
ಚಿತ್ರೀಕರಣದಲ್ಲಿ ಆಗ ನನ್ನಲ್ಲಿರುತ್ತಿದ್ದ ಹುರುಪು, ಉತ್ಸಾಹ ನೆನಪಿಸಿಕೊಂಡರೆ ಈಗಲೂ ಖುಷಿಯಾಗುತ್ತದೆ. ಹೆಚ್ಚಿನ ತಂತ್ರಜ್ಞಾನ, ಅನುಕೂಲತೆಗಳು ಇಲ್ಲದ ಅಂದಿನ ಸಂದರ್ಭಗಳಲ್ಲಿ ಈ ಉತ್ಸಾಹವೇ ನಮ್ಮನ್ನು ಕಾಪಾಡುತ್ತಿದ್ದುದು. `ಅಮರಶಿಲ್ಪಿ ಜಕಣಾಚಾರಿ’ ಚಿತ್ರದಲ್ಲೊಂದು ಸನ್ನಿವೇಶವಿದೆ. ಜಕಣಾಚಾರಿ (ಕಲ್ಯಾಣ್‍ಕುಮಾರ್) ನನ್ನ ಮೇಲೆ ಸಂದೇಹ ಪಟ್ಟಾಗಿ ನಾನು ಕಾಡೊಂದರಲ್ಲಿ ಓಡುತ್ತಿರುತ್ತೇನೆ. ರಾಜಭಟರು ನನ್ನನ್ನು ಅಟ್ಟಿಸಿಕೊಂಡು ಬರುತ್ತಾರೆ. ಈ ಸನ್ನಿವೇಶಕ್ಕೆ ಎಲ್ಲಿ ಚಿತ್ರೀಕರಣವಾಗಿತ್ತು ಎನ್ನುವುದು ನನಗೆ ಅಷ್ಟಾಗಿ ನೆನಪಿಲ್ಲ. ಸನ್ನಿವೇಶಕ್ಕೆ ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ನಾನು ಕಲ್ಲು – ಮುಳ್ಳೆನ್ನದೆ ಓಡಿದ್ದೆ.
ಪಾತ್ರದಲ್ಲಿ ಎಷ್ಟರ ಮಟ್ಟಿಗೆ ತಲ್ಲೀನಳಾಗಿದ್ದೆ ಎಂದು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಕಾಡಿನಲ್ಲಿ ವೇಗವಾಗಿ ಓಡಿ ಹಿಂತಿರುಗಿ ನೋಡಿದರೆ, ಚಿತ್ರತಂಡದ ಎಲ್ಲರೂ ಕಣ್ಮರೆಯಾಗಿದ್ದರು. ಆಗ ಅಳುವುದೊಂದೇ ಬಾಕಿ! ನಾಲ್ಕೈದು ನಿಮಿಷಗಳ ನಂತರ ಏದುರಿಸು ಬಿಡುತ್ತಾ ಓಡಿಬಂದ ಸಹಾಯಕರನ್ನು ಕಂಡಾಗ ಸಮಾಧಾನವಾಗಿತ್ತು!