ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ತಂದೆಯೇ ಗುರುವು

ಪೋಸ್ಟ್ ಶೇರ್ ಮಾಡಿ
ಆರ್‌.ಎನ್‌.
ಜಯಗೋಪಾಲ್‌
ಚಿತ್ರಸಾಹಿತಿ

‘ವಿಜಯಚಿತ್ರ’ ಸಿನಿಪತ್ರಿಕೆಯ ಸುವರ್ಣ ಮಹೋತ್ಸವ ಸಂಚಿಕೆಗೆ (1984) ಚಿತ್ರಸಾಹಿತಿ ಆರ್‌.ಎನ್‌.ಜಯಗೋಪಾಲ್‌ ತಮ್ಮ ತಂದೆ, ಮೇರು ಚಿತ್ರಕರ್ಮಿ ಆರೆನ್ನಾರ್‌ ಅವರ ಬಗ್ಗೆ ಬರೆದ ಅಪರೂಪದ ಲೇಖನವಿದು. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಆರೆನ್ನಾರ್‌ (23/06/1896 – 09/02/1977) ಜನ್ಮದಿನಕ್ಕೆ ವಿಶೇಷ ಬರಹ.

ನನ್ನ ಪೂಜ್ಯ ತಂದೆ, ಪದ್ಮಶ್ರೀ ಆರ್.ನಾಗೇಂದ್ರರಾಯರ ವಿಚಾರವಾಗಿ ಲೇಖನ ಬರೆಯಲು ಕೈಗೆ ತೆಗೆದುಕೊಂಡಾಗ ನೆನಪುಗಳು ಸರಸರನೆ ಬಂದು ಓಡಿಹೋಗುತ್ತವೆ. ಒಂದು ಚಿಕ್ಕ ಲೇಖನದಲ್ಲಿ ಯಾವುದನ್ನು ತೆಗೆದುಕೊಳ್ಳುವುದು, ಯಾವುದುನ್ನು ಬಿಡುವುದು! ಏಕೆಂದರೆ ಅವರು ನಮಗೆ ತಂದೆ ಮಾತ್ರ ಆಗಿರಲಿಲ್ಲ. ಗುರುವೂ ಆಗಿದ್ದರು, ಸ್ನೇಹಿತರೂ ಆಗಿದ್ದರು. ಉದಾಹರಣೆಗೆ, ಆಗ ನನಗೆ ಸುಮಾರು ಹತ್ತು ವರ್ಷಗಳಿರಬಹುದು. ಕ್ರಿಕೆಟ್ ಎಂದರೆ ಶುದ್ಧ ಹುಚ್ಚು. ಟೆಸ್ಟ್ ಮ್ಯಾಚ್ ನೋಡಲು ಆಸೆ. ನನ್ನ ಆಸೆ ತಿಳಿದಿದ್ದ ಅವರು ಮದರಾಸಿಗೆ ಕರೆಸಿಕೊಂಡು ಟೆಸ್ಟ್ ಮ್ಯಾಚ್‌ ಐದು ದಿನವೂ ನಮ್ಮೊಡನೆ ಕುಳಿತಿದ್ದು ಮಾತ್ರವಲ್ಲದೆ, ಮನೆಗೆ ಹೋದ ಮೇಲೆ ಆಟದ ಪೋಸ್ಟ್‌ ಮಾರ್ಟ್ಂ ಮಾಡಿ, ನಮ್ಮೊಡನೆ ಚರ್ಚಿಸುತ್ತಿದ್ದರು ನಮ್ಮ ಸ್ನೇಹಿತರ ಹಾಗೆ!

ನಾನು ಚಿತ್ರರಂಗಕ್ಕೆ ಬರುವುದಕ್ಕೆ ಕಾರಣ ಬೆಂಗಳೂರಿನ ಸ್ಟುಡಿಯೋ ಕಟ್ಟಬೇಕೆಂದು ಅವರು ಕಾಣುತ್ತಿದ್ದ ಕನಸೇ! ಆ ಯೋಜನೆ ಈಡೇರಿದರೆ ಅವರಿಗೆ ಸಹಾಯವಾಗಲೆಂದು ನಮ್ಮಣ್ಣ ಕೃಷ್ಣಪ್ರಸಾದ್ ಛಾಯಾಗ್ರಹಣ ಡಿಪ್ಲೊಮಾ ಮಾಡಿದ. ನಾನೂ ಶಬ್ಧಗ್ರಹಣ ಪಾಸ್ ಮಾಡಿದೆ. ಆದರೆ ಬರಹಗಾರನಾಗುವುದು ನನ್ನ ಜಾತಕದಲ್ಲಿರಬೇಕಾದರೆ ಏನು ಓದಿದರೆ ಏನು! ನಾನು ಫೈನಲ್ ಯಿಯರ್‌ ಸೌಂಡ್ ಇಂಜಿನಿಯರಿಂಗ್‌ನಲ್ಲಿ ಇರಬೇಕಾದರೆ ‘ಪ್ರೇಮದ ಪುತ್ರಿ’ ಕನ್ನಡ ಚಿತ್ರಕ್ಕೆ ಬರಹಗಾರನಾಗಿ ಕೆಲಸ ಮಾಡುವ ಅದೃಷ್ಟ ನನಗೆ ದೊರಕಿತು. ಪ್ರವೇಶ ಮಾಡಿದ್ದೂ ಆಯಿತು. ಪ್ರತಿ ಹಂತದಲ್ಲೂ ಯಾವ್ಯಾವುದನ್ನು ಹೇಗೆ ಮಾಡಬೇಕು, ಹೇಗೆ ಬರೆಯಬೇಕು ಎನ್ನುವ ಪಾಠ ಅವರೇ ಕಲಿಸಿದರು. ಚಿತ್ರನಿರ್ಮಾಣದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುವ ಪ್ರಯೋಗ ದೊರೆಯಿತು. ಅವರನ್ನು ಒಂದು ಮೊಬೈಲ್ ಇನ್‌ಸ್ಟಿಟ್ಯೂಷನ್‌ ಆನ್ ಸಿನಿಮಾ ಎಂದು ಕರೆಯಬಹುದು. ಅಂಥವರಿಂದ ಪಾಠ ಕಲಿಯುವ ಅವಕಾಶ ಮತ್ತು ಅಂಥ ಅನುಭವ ಎಷ್ಟು ಜನಕ್ಕೆ ದೊರಕೀತು?

ನಾನು ಅವರೊಂದಿಗೆ ಕೆಲಸ ಮಾಡಿದ ಎರಡನೆ ಚಿತ್ರ ‘ವಿಜಯನಗರದ ವೀರಪುತ್ರ’. ಆ ಚಿತ್ರದ ಮೂಲಕ ಪರಿಚಯವಾಗಲಿದ್ದ ನನ್ನ ತಮ್ಮ ಸುದರ್ಶನನಿಗೆ ಪ್ರತಿಯೊಂದು ಆಯಾಮದಲ್ಲೂ (ಅಭಿನಯ, ಉಚ್ಛಾರಣೆ, ಕತ್ತಿ ವರಸೆ, ಕುದುರೆ ಸವಾರಿ) ತರಬೇತಿ ಕೊಡಲು ಅವರು ತೆಗೆದುಕೊಳ್ಳುತ್ತಿದ್ದ ಉತ್ಸಾಹ, ಅದನ್ನು ನೋಡಿದವರೇ ಬಲ್ಲರು. ಒಬ್ಬ ನಿರ್ದೇಶಕ ಪ್ರತಿ ಹಂತದಲ್ಲೂ ಯಾವ ರೀತಿ ಎಚ್ಚರದಿಂದ ಕೆಲಸ ಮಾಡಬೇಕೆಂಬುದನ್ನು ಅವರಿಂದ ಕಲಿತೆ.

ಮೂರು ತಲೆಮಾರು – ರವಿ (ಆರ್‌.ಎನ್‌.ಜಯಗೋಪಾಲ್ ಪುತ್ರ), ಆರೆನ್ನಾರ್‌, ಆರ್‌.ಎನ್‌.ಜಯಗೋಪಾಲ್‌

ಸಹಜತೆ ಅವರ ವೈಶಿಷ್ಟ್ಯ

ಚಿತ್ರದಲ್ಲಿ ಒಂದು ಹೆಚ್ಚಳ – ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ದರ್ಬಾರ್‌, ಇದಕ್ಕಾಗಿ ಇತಿಹಾಸದ ಪ್ರಕಾರ ಈಗ ಮೈಸೂರಿನಲ್ಲಿರುವ ಸಿಂಹಾಸನ ಮುಂಚೆ ವಿಜಯನಗರದ ಅರಸರಿಗೆ ಸೇರಿತ್ತೆಂಬ ಅಂಶದ ಪ್ರಕಾರ, ಕಲಾ ನಿರ್ದೇಶಕರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಆ ಸಿಂಹಾಸನವನ್ನು ತೋರಿಸಿ, ಅದರ ಪ್ರತಿರೂಪವನ್ನು ಮಾಡಿಸಿದರು. ಕೃಷ್ಣದೇವರಾಯನ ಉಡುಗೆ, ತೊಡಿಗೆಗಳಿಗೆ ಮದರಾಸಿನಲ್ಲಿರುವ ಕನೆಮರಾ ಪುಸ್ತಕಾಲಯದಿಂದ ಅನೇಕ ಪುಸ್ತಕಗಳನ್ನು ತರಿಸಿ, ಓದಿ, ಅದರಂತೆ ಮಾಡಿಸಿದರು. ಕೃಷ್ಣದೇವರಾಯರು ದರ್ಬಾರಿಗೆ ಬರುವ ದೃಶ್ಯವನ್ನು, ಆ ವೈಭವವನ್ನು, ಕ್ರೇನ್ ಮುಂತಾದವನ್ನು ಬಳಸಿ ಹಲವಾರು ಷಾಟ್‌ಗಳನ್ನು ತೆಗೆದು ಸೂಕ್ಷ್ಮತೆಯಿಂದ ನಿರೂಪಿಸಿದರು. ಇಂದೂ ಸಹ ಆ ದೃಶ್ಯವನ್ನು ಚಿತ್ರದಲ್ಲಿ ಕಾಣುವಾಗ ಮೈಮೇಲಿನ ರೋಮಗಳು ಎದ್ದು ನಿಲ್ಲುವಷ್ಟು ರೋಮಾಂಚನಕಾರಿ. ನಟ ಉದಯಕುಮಾರ್‌ಗೆ ಅವರು ಪಾತ್ರವನ್ನು ಬಣ್ಣಿಸಿ ಮಾಡಿಸಿದಾಗ, ಉದಯಕುಮಾರ್ ಆ ಚಕ್ರವರ್ತಿಯೇ ಆಗಿಬಿಟ್ಟನೋ ಎನ್ನುವಷ್ಟು ಸಹಜವಾಗಿ ಮೂಡಿಬಂದಿತ್ತು. ಅವರ ನಿರ್ದೇಶನದ ಕಲೆಗಾರಿಕೆ ಆ ದೃಶ್ಯದಲ್ಲಿ ಎದ್ದು ಕಾಣುತ್ತಿತ್ತು.

ನಿರ್ದೇಶನದಲ್ಲಿ ಅವರು ಮುಖ್ಯತ್ವ ಕೊಡುತ್ತಿದ್ದುದು ಸಹಜತೆಗೆ. ‘ಪ್ರೇಮದ ಪುತ್ರಿ’ ಚಿತ್ರದಲ್ಲಿ ನಟಿಯರಾದ ಸಂಧ್ಯಾ ಮತ್ತು ಸೂರ್ಯಕಲಾ ಇವರೊಡನೆ ಒಂದು ಸಾಂಸಾರಿಕ ದೃಶ್ಯ. ಮಗಳು ಹಾಡಿದರೆ ತಾಯಿ ವೀಣೆ ನುಡಿಸಿ, ತಂದೆ ತಬಲ ಬಾರಿಸುವುದು. ಆ ದೃಶ್ಯ ಯಾವುದೋ ಮನೆಯಲ್ಲಿ ನಾವು ಕಂಡ ಹಾಗೆ ಇತ್ತೇ ವಿನಃ ಸಿನಿಮಾಗಾಗಿ ತೆಗೆದ ದೃಶ್ಯದಂತೆ ಇರಲಿಲ್ಲ. ‘ಆನಂದ ಭಾಷ್ಪ’ ಮತ್ತು ‘ಪತಿಯೇ ದೈವ’ ಚಿತ್ರಗಳಲ್ಲೂ ಸಹ ಆ ರೀತಿಯ ಸಾಂಸಾರಿಕ ದೃಶ್ಯಗಳು ಹಲವಾರಿದ್ದವು. ನಮಗೆ ಚಿಕ್ಕಂದಿನಿಂದ ನಮ್ಮ ತಂದೆಯ ಮೇಲೆ ‘ಹೀರೋ ವರ್ಷಿಪ್‌’. ಅವರು ಅಭಿನಯಿಸಿದ್ದ ವಸಂತಸೇನ, ಹರಿಶ್ಚಂದ್ರ, ಕಬೀರ್‌, ಅಪೂರ್ವ ಸಹೋದರರು, ಮೂವರು ಮಕ್ಕಳು ಮುಂತಾದ ಚಿತ್ರಗಳು ನಮ್ಮ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದವು. ಅವರು ಅತ್ಯುತ್ತಮ ನಟ, ನಿರ್ದೇಶಕ ಮಾತ್ರವಲ್ಲ, ನಮ್ಮ ಜೊತೆ ಸಹಜವಾಗಿ ಸ್ನೇಹಿತರಂತೆ ವರ್ತಿಸುತ್ತಿದ್ದರು. ಬೆಳಗ್ಗೆ ಹೊತ್ತು ಪ್ರತಿದಿನ ಅವರು ತರಕಾರಿ ಮಾರ್ಕೆಟ್ಟಿಗೆ ಹೊರಟಾಗ ಅವರೊಡನೆ ಬ್ಯಾಗ್‌ ಹಿಡಿದುಕೊಂಡು ಹೋಗಿ, ಜನ ಅವರನ್ನು ಗುರುತಿಸಿ ಮಾತನಾಡಿಸುವುದನ್ನು ಕಂಡಾಗ ಏನೋ ಒಂದು ಹೆಮ್ಮೆ.

ಪ್ರಪ್ರಥಮ ಕನ್ನಡ ವಾಕ್ಚಿತ್ರ ‘ಸತಿ ಸುಲೋಚನ’ಕ್ಕೆ ಸಂಗೀತ ನಿರ್ದೇಶನದ ಹೊಣೆಯನ್ನೂ ನಟನೆಯ ಜೊತೆಗೆ ಹೊತ್ತಿದ್ದ ನಮ್ಮ ತಂದೆಯವರು ಒಳ್ಳೆಯ ಸಾಹಿತಿಗಳೂ ಕೂಡ. ಕಬೀರ್, ವಸಂತಸೇನಾ, ಹರಿಶ್ಚಂದ್ರ ಚಿತ್ರಗಳ ಸಂಭಾಷಣೆಯ ಜೊತೆ ಹಾಡುಗಳನ್ನೂ ಬರೆಯುತ್ತಿದ್ದರು. ‘ಜಾತಕಫಲ’ ಚಿತ್ರದಲ್ಲಿ ಅವರು ಬರೆದ ‘ಮರುಳಾದೇ ಸಖಿಯೇ ಈ ಮುರಳೀನಾದಕೆ ನಾ ಮಾರ ಜನಕನಾ ತೋರು ಬೇಗನೇ’ ಜನಪ್ರಿಯ ಗೀತೆಯಾಗಿತ್ತು. ಪ್ರಸಿದ್ಧ ಗಾಯಕ ಪಿ.ಬಿ.ಶ್ರೀನಿವಾಸ್‌ ಅವರಿಗೆ ಪ್ರಪ್ರಥಮ ಅವಕಾಶ ತಂದ ‘ಚಿಂತಿಸಿದರು ರಮಣಿ’ ಹಾಡು ಅಂದಿನ ಜನಾಂಗದ ಅತ್ಯಂತ ಮೆಚ್ಚಿನ ಹಾಡಾಗಿ ಪಿಬಿಎಸ್‌ ಅವರನ್ನು ಪ್ರಸಿದ್ಧ ಗಾಯಕರನ್ನಾಗಿ ಮಾಡಿತು. ‘ಜಾತಕಫಲ’ ಚಿತ್ರದ ಸರಳ ಹಾಸ್ಯ, ಸಹಜ ಅಭಿನಯ, ಸಾಮಾಜಿಕ ಚಿತ್ರಗಳಲ್ಲಿ ಒಂದು ಮೈಲಿಗಲ್ಲನ್ನಾಗಿ ಮಾಡಿತು. ನಮ್ಮ ತಂದೆಯವರ ನಿರ್ದೇಶನದ ಹೆಚ್ಚಳ ಅವರ ಪ್ರತಿಯೊಂದು ಚಿತ್ರದಲ್ಲೂ ಕಾಣಬಹುದು. ಅವರ ನಿರ್ದೇಶನದಲ್ಲಿ ಮೂಡಿಬಂದ ಮತ್ತೊಂದು ಮುಖ್ಯ ಚಿತ್ರ ‘ನಮ್ಮ ಮಕ್ಕಳು’. ಮಕ್ಕಳ ಕೈಯಲ್ಲಿ ಅವರು ಎಷ್ಟು ಸಹಜ ಅಭಿನಯ ತೆಗೆದುಕೊಂಡಿದ್ದರೆಂದರೆ ಪ್ರತಿಯೊಬ್ಬ ಪ್ರೇಕ್ಷಕನೂ ಆ ದೃಶ್ಯ ತಮ್ಮ ಮನೆಯದೇ ಎಂದು ತಿಳಿದುಕೊಳ್ಳಬಹುದಾಗಿತ್ತು. ಮಕ್ಕಳು ತಂದೆಯ ಜೊತೆ ಸವಾಲ್ ಹಾಕಿ, ಮನೆಯ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು, ಹಣ ಉಳಿಸಲು ಕೆಲಸದವಳನ್ನು ಬಿಡಿಸುವುದು, ಶಾಲೆಗೆ ಬಸ್‌ನಲ್ಲಿ ಹೋಗುವುದನ್ನು ನಿಲ್ಲಿಸಿ ನಡೆದುಕೊಂಡು ಹೋಗುವುದು, ಕೊನೆಗೆ ದೀಪಾವಳಿ ಬಂದಾಗ ಪಟಾಕಿಕೊಳ್ಳಲು ಹಣವಿಲ್ಲದೆ ಪಕ್ಕದ ಮನೇಲಿ ಢಂ ಢಂ ಅಂದರೇನು ನಮ್ಮನೇಲಿ ಢಂ ಢಂ ಎಂದರೇನು ಎಲ್ಲಾ ಒಂದೆ ಎಂದು ಸಮಾಧಾನ ಮಾಡಿಕೊಳ್ಳುವುದು, ಇವೆಲ್ಲ ಎಷ್ಟು ಸಹಜವಾಗಿ ಮೂಡಿಬಂದಿತ್ತೆಂದರೆ ಇವು ಇಂದಿಗೂ ಕೂಡ ಮನೆ ಮಾತಾಗಿರುವ ದೃಶ್ಯಗಳು.

‘ನಟನಾ ಕಲಾಸಂಘ’ದಿಂದ ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕ ಆರ್.ನಾಗೇಂದ್ರರಾವ್ ಅವರನ್ನು ಸನ್ಮಾನಿಸಿದ ಸಂದರ್ಭ. ಆರೆನ್ನಾರ್ ಪುತ್ರ, ಖ್ಯಾತ ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ತಂದೆಗೆ ನಮಿಸುತ್ತಿದ್ದಾರೆ. ಅವರ ಪಕ್ಕ ಆರೆನ್ನಾರ್ ಅವರ ಮತ್ತೊಬ್ಬ ಪುತ್ರ, ಛಾಯಾಗ್ರಾಹಕ ಆರ್.ಎನ್.ಕೃಷ್ಣಪ್ರಸಾದ್ ಇದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನನಗೆ ಎಂದೂ ಮರೆಯಲಾಗದಂಥ ಅನುಭವವೆಂದರೆ, ನಮ್ಮ ತಂದೆಯವರಿಗೆ ‘ಹಣ್ಣೆಲೆ ಚಿಗುರಿದಾಗ’ ಚಿತ್ರಕ್ಕೆ ಅತ್ಯುತ್ತಮ ನಟನೆಂದು ರಾಜ್ಯಪ್ರಶಸ್ತಿ ಬಂದಿತ್ತು. ಅದೇ ವರ್ಷ ‘ನಮ್ಮ ಮಕ್ಕಳು’ ಚಿತ್ರಕ್ಕಾಗಿ ನನಗೆ ಉತ್ತಮ ಸಂಭಾಷಣೆ ಪ್ರಶಸ್ತಿ ಬಂದಿತ್ತು. ಇಬ್ಬರೂ ಒಂದೇ ವೇದಿಕೆಯ ಮೇಲೆ ಇದ್ದೆವು. ನನ್ನ ಹೆಸರು ಕರೆದಾಗ ನಾ ಎದ್ದು ಅವರ ಬಳಿ ಹೋದಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು. ಆ ಸಂತೋಷ ನನ್ನ ಕಣ್ಣಲ್ಲೂ ನೀರು ತಂದಿತು. ಮಗ ಮುಂದೆ ಬಂದನಲ್ಲ ಎಂಬ ಹೆಮ್ಮೆ ಅವರಿಗೆ. ಅವರ ಎದುರಿಗೆ ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದೇನಲ್ಲ ಎನ್ನುವ ಹೆಮ್ಮೆ ನನಗೆ.

ಅವರ ಜೊತೆ ಕೆಲಸ ಮಾಡುವುದು ಎಂತಹ ಯುವಕರಿಗೂ ಸವಾಲು ಇದ್ದಂತೆ. ಸುಮಾರು ಎಪ್ಪತ್ತು ತುಂಬಿದ್ದಾಗ ಅವರು ನಿರ್ದೇಶನ ಮಾಡುತ್ತಾ ನಟನೊಬ್ಬ ಮರಹತ್ತಲು ಹಿಂದೆ ಮುಂದೆ ನೋಡುತ್ತಿದ್ದಾಗ, ‘ಅಯ್ಯೋ ಇದಕ್ಯಾಕೆ ಹೆದರ್ತಿ, ನೋಡು ಹೀಗೆ ಹತ್ತಬೇಕು’ ಎಂದು ಎರಡು ನಿಮಿಷದಲ್ಲಿ ಹತ್ತೇಬಿಟ್ಟರು. ಯಾವುದಾದರೂ ಬೆಟ್ಟದ ಮೇಲಿಂದ ಷಾಟ್‌ ತೆಗೆಯಬೇಕಾದರೆ ಅವರು ಧಾವಿಸಿ, ಧಾವಿಸಿ ಮುಂದೆ ಹೋಗುತ್ತಿದ್ದರು. ಅವರ ಜೊತೆಜೊತೆಗೆ ಹೆಜ್ಜೆ ಹಾಕಲು ನಾವು ಶ್ರಮಪಡಬೇಕಾಗಿತ್ತು. ಸುಮಾರು 65 ತುಂಬಿದಾಗ ‘ವಿಜಯನಗರ ವೀರಪುತ್ರ’ ಚಿತ್ರದಲ್ಲಿ ಡಬ್ಬಲ್ ಸ್ವೋರ್ಡ್ ಎರಡು ಕೈಯಲ್ಲೂ ಹಿಡಿದು ಸುದರ್ಶನ್‌ ಜೊತೆ ಯುದ್ಧ ಮಾಡುತ್ತಾ ಹಿಂದೆ ಮುಂದಾಗಿ ಐದಡಿ ಪ್ಲಾಟ್‌ಫಾರಂನಿಂದ ಹಾರಿ ಕೆಳಗೆ ನಿಂತು ಮುಂದುವರೆಸಿದ್ದನ್ನು ಸೆಟ್ಟಿನ ಮೇಲಿದ್ದವರೆಲ್ಲ ಕೈತಟ್ಟಿ ಶ್ಲಾಘಿಸಿದ್ದರು. ಎಂಭತ್ತು ದಾಟಿದ್ದಾಗ ಸಹ ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಿದ್ದರು. ಅಂತಹ ಉತ್ಸಾಹ, ಅಂತಹ ಶಕ್ತಿ.

ನಿರ್ದೇಶಕರಾಗಿ, ಸಂಗೀತ ನಿರ್ದೇಶಕರ ಕೈಯಲ್ಲಿ ಅವರು ಕೆಲಸ ತೆಗೆದುಕೊಳ್ಳುತ್ತಿದ್ದುದೂ ಕಂಡವರೇ ಬಲ್ಲರು. ಅವರೇ ಸ್ವಯಂ ಸಂಗೀತ ಬಲ್ಲವರಾದ್ದರಿಂದ ಅವರನ್ನು ತೃಪ್ತಿಗೊಳಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ‘ಇದನ್ನು ಈ ರೀತಿ ಹೇಳಿದರೆ ಹೇಗಿರುತ್ತೆ?’ ಎಂದು ಸೂಕ್ಷ್ಮವಾಗಿ ಸಲಹೆ ಸಹ ಕೊಡುತ್ತಿದ್ದರು. ಆದರೆ ಹೀಗೆ ಇರಬೇಕು ಎಂದು ಯಾವತ್ತೂ ಒತ್ತಾಯಗೊಳಿಸುತ್ತಿರಲಿಲ್ಲ. ಅವರ ಸಂಗೀತದ ಅನುಭವ ಹಾಗಿತ್ತು. ಪ್ರತಿಯೊಬ್ಬ ಸಂಗೀತ ನಿರ್ದೇಶಕರೂ ಅವರ ಜೊತೆಯಲ್ಲಿ ಕೆಲಸ ಮಾಡಲು ಸಂತೋಷ ಪಡುತ್ತಿದ್ದರೇ ವಿನಹ ಯಾವತ್ತೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಸ್ವಯಂ ಗಾಯಕರೂ ಆಗಿದ್ದರು. ಹಿಂದೆ ಭೂಕೈಲಾಸ, ವಸಂತಸೇನಾ, ಕಬೀರ್ ಮುಂತಾದ ಚಿತ್ರಗಳಲ್ಲಿ ಹಾಡಿದ್ದಲ್ಲದೇ ‘ಆನಂದಬಾಷ್ಪ’ ಚಿತ್ರದಲ್ಲೂ ಒಂದು ಹಾಡು ಜಾನಕಿಯರ ಜೊತೆ ಹಾಡಿದರು. ಆರೆನ್ನಾರ್ ಸಂಸ್ಥೆ ತೆಗೆದ ಪ್ರತಿಯೊಂದು ಚಿತ್ರದಲ್ಲೂ ಸಂಗೀತ ಉತ್ತಮ ಮಟ್ಟವಾಗಿದ್ದು ಹಾಡುಗಳು ಜನಪ್ರಿಯವಾಗುತ್ತಿದ್ದುದಕ್ಕೆ ಅವರೂ ಮುಖ್ಯ ಪಾತ್ರ ವಹಿಸುತ್ತಿದ್ದರು. ಆ ಸಂಗೀತ ನಿರ್ದೇಶಕರುಗಳು ಇಂದಿಗೂ ಸಹ ಆ ಸಿಹಿ ಅನುಭವವನ್ನು ಸ್ಮರಿಸಿಕೊಳ್ಳುತ್ತಾರೆ. ತಾವೇ ಬರೆಯಬಲ್ಲವರಾಗಿದ್ದೂ ನಾನು ಬರೆಯಲು ಪ್ರಾರಂಭಿಸಿದ ಮೇಲೆ ಅವರು ಬರೆಯುವುದನ್ನು ನಿಲ್ಲಿಸಿಬಿಟ್ಟರು. ನನಗೆ ಉತ್ತೇಜನ ಕೊಟ್ಟು ಚಿತ್ರರಂಗದಲ್ಲಿ ನಾನು ಬೆಳೆಯುವಂತೆ ಮಾಡಿದರು. ನಾವು ಸೋದರರೆಲ್ಲರೂ ಒಬ್ಬೊಬ್ಬರು ಒಂದೊಂದು ವಿಭಾಗದಲ್ಲಿ ಮುಂದುಬರೆಯುವುದಕ್ಕೆ ಅವರ ಜೊತೆ ಕೆಲಸ ಮಾಡುವ ಅವಕಾಶ ಒದಗಿದ್ದೇ ಕಾರಣ.

ಬೆಳಕಿಗೆ ತಂದವರು

ಎಷ್ಟೋ ಜನಕ್ಕೆ ಪ್ರಪ್ರಥಮ ಅವಕಾಶ ಮಾಡಿಕೊಟ್ಟರು. ಉದಾಹರಣೆಗೆ ಗಾಯಕಿ ಪಿ.ಸುಶೀಲಾ, ಗಾಯಕ ಪಿ.ಬಿ.ಶ್ರೀನಿವಾಸ್‌, ರಘುನಾಥ್ ಪಾಣಿಗ್ರಾಹಿ, ಛಾಯಾಗ್ರಾಹಕ ಮಾರುತಿ ರಾವ್‌, ನನ್ನ ಸೋದರ ಕೃಷ್ಣಪ್ರಸಾದ್‌, ನಟರಲ್ಲಿ ಬಾಲಚಂದರ್‌, ಜೆಮಿನಿ ಗಣೇಶನ್‌, ತೆಲುಗಿನ ಚಲಂ, ನಟಿ ಸೂರ್ಯಕಲಾ, ಸಂಕಲನಕಾರ ಶಾಲಿ – ಇನ್ನೂ ಸಂಖ್ಯೆ ಬೇಕಾದಷ್ಟಿದೆ. ಅವರ ಸಹಾಯಕರಾಗಿದ್ದು ಮುಂದೆ ಬಂದವರಲ್ಲಿ ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ್‌, ತೆಲುಗಿನಲ್ಲಿ ಜಿ.ಕೃಷ್ಣಮೂರ್ತಿ. ಆಡು ಭಾಷೆ ಚಿತ್ರಸಾಹಿತ್ಯದಲ್ಲಿ ಅಲಂಕಾರಪೂರ್ಣವಾದ ನಾಟಕೀಯ ಸಂಭಾಷಣೆಗಳನ್ನೇ ಉಪಯೋಗಿಸುತ್ತಿದ್ದ ಕಾಲದಲ್ಲಿ ಆಡು ಮಾತಿನ ಸ್ವಾರಸ್ಯಪೂರ್ಣ ಸಹಜ ಸಂಭಾಷಣೆಗಳನ್ನು ಬರೆದು ಚಿತ್ರಸಾಹಿತ್ಯಕ್ಕೆ ಹೊಸ ಆಯಾಮ ತಂದುಕೊಟ್ಟರು. ಹೀಗೆ ನಿರ್ಮಾಪಕ, ನಿರ್ದೇಶಕ, ನಟ, ಗಾಯಕ, ಸಾಹಿತಿ, ಸಂಗೀತ ನಿರ್ದೇಶಕ ಇಂತಹ ಬಹುಮುಖ ಪ್ರತಿಭೆ ಹೊಂದಿದ್ದ ಒಬ್ಬ ಜಯಂಟ್‌, ಮಹಾ ವ್ಯಕ್ತಿಯ ಮಗನಾಗಿ ಮುಟ್ಟಿದ್ದು, ಅವರ ಜೊತೆ ಕೆಲಸ ಮಾಡುವ ಅವಕಾಶ ಪಡೆದಿದ್ದು ನನ್ನ ಪೂರ್ವಜನ್ಮದ ಪುಣ್ಯ. ಇಂದು ನಾನೇನಾದರೂ ಸಾಧನೆ ಮಾಡಿದ್ದರೆ ಅದೆಲ್ಲ ಅವರ ಆಶೀರ್ವಾದದಿಂದಲೇ.

‘ಸತಿ ಸುಲೋಚನ’ (1934) ಚಿತ್ರದ ರಾವಣನ ಪಾತ್ರದಲ್ಲಿ ಆರೆನ್ನಾರ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು