು ತಮ್ಮ ನಿರ್ಧಾರದಲ್ಲಿ ಗಟ್ಟಿಯಾಗಿದ್ದರು. ಲಕ್ಷ್ಮೀಬಾಯಿಯವರು ಗಾಯಕಿಯೂ ಆಗಿದ್ದರಿಂದ ಅವರ ಕಂಠದಲ್ಲಿ ಗೀತೆಗಳ ಧ್ವನಿಮುದ್ರಣ ಕೂಡ ನಡೆಯಿತು. ಬೇಲೂರು ರಾಘವೇಂದ್ರ ರಾವ್, ಮುರಾರಾಚಾರ್, ಯು.ಮಹಾಬಲ ರಾವ್, ಗಣಪತಿ ಭಟ್ ಹೀಗೆ ಎಲ್ಲಾ ಪ್ರಮುಖ ಪಾತ್ರಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಿಕೊಂಡಾಗ ಇರಾನಿಯವರ ಅಸಮಧಾನ ಇನ್ನೂ ಬೆಳೆಯಿತು.

ಇದೇ ವೇಳೆಗೆ ಇನ್ನೊಂದು ಘಟನೆ ನಡೆಯಿತು. ಹರಿಕಥೆಯ ಕ್ಷೇತ್ರದಲ್ಲಿ  ಹೆಸರು ಮಾಡಿದ್ದ ಕನ್ನಡತಿ ಪಂಡರಿಬಾಯಿಯವರು ಚಿತ್ರರಂಗದಲ್ಲಿ ಅಭಿನಯಿಸುವ ಆಸೆಯಿಂದ ಮದ್ರಾಸಿಗೆ ಬಂದಿದ್ದರು. ‘ವೇತಾಳಂ ಉಳಗಂ’ಚಿತ್ರದಲ್ಲಿ ಕಾಳಿಕಾದೇವಿಯ ಪಾತ್ರವನ್ನು ಮಾಡಿ ಹೆಸರು ಮಾಡಿದ್ದರು. ಎ.ವಿ.ಎಂನವರು ತಮ್ಮ ಮುಂದಿನ ಚಿತ್ರಕ್ಕೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ರಿಹರ್ಸಲ್ ಕೂಡ ನಡೆಯಿತು. ಆದರೆ ಚಿತ್ರೀಕರಣ ಇನ್ನೇನು ಆರಂಭವಾಗಬೇಕು ಎನ್ನುವ ಕಾಲದಲ್ಲಿ ಎ.ವಿ.ಮೇಯಪ್ಪ ಚಟ್ಟಿಯಾರರು ದ್ರೌಪದಿ ಎನ್ನುವ ಇನ್ನೊಬ್ಬ ಕಲಾವಿದೆಗೆ ನಾಯಕಿಯ ಪಾತ್ರವನ್ನು ನೀಡಿಬಿಟ್ಟರು. ಪಂಡರೀ ಬಾಯಿಯವರ ಅಭಿನಯದಿಂದ ಬರುತ್ತಿದ್ದ ಸಂಪಾದನೆಯ ಮೇಲೆ ಅವರ ಇಡೀ ಕುಟುಂಬ ಅವಲಂಬನೆಗೊಂಡಿತ್ತು. ಈ ಬೆಳವಣಿಗೆಯಿಂದ ಆತಂಕದ ಸನ್ನಿವೇಶ ಎದುರಾಯಿತು. ವಿಷಯ ತಿಳಿದ ಹೊನ್ನಪ್ಪ ಭಾಗವತರ್ ಅವರು ಗೋರಾ ಕುಂಬಾರನ ಎರಡನೇ ಹೆಂಡತಿಯ ಪಾತ್ರಕ್ಕೆ ಪಂಡರೀಬಾಯಿಯವರನ್ನು ಹಾಕಿಕೊಂಡು ಮುನ್ನೂರು ರೂಪಾಯಿಗಳ ಆಡ್ವಾನ್ಸ್ ನೀಡಿ ಮುಳುಗುತ್ತಿದ್ದ ಕುಟುಂಬಕ್ಕೆ ಆಧಾರ ಕಲ್ಪಿಸಿದರು. ಕನ್ನಡ ಕಲಾವಿದರಿಗೆ ನೆರವಾಗುವ ಅವರ ಮನೋಭಾವ ಇಲ್ಲಿ ಕೆಲಸ ಮಾಡಿತ್ತು. ಆದರೆ ಈ ಪಾತ್ರವನ್ನು ಬೇಗಂ ಪಾರಾ ಅವರಿಂದ ಮಾಡಿಸಬೇಕು ಎಂದು ಬಯಸಿದ್ದ ಬೊಮ್ಮನ್.ಡಿ.ಇರಾನಿಯವರು ಇನ್ನಷ್ಟು ಕೋಪಗೊಂಡರು.

ಚಿತ್ರೀಕರಣ ಆರಂಭವಾಯಿತು. ಬೊಮ್ಮನ್.ಡಿ.ಇರಾನಿಯವರು ನಿರ್ದೇಶಕರು. ಅವರಿಗೆ ಕನ್ನಡ ಸಂಸ್ಕೃತಿಯ ಪರಿಚಯವೇ ಇರಲಿಲ್ಲ. ಭಾಗವತರು ತರ ಬಯಸಿದ್ದ ಸಾಮಾಜಿಕ ಕಾಳಜಿಯ ಕಲ್ಪನೆಯೂ ಇರಲಿಲ್ಲ. ಕಮರ್ಷಿಯಲ್ ಅಂಶಗಳನ್ನು ಚಿತ್ರದಲ್ಲಿ ತರಲು ಪ್ರಯತ್ನಿಸುತ್ತಿದ್ದರು. ಅಗತ್ಯವಿಲ್ಲದಿದ್ದರೂ ಗ್ಲಾಮರ್ ತರಲು ಬಯಸಿದರು. ಅದರಲ್ಲಿಯೂ ಪಂಡರಿ ಬಾಯಿಯವರ ಪಾತ್ರದಲ್ಲಿ ಸಾಕಷ್ಟು ಇಂತಹ ಅಂಶಗಳನ್ನಿಟ್ಟರು. ನಿರ್ದೇಶಕರು ಇದನ್ನೆಲ್ಲಾ ವಿವರಿಸಿದಾಗ ಪಂಡರೀಬಾಯಿಯವರು ಗಾಭರಿಗೊಂಡರು. ಆಗಲೇ ಅಡ್ವಾನ್ಸ್ ಹಣ ಪಡೆದಿದ್ದರಿಂದ ‘ಇಲ್ಲ’ಎನ್ನುವ ಸ್ಥಿತಿಯಲ್ಲಿ ಅವರಿರಲಿಲ್ಲ. ಹೊನ್ನಪ್ಪ ಭಾಗವತರ್ ಅವರ ಬಳಿ ಬಂದು ಅಳುತ್ತಾ ವಿಷಯವನ್ನು ತಿಳಿಸಿದರು. ತಮ್ಮ ಚಿತ್ರಕಥೆಯಲ್ಲಿ ಈ ಅಂಶಗಳೇ ಇರದಿದ್ದರಿಂದ ಹೊನ್ನಪ್ಪನವರಿಗೂ ಅಚ್ಚರಿಯಾಗಿ ಇರಾನಿಯವರನ್ನು ಈ ಕುರಿತು ಪ್ರಶ್ನಿಸಿದರು. ಅವರು ನಗುತ್ತಾ ‘ಎಳೆ ಹುಡುಗಿ ನೋಡಲೂ ಚೆನ್ನಾಗಿದ್ದಾಳೆ. ಅವಳನ್ನು ಗ್ಲಾಮರಸ್ ಆಗಿ ತೋರಿಸದರೆ ಮಾತ್ರವೇ ಚಿತ್ರ ಓಡಲು ಸಾಧ್ಯ’ಎಂದರು. ಈ ಮಾತನ್ನು ಕೇಳಿ ಹೊನ್ನಪ್ಪನವರಿಗೆ ಅಸಹ್ಯವಾಯಿತು. ಬೊಮ್ಮನ್.ಡಿ.ಇರಾನಿಯವರು ಪಾಲುದಾರರಾಗಿದ್ದರೂ ಒಂದೇ ಒಂದು ನಯಾ ಪೈಸೆಯನ್ನೂ ವೆಚ್ಚ ಮಾಡಿರಲಿಲ್ಲ. ಬದಲಾಗಿ ನಿರ್ದೇಶಕನ ಜವಾಬ್ದಾರಿಗೆ ಎಂದು ಹೊನ್ನಪ್ಪನವರಿಂದಲೇ ಹದಿನೈದು ಸಾವಿರ ರೂಪಾಯಿಗಳನ್ನು ಪಡೆದಿದ್ದರು. ಇನ್ನು ಇವರ ಸಹವಾಸ ಸಾಕು ಎನ್ನಿಸಿತು. ಪಾಲುದಾರಿಕೆಯಿಂದ ಹೊರ ಬಂದು ‘ಸುಭದ್ರ’ಚಿತ್ರದಿಂದ ಪರಿಚಿತರಾಗಿದ್ದ ಪಿ.ಪುಲ್ಲಯ್ಯ ಅವರನ್ನು ನಿರ್ದೇಶಕರನ್ನಾಗಿಸಿಕೊಂಡರು. ಅಲ್ಲಿಂದ ಮುಂದೆ ಚಿತ್ರ ಹೊನ್ನಪ್ಪ ಭಾಗವತರ್ ಅವರ ನಿಯಂತ್ರಣಕ್ಕೆ ಬಂದಿತು.

‘ಗೋರಾ ಕುಂಬಾರ’ಚಿತ್ರದಲ್ಲಿ ಕುಂಬಾರನು ಮಡಿಕೆಯನ್ನು ಮಾಡುವ ಮಣ್ಣನ್ನು ತುಳಿಯುತ್ತಾ ಪಾಂಡುರಂಗನ ಧ್ಯಾನದಲ್ಲಿ ಹಾಡುವ ಸನ್ನಿವೇಶ. ಭಕ್ತಿ ಪರವಶನಾದ ಅವನು ಬಾಹ್ಯ ಪ್ರಜ್ಞೆಯನ್ನೇ ಕಳೆದುಕೊಂಡು ತನ್ನ ಮಗುವನ್ನೇ ತುಳಿದು ಸಾಯಿಸುವ ಸನ್ನಿವೇಶ. ಹೊನ್ನಪ್ಪ ಭಾಗವತರ್ ಅವರು ಈ ದೃಶ್ಯದಲ್ಲಿ ಅಭಿನಯಿಸುತ್ತಿರುವಾಗ ದುರದೃಷ್ಟವಶಾತ್ ಮಣ್ಣಿನಲ್ಲಿ ಸೇರಿಕೊಂಡಿದ್ದ ಎರಡು ಅಂಗುಲ ಉದ್ದದ ಮಳೆ ಅವರ ಕಾಲಿಗೆ ಚುಚ್ಚಿಕೊಂಡಿತು. ರಕ್ತಸ್ರಾವವಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಗಾಯವು ವ್ಯಾಪಿಸಿ ರುಣವಾಗಿ ಹೊನ್ನಪ್ಪನವರು ತೀವ್ರನೋವನ್ನು ಅನುಭವಿಸಿದರು. ಇದರಿಂದ ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣವು ರದ್ದುಗೊಂಡಿತು. ನಂತರ ಕಾಲಿನ ಗಾಯ ವಾಸಿಯಾಗಿ ಇನ್ನೇನು ಚಿತ್ರೀಕರಣ ಮುಂದುವರೆಯಬೇಕು ಎನ್ನುವಷ್ಟರಲ್ಲಿ ಕುಂಬಾರನ ಮಗನ ಪಾತ್ರದಲ್ಲಿದ್ದ ಮಗುವು ಅನಾರೋಗ್ಯಕ್ಕೆ ಒಳಗಾಯಿತು. ವಾಂತಿ ಭೇದಿ ಎಂದು ಆರಂಭವಾದ ಅನಾರೋಗ್ಯ ತೀವ್ರ ಸ್ವರೂಪ ತಾಳಿ ಆ ಮಗುವು ಬದುಕುವುದೇ ಕಷ್ಟ ಎನ್ನುವಂತಹ ಸ್ಥಿತಿ ಉಂಟಾಯಿತು. ಆ ಮಗುವಿನ ಪೋಷಕರು ಸ್ಥಿತಿವಂತರಲ್ಲ. ಭಾಗವತರಲ್ಲಿಗೆ ಬಂದು ಗೋಳಾಡಲು ಆರಂಭಿಸಿದರು. ತಮ್ಮ ಚಿತ್ರ ಹೇಗಾದರೂ ಆಗಲಿ ಆ ಮಗುವು ಉಳಿದರೆ ಸಾಕು ಎನ್ನುವ ಭಾವದಲ್ಲಿ ಮದ್ರಾಸಿನ ಅತ್ಯುತ್ತಮ ಆಸ್ಪತ್ರೆಗೆ ಆ ಮಗುವನ್ನು ಸೇರಿಸಿ ಚಿಕಿತ್ಸೆಯ ಖರ್ಚನ್ನೆಲ್ಲಾ ತಾವೇ ವಹಿಸಿಕೊಂಡರು. ಮಗುವಿನ ಆರೋಗ್ಯವು ಸುಧಾರಿಸಲು ಎರಡು ತಿಂಗಳುಗಳೇ ಬೇಕಾದವು.

ಮಗುವು ಅಭಿನಯಿಸಿದ್ದ ಚಿತ್ರದ ಬಹುತೇಕ ಸನ್ನಿವೇಶಗಳ ಚಿತ್ರೀಕರಣವು ಆಗಲೇ ಮುಗಿದಿತ್ತು. ಹೀಗಾಗಿ ಬೇರೆ ಮಗುವನ್ನು ಆ ಪಾತ್ರಕ್ಕೆ ಬಳಸುವಂತೆಯೂ ಇರಲಿಲ್ಲ. ಹೀಗೆ ಮೂರು ತಿಂಗಳುಗಳ ಕಾಲ ಚಿತ್ರೀಕರಣವು ನಿಂತು ಹೋಯಿತು. ಆದರೆ ಹೊನ್ನಪ್ಪ ಭಾಗವರ್ ಅವರಿಗೆ ಊಟ ವಸತಿಯ ವೆಚ್ಚ ಮಾತ್ರ ಮುಂದುವರೆದುಕೊಂಡೇ ಬಂದಿತ್ತು. ಮೂರು ತಿಂಗಳುಗಳ ನಂತರ ಮಗುವಿನ ಆರೋಗ್ಯವು ಸುಧಾರಿಸಿದ ನಂತರ ಚಿತ್ರೀಕರಣವು ಮುಂದುವರೆಯಿತು. ಆಗ ನಾಯಕಿ ಲಕ್ಷ್ಮೀಬಾಯಿಯವರು ತಮ್ಮ ಸ್ವಂತ ನಿರ್ಮಾಣದ ‘ಮಹಾತ್ಮ ಕಬೀರ್’ಚಿತ್ರದಲ್ಲಿ ಭಾಗವಹಿಸಬೇಕು ಎಂದು ಒತ್ತಾಯಿಸಲು ಆರಂಭಿಸಿದರು. ಹೊನ್ನಪ್ಪ ಭಾಗವರ್ ಅವರು ಕು.ರ.ಸೀತಾರಾಮ ಶಾಸ್ತ್ರಿಗಳ ಜೊತೆ ಕುಳಿತು ಲಕ್ಷ್ಮೀಬಾಯಿಯವರು ತೀರಾ ಅನಿವಾರ್ಯವಾಗಿದ್ದ ಶಾಟ್‌ಗಳನ್ನು ಮಾತ್ರ ಚಿತ್ರಿಸಿ ಅವರನ್ನು ಬಿಡುಗಡೆಗೊಳಿಸಿದರು. ನಂತರ ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಚಿತ್ರೀಕರಣವನ್ನು ಮುಗಿಸಿ ಎಡಿಟಿಂಗ್‌ನಲ್ಲಿ ಈ ಕೊರತೆ ಕಾಣದಂತೆ ಚಾಣಕ್ಷತೆ ವಹಿಸಿ ಚಿತ್ರವನ್ನು ಬಿಡುಗಡೆಗೆ ಸಿದ್ದಗೊಳಿಸಿದರು. ಹೀಗೆ ‘ಗೋರಾ ಕುಂಬಾರ’ ಚಿತ್ರ ಕು.ರ.ಸೀಯವರನ್ನು ಚಿತ್ರ ಸಾಹಿತಿಯಾಗಿ ರೂಪಿಸಿತು.

‘ಗುಣಸಾಗರಿ’ ಚಿತ್ರಕ್ಕೆ ಕು.ರ.ಸೀತಾರಾಮ ಶಾಸ್ತ್ರಿಗಳು ಸಹ ನಿರ್ದೇಶಕರಾಗಿದ್ದರು. ಮದ್ರಾಸಿನ ಎ.ವಿ.ಎಂ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿರುವಾಗ ಅವರು ಉತ್ಸಾಹದ ಬುಗ್ಗೆಯಾಗಿ ಓಡಾಡುತ್ತಿದ್ದನ್ನು ಹಾಲಿವುಡ್‌ನ ಖ್ಯಾತ ನಿರ್ಮಾಪಕರಾದ ಷಾ ಸಹೋದರರು ಗಮನಿಸಿದರು. ಅವರ ಹಾಂಕಾಂಗ್‌ನಲ್ಲಿ ಚಿತ್ರ ತೆಯಾರಿಕಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದರು. ಅಲ್ಲಿಗೆ ನಿರ್ದೇಶಕರನ್ನಾಗಿ ಕು.ರ.ಸೀಯವರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದರು. ಈ ಅವಕಾಶವನ್ನು ಬಳಸಿಕೊಂಡು ವಿದೇಶಕ್ಕೆ ಹೋಗುವುದೋ ಅಥವಾ ಇಲ್ಲಿಯೇ ಭವಿಷ್ಯವನ್ನು ಅರೆಸುವುದೋ ಎಂಬ ಗೊಂದಲದಲ್ಲಿ ಕು.ರ.ಸೀಯವರು ಸಿಕ್ಕಿಬಿದ್ದರು. ಹಲವರನ್ನು ಈ ಕುರಿತು ವಿಚಾರಿಸಿದರು. ಆದರೆ ಯಾರಿಂದಲೂ ಸರಿಯಾದ ಪರಿಹಾರ ದೊರಕಲಿಲ್ಲ. ಕೊನೆಗೆ ತಮಗೆ ಗುರು ಸಮಾನರಾಗಿದ್ದ ಹೊನ್ನಪ್ಪ ಭಾಗವತರ್ ಅವರನ್ನು ಕೇಳಿದರು. ಈ ಸದಾವಕಾಶವನ್ನು ಬಿಡಬೇಡಿ ಎಂದು ಉಪದೇಶಿಸಿದ ಹೊನ್ನಪ್ಪನವರು ಕು.ರ.ಸೀಯವರ ವಿದೇಶಿ ಯಾತ್ರೆಗೆ ಅಗತ್ಯವಾದ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಲು ನೆರವು ನೀಡಿದರು. ಸಿಂಗಾಪುರದಲ್ಲಿ ಕು.ರ.ಸೀಯವರ ಪ್ರತಿಭೆಗೆ ಉತ್ತಮ ಅವಕಾಶ ದೊರಕಿತು. ಅಲ್ಲಿ ತಿಂಗಳ ಸಂಬಳದ ಮೇಲೆ ನೂರಕ್ಕೂ ಹೆಚ್ಚು ಕಲಾವಿದರು ಕೆಲಸ ಮಾಡುತ್ತಿದ್ದರು. ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದ್ದು ಒಂದು ಗುಂಪಿನ ನೇತೃತ್ವವನ್ನು ಕು.ರ.ಸೀಯವರು ವಹಿಸಿದರು.

ಬಹುಬೇಗ ತಮ್ಮ ದೈತ್ಯ ದುಡಿಮೆಯಿಂದ ಅವರು ಜನಪ್ರಿಯರಾದರು. ಕಲಾವಿದರು, ತಂತ್ರಜ್ಞರು ಎಲ್ಲರೂ ಅವರನ್ನು ಇಷ್ಟ ಪಡುತ್ತಿದ್ದರು. ಸಿಂಗಾಪುರದಲ್ಲಿದ್ದಾಗ ಕು.ರ.ಸೀಯವರು ಎರಡು ಚಿತ್ರಗಳನ್ನು ನಿರ್ದೇಶಿಸಿದರು. ಕುರಾನ ಕಾವ್ (ನಿನಗಾಗಿ – 1953), ಈಮಾನ್ (ನಂಬಿಕೆ 1954). ಈ ಚಿತ್ರಗಳು ಮಲೇಶಿಯಾವನ್ನು ಪ್ರತಿನಿಧಿಸಿ ಜಪಾನಿನ ಟೋಕಿಯೋದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದವು. ಮಲೇಷಿಯಾ ಮಾತ್ರವಲ್ಲದೆ ಇಂಡೋನೇಷಿಯಾದಲ್ಲಿ ಕೂಡ ಯಶಸ್ವಿ ಪ್ರದರ್ಶನವನ್ನು ಕಂಡವು. ಕು.ರ.ಸೀಯವರು ಸಿಂಗಾಪುರಕ್ಕೆ ಹೊರಡುವ ಮೊದಲೇ 1948ರಲ್ಲೇ ಅವರ ತಂದೆ ವಿಧಿವಶರಾಗಿದ್ದರು. ವಯಸ್ಸಾದ ತಾಯಿ, ಹೆಂಡತಿ ಮತ್ತು ಪುಟ್ಟ ಮಕ್ಕಳ ಹೊಣೆಗಾರಿಕೆ ಅವರ ಮೇಲಿತ್ತು. ಕು.ರ.ಸೀಯವರು ಕುಟುಂಬವನ್ನು ಸಿಂಗಾಪುರಕ್ಕೇ ಕರೆದುಕೊಂಡು ಹೋಗಿ ಅಲ್ಲಿಯೇ ನೆಲಸುವ ಉದ್ದೇಶವನ್ನು ಹೊಂದಿದ್ದರು. ಅದಕ್ಕಾಗಿ ಪಾಸ್‌ಪೋರ್ಟ್, ವೀಸಾಗಳ ವ್ಯವಸ್ಥೆಯನ್ನೂ ಮಾಡುತ್ತಿದ್ದರು. ಆದರೆ ಇಷ್ಟು ವರ್ಷ ಬಾಳಿ ಬದುಕಿದ ಜಾಗವನ್ನು ಬಿಟ್ಟು ಬರಲು ಅವರ ತಾಯಿ ಒಪ್ಪಲಿಲ್ಲ. ಅವರ ಇಚ್ಚೆಯಂತೆ ಕು.ರ.ಸೀಯವರು ತಮ್ಮ ಸಿಂಗಾಪುರದ ಒಪ್ಪಂದವನ್ನು ರದ್ದುಪಡಿಸಿ ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದರು.

ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದ ಮೇಲೆ ಕು.ರ.ಸೀಯವರು ಮೊದಲು ಭೇಟಿ ಮಾಡಿದ್ದೇ ಹೊನ್ನಪ್ಪ ಭಾಗವತರ್ ಅವರನ್ನು. ಕು.ರ.ಸೀಯವರ ಮನದ ಆತಂಕಗಳನ್ನು ಅರ್ಥ ಮಾಡಿಕೊಂಡ ಹೊನ್ನಪ್ಪನವರು ಸಮಾಧಾನ ಮಾಡಿದ್ದು ಮಾತ್ರವಲ್ಲದೆ ‘ನಿಮ್ಮ ವಿದೇಶದ ಕಲಿಕೆಯ ಲಾಭ ನಮಗಾಗಲಿ, ನನ್ನ ಮುಂದಿನ ಚಿತ್ರಕ್ಕೆ ನೀವೇ ನಿರ್ದೇಶಕರು’ಎಂದರು. ಹೀಗೆ ಕು.ರ.ಸೀತಾರಾಮ ಶಾಸ್ತ್ರಿಗಳು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ‘ಕವಿರತ್ನ ಕಾಳಿದಾಸ’ವಾಯಿತು. ತಮ್ಮೊಂದಿಗೆ ಸಿಂಗಾಪುರದಲ್ಲಿ ಕಾರ್ಯನಿರ್ವಹಿಸಿದ್ದ ಎ.ಎನ್.ಪರಮೇಶ್ ಅವರನ್ನು ಛಾಯಾಗ್ರಾಹಕರನ್ನಾಗಿ ನೇಮಿಸಿಕೊಳ್ಳಲು ಸೂಚಿಸಿದರು. ಈ ಸಲಹೆಯನ್ನು ಹೊನ್ನಪ್ಪನವರು ಒಪ್ಪಿಕೊಂಡರು. ಹೀಗೆ ವಿದೇಶದಲ್ಲಿ ಪರಿಣಿತಿ ಪಡೆದ ಇಬ್ಬರು ಪ್ರತಿಭಾವಂತರು ಚಿತ್ರದಲ್ಲಿ ಕಾರ್ಯನಿರ್ವಹಿಸಿದರು.ಈ ವೇಳೆಗೆ ಹೊನ್ನಪ್ಪನವರು ಕಾಳಿದಾಸನ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದರು. ಅವೆಲ್ಲವನ್ನೂ ಇಟ್ಟುಕೊಂಡು ಹೊನ್ನಪ್ಪ ಭಾಗವತರು ಮತ್ತು ಕು.ರ.ಸೀಯವರು ನಂದಿ ಬೆಟ್ಟದ ಪ್ರಶಾಂತ ಪರಿಸರದಲ್ಲಿ ಕಥೆ – ಚಿತ್ರಕಥೆ – ಸಂಭಾಷಣೆಯನ್ನು ರೂಪಿಸಿದರು. ಕೊನೆಯ ಎರಡು ದಿನ ಸಿ.ಕೆ.ವೆಂಕಟರಾಮಯುಯನವರೂ ಕೂಡ ಚರ್ಚೆಯಲ್ಲಿ ಭಾಗವಹಿಸಿ ಚಿತ್ರಕಥೆ ಅಧಿಕೃತ ಎನ್ನಿಸಿಕೊಳ್ಳಲು ನೆರವು ನೀಡಿದರು.

ಚಿತ್ರದಲ್ಲಿ ಕರ್ನಾಟಕಿ ಸಂಗೀತವನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಬೇಕು ಎನ್ನುವುದು ಹೊನ್ನಪ್ಪ ಭಾವತರ್ ಅವರ ಉದ್ದೇಶವಾಗಿತ್ತು. ತಾವೇ ಚಿತ್ರದ ಸಂಗೀತ ನಿರ್ದೇಶನದ ಹೊಣೆಯನ್ನು ವಹಿಸಿಕೊಂಡು ಗೀತ ರಚನೆಯ ಜವಾಬ್ದಾರಿಯನ್ನು ಕು.ರ.ಸೀಯವರಿಗೆ ವಹಿಸಿದರು. ವೀಣೆ, ಕೊಳಲು, ಮೃದಂಗ, ದೇಸೀಯ ತಂತಿ ವಾದ್ಯಗಳನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾಯಿತು. ಪಾಶ್ಚಾತ್ಯ ವಾದ್ಯಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದು ನಿಜಕ್ಕೂ ವಿಶೇಷವೇ ಸರಿ. ಬಳಕೆಯಾದ ಏಕೈಕ ಪಾಶ್ಚಾತ್ಯ ವಾದ್ಯ ಕ್ಲಾರಿಯೋನೇಟ್. ಆ ವೇಳೆಗೆ ಅದು ಕರ್ನಾಟಕಿ ಸಂಗೀತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದರಿಂದ ಕರ್ನಾಟಕಿ ವಾದ್ಯ ಎಂದೇ ಪರಿಗಣಿತವಾಗಿತ್ತು. ಕಲ್ಯಾಣಿ ರಾಗದಲ್ಲಿ ಸಂಯೋಜಿತವಾದ ‘ಶೃಂಗಾರ ವಾಹಿನಿ ಮನಮೋಹನಿ’ಚಿತ್ರದ ಅತ್ಯಂತ ಜನಪ್ರಿಯ ಗೀತೆ. ಓ ಓ ರಾಜಕುಮಾರಿ ಬಾರೆ ವಯ್ಯಾರಿ, ಶಂಭೋ ಶಂಕರ ಗೌರೀಶ, ನಾದವಿಲ್ಲದ ವೀಣೆ ನುಡಿಸ ಬೇಕೆ, ಬಾರಾ ಬಾರಾ ಬಾರೆನ್ನ ದೊರೆಯೆ ಮೊದಲಾದವು ಚಿತ್ರದ ಪ್ರಮುಖ ಗೀತೆಗಳು. ‘ಮಾಣಿಕ್ಯ ವೀಣಾಮುಪಲಾಲಯಂತಿ’ ಎನ್ನುವ ಶ್ಯಾಮಲಾ ದಂಡಕವನ್ನು ಚಿತ್ರದಲ್ಲಿ ಸೊಗಸಾಗಿ ಬಳಸಿಕೊಳ್ಳಲಾಗಿತ್ತು. ಹೊನ್ನಪ್ಪ ಭಾಗವತರ್ ಅವರೇ ಎಲ್ಲಾ ಗೀತೆಗಳನ್ನು ತಮ್ಮ ಸಿರಿಕಂಠದಿಂದ ಹಾಡಿದ್ದರು. ವಿಶೇಷವೆಂದರೆ ಚಿತ್ರದಲ್ಲಿ ಆಗ ಬಹಳ ಜನಪ್ರಿಯವಾಗಿದ್ದ ಕೋಲಾಟದ ಗೀತೆ ‘ಚೆಲುವಯ್ಯಾ ಚೆಲುವೋ ತಾನಿ ತಂದಾನ’ಯನ್ನೂ ಕೂಡ ಹೊನ್ನಪ್ಪನವರು ಬಳಸಿಕೊಂಡರು. ಈ ಕೋಲಾಟವನ್ನು ತೆರೆಯ ಮೇಲೆ ಅಭಿನಯಿಸಿದ್ದವರು ರಾಷ್ಟ್ರೀಯ ಸೇವಾದಳ ತಂಡದವರು. ಈ ತಂಡ ಆಗ ಬಸವನ ಗುಡಿಯಲ್ಲಿದ್ದ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಸೇರಿ ಪ್ರತಿದಿನವೂ ಕೋಲಾಟವೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿತ್ತು. ಇದನ್ನು ಗಮನಿಸಿದ ಹೊನ್ನಪ್ಪನವರು ತಮ್ಮ ಚಿತ್ರದಲ್ಲಿ ಈ ತಂಡಕ್ಕೆ ಅವಕಾಶ ನೀಡಿದ್ದರು. ಈ ತಂಡದ ಮೇಲ್ವಿಚಾರಣೆಯನ್ನು ವಹಿಸಿದ್ದವರು ಮುಂದೆ ಕಲಾವಿದರಾಗಿ ಹೆಸರು ಮಾಡಿದ್ದ ಶಿವರಾಂ. ಅವರ ಅಣ್ಣ ಎಸ್.ರಾಮನಾಥ್ ಈ ಚಿತ್ರದ ಸಹ ನಿರ್ದೇಶಕರಾಗಿದ್ದರು.

ಕಾಳಿದಾಸನ ಪ್ರಮುಖ ಕಾವ್ಯದ ಸಾರವನ್ನೆಲ್ಲಾ ಒಳಗೊಂಡ ಒಂದು ಗೀತೆ ಬೇಕು ಎಂದು ಹೊನ್ನಪ್ಪ ಭಾಗವತರ್ ಅವರು ಬಯಸಿ ಅಂತಹ ಗೀತೆಯನ್ನು ರಚಿಸಲು ಕು.ರ.ಸೀತಾರಾಮ ಶಾಸ್ತ್ರಿಗಳಿಗೆ ಹೇಳಿದರು. ಅವರು ‘ಅಂತಹ ಗೀತೆಯನ್ನು ರಚಿಸುವಷ್ಟು ವಿದ್ವತ್ ನನಗೆ ಇಲ್ಲ, ಇದನ್ನು ರಚಿಸಬಲ್ಲವರು ಬೆಳ್ಳಾವೆ ನರಹರಿ ಶಾಸ್ತ್ರಿಗಳೊಬ್ಬರೇ’ ಎಂದು ಅವರು ಹೇಳಿದರು. ಇದು ಹೊನ್ನಪ್ಪನವರಿಗೂ ಸೂಕ್ತವಾದ ಆಯ್ಕೆ ಎನ್ನಿಸಿತು. ಮಾರನೆಯ ದಿನ ಹೊನ್ನಪ್ಪ ಭಾಗವತರ್ ಮತ್ತು ಕು.ರ.ಸೀತಾರಾಮ ಶಾಸ್ತ್ರಿಗಳು ಬೆಂಗಳೂರಿನ ಪೈಪ್‌ಲೈನ್ ರಸ್ತೆಯಲ್ಲಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಮನೆಗೆ ಬಂದರು. ತಾವು ಬಂದ ಉದ್ದೇಶವನ್ನು ವಿವರಿಸಿದರು. ‘ಇನ್ನೂ ನಾನೇ ಬರೆಯ ಬೇಕೇನಯ್ಯ, ಸೀತಾರಾಮ ಶಾಸ್ತ್ರೀನೇ ಬರೆಯಬಹುದಿತ್ತಲ್ಲ’ ಎಂದರು ಬೆಳ್ಳಾವೆಯವರು. ‘ಇಲ್ಲ ಸ್ವಾಮಿ, ಅಷ್ಟು ವಿದ್ವತ್ ನನಗಿಲ್ಲ, ಉಳಿದ ಹಾಡುಗಳನ್ನು ಬರೆದಿದ್ದೇನೆ, ಇದೊಂದು ಹಾಡಿನ ರಚನೆ ಮಾತ್ರ ನಿಮ್ಮಿಂದಲೇ ಆಗ ಬೇಕು’ಎಂದರು ಕು.ರ.ಸೀತಾರಾಮ ಶಾಸ್ತ್ರಿಗಳು. ‘ಸರಿ, ಹಾಗಾದರೆ ನಾಳೆ ಬೆಳಿಗ್ಗೆ ಹತ್ತೂವರೆಗೆ ಸರಿಯಾಗಿ ಎಂಪೈರ್ ಸ್ಟುಡಿಯೋಕ್ಕೆ ಬನ್ನಿ’ ಎಂದರು ಬೆಳ್ಳಾವೆ ನರಹರಿ ಶಾಸ್ತ್ರಿಗಳು.

ಅದರಂತೆ ಮರುದಿನ ಹೇಳಿದ ಸಮಯಕ್ಕೆ ಸರಿಯಾಗಿ ಎಂಪೈರ್ ಸ್ಟುಡಿಯೋಕ್ಕೆ ಹೊನ್ನಪ್ಪ ಭಾಗವತರ್ ಮತ್ತು ಕು.ರ.ಸೀತಾರಾಮ ಶಾಸ್ತ್ರಿಗಳು ಹಾಜರಾದರು. ಇನ್ನೊಮ್ಮೆ ಸನ್ನಿವೇಶವನ್ನು ವಿವರಿಸಿದರು. ‘ಬರೆದು ಕೊಳ್ಳಯ್ಯ’ ಎಂದರು ಬೆಳ್ಳಾವೆ ನರಹರಿ ಶಾಸ್ತ್ರಿಗಳು.

ಕು.ರ.ಸೀ ಬರೆದು ಕೊಳ್ಳಲು ತೊಡಗಿದರು.

ರಾಜೇಂದ್ರ ನಾಂ/ರಚಿಸಿದೆನೈ ಪ್ರಭು/

ರಂಜಿಪ ಸುಕಾವ್ಯಗಳ/ ನವರಸಯುತ ಕೃತಿಗಳ//

ಎಂದು ಹೇಳಿ ‘ಹೊನ್ನಪ್ಪ ಇದಕ್ಕೆ ಟ್ಯೂನ್ ಮಾಡು ಎಂದರು. ಕೂಡಲೇ ಹೊನ್ನಪ್ಪ ಭಾಗವತರ್ ಅವರು ಕೇದಾರ ಗೌಳ ರಾಗದಲ್ಲಿ ಸ್ವರ ಸಂಯೋಜನೆ ಮಾಡಿ ಹಾಡಿ ತೋರಿಸಿದರು. ‘ಭೇಷ್ ಚೆನ್ನಾಗಿದೆ’ ಎಂದ ಬೆಳ್ಳಾವೆಯವರು ಗೀತೆಯನ್ನು ಮುಂದುವರಿಸಿದರು.

ಶಿವ ಪಾರ್ವತಿಯರ ಲೀಲೆಗಳ/ ಸವಿಯನು

ವಿವರಿಸಿ ವಿರಚಿಸಿದೆ/ ಕುಮಾರನುದಿಸಿ

ಮಹಿಮೆಯ ತೋರಿ

ಅಮಿತಾನಂದವ/ ಅಮರರಿಗೆ ಕರುಣಿಸಿದ

ಸುರರಿಪುಹರ/೧/

ಎಂದು ‘ಕುಮಾರ ಸಂಭವ’ದ ಸಾರವನ್ನು ಹೇಳುವ ಚರಣ ರಚಿಸಿ ‘ಹೊನ್ನಪ್ಪ ಇದಕ್ಕೆ ಶಿವರಂಜಿನಿ ಹೊಂದುತ್ತೋ ನೋಡು’ ಎಂದರು. ಹೊನ್ನಪ್ಪ ಭಾಗವರು ಶಿವರಂಜಿನಿಯಲ್ಲಿ ಸ್ವರ ಸಂಯೋಜನೆ ಮಾಡಿದರು.

ಮೇಘ ಸಂದೇಶವ ಪೇಳುವೆನೊಲಿದು

ರಾಗಾವೇಶದ ನಿಜಸತಿಗೆ//

ರಮಣನು ಕಳುಹಿದ ವಿರಹದ ಪರಿಯ

sಸುಮಧುರ ಕೃತಿಯಿದು/ನರುವಿತನೆ/

ಧರೆಯರಸನೆ ವರಚರಿತನೆ/೨/

ಎಂದು ‘ಮೇಘದೂತ’ದ ಸಾರವನ್ನು ಹೇಳುವ ಚರಣವನ್ನು ರಚಿಸಿದರು.ಇದನ್ನು ಹೊನ್ನಪ್ಪನವರು ಹಂಸನಂದಿಯಲ್ಲಿ ಸಂಯೋಜಿಸಿ ಹಾಡಿ ತೋರಿಸಿದರು. ಬೆಳ್ಳಾವೆಯವರು ‘ಸೊಗಸಾಗಿದೆ’ಎಂದು ಹೇಳಿ ಗೀತೆಯನ್ನು ಮುಂದುವರಿಸಿದರು.

ವಾಗಾದಿಯನು/ ಶ್ರೀ ಕಾವ್ಯವನಾ/

ರಘುವಂಶವನೆ/ ಪೇಳಿಹನೈ ದೇವಾ/

ರಾಘವ ಚರಿತೆಯನು ಕೇಳೈ

ಅನುರಾಗದಿಂ ನೀಂ/ ಕವಿಜಗಹಿತ/

ನವಗುಣಯುತ ಭುವನವಿನುತ/೩/

ಎಂದು ಗೀತೆಯನ್ನು ಮುಗಿಸಿದರು. ದರ್ಬಾರಿ ಕಾನಡಾ ರಾಗದಲ್ಲಿ ಹೊನ್ನಪ್ಪ ಭಾಗವತರ್ ಅವರು ಕೊನೆಯ ಚರಣಕ್ಕೆ ಸ್ವರ ಸಂಯೋಜನೆ ಮಾಡಿದರು. ಹಾಡು ಮುಕ್ತಾಯವಾದಾಗ ಇಪ್ಪತ್ತು ನಿಮಿಷಗಳಾಗಿದ್ದವು ಅಷ್ಟೇ. ಈ ಕಡಿಮೆ ಅವಧಿಯಲ್ಲೇ ಶ್ರೇಷ್ಠ ಚಿತ್ರಗೀತೆಯೊಂದು ರಚನೆಯಾಗಿದ್ದು ಮಾತ್ರವಲ್ಲ ಸ್ವರ ಸಂಯೋಜನೆ ಕೂಡ ಪೂರ್ಣಗೊಂಡಿತ್ತು. ಬೆಳ್ಳಾವೆ ನರಹರಿ ಶಾಸ್ತ್ರಿಗಳ ಮತ್ತು ಹೊನ್ನಪ್ಪ ಭಾಗವತರ್ ಅವರ ಪ್ರತಿಭೆಯ ಹರಹು ಎಷ್ಟು ದೊಡ್ಡದು ಎನ್ನುವುದು ಈ ಪ್ರಸಂಗದಿಂದ ತಿಳಿದು ಬರುತ್ತದೆ.

‘ಮಹಾಕವಿ ಕಾಳಿದಾಸ’ ಎಂದು ಚಿತ್ರಕ್ಕೆ ಹೆಸರನ್ನು ಇಡಲಾಯಿತು. ಕಾಳಿದಾಸನ ಗುರುಗಳ ಪಾತ್ರಕ್ಕೆ ತಮ್ಮ ನೈಜ ಜೀವನದ ಗುರುಗಳಾದ ಸಂಬಂಧ ಮೂರ್ತಿ ಭಾಗವತರ್ ಅವರನ್ನೇ ಆಯ್ಕೆ ಮಾಡಿಕೊಂಡರು. ಭೋಜರಾಜನ ಪಾತ್ರಕ್ಕೆ ಬೇಲೂರು ರಾಘವೇಂದ್ರ ರಾವ್ ಅವರೂ ದುಷ್ಟ ಮಂತ್ರಿಯ ಪಾತ್ರಕ್ಕೆ ಜಿ.ವಿ.ಅಯ್ಯರ್ ಅವರೂ ಆಯ್ಕೆಯಾದರು. ನರಸಿಂಹ ರಾಜು, ಬಿ.ಕೆ.ಈಶ್ವರಪ್ಪ, ಎಂ.ಗಣಪತಿ ಭಟ್, ಎಂ.ಜಿ.ಮರಿರಾವ್, ಸಿ.ವಿ.ಶಿವಶಂಕರ್, ಕಮೆಡಿಯನ್ ಗುಗ್ಗು, ರಾಜ ಸುಲೋಚನ, ಮಿತ್ರವಿಂದ, ರೋಹಿಣಿ, ಶಕುಂತಲ, ಲಕ್ಷ್ಮೀದೇವಿ ಮೊದಲಾದವರು ಉಳಿದ ಪಾತ್ರಗಳಿಗೆ ಆಯ್ಕೆಯಾದರು. ಈಗ ಬಾಕಿ ಉಳಿದಿದ್ದು ನಾಯಕಿಯ ಪಾತ್ರ. ಇದಕ್ಕೆ ಹೊಸ ಮುಖ ಬೇಕು ಎಂದು ಭಾಗವತರು ಹುಡುಕುತ್ತಿದ್ದರು.

ಬೆಂಗಳೂರಿನಲ್ಲಿದ್ದಾಗ ಬಿಡುವಿನ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಹೊನ್ನಪ್ಪ ಭಾಗವತರ್ ಅವರ ಹವ್ಯಾಸವಾಗಿತ್ತು. ಹೀಗೆ ಒಮ್ಮೆ ಮೆಯೋ ಹಾಲಿನಲ್ಲಿ ‘ಜಯ ಮಾರತಿ ಆರ್ಕೆಸ್ಟ್ರಾ’ದಲ್ಲಿ ಸೊಗಸಾಗಿ ಹಾಡುತ್ತಿದ್ದ ಹುಡುಗಿಯು ಅವರ ಕಣ್ಣಿಗೆ ಬಿದ್ದಳು. ನೋಡಲು ಕೂಡ ಅವಳು ಚೆನ್ನಾಗಿದ್ದಳು. ‘ಅನಾರ್ಕಲಿ’ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ ‘ಏ ಜಿಂದಗೀ ಉಸೀಕಿ’ ಗೀತೆಯನ್ನು ಪೂರ್ಣವಾಗಿ ಹೊನ್ನಪ್ಪನವರು ಕೇಳಿ ಮೆಚ್ಚಿಕೊಂಡ ನಂತರ ಅಭಿನಯದ ಜೊತೆಗೆ ಹಾಡನ್ನೂ ಹಾಡ ಬಲ್ಲಳು ಎಂದು ನಿರ್ಧರಿಸಿ ಆ ಹುಡುಗಿಯ ತಾಯಿಯನ್ನು ಕಂಡು ಮಾತನಾಡಿದರು. ಅವರು ಕೂಡಲೇ ಒಪ್ಪಿಕೊಂಡರೂ ಆ ಹುಡುಗಿ ಒಪ್ಪಲಿಲ್ಲ. ಆಕೆಗೆ ಸಿನಿಮಾ ಎಂದರೆ ಅಷ್ಟು ಇಷ್ಟವಿರಲಿಲ್ಲ. ತಾಯಿ ಬಹಳವಾಗಿ ಒತ್ತಾಯಿಸಿ ‘ಇದೊಂದು ಸಿನಿಮಾ ನಂತರ ಶಾಲೆಗೆ ಹೋಗ ಬಹುದು’ ಎಂದ ನಂತರ ಒಪ್ಪಿಕೊಂಡಳು. ಹೀಗೆ ಆಯ್ಕೆಯಾದವರೇ ಬಿ.ಸರೋಜ ದೇವಿ. ಈ ಚಿತ್ರ ನಿರ್ಮಾಣದ ಹಂತದಲ್ಲಿದ್ದಾಗಲೇ ‘ಶ್ರೀರಾಮ ಪೂಜಾ’ಚಿತ್ರದಲ್ಲಿ ಅವರಿಗೆ ಅವಕಾಶ ದೊರಕತು. ‘ಮಹಾಕವಿ ಕಾಳಿದಾಸ’ದಲ್ಲಿ ಅವರದು ಬಹಳ ಮುಖ್ಯವಾದ ವಿದ್ಯಾಧರೆಯ ಪಾತ್ರ. ಆರಂಭದಲ್ಲಿ ಸಂಸ್ಕೃತ ಭುವಿಷ್ಠವಾದ ಸಂಭಾಷಣೆಗಳನ್ನು ಹೇಳಲು ಕಷ್ಟ ಪಡುತ್ತಿದ್ದರು. ಅಭಿನಯದ ಹಿನ್ನಲೆ ಇರದಿದ್ದರಿಂದ ಭಾವನೆಗಳನ್ನು ಪ್ರದರ್ಶಿಸುವುದೂ ಕಷ್ಟವಾಗುತ್ತಿತ್ತು. ಒಂದು ಹಂತದಲ್ಲಂತೂ ನಿರ್ದೇಶಕ ಕು.ರ.ಸೀತಾರಾಮ ಶಾಸ್ತ್ರಿಗಳು ಇವರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸಾಧ್ಯವೇ ಇಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದೂ ಉಂಟು. ಆದರೆ ಹೊನ್ನಪ್ಪನವರು ಶ್ರದ್ಧೆಯಿಂದ ಅವರಿಗೆ ಹಂತ ಹಂತವಾಗಿ ಅಭಿನಯವನ್ನು ಕಲಿಸಿದರು. ಮುಂದೆ ಸರೋಜ ದೇವಿ ಚತುರ್ಭಾಷಾ ನಟಿಯಾಗಿ ದೇಶದ ಪ್ರಮುಖ ನಾಯಕರೆಲ್ಲರ ಜೊತೆಗೂ ಅಭಿನಯಿಸಿ ಹೆಸರು ಮಾಡಿದರು. ‘ಭಾಗವತರ ಆಶೀರ್ವಾದದಿಂದ ನಾನು ಚಿತ್ರರಂಗದಲ್ಲಿ ಬೆಳೆದು ದೊಡ್ಡ ಹೆಸರನ್ನು ಮಾಡಿದೆ’ ಎಂದು ಸರೋಜಾ ದೇವಿಯವರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಚಿತ್ರದಲ್ಲಿ ಅವರಿಂದ ಹಾಡಿಸುವ ಉದ್ದೇಶವಿತ್ತು. ಅದಕ್ಕಾಗಿ ಒಂದೆರಡು ರಿಹರ್ಸಲ್‌ಗಳೂ ಆಗಿದ್ದವು ಆದರೆ ಯಾವ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲವೋ ಗೊತ್ತಿಲ್ಲ. ಸಿ.ಎಸ್.ಸರೋಜಿನಿಯವರಿಂದ ಗೀತೆಗಳನ್ನು ಚಿತ್ರದಲ್ಲಿ ಹಾಡಿಸಲಾಯಿತು. ಮುಂದೆ ಸರೋಜ ದೇವಿಯವರಿಗೆ ಗಾಯಕಿಯಾಗುವ ಅವಕಾಶ ಸಿಗಲೇ ಇಲ್ಲ.

ಅರಮನೆ, ದರ್ಬಾರ್, ಅಂತಃಪುರ ಮೊದಲಾದ ಸನ್ನಿವೇಶಗಳಿಗೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಅದು ಚಿತ್ರೀಕರಣವಾಗುತ್ತಿದ್ದ ‘ವಾಹಿನಿ ಸ್ಟುಡಿಯೋ’ದ ಮಾಲೀಕರಾದ ಬಿ.ನಾಗಿರೆಡ್ಡಿಯವರು ಹೇಳಿ ಕಳುಹಿಸಿದರು. ವಿಜಯ ಮತ್ತು ವಾಹಿನಿ ಎರಡೂ ಅವರ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಪ್ರಮುಖ ಸ್ಟುಡಿಯೋಗಳು. ಒಂದು ಕಾಲದಲ್ಲಿ ಬಹಳ ಹೆಸರು ಮಾಡಿದ್ದ ಚಲನಚಿತ್ರ ಪತ್ರಿಕೆ ‘ವಿಜಯ ಚಿತ್ರ’, ಮಕ್ಕಳ ಪತ್ರಿಕೆ ‘ಚಂದಮಾಮ’ವನ್ನು ಈ ಸಂಸ್ಥೆಯವರೇ ಪ್ರಕಟಿಸುತ್ತಿದ್ದರು. ನಾಗಿರೆಡ್ಡಿಯವರು ‘ಭಾಗವತರೇ ತುಂಬಾ ಒಳ್ಳೆಯ ಚಿತ್ರವನ್ನು ಮಾಡುತ್ತಿದ್ದೀರಿ, ನಮ್ಮ ‘ಚಂದ್ರಹಾರ’ ಸಿನಿಮಾದ ಸೆಟ್‌ಗಳನ್ನು ಧಾರಾಳವಾಗಿ ಬಳಸಿಕೊಳ್ಳಿ ಎಂದರು. ಇದರಿಂದ ಆ ದೃಶ್ಯಗಳೆಲ್ಲವೂ ವೈಭವೋಪೇತವಾಗಿ ಮೂಡಿ ಬಂದವು. ಹೀಗೆ ‘ಮಹಾಕವಿ ಕಾಳಿದಾಸ’ ಉತ್ತಮವಾಗಿ ಮೂಡಿ ಬಂದಿತು. ಬಿಡುಗಡೆ ದಿನವನ್ನು ನಿಗದಿಗೊಳಿಸಿ ಸೆನ್ಸಾರ್‌ಗೆ ದಿನಾಂಕವನ್ನು ಗೊತ್ತು ಪಡಿಸಿ ಸಿದ್ದವಾಗಿದ್ದ 19 ಸಾವಿರ ಅಡಿಗಳನ್ನು ವಾಹಿನಿ ಸ್ಟುಡಿಯೋದಲ್ಲಿ ಕುಳಿತು ನೋಡಿದರೆ ಚಿತ್ರಕ್ಕೂ ಮಾತಿಗೂ ಸಂಬಂಧವೇ ಇಲ್ಲದಂತೆ ಮೂಡಿಬಂದಿತ್ತು. ಇದನ್ನು ಕಂಡು ಹೊನ್ನಪ್ಪನವರಿಗೆ ದು:ಖವನ್ನು ತಡೆಯಲಾಗಲಿಲ್ಲ. ಬಹಳವಾಗಿ ಯೋಚಿಸುತ್ತಾ ಅವರು ಕೊನೆಗೆ ಸ್ಟುಡಿಯೊ ಆವರಣದಲ್ಲೇ ಇದ್ದ ಒಂದು ಮರದ ಅಡಿಯಲ್ಲಿ ಕುಳಿತು ಕಣ್ಣೀರು ಹಾಕಿದರು.

ಈ ವಿಷಯವನ್ನು ಸ್ಟುಡಿಯೋದ ನೌಕರರೊಬ್ಬರು ನಾಗಿರೆಡ್ಡಿಯವರ ಗಮನಕ್ಕೆ ತಂದರು. ಅವರು ಕೂಡಲೇ ಭಾಗವತರ್ ಅವರನ್ನು ಸ್ಟುಡಿಯೋಕ್ಕೆ ಕರೆಸಿಕೊಂಡು ‘ಏಕೆ ಬೇಸರದಲ್ಲಿ ಇದ್ದೀರಿ, ಚಿತ್ರ ಸೆನ್ಸಾರ್ ಆಯಿತಲ್ಲವೆ?’ಎಂದರು. ಅದಕ್ಕೆ ಭಾಗವತರ್ ಅವರು ‘ಚಿತ್ರವೇನೋ ಸೆನ್ಸಾರ್ ಆಗಿದೆ ಆದರೆ ನಾನ್ ಸಿಂಕ್ ಆಗಿ ಬಿಟ್ಟಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನೂ ಗೊತ್ತು ಪಡಿಸಿ ಥಿಯೇಟರ್‌ಗಳ ಜೊತೆ ಮಾತನಾಡಿದ್ದು ಆಗಿದೆ ಮುಂದೇನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ’ ಎಂದರು. ಅದಕ್ಕೆ ನಾಗೀರೆಡ್ಡಿಯವರು ಒಡನೆಯೇ ತಮ್ಮ ಸ್ಟುಡಿಯೋದ ಜಂಬೋ ಮತ್ತು ಕಲ್ಯಾಣ್ ಎಂಬ ಇಬ್ಬರು ಎಡಿಟರ್‌ಗಳನ್ನು ಕರೆದು ‘ನೋಡಿ ಭಾಗವತರ್ ಸಿನಿಮಾ ನಾನ್ ಸಿಂಕ್ ಆಗಿದೆಯಂತೆ, ಅವರು ಬಿಡಗಡೆ ದಿನಾಂಕ ನಿರ್ಧರಿಸಿ ಥಿಯೇಟರ್ ಕೂಡ ಬುಕ್ ಮಾಡಿದ್ದಾರಂತೆ ಇಂದು ರಾತ್ರಿ ಆ ಸಿನಿಮಾ ನೋಡೊಣ ಸಮಸ್ಯೆ ಏನಾಗಿದೆ ಎಂದು ತಿಳಿದು ಸರಿಪಡಿಸೋಣ’ ಎಂದು ಹೇಳಿ ಭಾಗವತರಿಗೆ ‘ನೀವು ರಾತ್ರಿಯ ಊಟ ಮುಗಿಸಿಕೊಂಡು ಒಂಭತ್ತು ಗಂಟೆಗೆ ಶಾಸ್ತ್ರಿಗಳ ಜೊತೆ ಸ್ಟುಡಿಯೋಕ್ಕೆ  ಬನ್ನಿ’ ಎಂದರು. ಅದರಂತೆ ಅಂದು ರಾತ್ರಿ ಒಂದು ಗಂಟೆಯವರೆಗೂ ಚಿತ್ರವನ್ನು ನಾಗಿರೆಡ್ಡಿಯವರೂ ಹೊನ್ನಪ್ಪ ಭಾಗವತರ್ ಅವರ ತಂಡದೊಂದಿಗೆ ಕುಳಿತು ನೋಡಿದರು. ನಂತರ ಭಾಗವತರ್ ಅವರ ಜೊತೆಯಲ್ಲಿ ಮಾತನಾಡುತ್ತಾ ‘ಇದರಲ್ಲಿರುವುದು ಟೆಕ್ನಿಕಲ್ ಪ್ರಾಬ್ಲಂ, ಎಡಿಟ್ ಮಾಡಿದವರು ಜವಾಬ್ದಾರಿಯಿಂದ ಮಾಡದೆ ಹೀಗಾಗಿದೆ. ಈಗ ಪ್ರತಿಯೊಂದು ರೀಲನ್ನೂ ಸಿಂಕ್ ಮಾಡಿ ಹೊಸ ಪಾಸಿಟಿವ್ ಮೇಲೆ ಪ್ರಿಂಟ್ ಮಾಡೋಣ. ಆಗ ನೀವು ಮತ್ತು ಸೀತಾರಾಮ ಶಾಸ್ತ್ರಿಗಳು ಕಂಟ್ಯೂನಿಟಿ ಗಮನಿಸಿ ಅನವಶ್ಯಕವಾಗಿದ್ದನ್ನು ಕಟ್ ಮಾಡುತ್ತಾ ಬನ್ನಿ.’ ಎಂದರು. ಅದರಂತೆ ಪ್ರತಿದಿನವೂ ನಾಗಿರೆಡ್ಡಿಯವರ ಜೊತೆ ಹೊನ್ನಪ್ಪ ಭಾಗವತರ್ ಕುಳಿತು ಒಂದೊಂದೇ ರೀಲನ್ನು ಚೆಕ್ ಮಾಡಿ ಸಿಂಕ್ ಮಾಡಿಸಿ ಎಡಿಟ್ ಮಾಡಿಸುತ್ತಾ ಬಂದರು. ಸುಮಾರು ಹತ್ತು ದಿನಗಳಲ್ಲಿ ಚಿತ್ರವು ಪೂರ್ಣ ಎಡಿಟ್ ಆಗಿ ಹದಿನಾರು ಸಾವಿರ ಅಡಿಗೆ ಬಂದು ನಿಂತಿತು. ಅಂದಿನ ರಾತ್ರಿ ನಾಗಿರೆಡ್ಡಿಯವರು ತಮ್ಮ ಸ್ಟುಡಿಯೋದರೆಲ್ಲರನ್ನೂ ಕರೆಸಿ ‘ಚಿತ್ರವನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ’ಎಂದರು. ಅವರೆಲ್ಲರೂ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡರು. ಆಗ ಹೊನ್ನಪ್ಪ ಭಾಗವತರ್ ಅವರಿಗೆ ಹೋದ ಜೀವ ಬಂದಂತಾಯಿತು. ಚಿತ್ರ ಬಿಡುಗಡೆಯಾಗಿ ಉತ್ತಮ ಹೆಸರನ್ನು ಪಡೆಯುತ್ತಿರುವಾಗ  ಹೊನ್ನಪ್ಪ ಭಾಗವತರ್ ಅವರು ಕು.ರ.ಸೀತಾರಾಮ ಶಾಸ್ತ್ರಿಗಳ ಜೊತೆಯಲ್ಲಿ ನಾಗಿರೆಡ್ಡಿಯವರನ್ನು ಭೇಟಿ ಮಾಡಿ “ನಿಮ್ಮ ದಯೆಯಿಂದ ಚಿತ್ರಕ್ಕೆ ಒಳ್ಳೆಯ ಕೀರ್ತಿ ಬಂದಿತು. ನಾನು ನಿಮಗೆ ಇನ್ನೆಷ್ಟು ಬಾಕಿ ನೀಡ ಬೇಕಾಗಿದೆ ತಿಳಿಸಿ” ಎಂದು ವಿನಂತಿಸಿ ಕೊಂಡರು. ಆಗ ನಾಗಿರೆಡ್ಡಿಯವರು ಲೆಕ್ಕ ತರಿಸಿ ನೋಡಿ “ಕಾಲ್‌ಶೀಟ್, ಸೆಟ್‌ನ ಬಾಬ್ತು 22 ಸಾವಿರ ಮತ್ತೆ ಎಡಿಟಿಂಗ್ ಬಾಬ್ತು 15 ಸಾವಿರ ನೀಡಬೇಕಾಗುತ್ತದೆ.”ಎಂದು ಹೇಳಿ ಸ್ವಲ್ಪ ಹೊತ್ತು ಯೋಚನೆ ಮಾಡಿ “ಭಾಗವತರೇ ನೀವು ಬಹಳ ಕಷ್ಟಪಟ್ಟು ಒಳ್ಳೆಯ ಸಿನಿಮಾ ಮಾಡಿದ್ದೀರಿ.ನಮಗೆ ಯಾವ ಹಣವನ್ನೂ ನೀಡ ಬೇಕಾಗಿಲ್ಲ. ಕಲಾದೇವಿ ನಿಮಗೆ ಒಳ್ಳೆಯದನ್ನು ಮಾಡಲಿ” ಎಂದು ಆಶೀರ್ವಾದ ಮಾಡಿದರು. ಹನಿಗೂಡಿದ ಕಣ್ಣಿನೊಡನೆ ಹೊನ್ನಪ್ಪ ಭಾಗವತರ್ ಅವರು ಮತ್ತು ಕು.ರ.ಸೀತಾರಾಮ ಶಾಸ್ತ್ರಿಗಳು ನಾಗಿರೆಡ್ಡಿಯವರ ಕಾಲಿಗೆ ನಮಸ್ಕರಿಸಿದರು.

‘ಮಹಾಕವಿ ಕಾಳಿದಾಸ’ ಎಂಟು ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡಿತು. ಆ ಕಾಲದಲ್ಲಿ ಅದೇ ದೊಡ್ಡ ಸಾಧನೆ ಎನ್ನಿಸಿಕೊಳ್ಳುತ್ತಿತ್ತು. ಚಿತ್ರದಿಂದ ಭಾಗವತರಿಗೆ ಲಾಭವೇನು ಬರದಿದ್ದರೂ ಉತ್ತಮ ಹೆಸರು ಬಂದಿತು. 1955ನೇ ಸಾಲಿನ ಅತ್ಯುತ್ತಮ ಕನ್ನಡ ಚಿತ್ರವೆಂಬ ರಾಷ್ಟ್ರಪ್ರಶಸ್ತಿಯ ಬೆಳ್ಳಿಪದಕದ ಗೌರವವೂ ಚಿತ್ರಕ್ಕೆ ದೊರಕಿತು. ಈ ಗೌರವವನ್ನು ಪಡೆದ ಮೊದಲ ಕನ್ನಡ ಚಿತ್ರ ‘ಮಹಾಕವಿ ಕಾಳಿದಾಸ’, ಚಿತ್ರವು ನಿರೂಪಣಾ ಕ್ರಮದಿಂದ, ಕಥೆಯನ್ನು ದೃಶ್ಯಕ್ಕೆ ಪರಿವರ್ತಿಸುವ ರೀತಿಯಿಂದ, ಸಂಗೀತವನ್ನು ಅಳವಡಿಸಿಕೊಂಡಿರುವ ಕ್ರಮದಿಂದ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೈಲುಗಲ್ಲು ಎನ್ನಿಸಬಲ್ಲಂತಹ ಚಿತ್ರ. ವಿದ್ಯಾಧರೆ ಹಳೆಯದನ್ನು ಮರೆತಿದ್ದ ಕಾಳಿದಾಸನ ಪರಿಸರವನ್ನು ತೋರಿಸುವ ಕ್ರಮದಿಂದಲೇ ನೆನಪುಗಳನ್ನು ಮರಳಿ ತರುವ ಸನ್ನಿವೇಶ ಹೊಸತನವಿಂದ ಕೂಡಿದೆ. ಹೊನ್ನಪ್ಪ ಭಾಗವತರ್ ತಮ್ಮ ಅಭಿನಯ ಮತ್ತು ಗಾಯನದಿಂದ ಚಿತ್ರಕ್ಕೆ ಘನತೆ ತಂದಿದ್ದಾರೆ. ಸರೋಜ ದೇವಿ ತಮ್ಮ ಫ್ರೆಷ್‌ನೆಸ್‌ನಿಂದ ಗಮನ ಸೆಳೆದರೆ, ಭೋಜರಾಜನಾಗಿ ಬೇಲೂರು ರಾಘವೇಂದ್ರ ರಾವ್, ಮಂತ್ರಿಯಾಗಿ ಜಿ.ವಿ.ಅಯ್ಯರ್ ಕೂಡ ಪ್ರಬುದ್ಧ ಅಭಿನಯ ನೀಡಿದ್ದರು.

‘ಮಹಾಕವಿ ಕಾಳಿದಾಸ’ಚಿತ್ರದ ನಂತರ ಕು.ರ.ಸೀಯವರು ನಿರ್ದೇಶಿಸಿದ್ದು ಗುಬ್ಬಿ ಕಂಪನಿಯ ಇನ್ನೊಂದು ಜನಪ್ರಿಯ ನಾಟಕ ‘ಸದಾರಮೆ’ಯನ್ನು. ಇದು ಗುಬ್ಬಿ ಕಂಪನಿಯ ಅತ್ಯಂತ ಹಳೆಯ ನಾಟಕ. ಬೆಳ್ಳಾವೆ ನರಸಿಂಹ ಶಾಸ್ತ್ರಿಗಳು ಅದನ್ನು ರಚಿಸಿದ್ದರು. ಇಂದ್ರವತಿಯ ಅರಸ ರಾಜಕಂಠೀರವ ಅವನಿಗೆ ಮಗ ರಾಜಮಾರ್ತಾಂಡನ ಮದುವೆಯ ಚಿಂತೆ. ಬ್ರಹ್ಮಾಚಾರಿಯೇ ಆಗಿರುವ ಹಂಬಲ ಹೊಂದಿದ ಅವನನ್ನು ಚಂಚಲಗೊಳಿಸಿದವಳು ಸದಾರಮೆ. ಅವಳು ಬಂಗಾರ ಶೆಟ್ಟಿ ಮಗಳು ಅರಸನು ವಿವಾಹ ಮಾಡಿ ಕೊಡಲು ಕೇಳಿದಾಗ ತನ್ನ ಮಗ ಆದಿಮೂರ್ತಿಯನ್ನು ರಾಜನನ್ನಾಗಿಸಲು ಕೇಳುತ್ತಾನೆ. ಮುಂದೆ ಆದಿಮೂರ್ತಿ ತಂಗಿ ಸದಾರಮೆ ಮತ್ತು ರಾಜಾಮಾರ್ತಾಂಡನನ್ನು ರಾಜ್ಯದಿಂದ ಹೊರ ಕಳುಹಿಸುತ್ತಾನೆ. ಸದಾರಮೆಯ ಸೌಂದರ್ಯಕ್ಕೆ ಮರುಳಾಗಿ ಕಲಹಂಸನು ರಾಜಾಮಾರ್ತಂಡನನ್ನು ಬಂಧಿಸಿ ಅವಳನ್ನು ಮದುವೆಯಾಗಲು ಬಯಸುತ್ತಾನೆ. ಅವಳು ಗೌರಿ ವ್ರತದ ನೆಪ ಹೇಳಿ ಬಿಡುಗಡೆಯ ದಾರಿಯನ್ನು ಕಂಡುಕೊಳ್ಳುತ್ತಾಳೆ. ಆದರೆ ಇದನ್ನು ಕದ್ದು ಕೇಳಿಸಿಕೊಂಡಿದ್ದ ಕಳ್ಳನು ವಂಚನೆಯಿಂದ ಸದಾರಮೆಯನ್ನು ಕೊಂಡೊಯ್ಯುತ್ತಾನೆ. ಮುಂದೆ ಅವಳು ಗಂಡು ವೇಷವನ್ನು ಧರಿಸಿ ವಿದ್ಯಾರಣ್ಯ ಎಂಬ ನಗರಕ್ಕೆ ಬಂದು ಪಟ್ಟವನ್ನು ಏರಿ ರಾಜ್ಯಭಾರವನ್ನು ನಡೆಸುತ್ತಾಳೆ ಮುಂದೆ ಸುಖಾಂತ್ಯವಾಗುತ್ತದೆ. ಗುಬ್ಬಿ ವೀರಣ್ಣನವರೇ 1935ರಲ್ಲಿ ಇದನ್ನು ಮೊದಲು ಚಲನಚಿತ್ರವಾಗಿ ನಿರ್ಮಿಸಿದ್ದರು. ಆಗ ಅಶ್ವತ್ಥಮ್ಮನವರು ಸದಾರಮೆ ಪಾತ್ರವನ್ನು ವಹಿಸಿ ಹೆಸರನ್ನು ಮಾಡಿದ್ದರು. ಈಗ ಕೊಂಚ ಆಧುನಿಕಗೊಳಿಸಿ ಅವರೇ ಮತ್ತೆ ನಿರ್ಮಿಸಲು ಬಯಸಿದರು. ಆರ್.ಗೋವರ್ಧನಂ ಮತ್ತು ಆರ್.ಸುದರ್ಶನಂ ಅವರ ಸಂಗೀತ ನಿರ್ದೇಶನದಲ್ಲಿ ಪ್ರಸಿದ್ದವಾಗಿದ್ದ ರಂಗ ಗೀತೆಗಳನ್ನು ಬಿಟ್ಟು ಬೇರೆ ಗೀತೆಗಳನ್ನು ಕು.ರ.ಸೀ ಬರೆದರು. ಬಾರೆ ಬಾರೆ ನನ್ನ ಹಿಂದೆ ಹಿಂದೆ, ಚಿನ್ನಾ ಕೇಳ್ಬೇಡ್ವೆ ನನ್ನ ಪುರಾಣ, ಬಾಳುವೆಯಾ ದೇಗುಲದ ಬಾಗಿಲ ನೀ ತೆರೆದೆಯಾ ಮೊದಲಾದ ಗೀತೆಗಳು ಜನಪ್ರಿಯವಾದವು. ಕಲ್ಯಾಣ್ ಕುಮಾರ್, ನರಸಿಂಹ ರಾಜು, ಸಾಹುಕಾರ್ ಜಾನಕಿ, ಗುಬ್ಬಿ ವೀರಣ್ಣ ಮೊದಲಾದವರಿಗೂ ಈ ಚಿತ್ರದ ಮೂಲಕ ಹೆಸರು ಬಂದಿತು. ಕೌಶಿಕ್, ಜಿ.ವಿ.ಅಯ್ಯರ್, ಎಸ್.ಆರ್.ರಾಜು ಮೊದಲಾದವರು ಚಿತ್ರದಲ್ಲಿದ್ದರು. ಇದರ ಜೊತೆಗೆ ತೆಲುಗು ಅವತರಣಿಕೆ ಕೂಡ ರೂಪುಗೊಂಡಿತು. ಅಕ್ಕಿನೇನಿ ನಾಗೇಶ್ವರ ರಾವ್ ಪ್ರಧಾನ ಪಾತ್ರದಲ್ಲಿದ್ದ ಇದನ್ನು ಕು.ರ.ಸೀಯವರೇ ನಿರ್ದೇಶಿಸಿದ್ದರು.

ಕು.ರ.ಸೀಯವರು ನಿರ್ದೇಶಿಸಿದ ಮೂರನೇ ಚಿತ್ರ ‘ಅಣ್ಣ ತಂಗಿ’. ಟಿ.ಎನ್.ಕರಿಬಸಯ್ಯ ನಿರ್ಮಿಸಿದ ಈ ಚಿತ್ರ ‘ಮಕ್ಕಳೈ ಪೆಟ್ರ ಮಹಾರಾಸಿ’ ಎನ್ನುವ ತಮಿಳು ಚಿತ್ರದ ಕನ್ನಡ ಅವತರಣಿಕೆಯಾಗಿದ್ದರೂ ಅಪ್ಪಟ ಕನ್ನಡತನದಿಂದ ಮೂಡಿ ಬಂದಿತ್ತು. ಕನ್ನಡದ ಮೊಟ್ಟ ಮೊದಲ ಗ್ರಾಮೀಣ ಬದುಕಿನ ಚಿತ್ರ ಎಂದೂ ಚರಿತ್ರೆಕಾರರು ಇದನ್ನು ಗುರುತಿಸಿದ್ದಾರೆ. ಮೈಸೂರು ಪ್ರಾಂತ್ಯದ ಗ್ರಾಮ್ಯ ಸೊಗಡಿನ ಕನ್ನಡವನ್ನು ಕು.ರ.ಸೀ ಚಿತ್ರದಲ್ಲಿ ಬಳಸಿದರು. ಅಣ್ಣ ತಂಗಿಯರ ನಡುವೆ ವಿರಸ ಅವರ ಮಕ್ಕಳಿಗೂ ಮುಂದುವರೆಯುತ್ತದೆ. ಅವರಲ್ಲಿ ಒಂದು ಕಲಿತ ಜೋಡಿ ಇನ್ನೊಂದು ಕಲಿಯದವರದು. ಹೀಗೆ ವೈಮನಸ್ಯ, ದ್ವೇಷ, ಸತ್ಯ, ಧರ್ಮ, ನ್ಯಾಯ ಪರಿಪಾಲನೆ ಮೊದಲಾದ ಹಲವು ನೆಲೆಗಳು ಚಿತ್ರದಲ್ಲಿದ್ದವು. ರಾಜ್ ಕುಮಾರ್, ಬಿ.ಸರೋಜ ದೇವಿ, ಬಿ.ಜಯಮ್ಮ, ಕೆ.ಎಸ್.ಅಶ್ವತ್ಥ್, ಈಶ್ವರಪ್ಪ, ಎಂ.ಎನ್.ಲಕ್ಷ್ಮೀದೇವಿ, ಟಿ.ಎನ್.ಬಾಲಕೃಷ್ಣ ಮೊದಲಾದವರು ತಾರಾಗಣದಲ್ಲಿದ್ದರು. ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ಎಚ್ಚರಿಕೆ, ಎಚ್ಚರಿಕೆ, ಬಂದಾನೆ ಅವ ಬಂದಾನೆ, ಕಂಡರೂ ಕಾಣ್ಹದ್ಹಂಗೆ ಮೊದಲಾದ ಗೀತೆಗಳು ಜನಪ್ರಿಯವಾದವು. ಧೈರ್ಯ ಬೇಕು ಧೈರ್ಯ ಬೇಕು ಗೀತೆಯಲ್ಲಿ ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನೂ ಬೆರೆಸಿ ಕು.ರ.ಸೀ ಹೊಸ ಪ್ರಯೋಗವನ್ನು ಮಾಡಿದ್ದಾರೆ.

ಹಾಂಕಾಂಗ್‌ನಲ್ಲಿದ್ದಾಗ ಕು.ರ.ಸೀಯವರು ರೂಪಿಸಿದ್ದ ಒಂದು ಸಬ್ಜೆಕ್ಟ್ ಚಿತ್ರವಾಗದೆ ಉಳಿದಿತ್ತು. ಅದನ್ನು ಕನ್ನಡದಲ್ಲಿ ಚಿತ್ರವಾಗಿಸಲು ಕು.ರ.ಸೀಯವರು ಬಯಸಿದರು. ಬಜೆಟ್ ಹಿಗ್ಗಿದಾಗ ಕರಿಬಸಯ್ಯನವರೊಡನೆ ತಾವೂ ನಿರ್ಮಾಪಕರಾದರು. ಚಿತ್ರದ ಕಥೆ ಜನಪದದ ಹಿನ್ನೆಲೆಯ ಫ್ಯಾಂಟಸಿ ಭೂಮಿಕೆಯಲ್ಲಿದ್ದು ಕನ್ನಡಕ್ಕೆ ಹೊಸ ಮಾದರಿಯದಾಗಿತ್ತು. ಪಾಳೇಗಾರನನ್ನು ಮೀರಿಸಿದ ದಳವಾಯಿಯ ದರ್ಪವನ್ನು ಎದುರಿಸಿ ನಿಂತಂತಹ ಚೆಲುವೆ. ಅಪವಾದಗಳ ಸಾಲೇ ಎದುರಾದರೂ ಧೈರ್ಯದಿಂದ ಅದನ್ನು ಎದುರಿಸುತ್ತಾಳೆ. ವಿವಾಹವಾದ ಬಳಿಕ ಅಪ್ಸರೆಯೊಬ್ಬಳು ಗಂಡನನ್ನು ಅಪಹರಿಸುತ್ತಾಳೆ. ಅದರಿಂದ ಬಂದ ಅಪವಾದದಿಂದ ಕಾಡನ್ನು ಸೇರಬೇಕಾಗುತ್ತದೆ. ಅದರೂ ಹೆತ್ತಮಗನಿಂದಲೇ ಲೋಕಕ್ಕೆ ಸತ್ಯವನ್ನು ತಿಳಿಸುತ್ತೇನೆ ಎಂಬ ಶಪಥವನ್ನು ಈಡೇರಿಸಿಕೊಳ್ಳುತ್ತಾಳೆ. ರಾಜ್ ಕುಮಾರ್,

ಲೀಲಾವತಿ, ಲಲಿತಾ ಪವಾರ್, ಬಾಲಕೃಷ್ಣ, ನರಸಿಂಹ ರಾಜು, ವೀರಭದ್ರಯ್ಯ, ಈಶ್ವರಪ್ಪ ಮೊದಲಾದವರು ಚಿತ್ರದಲ್ಲಿದ್ದರು. ವಿಜಯಭಾಸ್ಕರ್ ಈ ಚಿತ್ರದ ಮೂಲಕ ಕನ್ನಡದಲ್ಲಿ ಮೊಟ್ಟ ಮೊದಲ ಸಲ ಗಿಟಾರ್ ಬಳಸಿದರು. ಸಿಂಗಾಪುರದಲ್ಲಿ ತಾವು ಕೇಳಿದ್ದ ಟ್ಯೂನ್ ಬಳಸಿ ಕು.ರ.ಸೀ ಸೃಷ್ಟಿಸಿದ ಬಾರಾ ನೀರಾ ಮನೋಹರಾ ಚಿತ್ರದ ವಿಶಿಷ್ಟ ಗೀತೆ ಎನ್ನಿಸಿಕೊಂಡಿತು. ಹಾರುತ ದೂರ ದೂರ ಮೇಲೇರುತ ಹೋಗುವ ಬಾರಾ, ಕೋಲುಗೆಜ್ಜೆ ಸಾಲುಗೆಜ್ಜೆ ತಂದನಾನ, ಜೀವನ ಹೂವಿನ ಹಾಸಿಗೆ ಮೊದಲಾದವು ಚಿತ್ರದ ಮಹತ್ವದ ಗೀತೆಗಳಾಗಿ ಇಂದಿಗೂ ಜನಪ್ರಿಯವಾಗಿವೆ. ‘ರಾಣಿ ಹೊನ್ನಮ್ಮ’ದ ಚಿತ್ರೀಕರಣ ಕಾಡಿನಲ್ಲಿ ನಡೆಯುತ್ತಿದ್ದಾಗ ಕು.ರ.ಸೀಯವರಿಗೆ ಹಾವು ಕಚ್ಚಿತಂತೆ, ಅವರು ಯಾರಿಗೂ ವಿಷಯ ತಿಳಿಸದೆ ಸಿಗರೇಟಿನ ಉರಿಯನ್ನು ಆ ಗಾಯಕ್ಕೆ ಬಲವಾಗಿ ಊರಿ ಚಿತ್ರೀಕರಣ ಮುಂದುವರೆಸಿ ನಂತರ ಚಿಕಿತ್ಸೆಯನ್ನು ಪಡೆದರಂತೆ, ಇದು ಅವರ ಕರ್ತವ್ಯ ನಿಷ್ಟತೆಗೆ ಸಾಕ್ಷಿ ಎನ್ನಿಸ ಬಲ್ಲಂತಹ ಘಟನೆ.

ಆಧುನಿಕತೆ ಕಾಲಿಡುತ್ತಿದ್ದ ಸಂದರ್ಭ ‘ಪ್ರೇಮ ವಿವಾಹ’ದ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಇದನ್ನು ಸಂಪ್ರದಾಯಸ್ಥ ಸಮಾಜ ವಿರೋಧಿಸುತ್ತಿತ್ತು. ಎರಡರ ನಡುವೆ ಹೊಂದಾಣಿಕೆಯನ್ನು ತರುವ ಪ್ರಯೋಗಾತ್ಮಕ ಚಿತ್ರ ‘ಮನಮೆಚ್ಚಿದ ಮಡದಿ’ಯನ್ನು ಕು.ರ.ಸೀ 1963ರಲ್ಲಿ ನಿರ್ದೇಶಿಸಿದರು. ಚಿಕ್ಕ ವಯಸ್ಸಿನಲ್ಲೇ ಹೆಂಡತಿಯನ್ನು ಕಳೆದುಕೊಂಡ ಉಮಾಕಾಂತ ಹಸುಗೂಸನ್ನು ಮಾವನ ಕೈಗೆ ಒಪ್ಪಿಸಿ ನಗರವನ್ನು ಸೇರಿಕೊಂಡ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಶ್ರೀಮಂತ ಮಾಲೀಕರ ಮಗಳನ್ನೇ ಮಗನಿರುವ ಸಂಗತಿಯನ್ನು ಮುಚ್ಚಿಟ್ಟು ವಿವಾಹವಾದ. ಅವನ ಮಗ ಶ್ರೀನಾಥ ತಾತನ ಆಶ್ರಯದಲ್ಲೇ ಬೆಳೆದ. ಉಮಾಕಾಂತ ಹಣಕಾಸಿನ ನೆರವನ್ನು ನೀಡಿದರೂ ತಾನು ತಂದೆಯೆನ್ನುವುದನ್ನು ಹೇಳಲಿಲ್ಲ. ಶ್ರೀನಾಥನು ಉಮಾಕಾಂತನ ಸ್ನೇಹಿತ ದೇವರಾಜಯ್ಯನವರ ಮನೆಯಲ್ಲಿ ಉಳಿದು ವಿದ್ಯಾಭ್ಯಾಸವನ್ನು ಮುಂದುವರೆಸಿದ. ದೇವರಾಜಯ್ಯನ ಮಗಳು ಸುಮನಾ ಜೊತೆ ಪ್ರೇಮ ಅಂಕುರಿಸಿತು.ಎಲ್ಲರ ವಿರೋಧದ ನಡುವೆ ವಿವಾಹವೂ ಆಯಿತು. ಮಗಳು ಬಡವನನ್ನು ಮದುವೆಯಾದಳು ಎಂಬ ಕೋಪದಲ್ಲಿ ದೇವರಾಜಯ್ಯ ಅವಮಾನಿಸಿದ. ಆದರೆ ಎಲ್ಲವನ್ನು ಎದುರಿಸಿದ ಶ್ರೀನಾಥ್ ಮತ್ತು ಸುಮನಾ ಮಾದರಿಯಾಗಿ ಬದುಕಿದರು ಕಡೆಯಲ್ಲಿ ಉಮಾಕಾಂತನೇ ತನ್ನ ತಂದೆ ಎಂದೂ ತಾನು ಬಡವನಲ್ಲವೆಂದೂ ಶ್ರೀನಾಥನಿಗೆ ತಿಳಿಯುತ್ತದೆ. ದೇವರಾಜಯ್ಯನೂ ಅಳಿಯ – ಮಗಳನ್ನು ಒಪ್ಪಿಕೊಳ್ಳುತ್ತಾನೆ. ಎಷ್ಟೇ ಕಷ್ಟ ಬಂದರೂ ಧೃತಿಗೆಡದೆ ಬದುಕನ್ನು ಎದುರಿಸಿದ ಸುಮನಾ ‘ಮನ ಮೆಚ್ಚಿದ ಮಡದಿ’ಯಾಗುತ್ತಾಳೆ. ಈ ಚಿತ್ರದ ಶೀರ್ಷಿಕೆ ಗೀತೆಯಾಗಿ ಕುವೆಂಪು ಅವರ ‘ಜೈ ಭಾರತದ ಜನನಿಯ ತನುಜಾತೆ’ಯನ್ನು ಕು.ರ.ಸೀ ಬಳಸಿದರು. ಅದು ಜನಪ್ರಿಯವಾಗಿ ಮುಂದೆ ನಾಡಗೀತೆಯಾಗುವುದಕ್ಕೂ ಈ ಪ್ರಯೋಗ ಕಾರಣವಾಯಿತು.ತುಟಿಯ ಮೇಲೆ ತುಂಟ ಕಿರುನಗೆ, ಸಿರಿತನ ಬೇಕೆ ಬಡತನ ಸಾಕೆ, ಲವ್ ಲವ್ ಎಂದರೇನು, ಏಸು ನದಿಗಳ ದಾಟಿ ಚಿತ್ರದ ಜನಪ್ರಿಯ ಗೀತೆಗಳು. ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನ ಚಿತ್ರದ ಯಶಸ್ಸಿಗೆ ಕಾರಣವಾಯಿತು. ರಾಜ್ ಕುಮಾರ್, ಲೀಲಾವತಿ, ಕೆ.ಎಸ್.ಅಶ್ವತ್ಥ್, ಉದಯಕುಮಾರ್, ನರಸಿಂಹ ರಾಜು, ಬಾಲಕೃಷ್ಣ ಮೊದಲಾದವರು ಚಿತ್ರದ ಪ್ರಧಾನ ತಾರಾಗಣದಲ್ಲಿದ್ದರು.

ಕು.ರ.ಸೀಯವರು ಎಸ್.ಶಿವರಾಂ ಅವರೊಡನೆ ನಿರ್ಮಿಸಿ ನಿರ್ದೇಶಿಸಿದಂತಹ ಚಿತ್ರ ‘ಬೆರೆತ ಜೀವ’. ಮೂಲತಃ ಇದು ‘ಪಾಲು ಪಾಳುಮಂ’ದ ರೀಮೇಕ್ ಆದರೂ ಕನ್ನಡದ ಸೊಗಡನ್ನು ತುಂಬಿಕೊಂಡಿತ್ತು. ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಕು.ರ.ಸೀಯವರ ಏನು ಬೇಕು ಏನು ಬೇಕು ಎಂದೆನ್ನಾ ಕೆಣಕಿ, ಕಂಡಂಥ ಕನಸೆಲ್ಲಾ ನನಸಾಗಲಿ, ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ, ಅಂಕದ ಪರದೆ ಜಾರಿದ ಮೇಲೆ ಮೊದಲಾದ ಗೀತೆಗಳು ಬಹು ಜನಪ್ರಿಯವಾಗಿ ಇಂದಿಗೂ ಚಿತ್ರದ ಹೆಗ್ಗಳಿಕೆಯನ್ನು ಉಳಿಸಿವೆ. ಕಲ್ಯಾಣ್ ಕುಮಾರ್, ಬಿ.ಸರೋಜ ದೇವಿ, ಜಯಂತಿ, ಅಶ್ವತ್ಥ್, ಬಾಲಕೃಷ್ಣ, ನರಸಿಂಹ ರಾಜು, ರಾಮಚಂದ್ರ ಶಾಸ್ತ್ರಿ ಮೊದಲಾದವರು ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರದ ಮೂಲಕವೇ ಎಸ್.ಶಿವರಾಂ ಅವರು ಚಿತ್ರರಂಗವನ್ನು ಪ್ರವೇಶಿಸಿದರು. ಚಿತ್ರದ ನಾಯಕ ರಾಜಶೇಖರ ಅನಾಥ ಛಲಗಾರ ವೈದ್ಯನಾಗಿ ಕಾನ್ಸರ್‌ಗೆ ಮದ್ದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿರುತ್ತಾನೆ. ನರ್ಸ್ ಸುಧಾಳನ್ನು ಪ್ರೇಮಿಸಿ ವಿವಾಹವಾಗುತ್ತಾನೆ. ಅವಳ ಪ್ರೇಮ ಸಾನಿಧ್ಯದಲ್ಲಿ ತನ್ನ ಗುರಿಯನ್ನು ಮರೆತೇ ಬಿಡುತ್ತಾನೆ. ಪತಿ ಜೊತೆಗಿರುವವರೆಗೂ ಗುರಿ ಸಾಧಿಸುವುದಿಲ್ಲ ಎಂದು ತಿಳಿದ ಸುಧಾ ದೂರವಾಗಿ ಅಪಘಾತದಲ್ಲಿ ಸಾವನ್ನಪ್ಪಿದಳು ಎನ್ನುವ ಸುದ್ದಿಯನ್ನು ಹಬ್ಬಿಸುತ್ತಾಳೆ. ರಾಜಶೇಖರ ಇದೇ ಕೊರಗಿನಲ್ಲಿ ಕಣ್ಣನ್ನು ಕಳೆದುಕೊಳ್ಳುವುದಲ್ಲದೆ ಶೀಲಾ ಎನ್ನುವ ಹುಡುಗಿಯನ್ನು ಅನಿವಾರ್ಯವಾಗಿ ಮದುವೆಯಾಗಬೇಕಾಗುತ್ತದೆ. ಸುಧಾ ಬೇರೆ ವೇಷದಲ್ಲಿ ಬಂದು ಪತಿಯ ಸೇವೆಯಲ್ಲಿ ತೊಡಗುತ್ತಾಳೆ. ಕೊನೆಗೆ ರಾಜಶೇಖರನ ದೃಷ್ಟಿ ಮರುಳುತ್ತದೆ ತಪ್ಪನ್ನು ಅರಿತು ಸಂಶೋಧನೆಯನ್ನು ಮುಂದುವರೆಸುತ್ತಾನೆ.

ಕು.ರ.ಸೀಯವರು ನಿರ್ದೇಶಿಸಿದ ಕೊನೆಯ ಚಿತ್ರ ‘ಕಲ್ಪವೃಕ್ಷ’ ಪ್ರಬೋಧ್ ಜೋಷಿಯವರ ಕಥೆಯನ್ನು ಇದು ಆಧರಿಸಿತ್ತು. ಮನೂಭಾಯ್ ಪಟೇಲ್ ‘ಭಾವನಾ ಪ್ರೊಡಕ್ಷನ್ಸ್’ಮೂಲಕ ಇದನ್ನು ನಿರ್ಮಿಸಿದ್ದರು. ಉದಯ ಕುಮಾರ್, ಲೀಲಾವತಿ, ಶ್ರೀನಾಥ್, ವಿಜಯಲೀಲಾ, ಬಾಲಕೃಷ್ಣ, ಕೆ.ಎಸ್.ಅಶ್ವತ್ಥ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಹೊಸ ಕಾಲದ ಆಶಯಗಳನ್ನು ಹೊತ್ತ ಸಾವಿತ್ರಿ, ಮಡದಿಯ ಆಧುನಿಕತೆಯನ್ನು ವಿರೋಧಿಸಲಾಗದೆ ತಂದೆಯ ಸಂಪ್ರದಾಯಸ್ಥ ಮನೋಭಾವವನ್ನೂ ಒಪ್ಪಿಕೊಳ್ಳಲಾಗದೆ ಒದ್ದಾಡುವ ನಾಗರಾಜ. ಹೊಲಸು ರಾಜಕಾರಣದ ಮೂರ್ತರೂಪ ಹೊನ್ನಪ್ಪ ಅವನ ಕೈದಾಳವಾದ ಅನಾಥ ನಂಜುಂಡ ಜೊತೆಗೆ ಯುವ ಪ್ರೇಮಿಗಳಾದ ರಾಧಾ-ಶ್ಯಾಮಸುಂದರ್, ಅಶಾಜ್ಯೋತಿ-ಸುದೀಲ್ ಹೀಗೆ ಎಪಿಕ್ ಮಾದರಿಯಲ್ಲಿ ಇದರ ಕಥನದ ಸ್ವರೂಪವಿತ್ತು. ಎಸ್.ಡಿ.ಬರ್ಮನ್ ಈ ಚಿತ್ರಕ್ಕೆ ಸಂಗೀತ ನೀಡಲು ಒಪ್ಪಿದ್ದರು. ಆದರೆ ಅವರ ಅಕಾಲಿಕ ಸಾವು ಕು.ರ.ಸೀಯವರ ಮಹದಾಸೆಯನ್ನು ನಿರಾಸೆಗೊಳಿಸಿತ್ತು. ಬರ್ಮನ್ ಅವರ ಸಹಾಯಕ ಜೈದೇವ್ ಚಿತ್ರಕ್ಕೆ ಸಂಗೀತ ನೀಡಿದರು. ಮುಂಬೈನಲ್ಲೇ ಹಾಡುಗಳ ಧ್ವನಿಮುದ್ರಣ ನಡೆದಿದ್ದರಿಂದ ಬಾಲಿವುಡ್ ಗಾಯಕರಾದ ಮನ್ನಾಡೆ, ಕೃಷ್ಣಕಲ್ಲೆ, ಸುಮನ್ ಕಲ್ಯಾಣ್ ಪುರ್, ಅಂಬರ್ ಕುಮಾರ್ ಚಿತ್ರದಲ್ಲಿ ಹಾಡಿದರು. ಆಶೋ ಭೋಂಸ್ಲೆ ಹಾಡಲು ಒಪ್ಪಿದ್ದರೂ ಬರ್ಮನ್ ಅವರ ಸಾವಿನಿಂದ ಅದು ಸಾಧ್ಯವಾಗಲಿಲ್ಲ. ಹೀಗೆ ಮೂಡಿ ಬಂದ ಜಯತೇ ಜಯತೇ ಸತ್ಯಮೇವ ಜಯತೆ, ಒಂದೊಂದಾಗಿ ಜಾರಿದರೆ, ಹನಿ ಹನಿ ಹೀರಿ ತನಿ ಹರಯಾ, ತಲ್ಲಣ ನೂರು ಬಗೆ ತಳಮಳ ಅಡಿಗಡಿಗೆ, ಅಂದದ ಅಂಗನೆಯ ಮಾಟವಾದ ಮೈಯ ನೀ ನೋಡ ಬಂದೆಯಾ ಮೊದಲಾದ ಸುಮಧುರ ಗೀತೆಗಳು ಕನ್ನಡ ಸಂಗೀತ ಪ್ರೇಮಿಗಳಿಗೆ ಪ್ರಿಯವಾದವು.

ಕು.ರ.ಸೀಯವರು ಅಧಿಕೃತವಾಗಿ ನಿರ್ದೇಶಿಸಿದ್ದು ಏಳು ಚಿತ್ರಗಳನ್ನು ಮಾತ್ರವಾದರೂ ಭೂಕೈಲಾಸ, ಸಂಶಯ ಫಲ ಮೊದಲಾದ ಚಿತ್ರಗಳನ್ನು ಅವರು ಅನಧಿಕೃತವಾಗಿ ನಿರ್ದೇಶಿಸಿದ್ದರು. ಶಿವರಾಮ ಕಾರಂತ ಚೋಮನ ದುಡಿ, ಎಂ.ಕೆ.ಇಂದಿರಾ ಅವರ ‘ಸದಾನಂದ’, ವಿ.ಕೃ.ಗೋಕಾಕರ ‘ಸಮರಸವೇ ಜೀವನ’ ಅಲ್ಲದೆ ಸಂಪೂರ್ಣ ರಾಮಾಯಣವೂ ಅವರ ಮನಸ್ಸಿನಲ್ಲಿತ್ತು. ಅವರ ಆಯಸ್ಸು ಅಪೂರ್ಣವಾಗಿ ಎಲ್ಲವೂ ಅರೆ ಬರೆಯಾಗಿತ್ತು.

ಚಿತ್ರಸಾಹಿತಿಯಾಗಿ ಕು.ರಸೀ

ಕನ್ನಡ ಚಿತ್ರಗೀತೆಗಳ ಪಿತಾಮಹ ಎಂದೇ ಕರೆಯಬಹುದಾದ ಕು.ರ.ಸೀ ‘ತಾವು ನಟರಾಗಿದ್ದು ಅಭಿರುಚಿಯಿಂದ, ಸಾಹಿತಿಯಾಗಿದ್ದು ಅನಪೇಕ್ಷಿತವಾಗಿ, ನಿರ್ಮಾಪಕರಾಗಿದ್ದ ಆಕಸ್ಮಿಕವಾಗಿ ಮತ್ತು ನಿರ್ದೇಶಕರಾಗಿದ್ದ ವಿಧಿ ಸಂಕಲ್ಪ’ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ಚಿತ್ರಗೀತೆಗಳ ವಿನೂತನತೆ ಅಧ್ಯಯನಕ್ಕೆ ಯೋಗ್ಯವೂ ಆಗಿದೆ. ಜೇನಿರುಳು, ರಮ್ಯಗಾನ, ರಸ ಹೊನಲು, ಭಾವ ಬಂಧುರ ಮೊದಲಾದ ಹೊಚ್ಚ ಹೊಸ ರೂಪಕಗಳನ್ನು ಕು.ರ.ಸೀ ಬಳಸಿದ್ದಾರೆ. ಸೂಕ್ಷ್ಮವನ್ನು ಹಿಡಿದಂತೆ ಚಿತ್ರಗೀತೆಯಲ್ಲಿ ಮಹಾಕಾವ್ಯವನ್ನೂ ಹಿಡಿಯ ಬಲ್ಲಂತಹ ಪ್ರತಿಭೆ ಅವರದು. ‘ಭೂಕೈಲಾಸ’ಚಿತ್ರಕ್ಕೆ ಬರೆದ ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ಗೀತೆಯೇ ಇದಕ್ಕೆ ಸಾಕ್ಷಿಯಾಗಿದೆ. ನವಿರಾದ ಭಾವಗಳನ್ನು ಹಿಡಿಯುವಲ್ಲಿ ಕು.ರ.ಸೀ ಸಿದ್ದ ಹಸ್ತರು. ಮೊದಲ ರಾತ್ರಿಯ ಗೀತೆಗಳನ್ನೇ ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಕೊಂಚವೂ ಅಶ್ಲೀಲತೆ ಇಲ್ಲದೆ ಗಂಡು ಹೆಣ್ಣಿನ ಮನದ ಭಯ, ಆತುರ, ತಾಕಲಾಟಗಳನ್ನು ತರುವಲ್ಲಿ ಅವರು ಗೆದ್ದಿದ್ದಾರೆ. ಅಣ್ಣ – ತಮ್ಮ ಚಿತ್ರದ ‘ನುಡಿಯ ಹಗರಣವೇತಕೆ ಮನದಿ ಮೂಡಿದ ಭಾವವೆಲ್ಲಾ ಬಿಡಿಸಿ ಹೇಳುವ ಕಣ್ಣಿರೆ’, ‘ಮುರಿಯದ ಮನೆ’ಚಿತ್ರದ ‘ಅಂದ ಚಂದವೇತಕೆ ಅಂತರಂಗ ದೈವಕೆ’ ಮತ್ತು ‘ಜೇನುಗೂಡು’ಚಿತ್ರದ ‘ಜೇನಿರುಳು ಜೊತೆಗೂಡಿರಲು’ಗಳಲ್ಲಿ ಇದನ್ನು ಕಾಣ ಬಹುದು. ‘ಇಡೀ ಬಾಳ್ವೆಯಲ್ಲಾ ಚೆಲುವಿನಾಟವಲ್ಲ, ಒಂದು ಗೂಡಿರೆ ಒಲವು ಮೂಡಿರೆ, ಅದೇ ಪುಣ್ಯಲೋಕ ಅದೇ ನನ್ನ ನಾಕ’ ಎಂದು ಅವರನ್ನು ತಾತ್ವಿಕರಿಸುತ್ತಾರೆ. ಮೊದಲ ರಾತ್ರಿ ಅವರ ಮಟ್ಟಿಗೆ ‘ನೀನಾರೋ ನಾನಾರೋ ಅರಿತೆವು ಬೆರೆತೆವು ಪ್ರೇಮದಲಿ’ ಎನ್ನುತ್ತಾ ‘ಒಡಲೆರಡು ಉಸಿರೊಂದು’ ಎಂದು ಪ್ರತಿಪಾದಿಸುತ್ತಾರೆ. ‘ವೀರಕೇಸರಿ’ಚಿತ್ರದ ‘ಮೆಲ್ಲುಸಿರೇ ಸವಿಗಾನ’ ದಾಂಪತ್ಯಗೀತೆ. ‘ಮನದಾಸೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ’ ಎಂಬ ತುಂಟತನಕ್ಕೆ ‘ಮಧುಮಂಚಕೆ ವಿಧಿ ಹಂಚಿಕೆ ಅದಕೇಕೆ ಅಂಜಿಕೆ ಶಂಕೆ’ ಎಂಬ ಅರ್ಥಪೂರ್ಣ ಉತ್ತರವೂ ಇದೆ. ಹೀಗೆ ಬೆಳೆಯುತ್ತಾ ಹೋಗುವ ಗೀತೆ

ಈ ದೇಹ ರಸಮಯ ಸದನ

ಈ ನೇಹ ಮಧು ಸಂಗ್ರಹಣ

ಚಿರನೂತನ ರೋಮಾಂಚನ ದಾಂಪತ್ಯದನುಸಂಧಾನ’ ಎಂದು ಕು.ರ.ಸೀಯವರ ಚಿಂತನೆಯೊಂದಿಗೆ ಮುಗಿಯುತ್ತದೆ.

‘ತುಟಿಯ ಮೇಲೆ ತುಂಟ ಕಿರುನಗೆಯಲ್ಲಿ’

ತುಂಬಿ ಬಂದ ಒಲವಿನಂದ ಈ ಸವಿಬಂಧ

ಬಿಡಸಲಾರದಂಥ ಒಗಟು ಪ್ರೇಮದ ನಂಟು ಎನ್ನುವ ಚಿಂತನೆ ಬಂದಿದೆ.‘ಪ್ರೊಫೆಸರ್ ಹುಚ್ಚೂರಾಯ’ಚಿತ್ರದ ‘ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ’ ಸಂಯಮ ಆಕರ್ಷಣೆಗಳ ಸಂಘರ್ಷವನ್ನು ಹೇಳಿದ ಗೀತೆ. ಚಿತ್ರದ ಅವಶ್ಯಕತೆಗೆ ತಕ್ಕಂತೆ ‘ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ’ ‘ಬಿಂಕದ ಸಿಂಗಾರಿ ಮೈಡೊಂಕಿನ ವಯ್ಯಾರಿ’ ಎನ್ನುವಂತಹ ಛೇಡಿಸುವ ಗೀತೆಗಳನ್ನು ಬರೆದಾಗಲೂ ಅವರು ಸಭ್ಯತೆಯ ಗಡಿಯನ್ನು ದಾಟಿದವರಲ್ಲ. ‘ದೂರದಿಂದ ಬಂದಂಥ ಸುಂದರಾಂಗ ಜಾಣ’ದಂತಹ ಕ್ಯಾಬರೆ ಹಾಡಿನಲ್ಲೂ ‘ಆಸೆ ಬಳ್ಳಿ ಬೆಂಡಾಗಿ ಬಾಡಬಾರದು ಬೀಳಬಾರದು’ ಎಂದು ಎಚ್ಚರಿಸುತ್ತಾರೆ.

ಕು.ರ.ಸೀಯವರು ಚಿತ್ರಗೀತೆಗಳ ಶಾಬ್ದಿಕ ಸ್ವರೂಪದ ಬೆಳವಣಿಗೆಗೆ ನೀಡಿದ ಕಾಣಿಕೆ ಅಪಾರವಾದದ್ದು. ಲಯ ಎನ್ನುವುದು ಕೇವಲ ಅಂತ್ಯಾಕ್ಷರ ಮಾತ್ರವಲ್ಲದೆ ಅಕ್ಷರಗಳ ಹೊಂದಾಣಿಕೆಯಿಂದ ಉಂಟಾಗುವ ನಾದಗುಣ ಎಂದು ನಿರೂಪಿಸಿದ್ದು ಅವರ ಹೆಗ್ಗಳಿಕೆ ‘ಮಧು ಮಂಚಕೆ ವಿಧಿ ಹಂಚಿಕೆ ಅದಕೇಕೆ ಅಂಜಿಕೆ ಶಂಕೆ’ ‘ನಿನ್ನಂದ ಚಂದ ಮಕರಂದ’ ‘ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ’ ಹೀಗೆ ನಾದಗುಣವನ್ನು ತಂದರು. ಅಂತ್ಯಪ್ರಾಸ ಮಾತ್ರವಲ್ಲದೆ ಆದಿ ಪ್ರಾಸವನ್ನು ತಂದ ಅವರು ಪ್ರಾಸವನ್ನೂ ಬಿಟ್ಟು ನಾದಗುಣವನ್ನು ತಂದ ಹೆಗ್ಗಳಿಕೆ ಹೊಂದಿದ್ದಾರೆ

ಅವಳೊಲವೇ ಅಮರ ಶ್ರುತಿ

ನನ್ನದೆ ತಳಮಳ ಹಿಂಗದ ತಾಳ

ಇನಿಯನ ನೆನಪಿನ ಈ ಹಾಡು

ಬೆರತ ಜೀವದ ಸವಿಹಾಡು

ಎನ್ನುವಂತಹ ಉದಾಹರಣೆಯನ್ನು ಗಮನಿಸ ಬಹುದು.

ಕೆಲವು ಶಬ್ದಗಳನ್ನು ಪುನರಾವರ್ತಿಸುವ ಮೂಲಕ ಕು.ರ.ಸೀ ಹೊಸತನವನ್ನು ಅದರಲ್ಲಿ ತಂದಿದ್ದಾರೆ.‘ರಸ’ ಹೀಗೆ ಗಮನಿಸ ಬಹುದಾದ ಶಬ್ದ. ‘ಮಾವನ ಮಗಳು’ಚಿತ್ರದ ನಾಯಕಿ ‘ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ’ ಎಂದು ಕೊರಗುತ್ತಾಳೆ. ಮೆಲ್ಲುಸಿರೇಯಲ್ಲಿ ದೇಹ ‘ರಸಮಯ ಸದನ’ಎಂದು ವರ್ಣಿತವಾಗಿದೆ. ‘ಜೇನುಗೂಡು’ಚಿತ್ರದ ಬಾಳೊಂದು ನಂದನ ಹಾಡಿನ  ಆಶಯ ‘ರಸಪೂರ್ಣವಾಗಲಿ’. ಬಿಂಕದ ಸಿಂಗಾರಿಯಂತಹ ಛೇಡಿಸುವ ಹಾಡಿನಲ್ಲೂ ‘ರಸದೀವಳಿಗೆ’ಬರುತ್ತದೆ. ಚಿಕ್ಕ ರೂಪಕಗಳಂತೆ ಚಿತ್ರಗೀತೆಗಳಲ್ಲಿ ಬರಲು ಸಾಧ್ಯವೆ ಎಂದು ಅಚ್ಚರಿ ಪಡಬಲ್ಲ ರೂಪಕಗಳನ್ನು ಕು.ರ.ಸೀ ಬಳಸಿದ್ದಾರೆ ‘ಬೆರತ ಜೀವ’ಚಿತ್ರದ ‘ಕಂಡಂಥ ಕನಸೆಲ್ಲಾ ನನಸಾಗಲಿ’ ಗೀತೆಯಲ್ಲಿ ಬರುವ ‘ಕಣ್ಣಾಲಿಯನು ಕಾವ ಎವೆಯಂತೆ ನನ್ನಿರುವ ಕಾವಂಥ ಕರುಣಾಳು ಚಿರವಾಗಲಿ ಕೈ ಹಿಡಿದ ಹೂ ಬಳ್ಳಿ ಹುಲುಸಾಗಲಿ’ ಎಂಬ ರೂಪಕವನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು.

ಅಂಕದ ಪರದೆ ಜಾರಿದ ಮೇಲೆ

1969ರಲ್ಲಿ ಕು.ರ.ಸೀಯವರಿಗೆ ಮೊದಲ ಸಲ ಹೃದಯಾಘಾತವಾಯಿತು. ಇವರ ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ವ್ಯಾಯಾಮ, ಸ್ವಲ್ಪ ನಡಿಗೆ ವಿಶ್ರಾಂತಿ ಎಲ್ಲವನ್ನೂ ಸೂಚಿಸಿದರು. ಕೆಲಕಾಲ ಅದನ್ನು ಅನುಸಿರಿಸಿದ ಕು.ರ.ಸೀ ನಂತರ ಅದನ್ನು ಬಿಟ್ಟೇ ಬಿಟ್ಟರು.ಇದಾದ ನಾಲ್ಕು ವರ್ಷದ ನಂತರ ಅಂದರೆ 1973ರಲ್ಲಿ ವಿಠಲ್ ಅವರ ‘ವರದಕ್ಷಿಣೆ’ಚಿತ್ರಕ್ಕೆ ಹಾಡುಗಳನ್ನು ಬರೆಯಲು ಶಿವಮೊಗ್ಗೆಗೆ ಹೋದಾಗ ಆರೋಗ್ಯದಲ್ಲಿ ಏರುಪೇರಾಯಿತು. ಹೊಟ್ಟೆ ನೋವು ಕೂಡ ಬಂದಿತು. ವೈದ್ಯರು ಪರೀಕ್ಷಿಸಿದಾಗ ಗುಲ್ಮದ ಕ್ಯಾನ್ಸರ್ ಪತ್ತೆಯಾಯಿತು. ಎರಡು ಶಸ್ತ್ರಚಿಕಿತ್ಸೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ 1977ರ ನವಂಬರ್ 12ರ ರಾತ್ರಿ 10.30ಕ್ಕೆ  ಕು.ರ.ಸೀ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆಗ ಅವರಿಗೆ 57 ವರ್ಷ. ಮಹಾಭಾರತ, ರಾಮಾಯಣವನ್ನು ತೆರೆಗೆ ತರುವ ಕನಸನ್ನು ಕಂಡಿದ್ದ ಅವರು ವಿಜಯನಗರ ಸಾಮ್ರಾಜ್ಯದ ಕುರಿತೂ ಸ್ಕಿಪ್ಟ್ ರೂಪಿಸಿದ್ದರು. ಮೈಸೂರು ಅರಸು ಮನೆತನದ ಕುರಿತು ಒಂದು ಯೋಜನೆ ರೂಪಿಸಿದ್ದರು. ಅವೆಲ್ಲವೂ ಜಾರಿಗೆ ಬರಲೇ ಇಲ್ಲ. ಕು.ರ.ಸೀಯವರ ಐವರು ಮಕ್ಕಳ ಪೈಕಿ ಜಿ.ಆರ್.ಕುಮಾರ್, ಔರವ್, ಭಾರ್ಗವ್ ಕ್ಯಾಲಿಪೋರ್ನಿಯಾದಲ್ಲಿ ನೆಲೆಸಿದ್ದಾರೆ. ಡಾ.ಜಿ.ಆರ್.ಆರ್ಯಾ ಮತ್ತು ಪೂರ್ಣ ಕೃಷ್ಣಮೂರ್ತಿ ಬೆಂಗಳೂರಿನಲ್ಲಿದ್ದಾರೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿನ್ನದ ಕಂಠದ ಗಾಯಕ ಮನ್ನಾಡೇ

ಭಾರತೀಯ ಸಿನಿಮಾರಂಗದ ಮೇರು ಗಾಯಕ ಮನ್ನಾಡೇ ಜನ್ಮದಿನವಿಂದು (ಮೇ 1). ಶ್ರೇಷ್ಠ ಹಿನ್ನೆಲೆ ಗಾಯನದ ಮೂಲಕ ಅವರು ಚಿತ್ರರಸಿಕರ ಮನಸ್ಸಿನಲ್ಲಿ

ಒರಿಜಿನಲ್ ಹೀಮ್ಯಾನ್ ದಾರಾ ಸಿಂಗ್!

ಅರವತ್ತು, ಎಪ್ಪತ್ತರ ದಶಕಗಳಲ್ಲಿ ಹಿಂದಿ ಆ್ಯಕ್ಷನ್ ಸಿನಿಮಾಗಳ ರಾಜ ಎಂದೇ ಕರೆಸಿಕೊಂಡಿದ್ದವರು ಧಾರಾ ಸಿಂಗ್‌. ಪಂಜಾಬ್‌ನ ಗ್ರಾಮವೊಂದರ ಯುವಕ ಸಿನಿಮಾ

ಕಮಿಡಿಯನ್ ಗುಗ್ಗು

ಕನ್ನಡ ಸಿನಿಮಾ ರೂಪುಗೊಂಡ ಹಾದಿಯಲ್ಲಿ ಹಲವಾರು ಅಪರೂಪದ ವ್ಯಕ್ತಿತ್ವಗಳು, ಸಂದರ್ಭಗಳು ಕಾಣಸಿಗುತ್ತವೆ. ಈ ಹಾದಿಯಲ್ಲಿನ ಅಂತಹ ವಿಶಿಷ್ಟ ವ್ಯಕ್ತಿ ಕಮೆಡಿಯನ್