ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

`ಅನನ್ಯ ನಟಭಯಂಕರಿ’ ಆರ್.ನಾಗರತ್ನಮ್ಮ

ರಂಗಭೂಮಿ - ಸಿನಿಮಾ ನಟಿ
ಪೋಸ್ಟ್ ಶೇರ್ ಮಾಡಿ
ಡಾ.ಗೀತಾ ಕೃಷ್ಣಮೂರ್ತಿ
ಲೇಖಕಿ

ರಂಗಭೂಮಿಯಲ್ಲಿ ಪುರುಷರದ್ದೇ ಪಾರಮ್ಯವಿದ್ದ ಕಾಲದಲ್ಲಿ ರಂಗಭೂಮಿ ಪ್ರವೇಶ ಮಾಡಿದುದೇ ಅಲ್ಲದೆ ಸ್ತ್ರೀ ನಾಟಕ ಮಂಡಲಿಯನ್ನು ಕಟ್ಟಿದುದೇ ಒಂದು ದಾಖಲೆ. ಅದಕ್ಕೆ ಬೇಕಾದ ಅಸೀಮ ಮಾನಸಿಕ ಸಿದ್ಧತೆ ಆರ್‌.ನಾಗರತ್ನಮ್ಮ ಅವರಲ್ಲಿತ್ತು. ಕನ್ನಡ ರಂಗಭೂಮಿ – ಸಿನಿಮಾದ ಮೇರು ನಟಿ ಪದ್ಮಶ್ರೀ ಪುರಸ್ಕೃತ ಆರ್‌.ನಾಗರತ್ನಮ್ಮ ಅವರ ಜನ್ಮದಿನವಿಂದು (ಜೂನ್‌ 21). – ಡಾ.ಗೀತಾ ಕೃಷ್ಣಮೂರ್ತಿ ಅವರ ಲೇಖನ.

ಆಧುನಿಕ ಮಹಿಳಾವಾದೀ ರಂಗಭೂಮಿ ಚಳವಳಿ ಹೊಸದೊಂದು ಸಾಮಾಜಿಕ ಮನೋಭೂಮಿಕೆಯನ್ನು ನಿರ್ಮಾಣ ಮಾಡುವ ಮೂಲಕ ರಂಗಭೂಮಿಯಲ್ಲಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರೆ, ನಾಗರತ್ನಮ್ಮ ಅವರು ನೇರವಾಗಿ ರಂಗಭೂಮಿಗೇ ಧುಮುಕಿ, ಪ್ರದರ್ಶನದ ಮೂಲಕ ಸ್ತ್ರೀ ಪುರುಷರು ಸಮಾನರು ಎಂದು ಸಾಧಿಸಿ ತೋರಿಸಿ ಒಂದು ಅನುಭವ’ವನ್ನಾಗಿಸಿಕೊಂಡರು ಮತ್ತು ಅಂಥ ಅನುಭವವನ್ನು ಕಟ್ಟಿಕೊಟ್ಟರು. ಆದರೆ ಅದಕ್ಕೆ ಅಸೀಮ ಮಾನಸಿಕ ಸಿದ್ಧತೆ ಬೇಕಾಯಿತು ಅವರಿಗೆ. ನಾಟಕಗಳಲ್ಲಿ, ಸ್ತ್ರೀ ಪಾತ್ರಗಳನ್ನೂ ಪುರುಷರೇ ಮಾಡುವುದು ಅನಿವಾರ್ಯವಾಗಿದ್ದ ಕಾಲವೊಂದಿತ್ತು. ನಾಟಕ ಕ್ಷೇತ್ರಕ್ಕೆ ಸ್ತ್ರೀಯರು ಪ್ರವೇಶಿಸುವುದು ನಿಷಿದ್ಧವಾಗಿದ್ದ ಕಾಲವದು. ಆದರೂ, ಆ ಕಾಲದಲ್ಲೂ. ಅಪರೂಪಕ್ಕೆ ಎಂಬಂತೆ, ನಾಟಕ ಕ್ಷೇತ್ರವನ್ನು ಪ್ರವೇಶಿಸಿ, ಅಲ್ಲಿ ಅತ್ಯಂತ ಒಳ್ಳೆಯ ಹೆಸರನ್ನು ಮಾಡಿದ ಕಲಾವಿದೆಯರಿದ್ದಾರೆ. ಆದರೆ, ಪುರುಷ ಪಾತ್ರಗಳನ್ನು ಸ್ತ್ರೀಯರು ಅಭಿನಯಿಸುವುದು ಅಪರೂಪ. ಪುರುಷ ಪಾತ್ರಗಳನ್ನು ಅತ್ಯಂತ ಯಶಸ್ವಿಯಾಗಿ ಅಭಿನಯಿಸಿ, ಖ್ಯಾತರಾದ ಸ್ತ್ರೀಯರು ವಿರಳವೆಂದೇ ಹೇಳಬೇಕು. ಅಂಥ ವಿರಳಾತಿವಿರಳರಲ್ಲಿ ಆರ್. ನಾಗರತ್ನಮ್ಮ ಒಬ್ಬರು. 2012 ರಲ್ಲಿ ಅವರಿಗೆ ದೊರೆತ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯ ಗೌರವ ಅವರಿಗೆ ಅನಿರೀಕ್ಷಿತ. `ನನಗಿಂತ ನನ್ನ ಸ್ನೇಹಿತರು ಮತ್ತು ಬಂಧುಗಳು ಇದರಿಂದ ಹೆಚ್ಚು ಸಂತೋಷಪಡುತ್ತಾರೆ’ ಎಂದು ಅವರು ಪ್ರತಿಕ್ರಿಯಿಸಿದ್ದರು.

1921 ರಲ್ಲಿ ಮೈಸೂರಿನಲ್ಲಿ ಜನಿಸಿದ ಆರ್. ನಾಗರತ್ನಮ್ಮ ಅವರು ರಂಗಭೂಮಿಯನ್ನು ಪ್ರವೇಶಿಸಿದ್ದು ತಮ್ಮ 12 ನೇ ವಯಸ್ಸಿನಲ್ಲಿ, ಬಾಲ ಕಲಾವಿದೆಯಾಗಿ. ಶ್ರೀ ಮಂಜುನಾಥ ಕೃಪಾ ಪೋಷಿತ ನಾಟಕ ಸಂಸ್ಥೆ, ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕಂಪನಿ, ಚಾಮುಂಡೇಶ್ವರಿ ನಾಟಕ ಸಭಾ, ಹಿರಣ್ಣಯ್ಯ ಮಿತ್ರ ಮಂಡಲಿ, ಗುಬ್ಬಿ ವೀರಣ್ಣ ಅವರ ಗುಬ್ಬಿ ಕಂಪನಿ, ಮುಂತಾದ ವೃತ್ತಿಪರ ನಾಟಕ ಕಂಪನಿಗಳಲ್ಲಿ ಕಲಾವಿದೆಯಾಗಿ ದುಡಿದರು. 15-20 ವರ್ಷಗಳ ಕಾಲ ಸ್ತ್ರೀ ಪಾತ್ರಗಳನ್ನೇ ನಿರ್ವಹಿಸುತ್ತಾ ಬಂದರು.

ತಾವು ನಿರ್ವಹಿಸಿದ ಭೀಮನ ಪಾತ್ರದ ಸ್ಥಿರಚಿತ್ರದೊಂದಿಗೆ ಆರ್‌.ನಾಗರತ್ನಮ್ಮ (Photo courtesy: Indian Express)

ಈ ಅನುಭವ ಅವರ ಅಭಿನಯ ಪ್ರತಿಭೆಯನ್ನು ಪುಟಕ್ಕಿಟ್ಟಿತು. 1958ರಷ್ಟು ಹಿಂದೆಯೇ, ಹೊಸ ಪರಿಕಲ್ಪನೆಯೊಂದಿಗೆ, ಸಂಪೂರ್ಣ ಮಹಿಳೆಯರೇ ನಿರ್ವಹಿಸುವ, ಪ್ರಪ್ರಥಮವಾಗಿ ಸ್ತ್ರೀ ನಾಟಕ ಮಂಡಲಿ’ ಎಂಬ ನಾಟಕ ಮಂಡಲಿಯನ್ನು ಕಟ್ಟಿ ದಾಖಲೆಯನ್ನು ಬರೆದರು. ಅನೇಕ ವರ್ಷಗಳ ಕಾಲ ಅದನ್ನು ಯಶಸ್ವಿಯಾಗಿ ಮುನ್ನಡೆಸಿದರು. ಪೌರಾಣಿಕ ನಾಟಕಗಳಲ್ಲಿ ಪುರುಷ ಪಾತ್ರಗಳನ್ನು ನಿರ್ವಹಿಸುವ ಮೂಲಕ ಖ್ಯಾತರಾದರು. ‘ಶ್ರೀಕೃಷ್ಣ ಗಾರುಡಿ’ಯಲ್ಲಿ ಅವರು ಮಾಡುತ್ತಿದ್ದ ಭೀಷ್ಮನ ಪಾತ್ರ,` ಶ್ರೀ ಕೃಷ್ಣ ಲೀಲೆ’ಯಲ್ಲಿ ಮಾಡುತ್ತಿದ್ದ ಕಂಸನ ಪಾತ್ರ, ‘ರಾಮಾಯಣ’ ನಾಟಕದ ದಶರಥ, ರಾವಣನ ಪಾತ್ರಗಳು, ದಾನಶೂರ ಕರ್ಣ’ ನಾಟಕದಲ್ಲಿನ ಭೀಮನ ಪಾತ್ರಗಳು ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರುತ್ತಿತ್ತು ಎನ್ನುತ್ತಾರೆ ಅವರ ಈ ಪಾತ್ರಗಳನ್ನು ನೋಡಿ ಆನಂದಿಸಿದವರು. ಇವುಗಳ ಪೈಕಿ ‘ಶ್ರೀ ಕೃಷ್ಣ ಗಾರುಡಿ’ ಇವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟ ನಾಟಕ. ಭೀಮನ ಪಾತ್ರವನ್ನು ಯಾರೇ ಪುರುಷ ಪಾತ್ರಧಾರಿಗೂ ಕಡಿಮೆಯಿಲ್ಲದಂತೆ ಅವರು ಅಭಿನಯಿಸುತ್ತಿದ್ದ ರೀತಿಗೆ ಇವರು, ‘ಭೀಮ ನಾಗರತ್ನಮ್ಮ’ ಎಂದೇ ಜನಪ್ರಿಯರಾಗಿದ್ದರಂತೆ. ಇವರ ನಾಟಕ ಮಂಡಲಿ, ಕರ್ನಾಟಕದಲ್ಲಷ್ಟೇ ಅಲ್ಲದೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ಮತ್ತು ಪಂಜಾಬ್‌ಗಳಲ್ಲೂ ಪ್ರದರ್ಶನಗಳನ್ನು ನೀಡಿತು. ನಾಗರತ್ನಮ್ಮ ಅವರಿಗೆ ರಂಗಭೂಮಿಯಲ್ಲಿ ಇದ್ದ ಬದ್ಧತೆ ಮತ್ತು ಶಿಸ್ತಿನಿಂದಾಗಿ ಅತಿ ದೀರ್ಘಕಾಲ ಪ್ರದರ್ಶನಗಳನ್ನು ನೀಡಿದ ಸಂಸ್ಥೆಯಾಗಿಯೂ ದಾಖಲೆಯನ್ನು ಸೃಷ್ಟಿಸಿತು.

ರಂಗಭೂಮಿಯಲ್ಲಿ ಪುರುಷರದ್ದೇ ಪಾರಮ್ಯವಿದ್ದ ಕಾಲದಲ್ಲಿ ರಂಗಭೂಮಿ ಪ್ರವೇಶ ಮಾಡಿದುದೇ ಅಲ್ಲದೆ ಸ್ತ್ರೀ ನಾಟಕ ಮಂಡಲಿಯನ್ನು ಕಟ್ಟಿದುದೇ ಒಂದು ದಾಖಲೆ. ಅದರೊಡನೆ ಮಹಿಳೆಯೊಬ್ಬಳು ಪುರುಷ ಪಾತ್ರಗಳಲ್ಲಿ, ಪುರುಷರಿಗೆ ಕಡಿಮೆಯಿಲ್ಲದಂತೆ ಅಭಿನಯಿಸಿ,`ನಟಭಯಂಕರಿ’ ಎಂದು ಬಿರುದು ಪಡೆದುದು ಸಾಮಾನ್ಯವಾದ ಸಾಧನೆಯಲ್ಲ. ಪುರುಷ ಪಾತ್ರಗಳನ್ನು ಮಾಡುವುದಕ್ಕೆ ತಮ್ಮ ಮನೆಯಲ್ಲಿಯೇ ವಿರೋಧವಿತ್ತು ಎಂದಿದ್ದಾರೆ. ಅಷ್ಟು ದಿನಗಳೂ ಆಕೆ ಸ್ತ್ರೀ ಪಾತ್ರಗಳನ್ನು ಮಾಡಿ ಗಳಿಸಿದ ಖ್ಯಾತಿ ಎಲ್ಲವೂ ಈ ಒಂದು ನಿರ್ಧಾರದಿಂದ ಕೊಚ್ಚಿ ಹೋಗುತ್ತದೆ ಎಂಬುದು ಮನೆಯವರ ಕಾಳಜಿ ಹಾಗೂ ಎಚ್ಚರಿಕೆಯಾಗಿತ್ತು. ಆದರೆ, ಮುಂದೆ ಮನೆಯವರೇ ಮೆಚ್ಚುವಂಥ ಎತ್ತರಕ್ಕೆ ಬೆಳೆದುದು, ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲುವಂಥ ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಿದುದು ಈಗ ಇತಿಹಾಸ. ಪುರುಷರೊಂದಿಗೆ ಅಭಿನಯಿಸಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ರಂಗಭೂಮಿಯನ್ನು ಪ್ರವೇಶಿಸಲಾಗದಿದ್ದ, ಅಭಿನಯಿಸಲು ಆಸೆಯುಳ್ಳ ಪ್ರತಿಭಾವಂತ ಮಹಿಳೆಯರನೇಕರಿಗೆ, ನಾಗರತ್ನಮ್ಮ ಅವರ ಈ ನಿರ್ಧಾರದಿಂದಾಗಿ, ರಂಗಭೂಮಿಯ ಬಾಗಿಲು ತೆರೆಯಿತು. ಅಲ್ಲಿಯೂ ಅವರು ಅನೇಕ ನಿರ್ಬಂಧಗಳಿಗೆ ಒಳಪಟ್ಟಿದ್ದರು. ಆದರೂ, ಮನೆಯ ನಾಲ್ಕು ಗೋಡೆಗಳಿಂದ ಮುಕ್ತಿ ದೊರೆತು, ಅವರ ಕಲಾಭಿವ್ಯಕ್ತಿಗೆ ಒಂದು ಅವಕಾಶ ದೊರೆಯಿತು ಎಂಬುದೇ ಆ ಕಾಲಕ್ಕೆ ಅವರಿಗೆ ಹಿಮಾಲಯದಷ್ಟನ್ನು ಸಾಧಿಸಿದ ತೃಪ್ತಿಯನ್ನು ಕೊಟ್ಟಿತ್ತು.

‘ಪರಸಂಗದ ಗೆಂಡೆತಿಮ್ಮ’ ಸಿನಿಮಾದಲ್ಲಿ

1958ರಿಂದಲೂ ನಾಗರತ್ನಮ್ಮ ಅವರ ಜೊತೆಯಲ್ಲಿದ್ದ ಆರ್. ಮಂಜುಳಾ ಅವರು ಇದನ್ನು ಸಮರ್ಥಿಸುತ್ತಾರೆ. ಹಿಂತಿರುಗಿ ನೋಡಿದಾಗ ಸಾಧನೆಯ ಬಗ್ಗೆ ಹೆಮ್ಮೆ ಎನಿಸಿದರೂ ಸಾಧನೆಯ ಹಾದಿ ಸುಗಮವಿರಲಿಲ್ಲ. ಅನೇಕ ಬಾರಿ ನಾಟಕ ಪ್ರದರ್ಶನವನ್ನು ಆಯೋಜಿಸುವವರು ಹಣವನ್ನೇ ಕೊಡದೆ ಮಾಯವಾದದ್ದೂ ಇದೆ. ಅಂಥ ಸಂದರ್ಭಗಳಲ್ಲೆಲ್ಲಾ ನಾಗರತ್ನಮ್ಮ ಅವರು, ಅದರ ಬಿಸಿ ತಮ್ಮ ಸಹ ಕಲಾವಿದೆಯರಿಗೆ ತಾಕದಂತೆ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಅವರು ದೊಡ್ಡ ಮೊತ್ತದ ಸಾಲದ ಹೊರೆಯನ್ನೇ ಹೊತ್ತಿದ್ದರು ಎಂದು ಮಂಜುಳಾ ಅವರು ನೆನಪಿಸಿಕೊಂಡಿದ್ದಾರೆ.

ನಾಗರತ್ನಮ್ಮ ಅವರ ನಾಟಕ ಮಂಡಲಿಯ ಆಡಳಿತವನ್ನೂ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದರು. ಅಲ್ಲಿಯೂ ಪುರುಷರಿಗೆ ಪ್ರವೇಶವಿರಲಿಲ್ಲ. ನಾಗರತ್ನಮ್ಮ ಅವರ ಸಹೋದರಿ ಮಂಜುಳಾ ಅವರೂ ರಂಗಭೂಮಿ ಕಲಾವಿದೆ. ನಾಗರತ್ನ ಅವರು ತಮ್ಮ ಸಹ ಕಲಾವಿದೆಯರ ಬಗ್ಗೆ ಅತ್ಯಂತ ಕಾಳಜಿಯನ್ನು ವಹಿಸುತ್ತಿದ್ದರು ಎಂದು ದಾಖಲಿಸಿದ್ದಾರೆ. ನಾಗರತ್ನಮ್ಮ ಅವರ ಪತಿ ಮರಣ ಹೊಂದಿದಾಗ ಅವರ ತಂಡ ಪ್ರದರ್ಶನ ನೀಡಲು ಮತ್ತೊಂದು ಊರಿಗೆ ಪ್ರಯಾಣ ಬೆಳೆಸಿತ್ತಂತೆ. ಪತಿಯ ಮರಣದ ಸುದ್ದಿ ತಿಳಿದ ನಂತರವೂ ತಮ್ಮ ಸಹ ಕಲಾವಿದೆಯರನ್ನು ಮಧ್ಯದಲ್ಲಿ ಬಿಟ್ಟು ಹೋಗಲು ಮತ್ತು ಪ್ರಯಾಣವನ್ನು ರದ್ದು ಮಾಡಿ ಪ್ರದರ್ಶನವನ್ನು ನಿಲ್ಲಿಸಲು ಒಪ್ಪಲಿಲ್ಲವಂತೆ. ರಂಗಭೂಮಿಯ ಬಗ್ಗೆ ಅವರಿಗಿದ್ದ ಅಸೀಮ ಬದ್ಧತೆ ಅಂಥದ್ದು ಎಂದು ಮಂಜುಳಾ ನೆನಪಿಸಿಕೊಂಡಿದ್ದಾರೆ.

ಪುರುಷರ ಸಾಧನೆಯನ್ನೇ `ಸಾಧನೆ’ ಎಂದು ದಾಖಲಿಸುವ ಚರಿತ್ರೆ, ಮಹಿಳೆಯರು ಸಾಹಸ ಮಾಡಿ ಚರಿತ್ರೆಯನ್ನೇ ಸೃಷ್ಟಿಸಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರಾಜ್ಯದಾದ್ಯಂತ ಸಂಚರಿಸುತ್ತಾ ನಾಟಕ ಪ್ರದರ್ಶನಗಳನ್ನು ನೀಡುವ ಅವರ ಈ ಪಯಣದಲ್ಲಿ, ಅವರು ಎದುರಿಸಿದ ಸಂಕಷ್ಟಗಳು ಮತ್ತು ಅವುಗಳನ್ನು ನಿವಾರಿಸಿಕೊಂಡು ಮುಂದೆ ಸಾಗುವಲ್ಲಿ ಅವರು ತೋರಿರುವ ಧೈರ್ಯ ಸಾಹಸಗಳು ನಿಜಕ್ಕೂ ಅನುಕರಣೀಯ’ ಎಂದು ಎಚ್.ಕೆ. ರಂಗನಾಥ್ ಅವರು ಕನ್ನಡ ರಂಗಭೂಮಿಯ ವಿಕಾಸ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಆಧುನಿಕ ಮಹಿಳಾವಾದೀ ರಂಗಭೂಮಿ ಚಳವಳಿ ಹೊಸದೊಂದು ಸಾಮಾಜಿಕ ಮನೋಭೂಮಿಕೆಯನ್ನು ನಿರ್ಮಾಣ ಮಾಡುವ ಮೂಲಕ ರಂಗಭೂಮಿಯಲ್ಲಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರೆ, ನಾಗರತ್ನಮ್ಮ ಅವರು ನೇರವಾಗಿ ರಂಗಭೂಮಿಗೇ ಧುಮುಕಿ, ಪ್ರದರ್ಶನದ ಮೂಲಕ ಸ್ತ್ರೀ ಪುರುಷರು ಸಮಾನರು ಎಂದು ಸಾಧಿಸಿ ತೋರಿಸಿ ಒಂದು `ಅನುಭವ’ವನ್ನಾಗಿಸಿಕೊಂಡರು ಮತ್ತು ಅಂಥ ಅನುಭವವನ್ನು ಕಟ್ಟಿಕೊಟ್ಟರು. ಆದರೆ ಅದಕ್ಕೆ ಅಸೀಮ ಮಾನಸಿಕ ಸಿದ್ಧತೆ ಬೇಕಾಯಿತು ಅವರಿಗೆ.

ವರನಟ ಡಾ.ರಾಜಕುಮಾರ್ ಅವರೊಂದಿಗೆ (ಫೋಟೊ ಕೃಪೆ: ರುಕ್ಕೋಜಿ ರಾವ್‌)

`ಅಷ್ಟು ವರ್ಷಗಳ ನಟನೆಯ ಅನುಭವವಿದ್ದರೂ, ಮೊದಲ ಬಾರಿಗೆ, ಭೀಮನ ಪೋಷಾಕು ಧರಿಸುವಾಗಲೇ ನನಗೆ ನಡುಕ ಉಂಟಾಗಿತ್ತು. ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮುಂದೆ ಅಂದು ನಾನು ಭೀಮನಾಗಿ ನಟಿಸಬೇಕಿತ್ತು. ಆದರೆ ವೇದಿಕೆಯ ಮೇಲಿನ ತೆರೆ ಎಳೆದಾಗ ನಾನು ಭೀಮನೇ ಆಗಿದ್ದೆ. ನನ್ನ ಅಭಿನಯವನ್ನು ಮೆಚ್ಚಿ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ’ ಎಂದು ಮೊದಲ ಬಾರಿಗೆ ಪುರುಷನ ಪಾತ್ರವನ್ನು ನಟಿಸುವಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಾಗೆಯೇ, ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳನ್ನು ಕಾಮುಕ ಕಣ್ಣುಗಳಿಂದ ಸದಾ ರಕ್ಷಿಸುತ್ತಿದ್ದರು. ಇವರ ನಾಟಕ ಕಂಪನಿಯಲ್ಲಿ ದುಡಿಯುವ ಹೆಣ್ಣು ಮಕ್ಕಳನ್ನು ಚುಡಾಯಿಸಿ, ಇವರ ಕೈಗೆ ಸಿಕ್ಕುಬಿದ್ದ ಕೆಲವರಿಗೆ ಇವರಲ್ಲಿನ ದುರ್ಗಿಯ ದರ್ಶನವಾಗಿತ್ತಂತೆ. ಅಂದಿನಿಂದೀಚೆಗೆ, ನಾಟಕವನ್ನು ನೋಡಿ ಗಂಭೀರವಾಗಿ ಎದ್ದುಹೋಗುತ್ತಿದ್ದರಂತೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಶಿಬಿರ ಹೂಡಿದಾಗ, ಒಂದು ಕೈಯಲ್ಲಿ ದೊಣ್ಣೆ, ಮತ್ತೊಂದು ಕೈಯಲ್ಲಿ ಚಾಕು ಹಿಡಿದು ರಾತ್ರಿಯಿಡೀ ತಮ್ಮ ನಾಟಕ ಕಂಪನಿಯ ಹೆಣ್ಣು ಮಕ್ಕಳ ರಕ್ಷಣೆಯ ಜವಾಬ್ದಾರಿ ಹೊರುತ್ತಿದ್ದರಂತೆ. ನಾಗರತ್ನಮ್ಮ ಅವರ ಜೊತೆ ಕೆಲಸ ಮಾಡಿದವರು ಅವರು ಅತ್ಯಂತ ಶಿಸ್ತಿನ ಮಹಿಳೆ ಎಂದಿದ್ದಾರೆ. ಹಾಗೆಯೇ ನಾಟಕದ ತಾಲೀಮಿನ ವಿಷಯದಲ್ಲಿಯೂ, ಯಾವುದೇ ರಿಯಾಯಿತಿ ಇಲ್ಲದ, ಕಠಿಣವಾದ ಶಿಸ್ತು. ನಾಟಕದಿಂದ ಬಂದ ಹಣವನ್ನು ಬಂದ ದಿನವೇ ಎಲ್ಲರಿಗೂ ಹಂಚುತ್ತಿದ್ದರಂತೆ. ಅದರಲ್ಲಿಯೂ ಶಿಸ್ತು!

ನಾಗರತ್ನಮ್ಮ ಅವರು, ನಾಟಕಗಳ ಜೊತೆಗೆ ಸುಮಾರು 15 ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರೊಡನೆ ನಟಿಸಿರುವುದು ಇವರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿತ್ತು. ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ನಾಗರತ್ನಮ್ಮ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಅವುಗಳಲ್ಲಿ ಮುಖ್ಯವಾದವು, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, ಟ್ಯಾಗೂರ್ ರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು. ಇಂದಿನ ಮಕ್ಕಳಿಗೆ ರಾಮಾಯಣ ಮಹಾಭಾರತಗಳನ್ನು ನಾಟಕಗಳ ಮೂಲಕ ಪರಿಚಯಿಸಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದ್ದ ನಾಗರತ್ನಮ್ಮ 2012 ರ ಅಕ್ಟೋಬರ್ 6 ರಂದು ಇಹ ಲೋಕವನ್ನು ತ್ಯಜಿಸಿದರು.

ಆರ್.ನಾಗರತ್ನಮ್ಮ | ಜನನ: 21/06/1926 | ನಿಧನ: 06/10/2012)

(ಲೇಖನ ಕೃಪೆ: ‘ಹಿತೈಷಿಣಿ’ ವೆಬ್ ತಾಣ – https://hitaishinimag.com/)

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಆರ್.ನಾಗರತ್ನಮ್ಮ ಅವರಿಗೆ ಪದ್ಮಶ್ರೀ ಗೌರವ (2012)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.