ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬೆಳ್ಳಿತೆರೆ ಅಮರಶಿಲ್ಪಿ ‘ಕಲ್ಯಾಣ್ ಕುಮಾರ್’

ಪೋಸ್ಟ್ ಶೇರ್ ಮಾಡಿ

‘ಇವರು ಎಂದಿಗೂ ಹೀರೋನೇ’ ಎಂದು ಆರ್.ಎನ್.ಜಯಗೋಪಾಲ್ ನನಗೆ ಕಲ್ಯಾಣ್ ಕುಮಾರ್ ಅವರ ಪರಿಚಯ ಮಾಡಿ ಕೊಟ್ಟಾಗ ಹೇಳಿದ್ದರು. ಅವರು ಇದ್ದಿದ್ದೂ ಹಾಗೇ, ಒಂದು ರೀತಿಯಲ್ಲಿ ರಾಜಠೀವಿ ಅವರ ಮುಖದಲ್ಲಿ ಎದ್ದು ಕಾಣುತ್ತಾ ಇತ್ತು. ಆದರೆ ವ್ಯಕ್ತಿ ಹಾಗಲ್ಲ. ಕೊಂಚವೂ ಬಿಂಕ ಬಿಗುಮಾನ ಇಲ್ಲದ ಸರಳಾತಿ ಸರಳ. ಅವರ ಜೊತೆ ಮಾತಿಗೆ ಕುಳಿತರೆ ಒಂದೊಂದು ಮಾತುಕತೆ ಕೂಡ ಸಿನಿಮಾ ತರಹವೇ ಇರುತ್ತಿತ್ತು. ಅಷ್ಟು ಇಂಟರೆಸ್ಟಿಂಗ್ ಆಗಿ ಅವರು ಕಥೆ ಹೇಳ್ತಾ ಇದ್ದರು. ಹೀಗೆ ನಾನು ಕೇಳಿದ ಅವರ ಜೀವನದ ಕಥೆಯ ಕೆಲವು ಮುಖ್ಯ ಅಂಶಗಳನ್ನು ಇಲ್ಲಿ ಕೊಡ್ತಾ ಇದ್ದೀನಿ.

ಪುನರ್ವಸು ನಿಮಗೆಲ್ಲಾ ಗೊತ್ತಿದ್ದ ಹಾಗೆ ಶ್ರೀರಾಮ ಜನಿಸಿದ ನಕ್ಷತ್ರ ಇಂತಹ ಅಮೋಘವಾದ ನಕ್ಷತ್ರದಲ್ಲಿ ಜನಿಸಿದವರು ಕಲ್ಯಾಣ್ ಕುಮಾರ್. ಅವರ ನಿಜವಾದ ಹೆಸರು ವೆಂಕಟರಂಗನ್. ಐದು ಜನ ಅಣ್ಣಂದಿರು, ಐದು ಜನ ಅಕ್ಕಂದಿರು. ಒಂದು ಕ್ರಿಕೆಟ್ ಟೀಂಗೆ ಆಗುವಷ್ಟು ಮಕ್ಕಳು ರಾಘವಾಚಾರ್ಯ ಮತ್ತು ಕಲ್ಯಾಣಮ್ಮ ದಂಪತಿಗಳಿಗೆ. ಅವರಲ್ಲಿ ಕಲ್ಯಾಣ್ ಕುಮಾರ್ ಅವರೇ ಹನ್ನೊಂದನೆಯವರು. ಅವರ ಹುಟ್ಟಿದ ದಿನ 1928ರ ಜುಲೈ 13.(ಇದರ ಕುರಿತು ವಿವಾದ ಇದೆ. ಆದರೆ ನಾನು ಬಲ್ಲಂತೆ ಇದು ಸರಿಯಾದ ದಿನ)  ಚಿಕ್ಕವರಾದ ಇವರನ್ನು ಎಲ್ಲರೂ ಚೊಕ್ಕಣ್ಣ ಅಂತ ಕರೆಯುತ್ತಿದ್ದರು. ಬಹಳ ದಿನ ಅದೇ ಹೆಸರು ಪರ್ಮನೆಂಟ್ ಆಗಿ ಬಿಡ್ತು. ತಂದೆ ರೆವಿನ್ಯೂ ಸೆಕ್ರೆಟಿಯಟ್‌ನಲ್ಲಿ ಸೂಪರಿಂಟೆಂಡೆಂಟ್ ಆಗಿದ್ದರು. ಆ ಕಾಲಕ್ಕೆ ಅದು ದೊಡ್ಡ ಪೋಸ್ಟ್. ಮನೆಯಲ್ಲಿ ಹಾಗೆ ನೋಡಿದರೆ ಕಷ್ಟ ಅಂತ ಇರಲಿಲ್ಲ. ಆದರೆ ಸಮಸ್ಯೆ ಇದ್ದಿದ್ದು ಚೊಕ್ಕಣ್ಣನಿಗೆ ಬಾಲ್ಯದ ಎಲ್ಲಾ ತುಂಟಾಟಗಳ ನಡುವೆ  ಹಿಡಿದಿದ್ದು ರಂಗಭೂಮಿಯ ಗೀಳಿನದು. ರಂಗಭೂಮಿಯಲ್ಲಿ ಹೆಸರು ಬಂತು, ಕನಸೂ ಹುಟ್ಟಿ ಕೊಂಡಿತು. ‘ಚಂದ್ರಲೇಖಾ’ ಸಿನಿಮಾ ನೋಡಿ ಮದ್ರಾಸಿಗೆ ಕದ್ದು ಓಡಿ ಹೋಗಿ ಜೆಮಿನಿ ಸ್ಟುಡಿಯೋದ ವಾಸನ್ ಅವರನ್ನು ನೋಡುವ ವಿಫಲ ಪ್ರಯತ್ನ ಮಾಡಿದ್ದರು.

ಹಿಂದಿರುಗಿ ಬಂದರೂ ಮನಸ್ಸು ವಿದ್ಯೆಯ ಕಡೆ ಹೋಗಲೇ ಇಲ್ಲ. ಅಂಕಪಟ್ಟಿ ನೋಡಿ ತಂದೆ ಗಲಾಟೆ ಮಾಡಿದಾಗ ಮುಂಬೈಗೆ ಓಡಿ ಹೋಗುವ ನಿರ್ಧಾರವನ್ನು ಹೇಳಿ ಬಿಟ್ಟರು.ಮುಂಬೈಗೇನೋ ಬಂದರು. ಕೈಯಲ್ಲಿ ತಾಯಿ ಕೊಟ್ಟ ಐದು ನೂರು ರೂಪಾಯಿಗಳು ಮಾತ್ರ. ಆ ಮಹಾಸಾಗರದಲ್ಲಿ ಎಲ್ಲೆಡೆ ಅಲೆದಾಡಿದರು. ಅವಕಾಶ ಮಾತ್ರ ಸಿಕ್ಕಲಿಲ್ಲ. ಆತ್ಮಹತ್ಯೆಯಂತಹ ಯೋಚನೆ ಕೂಡ ಆ ದಿನಗಳಲ್ಲಿ ಬಂದಿದ್ದೂ ಕೂಡ ಉಂಟು. ಎಲ್ಲೂ ಅವಕಾಶ ಸಿಗದೆ ಇನ್ನೊಂದು ರೌಂಡ್ ಬೆಂಗಳೂರಿಗೆ ಹಿಂದಿರುಗಿ ಬರಬೇಕಾಯಿತು.

‘ಭೂಕೈಲಾಸ’ ಚಿತ್ರದಲ್ಲಿ ರಾಜಕುಮಾರ್, ಕಲ್ಯಾಣ್ ಕುಮಾರ್ ಮತ್ತು ಎಸ್‌.ವಿ.ರಂಗರಾವು

ದಾರಿ ಹುಡುಕುತ್ತಾ ಬೀದರ್‌ನ ಅಕ್ಕನ ಮನೆಗೆ ಚೊಕ್ಕಣ್ಣ ಬಂದರು. ಅವರ ಮನೆ ಸಮೀಪವೇ ವೇದ ಎನ್ನುವ ಸಿನಿಮಾ ನಟಿ ಇದ್ದಳು. ಅವಳನ್ನು ಸಂಧ್ಯಾ ಎಂದು ಚಿತ್ರರಂಗದಲ್ಲಿ ಕರೆಯುತ್ತಿದ್ದರು. ಅವರ ಸಹಾಯದಿಂದ ಸಿ.ವಿ.ರಾಜು ಅವರ ‘ನಟಶೇಖರ’ ಸಿನಿಮಾದಲ್ಲಿ ಆಕ್ಟ್ ಮಾಡೋ ಅವಕಾಶ ಸಿಕ್ಕಿತು. ಹೆಸರು ಬದಲಾಯಿಸು ಅಂದಾಗ ಚೊಕ್ಕಣ್ಣನ ನೆನಪಿಗೆ ಬಂದಿದ್ದು ತನಗಾಗಿ ಅಮ್ಮ ಮಾಡಿದ ತ್ಯಾಗಗಳು, ಪಟ್ಟ ಕಷ್ಟಗಳು, ಹೀಗಾಗಿ ಕಲ್ಯಾಣಮ್ಮ ಅನ್ನೋ ಹೆಸರು ಚಿತ್ರರಂಗದಲ್ಲಿ ತನಗೆ ಸದಾ ಆಶೀರ್ವಾದ ಮಾಡ್ಲಿ ಅಂದುಕೊಂಡು ‘ಕಲ್ಯಾಣ್ ಕುಮಾರ್’ ಅಂತ ಹೆಸರು ಇಟ್ಟುಕೊಂಡರು.

ಮೊದಲ ಸಿನಿಮಾ ‘ನಟಶೇಖರ’ ಸೂಪರ್ ಹಿಟ್ ಎನ್ನಿಸಿ ಕೊಂಡಿತು. ಅಪ್ಪಯ್ಯನನ್ನು ಬಿಟ್ಟು ಮನೆಯವರೆಲ್ಲರೂ ಸಿನಿಮಾ ನೋಡಿ ಭೇಷ್ ಎಂದಿದ್ದೂ ಕೂಡ ಆಯಿತು. ನಂತರ ಸದಾರಮೆ, ಮುತ್ತೈದೆ ಭಾಗ್ಯ ಸಿನಿಮಾಗಳು ಬಂದವು. ಸದಾರಮೆ ತೆಲುಗು ವರ್ಷನ್‌ನಲ್ಲಿ ಕೂಡ ಕಲ್ಯಾಣ್ ಕುಮಾರ್ ಅಭಿನಯಿಸಿದರು. ಮಂಜುನಾಥ ಪ್ರೊಡಕ್ಷನ್‌ನ ರಾಜ್ ಗೋಪಾಲ್ ‘ಮನೆಗೆ ಬಂದ ಮಹಾಲಕ್ಷ್ಮಿ’ ಸಿನಿಮಾಕ್ಕೆ ಆಗ್ರಿಮೆಂಟ್ ಮಾಡಿ ಕೊಳ್ಳಲು ಕರೆದರು. ಅದೂ ಇದು ಮಾತಿನ ನಡುವೆ ರಾಜ್ ಗೋಪಾಲ್ ತಂಗಿಯನ್ನ ‘ನೋಡು ಸ್ನೇಹಿತರು ಬಂದಿದ್ದಾರೆ, ಕುಡಿಯಲು ಏನಾದರೂ ತೆಗೆದುಕೊಂಡು ಬಾ’ ಎಂದು ಕರೆದರು. ಆಗ ಬಂದಿದ್ದರು ಮಿಂಚಿನ ಬಳ್ಳಿ, ಆಗಲೇ ನಾಟಕದಲ್ಲಿ ಹೆಸರು ಮಾಡಿದ್ದ ರೇವತಿ. ಲವ್ ಎಟ್ ಫಸ್ಟ್ ಸೈಟ್! ನೋಡಿದ ಕೂಡಲೇ ಇವಳೇ ನನ್ನ ಹೆಂಡತಿ ಅಂತ ಡಿಸೈಡ್ ಕೂಡ ಮಾಡಿಬಿಟ್ಟರು ಕಲ್ಯಾಣ್ ಕುಮಾರ್‌.

ಮನದನ್ನೆ ಮನಸ್ಸಿಗೆ ಬಂದರೆ ಸಾಕೆ? ಮನೆಗೂ ಬರಬೇಡವೇ. ರೇವತಿ ಮನೆಯ ಹಿಂದಿನ ಮನೆಗೇ ಶಿಫ್ಟ್ ಆದರು. ರೇವತಿ ಮತ್ತು ಅವರ ತಾಯಿ ಸರೋಜಮ್ಮ ಇಬ್ಬರೂ ರಂಗಭೂಮಿಯಲ್ಲಿ ಇದ್ದರು. ಸಿನಿಮಾದಲ್ಲಿ ಕೈ ತುಂಬಾ ಕೆಲಸ ಇದ್ದರೂ ರೇವತಿಯನ್ನು ಒಲಿಸಿ ಕೊಳ್ಳುವ ಸಲುವಾಗಿಯೇ ನಾಟಕದಲ್ಲಿ ಕೂಡ ಅಭಿನಯಿಸಿದರು. ರೇವತಿ ಕೂಡ ಇವರನ್ನು ಇಷ್ಟ ಪಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ ಅಜ್ಜಿಯ ಅಂಕೆ, ಅಣ್ಣನ ಭಯ. ಇದರಿಂದ ಪ್ರೇಮ ಕದ್ದು ಮುಚ್ಚಿಯೇ ಸಾಗಬೇಕಿತ್ತು. ಇನ್ನೇನು ಪ್ರೇಮ ಫಲಿಸಿತು ಎನ್ನಬೇಕು ಅಷ್ಟರಲ್ಲಿ ಒಂದು ಟೆಲಿಗ್ರಾಂ ಬಂದಿತು. ತಂದೆಯವರ ಆರೋಗ್ಯ ಚೆನ್ನಾಗಿಲ್ಲ. ಕಲ್ಯಾಣ್ ಕುಮಾರ್ ಬೆಂಗಳೂರಿಗೆ ಧಾವಿಸಿದರು. ಆದರೆ ರೇವತಿ ಜೊತೆಗೇ ಹೋದರು. ಹೆತ್ತವರ ಮುಂದೆ ಮನ ಮೆಚ್ಚಿದ ಹೆಣ್ಣನ್ನು ನಿಲ್ಲಿಸಿ ಇವಳನ್ನೇ ನಾನು ಮದುವೆ ಆಗ್ತೀನಿ ಎಂದರು. ಅಮ್ಮ ಎಂತಹಾ ಸುಂದರಿ ಸೊಸೆ ಆಗ್ತಾ ಇದ್ದಾಳೆ ಎಂದು ಹೆಮ್ಮೆ ಪಟ್ಟರು. ಆದರೆ ಅಪ್ಪ ಒಪ್ಪಲೇ ಇಲ್ಲ ‘ನಾಟ್ಕ – ಸಿನಿಮಾದ ಹುಡುಗಿ ಮನೆಗೆ ಬಂದರೆ ತಾನೂ ಕೆಡುವುದಲ್ಲದೆ ಮನೆಯನ್ನೂ ಕೂಡ ಕೆಡಸ್ತಾಳೆ’ ಎಂದು ಕೇವಲವಾಗಿ ಮಾತಾಡಿದರು. ಆದರೆ ಕಲ್ಯಾಣ್ ಈಗ ಗಟ್ಟಿಯಾಗಿದ್ದರು. “ಹೆಣ್ಣು ಕೆಡುವುದಿದ್ದರೆ ಪಾತಾಳದಲ್ಲಿ ಇದ್ದರೂ ಕೆಡ್ತಾಳೆ, ಪವಿತ್ರವಾಗಿರಬೇಕು ಅಂತ ನಿರ್ಧರಿಸಿದರೆ ಎಂತಹ ದಿಟ್ಟತನ ಬಂದರೂ ಎದುರಿಸ್ತಾಳೆ, ಇವಳನ್ನು ಬಿಟ್ಟು ನನಗೆ ಬದುಕಿಲ್ಲ.” ಇನ್ನೂ ಮನೆಯವರನ್ನು ಒಪ್ಪಿಸುವ ಪ್ರಯತ್ನ ಸಾಕು ಎನ್ನಿಸಿತು.

ಕಲ್ಯಾಣ್ ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್‌

ಮದ್ರಾಸಿಗೆ ಬಂದವರೇ ಕೆಲವೇ ಆತ್ಮೀಯರ ಎದುರು ರಿಜಿಸ್ಟರ್ ಮದುವೆ ಆದರು. ರೇವತಿ ಕಲ್ಯಾಣ್ ಕುಮಾರ್ ಅವರ ಬಾಳಿಗೆ ಮಹಾಲಕ್ಷ್ಮಿಯಾಗಿಯೇ ಬಂದರು. ಅವರು ಬಂದ ನಂತರ ‘ತಾಯಿಲ್ಲಾ ಪಿಳ್ಳೆಂ’ ಮತ್ತು ನೆಂಜಿಲ್ ಒರು ಆಲೆಯಂ’ ಸೂಪರ್ ಹಿಟ್ ಎನ್ನಿಸಿ ಕೊಂಡು ತಮಿಳಿನಲ್ಲಿ ಬಹುಬೇಡಿಕೆಯ ಕಲಾವಿದರಾದರು. ರೇವತಿ, ಕಲ್ಯಾಣ್ ಕುಮಾರ್ ಅವರ ಮನೆಯವರನ್ನು ನಿಧಾನವಾಗಿ ಗೆಲ್ಲುತ್ತಾ ಬಂದರು. ಕಟುವಾಗಿದ್ದ ಮಾವಯ್ಯನ ಬಾಯಲ್ಲಿಯೇ ‘ಸೊಸೆ ಅಂದರೆ ಹೀಗೆ ಇರಬೇಕು’ ಎನ್ನಿಸಿಕೊಂಡರು. ಮೈಲಾಪುರದ ನಾಲ್ಕನೇ ಕ್ರಾಸ್‌ನಲ್ಲಿ ಸ್ವಂತ ಮನೆ ತೆಗೆದು ಕೊಂಡರು. ಗೃಹಪ್ರವೇಶಕ್ಕೆ ಚಿತ್ರರಂಗದ ಗಣ್ಯರನ್ನ ಕರೆಯಲಿಲ್ಲ. ಸಾವಿರಾರು ಅನಾಥ ಮಕ್ಕಳಿಗೆ ಊಟ ಹಾಕಿದರು. ಕಲ್ಯಾಣ್ ಕುಮಾರ್ ದಂಪತಿಗಳು ತಮ್ಮ ಕಷ್ಟದ ದಿನಗಳಲ್ಲಿ ಕೂಡ ಈ ಪದ್ಧತಿಯನ್ನ ಬಿಡದೆ ನಡೆಸಿಕೊಂಡು ಬಂದರು.

‘ಅಮರ ಶಿಲ್ಪಿ ಜಕ್ಕಣಾಚಾರಿ’ ಸಿನಿಮಾದಿಂದ ಕಲ್ಯಾಣ್ ಕುಮಾರ್ ಅವರ ಹೆಸರು ಎಲ್ಲಾ ಕಡೆ ಕೇಳಿ ಬಂತು. ಈಗ ಅವರ ಗ್ರಾಫ್ ಪೀಕ್‌ನಲ್ಲಿ ಇತ್ತು. ‘ಚಿನ್ನದ ಗೊಂಬೆ’ ಚಿತ್ರೀಕರಣ ಕಲ್ಯಾಣ್ ಕುಮಾರ್ ಅವರ ತಾಯಿ ನಿಧನರಾದ ಸುದ್ದಿ ಬಂತು. ಕೂಡಲೇ ಕಲ್ಯಾಣ್ ಕುಮಾರ್ ಹೊರಟು ನಿಂತಾಗ ಪಂತಲು ‘ಬಹಳ ಕಷ್ಟ ಪಟ್ಟು ಸಿನಿಮಾ ಮಾಡ್ತಾ ಇದ್ದೀನಿ. ಎಲ್ಲರ ಡೇಟ್ ಮ್ಯಾಚ್ ಆಗುವುದು ಕಷ್ಟ’. ‘ಇದೊಂದೇ ದಿನ ಸರ್’ ಎಂದ ಕಲ್ಯಾಣ್ ಕುಮಾರ್ ರೇವತಿ ಕರೆದುಕೊಂಡು ವಿಮಾನ ಏರಿದರು. ಬೆಂಗಳೂರಿಗೆ ಬಂದರೆ ಟ್ಯಾಕ್ಸಿ ಮುಷ್ಕರ. ಆಟೋ ಏರಿ ಮಲ್ಲೇಶ್ವರಂನ ಮನೆಗೆ ಬಂದರು. ತಾಯಿಯ ಅಂತಿಮ ಯಾತ್ರೆ ನಡೆಯುತ್ತಿತ್ತು. ಕೊನೆಯ ನಮಸ್ಕಾರ ಹೇಳಿ ಮರುದಿನವೇ ಬಣ್ಣ ಹಚ್ಚಿಕೊಂಡು ಶಾಟ್‌ಗೆ ಸಿದ್ಧರಾದರು. ಇನ್ನೇನು ಚಿತ್ರೀಕರಣ ಮುಗಿಯಬೇಕು ತಂದೆ ನಿಧನದ ಸುದ್ದಿ ಬಂತು. ಈಗ ಕಲ್ಯಾಣ್ ಕುಮಾರ್ ಗಟ್ಟಿಯಾಗಿದ್ದರು. ‘ಸರ್ ಚಿಂತಿಸಬೇಡಿ, ನಾನು ಶೂಟಿಂಗ್ ಮುಗಿಸಿಯೇ ಹೋಗುತ್ತೇನೆ’ ಎಂದು ಪಂತಲು ಅವರಿಗೆ ಹೇಳಿದರು.

ಕಲ್ಯಾಣ್ ಕುಮಾರ್ ಅವರ ಜೀವನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಮಯ ಕೆಲಕಾಲ ಇತ್ತು. ತಮಿಳಿನಲ್ಲಿ ಗಳಿಸಿದ ಹಣವನ್ನು ಕನ್ನಡದಲ್ಲಿ ತೊಡಗಿಸಲು ನಿರ್ಧರಿಸಿದರು. ‘ಎಂದೂ ನಿನ್ನವನೇ’ ಅವರು ನಿರ್ಮಿಸಿದ ಮೊದಲ ಚಿತ್ರ. ಮಡದಿ ರೇವತಿಯವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದರು. ಇಬ್ಬರೂ ಸೇರಿ ಆರ್.ಕೆ.ಪಿಕ್ಚರ್ಸ್ ಸ್ಥಾಪಿಸಿದರು. ಕಲ್ಯಾಣ್ ಕುಮಾರ್ ಅವರೇ ನಿರ್ದೇಶಕರು. ಮೇಕಪ್ ಇಲ್ಲದೆ ಎಲ್ಲಾ ಕಲಾವಿದರೂ ಸಹಜವಾಗಿ ಅಭಿನಯಿಸುವಂತೆ ಮಾಡಿದರು. ಇದೊಂದು ರೀತಿಯಲ್ಲಿ ಹೊಸ ಪ್ರಯೋಗ ಕೂಡ ಆಗಿತ್ತು. ಎರಡನೇ ಚಿತ್ರ ‘ಪ್ರವಾಸಿ ಮಂದಿರ’. ಇಲ್ಲಿ ಸ್ಟುಡಿಯೋ ಸಹವಾಸಕ್ಕೆ ಹೋಗದೆ ಇಡೀ ಚಿತ್ರವನ್ನು ಹೊರಾಂಗಣದಲ್ಲಿ ಮಾಡಿದರು. ಮೂರನೇ ಸಿನಿಮಾ ‘ಕಲ್ಲು ಸಕ್ಕರೆ’. ಈ ಸಿನಿಮಾದ ವಸ್ತು ಕೂಡ ವಿಶೇಷವಾಗಿತ್ತು. ಕಲ್ಯಾಣ್ ಕುಮಾರ್ ಅವರ ಸಾಹಸವನ್ನು ಮೆಚ್ಚಿಕೊಂಡ ಡಿ.ವಿ.ಜಿ ಈ ಸಿನಿಮಾಕ್ಕಾಗಿಯೇ ‘ಈ ಮನೆಯ ಮಂಗಳದ’ ಎನ್ನುವ  ಹಾಡನ್ನೂ ಕೂಡ ಬರೆದುಕೊಟ್ಟರು. ಅವರು ಸಿನಿಮಾಕ್ಕೆ ಎಂದು ಬರೆದಂತಹ ಏಕೈಕ ಹಾಡು ಇದು. ‘ಅವರ ವನಸುಮದೊಳೆನ್ನ’ ಎಂಬ ಪ್ರಸಿದ್ದವಾದ ಕವಿತೆಯನ್ನೂ ಕೂಡ ಈ ಸಿನಿಮಾದಲ್ಲಿ ಬಳಸಿ ಕೊಳ್ಳಲಾಗಿತ್ತು. ಮೂರೂ ಸಿನಿಮಾಗಳು ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. ಕಲ್ಯಾಣ್ ಕುಮಾರ್ ಈ ಸಿನಿಮಾಗಳ ಮೂಲಕ ಮಾಡಿದ ಪ್ರಯೋಗಗಳೂ ಕೂಡ ಇತಿಹಾಸದಲ್ಲಿ ದಾಖಲಾಗಲಿಲ್ಲ.

‘ಅಮರಶಿಲ್ಪಿ ಜಕಣಾಚಾರಿ’ ಚಿತ್ರದಲ್ಲಿ ಬಿ.ಸರೋಜಾದೇವಿ, ಕಲ್ಯಾಣ್ ಕುಮಾರ್‌

ಮೂರು ಸಿನಿಮಾಗಳೂ ಕೂಡ ಸೋಲನ್ನು ಕಂಡು ಕೈ ಬರಿದಾದ ಕಾಲದಲ್ಲಿ ಕಲ್ಯಾಣ್ ಕುಮಾರ್ ಅವರು ಪುಟ್ಟಣ್ಣನವರ ಮೇಲಿನ ವಿಶ್ವಾಸದಿಂದ ಅವರು ನಿರ್ದೆಶಿಸಿದ ಮೊದಲ ಕನ್ನಡ ಚಿತ್ರ ‘ಬೆಳ್ಳಿ ಮೋಡ’ದಲ್ಲಿ ಅಭಿನಯಿಸಿದರು. ಚಿತ್ರವೂ ಚೆನ್ನಾಗಿ ಹೋಯಿತು. ಕಲ್ಯಾಣ್ ಕುಮಾರ್ ಅವರ ಪಾತ್ರವೂ ಚೆನ್ನಾಗಿತ್ತು. ಆದರೆ ಆಗಲೇ ಯಶಸ್ವಿ ನಾಯಕರಾಗಿದ್ದ ಅವರು ನೆಗೆಟಿವ್ ಇಮೇಜ್ ಪಾತ್ರ ಮಾಡಿದ್ದು ವೃತ್ತಿ ಜೀವನದ ಮೇಲೆ ಏಟನ್ನು ಕೊಟ್ಟಿತು. ‘ಮೈಸೂರು ಟಾಂಗಾ’ ಸಿನಿಮಾದಲ್ಲಿ ಕೂಡ ಅವರದು ನೆಗೆಟಿವ್ ರೋಲ್. ಈ ಎರಡೂ ಚಿತ್ರಗಳ ನಂತರ ಕಲ್ಯಾಣ್ ಕುಮಾರ್ ಅವರಿಗೆ ಅವಕಾಶಗಳು ಕಡಿಮೆಯಾದವು. ಮದ್ರಾಸ್ ವಾಸ ಸಾಕು ಎನ್ನಿಸಿ ಬೆಂಗಳೂರಿಗೆ ಬಂದರು. ಎಸ್ಟೇಟ್ ತೆಗೆದುಕೊಂಡರು. ಚಿತ್ರರಂಗ ಕೈ ಬಿಟ್ಟಿದ್ದರಿಂದ ಜೀವನೋಪಾಯಕ್ಕಾಗಿ ಕೋಳಿ ಸಾಕಾಣಿಕೆ ಮಾಡಿದರು. ರೇವತಿ ಅವರ ಅಣ್ಣ ರಾಜ್‌ಗೋಪಾಲ್ ಅವರ ಮಡದಿ ತೀರಿಕೊಂಡರು. ಅವರ ಐವರೂ ಮಕ್ಕಳು ಹಗಲಿರಳು ಕಲ್ಯಾಣ್ ಕುಮಾರ್ ಅವರ ಮನೆಯಲ್ಲಿಯೇ ಇರುತ್ತಿದ್ದರು. ಮಕ್ಕಳಿಲ್ಲದ ದಂಪತಿಗಳು ಆ ಮಕ್ಕಳ ಸಹವಾಸದಲ್ಲಿಯೇ ಸಂತೋಷವನ್ನು ಕಂಡು ಕೊಂಡರು.

ತಮ್ಮಂತೆ ಕಷ್ಟದಲ್ಲಿ ಇರುವ ಕಲಾವಿದರಿಗೆ ನೆರವಾಗಲು ಒಂದು ಸಂಘ ಇರಬೇಕು ಅಂತ ಕಲ್ಯಾಣ್ ಕುಮಾರ್ ಅವರಿಗೆ ಅನ್ನಿಸಿತು. ‘ಅಶಕ್ತ ಕಲಾವಿದರ ಸಂಘ’ ಸ್ಥಾಪಿಸಿದರು. ಕಲಾವಿದರ ಜೀವನೋಪಾಯಕ್ಕೆ ನೆರವಾದರು. ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು. ಆದರೆ ಅಲ್ಲಿ ಕೂಡ ಅನಾರೋಗ್ಯಕರ ವಿದ್ಯಮಾನಗಳು ನಡೆದಿದ್ದರಿಂದ ರಾಜಿನಾಮೆ ಕೊಟ್ಟು ಗೌರವದಿಂದ ಹೊರಕ್ಕೆ ಬಂದರು. ಕನ್ನಡಕ್ಕೆ ದುಡಿದ ಹಿರಿಯ ಜೀವಗಳಿಗೆ ಕಲ್ಯಾಣ್ ಕುಮಾರ್ ಸದಾ ಮಿಡಿಯುತ್ತಿದ್ದರು. ಅ.ನ.ಕೃ, ಮ.ರಾಮೂರ್ತಿಯವರು ನಿಧನರಾದಾಗ ಅವರ ಕುಟಂಬ ವರ್ಗಕ್ಕೆ ಸಹಾಯ ಮಾಡಿದ್ದರು. ಆದರೆ ತಾವು ಮಾಡಿದ ದಾನ ಧರ್ಮವನ್ನು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಎಡಗೈಯಿಂದ ಕೊಟ್ಟಿದ್ದು ಬಲಗೈ ಕಿರುಬೆರಳಿಗೆ ಕೂಡ ಗೊತ್ತಾಗ ಬಾರದು ಅನ್ನೋದು ಅವರ ನಿಲುವು.

ಕಲ್ಯಾಣ್ ಕುಮಾರ್ ಅವರ ಜೀವನದಲ್ಲಿ ಕೆಟ್ಟದಿನಗಳು ಆರಂಭವಾದವು. ಕೋಳಿ ಫಾರಂ ಕೈಕಚ್ಚಿತು. ಮುಂದೆ ಬದುಕಲು ದಾರಿ ಎನ್ನುವ ಪ್ರಶ್ನೆ ಬಂದಿತು. ಸ್ನೇಹಿತರು ಹೋಟಲ್ ಬಿಜಿನೆಸ್ ಮಾಡಿ, ಅದರಲ್ಲಿ ಲಾಸ್ ಆಗುವ ಪ್ರಶ್ನೆಯೇ ಇಲ್ಲ ಎಂದು ಹುರಿದುಂಬಿಸಿದರು. ಬಾಡಿಗೆಗೆ ಏಕೆ ದುಡ್ಡು ಹಾಕ್ತೀರಿ ಸ್ವಂತ ಬಿಲ್ಡಿಂಗ್ ಮಾಡಿಕೊಂಡರೆ ಮುಂದೆ ನಿಮಗೇ ಲಾಭ ಎಂದರು. ಕಲ್ಯಾಣ್ ಕುಮಾರ್ ದುಡಿದಿದ್ದು ಎಲ್ಲವನ್ನೂ ಸುರಿದು ಬಿಲ್ಡಿಂಗ್ ಕಟ್ಟಿದರು. ಯಾವಾಗ ಕೈ ಖಾಲಿ ಅಂತ ಗೊತ್ತಾಯಿತೋ ಐಸಾ ಎನ್ನುತ್ತಿದವರೆಲ್ಲರೂ ಮಾಯ. ಕೊನೆಗೆ ಜೊತೆಗೆ ಉಳಿದವರು ರೇವತಿ ಮಾತ್ರ. ಶುರು ಮಾಡಿದ್ದಾಗಿದ್ದಾಗಿದೆ, ನಿಲ್ಲಿಸಬೇಡಿ ಅಂತ ಧೈರ್ಯ ತುಂಬಿದರು. ಉಳಿದಿದ್ದು ಎಸ್ಟೇಟ್ ಮಾತ್ರ ಅದನ್ನೂ ಮಾರಿ ‘ಹೋಟೆಲ್ ನವರಸ’ ಆರಂಭಿಸಲಾಯಿತು. ನೋಡಿಕೊಳ್ಳುವವರು ಯಾರು? ರೇವತಿಯವರ ಅಣ್ಣ ರಾಜ್ ಗೋಪಾಲ್ ಅವರೇ ಜೊತೆ ನೀಡಿದರು. ಆದರೆ ಕೆಲವು ಕಾಲ ಚೆನ್ನಾಗಿ ನಡೆದ ಹೋಟಲ್ ಮುಗ್ಗರಿಸಲು ಆರಂಭಿಸಿತು. ಅನ್ನ ಸರಿ ಇಲ್ಲ, ಸಾಂಬಾರ್ ನೀರಾಗಿದೆ, ಇಡ್ಲಿ ಸಿಕ್ಕಾಪಟ್ಟೆ ಉಬ್ಬಿದೆ, ದೋಸೆಯಲ್ಲಿ ತೂತುಗಳು ಜಾಸ್ತಿ ದಿನ ಬೆಳಿಗ್ಗೆ ಎದ್ದರೆ ಒಂದಲ್ಲ ಒಂದು ಸಮಸ್ಯೆ. ಕೊನೆಗೆ ರಾಜ್ ಗೋಪಾಲ್ ಸಂಭಾಳಿಸಲಾಗದೆ ಮದ್ರಾಸಿಗೆ ಹೋಗ್ತೀನಿ ಅಂತ ಹೊರಟರು. ಆದರೆ ಮಕ್ಕಳು ಮಾತ್ರ ನಾವು ಎಲ್ಲಿಗೂ ಬರುವುದಿಲ್ಲ ಎಂದು ಕಲ್ಯಾಣ್ ಕುಮಾರ್ ಜೊತೆಗೇ ಉಳಿದು ಕೊಂಡರು.

ಮನೆಯ ತುಂಬಾ ಜನ, ಆದಾಯದ ಏಕೈಕ ದಾರಿಯಾದ ಹೋಟಲ್ ಮುಗ್ಗರಿಸುತ್ತಾ ಇದೆ. ಹಣ, ಒಡವೆ ಎಲ್ಲವೂ ಹೋಗಿ ದಿನ ಬೆಳಗಾದರೆ ಸಾಲಗಾರರ ಕಾಟ ಎದುರಿಸುವಂತೆ ಆಯಿತು. ರೇವತಿ ಕಲ್ಯಾಣ್ ಕುಮಾರ್ ಪರಿಸ್ಥಿತಿಯಿಂದ ತತ್ತರಿಸಿ ಹೋದರು. ಒಂದು ದಿನ ಆರೋಗ್ಯ ಕೆಟ್ಟು ತಲೆ ಸುತ್ತಿ ಬಿದ್ದು ಬಿಟ್ಟರು. ಆಸ್ಪತ್ರೆಗೆ ಸೇರಿಸಲೂ ಹಣ ಇಲ್ಲ, ಸಹಾಯಕ್ಕೆ ಬರುವವರು ಒಬ್ಬರೂ ಇಲ್ಲ. ಕೊನೆಗೆ  ವಿಷಯ ತಿಳಿದು ಕಲ್ಯಾಣ್ ಕುಮಾರ್ ಅವರ ಅಕ್ಕ ಶಾರದ ನೆರವು ನೀಡಿದರು. ತಮ್ಮೂರು ಮೈಸೂರಿಗೆ ಕರೆದೊಯ್ದು ಆರೈಕೆ ಮಾಡಿದರು. ರೇವತಿ ಗುಣಮುಖರಾದ ನಂತರ ಎಲ್ಲರೂ ಕುಳಿತು ಮುಂದಿನ ದಾರಿಯ ಬಗ್ಗೆ ಯೋಚಿಸಿದರು. ಬೆಂಗಳೂರು ಸಾಕು, ಮದ್ರಾಸಿಗೆ ಹೋಗುವುದೇ ಪರಿಹಾರ ಎಂದು ನಿರ್ಧರಿಸಿದರು. ಹೋಟಲ್ ಮಾರಿ ಮದ್ರಾಸ್ ಸೇರಿದ್ದೂ ಆಯಿತು. ಆದರೆ ಅಲ್ಲಿ ಕೂಡ ಚಿತ್ರರಂಗದ ಬಾಗಿಲು ಮುಚ್ಚಿದೆ. ಹೇಗಿದ್ದಿ ಎಂದು ಕೇಳುವವರು ಒಬ್ಬರೂ ಇಲ್ಲ. ಆಗ ರೇವತಿ ಅವರ ಅಣ್ಣ ಸತ್ಯಣ್ಣ ನೆರವು ನೀಡಿದರು. ಸುಖದಲ್ಲಿ ದೂರವೇ ಇದ್ದ ಈ ಮಹಾನುಭಾವರು ಕಷ್ಟದಲ್ಲಿ ಜೊತೆ ನೀಡಿದರು. ಆದರೆ ಎಷ್ಟು ಕಾಲ ಇನ್ನೊಬ್ಬರ ಹಂಗಿನಲ್ಲಿ ಇರುವುದು? ಚಿಂದೋಡಿ ಲೀಲಾ ಈಗ ನೆರವು ನೀಡಿದರು. ರೇವತಿ ಮತ್ತು ಕಲ್ಯಾಣ್ ಕುಮಾರ್ ರಂಗಭೂಮಿಯಲ್ಲಿ ಭವಿಷ್ಯ ಕಂಡು ಕೊಂಡರು. ಚಿತ್ರರಂಗ ಕೈ ಬಿಟ್ಟ ಕಡೆ ರಂಗಭೂಮಿ ಅವರ ನೆರವಿಗೆ ಬಂದಿತು.

‘ಭೂದಾನ’ ಚಿತ್ರದಲ್ಲಿ ಕುಮಾರತ್ರಯರು

ಚಿತ್ರರಂಗದ ನಂಟು ಇನ್ನೇನು ಮುಗಿಯಿತು, ರಂಗಭೂಮಿಯೇ ನಮ್ಮ ಬದುಕು ಎಂದು ಭಾವಿಸಿ ಒಂದು ರೀತಿಯಲ್ಲಿ ನೆಮ್ಮದಿಯಿಂದ ಇದ್ದ ಕಲ್ಯಾಣ್ ಕುಮಾರ್ ಅವರಿಗೆ ಇನ್ನೊಂದು ಅಚ್ಚರಿ ಕಾದಿತ್ತು. ಅಬ್ಬಾಯಿ ನಾಯ್ಡು ‘ತಾಯಿಯ ನುಡಿ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಅವರಿಗೆ ಮುಖ್ಯ ಪಾತ್ರ ನೀಡಲು ಮುಂದೆ ಬಂದರು. ಕಲ್ಯಾಣ್ ಕುಮಾರ್ ಅವರೇ ಭರವಸೆ ಕಳೆದುಕೊಂಡಿದ್ದರು. ಆದರೆ ಅಬ್ಬಾಯಿ ನಾಯ್ಡು ಛಲ ಬಿಡದೆ ಒಪ್ಪಿಸಿದರು. ‘ನೀನೇನೆ ಮಾಡು ಹೆದರುವೆನೆ ನೋಡು’ ಎಂಬ ಹಾಡಿನಲ್ಲಿ ಕುರುಚಲು ಗಡ್ಡ, ಕೆಂಡ ಕೆಂಡದ ಕಣ್ಣು, ಬೂದಿ ಬಟ್ಟೆ, ಕೈಯಲ್ಲಿ ಕೋಲು, ಮುಂದೆ ಉರಿಯುವ ಶವ ಇಲ್ಲಿ  ಕಲ್ಯಾಣ್ ಪ್ರೇಕ್ಷಕರ ಮನ ಗೆದ್ದಿದ್ದರು. ಈ ದೃಶ್ಯ ಬಂದಾಗಲೆಲ್ಲ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಕಲ್ಯಾಣ್ ಕುಮಾರ್ ಅವರ ಎರಡನೇ ಇನ್ನಿಂಗ್ಸ್ ಆರಂಭವಾಗಿತ್ತು.

ಹನ್ನೆರಡು ವರ್ಷದ ವನವಾಸದ ನಂತರ ಮತ್ತೆ ಚಿತ್ರರಂಗ ಅವರನ್ನು ಒಪ್ಪಿಕೊಂಡಿತ್ತು. ಒಂದರ ಹಿಂದೆ ಇನ್ನೊಂದು ಚಿತ್ರಗಳು ದೊರಕಲು ಆರಂಭವಾದವು. ತವರು ಮನೆ, ಬಿಳಿ ಗುಲಾಬಿ, ಮಾನವ 2000, ಶುಭ ಮಹೂರ್ತ, ದೇವರೆಲ್ಲಿದ್ದಾನೆ.. ಮತ್ತೆ ಬದುಕು ನೆಮ್ಮದಿಯ ಹಾದಿಗೆ ಮರಳಿತು. ರೇವತಿ ದೇವರ ಮುಂದೆ ತುಪ್ಪದ ದೀಪ ಹಚ್ಚಿದರು. ಒಂದಿಷ್ಟು ಹಣವೂ ಕೈ ಸೇರಿತು. ಉಳಿಸಿದ್ದರಲ್ಲಿ ಒಂದು ಮನೆ ಕೊಂಡರೆ ಹೇಗೆ ಎಂದು ಯೋಚಿಸಿ ಸ್ನೇಹಿತರ ನೆರವಿನಿಂದ ವ್ಯವಹಾರವೂ ಮಾಡಿ ಬಿಟ್ಟರು. ಹಣ ಕೊಟ್ಟ ಮೇಲೆ ಆ ಮನೆ ವ್ಯಾಜ್ಯದಲ್ಲಿ ಇದೆ ಅನ್ನೋದು ಗೊತ್ತಾಯಿತು. ಮನೆ ಬೇಡ ಎಂದರೆ ಮಾಲೀಕ ತಿರುಗಿ ಬಿದ್ದ ಹಾಗೂ ಹೀಗೂ ಒದ್ದಾಡಿದ ಮೇಲೆ ಕಾಲುಭಾಗ ದುಡ್ಡು ಬಂದಿತು. ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಸುಮ್ಮನಾದರು. ಉಳಿದ ಹಣವನ್ನಾದರೂ ಹಾಳು ಮಾಡುವುದು ಬೇಡ ಎಂದುಕೊಂಡು ‘ಉಳ್ಳಂ ಓರು ಊಚಿಜಲ್’ ಎನ್ನುವ ತಮಿಳು ಚಿತ್ರ ತೆಗೆದರು. ಅದರಲ್ಲಿ ಕನ್ನಡದ ಮುಖಗಳನ್ನೇ ಹಾಕಿ ಕೊಂಡರು. ಆದರೆ ಈ ಚಿತ್ರ ಕೂಡ ಮುಗ್ಗರಿಸಿತು. ನಾನು ಆಗ ‘ಮಲ್ಲಿಗೆ’ ಮಾಸಪತ್ರಿಕೆಯಲ್ಲಿದ್ದೆ. ಈಗಿನ ಪ್ರಸಿದ್ಧ ಸಿನಿಮಾ ನಿರ್ದೇಶಕಿ ಸುಮನಾ ಕಿತ್ತೂರು ಆಗ ಹವ್ಯಾಸಿ ಪತ್ರಕರ್ತೆ ಆಗಿದ್ದರು. ಅವರು ವಿಶೇಷವಾಗಿ ಕಲ್ಯಾಣ್ ಕುಮಾರ್ ಅವರ ಸಂದರ್ಶನ ಮಾಡಿ ಕೊಡ್ತೀನಿ ಎಂದರು. ಕಲ್ಯಾಣ್ ಕುಮಾರ್ ಅವರ ಸ್ನೇಹಿತರ ಲೇಖನಗಳು, ಅವರ ಬಾಳಿನ ಹಾದಿ, ಅವರ ಅಭಿನಯದ ಟಾಪ್ ಟೆನ್ ಚಿತ್ರಗೀತೆಗಳು ಎಲ್ಲವೂ ಸೇರಿ ನಾವು ಸೆಪ್ಟಂಬರ್ 1999ಕ್ಕೆ ಕಲ್ಯಾಣ್ ಕುಮಾರ್ ವಿಶೇಷ ಸಂಚಿಕೆ ಮಾಡೋಣ ಅಂತ ಪ್ಲಾನ್ ಮಾಡಿದೆವು. ನಮ್ಮ ಯೋಜನೆ ಕಲ್ಯಾಣ್ ಕುಮಾರ್ ಅವರಿಗೆ ಬಹಳ ಸಂತೋಷ ಕೊಟ್ಟಿತ್ತು. ‘ನನ್ನ ಮತ್ತೆ ಲೈಮ್ ಲೈಟ್‌ಗೆ ತರ್ತಾ ಇದ್ದಾರೆ’ ಅಂತ ಎಲ್ಲರ ಬಳಿಯೂ ಹೇಳಿಕೊಂಡು ಬಂದಿದ್ದರು. ಆದರೆ ವಿಧಿಯ ಲೆಕ್ಕಾಚಾರ ಬೇರೆಯಾಗಿತ್ತು. 1999ರ ಆಗಸ್ಟ್ ಒಂದರಂದು ಹಠಾತ್ ಆಗಿ ಕಲ್ಯಾಣ್ ಕುಮಾರ್ ಅವರ ವರ್ಣರಂಜಿತ ಬದುಕಿಗೆ ತೆರೆ ಬಿದ್ದುಬಿಟ್ಟಿತು. ಸುಮನಾ ಶ್ರದ್ದಾಂಜಲಿ ಲೇಖನ ಬರೆದುಕೊಟ್ಟರು. ನಮ್ಮ ನೋವೆಲ್ಲವೂ ಅದರಲ್ಲಿ ತುಂಬಿಕೊಂಡಿತ್ತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.