ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಪೂರ್ವ ನಟ, ನಿರ್ದೇಶಕ ಸಿ.ಆರ್.ಸಿಂಹ

ಪೋಸ್ಟ್ ಶೇರ್ ಮಾಡಿ

ಸಿ.ಆರ್.ಸಿಂಹ ಅವರಿಗೆ ನಟನೆ ತಾತನಿಂದ ಬಂದ ಬಳುವಳಿ. ಬಾಲ್ಯದಲ್ಲೇ ಗೆಳೆಯರ ಗುಂಪು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಸಿಂಹ ಮುಂದೆ ಹವ್ಯಾಸಿ ರಂಗತಂಡಗಳಲ್ಲಿ ಸಕ್ರಿಯರಾದರು. ಆರಂಭದಲ್ಲಿ ‘ಬೆಂಗಳೂರು ಲಿಟ್ಲ್‌ ಥಿಯೇಟರ್‌’ ತಂಡದಲ್ಲಿ ಸಕ್ರಿಯವಾಗಿದ್ದ (1960) ಸಿಂಹ ಅಲ್ಲಿ ಕೆಲವು ಇಂಗ್ಲಿಷ್ ನಾಟಕಗಳನ್ನು ನಿರ್ದೇಶಿಸಿ – ನಟಿಸಿದರು. ‘ಬೆಂಗಳೂರು ಲಿಟ್ಲ್ ಥಿಯೇಟರ್‌’ನಲ್ಲಿ ಸಿಂಹ ಅವರು ನಟಿಸಿದ ಉತ್ಪಲ್ ದತ್‌ ಅವರ ‘ಸೂರ್ಯಶಿಕಾರಿ’ ಜನಪ್ರಿಯತೆ ಗಳಿಸಿತ್ತು. 1972ರಲ್ಲಿ ಸಮಾನಮನಸ್ಕ ರಂಗಭೂಮಿ ಸ್ನೇಹಿತರೊಡಗೂಡಿ ಅವರು ‘ನಟರಂಗ’ ರಂಗತಂಡ ಆರಂಭಿಸಿದರು. ಈ ರಂಗತಂಡ ಹಲವು ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿತು. ‘ನಟರಂಗ’ದ `ತುಘಲಕ್’ ಆಗ ಸಿಂಹ ಅವರ ಅತ್ಯಂತ ಜನಪ್ರಿಯ ನಾಟಕ.

1983ರಲ್ಲಿ ವೇದಿಕೆ ನಾಟಕ ಶಾಲೆ ಕಟ್ಟಿದ ಸಿಂಹ ಈ ಸಂಸ್ಥೆಯಡಿ ಹಲವು ನಾಟಕಗಳನ್ನು ನಿರ್ದೇಶಿಸಿದರು. ವೇದಿಕೆ ತಂಡದ ‘ಟಿಪಿಕಲ್ ಟಿ.ಪಿ.ಕೈಲಾಸಂ’ ಭಾರತದ ಹಲವೆಡೆ ಮಾತ್ರವಲ್ಲದೆ ಇಂಗ್ಲೆಂಡ್, ಅಮೇರಿಕ, ಕೆನಡಾ, ಗಲ್ಫ ರಾಷ್ಟ್ರಗಳಲ್ಲಿ 1000ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮೀಸೆ ಬಂದೋರು, ಕರ್ಣ, ಭೈರವಿ, ರಸಋಷಿ ಕುವೆಂಪು, ಮ್ಯಾಕ್‌ಬೆತ್‌, ಹಾವು ಏಣಿ, ಮದುವೆ ಮದುವೆ… ವೇದಿಕೆ ನಾಟಕ ಶಾಲೆಯ ಇತರೆ ಜನಪ್ರಿಯ ನಾಟಕಗಳು. ಮೇರು ಸಾಹಿತಿ ಕುವೆಂಪು ಅವರ ಬದುಕು ಮತ್ತು ಸಾಹಿತ್ಯ ಆಧರಿಸಿದ್ದ ‘ರಸಋಷಿ ಕುವೆಂಪು’ ಸಿನಿಮಾ ಕೂಡ ಆಯ್ತು. ಋತ್ವಿಕ್ ಸಿಂಹ ನಿರ್ದೇಶನದಲ್ಲಿ ತಯಾರಾದ ಈ ಚಿತ್ರದ ಶೀರ್ಷಿಕೆ ಪಾತ್ರವನ್ನು ಸಿ.ಆರ್‌.ಸಿಂಹ ನಿರ್ವಹಿಸಿದ್ದರು.

‘ಟಿಪಿಕಲ್ ಟಿ.ಪಿ.ಕೈಲಾಸಂ’ ನಾಟಕದ ಶೀರ್ಷಿಕೆ ಪಾತ್ರದಲ್ಲಿ ಸಿಂಹ

ಪದವಿ ನಂತರ ಸಿಂಹ ವಾರ್ತಾ ಇಲಾಖೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು. ಆಗ ಸರ್ಕಾರದ ಕಾರ್ಯಕ್ರಮಗಳನ್ನು ನಾಟಕಗಳ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆಯಿತ್ತು. ವಿವಿಧ ಯೋಜನೆಗಳನ್ನು ನಾಟಕಗಳ ಮೂಲಕ ಪ್ರಸ್ತುತಪಡಿಸುವ ತಂಡದಲ್ಲಿ ಸಿಂಹ ಅವರೂ ಸಕ್ರಿಯರಾಗಿದ್ದರು. ಅವರು ಬೆಳ್ಳಿತೆರೆಗೆ ಪರಿಚಯವಾದ ಸಿನಿಮಾ `ಸಂಸ್ಕಾರ’ (1970). ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ `ಕಾಕನಕೋಟೆ’ ನಾಟಕವನ್ನು ಇದೇ ಶೀರ್ಷಿಕೆಯಡಿ ಬೆಳ್ಳಿತೆರೆಗೆ (1977) ಅಳವಡಿಸಿದರು. ಈ ಚಿತ್ರಕ್ಕೆ ಮೂರನೇ ಅತ್ಯುತ್ತಮ ರಾಜ್ಯ ಪ್ರಶಸ್ತಿ (1976-77) ಸಂದಿತು. `ಶಿಕಾರಿ’, `ಸಿಂಹಾಸನ’, `ಅಶ್ವಮೇಧ’, `ಅಂಗೈಲಿ ಅಪ್ಸರೆ’ ಅವರ ನಿರ್ದೇಶನದ ಇತರ ಸಿನಿಮಾಗಳು. `ಬರ’, `ಚಿತೆಗೂ ಚಿಂತೆ’, ‘ಸಂಕಲ್ಪ’, ‘ಅನುರೂಪ’ ಹೊಸ ಅಲೆಯ ಚಿತ್ರಗಳಲ್ಲದೆ ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ಪರಮೇಶಿ ಪ್ರೇಮ ಪ್ರಸಂಗ, ರಾಯರು ಬಂದರು ಮಾವನ ಮನೆಗೆ, ನೀ ತಂದ ಕಾಣಿಕೆ, ಪರಶುರಾಮ, ರಾಮಾಪುರದ ರಾವಣ… ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕಿರುತೆರೆಯಲ್ಲೂ ಸಿಂಹ ಅವರ ಹೆಜ್ಜೆ ಗುರುತು ಇದೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯ ಹಲವು ಸರಣಿಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅನುಭವ ಕಥನ ‘ಗೊರೂರು ಇನ್ ಅಮೇರಿಕ’ ಸಿಂಹ ನಟನೆಯ ಪ್ರಮುಖ ಸರಣಿ. ನ್ಯೂಯಾರ್ಕ್, ವಾಷಿಂಗ್ಟನ್‌ ಡಿಸಿ, ನಯಾಗರಾ ಫಾಲ್ಸ್‌, ಹಾಲಿವುಡ್‌ನ ಯೂನಿವರ್ಸಲ್‌ ಸ್ಟುಡಿಯೋ, ಡಿಸ್ನೀಲ್ಯಾಂಡ್‌ನಲ್ಲಿ ಈ ಸರಣಿಯನ್ನು ಚಿತ್ರಿಸಲಾಗಿತ್ತು. ಸಿಂಹ ಐದು ನಾಟಕಗಳನ್ನು ರಚಿಸಿದ್ದು, ಇವು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸುಮಾರು ಐದು ವರ್ಷಗಳ ಕಾಲ  ಕನ್ನಡ ದಿನಪತ್ರಿಕೆಗೆ ಅವರು ‘ನಿಮ್ಮ ಸಿಂಹ’ ಅಂಕಣ ಬರೆದರು. 2014, ಫೆಬ್ರವರಿ 28ರಂದು ಸಿಂಹ ನಮ್ಮನ್ನು ಅಗಲಿದರು.

ಎಂ.ಎಸ್‌.ಸತ್ಯು ನಿರ್ದೇಶನದ ‘ಚಿತೆಗೂ ಚಿಂತೆ’ ಸಿನಿಮಾದಲ್ಲಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ತೂಗುದೀಪ’ದ ಬೆಳಕಿನ ಹಾದಿಯಲ್ಲಿ…

ಮೈಸೂರಿನ ಶ್ರೀನಿವಾಸ್ ಚಿತ್ರರಂಗದಲ್ಲಿ ‘ತೂಗುದೀಪ ಶ್ರೀನಿವಾಸ್’ ಎಂದೇ ಜನಪ್ರಿಯರಾದವರು. ಶ್ರೀನಿವಾಸ್ ಅವರ ತಂದೆ ಮುನಿಸ್ವಾಮಿನಾಯ್ಡು ರಂಗಭೂಮಿ ಕಲಾವಿದರು. ತಂದೆಯ ನಾಟಕಗಳನ್ನು

‘ಜ್ಯುಬಿಲಿ ಸ್ಟಾರ್’ ರಾಜೇಂದ್ರ ಕುಮಾರ್

ಬೆಳ್ಳಿತೆರೆಗೆ ಪರಿಚಯವಾದ ಆರಂಭದ ದಿನಗಳಲ್ಲಿ ರಾಜೇಂದ್ರಕುಮಾರ್ ತೀವ್ರ ಹಿನ್ನೆಡೆ ಅನುಭವಿಸಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಅವರ ಸಾಲು, ಸಾಲು ಚಿತ್ರಗಳು ಯಶಸ್ವಿಯಾದವು.

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ