ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಾಧುರ್ಯಕ್ಕೆ ಇನ್ನೊಂದು ಹೆಸರು ಎಂ.ರಂಗರಾವ್

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಸಂಗೀತ ಸಂಯೋಜಕರಲ್ಲೊಬ್ಬರು ಎಂ.ರಂಗರಾವ್‌. ಸ್ವರ ಸಂಯೋಜನೆ ಮಾಡುವುದು ಮಾತ್ರವಲ್ಲದೆ ಅವರು ವಾದ್ಯಗೋಷ್ಠಿಯನ್ನು ಕೂಡ ನಿರ್ವಹಿಸುತ್ತಿದ್ದರು. ಹೀಗಾಗಿ ಅವರ ಚಿತ್ರಗಳಲ್ಲಿ ಸ್ವಂತಿಕೆ ಎದ್ದು ಕಾಣುತ್ತಿತ್ತು. ಇಂದು (ಏಪ್ರಿಲ್‌ 26) ಎಂ.ರಂಗರಾವ್ ಜನ್ಮದಿನ.

ಮಾಧುರ್ಯಕ್ಕೆ ಇನ್ನೊಂದು ಹೆಸರು ಎಂದು ಖ್ಯಾತರಾದ ಎಂ.ರಂಗರಾವ್‍ ಅವರು ಜನಿಸಿದ್ದು 1932ರ ಏಪ್ರಿಲ್ 26ರಂದು ಆಂದ್ರಪ್ರದೇಶದ ಕಾಕಿನಾಡದಲ್ಲಿ. ತಂದೆ ವೈಷ್ಣವ ರಾಜರು ಸಂಗೀತ ವಿದ್ವಾಸರೆಂದು ಹೆಸರು ಮಾಡಿದವರು. ಇವರ ತಂಗಿಯ ಮಗನೇ ಡಾ.ಪಿ.ಬಿ.ಶ್ರೀನಿವಾಸ್. ಸಂಬಂಧದಲ್ಲಿ ರಂಗರಾಯರು ಪಿ.ಬಿ.ಶ್ರೀನಿವಾಸರಿಗೆ ಸೋದರ ಮಾವನ ಮಗನಾಗಬೇಕು. ತಾಯಿ ಅಲಮೇಲು ತಂಗಮ್ಮ ವೀಣಾವಾದನದಲ್ಲಿ ಹೆಸರು ಮಾಡಿದ್ದವರು. ಅಂದಿನ ಪ್ರಸಿದ್ದ ವಿದ್ವಾಂಸರಾಗಿದ್ದ ಪೀಠಾಪುರಂ ಸಂಗಮೇಶ್ವರರಾವ್‍ ಅವರ ಬಳಿ ವೀಣೆಯನ್ನು ಕಲಿತು ಟೈಗರ್ ವರದಾಚಾರ್ಯರ ಬಳಿ ಹಾಡುಗಾರಿಕೆಯನ್ನೂ ಕಲಿತಿದ್ದರು. ರಂಗರಾಯರಿಗೆ ತಾಯಿಯೇ ಮೊದಲ ಗುರು. ಹತ್ತನೇ ವಯಸ್ಸಿನಲ್ಲಿಯೇ ವೀಣಾವಾದನದಲ್ಲಿ ಅವರು ನಿಪುಣತೆಯನ್ನು ಪಡೆದಿದ್ದರು. ತಂದೆಯನ್ನು ಈ ವಯಸ್ಸಿನಲ್ಲಿಯೇ ರಂಗರಾಯರು ಕಳೆದುಕೊಂಡರು. ಜೀವನೋಪಾಯಕ್ಕಾಗಿ ತಾಯಿ ಮದರಾಸಿಗೆ ವಲಸೆ ಬಂದರು. ಅಲ್ಲಿನ ಆಕಾಶವಾಣಿ ಕೇಂದ್ರದಲ್ಲಿ ವೀಣೆ ನುಡಿಸುತ್ತಾ ಜೀವನ ಸಾಗಿಸಲು ಆರಂಭಿಸಿದರು. ರಂಗರಾಯರು ಹೈಸ್ಕೂಲ್ ಶಿಕ್ಷಣದ ನಂತರ ಮೆಕ್ಯಾನಿಕಲ್‌ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮೋ ಮಾಡಿದರು. ಬೆಂಗಳೂರಿನ ಎಚ್.ಎ.ಎಲ್‍ನಲ್ಲಿ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಕೂಡ ಸಿಕ್ಕಿತು.

ಎಚ್.ಎ.ಎಲ್.ನಲ್ಲಿ ಎಂಜಿನ್ಸ್ ವಿಭಾಗದಲ್ಲಿ ಇನ್ಸ್‍ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ ರಂಗರಾಯರು ಉಪ್ಪಾರಹಳ್ಳಿಯಲ್ಲಿ ಮನೆ ಮಾಡಿದರು. ಬಡತನದ ಬದುಕು ಪೈಸೆ ಪೈಸೆಗೂ ಲೆಕ್ಕ ಇಡುವ ಸ್ಥಿತಿ. ಬಸ್ ಪಾಸ್ ಮಾಡಿಸಿಕೊಂಡರೆ ಹಣದ ಖರ್ಚು ಎಂದು ಪ್ರತಿದಿನವೂ ಅಫೀಸಿಗೆ ಸೈಕಲ್‍ನಲ್ಲಿ ಹೋಗುತ್ತಿದ್ದರು. ಆ ವೇಳೆಗೆ ಅವರ ವಿವಾಹವೂ ಆಗಿತ್ತು. ಎಷ್ಟು ತಿಂಗಳಾದರೂ ಬಸ್ ಪಾಸ್ ಸಿಕ್ಕಲೇ ಇಲ್ಲ. ಪ್ರತಿ ನಿತ್ಯವೂ ಸೈಕಲ್ ತುಳಿಯುವುದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರಿಂದ ಪತ್ನಿ ಕೆಲಸ ಬಿಡಲು ಒತ್ತಾಯಿಸಲು ಆರಂಭಿಸಿದರು. ಹೀಗೆ ದಿನಗಳನ್ನು ಕಳೆಯುತ್ತಿದ್ದಾಗ ಎಸ್.ವಿ.ವೆಂಕಟರಾಮನ್‍ ಅವರು ‘ತ್ಯಾಗಯ್ಯ’ ಚಿತ್ರಕ್ಕೆ ವೀಣಾವಾದಕನಾಗಿ ಬಾ ಎಂದು ಕರೆದರು. ರಂಗರಾಯರು ಹಿಂದು ಮುಂದೆ ಯೋಚಿಸದೆ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗದ ಕಡೆ ಬಂದರು.

‘ನಕ್ಕರೆ ಅದೇ ಸ್ವರ್ಗ’ ಸಿನಿಮಾ

ಇಲ್ಲಿಂದ ಮುಂದೆ ಯೋಗಿ ವೇಮನ, ಸ್ವರ್ಗಸೀಮಾ ಹೀಗೆ ಮೈಲುಗಲ್ಲಾದ ಚಿತ್ರಗಳಿಗೆ ಸಂಗೀತ ನೀಡುವ ಅವಕಾಶ ಅವರಿಗೆ ದೊರಕಿತು. ಆದಿ ನಾರಾಯಣರಾವ್‍ ಅವರಿಗೆ ಸಹಾಯಕರಾಗಿಯೂ ಕೆಲಸ ಮಾಡಿದರು. ಎಂ.ವೆಂಕಟರಾಜು ಅವರ ‘ಭಕ್ತಕನಕದಾಸ’ ಚಿತ್ರಕ್ಕೆ ಸಹಾಯಕರಾಗಿ ಕನ್ನಡ ಚಿತ್ರರಂಗದ ನಂಟಿಗೆ ಬಂದರು. ತಮಿಳಿನ ‘ಸುಮಂಗಲಿ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಎಂ.ಆರ್.ವಿಠಲ್ ಸ್ವತಂತ್ರ ಸಂಗೀತ ನಿರ್ದೇಶಕರಾಗುವ ಅವಕಾಶ ನೀಡಿದವರು. ವಿಠಲ್‍ ಅವರ ನಿರ್ದೇಶನದ ‘ನಕ್ಕರದೇ ಸ್ವರ್ಗ’ ಚಿತ್ರದ ಮೂಲಕ ಕನ್ನಡದಲ್ಲಿ ರಂಗರಾಯರು ಸ್ವತಂತ್ರ ಸಂಗೀತ ನಿರ್ದೇಶಕರಾದರು. ಈ ಚಿತ್ರದ ಮೂಲಕವೇ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೂಡ ಕನ್ನಡದಲ್ಲಿ ಹಾಡಲು ಆರಂಭಿಸಿದರು. ಎಂ.ಆರ್.ವಿಠಲ್ ನಿರ್ದೇಶನದ ಮನಸ್ಸಿದ್ದರೆ ಮಾರ್ಗ, ಮಾರ್ಗದರ್ಶಿ ಚಿತ್ರಗಳು ಅವರಿಗೆ ಹೆಸರನ್ನು ತಂದುಕೊಟ್ಟವು. ‘ಹಣ್ಣೆಲೆಚಿಗುರಿದಾಗ’ ಚಿತ್ರದ ಮೂಲಕವಂತೂ ಅವರು ಮನೆಮಾತಾದರು. ಮುಂದೆ ವಿಠಲ್‍ ಅವರ ಶಿಷ್ಯ ಕೆ.ವಿ.ಜಯರಾಂ ಅವರಿಗೂ ರಂಗರಾಯರು ಖಾಯಂ ಸಂಗೀತ ನಿರ್ದೇಶಕರಾದರು. ಈ ಕಾಂಬಿನೇಷನ್‍ನಲ್ಲಿ ಬಂದ ‘ಅರುಣರಾಗ’ ಚಿತ್ರದ ಗೀತೆಗಳು ಬಹಳ ಜನಪ್ರಿಯವಾದವು.

‘ಸಾಕ್ಷಾತ್ಕಾರ’ ಸಿನಿಮಾ

ರಂಗರಾಯರಿಗೆ ವೀಣೆ ಎಷ್ಟು ಅಚ್ಚು ಮೆಚ್ಚೋ ಭೀಮ್ ಪಲಾಸ್ ರಾಗ ಕೂಡ ಅಷ್ಟೇ ಅಚ್ಚುಮೆಚ್ಚು. ಈ ರಾಗದಲ್ಲಿ ಅವರು ಸಂಯೋಜಿಸಿರುವ ವಿರಹಾ ನೂರು ನೂರುತರಹ, ಒಲವೇ ಜೀವನ ಸಾಕ್ಷಾತ್ಕಾರ, ನಮ್ಮ ಸಂಸಾರ ಆನಂದ ಸಾಗರ, ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ, ಹೂವು ಚೆಲುವೆಲ್ಲ ನಂದೆಂದಿತು, ತೆರೆದಿದೆ ಮನೆ ಓ ಬಾ ಅತಿಥಿ,  ಬಣ್ಣಾ ನನ್ನ ಒಲವಿನ ಬಣ್ಣಾ ಎಲ್ಲವೂ ಸೂಪರ್ ಹಿಟ್ ಗೀತೆಗಳಾಗಿವೆ. ವೀಣೆಯನ್ನು ಬಳಸಿ ಸಂಗೀತ ಸಂಯೋಜಿಸುತ್ತಿದ್ದರಿಂದ ಅವರ ಗೀತೆಗಳಲ್ಲಿ ಮಧುರತೆ ತಂತಾನೆ ಮೂಡಿ ಬರುತ್ತಿತ್ತು. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ‘ಗುಂಡಿನ ಮತ್ತೇ ಗಮ್ಮತ್ತು’ ಗೀತೆಯಲ್ಲಿನ ಮಾದಕತೆಯಲ್ಲಿ ಕೂಡ ಅವರು ಮಾಧುರ್ಯವನ್ನು ಬಿಟ್ಟವರಲ್ಲ. ‘ಬಹದ್ದೂರ್‍ಗಂಡು’ ಚಿತ್ರದ ‘ಮುತ್ತಿನಂಥ ಮಾತೊಂದು ಗೊತ್ತೇನಮ್ಮ’  ಗೀತೆಯಲ್ಲಿನ ಲಾಲಿತ್ಯ ಕೂಡ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ‘ಶ್ರಾವಣ ಬಂತು’ ಚಿತ್ರದ ‘ಬಾನಿನ ಅಂಚಿಂದ ಬಂದೆ’ ಗೀತೆಯಲ್ಲಿ ಸುಗಮ ಸಂಗೀತದ ಸುಲಲಿತದ ಗುಣವನ್ನೂ ಅವರು ತಂದಿದ್ದಾರೆ. ರಂಗರಾಯರು ಎಡಕಲ್ಲು ಗುಡ್ಡದ ಮೇಲೆ, ಬಂಧನ, ಅರುಣರಾಗದಂತಹ ಭಾವನಾ ಪ್ರಧಾನ ಚಿತ್ರಗಳಲ್ಲಿ ವೀಣೆಯನ್ನು ಪರಿಣಾಮಕಾರಿಯಾದ ಹಿನ್ನೆಲೆ ವಾದ್ಯವಾಗಿ ಬಳಸಿದ್ದಾರೆ. ಅದರಂತೆ ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಪೌರಾಣಿಕ ವಾತಾವರಣವನ್ನೂ ಮೂಡಿಸಿದ್ದಾರೆ.

‘ಅರುಣರಾಗ’ ಸಿನಿಮಾ

1970ರ ದಶಕ ಅದು ಗ್ರಾಮಾಪೋನ್ ಪ್ಲೇಟ್‍ಗಳ ಸ್ವರ್ಣಯುಗ, ದಕ್ಷಿಣ ಭಾರತದಲ್ಲಿ ಇವುಗಳನ್ನು ಮಾಡುತ್ತಿದ್ದವರು ಎ.ವಿ.ಎಂನ ಸೋದರ ಸಂಸ್ಥೆ ‘ಸರಸ್ವತಿ ಸ್ಟೋರ್ಸ್’. ಈ ದಶಕದ ಕೊನೆಗೆ ಕ್ಯಾಸೆಟ್‍ಗಳು ಬಂದವು. ಸರಸ್ವತಿ ಸ್ಟೋರ್ಸ್‍ ಕನ್ನಡದಲ್ಲಿ ಕ್ಯಾಸೆಟ್ ಮಾಡಲು ಒಪ್ಪಲಿಲ್ಲ, ಮಾರುಕಟ್ಟೆ ಇಲ್ಲ ಎನ್ನುವುದು ಅದಕ್ಕೆ ಕಾರಣ. ವಿಷಯ ತಿಳಿದ ರಂಗರಾಯರು ಮೇಯಪ್ಪ ಚೆಟ್ಟಿಯಾರರ ಬಳಿ ಮಾತನಾಡಿದರು. ಕನ್ನಡದಲ್ಲಿ ಭಕ್ತಿ ಗೀತೆಗಳಿಗೆ ಬೇಡಿಕೆ ಇದೆ ಎಂದರು. ಕನಿಷ್ಠ ಐದು ನೂರು ಕ್ಯಾಸೆಟ್ ಮಾರುವ ಮುಚ್ಚಳಿಕೆ ಬರೆದುಕೊಟ್ಟರೆ ಮಾಡುತ್ತೇನೆ ಎಂದರು ಚೆಟ್ಟಿಯಾರರು. ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್‌, ರಂಗರಾಯರ ಉತ್ಸಾಹ ಮೆಚ್ಚಿ ಮುಚ್ಚಳಿಕೆ ಬರೆದುಕೊಟ್ಟರು. ರಂಗರಾಯರು ಭಾದ್ರಪದ ಶುಕ್ಲದ ಚೌತಿಯಂದು, ಗಜಮುಖನೆ ಗಣಪತಿಯೇ ನಿನಗೆ ವಂದನೆ ಹೀಗೆ ಮೊದಲು ಎರಡು ಗಣಪತಿ ಭಕ್ತಿಗೀತೆಗಳಿಗೆ ಸ್ವರ ಸಂಯೋಜನೆ ಮಾಡಿದರು. ಅಲ್ಲಿಂದ ಮುಂದೆ ಇವಳೇ ವೀಣಾಪಾಣಿ, ನ್ಯಾಯ ನೀತಿ ಮೂರ್ತಿ ವೆತ್ತ ಸತ್ಯದೈವವೇ ಹೀಗೆ ಒಂದೊಂದೊಂದಾಗಿ ಭಕ್ತಿಗೀತೆಗಳು ರೂಪುಗೊಂಡವು. ಕನ್ನಡಿಗರು ಅದನ್ನು ಸ್ವಾಗತಿಸಿದರು. ಹೀಗೆ ಕನ್ನಡದಲ್ಲಿ ಭಾವಗೀತೆ, ಭಕ್ತಿಗೀತೆಗಳ ಸುವರ್ಣಯುಗ ಆರಂಭವಾಗಲು ಎಂ.ರಂಗರಾಯರು ಕಾರಣಕರ್ತರಾಗಿದ್ದಾರೆ.

‘ಬಂಧನ’ ಸಿನಿಮಾ

ರಂಗರಾವ್‍ ಅವರಿಗೆ ಮೂರು ರಾಜ್ಯ ಪ್ರಶಸ್ತಿಗಳು ಬಂದವು. ಹಣ್ಣೆಲೆ ಚಿಗುರಿದಾಗ, ಹೊಸ ಬೆಳಕು, ಬಂಧನ ಚಿತ್ರಗಳು ಅವರಿಗೆ ಪ್ರಶಸ್ತಿ ತಂದುಕೊಟ್ಟವು. ವಿಶೇಷ ಎಂದರೆ ಈ ಚಿತ್ರದ ಗೀತೆಗಳು ಜನಮಾನಸದಲ್ಲಿ ಇಂದಿಗೂ ಹಸಿರಾಗಿವೆ. ರಂಗರಾಯರು ಸ್ವರ ಸಂಯೋಜನೆ ಮಾಡುವುದು ಮಾತ್ರವಲ್ಲದೆ ವಾದ್ಯಗೋಷ್ಠಿಯನ್ನು ಕೂಡ ನಿರ್ವಹಿಸುತ್ತಿದ್ದರು. ಹೀಗಾಗಿ ಅವರ ಚಿತ್ರಗಳಲ್ಲಿ ಸ್ವಂತಿಕೆ ಎದ್ದು ಕಾಣುತ್ತಿತ್ತು. ಸಾಕ್ಷಾತ್ಕಾರ, ರಂಗನಾಯಕಿ, ವಸಂತಗೀತ ಮೊದಲಾದ ಚಿತ್ರಗಳಿಗೆ ಅವರು ನೀಡಿರುವ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುವಂತಿದೆ. ರಂಗರಾಯರಿಗೆ ಸಲ್ಲಲೇ ಬೇಕಾದ ಆದರೆ ಅನಿವಾರ್ಯ ಕಾರಣಗಳಿಂದ ಕೀರ್ತಿ ತಪ್ಪಿದ ಗೀತೆ ‘ನಾದಮಯ ಈ ಲೋಕವೆಲ್ಲಾ’. ಈ ಗೀತೆಯನ್ನು ರಂಗರಾಯರು ‘ಅಮೃತವರ್ಷಿಣಿ’ಎನ್ನುವ ಸೆಟ್‍ ಏರದ ರಾಜ್‍ಕುಮಾರ್‍ ಅವರ ಚಿತ್ರಕ್ಕೆ 1988ರಲ್ಲಿ ಸಂಯೋಜಿಸಿದ್ದರು. ಗೀತೆ ರೆಕಾರ್ಡ್‌ ಕೂಡ ಆಗಿತ್ತು. ಆದರೆ ಸಿನಿಮಾ ರೂಪುಗೊಳ್ಳದ ಕಾರಣ ಹಾಗೆ ಉಳಿದು ಕೊಂಡಿತ್ತು. ಆದರೆ ಮುಂದೆ ‘ಜೀವನಚೈತ್ರ’ಚಿತ್ರ ರೂಪುಗೊಂಡಾಗ ಈ ಗೀತೆಯನ್ನು ಬಳಸಿ ಕೊಳ್ಳಲಾಯಿತು. ಅದು ರಾಜ್‍ಕುಮಾರ್‍ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ಕೂಡ ತಂದುಕೊಟ್ಟಿತು. ಆದರೆ ಆ ಚಿತ್ರದ ರಾಗ ಸಂಯೋಜಕರು ಉಪೇಂದ್ರಕುಮಾರ್‍ ಆಗಿದ್ದರಿಂದ ಸಂಯೋಜನೆಯ ಯಶಸ್ಸು ಅವರಿಗೆ ಸೇರಿ ಹೋಯಿತು.

‘ಹೊಸಬೆಳಕು’ ಸಿನಿಮಾ

ಕಟ್ಟುನಿಟ್ಟಿನ ಜೀವನ ನಡೆಸಿದ್ದ ರಂಗರಾಯರು ರೆಕಾರ್ಡಿಂಗ್‌ ತಡವಾದಾಗ ಸ್ಟುಡಿಯೋದಲ್ಲಿಯೇ ಮಲಗಿದ್ದೂ ಕೂಡ ಇದೆ. ಆದರೆ ಎಂದಿಗೂ ಹೊರಗಡೆ ಊಟ ಮಾಡುತ್ತಿರಲಿಲ್ಲ. ತೀರಾ ಅನಿವಾರ್ಯವಾದಾಗ ಅಕ್ಕಿ ಇಡ್ಲಿ ಮಾತ್ರ ತಿನ್ನುತ್ತಿದ್ದರು. ಅದಕ್ಕಾಗಿ ಅವರನ್ನು ಸ್ನೇಹಿತರು ‘ಇಡ್ಲಿ ರಂಗರಾವ್’ ಎಂದು ರೇಗಿಸುತ್ತಿದ್ದರು. ಆದರೆ ಹೀಗಿದ್ದರೂ ಅವರಿಗೆ 58ನೇ ವಯಸ್ಸಿನಲ್ಲಿಯೇ ಪ್ಯಾನ್‌ಕ್ರಿಯಾಟಿಕ್‌ ಕ್ಯಾನ್ಸರ್‌ ಬಂದಿತು. ಆಗ ಅದು ಹೊಸ ಕಾಯಿಲೆ. ಚಿಕಿತ್ಸೆಯನ್ನು ಯಾವ ಕ್ರಮದಲ್ಲಿ ಪಡೆಯಬೇಕು ಎನ್ನುವ ಗೊಂದಲದಲ್ಲಿ ಇದ್ದಾಗಲೇ ಕಾಯಿಲೆ ಉಲ್ಬಣಿಸಿತು. 1991ರ ಆಗಸ್ಟ್ 3ರಂದು ಅಕಾಲಿಕವಾಗಿ ರಂಗರಾವ್ ನಿಧನರಾದರು. ಅವರು ಬಿಟ್ಟು ಹೋದ ಸಾವಿರಾರು ಹಾಡುಗಳು ಇಂದಿಗೂ ಅವರ ನೆನಪನ್ನು ನಮ್ಮಲ್ಲಿ ಉಳಿಸಿವೆ.

ಎಂ.ರಂಗರಾವ್ | ಜನನ: 26/04/1932 | ನಿಧನ: 02/08/1991

ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಗಾಯಕ ಯೇಸುದಾಸ್ ಅವರೊಂದಿಗೆ ಎಂ.ರಂಗರಾವ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.