ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರಯೋಗಶೀಲ ನಟ, ನಿರ್ಮಾಪಕ ಸುನೀಲ್ ದತ್

ಪೋಸ್ಟ್ ಶೇರ್ ಮಾಡಿ

ಭಾರತೀಯ ಚಿತ್ರರಂಗದ ಮೈಲುಗಲ್ಲು ಎನಿಸಿದ `ಮದರ್ ಇಂಡಿಯಾ’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸುನೀಲ್ ದತ್ ಹಿಂದಿ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ. ಹುಟ್ಟಿದ್ದು 1930, ಜೂನ್ 6ರಂದು. ಝೇಲಮ್ ಜಿಲ್ಲೆಯ (ಈಗ ಪಾಕಿಸ್ತಾನದಲ್ಲಿದೆ) ಖುರ್ದ್ ಗ್ರಾಮ ಅವರ ಹುಟ್ಟೂರು. ದೇಶ ವಿಭಜನೆಯ ಸಂದರ್ಭದಲ್ಲಿ ಸುನೀಲ್ ದತ್ ಪೋಷಕರು ಭಾರತಕ್ಕೆ ವಲಸೆ ಬಂದರು.

ಮುಂಬೈನ ಜೈಹಿಂದ್ ಕಾಲೇಜ್‍ನಲ್ಲಿ ಓದಿದ ಸುನೀಲ್ ದತ್ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅವರಿಗೆ ಹೆಚ್ಚು ಹಣ ಸಂಪಾದಿಸುವ ಅನಿವಾರ್ಯತೆಯಿತ್ತು. ಹಾಗಾಗಿ ಕಂಪನಿ ಕೆಲಸದ ಜೊತೆ ಅರೆಕಾಲಿಕ ರೇಡಿಯೋ ಉದ್ಘೋಷಕ ಹುದ್ದೆಗೆ ಸೇರಿದ್ದರು. ಇಲ್ಲಿನ ಜನಪ್ರಿಯತೆ ಸುನೀಲ್‍ರನ್ನು ಸಿನಿಮಾದತ್ತ ಕರೆದೊಯ್ದಿತು. `ರೈಲ್ವೇ ಪ್ಲಾಟ್‍ಫಾರ್ಮ್’ (1955) ಚಿತ್ರದೊಂದಿಗೆ ಸುನೀಲ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ನಳಿನಿ ಜಯವಂತ್ ಚಿತ್ರದ ನಾಯಕಿ.

ಸುನೀಲ್‍ಗೆ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ `ಮದರ್ ಇಂಡಿಯಾ’. ಮೆಹಬೂಬ್ ಖಾನ್ ನಿರ್ದೇಶನದ ಚಿತ್ರದಲ್ಲಿ ನಟಿ ನರ್ಗಿಸ್‍ರದ್ದೇ ಪ್ರಧಾನವಾದ ಪಾತ್ರ. ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಅಪಾಯಕ್ಕೆ ಸಿಲುಕಿದ್ದ ನರ್ಗಿಸ್‍ರನ್ನು ಸುನೀಲ್ ಪಾರು ಮಾಡಿದ್ದರು. ಸುನೀಲ್ – ನರ್ಗಿಸ್ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತು. 1958, ಮಾರ್ಚ್ 11ರಂದು ಇಬ್ಬರೂ ವಿವಾಹವಾದರು. ನರ್ಗಿಸ್‍ರ `ಮದರ್ ಇಂಡಿಯಾ’ ಸೇರಿದಂತೆ ಸುನೀಲ್‍ರ ಕೆಲವು ಯಶಸ್ವೀ ಸಿನಿಮಾಗಳು ನಾಯಕಿ ಪ್ರಧಾನ ಚಿತ್ರಗಳೇ ಆಗಿದ್ದವು. `ಸುಜಾತಾ’, `ಬಂಧಿನಿ’, `ಸಾಧನಾ’, `ಅಮ್ರಪಾಲಿ’, `ಮೇರೇ ಸಾಯಾ’ ಕೆಲವು ಉದಾಹರಣೆ.

‘ಮದರ್ ಇಂಡಿಯಾ’ ಚಿತ್ರದಲ್ಲಿ ಸುನೀಲ್ ದತ್‌, ನರ್ಗಿಸ್‌, ರಾಜೇಂದ್ರಕುಮಾರ್‌

ನಿರ್ದೇಶಕ ಬಿ.ಆರ್.ಚೋಪ್ರಾ – ಸುನೀಲ್ ದತ್ ಜೋಡಿಯಿಂದ ಯಶಸ್ವೀ ಚಿತ್ರಗಳು ತಯಾರಾದವು. `ಗುಮ್ರಾಹ್’ (1963), `ವಕ್ತ್’ (1965), `ಹಮ್‌ರಾಝ್‌’ (1967) ಈ ಜೋಡಿಯ ಜನಪ್ರಿಯ ಪ್ರಯೋಗಗಳು. ಚಿತ್ರಕಥೆಗಾರ ಅಘಜನಿ ಕಾಶ್ಮೀರಿ ಅವರು ಸುನೀಲ್‍ರ ಆಪ್ತ ಸ್ನೇಹಿತ. ಸುನೀಲ್‍ರ `ಘಜಲ್’, `ಮುಝೆ ಜಾನೇ ದೋ, `ಯೇ ರಾಸ್ತೇ ಹೈ ಪ್ಯಾರ್ ಕೆ’ ಚಿತ್ರಗಳಿಗೆ ಅಘಜನಿ ಚಿತ್ರಕಥೆ ಬರೆದಿದ್ದರು. `ಯೇ ರಾಸ್ತೇ ಹೈ ಪ್ಯಾರ್ ಕೆ’ ಅವರ ನಿರ್ಮಾಣದ ಚೊಚ್ಚಲ ಚಿತ್ರವೂ ಹೌದು. ತಮ್ಮ ನಿರ್ಮಾಣದ ಮತ್ತೊಂದು ಸಿನಿಮಾ `ಮುಝೆ ಜಾನೇ ದೋ’ (1963)ನಲ್ಲಿ ಅವರು ಡಕಾಯಿತನ ಪಾತ್ರ ನಿರ್ವಹಿಸಿದ್ದರು. ಸುನೀಲ್ ಚಿತ್ರಸಂಸ್ಥೆಯ ಹೆಸರು – ಅಜಂತಾ ಆರ್ಟ್ಸ್‌.

ಸುನೀಲ್ ಸಿನಿಮಾ ಜೀವನದ ಮಹತ್ವದ ಪ್ರಯೋಗ `ಯಾದೇ’ (1964). ಅವರ ನಿರ್ದೇಶನದಲ್ಲಿ ತಯಾರಾದ ಚಿತ್ರದ ತಾರಾಬಳಗದಲ್ಲಿ ಇದ್ದುದು ಅವರೊಬ್ಬರೇ! ಒಂದೇ ಪಾತ್ರವಿದ್ದ ಚಿತ್ರವಿದು. `ಮನ್ ಕಾ ಮೀಠ್’ (1968) ಚಿತ್ರ ನಿರ್ಮಿಸಿದ ಸುನೀಲ್ ಅದರಲ್ಲಿ ತಮ್ಮ ಸಹೋದರ ಸೋಮ್ ದತ್‍ರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಈ ಚಿತ್ರದ ಸೋಲಿನೊಂದಿಗೆ ಸೋಮ್ ದತ್ ಸಿನಿಮಾ ಕನಸು ಭಗ್ನಗೊಂಡಿತು. 1971ರಲ್ಲಿ ಸುನೀಲ್ `ರೇಷ್ಮಾ ಔರ್ ಶೇರಾ’ ಚಿತ್ರ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದರು. ದೊಡ್ಡ ಬಜೆಟ್‍ನ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ವಿಫಲವಾಯ್ತು.

`ರೇಷ್ಮಾ ಔರ್ ಶೇರಾ’ ಚಿತ್ರದ ಸೋಲಿನಿಂದ ಸುನೀಲ್ ಎಚ್ಚೆತ್ತುಕೊಂಡರು. ಮುಂದಿನ ಕೆಲವೇ ದಿನಗಳಲ್ಲಿ ಅವರು ಯಶಸ್ಸಿನ ಹಾದಿಗೆ ಮರಳಿದರು. ಸುನೀಲ್‍ರ `ಪ್ರಾಣ್ ಜಾಯೇ ಪರ್ ಪಚನ್ ನಾ ಜಾಯೇ’ (1974), `ನಾಗಿನ್’ (1976), `ಜಾನಿ ದುಷ್ಮನ್’ (1979), `ಶಾನ್’ (1980) ಯಶಸ್ಸು ಕಂಡವು. 90ರ ದಶಕದ ಕೊನೆಯ ವೇಳೆಗೆ ಸುನೀಲ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಚಿತ್ರರಂಗದಿಂದ ವಿರಾಮ ಪಡೆದು ಸಂಪೂರ್ಣವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡರು.

‘ದರ್ದ್ ಕಾ ರಿಶ್ತಾ’ ಚಿತ್ರದಲ್ಲಿ ಸ್ಮಿತಾ ಪಾಟೀಲ್ ಜೊತೆ

ಸಿನಿಮಾಗೆ ತಾತ್ಕಾಲಿಕ ವಿದಾಯ ಘೋಷಿಸಿದ ನಂತರ ಅವರ `ಪರಂಪರ’ (1992), `ಕ್ಷತ್ರಿಯಾ’ (1993) ಚಿತ್ರಗಳು ತೆರೆಕಂಡವು. 2003ರಲ್ಲಿ `ಮುನ್ನಾಭಾಯ್ ಎಂಬಿಬಿಎಸ್’ (2003) ಚಿತ್ರದೊಂದಿಗೆ ಸುನೀಲ್ ತೆರೆಗೆ ಮರಳಿದರು. ಸುನೀಲ್ ದತ್ 70ರ ದಶಕದಲ್ಲಿ ಕೆಲವು ಪಂಜಾಬಿ ಚಿತ್ರಗಳಲ್ಲೂ ಅಭಿನಯಿಸಿದರು. `ಮನ್ ಜೀತ್ ಜಗ್ ಜೀತ್’ (1973), `ದುಖ್ ಭಂಜನ್ ತೇರಾ ನಾಮ್’ (1974), `ಸತ್ ಶ್ರೀ ಅಕಲ್’ (1977) ಅವರ ಕೆಲವು ಪ್ರಮುಖ ಪಂಜಾಬಿ ಪ್ರಯೋಗಗಳು.

1984ರಲ್ಲಿ ಸುನೀಲ್ ದತ್ ಕಾಂಗ್ರೆಸ್ ಪಕ್ಷದಿಂದ ಮುಂಬೈ ಉತ್ತರ – ಪಶ್ಚಿಮ ಪ್ರದೇಶದ ಸಂಸತ್ ಸದಸ್ಯ ಸ್ಥಾನಕ್ಕೆ ಸ್ರ್ಪಸಿದ್ದರು. ಅಲ್ಲಿಂದ ಸತತವಾಗಿ ಅವರು ಐದು ಅವಧಿಗೆ ಸಂಸತ್‍ಗೆ ಆಯ್ಕೆಯಾಗಿದ್ದಾರೆ. ಸುನೀಲ್ ನಿಧನಾನಂತರ ಅವರ ಹಿರಿಯ ಪುತ್ರಿ ಪ್ರಿಯಾ ದತ್ ಇಲ್ಲಿಂದ ಸ್ಪರ್ಧಿಸಿ ಸಂಸತ್‍ಗೆ ಆಯ್ಕೆಯಾದರು. ಸುನೀಲ್‍ರ ಮತ್ತೊಬ್ಬ ಪುತ್ರಿ ನಮೃತಾ ದತ್ ಅವರು ನಟ ಕುಮಾರ್ ಗೌರವ್‍ರನ್ನು ವರಿಸಿದರು. ಕುಮಾರ್ ಗೌರವ್, ಹಿಂದಿ ನಟ ರಾಜೇಂದ್ರ ಕುಮಾರ್ ಅವರ ಪುತ್ರ. ಸುನೀಲ್ ದತ್ ತಮ್ಮ ಪುತ್ರ ಸಂಜಯ್‍ರನ್ನು `ರಾಕಿ’ (1981) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯಿಸಿದರು. ಅದೇ ವರ್ಷ ಸುನೀಲ್ ಪತ್ನಿ ನರ್ಗಿಸ್ ಕ್ಯಾನ್ಸರ್‍ನಿಂದ ನಿಧನರಾಗಿದ್ದು ವಿಪರ್ಯಾಸ. ಸುನೀಲ್ ಪತ್ನಿಯ ಹೆಸರಿನಲ್ಲಿ ಕ್ಯಾನ್ಸರ್ ಬಾಧಿತರಿಗೆಂದು `ನರ್ಗಿಸ್ ದತ್ ಫೌಂಡೇಷನ್’ ಆರಂಭಿಸಿದರು. ಸುನೀಲ್ ಇತರೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ. `ಮುಝೆ ಜಾನೇ ದೋ’ (1963) ಮತ್ತು `ಖಾಂದಾನ್’ (1965) ಚಿತ್ರಗಳ ಉತ್ತಮ ಅಭಿನಯಕ್ಕಾಗಿ ಸುನೀಲ್‍ಗೆ ಫಿಲ್ಮ್‍ಫೇರ್ ಪುರಸ್ಕಾರಗಳು ಸಂದಿವೆ. 1968ರಲ್ಲಿ ಅವರಿಗೆ ಭಾರತ ಸರ್ಕಾರ `ಪದ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಿತು. ಚಿತ್ರರಂಗದ ಸಾಧನೆಗಾಗಿ 1995ರಲ್ಲಿ ಸುನೀಲ್ ಜೀವಮಾನ ಪುರಸ್ಕಾರಕ್ಕೆ ಭಾಜನರಾದರು.

‘ಸುಜಾತ’ ಚಿತ್ರದಲ್ಲಿ ನೂತನ್‌, ಸನೀಲ್ ದತ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಾಮಾಜಿಕ ಕಳಕಳಿಯ ನಟ ವಿವೇಕ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ

ಟಿ.ಎಂ.ಸೌಂದರರಾಜನ್

ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್‌. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು