ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಭಾರತದ ಎಲ್ವಿಸ್ ಪ್ರಿಸ್ಲೀ ‘ಶಮ್ಮಿ’

ಪೋಸ್ಟ್ ಶೇರ್ ಮಾಡಿ

ಸಿನಿಮಾ ಕುಟುಂಬದ ಹಿನ್ನೆಲೆಯ ಶಮ್ಮಿ ಕಪೂರ್ ಬೆಳ್ಳಿತೆರೆಗೆ ಪರಿಚಯವಾದಾಗ ಅವರಿಗೆ ಸಾಕಷ್ಟು ಸವಾಲುಗಳಿದ್ದವು. ತಂದೆ ಪೃಥ್ವಿರಾಜ್‌ಕಪೂರ್ ಮತ್ತು ಹಿರಿಯ ಸಹೋದರ ರಾಜ್‌ಕಪೂರ್ ಆ ವೇಳೆಗಾಗಲೇ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಪ್ರೇಕ್ಷಕರು ಶಮ್ಮಿಯನ್ನು ಅವರೊಂದಿಗೆ ಹೋಲಿಕೆ ಮಾಡಿ ನೋಡುತ್ತಿದ್ದರು. ಇವರ ನೆರಳಿನಲ್ಲಿ ಗುರುತಿಸಿಕೊಳ್ಳದೆ ತಮಗೊಂದು ಪ್ರತ್ಯೇಕ ಆಸ್ತಿತ್ವ ಕಂಡುಕೊಳ್ಳುವ ಒತ್ತಡವಿತ್ತು ಶಮ್ಮಿ ಕಪೂರ್‌ಗೆ. ಅವರು ಇದನ್ನು ಯಶಸ್ವಿಯಾಗಿ ನಿಭಾಯಿಸಿದರು. ಹಿಂದಿ ಚಿತ್ರರಂಗದ ಯಶಸ್ವೀ ನಾಯಕನಟನಾಗಿ ತಮ್ಮದೇ ಆದ ಛಾಪು ಮೂಡಿಸಿದರು.

ಶಮ್ಮಿಕಪೂರ್ ಅವರ ಜನ್ಮನಾಮ ಶಮ್ಶೇರ್ ರಾಜ್‌ಕಪೂರ್. ಅವರು ಹುಟ್ಟಿದ್ದು ಅಕ್ಟೋಬರ್ 21, 1931ರಂದು ಮುಂಬೈನಲ್ಲಿ. ಪೃಥ್ವಿರಾಜ್‌ಕಪೂರ್ ಅವರ ಮೂರು ಗಂಡುಮಕ್ಕಳಲ್ಲಿ ಇವರು ಎರಡನೆಯವರು. ರಾಜ್‌ಕಪೂರ್ ಮತ್ತು ಶಶಿಕಪೂರ್ ಅವರ ಇಬ್ಬರು ಸಹೋದರರು. ಮುಂಬೈನಲ್ಲಿ ಹುಟ್ಟಿದ ಶಮ್ಮಿ ತಮ್ಮ ಬಾಲ್ಯ ಕಳೆದದ್ದು ಕೊಲ್ಕೊತ್ತಾದಲ್ಲಿ. ಅಲ್ಲಿ ಅವರ ತಂದೆ ಸಿನಿಮಾ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂದೆ ಮುಂಬೈಗೆ ಮರಳಿದ ಶಮ್ಮಿ ನ್ಯೂ ಎರಾ ಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರು. ನಂತರ ತಂದೆ ಪೃಥ್ವಿರಾಜ್‌ಕಪೂರ್ ಅವರ `ಪೃಥ್ವಿ ಥಿಯೇಟರ್’ನಲ್ಲಿ ತೊಡಗಿಸಿಕೊಂಡರು.

‘ಪ್ರೀತಮ್‌’ ಚಿತ್ರದಲ್ಲಿ ಲೀನಾ ಚಂದಾವರ್ಕರ್ ಜೊತೆ

ಶಮ್ಮಿ ಕಪೂರ್ ಸಿನಿಮಾ ಪ್ರವೇಶಿಸಿದ್ದು 1948ರಲ್ಲಿ. ಜ್ಯೂನಿಯರ್ ಆರ್ಟಿಸ್ಟ್ ಆಗಿ ತೆರೆಗೆ ಪ್ರವೇಶಿಸಿದ ಶಮ್ಮಿಗೆ ತಿಂಗಳಿಗೆ 50 ರೂಪಾಯಿ ಸಂಭಾವನೆ ಸಂದಾಯವಾಗುತ್ತಿತ್ತು. ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಪೃಥ್ವಿ ಥಿಯೇಟರ್ ಕಲಾವಿದರಾಗಿ ಗುರುತಿಸಿಕೊಂಡರು. ನಾಯಕನಾಗಿ ಶಮ್ಮಿ ಕಪೂರ್ ಬೆಳ್ಳಿತೆರೆಗೆ ಪರಿಚಯವಾಗಿದ್ದು `ಜೀವನ್ ಜ್ಯೋತಿ’ (1953) ಚಿತ್ರದೊಂದಿಗೆ. ಮಹೇಶ್ ಕೌಲ್ ನಿರ್ದೇಶನದ ಚಿತ್ರದ ನಾಯಕಿಯಾಗಿ ಚಾಂದ್ ಉಸ್ಮಾನಿ ನಟಿಸಿದ್ದರು.

ಮುಂದೆ ಶಮ್ಮಿ ಕಪೂರ್ ರೈಲ್ ಕಾ ಡಿಬ್ಬ, ಚೋರ್ ಬಜಾರ್, ಶಮಾ ಪರ್ವಾನಾ, ಹಮ್ ಸಬ್ ಚೋರ್ ಹೈ, ಮೇಮ್‌ಸಾಬ್, ಮಿಸ್ ಕೋಕಾ ಕೋಲಾ ಚಿತ್ರಗಳಲ್ಲಿ ಶಮ್ಮಿ ವಿಶಿಷ್ಟ ಗೆಟಪ್‌ಗಳಲ್ಲಿ ಕಾಣಿಸಿಕೊಂಡರು. ಇಲ್ಲಿ ಅವರ ಹೇರ್‌ ಸ್ಟೈಲ್‌, ಮೀಸೆ, ತೆರೆಯ ಮೇಲಿನ ಆಂಗಿಕ ಅಭಿನಯ ಬಹುಪಾಲು ರಾಜ್‌ಕಪೂರ್ ಅವರನ್ನೇ ಹೋಲುತ್ತಿತ್ತು! ಇದೇ ಕಾರಣಕ್ಕೆ ಈ ಚಿತ್ರಗಳು ಅವರ ಕೈಹಿಡಿಯಲಿಲ್ಲ. ಅಂತಿಮವಾಗಿ ನಾಸಿರ್ ಹುಸೇನ್ ನಿರ್ದೇಶನದ `ತುಮ್ಸಾ ನಹೀ ದೇಖಾ’ (1957) ಚಿತ್ರದಲ್ಲಿ ಶಮ್ಮಿ ಗೆಲುವು ದಾಖಲಿಸಿದರು. ಮೀಸೆ ತೆಗೆದು ವಿಚಿತ್ರ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಶಮ್ಮಿ ಹಾಲಿವುಡ್ ನಟ ಎಲ್ವಿಸ್ ಪ್ರಿಸ್ಲಿ ಅವರನ್ನು ಅನುಕರಿಸಿದ್ದರು.

ನಟಿ ಆಶಾ ಪರೇಖ್‌ ಜೊತೆ

ಕಾಕತಾಳೀಯ ಎನ್ನುವಂತೆ `ತುಮ್ಸಾ ನಹೀ ದೇಖಾ’ ಚಿತ್ರ ನಿರ್ದೇಶಕ ನಾಸಿರ್ ಹುಸೇನ್‌ಗೆ ಚೊಚ್ಚಲ ಪ್ರಯತ್ನ. ಈ ಚಿತ್ರದ ಪ್ರಮುಖ ಅಂಶವೆಂದರೆ ಮಧುರ ಸಂಗೀತ. ಹೀರೋ ಶಮ್ಮಿ ಕಪೂರ್ ಚಿತ್ರದಲ್ಲಿ ತಮ್ಮದೇ ಆದ ವಿಚಿತ್ರ ಡ್ಯಾನ್ಸಿಂಗ್ ಸ್ಟೈಲ್‌ ಕಂಡುಕೊಂಡಿದ್ದರು. ಚಿತ್ರದ ಯಶಸ್ಸಿನೊಂದಿಗೆ ಈ ಸ್ಟೈಲ್‌ ಅವರ ಟ್ರೇಡ್ ಮಾರ್ಕ್ ಶೈಲಿ ಎನಿಸಿತು. ಮುಂದೆ ನಿರ್ದೇಶಕ ನಾಸಿರ್ – ಶಮ್ಮಿ ಜೋಡಿಯಿಂದ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳು ತಯಾರಾದವು. ಶಮ್ಮಿ ಅವರ ಇಮೇಜ್ ಬದಲಾದದ್ದು `ಜಂಗ್ಲೀ’ (1961) ಚಿತ್ರದಲ್ಲಿ. ಮುಂದೆ ಅವರ ಬಹುಪಾಲು ಯಶಸ್ವೀ ಚಿತ್ರಗಳ ಪಾತ್ರಗಳು ಜಂಗ್ಲೀ ಚಿತ್ರದ ಹೀರೋನಂತೆಯೇ ಇದ್ದುದು ವಿಶೇಷ.

ಆರಂಭದ ದಿನಗಳಲ್ಲಿ ಶಮ್ಮಿ ಆಗ ಜನಪ್ರಿಯರಾಗಿದ್ದ ಮಧುಬಾಲಾ ಮತ್ತಿತರೆ ನಟಿಯರೊಂದಿಗೆ ಅಭಿನಯಿಸಿದರು. ನಂತರ ಅವರ ಬಹುತೇಕ ಚಿತ್ರಗಳಲ್ಲಿ ನಾಯಕಿಯರಾಗಿದ್ದು ಹೊಸಬರೆ. ಇವರ ಪೈಕಿ ಆಶಾ ಪರೇಖ್, ಸಾಯಿರಾ ಬಾನು, ಶರ್ಮಿಳಾ ಟ್ಯಾಗೂರ್ ಭವಿಷ್ಯದಲ್ಲಿ ದೊಡ್ಡ ತಾರೆಯರಾಗಿ ಹೊರಹೊಮ್ಮಿದರು. ಪ್ರೊಫೆಸರ್, ಚೈನಾ ಟೌನ್, ಚಾರ್ ದಿಲ್ ಚಾರ್ ರಹೇ, ರಾತ್ ಕೆ ರಾಹಿ, ದಿಲ್ ತೇರಾ ದೀವಾನಾ, ಪ್ಯಾರ್ ಕಿಯಾ ತೋ ಡರ್ನಾ ಕ್ಯಾ, ಕಾಶ್ಮಿರ್ ಕಿ ಕಲಿ, ಬ್ಲಫ್ ಮಾಸ್ಟರ್, ಜಾನ್ವರ್, ಬತ್ತಮೀಜ್, ಆ್ಯನ್ ಈವ್ನಿಂಗ್ ಇನ್ ಪ್ಯಾರಿಸ್, ರಾಜ್‌ಕುಮಾರ್.. ಅರವತ್ತರ ದಶಕದ ಶಮ್ಮಿ ಜನಪ್ರಿಯ ಚಿತ್ರಗಳು. 1968ರಲ್ಲಿ `ಬ್ರಹ್ಮಾಚಾರಿ’ ಚಿತ್ರಕ್ಕಾಗಿ ಶಮ್ಮಿ ಚೊಚ್ಚಲ ಫಿಲ್ಮ್‌ಫೇರ್‌ ಪುರಸ್ಕಾರಕ್ಕೆ ಪಾತ್ರರಾದರು.

‘ಜಂಗ್ಲೀ’ ಚಿತ್ರದಲ್ಲಿ ಸಾಯಿರಾ ಬಾನು ಜೊತೆ

70ರ ದಶಕದ ಹೊತ್ತಿಗೆ ಶಮ್ಮಿ ದಪ್ಪಗಾಗಿದ್ದು, ಅವರ ವೃತ್ತಿ ಬದುಕಿಗೂ ತೊಡಕಾಯಿತು. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ `ಅಂದಾಜ್’ (1971). ಮುಂದೆ ಶಮ್ಮಿ ಪೋಷಕ ಪಾತ್ರಗಳತ್ತ ಹೊರಳಿದರು. ಜಮೀರ್, ಹೀರೋ ಮತ್ತು ವಿಧಾತಾ ಚಿತ್ರಗಳ ಪೋಷಕ ಪಾತ್ರಗಳಲ್ಲಿ ಅವರು ಗಮನ ಸೆಳೆದರು. `ಮನೋರಂಜನ್’ (1974) ಚಿತ್ರದೊಂದಿಗೆ ನಿರ್ದೇಶಕರಾದ ಶಮ್ಮಿ 1976ರಲ್ಲಿ ಮತ್ತೊಂದು ಚಿತ್ರ `ಬಂಡಲ್ ಬಾಜ್’ ನಿರ್ದೇಶಿಸಿದರು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದವು. ಅವರು ಪೋಷಕ ಪಾತ್ರದಲ್ಲಿ ನಟಿಸಿದ ಕೊನೆಯ ಸಿನಿಮಾ `ರಾಕ್‌ಸ್ಟಾರ್’ (2011). ಶಮ್ಮಿ ಕಪೂರ್ 1955ರಲ್ಲಿ ನಟಿ ಗೀತಾ ಬಾಲಿ ಅವರನ್ನು ವರಿಸಿದರು. ಈ ದಾಂಪತ್ಯಕ್ಕೆ ಆದಿತ್ಯ ರಾಯ್ ಕಪೂರ್ ಮತ್ತು ಕಂಚನ್ ಇಬ್ಬರು ಮಕ್ಕಳು ಜನಿಸಿದರು. ದಡಾರ ಕಾಯಿಲೆಯಿಂದಾಗಿ 35ನೇ ವಯಸ್ಸಿನಲ್ಲೇ ಗೀತಾ ಬಾಲಿ ಅಸುನೀಗಿದ್ದು ದುರದೃಷ್ಟಕರ. ಎರಡನೇ ಪತ್ನಿಯಾಗಿ ನೀಲಾ ದೇವಿ ಅವರು ಶಮ್ಮಿ ಬದುಕಿನೊಳಗೆ ಪ್ರವೇಶಿಸಿದರು.  2011, ಆಗಸ್ಟ್ 14ರಂದು ಶಮ್ಮಿ ಕಪೂರ್ ಮುಂಬಯಿಯಲ್ಲಿ ನಿಧನರಾದರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮರೆಯಲಾಗದ ಮಿನುಗುತಾರೆ

`ಶರಪಂಜರ’ ಚಿತ್ರ ವೀಕ್ಷಿಸಿದ ಹಿಂದಿ ತಾರೆ ಶರ್ಮಿಳಾ ಟ್ಯಾಗೋರ್, `ಕಲ್ಪನಾರ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಲು ನನ್ನಿಂದ ಆದೀತೋ, ಇಲ್ಲವೋ?’