ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮರೆಯಲಾಗದ ಮಿನುಗುತಾರೆ

ಪೋಸ್ಟ್ ಶೇರ್ ಮಾಡಿ
ಶ್ರೀಧರ ವಿ.
ಲೇಖಕ

`ಶರಪಂಜರ’ ಚಿತ್ರ ವೀಕ್ಷಿಸಿದ ಹಿಂದಿ ತಾರೆ ಶರ್ಮಿಳಾ ಟ್ಯಾಗೋರ್, `ಕಲ್ಪನಾರ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಲು ನನ್ನಿಂದ ಆದೀತೋ, ಇಲ್ಲವೋ?’ ಎಂದು ಉದ್ಘರಿಸಿದ್ದರು. ಅಪರೂಪದ ಪಾತ್ರಗಳ ಮೂಲಕ ಕನ್ನಡ ನಾಡಿನಾಚೆಗೂ ತಮ್ಮ ಛಾಪು ಮೂಡಿಸಿದ ನಟಿ ಕಲ್ಪನಾ.

“ನನ್ನ ಇದುವರೆಗಿನ ಈ ಚಿತ್ರರಂಗದ ಅನುಭವವನ್ನು ಯಾವುದಾದರೊಂದು ಶಿಲ್ಪದಲ್ಲಿ ಕಡೆಯಬೇಕೆಂಬ ಮಹದಾಸೆ ಇತ್ತು. ಆ ಯೋಗ್ಯತೆಯನ್ನು ಕಲ್ಪನಾಳಲ್ಲಿ ಗುರುತಿಸಿದೆ. ಆಕೆಗೆ ನನ್ನ ಶಕ್ತಿಯನ್ನು ಧಾರೆ ಎರೆದೆ. ಅವಳು ಅದನ್ನು ಪ್ರೀತಿ, ಭಕ್ತಿಯಿಂದ ಸ್ವೀಕರಿಸಿ ನನ್ನ ಕಲ್ಪನೆಯ ಶಿಲ್ಪವಾಗಿದ್ದಾಳೆ. ಅಲ್ಲದೆ ನನ್ನ ಬಗ್ಗೆ ಅತ್ಯಂತ ಕೃತಜ್ಞತಾ ಭಾವ ಇರಿಸಿದ್ದಾಳೆ” ಎಂದು ಕಲ್ಪನಾ ಕುರಿತಾಗಿ ಹೇಳಿದ್ದರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಕನ್ನಡ ಚಿತ್ರರಂಗ ಕಂಡ ಪ್ರಮುಖ ನಾಯಕನಟಿ ಕಲ್ಪನಾ. `ಸಾಕುಮಗಳು’ (1963) ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಕಲ್ಪನಾ ಸುಮಾರು ಒಂದು ದಶಕಗಳ ಕಾಲ ಚಿತ್ರಜಗತ್ತಿನಲ್ಲಿ ರಾರಾಜಿಸಿದರು. ಏಕಮೇವಾದ್ವಿತೀಯ ನಟಿ ಎನಿಸಿಕೊಂಡ ನಟಿ `ಮಿನುಗುತಾರೆ’ಯಾಗಿದ್ದು ದುರಂತ ಪಾತ್ರಗಳ ಮೂಲಕವೇ. ನಿರ್ದೇಶಕ ಎಂ.ಆರ್.ವಿಠ್ಠಲ್ ತಮ್ಮ `ಹಣ್ಣೆಲೆ ಚಿಗುರಿದಾಗ’ (1968) ಚಿತ್ರದ `ಮಾಲತಿ’ ಪಾತ್ರಕ್ಕೆ ಕಲ್ಪನಾರನ್ನು ಆಯ್ಕೆ ಮಾಡಿಕೊಂಡಿದ್ದರು. ಕಲ್ಪನಾರ ಪ್ರತಿಭೆಯ ಬಗ್ಗೆ ಅರಿವಿದ್ದ ಅವರು ವಸ್ತ್ರಾಲಂಕಾರ, ವರ್ಣಾಲಂಕಾರದ ಬಗ್ಗೆ ಆಕೆಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದರು. ಚಿತ್ರ ಯಶಸ್ವಿಯಾಗಿ ಕಲ್ಪನಾರ ಪಾತ್ರನಿರ್ವಹಣೆ ಪ್ರಶಂಸೆಗೆ ಪ್ರಾಪ್ತವಾಯಿತು.

ಆದರೆ, `ಸಂಪ್ರದಾಯಸ್ಥರ ಮನೆತದಲ್ಲಿನ ತರುಣ ವಿಧವೆ ಹಾಗೆ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂಬ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತು. ಈ ಟೀಕೆಯನ್ನು ಒಂದು ಸವಾಲಾಗಿ ಪರಿಗಣಿಸಿದ ಕಲ್ಪನಾ ಚಲನಚಿತ್ರ ಪತ್ರಿಕೆಯೊಂದಕ್ಕೆ ಸುದೀರ್ಘ ಲೇಖನವನ್ನೇ ಬರೆದರು. ಒಂದು ಪ್ರೌಢ ಪ್ರಬಂಧದಂತಿದ್ದ ಆ ಲೇಖನ ಕಲ್ಪನಾ ಅವರ ಅಧ್ಯಯನಶೀಲತೆ, ವಾದ-ವೈಖರಿ, ದಿಟ್ಟತನ ಮುಂತಾದವು ಟೀಕಾಕಾರರನ್ನು ಮೌನವಾಗಿಸಿತ್ತು. ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಆಸಕ್ತಿಯಿಂದ ಚಿತ್ರವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಖ್ಯಾತ ಹಿಂದಿ ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ, `ನಾನು ನೋಡಿದ ಅತ್ಯುತ್ತಮ ಭಾರತೀಯ ಚಿತ್ರಗಳಲ್ಲಿ ಇದೂ ಒಂದು’ ಎಂದು ನುಡಿದಿದ್ದರು.

ನಿರ್ದೇಶಕ ಪುಟ್ಟಣ್ಣನವರೊಂದಿಗೆ ಕಲ್ಪನಾ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ವೇಶ್ಯೆಯೊಬ್ಬಳ ಮಗಳಾಗಿ ನಟಿಸಿದ ಕಲ್ಪನಾರ `ಮುಕ್ತಿ’ ಚಿತ್ರವೂ ಅಪಾರ ಮನ್ನಣೆ ಪಡೆದುಕೊಂಡಿತು. ಲಂಡನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರದ ಬಗ್ಗೆ ಅಲ್ಲಿನ ಪತ್ರಿಕೆಗಳು ಹೃದಯಸ್ಪರ್ಶಿ ವಿಮರ್ಶೆ ಬರೆದಿದ್ದವು. ಅಮೆರಿಕಾದಲ್ಲಿ ವಿದ್ಯಾರ್ಥಿಗಳಿಗೆಂದೇ ವಿಶೇಷವಾಗಿ ಪ್ರದರ್ಶಿಸಿದ 23 ಭಾರತೀಯ ಚಿತ್ರಗಳಲ್ಲಿ ಈ ಚಿತ್ರವೂ ಇತ್ತು ಎನ್ನುವುದು ಮತ್ತೊಂದು ಹೆಗ್ಗಳಿಕೆ. ಎನ್.ಲಕ್ಷ್ಮೀನಾರಾಯಣ ಅವರಂತಹ ಉತ್ಕೃಷ್ಟ ನಿರ್ದೇಶಕರ ಮನಸ್ಸಿನಲ್ಲಿ ನಾಯಕಿ ಪಾತ್ರವೆಂದರೆ ಅದು ಕಲ್ಪನಾ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿದ ನಟಿಯಾಗಿದ್ದರು ಆಕೆ. ಲಕ್ಷ್ಮೀನಾರಾಯಣ ಅವರು ನಿರ್ದೇಶಿಸಿದ ಆರು ಚಿತ್ರಗಳಲ್ಲಿ ಮೂರು ಚಿತ್ರಗಳಲ್ಲಷ್ಟೇ ನಾಯಕಿ ಪಾತ್ರಗಳಿದ್ದುದು. ಈ ಮೂರೂ ಚಿತ್ರಗಳಿಗೆ ಕಲ್ಪನಾ ನಾಯಕಿಯಾಗಿದ್ದರು!

“ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ…’ ಎನ್ನುತ್ತಲೇ ಪ್ರೇಕ್ಷಕರನ್ನು ದಟ್ಟವಾಗಿ ಸೆರೆ ಹಿಡಿದ ಚಿತ್ರ `ಶರಪಂಜರ’. ಈ ಚಿತ್ರದ ಮೊದಲ ಪ್ರತಿ ಮದರಾಸಿನಲ್ಲಿ ಪ್ರದರ್ಶಿತವಾದಾಗ ಅನೇಕ ಹಿಂದಿ, ತಮಿಳು, ತೆಲುಗು ಕಲಾವಿದರು ಹಾಗೂ ತಂತ್ರಜ್ಞರಿಂದ ಚಿತ್ರಮಂದಿರ ಭರ್ತಿಯಾಗಿತ್ತು. ಚಿತ್ರ ವೀಕ್ಷಿಸಿದ ಹಿಂದಿ ತಾರೆ ಶರ್ಮಿಳಾ ಟ್ಯಾಗೋರ್, `ಕಲ್ಪನಾರ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಲು ನನ್ನಿಂದ ಆದೀತೋ, ಇಲ್ಲವೋ?’ ಎಂದು ಉದ್ಘರಿಸಿದ್ದರು. ನೇರ, ನಿಷ್ಠುರ ವ್ಯಕ್ತಿತ್ವದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು ಯಾರನ್ನೂ ಸುಮ್ಮನೆ ಹೊಗಳುವವರಲ್ಲ. ಅಂತಹ ಕಾರಂತರು, `ಕೋಟಿ ಚೆನ್ನಯ’ ತುಳು ಚಿತ್ರದಲ್ಲಿನ ಕಲ್ಪನಾರ ಪಾತ್ರವನ್ನು ಮೆಚ್ಚಿಕೊಂಡು ಕಲ್ಪನಾರಿಗೊಂದು ಸುದೀರ್ಘ ಪತ್ರ ಬರೆದಿದ್ದರು. ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿಯೂ, ತಾವು ಅದರಲ್ಲಿ ಮುಖ್ಯ ಪಾತ್ರ ವಹಿಸಲು ಸಾಧ್ಯವೇ?’ ಎಂದು ಪತ್ರದಲ್ಲಿ ಬರೆದಿದ್ದರಂತೆ. ಕಾರಂತರ ಕರೆಗೆ ಮನ್ನಣೆ ನೀಡಿದ ಕಲ್ಪನಾ, ಅವರು ನಿರ್ದೇಶಿಸಿದ ಏಕೈಕ ವಾಕ್ಚಿತ್ರ `ಮಲಯ ಮಕ್ಕಳು’ಗೆ ನಾಯಕಿಯಾದರು. ಹೀಗೆ, ನಾಡಿನ ಹಾಗೂ ದೇಶ-ವಿದೇಶಗಳಲ್ಲಿಯೂ ತಮ್ಮ ಪಾತ್ರಗಳಿಗೆ ಮನ್ನಣೆ ಪಡೆದ ನಟಿ ಬದುಕಿಗೆ ವಿದಾಯ ಹೇಳಿದಾಗ ಅವರಿಗೆ ಮೂವತ್ತಾರು ವರ್ಷವಷ್ಟೆ. 1963ರಲ್ಲಿ ಚಿತ್ರಜಗತ್ತನ್ನು ಪ್ರವೇಶಿಸಿ 1978ರವರೆಗೆ ಹದಿನೈದು ವರ್ಷಗಳಲ್ಲಿ 51 ನಿರ್ದೇಶಕರ 78 ಚಿತ್ರಗಳಲ್ಲಿ ನಟಿಸಿದರು. ಈ ಪಟ್ಟಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು ಚಿತ್ರಗಳೂ ಸೇರಿವೆ. ಪಂಚಭಾಷೆಗಳಲ್ಲಿ ಅಭಿನಯಿಸಿದ ನಟಿ ಬೆಳ್ಳಿತೆರೆಯ ಧ್ರುವತಾರೆಯಾಗಿ ಮಿಂಚಿದರು.

‘ಚಿನ್ನದ ಗೊಂಬೆ’ ಚಿತ್ರದಲ್ಲಿ ಬಿ.ಜಯ, ಕಲ್ಪನಾ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ