
ಶ್ರೀಧರಮೂರ್ತಿ
ಲೇಖಕ
ಹಿರಿಯ ಚಿತ್ರನಟಿ ಸುರೇಖಾ (69 ವರ್ಷ) ನಿನ್ನೆ ರಾತ್ರಿ (ಜೂನ್ 5) ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಕೂಚುಪುಡಿ ನೃತ್ಯಗಾರ್ತಿಯಾದ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. – ಲೇಖಕ ಎನ್.ಎಸ್.ಶ್ರೀಧರಮೂರ್ತಿ ಅವರು ಹಿರಿಯ ನಟಿಯನ್ನು ಸ್ಮರಿಸಿದ್ದಾರೆ.
ಸುರೇಖಾ ಅವರು ಮೂಲತಃ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಗಾರ್ತಿ. ಈ ಮೂಲಕವೇ ಚಿತ್ರರಂಗವನ್ನು ಪ್ರವೇಶಿಸಿದರು. ಭಾರತದ ಹಲವೆಡೆ ಮಾತ್ರವಲ್ಲದೆ ಲಂಡನ್, ಪ್ಯಾರಿಸ್, ಮಾಸ್ಕೋ, ತಾಷ್ಕಂಟ್ ಸೇರಿದಂತೆ ಹಲವು ವಿದೇಶಿ ತಾಣಗಲ್ಲಿಯೂ ಅವರು ನೃತ್ಯ ಪ್ರದರ್ಶನ ನೀಡಿ ಮನ್ನಣೆ ಪಡೆದಿದ್ದಾರೆ. ಜಾಗತಿಕವಾಗಿ ಕೂಡ ಅವರಿಗೆ ಹಲವು ಅಭಿಮಾನಿಗಳಿದ್ದಾರೆ. ಆಪರೇಷನ್ ಜಾಕ್ ಪಾಟ್, ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಸೇರಿದಂತೆ ಡಾ.ರಾಜಕುಮಾರ್ ಅವರ ಹಲವು ಚಿತ್ರಗಳ ವಿಶಿಷ್ಟ ಪಾತ್ರಗಳ ಮೂಲಕ ಗಮನ ಸೆಳೆದವರು.
ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ಅಲೆಮನೆ, ನಾಗರ ಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ… ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಮತ್ತಷ್ಟು ಚಿತ್ರಗಳು. ನಾಯಕನಟಿ, ಪೋಷಕ ಕಲಾವಿದೆಯಾಗಿ 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಸುರೇಖಾ ‘ಮಾಯಾ ಮನುಷ್ಯ’ ‘ನಾನು ಬಾಳಬೇಕು’ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಖ್ಯಾತ ತಮಿಳು ನಿರ್ದೇಶಕ ಕೆ.ಬಾಲಚಂದರ್ ನಿರ್ದೇಶನದ ‘ನಾನು ಅವನಿಲ್ಲೈ’ ಚಿತ್ರದಲ್ಲಿ ನಾಯಕಿಯಾಗಿ ಅವರು ನೀಡಿದ ಅಭಿನಯ ಅವಿಸ್ಮರಣೀಯ.

ಈ ವರ್ಷದ (2021) ಫೆಬ್ರವರಿ 13ರಂದು ಅವರಿಗೆ ಪ್ರತಿಷ್ಟಿತ ಎಸ್.ಪಿ.ವರದರಾಜ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಸಮಾರಂಭದ ಸಂಭ್ರಮ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಸುರೇಖಾ ಅವರೊಂದಿಗೆ ಸರಿಸುಮಾರು ಎರಡು ದಶಕಗಳ ಕಾಲ ಒಡನಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ಜೊತೆ ಸಮಯ ಕಳೆಯುವುದೆಂದರೆ ಕಳೆದು ಹೋದ ಸಾಂಸ್ಕೃತಿಕ ಯುಗದ ಜೊತೆಯಲ್ಲಿ ಪಯಣ ನಡೆಸುವುದು ಎಂದೇ ಅರ್ಥ. ಅವರ ಗ್ರಹಿಕೆ, ಒಳನೋಟಗಳು ಸದಾ ನಮ್ಮ ಅರಿವನ್ನು ಹೆಚ್ಚಿಸುತ್ತಿದ್ದವು. ಯಾರ ಕುರಿತು ಮಾಹಿತಿ ಬೇಕಿದ್ದರೂ, ಯಾವ ಸಿನಿಮಾ ಕುರಿತು ವಿವರ ಬೇಕಿದ್ದರೂ ಅವರು ನೆರವಾಗುತ್ತಿದ್ದರು.
ಈ ಸಲದ ಲಾಕ್ ಡೌನ್ ಅವರಿಗೆ ಸಾಕಷ್ಟು ತೊಂದರೆ ಉಂಟುಮಾಡಿತ್ತು. ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅವರನ್ನು ಏಕಾಂಗಿತನ ಕಾಡುತ್ತಿತ್ತು. ಈಗಂತೂ ಹೆಚ್ಚು ಕಡಿಮೆ ಎರಡು ದಿನಕ್ಕೊಮ್ಮೆ ಪೋನ್ ಮಾಡಿ ಮಾತನಾಡುತ್ತಿದ್ದರು. ‘ನಿಮ್ಮ ಅನುಭವಗಳನ್ನು ಬರೆಯಿರಿ ಮೇಡಂ. ಅದಕ್ಕೆಲ್ಲಾ ರೂಪ ಕೊಡುತ್ತೇನೆ. ಲಾಕ್ ಡೌನ್ ಮುಗಿಯಲಿ ನಿಮ್ಮ ಮನೆಗೆ ಬರುತ್ತೇನೆ’ಎಂದಿದ್ದೆ. ನಿನ್ನೆ ಇನ್ನೂ ಲವಲವಿಕೆಯಿಂದ ಮಾತಾಡಿದ್ದ ಮೇಡಂ ಇಂದು ಇಲ್ಲ ಎಂದರೆ ನಂಬಲಾಗುತ್ತಿಲ್ಲ. ಇನ್ನು ಅವರ ಪೋನ್ ಬರುವುದಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಬಹಳ ಸಂಕಟವಾಗುತ್ತದೆ. ಹೋಗಿ ಬನ್ನಿ ಸುರೇಖಾ ಮೇಡಂ. ನೀವು ಕೊಟ್ಟ ಪ್ರೀತಿ ವಿಶ್ವಾಸಗಳಿಗೆ ನಾನು ಚಿರಋಣಿ. ನಿಮ್ಮ ನೆನಪು ಸದಾ ಇರುತ್ತದೆ.
