ಉದ್ಯಮಿ ಜಗದೀಶ್ ಸಿನಿಮಾ ಕುರಿತಾಗಿ ತುಂಬಾ ಪ್ಯಾಷನ್ ಹೊಂದಿರುವ ವ್ಯಕ್ತಿ. ‘ಧೃತಿ’ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದೊಂದಿಗೆ ಅವರ ವರ್ಷಗಳ ಕನಸು ಈಡೇರಿದೆ. ಇದೇ ಮೇ 8ರಂದು ಸಿನಿಮಾ ತೆರೆಕಾಣುತ್ತಿದೆ.
ಚಿತ್ರ ನಿರ್ದೇಶನ ಹಲವು ಪ್ರತಿಭೆಗಳ ಕನಸು. ಅದು ಕೆಲವರಿಗೆ ನನಸಾಗುತ್ತದೆ. ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ. ಉದ್ಯಮಿ ಜಗದೀಶ್ ಕೂಡ ಚಿಕ್ಕಂದಿನಿಂದಲೂ ನಿರ್ದೇಶಕನಾಗುವ ಕನಸು ಹೊತ್ತವರು. ಆ ಕನಸನ್ನು “ಧೃತಿ” ಚಿತ್ರವನ್ನು ನಿರ್ದೇಶಿಸುವ ಮೂಲಕ ನನಸಾಗಿಸಿಕೊಂಡಿದ್ದಾರೆ ಜಗದೀಶ್. ಈ ಬಗ್ಗೆ ಮಾತನಾಡುವ ಅವರು, ‘ನಾನೊಬ್ಬ ಉದ್ಯಮಿ. ಚಿಕ್ಕಂದಿನಿಂದಲೂ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ನನಗೆ. ಅದು ಈಗ ಈ ಚಿತ್ರದ ಮೂಲಕ ಈಡೇರಿದೆ. ಆರು ವರ್ಷಗಳ ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ಆರಂಭವಾಗಿದ್ದು. ನಮ್ಮ ಸುತ್ತಮುತ್ತ ನಡೆಯುವ ಹಾಗೂ ನಡೆದಿರುವ ಹೆಣ್ಣಿನ ಮೇಲಿನ ಶೋಷಣೆಯ ಬಗ್ಗೆ ಈ ಚಿತ್ರದ ಕಥೆ ಇದೆ. ಹಾಗಂತ ನಮ್ಮ ಚಿತ್ರದಲ್ಲಿ ಬರೀ ಶೋಷಣೆಯನ್ನೇ ತೋರಿಸಿಲ್ಲ. ಅದಕ್ಕೆ ಪರಿಹಾರವನ್ನು ತೋರಿಸಿದ್ದೇವೆ’ ಎನ್ನುತ್ತಾರವರು.
ಪ್ರಶಾಂತ್ ಈ ಚಿತ್ರದ ನಾಯಕ. ಆಂಚಲ್ ನಾಯಕಿ. ಹಲವಾರು ನೂತನ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸನ್ನ ಕುಮಾರ್ ಅವರ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹೊಣೆಯೂ ಜಗದೀಶ್ ಅವರದ್ದೆ. ಚಿತ್ರದ ನಾಯಕಿ ಆಂಚಲ್ ಮಾತನಾಡಿ, ‘ಇದು ನನ್ನ ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಇಂತಹ ಒಳ್ಳೆಯ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ. “ಧೃತಿ” ನನ್ನ ಪಾತ್ರದ ಹೆಸರು. ಸಾಕಷ್ಟು ಸಮಸ್ಯೆ ಎದುರಾದರೂ “ಧೃತಿಗೆಡದೆ” ಎಲ್ಲವನ್ನು ಎದುರಿಸುವ ಪಾತ್ರ ನನ್ನದು’ ಎನ್ನುತ್ತಾರೆ.
‘ನಾನು ಮೂಲತಃ ನೃತ್ಯ ಕಲಾವಿದ ಹಾಗೂ ನೃತ್ಯ ನಿರ್ದೇಶಕ. ರಂಗಭೂಮಿ ಕಲಾವಿದನೂ ಹೌದು. ಯಾವ ರೀತಿಯ ಪಾತ್ರದ ಮೂಲಕ ನಾನು ನಟನಾಗಿ ಚಿತ್ರರಂಗ ಪ್ರವೇಶಿಸಬೇಕೆಂದುಕೊಂಡಿದ್ದೆನೊ ಅದೇ ತರಹದ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ’ ಎಂದು ನಾಯಕ ಪ್ರಶಾಂತ್ ತಿಳಿಸಿದರು. ಸಂಗೀತದ ಕುರಿತು ಪ್ರಸನ್ನ ಕುಮಾರ್ ಮಾಹಿತಿ ನೀಡಿದರು. ನಟರಾದ ಮನೋಜ್ ಕುಮಾರ್ ಹಾಗೂ ಮಧು ಮಂದಗೆರೆ ತಮ್ಮ ಪಾತ್ರದ ಕುರಿತು ಮಾತನಾಡಿದರು.







