ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಸಿನಿಮಾ ಪತ್ರಿಕೆ ನಡೆಸಿದ ಅವರಲ್ಲಿ ದೇಶ – ವಿದೇಶಗಳ ಸಿನಿಮಾರಂಗದ ಆಗುಹೋಗುಗಳ ಕುರಿತ ಮಾಹಿತಿ ಇರುತ್ತಿತ್ತು. ಕನ್ನಡ ನಾಡು – ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಕನ್ನಡದ ಮಹೋನ್ನದ ಚಿತ್ರಗಳಲ್ಲೊಂದಾದ ‘ಬಂಗಾರದ ಮನುಷ್ಯ’ ನಿರ್ಮಾಪಕರಲ್ಲೊಬ್ಬರು.
ಮೈಸೂರಿನಲ್ಲಿ ಜನಿಸಿದ ಲಕ್ಷ್ಮಣ್ ಬೆಳೆದದ್ದು, ಶಾಲೆ ಕಲಿತದ್ದು ಬೆಂಗಳೂರಿನಲ್ಲಿ. ಸಿನಿಮಾ ಕುರಿತ ಆಕರ್ಷಣೆ ಚಿಕ್ಕಂದಿನಲ್ಲೇ ಶುರುವಾಗಿತ್ತು. ಆದರೆ ಅದು ನಟನಾಗುವ ಹುಕಿ ಅಲ್ಲ. ಜನರು ಮಂತ್ರಮುಗ್ಧರಾಗಿ ವೀಕ್ಷಿಸುವ ಸಿನಿಮಾವನ್ನು ತೆರೆಮೇಲೆ ತೋರಿಸುವ ಕೆಲಸ ಮಾಡಬೇಕೆಂದು ಕನಸು ಕಂಡಿದ್ದರು! ಮನೆಯ ಪಕ್ಕದಲ್ಲೇ ಇದ್ದ ಸಿನಿಮಾ ಪ್ರೊಜೆಕ್ಟರ್ ಆಪರೇಟರ್ ಜೊತೆ ಥಿಯೇಟರ್‌ಗೆ ಹೋಗಿ ಪ್ರೊಜೆಕ್ಷನ್ ರೂಂನಲ್ಲಿ ಕುಳಿತು ತಂತ್ರಜ್ಞಾನ ಪರಿಚಯಿಸಿಕೊಂಡರು.
ಎಸೆಸ್ಸೆಲ್ಸಿ ಮುಗಿಸಿದ ನಂತರ ಆಂಧ್ರಮೂಲದ ‘ಹೇಮಲತಾ ಫಿಲಂಸ್’ನಲ್ಲಿ ರೆಪ್ರಸೆಂಟೆಟೀವ್ ಕೆಲಸಕ್ಕೆ ಸೇರಿದರು. ಕೆಲವು ವರ್ಷ ಸಿನಿಮಾ ಡಬ್ಬಗಳ ಜೊತೆ ನಾಡಿನ ಊರೂರು ಸುತ್ತಿದರು. ನಾಡಿನ ಹಳ್ಳಿ, ಪಟ್ಟಣಗಳ ಪರಿಚಯದ ಜೊತೆ ಜನರ ಅಭಿರುಚಿ, ಆಸಕ್ತಿಯ ಬಗ್ಗೆ ತಿಳುವಳಿಕೆ ಮೂಡಿತು. ಮುಂದಿನ ಆರೇಳು ವರ್ಷ ಬನ್ನೂರು, ಮದ್ದೂರು, ಶಿಡ್ಲಘಟ್ಟ, ಚಿಂತಾಮಣಿ ಮತ್ತಿತರೆಡೆ ಗುತ್ತಿಗೆಗೆ ಚಲನಚಿತ್ರಮಂದಿರಗಳನ್ನು ನಡೆಸಿದರು. ನಂತರ ದಂಡು ಪ್ರದೇಶದಲ್ಲಿ ‘ಅಶೋಕ’ ಚಿತ್ರಮಂದಿರದ ವ್ಯವಸ್ಥಾಪಕನ ಕೆಲಸಕ್ಕೆ ಸೇರಿದರು. ಅಲ್ಲಿಯವರೆಗೆ ಹೆಚ್ಚಾಗಿ ಕನ್ನಡೇತರ ಚಿತ್ರಗಳೇ ಅಲ್ಲಿ ಪ್ರದರ್ಶನ ಕಾಣುತ್ತಿದ್ದವು. ಲಕ್ಷ್ಮಣ್ ಉಸ್ತುವಾರಿ ವಹಿಸಿಕೊಂಡು ನಿರಂತರವಾಗಿ ಕನ್ನಡ ಚಿತ್ರಗಳನ್ನು ಹಾಕತೊಡಗಿದರು.
ಸಾಹಿತಿ ಅನಕೃ ಅವರ ಮಾರ್ಗದರ್ಶನ ಹಾಗೂ ನಟ ರಾಜಕುಮಾರ್ ಅವರ ಉತ್ತೇಜನದೊಂದಿಗೆ ಕನ್ನಡ ಚಿತ್ರಗಳನ್ನು ಒಂದು ನೆಲೆಗೆ ತರುವ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದು ಅವರ ಬದುಕಿನ ಮುಖ್ಯ ತಿರುವು. 1960ರಲ್ಲಿ ಬೆಂಗಳೂರು ಮಿನರ್ವ ಸರ್ಕಲ್‌ನಲ್ಲಿದ್ದ ‘ಭಾರತ್’ ಚಿತ್ರಮಂದಿರದ ಮ್ಯಾನೇಜರ್ ಆದರು. ಆ ಚಿತ್ರಮಂದಿರವನ್ನು ಕನ್ನಡ ಚಿತ್ರಗಳಿಗೇ ಮೀಸಲಿರಿಸುವುದಕ್ಕಾಗಿ ಅದರ ಮಾಲೀಕರನ್ನು ಪ್ರಭಾವಿಸಿದರು. ರಾಜಕುಮಾರ್ ಶತಚಿತ್ರಗಳನ್ನು ಪೂರೈಸಿದಾಗ ‘ನಟಸಾರ್ವಭೌಮ’ ಸಾಕ್ಷ್ಯಚಿತ್ರ ತಯಾರಿಸಿದರು. ಬೆಂಗಳೂರಿನಲ್ಲಿ ನಡೆದ ಈ ಸಂದರ್ಭದಲ್ಲಿ ನಡೆದ ರಾಜ್ ಅವರ ಅದ್ಧೂರಿ ಸನ್ಮಾನದ ಯಶಸ್ಸಿನ ಹಿಂದೆ ಇವರ ಶ್ರಮವಿತ್ತು.
ಭಾರತ್ ಟಾಕೀಸಿನ ಮಾಲೀಕರಿಗಾಗಿ ಇವರು ರೂಪಿಸಿದ ಮೊದಲ ಚಿತ್ರ ‘ಉಯ್ಯಾಲೆ’ (1969). ಎರಡನೆಯದು ‘ದೇವರ ಮಕ್ಕಳು’. ಇವೆರೆಡರಲ್ಲೂ ರಾಜ್ ಅವರೇ ನಾಯಕ. ಇದಾದ ಬೇರೆ ಕೆಲವು ಚಿತ್ರಗಳ ನಂತರ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ‘ಬಂಗಾರದ ಮನುಷ್ಯ’ ಚಿತ್ರವನ್ನು ಗೋಪಾಲ್ ಅವರೊಂದಿಗೆ ಸೇರಿ ನಿರ್ಮಿಸಿದರು. ಸುಮಾರು 12 ಚಿತ್ರಗಳಲ್ಲಿ ಕೆಲಸವನ್ನು ಸ್ವತಂತ್ರ್ಯವಾಗಿ ಇನ್ನು ಕೆಲವನ್ನು ಸ್ನೇಹಿತ ಗೋಪಾಲ್ ಅವರೊಡಗೂಡಿ ತಯಾರಿಸಿದರು.
‘ಚಿತ್ರಲೇಖ’ (1963) ಸಿನಿಮಾ ಪತ್ರಿಕೆ ನಡೆಸಿದ್ದು ಅವರ ಮತ್ತೊಂದು ಪ್ರಮುಖ ಹೆಜ್ಜೆಗುರುತು. ಇದು ಕನ್ನಡದ ಮೊದಲ ಬಣ್ಣದ (ಮುಖಪುಟ) ಪತ್ರಿಕೆ ಎನ್ನುವುದು ವಿಶೇಷ. ಡಬ್ಬಿಂಗ್ ಚಿತ್ರಗಳ ವಿರುದ್ಧದ ಹೋರಾಟವೂ ಸೇರಿದಂತೆ ಸಿನಿಮಾ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಡೆದ ಹತ್ತಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಲಕ್ಷ್ಮಣ್ ಅವರ ಸಾಧನೆಗೆ ರಾಜ್ಯೋತ್ಸವ ಗೌರವ, ‘ಡಾ.ರಾಜಕುಮಾರ್ ಪ್ರಶಸ್ತಿ’ (1995) ಸಂದಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಇವರ ಪುತ್ರ ನಾಗಣ್ಣ ಚಿತ್ರನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಆರ್.ಲಕ್ಷ್ಮಣ್ | ಜನನ: 28/08/1928 | ನಿಧನ: 20/06/2009
(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)
