ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಪೋಸ್ಟ್ ಶೇರ್ ಮಾಡಿ

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡುವುದು, ಶೂಟಿಂಗ್ ಜಾಗದಲ್ಲಿನ ಮೇಲ್ವಿಚಾರಣೆ, ತಿಂಡಿ-ಊಟೋಪಚಾರದ ವ್ಯವಸ್ಥೆ, ಹಣಕಾಸಿನ ಜವಾಬ್ದಾರಿ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಇನ್ನಿತರೆ ನಿರ್ವಹಣೆ ಕೆಲಸಗಳೆಲ್ಲವನ್ನೂ ಅವರು ತಲೆ ಮೇಲೆ ಹೊತ್ತು ತಿರುಗಾಡಬೇಕು. ಹಾಗೆ ಚಿತ್ರನಿರ್ಮಾಣ ನಿರ್ವಹಣೆ ಕ್ಷೇತ್ರದಲ್ಲಿ ದಶಕಗಳ ಕಾಲ ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ಮಾಡಿ ಚಿತ್ರೋದ್ಯಮದ ಎಲ್ಲರ ಪ್ರೀತಿ – ವಿಶ್ವಾಸಕ್ಕೆ ಪಾತ್ರರಾದವರು ಶಿವಾಜಿ ರಾವ್‌.

ಚಿತ್ರೋದ್ಯಮದಲ್ಲಿ ಶಿವಾಜಿ ರಾವ್‌ ಎಲ್ಲರಿಂದ ‘ದಾದಾ’ ಎಂದು ಕರೆಸಿಕೊಳ್ಳುತ್ತಿದ್ದರು. ನಟನೆ ಬಗ್ಗೆ ಅಪಾರ ಆಸಕ್ತಿಯಿದ್ದ ಅವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ. ಕನಕಪುರ ತಾಲೂಕಿನ ಅಣಜವಾಡಿ ಅವರ ಹುಟ್ಟೂರು. ಓದಿದ್ದು ಮೂರನೆಯ ತರಗತಿಯಷ್ಟೆ. ನಟನಾಗಬೇಕೆನ್ನುವ ಉಮೇದಿನಿಂದ ಬೆಂಗಳೂರಿಗೆ ಬಂದ ಅವರು ಕೆಲದಿನ ಶಿವಾಜಿ ಚಿತ್ರಮಂದಿರದಲ್ಲಿ ಕೆಲಸ ಮಾಡಿದರು. ಮುಂದೆ ಮದರಾಸಿಗೆ ತೆರಳಿ ಅಲ್ಲಿ ‘ಜಲದುರ್ಗ’ ಚಿತ್ರಕ್ಕೆ ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡಿದರು.

ಸಿನಿಮಾವೊಂದರ ಚಿತ್ರೀಕರಣದ ಬಿಡುವಿನಲ್ಲಿ ನಟ ಪ್ರಭಾಕರ್ ಅವರೊಂದಿಗೆ ಶಿವಾಜಿ ರಾವ್ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)‌

ಮದರಾಸಿನಲ್ಲಿ ‘ಸ್ಟಾರ್ ಕಂಬೈನ್ಸ್‌’ನಲ್ಲಿ ಸೆಟ್‌ಬಾಯ್‌, ಕ್ಲ್ಯಾಪ್‌ ಬಾಯ್‌ ಆಗಿ ಕೆಲಸ ಮಾಡಿದ್ದಾಯ್ತು. ಇವರ ಅಭಿನಯದ ಹುಚ್ಚು ನೋಡಿ ನಿರ್ದೇಶಕ ಕುರಸೀ ಅವರು ತಮ್ಮ ‘ರಾಣಿಹೊನ್ನಮ್ಮ’ ಚಿತ್ರದಲ್ಲಿ ಪಾತ್ರ ಕೊಟ್ಟರು. ಮುಂದೆ ಎಂಟ್ಹತ್ತು ಚಿತ್ರಗಳಲ್ಲಿ ನಟಿಸಿದ ಅವರು ರಾಜ್ ನೇತೃತ್ವದ ಕಲಾವಿದರ ಸಂಘದ ನಾಟಕ ಪ್ರವಾಸದ ನಿರ್ವಹಣೆ ಜೊತೆ ಪಾತ್ರಗಳನ್ನೂ ಮಾಡಿದರು. ‘ಮಕ್ಕಳ ರಾಜ್ಯ’ ಚಿತ್ರದಲ್ಲಿ ದಳಪತಿಯ ಪ್ರಮುಖ ಪಾತ್ರ ಸೇರಿದಂತೆ 50ಕ್ಕೂ ಹೆಚ್ಚು ಚಿಕ್ಕ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಮಹಾತ್ಮಾ ಪಿಕ್ಚರ್ಸ್‌’ನ ‘ಶಿವಶರಣೆ ನಂಬಿಯಕ್ಕ’ ಶಿವಾಜಿ ರಾವ್ ನಿರ್ಮಾಣ ನಿರ್ವಾಹಕರಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ಶ್ರಮ, ವಿಶ್ವಾಸ, ಪ್ರಾಮಾಣಿಕತೆ, ಶಿಸ್ತಿನ ವ್ಯಕ್ತಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ಮಾಣ ನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ಸಮಾನಮನಸ್ಕ ಸ್ನೇಹಿತರೊಡಗೂಡಿ ‘ಗರುಡರೇಖೆ’ ಸಿನಿಮಾ ನಿರ್ಮಿಸಿದರು. 1984ರ ಏಪ್ರಿಲ್‌ 16ರಂದು ಮದರಾಸಿನ ಆಸ್ಪತ್ರೆಯೊಂದರಲ್ಲಿ ಅವರು ಹೃದಯಾಘಾತದಿಂದ ಅಗಲಿದರು. ಆಗ ಶಿವಾಜಿ ರಾವ್ ಅವರಿಗೆ 54 ವರ್ಷ.

ಎಂ. ಶಿವಾಜಿ ರಾವ್‌ | ಜನನ: 1930 | ನಿಧನ: 16/04/1984

(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ