ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ ತಿಪಟೂರು ರಘು

ಪೋಸ್ಟ್ ಶೇರ್ ಮಾಡಿ
ಕನ್ನಡ ಚಿತ್ರನಿರ್ದೇಶಕ ತಿಪಟೂರು ರಘು ಇಂದು (ಮೇ 29) ಬೆಳಗ್ಗೆ ಅಗಲಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 83 ವರ್ಷ ಆಗಿತ್ತು. ಹತ್ತು ಸಿನಿಮಾ ನಿರ್ದೇಶಿಸಿರುವ ರಘು ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸಿ – ನಿರ್ದೇಶಿಸಿದ್ದಾರೆ.

ತಿಪಟೂರಿನ ರಘು ಶಾಲೆಯ ದಿನಗಳಲ್ಲೇ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್‌ ಓದುವಾಗ ಹಲವು ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದರು. ಇಂಟರ್‌ಮೀಡಿಯಟ್‌ ಮುಗಿಸಿ ಹುಟ್ಟೂರು ತಿಪಟೂರಿಗೆ ಮರಳಿದ ಅವರು ಅಣ್ಣನ ವ್ಯಾಪಾರದಲ್ಲಿ ಸಹಾಯಕರಾಗಿ ನಿಂತರು. ವ್ಯಾಪಾರದ ಜೊತೆಗೇ ಹಳ್ಳಿಯ ಮಕ್ಕಳಿಗೆ ನಾಟಕ ಕಲಿಸತೊಡಗಿದ ಅವರಿಗೆ ಸಿನಿಮಾರಂಗದ ಸೆಳೆತ ಹೆಚ್ಚಾಯ್ತು. ಆಗ ಸಿನಿಮಾ ಚಟುವಟಿಕೆಗಳ ತಾಣವಾಗಿದ್ದ ಮದರಾಸಿಗೆ ತೆರಳಿದರು. ಸ್ಥಿರಚಿತ್ರ ಛಾಯಾಗ್ರಾಹಕ ವೃಷಭೇಂದ್ರಯ್ಯ ಅವರ ಸಹಾಯದಿಂದ ‘ನಾಗಪೂಜಾ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಅವರ ಸಿನಿಮಾಯಾನ ಶುರುವಾಯ್ತು.

ಮದರಾಸಿನಿಂದ ಮರಳಿದ ಅವರು ತಿಪಟೂರಿನಲ್ಲಿ ಚಿತ್ರಣಗೊಂಡ ‘ಮನೆ ಕಟ್ಟಿ ನೋಡು’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಸಿ.ವಿ.ಶಿವಶಂಕರ್ ನಿರ್ದೇಶನದ ಚಿತ್ರವಿದು. ಮುಂದೆ ಸಮಾನಮನಸ್ಕ ಹತ್ತು ಗೆಳೆಯರು ಸೇರಿ ‘ಕಲ್ಪತರು ಫೀಲ್ಮ್ಸ್‌’ ಬ್ಯಾನರ್‌ನಡಿ ಚಿತ್ರವೊಂದನ್ನು ನಿರ್ಮಿಸಲು ಯೋಜಿಸಿದರು. ಆಗ ಶುರುವಾಗಿದ್ದು ‘ಊರ್ವಶಿ’ ಸಿನಿಮಾ. ರಾಜೇಶ್‌, ರಾಜಶ್ರೀ, ನರಸಿಂಹರಾಜು, ಶಿವರಾಂ ಚಿತ್ರದ ಪ್ರಮುಖ ಕಲಾವಿದರು. 1969ರಲ್ಲೇ ಶುರುವಾದರೂ ಚಿತ್ರ ಬಿಡುಗಡೆಯಾಗಿದ್ದು 1973ರಲ್ಲಿ. ‘ಊರ್ವಶಿ’ (1973) ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾದ ರಘು ಈ ಚಿತ್ರದ ಸಹನಿರ್ಮಾಪಕರೂ ಹೌದು. ಈ ಚಿತ್ರದ ಸಹನಿರ್ಮಾಪಕರೊಲ್ಲಬ್ಬರಾದ ಬಿ.ಎಸ್‌.ಬಸವರಾಜು ಅವರು ಮುಂದೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಛಾಯಾಗ್ರಾಹಕರಾಗಿ ಹೆಸರು ಮಾಡಿದರು.

ತಿಪಟೂರು ರಘು ಅವರು ಹತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ನಾಗ ಕಾಳ ಭೈರವ’ (1981), ‘ಕಲ್ಲು ವೀಣೆ ನುಡಿಯಿತು’ (1983) ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಸ್ವರ್ಣಮಹಲ್ ರಹಸ್ಯ, ಲೇಡೀಸ್‌ ಹಾಸ್ಟೆಲ್‌, ಆಕ್ರೋಶ, ಬೆಂಕಿ ಬಿರುಗಾಳಿ, ಹಳ್ಳಿಯ ಸುರಾಸುರರು ಅವರ ನಿರ್ದೇಶನದ ಇತರೆ ಚಿತ್ರಗಳು. ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಕಾರ್ಯದರ್ಶಿಯಾಗಿ ಬಹುಕಾಲ ಕಾರ್ಯನಿರ್ವಹಿಸಿದ್ದರು. ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಿಸಿ – ನಿರ್ದೇಶಿಸಿದ್ದಾರೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ತೂಗುದೀಪ’ದ ಬೆಳಕಿನ ಹಾದಿಯಲ್ಲಿ…

ಮೈಸೂರಿನ ಶ್ರೀನಿವಾಸ್ ಚಿತ್ರರಂಗದಲ್ಲಿ ‘ತೂಗುದೀಪ ಶ್ರೀನಿವಾಸ್’ ಎಂದೇ ಜನಪ್ರಿಯರಾದವರು. ಶ್ರೀನಿವಾಸ್ ಅವರ ತಂದೆ ಮುನಿಸ್ವಾಮಿನಾಯ್ಡು ರಂಗಭೂಮಿ ಕಲಾವಿದರು. ತಂದೆಯ ನಾಟಕಗಳನ್ನು

ಬಾಲಿವುಡ್‌ನ ಪ್ರಗತಿಪರ ನಿರ್ದೇಶಕ ಬಿ.ಆರ್.ಚೋಪ್ರಾ

ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರ ಯಾದಿಯಲ್ಲಿ ಬಿ.ಆರ್‌.ಚೋಪ್ರಾ ಹೆಸರೂ ಪ್ರಸ್ತಾಪವಾಗುತ್ತದೆ. ಹಿಂದಿಯ ಮೊದಲ ಬಹುತಾರಾಗಣದ ಸಿನಿಮಾ ‘ವಕ್ತ್‌’ ನಿರ್ದೇಶಕ ಬಿ.ಆರ್.ಚೋಪ್ರಾ.