ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮರೆಯಲಾಗದ ಮೊಗ್ಯಾಂಬೋ!

ಪೋಸ್ಟ್ ಶೇರ್ ಮಾಡಿ

ಪದವಿ ಮುಗಿಸಿದ ಅಮರೀಶ್ ಪುರಿ ಸಿನಿಮಾ ಸೇರಬೇಕೆಂದು ಮುಂಬಯಿಗೆ ತೆರಳಿದರು. ಆ ವೇಳೆಗಾಗಲೇ ಅವರ ಹಿರಿಯ ಸಹೋದರ ಮದನ್ ಪುರಿ ಅವರಿಗೆ ಹಿಂದಿ ಚಿತ್ರರಂಗ ಪರಿಚಯವಾಗಿತ್ತು. ಮದನ್ ಖಳನಟನಾಗಿ ಗುರುತಿಸಿಕೊಂಡಿದ್ದರು. ಅಣ್ಣನ ನೆರವಿನಿಂದ ಸ್ಕ್ರೀನ್ ಟೆಸ್ಟ್‌ ಎದುರಿಸಿದ ಅಮರೀಶ್‌ಗೆ ಮೊದಲ ಪ್ರಯತ್ನದಲ್ಲೇ ಸೋಲು ಎದುರಾಗಿತ್ತು. ಸಿನಿಮಾ ಆಸೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟ ಅಮರೀಶ್ ಎಲ್‌ಐಸಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮುಂದೆ ಅವರಿಗೆ ರಂಗಭೂಮಿ ನಂಟು ಬೆಳೆಯಿತು. ಆನಂತರ ಅವರು ಚಿತ್ರರಂಗದ ಮೇರು ನಟನಾಗಿ ಬೆಳೆದದ್ದು ಇತಿಹಾಸ. ಅಮರೀಶ್ ಲಾಲ್ ಪುರಿ ಹುಟ್ಟಿದ್ದು ಜೂನ್ 22, 1932ರಂದು. ಪಂಜಾಬ್‌ನ ಜಲಂಧರ್‌ ಅವರ ಜನ್ಮಸ್ಥಳ. ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಅವರು ಪದವಿ ಪಡೆದು ಸಿನಿಮಾ ಸೇರಲೆಂದು ಮುಂಬಯಿಗೆ ತೆರಳಿದರು.ಸಿನಿಮಾಗೆ ಸೇರಲೆಂದು ಬಂದ ಅಮರೀಶ್ ಸ್ಕ್ರೀನ್ ಟೆಸ್ಟ್‌ನಲ್ಲಿ ವಿಫಲರಾದರು. ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಲೇ ಪೃಥ್ವಿ ಥಿಯೇಟರ್ ರಂಗತಂಡದ ಸದಸ್ಯರಾದರು. ಅತಿ ಕಡಿಮೆ ಅವಧಿಯಲ್ಲೇ ಅಮರೀಶ್‌ಗೆ ರಂಗಭೂಮಿ ಹೆಸರು ತಂದುಕೊಟ್ಟಿತು. 1979ರಲ್ಲಿ ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತರಾದರು. ರಂಗಭೂಮಿ ಅವರನ್ನು ಕಿರುತೆರೆಗೆ ಕರೆತಂದಿತು. ಮುಂದಿನ ದಿನಗಳಲ್ಲಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗ ಅವರಿಗೆ 40 ವರ್ಷ.

ಅಮರೀಶ್ ನಟಿಸಿದ ಮೊದಲ ಸಿನಿಮಾ ‘ಪ್ರೇಮ್ ಪೂಜಾರಿ’ 1970ರಲ್ಲಿ ತೆರೆಕಂಡಿತು. ಅವರು ಸಹಿ ಹಾಕಿದ ಮೊದಲ ಸಿನಿಮಾ ‘ರೇಷ್ಮಾ ಔರ್ ಶೇರಾ’ ತೆರೆಗೆ ಬಂದದ್ದು 1971ರಲ್ಲಿ. ಮುಂದೆ ಅವರು ಹಲವು ಕಲಾತ್ಮಕ ಚಿತ್ರಗಳ ಖಳ ಪಾತ್ರಗಳು ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದರು. ಶ್ಯಾಂ ಬೆನಗಾಲ್‌ ಅವರ ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಸೂರಜ್ ಕಾ ಸಾತ್ವನ್ ಘೋಡಾ’ ಮತ್ತು ಗೋವಿಂದ ನಿಹಲಾನಿ ಅವರ ‘ಪಾರ್ಟಿ’ (1984) ಚಿತ್ರಗಳು ಅಮರೀಶ್‌ಗೆ ಹೆಸರು ತಂದುಕೊಟ್ಟವು. ಶೇಖರ್ ಕಪೂರ್ ನಿರ್ದೇಶನದಲ್ಲಿ ತಯಾರಾದ ‘ಮಿಸ್ಟರ್ ಇಂಡಿಯಾ’ (1987) ಚಿತ್ರದೊಂದಿಗೆ ಅಮರೀಶ್ ಪುರಿ ಸ್ಟಾರ್‌ ಖಳನಟರಾದರು. ಆ ಚಿತ್ರದಲ್ಲಿನ ‘ಮೊಗ್ಯಾಂಬೋ ಖುಷ್ ಹುವಾ’ ಪುರಿ ಡೈಲಾಗ್ ಜನಪ್ರಿಯತೆ ಇಂದಿಗೂ ಮಾಸಿಲ್ಲ. 80ರ ದಶಕದಲ್ಲಿ ಅವರು ಹಿಂದಿ ಚಿತ್ರರಂಗದ ನಂ.1 ಖಳನಟನಾಗಿ ಹೆಸರು ಮಾಡಿದ್ದರು. 90ರ ದಶಕದ ನಂತರ ಅವರು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದರು. ಅಮರೀಶ್ ನಟಿಸಿದ ಕೊನೆಯ ಸಿನಿಮಾ ‘ಕಚ್ಛಿ ಸಡಕ್’ ಅವರು ನಿಧನರಾದ ಕೆಲವೇ ದಿನಗಳಲ್ಲಿ ತೆರೆಕಂಡಿತು.

ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’ (1982) ಚಿತ್ರದ ಖಾನ್ ಪಾತ್ರದೊಂದಿಗೆ ಅವರು ಜಾಗತಿಕ ಸಿನಿಮಾಗೆ ಪರಿಚಯವಾದರು. ಮುಂದೆ ಸ್ಟೀವನ್ ಸ್ಪಿಲ್‌ಬರ್ಗ್‌ ಅವರ ‘ಇಂಡಿಯಾನಾ ಜೋನ್ಸ್‌ ಅಂಡ್ ದಿ ಟೆಂಪಲ್ ಆಫ್ ಡೂಮ್’ (1984) ಇಂಗ್ಲಿಷ್ ಚಿತ್ರದ ಮೋಲಾ ರಾಮ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ದಕ್ಷಿಣ ಭಾರತದ ಪ್ರಮುಖ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ‘ಕಾಡು’ (ಕನ್ನಡ), ‘ದಳಪತಿ’ ಮತ್ತು ‘ಬಾಬಾ’ (ತಮಿಳು), ‘ಕಾಲಾಪಾನಿ’ (ಮಲಯಾಳಂ) ಅವರ ಜನಪ್ರಿಯ ಚಿತ್ರಗಳು. ‘ಜಗದೇಕ ವೀರುಡು ಅತಿಲೋಕ ಸುಂದರಿ’, ‘ಮೇಜರ್ ಚಂದ್ರಕಾಂತ’, ‘ಆದಿತ್ಯ – 369’, ‘ಕೊಂಡವೀಟಿ ದೊಂಗ’, ‘ಅಶ್ವಮೇಧಂ’, ‘ಆಖರಿ ಪೊರತಂ’ ಅವರ ತೆಲುಗು ಚಿತ್ರಗಳು. ‘ಚಾನ್ ಪರ್ದೇಸಿ’, ‘ಸತ್ ಶ್ರೀ ಅಕಲ್’, ‘ಶಾಹೀದ್ ಉದ್ಧಾಮ್‌ ಸಿಂಗ್’ ಅಮರೀಶ್‌ರ ಕೆಲವು ಪಂಜಾಬಿ ಚಿತ್ರಗಳು.‘ಸುಬ್ಬಿ ಸುಬ್ಬಕ್ಕ ಸುವ್ವಲಾಲಿ’, ‘ಫಲಿತಾಂಶ’, ‘ಸಿಂಹದ ಮರಿ ಸೈನ್ಯ’, ‘ಗಂಡಭೇರುಂಡ’, ‘ಲವ್‌’ ಪುರಿ ಅಭಿನಯದ ಇತರೆ ಕನ್ನಡ ಸಿನಿಮಾಗಳು.

1957, ಜೂನ್ 5ರಂದು ಅಮರೀಶ್, ಉರ್ಮಿಳಾ ದಿವೇಕಾರ್ ಅವರನ್ನು ವರಿಸಿದರು. ಈ ದಂಪತಿಗೆ ಇಬ್ಬರು ಮಕ್ಕಳು – ರಾಜೀವ್ ಪುರಿ ಮತ್ತು ನಮ್ರತಾ ಪುರಿ. ಅಮರೀಶ್‌ಗೆ ಹ್ಯಾಟ್‌ಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಜಗತ್ತಿನ ವಿವಿಧ ದೇಶಗಳ 200ಕ್ಕೂ ಹೆಚ್ಚು ಹ್ಯಾಟ್‌ಗಳು ಅವರ ಸಂಗ್ರಹದಲ್ಲಿದ್ದವು. ‘ಮೇರಿ ಜಂಗ್’ (1986) ಮತ್ತು ‘ಘಾತಕ್’, ‘ವಿರಾಸತ್’ ಚಿತ್ರಗಳ ಅಭಿನಯಕ್ಕಾಗಿ ಅವರು ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟ ಪುರಸ್ಕಾರಗಳ ಗೌರವಕ್ಕೆ ಪಾತ್ರರಾಗಿದ್ದರು. 1994ರಲ್ಲಿ ತೆರೆಕಂಡ ‘ಸೂರಜ್ ಕಾ ಸಾತ್ವನ್ ಘೋಡಾ’ ಚಿತ್ರದ ಉತ್ತಮ ಅಭಿನಯಕ್ಕಾಗಿ ಪುರಿಗೆ ಎರಡು ಅಂತರರಾಷ್ಟ್ರೀಯ ಪುರಸ್ಕಾರ ಸಂದಿದ್ದವು. ಅಮರೀಶ್ ಪುರಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬ್ರೈನ್ ಹ್ಯಾಮರೇಜ್‌ನಿಂದಾಗಿ ಜನವರಿ 12, 2005ರಂದು ಮುಂಬಯಿಯಲ್ಲಿ ಪುರಿ ನಿಧನರಾದರು. ಆಗ ಅವರಿಗೆ 72 ವರ್ಷ. ಮರುವರ್ಷ 2006ರಲ್ಲಿ ಅವರ ಆತ್ಮಕಥನ ‘ದಿ ಆಕ್ಟ್‌ ಆಫ್ ಲೈಫ್’ ಬಿಡುಗಡೆಯಾಯ್ತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.