ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೃದಯದಲಿ ಇದೇನಿದು ನದಿಯೊಂದು ಓಡಿದೆ..

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಉಪೇಂದ್ರಕುಮಾರ್ ನಿರಂತರವಾಗಿ ಇನ್ನೋವೇಟೀವ್‌ ಗುಣವನ್ನು ಅಳವಡಿಸಿಕೊಂಡಿದ್ದ ಸಂಗೀತ ನಿರ್ದೇಶಕ. ಅವರು ಸಂಗೀತ ನೀಡಿದ 18 ಚಿತ್ರಗಳು 25 ವಾರ ಓಡಿರುವುದು ಒಂದು ರೀತಿಯಲ್ಲಿ ದಾಖಲೆಯೇ!

ಉಪೇಂದ್ರಕುಮಾರ್ ಅವರು ದೂರದ ಒರಿಸ್ಸಾದಿಂದ ಬಂದವರು.  ಹುಟ್ಟಿದ್ದು ಒರಿಸ್ಸಾದ ಅನಂಗ್‍ಪುರದಲ್ಲಿ 1941ರ ಜುಲೈ 18ರಂದು. ತಂದೆ ಲಕ್ಷ್ಮಣ್ ಸ್ವಾಮಿ. ಸಂಗೀತದ ಕಡೆಗೆ ಕೂಡ ಒಲವನ್ನು ಇಟ್ಟುಕೊಂಡವರು. ತಾಯಿ ನಾನ್‍ಚಾರಿಯಮ್ಮ. ಉಪೇಂದ್ರಕುಮಾರ್‍ ಅವರಿಗೆ ಇಬ್ಬರು ಅಕ್ಕಂದಿರು, ಒಬ್ಬತಮ್ಮ ಮತ್ತು ಒಬ್ಬ ತಂಗಿ. ತಂದೆ ಊರಿನ ಪುರೋಹಿತರು. ಜ್ಯೋತಿಷಿಗಳಾಗಿಯೂ ಹೆಸರು ಮಾಡಿದ್ದವರು. ಕುಗ್ರಾಮವಾದ ಅವರ ಊರಿನಿಂದ ಶಾಲೆಗೆ ಹತ್ತು ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇದರಿಂದಾಗಿ ಉಪೇಂದ್ರಕುಮಾರ್ ಏಳನೇ ತರಗತಿಗೇ ಓದನ್ನು ಬಿಟ್ಟರು. ಸೋದರಮಾವ ಅಪ್ಪಾರಾವ್ ಭುವನೇಶ್ವರದಲ್ಲಿದ್ದರು. ಅವರು ಸಿತಾರ್ ವಾದನದಲ್ಲಿ ಹೆಸರು ಮಾಡಿದ್ದರು. ಅವರ ಬಳಿ ಉಪೇಂದ್ರಕುಮಾರ್ ಸಿತಾರ್ ಕಲಿತರು. ಬಾಲಕೃಷ್ಣದಾಸ್ ಬಳಿ ಕರ್ನಾಟಕಿ, ದಿಗ್‍ಭಜನ್ ಸಿಂಗ್ ಬಳಿ ಪಾಶ್ಚಾತ್ಯ ಸಂಗೀತವನ್ನೂ ಕಲಿತಾಯಿತು. ಮುಂದೆ ಕಟಕ್‍ ಆಕಾಶವಾಣಿ ನಿಲಯದಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ಚೆನ್ನೈಗೆ ಬಂದರು. ಆದರೆ ಅವಕಾಶಗಳು ಸಿಕ್ಕಲಿಲ್ಲ. ಹೊಟ್ಟೆ ಪಾಡಿಗೆ ಸಂಗೀತ ಪಾಠ ಹೇಳಲು ಆರಂಭಿಸಿದರು. ಅವರಿಗೆ ವಿದ್ಯಾರ್ಥಿನಿಯಾಗಿ ದೊರೆತವರು ಎಸ್.ಪಿ.ಗೀತಾ. ಮುಂದೆ ಅವರು ಉಪೇಂದ್ರಕುಮಾರ್‍ ಅವರ ಮಡದಿ ಕೂಡ ಆದರು. ಅಲ್ಲಲ್ಲಿ ವಾದ್ಯಗಾರರ ಜೊತೆ ಕುಳಿತು ನುಡಿಸುವ ಅವಕಾಶ ಬಿಟ್ಟರೆ ಚಿತ್ರರಂಗ ಅವರ ಕಡೆಗೆ ಕಣ್ಣೆತ್ತಿ ಕೂಡ ನೋಡಲಿಲ್ಲ.

ಒಮ್ಮೆ ಡಾ.ರಾಜಕುಮಾರ್‍ ಅವರು ವಾಯ್ಸ್‍ ಡಬ್ಬಿಂಗ್‍ಗಾಗಿ ಮದ್ರಾಸಿನ ಗೋಲ್ಡನ್ ಸ್ಟುಡಿಯೋಕ್ಕೆ ಬಂದರು. ರೆಕಾರ್ಡಿಂಗ್‌ ರೂಂ ಖಾಲಿ ಇರದಿದ್ದ ಕಾರಣ ಸ್ಟುಡಿಯೋವನ್ನು ಒಂದು ಸುತ್ತು ಹಾಕಿದರು. ಆಗ ಅಲೆ ಅಲೆಯಾಗಿ ಠುಮ್ರಿ ಗಾಯನ ಕೇಳಿ ಬಂದಿತು. ಕರ್ನಾಟಕಿ ಸಂಗೀತದ್ದೇ ಸಾಮ್ರಾಜ್ಯ ಇರುವ ಮದ್ರಾಸಿನಲ್ಲಿ ಯಾರು ಹಿಂದೂಸ್ಥಾನಿ ಹಾಡುತ್ತಿರುವವರು ಎಂದು ಹೋಗಿ ನೋಡಿದರೆ ಯುವ ಗಾಯಕನೊಬ್ಬ ಕೋಣೆಯೊಂದರಲ್ಲಿ ಕುಳಿತು ತನ್ನಷ್ಟಕ್ಕೆ ಠುಮ್ರಿಯನ್ನು ಗುಣಗುಣಿಸುತ್ತಿದ್ದಾನೆ. ರಾಜಕುಮಾರ್‍ ಕಣ್ಮುಚ್ಚಿ ಸಂಗೀತವನ್ನು ಆಸ್ವಾದಿಸಿದರು. ಓಡಿ ಹೋಗಿ ನಿರ್ದೇಶಕ ವೈ.ಆರ್.ಸ್ವಾಮಿಯವರನ್ನು ಕರೆತಂದರು. ಪರಿಣಾಮ ಆ ಗಾಯಕ ಉಪೇಂದ್ರಕುಮಾರ್ ‘ಕಠಾರಿ ವೀರ’ ಚಿತ್ರದ ಸಂಗೀತ ನಿರ್ದೇಶಕರಾದರು. ಚಿತ್ರ ಗೀತೆಗಳೆಲ್ಲವೂ ಜನಪ್ರಿಯವಾದವು. ಅಲ್ಲಿಂದ ಮುಂದೆ ಉಪೇಂದ್ರಕುಮಾರ್‍ ಅವರಿಗೆ ರಾಜಕುಮಾರ್ ಎಂದರೆ ಗೌರವ. ರಾಜಕುಮಾರ್‍ ಅವರಿಗೂ ಅಷ್ಟೇ! ಅದು ಗುರು ಶಿಷ್ಯ ಸಂಬಂಧವಾಗಿ ಬದಲಾಯಿತು. ರಾಜಕುಮಾರ್‍ ಅವರ ಮಕ್ಕಳಿಗೂ ಉಪೇಂದ್ರಕುಮಾರ್ ಸಂಗೀತ ಕಲಿಸಿದರು. ಅಷ್ಟೇ ಅಲ್ಲ, ಉಪೇಂದ್ರಕುಮಾರ್ ಸಂಗೀತ ನೀಡುರುವ ರಾಜಕುಮಾರ್‍ ಅಭಿನಯದ ಇಪ್ಪತ್ತು ಚಿತ್ರಗಳು ಶತದಿನ ಸಂಭ್ರಮ ಕಂಡಿವೆ. ಅವುಗಳಲ್ಲಿ ಶಂಕರ್‍ಗುರು, ಅನುರಾಗ ಅರಳಿತು ಚಿತ್ರಗಳು 25 ವಾರಗಳ ಪ್ರದರ್ಶನ ಕಂಡಿವೆ. ರಾಜಕುಮಾರ್‍ ಅವರ ಇನ್ನೂರನೇ ಚಿತ್ರ ‘ದೇವತಾ ಮನುಷ್ಯ’ಕ್ಕೆ ಉಪೇಂದ್ರಕುಮಾರ್‍ ಅವರದೇ ಸಂಗೀತ. ಅವರು ಸಂಗೀತ ನೀಡಿದ 18 ಚಿತ್ರಗಳು 25 ವಾರ ಓಡಿರುವುದು ಒಂದು ರೀತಿಯಲ್ಲಿ ದಾಖಲೆಯೇ.

ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಸಪ್ತಪದಿ’ (1992) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಸಂಗೀತ ಸಂಯೋಜಕ ಉಪೇಂದ್ರಕುಮಾರ್, ನಟ ರಾಜಕುಮಾರ್, ಗೀತರಚನೆಕಾರ ಚಿ.ಉದಯಶಂಕರ್ ಇದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

‘ಹಿಂದೂಸ್ತಾನಿ ಸಂಗೀತದ ನೆಲೆಗಳನ್ನು ಆಳವಾಗಿ ಬಲ್ಲ ಉಪೇಂದ್ರಕುಮಾರ್ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ‘ಧ್ರುವತಾರೆ’ಚಿತ್ರದ ‘ಆ ರತಿಯೇ ಧರೆಗಿಳಿದಂತೆ’ ಗೀತೆಯಲ್ಲಿ ಮೂರು ಮ್ಯೂಸಿಕ್ ಸೆಗ್‍ಮೆಂಟ್‍ ಇದೆ, ಎಲ್ಲದರ ಸ್ಕೇಲ್‌ ಕೂಡ ಬೇರೆ ಬೇರೆ, ಈ ಹಾಡಿನಲ್ಲಿ ಕಲ್ಯಾಣಿ ಮತ್ತು ಷಣ್ಮುಖ ಪ್ರಿಯ ರಾಗಗಳು ಬೆಸೆದುಕೊಂಡ ಹಾವುಗಳಂತೆ ಸಾಗುವ ಈ ಹಾಡಿನಗತಿಯೇ ಕುತೂಹಲಕರವಾಗಿದೆ. ‘ಸಿಪಾಯಿ ರಾಮು’ಚಿತ್ರದ ‘ವಹ್ಹರೆ ಮೇರ ಮುರುಘ’ ಗೀತೆಯಲ್ಲಿ ಅವರು ಬಂಗಾಳಿ ಜನಪದ ಶೈಲಿಯನ್ನು ಬಳಿಸಿದರೆ ‘ಶಂಕರ್‍ಗುರು’ ಚಿತ್ರದ ‘ಏನೇನೋ ಆಸೆ’ಯಲ್ಲಿ ಕಾಶ್ಮೀರದ ಜನಪದ ಶೈಲಿ ಬಳಸಿದ್ದಾರೆ. ಠುಮರಿಗಳನ್ನು ಅದ್ಭುತವಾಗಿ ಬಳಿಸಿದ ಉಪೇಂದ್ರಕುಮಾರ್ ‘ಒಂದು ದಿನ ಎಲ್ಲಿಂದಲೋ’ದಂತಹ ಅಪರೂಪದ ಗೀತೆಯನ್ನು ಸೃಷ್ಟಿ ಮಾಡಿದರು. ಸಂಗೀತದ ಸಿದ್ದ ಮಾದರಿಯನ್ನು ಮುರಿಯುತ್ತಾ ಸಾಗುವ ಈ ಗೀತೆ ಒಂದು ರೀತಿಯಲ್ಲಿ ಅವಧೂತ ಗೀತೆ ಎನ್ನಿಸಿಕೊಂಡಿದೆ. ‘ಹೃದಯದಲಿ ಇದೇನಿದು’ ಗೀತೆಯಲ್ಲಿನ ಇಳಿಯುವ ಮಾದರಿಯಲ್ಲಿ ಪಲ್ಲಟ ಕಂಡುಕೊಳ್ಳುವ ಸ್ಕೇಲ್‍ ಅವರ ಇನ್ನೊಂದು ವಿಶಿಷ್ಟವಾದ ಸಾಧನೆ. ‘ಸತ್ಯಭಾಮೆ ಸತ್ಯಭಾಮೆ’, ‘ಗಿರಿನವಿಲು ಎಲ್ಲೋ’ ಇದಕ್ಕೆಉತ್ತಮ ಉದಾಹರಣೆಗಳು. ಪಲ್ಲವಿ ಮುಕ್ತಾಯದಲ್ಲೊಂದು ಪಾಸ್‌ ಕೊಡುವುದು ಅವರ ಶೈಲಿ, ‘ಸವಿ ಮಾತೊಂದ’, ‘ಏನೇನೋ ಆಸೆ’, ‘ಹೃದಯದಲಿ ಇದೇನಿದು’ ಮೊದಲಾದ ಗೀತೆಗಳು ಇದಕ್ಕೆ ಉದಾಹರಣೆ. ಇಂತಹ ಶಕ್ತಿಯಿಂದಲೇ ಅವರಿಗೆ ‘ಜೋಕೆ ನಾನು ಬಳ್ಳಿಯ ಮಿಂಚು’ ‘ಒಳಗೆ ಸೇರಿದರೆಗುಂಡು’ದಂತಹ ಕ್ಯಾಬರೆ ಹಾಡುಗಳನ್ನು ಕೂಡ ಸೃಷ್ಟಿಸುವುದು ಸಾಧ್ಯವಾಯಿತು.’

ಉಪೇಂದ್ರಕುಮಾರ್‍ ಅವರಿಗೆ ಗುಲಾಂ ಆಲಿ ಅವರ ಗಝಲ್‍ಗಳು ಎಂದರೆ ಬಹಳ ಇಷ್ಟ. ಹರಿ ಪ್ರಸಾದ್ ಚೌರಾಸಿಯಾ ಕೊಳಲು ಎಂದರೆ ಪ್ರಾಣ. ಅವರೂ ಚೌರಾಸಿಯಾ ಕಟಕ್‍ ಆಕಾಶವಾಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಅಂಶಗಳು ಅವರ ಸಂಗೀತ ಸಂಯೋಜನೆ ಮೇಲೆ ಪ್ರಭಾವ ಬೀರಿವೆ. ‘ಪ್ರೇಮದಕಾಣಿಕೆ’ ಚಿತ್ರದಲ್ಲಿ ಅವರು ಗಜಲ್‌ ಶೈಲಿಯಲ್ಲಿ ಸಂಯೋಜಿಸಿದ ‘ಇದು ಯಾರು ಬರೆದ ಕಥೆಯೋ’ ಎಂದು ವಿಶಿಷ್ಟವಾದ ಸಂಯೋಜನೆಯಾಗಿದೆ. ಉಪೇಂದ್ರಕುಮಾರ್‍ ಅವರಿಗೆ ಬೇರೆ ಬೇರೆ ರಾಜ್ಯದ ಸಂಗೀತಗಾರರ ನಿಕಟ ಪರಿಚಯವಿತ್ತು. ಅಲ್ಲಿನ ಸಂಗೀತದ ಶ್ರೇಷ್ಠತೆಯನ್ನುಅವರು ಚಿತ್ರಗೀತೆಗಳಲ್ಲಿ ತುಂಬಿದ್ದಾರೆ. ಪಂಜಾಬಿ ಶೈಲಿಯಲ್ಲಿ ‘ಸಿಪಾಯಿ ರಾಮು’ ಚಿತ್ರದ ‘ತಂಗಾಳಿ ಸಂಗೀತ ಹಾಡಿದೆ’ ಗೀತೆಯನ್ನು ಅವರು ಸಂಯೋಜಿಸಿದ್ದರೆ ‘ಶಂಕರ್‍ಗುರು’ ಚಿತ್ರದ ‘ಏನೋನೋ ಆಸೆ’ ಗೀತೆಯಲ್ಲಿ ಕಾಶ್ಮೀರಿ ಸ್ಟೈಲ್‌ ತಂದಿದ್ದಾರೆ. ‘ಧರ್ಮಸೆರೆ’ ಚಿತ್ರದ ‘ಮೂಕಹಕ್ಕಿಯು ಹಾಡುತಿದೆ’ ಗೀತೆಯಲ್ಲಿ ಒರಿಯಾ ಜನಪದದ ಗುಣ ತಂದಿದ್ದಾರೆ. ಇದರ ಜೊತೆಗೆ ಕನ್ನಡದ್ದೇ ಆದ ಕೆಲವು ದೇಸಿ ನೆಲೆಗಳೂ ಕೂಡ ಅವರಿಗೆ ಗೊತ್ತಿತ್ತು. ‘ನಂಜುಂಡಿಕಲ್ಯಾಣ’ಚಿತ್ರದಲ್ಲಿ ಮೋಹನ ರಾಗದ ಜನಪದ ನಡೆ ಬಳಸಿ ಸೃಷ್ಟಿಸಿದ ‘ಇನ್ನುಗ್ಯಾರೆಂಟಿ ನಂಜುಂಡಿಕಲ್ಯಾಣ’ ಒಂದು ಅಪರೂಪದ ರಚನೆ.

ಫಾಸ್ಟ್‌ ಟ್ರ್ಯಾಕ್ ಗೀತೆಗಳನ್ನು ನೀಡುವಲ್ಲಿ ಸಿದ್ದ ಹಸ್ತರು ಎನ್ನಿಸಿಕೊಂಡ ಉಪೇಂದ್ರಕುಮಾರ್ ಭಕ್ತಿಗೀತೆಗಳನ್ನು ನೀಡುವಲ್ಲಿಯೂ ಪರಿಣಿತರಾಗಿದ್ದು ಅವರ ಸಂಗೀತದ ರೇಂಜ್ ಎಷ್ಟು ದೊಡ್ಡದು ಎನ್ನುವುದನ್ನು ತೋರಿಸುತ್ತದೆ. ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಕೊಂಕಣಿ ಭಾಷೆಗಳಲ್ಲಿ ಕೂಡ ಅವರು ಸಂಯೋಜಿಸಿದ ಭಕ್ತಿಗೀತೆಗಳು ಜನಪ್ರಿಯವಾಗಿವೆ. ರಾಜಕುಮಾರ್‍ ಅವರ ಕಂಠಸಿರಿಯಲ್ಲಿ ಮೂಡಿ ಬಂದ ಮಂತ್ರಾಲಯಕೆ ಹೋಗೋಣ, ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಆಕಾರವೇನೋ, ಎಲ್ಲಿ ಹನುಮನೋ ಅಲ್ಲಿರಾಮನೋ ಗೀತೆಗಳು ಇಂದಿಗೂ ಜನ ಮೆಚ್ಚಿಗೆ ಪಡೆದಿವೆ. ‘ದೇವತಾ ಮನಷ್ಯ’ ಚಿತ್ರಕ್ಕೆ ಅವರು ಸಂಯೋಜಿಸಿದ ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ’  ಚಿತ್ರಗೀತೆಯಾದರೂ ಭಕ್ತಿಗೀತೆಯಷ್ಟೇ ಜನಪ್ರಿಯವಾಗಿದೆ. ಮೂಲತ: ಕನ್ನಡದವರಲ್ಲದ ಉಪೇಂದ್ರಕುಮಾರ್‍ ಕನ್ನಡ ಭಾವಗೀತೆಗಳಿಗೂ ಸೊಗಸಾಗಿ ರಾಗ ಸಂಯೋಜನೆ ಮಾಡಿರುವುದು ಇನ್ನೊಂದು ವಿಶೇಷ. ಅವರ ಸಂಯೋಜನೆಯಲ್ಲಿ ಮೂಡಿ ಬಂದಂತಹ ಅಂತರಂಗದಾ ಮೃದಂಗಾ, ಬಾರಿಸು ಕನ್ನಡ ಡಿಂಡಿಮವಾ, ತೇನವಿನಾ, ಎಲ್ಲಾದರೂ ಇರು ಎಂಥಾದರೂ ಇರು ಭಾವಗೀತೆಗಳು ಇಂದಿಗೂ ಜನಪ್ರಿಯವೇ. ಸಂಗೀತದಿಂದ ಮಾರಕ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಸಂಶೋಧಿಸಿದ್ದ ಉಪೇಂದ್ರಕುಮಾರ್ ನಿರಂತರವಾಗಿ ಇನ್ನೋವೇಟೀವ್‌ ಗುಣವನ್ನು ಅಳವಡಿಸಿಕೊಂಡಿದ್ದ ಸಂಗೀತ ನಿರ್ದೇಶಕರು. ಉಪೇಂದ್ರಕುಮಾರ್ ನಮ್ಮನ್ನುಅಗಲಿದ್ದು 2002ನೇ ಇಸವಿ ಜನವರಿ 24ರಂದು. ಆದರೆ ಅವರು ನೀಡಿದ ಮಧುರ ಗೀತೆಗಳ ಮೂಲಕ ನಮ್ಮನ್ನು ಸದಾ ಕಾಡುತ್ತಾ ಇರುತ್ತಾರೆ.

‘ಕಿತ್ತೂರಿನ ಹುಲಿ’ (1991) ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಚಿತ್ರಸಾಹಿತಿ ಆರ್‌.ಎನ್‌.ಜಯಗೋಪಾಲ್‌, ನಿರ್ದೇಶಕ ಸಾಯಿಪ್ರಕಾಶ್‌, ಸಂಗೀತ ಸಂಯೋಜಕ ಉಪೇಂದ್ರ ಕುಮಾರ್, ಗಾಯಕಿ ಸಂಗೀತಾ ಕಟ್ಟಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ