
ಶ್ರೀಧರಮೂರ್ತಿ
ಲೇಖಕ
ಹಲವು ಸೂಕ್ಷ್ಮಗಳನ್ನು ಹೊಂದಿದ್ದ ಎಂ.ಆರ್.ವಿಠಲ್ ನಿರ್ದೇಶನದ ‘ಮಿಸ್ ಲೀಲಾವತಿ’ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಚಿಂತನಾ ಕ್ರಮವನ್ನು ನೀಡಿತು. ತಲೆ ಬಗ್ಗಿಸಿ ಕಣ್ಣನ್ನು ಪಟ ಪಟ ಅಲ್ಲಾಡಿಸುತ್ತಾ ಕುಗ್ಗಿದ ಧ್ವನಿಯಲ್ಲಿ ಮಾತನಾಡುವ ಸ್ತ್ರೀ ಪಾತ್ರಗಳಿದ್ದ ಕಡೆ ಅದು ಒಂದು ಅರ್ಥದಲ್ಲಿ ‘ಸಾಂಸ್ಕೃತಿಕವಾದ ಶಾಕ್’.
ಕನ್ನಡ ಚಿತ್ರರಂಗಕ್ಕೆ ಹೊಸ ಸಾಧ್ಯತೆಗಳನ್ನು ನೀಡಿದ ನಿರ್ದೇಶಕ ಎಂ.ಆರ್.ವಿಠಲ್ ಜನಿಸಿದ್ದು 1908ರ ಜುಲೈ 19ರಂದು. ತಂದೆ ರಾಘವೇಂದ್ರ ರಾವ್ ಬ್ರಿಟೀಷ್ ಸೇನೆಯಲ್ಲಿ ಕೆಲಸ ಮಾಡಿ 4ನೇ ಆಫ್ಗನ್ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತರಾದವರು. ಸೊಸಲೆ ವ್ಯಾಸರಾಯರ ಮಠಕ್ಕೆ ಸಂಬಂಧಿಸಿದ ವ್ಯವಹಾರವನ್ನು ಸುಗುಮಗೊಳಿಸಲು ಮಹಾರಾಜರು ನೀಡಿದ ಹೊಣೆಗಾರಿಕೆಯಂತೆ ಅವರು ವಿವಿಧೆಡೆ ಸಂಚಾರ ಮಾಡಬೇಕಾಗಿತ್ತು. ವಿಠಲ್ ಅವರ ಬಾಲ್ಯ ಇಂತಹ ಸಂಚಾರದಲ್ಲಿಯೇ ಕಳೆಯಿತು. ಕೊನೆಗೆ ವಿಠಲ್ ಅವರ ಅಣ್ಣ ಮಾಧವ ರಾವ್ ಅವರಿಗೆ ಮೈಸೂರು ಹತ್ತಿರ ಇಂಜಿನಿಯರ್ ಕೆಲಸ ಸಿಕ್ಕಿತು. ಅವರು ತಮ್ಮನ ಓದು ಹಾಳಾಗುತ್ತಿರುವುದನ್ನು ಗಮನಿಸಿ ತಮ್ಮೊಂದಿಗೆ ಕರೆದೊಯ್ದು ಶಾಲೆಗೆ ಸೇರಿಸಿದರು. ಹೀಗೆ ವಿಠಲ್ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮೈಸೂರಿನಲ್ಲಿ ಕಳೆಯಿತು. ಕಾಲೇಜಿಗೆ ಬರುವ ವೇಳೆಗೆ ಬೆಂಗಳೂರಿನಲ್ಲಿದ್ದ ಇನ್ನೊಬ್ಬ ಅಣ್ಣ ಶ್ರೀಪತಿ ತಮ್ಮನನ್ನು ಕರೆದುಕೊಂಡು ಹೋಗಿ ಸೆಂಟ್ರಲ್ ಕಾಲೇಜ್ ಸೇರಿದರು.
ಅಣ್ಣನ ಮನೆಯಿದ್ದ ಮಲ್ಲೇಶ್ವರಂ 15ನೇ ಕ್ರಾಸಿನಲ್ಲಿ ಹರಿಭಾಯ್ ದೇಸಾಯಿಯವರ ಸೂರ್ಯ ಫಿಲಂ ಕಂಪನಿ ಇತ್ತು. ಅವರು ಅಣ್ಣನ ಸ್ನೇಹಿತರಾಗಿದ್ದರಿಂದ ವಿಠಲ್ ಅವರಿಗೆ ಅಡ್ಡಿ ಇಲ್ಲದ ಪ್ರವೇಶ. ಆಗ ಕೈಲಾಸಂ ಮತ್ತು ಮೋಹನ್ ಭವನಾನಿಯವರ ನೇತೃತ್ವದಲ್ಲಿ ‘ಮೃಚ್ಛಕಟಿಕ’ ಮೂಕಿ ಚಿತ್ರದ ತಯಾರಿಕೆ ನಡೆಯುತ್ತಿತ್ತು. ಇದರಲ್ಲಿ ವಿಠಲ್ ಚಿಕ್ಕ ಪಾತ್ರ ನಿರ್ವಹಿಸಿದ್ದರು. ಹೀಗೆ ಬಾಲ್ಯದಲ್ಲಿಯೇ ಅವರಿಗೆ ಚಿತ್ರರಂಗದ ನಂಟು ಉಂಟಾಯಿತು. ವಿಠಲ್ ಅವರ ವಿದ್ಯಾಭ್ಯಾಸ ಸುಲಲಿತವಾಗೇನೂ ನಡೆಯಲಿಲ್ಲ. ಇಂಟರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ನ್ಯಾಷನಲ್ ಹೈಸ್ಕೂಲಿನಲ್ಲಿ ಬೆಳಗಿನ ತರಗತಿಗಳಲ್ಲಿ ಈ ಕಾರಣದಿಂದ ತರಬೇತಿ ಪಡೆಯುತ್ತಿದ್ದರು. ಈ ಹಂತದಲ್ಲಿ ಅವರಿಗೆ ಬಿ.ಎಂ.ಶ್ರೀಕಂಠಯ್ಯನವರು ಆತ್ಮೀಯರಾದರು. ಅವರು ಒಂದು ದಿನ ಪತ್ರಿಕೆಯಲ್ಲಿ ಬಂದಿದ್ದ ಏರೋನಾಟಿಕ್ಸ್ ಇಂಜಿನಿಯರಿಂಗ್ ಪ್ರವೇಶವನ್ನು ಆಹ್ವಾನಿಸಿದ್ದ ಜಾಹಿರಾತನ್ನು ತೋರಿಸಿ ಪ್ರಯತ್ನಿಸಲು ಹೇಳಿದರು. ವಿಠಲ್ ತಂದೆಯವರ ಸ್ನೇಹಿತ ಆನಂದ ಆಳ್ವಾರ್ ಮದರಾಸಿನಲ್ಲಿದ್ದಿದ್ದರಿಂದ ವಸತಿ ಸಮಸ್ಯೆಯೂ ಪರಿಹಾರವಾಯಿತು. ಆದರೆ ಕೆಲಕಾಲದ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ಬ್ರಿಟಿಷ್ ಸರ್ಕಾರ ಈ ವಿಭಾಗಕ್ಕೆ ನೀಡಿದ್ದ ಪರವಾನಗಿಯನ್ನು ರದ್ದು ಪಡಿಸಿತು. ತರಗತಿಯಲ್ಲಿ ಇದ್ದದ್ದೇ ನಾಲ್ಕು ಜನ. ಅವರು ಪ್ರಾಂಶುಪಾಲರನ್ನು ಭೇಟಿ ಮಾಡಿ ತಮ್ಮ ಅವಹಾಲನ್ನು ಹೇಳಿಕೊಂಡಾಗ ಅಟೋಮೊಬೈಲ್ ವಿಭಾಗದಲ್ಲಿ ಅಧ್ಯಯನಕ್ಕೆ ಅವಕಾಶ ನೀಡಿದರು. ಇಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ರ್ಯಾಂಕ್ ಪಡೆದ ವಿಠಲ್, ಇಂಜಿನಿಯರ್ ಎನ್ನಿಸಿಕೊಂಡರು. ಮದರಾಸಿನಲ್ಲಿ ಕೆಲವು ಕಂಪನಿಗಳಲ್ಲಿ ಕೆಲಸ ಮಾಡಿ ಅಲ್ಲಿಂದ ಮುಂದೆ ಮುಂಬೈಗೆ ಬಂದು ಪೋರ್ಡ್ ಕಂಪನಿಯನ್ನು ಸೇರಿದರು. ಅಲ್ಲಿ ಹಲವು ಘಟಕಗಳಲ್ಲಿ ಕೆಲಸ ಮಾಡಿ ಅನುಭವವನ್ನು ಪಡೆದು ಕೊನೆಗೆ ಕೊಲ್ಹಾಪುರದಲ್ಲಿ ಸ್ವಂತ ಡೀಲರ್‌ಶಿಪ್ ಪಡೆದು ಮಾಲೀಕರು ಎನ್ನಿಸಿಕೊಂಡರು.

ಈ ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತಿರುವಾಗಲೇ ಅವರಿಗೆ ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರ ಪರಿಚಯವಾಯಿತು. ಅವರ ‘ಗಂಗಾವತರಣ’ ಚಿತ್ರಕ್ಕೆ ವಿಠಲ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಸ್ವಂತ ಕಂಪನಿಯ ಜೊತೆಗೆ ಕೊಲ್ಹಾಪುರ ಸಿನಿಟೋನ್‍ನಲ್ಲಿ ಧ್ವನಿಮುದ್ರಕರಾಗಿಯೂ ವಿಠಲ್ ಸೇವೆ ಸಲ್ಲಿಸಿದರು. ಅವರ ತಾಂತ್ರಿಕ ಪರಿಣತಿ ಎಲ್ಲೆಡೆ ಮೆಚ್ಚಿಗೆಯನ್ನು ಪಡೆಯಿತು. ಇದರಿಂದಾಗಿ ರಣಜಿತ್ ಕಂಪನಿಯವರ ‘ಆಸೋಂಕಿ ದುನಿಯಾ’ ಹಿಂದಿ ಚಿತ್ರದ ನಿರ್ದೇಶಕರಾಗುವ ಅವಕಾಶ ದೊರಕಿತು. ಚಿತ್ರ ಗೆಲ್ಲುವುದರೊಂದಿಗೆ ವಿಠಲ್ ಅವರ ವೃತ್ತಿ ಜೀವನದಲ್ಲಿ ಇನ್ನೊಂದು ತಿರುವು ಲಭಿಸಿತು. ಆದರೆ ರಣಜಿತ್ ಕಂಪನಿ ಹೊಸ ಚಿತ್ರವನ್ನು ನಿರ್ಮಿಸದಿದ್ದರಿಂದ ವಿಠಲ್ ಹೊಸ ದಾರಿಯನ್ನು ನೋಡಿ ಕೊಳ್ಳಬೇಕಾಯಿತು. ಪ್ಯಾರಾಮೌಂಟ್ ನ್ಯೂಸ್ ಸಂಸ್ಥೆಗೆ ಕೆಲವು ಸಾಕ್ಷಚಿತ್ರಗಳನ್ನು ಮಾಡಿಕೊಟ್ಟರು. ಎಂ.ಎಲ್.ಟಂಡನ್ ಅವರ ಪರಿಚಯವಾಗಿ ಅವರ ‘ಮಾಡ್ರನ್ ಥಿಯೇಟರ್ಸ್’ಗೆ ಅರುಂಧತಿ, ಬರ್ಮರಾಣಿ ಮತ್ತು ರಾಜರಾಜೇಶ್ವರಿ ಚಿತ್ರಗಳನ್ನು ನಿರ್ದೇಶಿಸಿದರು. ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದರು. ಅವುಗಳ ಪೈಕಿ ಹೋಮ್ ಫ್ರೆಂಟ್, ಪೋನ್‍ವಳೆಯುಂ ಭರತ ಭೂಮಿ ಅವರಿಗೆ ಹೆಸರನ್ನು ತಂದು ಕೊಟ್ಟವು.
ಎರಡನೆಯ ಮಹಾಯುದ್ದದ ನಂತರ ಕಿರುಚಿತ್ರಗಳ ತಯಾರಿಕೆ ನಿಂತು ಹೋಗಿದ್ದರಿಂದ ವಿಠಲ್ ಬೇರೆ ಉದ್ಯೋಗವನ್ನು ಹುಡುಕಿಕೊಳ್ಳ ಬೇಕಾಯಿತು. ಪಟೇಲ್ ಇಂಡಿಯಾ ಸಂಸ್ಥೆಯ ಮದರಾಸ್ ಶಾಖೆಯ ಮ್ಯಾನೇಜರ್ ಆಗುವ ಅವಕಾಶ ಅವರಿಗೆ ದೊರಕಿತು. ಅದು ಸಿನಿಮಾ ತಯಾರಿಕೆಗೆ ಬೇಕಾದ ಕ್ಯಾಮರಾ, ರಿಕಾರ್ಡಿಂಗ್ ಪ್ರೋಸೆಸಿಂಗ್ ಮತ್ತು ಎಡಿಟಿಂಗ್ ಉಪಕರಣಗಳನ್ನು ಅಮೆರಿಕಾ ಮತ್ತು ಯೂರೋಪಿನಿಂದ ತರಿಸಿ ಮಾರಾಟ ಮಾಡುತ್ತಿತ್ತು. ಆಗ ಕೊಡಕ್ ಕಂಪನಿಯ ಕಚ್ಚಾ ಫಿಲಂಗಳು ಜನಪ್ರಿಯವಾಗಿದ್ದವು. ಪಟೇಲ್ ಇಂಡಿಯಾ ಕಂಪನಿ ಗೇವರ್ಟ ಫಿಲಂ ವಿತರಣೆ ಮಾಡುತ್ತಿತ್ತು. ಇದಕ್ಕೆ ಬೇಡಿಕೆ ಇರಲಿಲ್ಲ. ವಿಠಲ್ ಸಮಸ್ಯೆ ಅಧ್ಯಯನವನ್ನು ಮಾಡಿ ಒಂದೇ ದೃಶ್ಯವನ್ನು ಕೊಡಕ್ ಮತ್ತು ಗೇವರ್ಟ್ ಫಿಲಂನಿಂದ ಚಿತ್ರೀಕರಣ ನಡೆಸಿ ಗೇವರ್ಟ್ ಫಿಲಂನ ಸಮಸ್ಯೆಗಳನ್ನು ಪಟ್ಟಿ ಮಾಡಿ ಕಳುಹಿಸಿದರು. ಇದರಿಂದ ಆಕರ್ಷಿತರಾದ ಗೇವರ್ಟ್ ಕಂಪನಿಯವರು ವಿಠಲ್ ಅವರನ್ನು ತಮ್ಮ ಬೆಲ್ಜಿಯಂ ಫ್ಯಾಕ್ಟರಿಗೆ ಕರೆಸಿಕೊಂಡರು. ಈ ನಡುವೆ 1937ರ ಆಗಸ್ಟ್ 9ರಂದು ವಿಠಲ್ ಅವರು ಶಬರಿಯವರನ್ನು ವಿವಾಹವಾದರು. 1938ರಲ್ಲಿ ಅವರ ಸುಲೇಖಾ ಎನ್ನುವ ಮಗಳು ಜನಿಸಿದಳು.
ಗೇವರ್ಟ ಕಂಪನಿಯವರ ಆಹ್ವಾನದ ಮೇಲೆ ಬೆಲ್ಜಿಯಂಗೆ ಬಂದಿಳಿದ ವಿಠಲ್ ಅವರಿಗೆ ಯೂರೋಪ್ ಪ್ರವಾಸದ ಅವಕಾಶವನ್ನು ಸಂಸ್ಥೆ ಕಲ್ಪಿಸಿತ್ತು. ಆಗ ಫ್ರೆಂಚ್ ಚಿತ್ರ ‘ದಿ ಬರ್ನಿಂಗ್ ಟ್ರೈನ್’ನ ನಿರ್ದೇಶನದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತು. ಹಾಗೇ ಲಂಡನ್‍ನಲ್ಲಿ ಹಿಚ್‍ಕಾಕ್ ‘ದಿ ವಿಟ್ನಸ್ ಫಾರ್ ದಿ ಪ್ರೋಸಿಕ್ಯೂಷನ್’ ಚಿತ್ರದ ಮೊದಲ ಪ್ರದರ್ಶನವನ್ನು ಇಂಗ್ಲೆಂಡ್ ಸಾಮ್ರಾಜ್ಯದ ಮಹಾರಾಣಿ ಎಲಿಜಬತ್ ಅವರ ಜೊತೆಗೆ ನೋಡುವ ಅವಕಾಶ ದೊರಕಿತು. ವಿಠಲ್ ಅವರ ಯೂರೋಪ್ ಪ್ರವಾಸ ಯಶಸ್ವಿಯಾಗಿದ್ದರೂ ಅವರು ಹಿಂದಿರುಗಿ ಬಂದಾಗ ಕಂಪನಿ ವ್ಯವಹಾರ ಮೊದಲಿನಂತಿರಲಿಲ್ಲ. ಕಾಳಸಂತೆ ಮಾರಾಟ ನಡೆಯುತ್ತಿತ್ತು. ವಿಠಲ್ ಅದನ್ನು ವಿರೋಧಿಸಿ ಸಂಸ್ಥೆಗೆ ರಾಜಿನಾಮೆ ನೀಡಿದರು. ಈ ನಡುವೆ ಮಿತ್ರರಾದ ರಾಮಯ್ಯ ಮತ್ತು ವಾಸುದೇವ ನಾಯರ್ ಅವರ ಬಳಿ ಪಾಲುದಾರಿಕೆಯನ್ನು ಹೊಂದಿ ತಮಿಳಿನಲ್ಲಿ ‘ಪಾಂಚಾಲಿ ಶಪಥಂ’ ಮತ್ತು ಮಲೆಯಾಳಂನಲ್ಲಿ ‘ಕೇರಳ ಕೇಸರಿ’ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಇವುಗಳ ಪೈಕಿ ‘ಪಾಂಚಾಲಿ ಶಪಥಂ’ ಬಿಡುಗಡೆ ಕಾಣಲಿಲ್ಲ. ‘ಕೇರಳ ಕೇಸರಿ’ ಬಿಡುಗಡೆಯಾಗಿ ಯಶಸ್ಸನ್ನು ಪಡೆದರೂ ಪಾಲುದಾರರ ಮೋಸದಿಂದ ವಿಠಲ್ ಅಪಾರ ನಷ್ಟವನ್ನು ಅನುಭವಿಸ ಬೇಕಾಯಿತು. ಈ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹತ್ತು ವರ್ಷಗಳೇ ಬೇಕಾಯಿತು. ಈ ಹಂತದಲ್ಲಿ ಅವರ ಮಡದಿ ಶಬರಿ ‘ಚಿತ್ರಾ ಕಾಟೇಜ್ ಇಂಡಸ್ಟ್ರೀಸ್’ ಎಂಬ ಸಂಸ್ಥೆಯನ್ನು ಕಟ್ಟಿ ಸಂಸಾರ ರಥವನ್ನು ಸಾಗಿಸಿದರು. ಈ ನಡುವೆ ವಿಠಲ್ ನಿರ್ದೇಶಿಸಲು ಆರಂಭಿಸಿದ್ದ ‘ವರ್ಮಾ ಮಾಳಿಗೈ’ ಮತ್ತು ‘ಆವದುಮ್ ಪೆಣ್ಣಾಲೆ’ ಚಿತ್ರಗಳ ನಿರ್ಮಾಣ ಅರ್ಧಕ್ಕೇ ನಿಂತು ಹೋಗಿದ್ದಲ್ಲದೆ ಪುನೀತವತಿ ಚಿತ್ರ ಸೋಲನ್ನು ಕಂಡು ದುರಾದೃಷ್ಟದ ಪರಂಪರೆ ಮುಂದುವರಿದಿತ್ತು.

ವಿಠಲ್ ಅವರಿಗೆ ಕನ್ನಡ ಚಿತ್ರರಂಗದ ನಂಟು ಬಂದಿದ್ದು ‘ಧರ್ಮ ವಿಜಯ’ ಚಿತ್ರದಿಂದ ಎಸ್.ಜಗನ್ನಾಥ್ ನಿರ್ದೇಶಿಸುತ್ತಿದ್ದ ಚಿತ್ರ ಕಾರಣಾಂತರದಿಂದ ನಿಂತು ಹೋಗಿತ್ತು. ವಿಠಲ್ ಇದನ್ನು ಪೂರ್ಣಗೊಳಸಿ ಕೊಟ್ಟರೂ ತಮ್ಮ ಹೆಸರನ್ನು ಹಾಕಿಕೊಳ್ಳಲಿಲ್ಲ. ಹಾಗೇ ತಮ್ಮ ಮಿತ್ರ ವಿಠಲಾಚಾರ್ಯರು ಟೈಫಾಯ್ಡ್ ಕಾಹಿಲೆಗೆ ಒಳಗಾದಾಗ ಅವರು ನಿರ್ದೇಶಿಸುತಿದ್ದ ‘ವೀರ ಕೇಸರಿ’ ಚಿತ್ರವನ್ನು ಪೂರ್ಣಗೊಳಿಸಿಕೊಟ್ಟಿದ್ದರು. ‘ಧರ್ಮ ವಿಜಯ’ ಚಿತ್ರದ ಮೂಲಕ ವಿಠಲ್ ಅವರಿಗೆ ಹರಿಣಿಯವರ ಕುಟುಂಬದ ಜೊತೆಗೆ ನಿಕಟವಾದ ಸಂಪರ್ಕ ಬೆಳೆಯಿತು. ಹರಿಣಿಯವರ ತಂದೆ ಶ್ರೀನಿವಾಸ ಫಣಿಯಾಡಿ ಸ್ವಾಂತ್ರ್ಯ ಹೋರಾಟಗಾರರಾಗಿದ್ದರು. ತತ್ವಶಾಸ್ತ್ರದಲ್ಲಿ ಘನ ವಿದ್ವಾಂಸರಾಗಿದ್ದರು. ವಿಠಲ್‍ಗೆ ಅವರ ಜೊತೆ ನಿಕಟ ಒಡನಾಟ ಬೆಳೆಯಿತು. ಹೀಗಿರುವಾಗಲೇ ಫಣಿಯಾಡಿಯವರು ಹೃದಯಾಘಾತದಿಂದ ನಿಧನರಾದರು. ವಿಠಲ್ ಅವರೇ ಮನೆಯ ಹಿರಿಯರಾಗಿ ಅಪರಕರ್ಮಗಳ ನೇತೃತ್ವ ವಹಿಸಿದರು. ಕೊನೆಯ ದಿನ ಮಕ್ಕಳೆಲ್ಲರೂ ತಿರುಪತಿಯ ಪದ್ಮ ಸರೋವರದ ಉತ್ತರಾದಿ ಮಠದಲ್ಲಿ ಮಾತಾನಾಡುತ್ತಿರುವಾಗ ವಿಠಲ್ ಅವರ ಹಿರಿಯ ಮಗ ವಾದಿರಾಜ್ ‘ತಂದೆಯವರ ನೆನಪಿನಲ್ಲಿ ಚಿತ್ರ ತೆಗೆಯುವ ಪ್ರಸ್ತಾಪವನ್ನು ಇಟ್ಟರು’. ವಿಠಲ್ ಅದಕ್ಕೆ ಒಪ್ಪಿಕೊಂಡರು. ಹೀಗೆ ಮೂಡಿ ಬಂದ ಚಿತ್ರವೇ ‘ನಂದಾ ದೀಪ’. ಇದರ ವಸ್ತುವೇ ವಿಶಿಷ್ಟವಾಗಿತ್ತು. ದೇಶಪ್ರೇಮದ ವಿಶಾಲ ಭೂಮಿಕೆಯಲ್ಲಿ ಸಂಬಂಧಗಳ ತಾಕಲಾಟ, ದಾಂಪತ್ಯದಲ್ಲಿ ವಯಸ್ಸಿನ ಅಂತರದಿಂದ ಉಂಟಾಗುವ ಬಿಕ್ಕಟ್ಟು ಮೊದಲಾದವನ್ನು ಇಲ್ಲಿ ಚರ್ಚಿಸಲಾಗಿತ್ತು. ವೆಂಕಟರಾಜು ಅವರ ಸಂಗೀತ ನಿರ್ದೇಶನದಲ್ಲಿ ಗೀತೆಗಳೂ ಸೊಗಸಾಗಿ ಮೂಡಿ ಬಂದಿದ್ದವು. ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು.
ವಿಠಲಾಚಾರ್ಯರು ನಿರ್ದೇಶಿಸಿದ್ದ ‘ವೀರ ಕೇಸರಿ’ ಚಿತ್ರವನ್ನು ವಿಠಲ್ ಅವರು ಪೂರ್ಣಗೊಳಿಸಿದ್ದರೂ ತಮ್ಮ ಹೆಸರನ್ನು ಹಾಕಿಕೊಂಡಿರಲಿಲ್ಲ. ಹೀಗಾಗಿ ವಿಠಲಾಚಾರ್ಯರು ತಾವು ನಿರ್ಮಿಸಿದ ಮುಂದಿನ ಚಿತ್ರವನ್ನು ನಿರ್ದೇಶಿಸುವಂತೆ ವಿಠಲ್ ಅವರನ್ನು ಕೋರಿಕೊಂಡರು. ಹೀಗೆ ಮೂಡಿ ಬಂದ ಚಿತ್ರ ‘ಮಂಗಳ ಮಹೂರ್ತ’ ಕುಷ್ಟರೋಗದ ಸಮಸ್ಯೆಯನ್ನು ಕುರಿತಾದ ಈ ಚಿತ್ರವೂ ರಾಷ್ಟ್ರಪ್ರಶಸ್ತಿ ಪಡೆಯಿತು. ಕೊರಟಿ ಶ್ರೀನಿವಾಸ ರಾಯರು ಐದು ಕಾದಂಬರಿಗಳ ಸರಣಿಯನ್ನು ಬರೆದಿದ್ದರು. ಅದರಲ್ಲಿ ನಾಲ್ಕು ತಲೆಮಾರುಗಳ ಕಥೆ ಇತ್ತು. ಅದರಲ್ಲಿ ಆಧುನಿಕತೆಗೆ ತೆರೆದು ಕೊಳ್ಳಲು ಬಯಸುವ ಆದರೆ ಅದರ ಸ್ವರೂಪವನ್ನು ಅರಿಯಲು ಶ್ರಮಿಸುವ ಲೀಲಾವತಿಯ ಕಥೆ ಇತ್ತು. ಸವಾಲಿನ ಈ ವಸ್ತುವನ್ನು ಕೊರಟಿಯವರ ತಮ್ಮ ಕೆ.ಎಸ್.ಜಗನ್ನಾಥ್ ಚಿತ್ರವಾಗಿಸಲು ಉದ್ದೇಶಿಸಿದರು. ಇದಕ್ಕಾಗಿ ವಿಠಲ್ ಅವರನ್ನು ಸಂಪರ್ಕಿಸಿದರು. ಈ ಸವಾಲನ್ನು ಒಪ್ಪಿಕೊಂಡ ವಿಠಲ್ ಅದನ್ನು ಭಿನ್ನವಾಗಿ ಚಿತ್ರಿಸಿದರು. ಹಲವು ಸೂಕ್ಷ್ಮಗಳನ್ನು ಹೊಂದಿದ್ದ ‘ಮಿಸ್ ಲೀಲಾವತಿ’ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಚಿಂತನಾ ಕ್ರಮವನ್ನು ನೀಡಿತು. ತಲೆ ಬಗ್ಗಿಸಿ ಕಣ್ಣನ್ನು ಪಟ ಪಟ ಅಲ್ಲಾಡಿಸುತ್ತಾ ಕುಗ್ಗಿದ ಧ್ವನಿಯಲ್ಲಿ ಮಾತನಾಡುವ ಸ್ತ್ರೀ ಪಾತ್ರಗಳಿದ್ದ ಕಡೆ ಅದು ಒಂದು ಅರ್ಥದಲ್ಲಿ ‘ಸಾಂಸ್ಕೃತಿಕವಾದ ಶಾಕ್’ ನೀಡಿತು. ಮುಖ್ಯವಾದ ಸಂಗತಿ ‘ಮಿಸ್ ಲೀಲಾವತಿ’ ಚಿತ್ರ ವಿಮರ್ಶಕರ ಮನ್ನಣೆಯನ್ನು ಗಳಿಸಿ ವಿಠಲ್ ಅವರಿಗೆ ಮೂರನೇ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟಂತೆ ಜನಮನ್ನಣೆಯನ್ನೂ ಪಡೆದುಕೊಂಡು ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಶತದಿನೋತ್ಸವನ್ನು ಕಂಡಿತು.
‘ಮಿಸ್ ಲೀಲಾವತಿ’ ಚಿತ್ರದ ಮೂಲಕ ಆಧುನಿಕ ಹೆಣ್ಣಿನ ಒತ್ತಡಗಳನ್ನು ಹಿಡಿದಿದ್ದ ವಿಠಲ್ ಪರಂಪರಾಗತ ನಂಬಿಕೆಗಳ ನೆಲೆಗಟ್ಟಿನ ಮೂಲಕ ಹೆಣ್ಣನ್ನು ಗುರುತಿಸಲು ಮಾಡಿದ ಪ್ರಯತ್ನ ‘ಪ್ರೇಮ ಮಯಿ’. ಈ ಚಿತ್ರಕ್ಕೆ ಮಲೆಯಾಳಂನ ‘ಕುಟುಂಬಿನಿ’ ಪ್ರೇರಣೆ ನೀಡಿತ್ತು. ಇದನ್ನೂ ಜನ ಒಪ್ಪಿಕೊಂಡರು. ಬಿಮಲ್ ಮಿತ್ರ ಅವರ ‘ನೂತನ್ ಜೀವನ್’ ಎಂಬ ಕಾದಂಬರಿಯಿಂದ ಪ್ರೇರಿತರಾದ ವಿಠಲ್ ಅದನ್ನು ಚಿತ್ರವಾಗಿಸಲು ಬಯಸಿದರು. ಅಲ್ಲಿಯವರೆಗೆ ಹಾಸ್ಯ ಚಿತ್ರಗಳೆಂದರೆ ತೆಳುಪದರದ ನಗೆಚಾಟಿಕೆಗಳೇ ಆಗಿದ್ದವು. ನಗುವಿನೊಳಗೆ ಅಳುವಿನ ಬಿಂಬ ಮೂಡಿಸುವ ಬ್ಲಾಕ್ ಕಾಮಿಡಿಯ ಜೀವನ ದರ್ಶನ ಬಂದಿರಲಿಲ್ಲ. ‘ನಕ್ಕರದೇ ಸ್ವರ್ಗ’ ಇಂತಹ ಪ್ರಯತ್ನವಾಯಿತು. ಇಲ್ಲಿ ವರ್ಗ ಸಂಘರ್ಷದ ಎಳೆಗಳಿದ್ದವು. ತಲೆಮಾರುಗಳ ತಳಮಳಗಳಿದ್ದವು. ಅಸ್ವಿತ್ವದ ಪ್ರಶ್ನೆಯಿತ್ತು. ಎಲ್ಲವನ್ನೂ ಹಾಸ್ಯಲೇಪನದಲ್ಲಿ ಹೇಳಲಾಗಿತ್ತು. ನರಸಿಂಹ ರಾಜು ಮತ್ತು ನಾಗೆಂದ್ರ ರಾಯರು ಪೈಪೋಟಿಯ ಅಭಿನಯವನ್ನು ನೀಡಿ ವಿಠಲ್ ಅವರ ಪರಿಕಲ್ಪನೆಯನ್ನು ಸಾಕಾರಗೊಳಸಿದ್ದರು. ಆ ವರ್ಷದಿಂದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡುವ ಪರಂಪರೆ ರೂಪುಗೊಂಡಿತು. ‘ನಕ್ಕರದೇ ಸ್ವರ್ಗ’ ಚಿತ್ರಕ್ಕೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿತು. ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಯಾವ ಚಿತ್ರಕ್ಕೂ ನೀಡಲಾಗಲಿಲ್ಲ. ನಂತರ ವಿಠಲ್ ತಿಳಿ ಹಾಸ್ಯಲೇಪನದ ‘ಕಣ್ಣಾ ಮುಚ್ಚಾಲೆ’ ಚಿತ್ರವನ್ನು ನಿರ್ದೇಶಿಸಿದರು. ಶ್ರಮಜೀವಿಗಳ ಸ್ವಾಭಿಮಾನದ ಕತೆ ‘ಮನಸ್ಸಿದ್ದರೆ ಮಾರ್ಗ’ ಚಿತ್ರವನ್ನು ನಿರ್ದೇಶಿಸುವ ಮೂಲಕ ತಮ್ಮ ತಾತ್ವಿಕತೆಯ ವ್ಯಾಪ್ತಿಯನ್ನು ವಿಠಲ್ ಇನ್ನಷ್ಟು ಹಿಗ್ಗಿಸಿಕೊಂಡರು. ಬ್ಯಾಕ್ ಪ್ರೊಜೆಕ್ಷನ್ ತಂತ್ರವನ್ನು ಬಳಸಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕಿದೆ.

ಕಾದಂಬರಿಯಾಧಾರಿತ ಚಿತ್ರವನ್ನು ನಿರ್ದೇಶಿಸ ಬೇಕು ಎನ್ನುವುದು ವಿಠಲ್ ಅವರ ಬಹುದಿನದ ಹಂಬಲವಾಗಿತ್ತು. ತಮ್ಮ ನಿರ್ಮಾಪಕರ ಸುಂದರಲಾಲ್ ಮೆಹತಾ ಅವರ ಬಳಿ ಮುಂದಿನ ಚಿತ್ರ ಕಾದಂಬರಿಯಾಧಾರಿತ ಎಂದು ಖಚಿತವಾಗಿ ಹೇಳಿ ಬಿಟ್ಟಿದ್ದರು. ಇದೇ ವೇಳೆಗೆ ಮೆಹತಾ ಅವರ ಬಳಿ ಹಣಕಾಸಿನ ನೆರವನ್ನು ಕೇಳಿಕೊಂಡು ಆರ್.ನಾಗೇಂದ್ರ ರಾಯರು ತ್ರಿವೇಣಿಯವರ ಕಾದಂಬರಿಯನ್ನು ಆಧರಿಸಿದ್ದ ‘ಹಣ್ಣೆಲೆ ಚಿಗುರಿದಾಗ’ ವಸ್ತುವನ್ನು ತೆಗೆದುಕೊಂಡು ಬಂದರು. ಅವರನ್ನು ಒಪ್ಪಿಸಿ ವಿಠಲ್ ಈ ಚಿತ್ರವನ್ನು ನಿರ್ದೇಶಿಸುವಂತೆ ವ್ಯವಸ್ಥೆಯನ್ನು ಮೆಹತಾ ಮಾಡಿದರು. ನಾಗೇಂದ್ರ ರಾಯರೇ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ವಿಧವಾ ವಿವಾಹ ಮತ್ತು ಸ್ತ್ರೀ ಶಿಕ್ಷಣದ ವಸ್ತುವನ್ನು ಹೊಂದಿದ್ದ ಚಿತ್ರದಲ್ಲಿ ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿಯನ್ನು ವಿಠಲ್ ತಂದರು. ಇದನ್ನು ಭಾವನಾತ್ಮಕವಾಗಿಸದೆ ವೈಚಾರಿಕವಾಗಿ ಹಿಡಿದಿಟ್ಟರು. ಜನ ಮೆಚ್ಚಿಗೆಯನ್ನು ಪಡೆದ ಈ ಚಿತ್ರ ಐದು ರಾಜ್ಯ ಪ್ರಶಸ್ತಿಗಳನ್ನು ಪಡೆದರೆ ಅದೇ ವರ್ಷ ವಿಠಲ್ ನಿರ್ದೇಶನದ ‘ಮಾರ್ಗದರ್ಶಿ’ ಚಿತ್ರಕ್ಕೆ ಮೂರು ರಾಜ್ಯ ಪ್ರಶಸ್ತಿಗಳು ಬಂದವು. ಒಟ್ಟು ಎಂಟು ರಾಜ್ಯ ಪ್ರಶಸ್ತಿಗಳನ್ನು ವಿಠಲ್ ಅವರಿಗೆ ತಂದು ಕೊಟ್ಟ 1968-69ನೇ ಸಾಲು ಸ್ಮರಣೀಯ ಎನ್ನಿಸಿಕೊಂಡಿತು.
ವಿಠಲ್ ಅವರಿಗೆ ತ.ರಾ.ಸು ಅವರ ‘ಮಾರ್ಗದರ್ಶಿ’ ಕಾದಂಬರಿ ಬಹಳ ಇಷ್ಟವಾಗಿತ್ತು. ಗ್ರಾಮಗಳ ಮಹತ್ವವನ್ನು ಹೇಳುವ ವಸ್ತುವಿಗೆ ಗಾಂಧಿ ಚಿಂತನೆಗಳ ಎಳೆಗಳನ್ನು ಸೇರಿಸಿ ವಿಠಲ್ ಚಿತ್ರ ನಿರ್ದೇಶಿಸಿದರು. ಬಾಲಕೃಷ್ಣ ಅವರು ನಿರ್ಮಿಸುತ್ತಿದ್ದ ‘ಅಭಿಮಾನ್’ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಯಿತು. ಈ ಚಿತ್ರದಲ್ಲಿ ಮನ್ನಾ ಡೇ ‘ಅಣು ಅಣುವಿನಲ್ಲಿ’ ಎಂಬ ಗೀತೆಯನ್ನು ಹಾಡಿದರು. ಅವರು ಮದರಾಸಿಗೆ ಬರಲು ಆಗದಿದ್ದರಿಂದ ಟ್ರ್ಯಾಕ್ ಇಲ್ಲಿಯೇ ರೂಪಿಸಿ ಗೀತೆಯನ್ನು ಮಾತ್ರ ಮುಂಬೈನಲ್ಲಿ ಧ್ವನಿ ಮುದ್ರಿಸಿ ಕೊಳ್ಳಲಾಯಿತು. ಇಂತಹ ಪ್ರಯೋಗ ನಡೆದಿದ್ದು ಅದೇ ಮೊದಲು. ಇಂತಹ ಹಲವು ಪ್ರಯೋಗಗಳಿಗೆ ವೇದಿಕೆಯಾದ ‘ಮಾರ್ಗದರ್ಶಿ’ ಗಲ್ಲಾ ಪೆಟ್ಟಿಗೆಯಲ್ಲಿಯೂ ಗೆಲುವನ್ನು ಸಾಧಿಸಿತು. ‘ಚಿತ್ರಶ್ರೀ ಇಂಟರ್‌ನ್ಯಾಷನಲ್‌ನ ಶ್ರೀನಿವಾಸ್ ಮತ್ತು ಪ್ರಸಾದ್ ಆರ್ಯಾಂಭ ಪಟ್ಟಾಭಿಯವರ ‘ಎರಡು ಮುಖ’ ಕಾದಂಬರಿಯನ್ನು ಚಲನಚಿತ್ರವಾಗಿಸಲು ಬಯಸಿ ವಿಠಲ್ ಅವರನ್ನು ಸಂಪರ್ಕಿಸಿದರು. ಅದು ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ರೋಗದ ಕುರಿತ ಚಿತ್ರವಾಗಿತ್ತು. ವಿಠಲ್ ಬೆಂಗಳೂರಿನ ನಿಮ್ಹಾನ್ಸ್ ಮಾನಸಿಕ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರೊಡನೆ ಚರ್ಚಿಸಿ ಈ ಕಾಹಿಲೆಯ ಸ್ವರೂಪವನ್ನು ಅರಿತು ಈ ಕುರಿತು ಜಾಗೃತಿ ಉಂಟು ಮಾಡುವುದು ಅಗತ್ಯ ಎಂದು ನಿರ್ಧರಿಸಿದರು. ಕುಟುಂಬದ ಒಳಿತಿಗಾಗಿ ತನ್ನ ವೈಯಕ್ತಿಕ ಜೀವನವನ್ನು ಕಳೆದುಕೊಂಡ ಯುವತಿಯ ಮನಸ್ಸು ಎರಡು ಕವಲಾಗಿ ಒಡೆಯುವುದರಿಂದ ಉಂಟಾಗುವ ಸಮಸ್ಯೆಗಳನ್ನು ಚಿತ್ರ ಭಾವಾತಿರೇಕವಿಲ್ಲದೆ ನಿರೂಪಣೆಗೊಂಡಿತ್ತು.
ಚಿತ್ರದ ಒಂದು ದೃಶ್ಯದಲ್ಲಿ ಟೆಲಿಫೋನ್ ಅಪರೇಟರ್ ಆಗಿರುವ ನಾಯಕಿ ತನ್ನ ಕಾರ್ಯ ನಿರ್ವಹಿಸುತ್ತಿರುವಾಗ ಅವಳ ಮನದಲ್ಲಿ ಸ್ವಚ್ಚಂದತೆಯ ಸೆಳೆತ ಕಾಣಿಸಿ ಕೊಳ್ಳುತ್ತದೆ. ಅದನ್ನು ಎರಡು ಚಿತ್ರಿಕೆಯಾಗಿ ಬಳಸಿ ಓವರ್ ಎಕ್ಸ್‍ಪೋಷರ್ ಮಾಡಿದರು. ಇದರಿಂದ ಅವಳ ವ್ಯಕ್ತಿತ್ವದಲ್ಲಿನ ಬಿರುಕುಗಳು ಪ್ರೇಕ್ಷಕರ ಗಮನಕ್ಕೆ ಬರುವಂತಾಯಿತು. ಇಂತಹ ಹಲವು ತಂತ್ರಗಳಿಂದ ‘ಎರಡು ಮುಖ’ ಇಂದಿಗೂ ಪ್ರಯೋಗಶೀಲ ಚಿತ್ರವಾಗಿದೆ. ಲಂಡನ್‍ನಲ್ಲಿ ವಿಠಲ್ ‘ವಿಟ್ನಸ್ ಫಾರ್ ದಿ ಪ್ರಾಸಿಕ್ಯೂಷನ್’ ಚಿತ್ರವನ್ನು ಮಹಾರಾಣಿಯೊಂದಿಗೆ ನೋಡಿದ್ದರು. ಅದನ್ನು ಕನ್ನಡದಲ್ಲಿ ನಿರ್ದೇಶಿಸುವ ಅವಕಾಶ ಅವರಿಗೆ ಒದಗಿತು. ‘ಯಾರು ಸಾಕ್ಷಿ’ ಚಿತ್ರದ ಹೆಸರು. ಮುಂದೆ ಕನ್ನಡದ ಪ್ರತಿಭಾವಂತ ನಾಯಕಿ ಎಂದು ಹೆಸರು ಮಾಡಿದ ಮಂಜುಳಾ ಈ ಚಿತ್ರದ ಮೂಲಕ ನಾಯಕಿಯಾದರು. ಕುಟುಂಬ ಯೋಜನೆಯ ಮಹತ್ವವನ್ನು ಹೇಳುವ ‘ಬಾಳ ಪಂಜರ’ ವಿಠಲ್ ನಂತರ ನಿರ್ದೇಶಿಸಿದ ಚಿತ್ರ. ಕರ್ನಾಟಕ ಕಂಡ ಶ್ರೇಷ್ಠ ರಾಜಕಾರಣಿ ಕೆ.ವಿ.ಶಂಕರೇ ಗೌಡ ಅವರು ‘ಕೂಡಿ ಬಾಳೋಣ’ ಎಂಬ ನಾಟಕವನ್ನು ಬರೆದಿದ್ದರು. ಅದನ್ನು ಚಿತ್ರವಾಗಿಸಲು ವಿಠಲ್ ಅವರ ಸಹಕಾರ ಕೋರಿದರು. ಸರಳ ರೇಖಾತ್ಮಕವಾಗಿದ್ದ ನಾಟಕಕ್ಕೆ ಸಂಕೀರ್ಣತೆ ಸೇರಿಸಿ ವಿಠಲ್ ನಿರ್ದೇಶಿಸಿದರು. ಈ ಚಿತ್ರದ ಮೂಲಕ ಪ್ರತಿಭಾವಂತ ಗಾಯಕ ಸಿ.ಅಶ್ವಥ್ ಬೆಳ್ಳಿತೆರೆಗೆ ಬಂದರು.

ಮಹಾಂತೇಶ ಶಾಸ್ತ್ರಿಗಳ ‘ಅಣ್ಣ-ಅತ್ತಿಗೆ’ ನಾಟಕವನ್ನು ಅದೇ ಹೆಸರಿನಲ್ಲಿ ವಿಠಲ್ ಚಿತ್ರವಾಗಿ ನಿರ್ದೇಶಿಸಿದರು. ಇಲ್ಲಿ ಹಾವಿನ ರೂಪಕವನ್ನು ಬಳಸಿ ಅವರು ಸಂಕೀರ್ಣತೆ ತಂದಿದ್ದರು. ನರಸಿಂಹ ರಾಜು ಅವರು ಇನ್ನೊಂದು ಹಾಸ್ಯಚಿತ್ರವನ್ನು ನಿರ್ಮಿಸಲು ಬಯಸಿ ವಿಠಲ್ ಅವರನ್ನು ಸಂಪರ್ಕಿಸಿದರು. ಮರೆಗುಳಿ ಪ್ರೊಫೆಸರ್ ಒಬ್ಬರ ಪೇಚಾಟದ ಕಥೆಯನ್ನು ನರೇಂದ್ರ ಬಾಬು ರಚಿಸಿದ್ದರು. ಅದಕ್ಕೆ ವಿಠಲ್ ಹೆಣ್ಣು ಮಕ್ಕಳ ವಿವಾಹದ ಆಗಿನ ಸಾಮಾಜಿಕ ಸಮಸ್ಯೆ, ಆಧುನಿಕತೆಯ ವಿನ್ಯಾಸ ಹೀಗೆ ಹಲವು ಎಳೆಗಳನ್ನು ಸೇರಿಸಿ ಸಂಕೀರ್ಣತೆಯನ್ನು ತಂದರು. ಹೀಗೆ ರೂಪುಗೊಂಡ ಚಿತ್ರದ ಹೆಸರು ‘ಪ್ರೊಫೆಸರ್ ಹುಚ್ಚೂರಾಯ’. ಇದರಲ್ಲಿ ಗೀತೆಗಳ ಚಿತ್ರಿಕರಣದಲ್ಲಿ ವಿಠಲ್ ಹಲವು ಪ್ರಯೋಗಗಳನ್ನು ಮಾಡಿದರು. ‘ಹರೇ ರಾಮ ಹರೇ ಕೃಷ್ಣ’ ಕ್ರೇಜ್ ಕುರಿತ ಗೀತೆಯಲ್ಲಿ ಭಕ್ತಿ ಚಳವಳಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಿದ್ದರೆ. ‘ದೂರ ದೂರ ಅಲ್ಲೆ ನಿಲ್ಲಿ’ ಗೀತೆಯಲ್ಲಿ ಪ್ರೇಮದ ಶಾಶ್ವತ ಮತ್ತು ಆಕರ್ಷಣೆಯ ನೆಲೆಗಳನ್ನು ವಿವಿಧ ಕೋನಗಳ ಮೂಲಕ ಭಿನ್ನವಾಗಿಸಿ ತಾತ್ವಿಕ ಗ್ರಹಿಕೆಗೆ ಪ್ರಯತ್ನಿಸಲಾಗಿದೆ. ‘ಕೂಡ ಬಂದಿದೆ ಕಂಕಣ’ ಗಪದ್ಯದ ಶೈಲಿಯಲ್ಲಿ ರೂಪುಗೊಂಡ ಗೀತೆಯಾಗಿದ್ದು ಮದುವೆಯ ಸಂಭ್ರಮವನ್ನು ಕಥೆಯ ಭಾಗವಾಗಿಯೇ ಮೂಡಿಸಲಾಗಿದೆ.
‘ಪ್ರೊಫೆಸರ್ ಹುಚ್ಚೂರಾಯ’ ಬ್ಲಾಕ್ ಕಾಮಿಡಿ ಅಲ್ಲದಿದ್ದರೂ ನಗುವಿಗೇ ಸೀಮಿತವಾಗದೆ ಚಿಂತನಶೀಲ ನೆಲೆಗಳನ್ನು ಹಿಡಿಯುವ ಮೂಲಕ ಭಿನ್ನವಾಯಿತು. ಯಶಸ್ಸನ್ನೂ ಗಳಿಸಿತು. ವಿಠಲ್ ತ.ರಾ.ಸು ಅವರ ಗಾಳಿಮಾತು ಕಾದಂಬರಿಯನ್ನು ಹಿಂದಿಯಲ್ಲಿ ಚಿತ್ರವಾಗಿಸಲು ಪ್ರಯತ್ನಿಸಿದರು. ಆದರೆ ಅಲ್ಲಿನ ಚಿತ್ರೀಕರಣ ದೀರ್ಘ ಕಾಲ ಹಿಡಿಯುವುದನ್ನು ಕಂಡು ನಿರಾಶರಾಗಿ ಹಿಂದಿರುಗಿದರು. ಹೀಗಿರುವಾಗ ಜೋಸೆಫ್ ಡಿಸೋಜ ಎನ್ನುವವರು ಅವರನ್ನು ಸಂಪರ್ಕಿಸಿ ಭಿನ್ನ ಮಾದರಿ ಚಿತ್ರವನ್ನು ನಿರ್ಮಿಸುವ ಬಯಕೆಯನ್ನು ಮುಂದಿಟ್ಟರು. ಎಂ.ಎಸ್.ನಾಡಿಗೇರರ ಕಥೆಯೊಂದು ವಿಠಲ್ ಅವರನ್ನು ಸೆಳೆದಿತ್ತು. ‘ಮಿಸ್ ಲೀಲಾವತಿ’ಯ ತಾತ್ವಿಕತೆಯನ್ನು ಮುಂದುರವರಿಸುವಂತಿದ್ದ ಇದು ಇನ್ನಷ್ಟು ಬಹುಮುಖಿ ವ್ಯಾಪ್ತಿಯನ್ನು ಹೊಂದಿತ್ತು. ಮದುವೆಯಾದ ಮೊದಲ ರಾತ್ರಿಯೇ ಓಡಿ ಹೋದ ಗಂಡ. ಅದಕ್ಕೆ ಕಾರಣಗಳು. ನ್ಯಾಯಾಲಯದ ಕಟೆಕಟೆ ಏರಿದ ಈ ಪ್ರಕರಣವನ್ನು ನಿರ್ವಹಿಸುವ ವಕೀಲ ದಂಪತಿಗಳು. ಇದು ಅವರ ಲೈಂಗಿಕ ಜೀವನದ ಮೇಲೆ ಕೂಡ ಮಾಡುವ ಪರಿಣಾಮ ಹೀಗೆ ‘ಪುನರ್ಮಿಲನ’ ಹಲವು ನೆಲೆಗಳಲ್ಲಿ ವಿಠಲ್ ಅವರ ಮುಖ್ಯವಾದ ಚಿತ್ರವಾಗಿತ್ತು. ಆದರೆ ಕಲಾವಿದರು ಅವರ ನಿರೀಕ್ಷೆಗಳನ್ನು ಸಾಕಾರಗೊಳಿಸಲಿಲ್ಲ. ಈ ಕಾರಣವೂ ಸೇರಿದಂತೆ ಬಹಳ ಮುಖ್ಯವಾದ ಈ ಚಿತ್ರದ ಕುರಿತು ಚರ್ಚೆಗಳು ನಡೆಯಲಿಲ್ಲ.
ಇಲ್ಲಿಂದ ಮುಂದೆ ವಿಠಲ್ ‘ಬಾಳ ಪಂಜರ’ ಮತ್ತು ‘ವರದಕ್ಷಿಣೆ’ ಎರಡು ಚಿತ್ರಗಳನ್ನು ನಿರ್ದೇಶಿಸಿದರು. ಅವರ ಮಹತ್ವಾಕಾಂಕ್ಷೆಯ ‘ಭೈರವಿ ಕೆಂಪೇಗೌಡ’ ಚಿತ್ರ ಪೂರ್ಣಗೊಳ್ಳಲಿಲ್ಲ. ಬದಲಾದ ಚಿತ್ರರಂಗದ ಕುರಿತು ನಿರಾಶರಾದ ವಿಠಲ್ ತಮ್ಮ ಕೊನೆಯ ದಿನಗಳನ್ನು ಮಗಳು ಕೆಲಸ ಮಾಡುತ್ತಿದ್ದ ಬರೋಡಾದಲ್ಲಿ ಕಳೆದರು. ಇಲ್ಲಿದ್ದಾಗಲೇ ‘ಚಲನ ಚಿತ್ರ ನಿರ್ಮಾಣದ’ ಕುರಿತು ಮಹತ್ವದ ಕೃತಿಯನ್ನು ರಚಿಸಿದರು. 1981ರಲ್ಲಿ ಭಾರತೀಯ ಚಲನಚಿತ್ರ ಸುವರ್ಣ ಮಹೋತ್ಸವದಲ್ಲಿ 1984ರಲ್ಲಿ ಕನ್ನಡ ವಾಕ್ಚಿತ್ರ ಸುವರ್ಣ ಮಹೋತ್ಸವದಲ್ಲಿ ಸನ್ಮಾನಿತರಾದ ವಿಠಲ್ 1991ರಲ್ಲಿ ಜೀವಮಾನದ ಸಾಧನೆಗೆ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ್ ಗೌರವವನ್ನು ಪಡೆದಿದ್ದರು. ಭಾರತೀಯ ಚಿತ್ರರಂಗವನ್ನು ಗುಣನಾತ್ಮಕವಾಗಿ ಬದಲಾಯಿಸಿದ ವಿಠಲ್ 1996ರ ನವಂಬರ್ 26ರಂದು ಬರೋಡದಲ್ಲಿ ನಿಧನರಾದರು.
