ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಹುಮುಖ ಪ್ರತಿಭೆ ಕುಣಿಗಲ್ ನಾಗಭೂಷಣ್

ಸಂಭಾಷಣೆಕಾರ, ನಟ
ಪೋಸ್ಟ್ ಶೇರ್ ಮಾಡಿ
ಹೃದಯಶಿವ
ಚಿತ್ರಸಾಹಿತಿ

ಕನ್ನಡದ ಪ್ರಮುಖ ಚಿತ್ರನಿರ್ದೇಶಕರಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಕುಣಿಗಲ್ ನಾಗಭೂಷಣ್‌ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸು ಕಾಣಲಿಲ್ಲ. ಆದರೆ ಸಂಭಾಷಣೆಕಾರನಾಗಿ ಗೆದ್ದರು. 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ರಚಿಸಿರುವ ನಾಗಭೂಷಣ್ ನಟನಾಗಿಯೂ ಕನ್ನಡಿಗರಿಗೆ ಚಿರಪರಿಚಿತರು. ಇಂದು ಅವರ ಸಂಸ್ಮರಣಾ ದಿನ.

ಕನ್ನಡ ಚಿತ್ರರಂಗ ಕಂಡ ಅಪರೂಪದ ಸಂಭಾಷಣಾಕಾರ ಕುಣಿಗಲ್ ನಾಗಭೂಷಣ್. 1942ರ ಡಿಸೆಂಬರ್ 6ರಂದು ಕುಣಿಗಲ್ಲಿನ ಶ್ರೀಕಂಠಯ್ಯ ಹಾಗೂ ಪುಟ್ಟಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಇವರಿಗೆ ಬಾಲ್ಯದಿಂದಲೂ ಭಾವಗೀತೆ, ಜನಪದ ಗೀತೆ, ಸಿನಿಮಾ ಗೀತೆಗಳನ್ನು ಹಾಡುವ ಖಯಾಲಿ ಇತ್ತು. ರಾಮಮಂದಿರದಲ್ಲಿ ದೇವರ ನಾಮ ಹಾಡುವುದೆಂದರೆ ಇವರಿಗಿಷ್ಟ. ಇವರ ಹಾಡುಗಳನ್ನು ಕೇಳುವ ಮಿತ್ರ ಬಳಗವೂ ಇತ್ತು. ಅದಕ್ಕಾಗಿಯೇ ಕುಣಿಗಲ್ಲಿನ ಗೋವಿಂದಶೆಟ್ಟರು ಅನ್ನುವ ವ್ಯಕ್ತಿ ಇವರಿಗೆ ಹಣ ಕೊಟ್ಟು ಹೊಸಹೊಸದಾಗಿ ಬಿಡುಗಡೆಯಾದ ಕನ್ನಡ ಸಿನಿಮಾಗಳನ್ನು ನೋಡಿಕೊಂಡು ಬರುವಂತೆಯೂ, ಆ ಸಿನಿಮಾಗಳ ಹಾಡುಗಳನ್ನು ತಮ್ಮ ಮುಂದೆ ಹಾಡುವಂತೆಯೂ ಪ್ರೇರೇಪಿಸುತ್ತಿದ್ದರಂತೆ.

ಹೀಗೆ ಶುರುವಾದ ಇವರ ಸಿನಿಮಾ ಹುಚ್ಚಿಗೆ ಬೇರೆ ತೆರನಾದ ದಿಕ್ಕು ಒದಗಿಬಂದದ್ದು ‘ವಿಜಯನಗರದ ವೀರಪುತ್ರ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ. ಆ ಚಿತ್ರ ಕುಣಿಗಲ್ಲಿನ ಚಿತ್ರಮಂದಿರವೊಂದರಲ್ಲಿ ಬಿಡುಗಡೆಯಾದಾಗ ಮೊದಲ ದಿನದ ಮೊದಲ ಪ್ರದರ್ಶನದ ಮೊದಲ ಟಿಕೇಟು ಕೊಂಡುಕೊಂಡದ್ದು ನಾಗಭೂಷಣ್ ರವರೇ. ಅದನ್ನು ಗಮನಿಸಿದ ಆರ್.ನಾಗೇಂದ್ರರಾಯರು ‘ಮೊದಲ ಟಿಕೇಟು ನೀನೆ ತಗೊಂಡಿದೀಯ… ನೋಡೋಣ ಸಿನಿಮಾ ಏನಾಗುತ್ತೋ!’ ಅಂತ ಗಾಬರಿಪಡಿಸಿದಾಗ ತಕ್ಷಣ ಟಿಕೇಟಿನ ಹಿಂದೆ ಅವರ ಆಟೋಗ್ರಾಫ್ ಹಾಕಿಸಿಕೊಂಡರಂತೆ. ಮುಂದೆ ಆ ಸಿನಿಮಾ ಭರ್ಜರಿ ನೂರು ದಿನದ ಪ್ರದರ್ಶನ ಕಂಡಾಗ ಅದೇ ನಾಗೇಂದ್ರರಾಯರನ್ನು  ಭೇಟಿ ಮಾಡಿ ಜೋಪಾನವಾಗಿಟ್ಟುಕೊಂಡಿದ್ದ ಟಿಕೇಟನ್ನೂ, ಅದರ ಹಿಂದೆ ಇದ್ದ ಆಟೋಗ್ರಾಫನ್ನೂ ತೋರಿಸಿದರಂತೆ. ಅಲ್ಲಿಂದ ಶುರುವಾದ ಅವರ ಒಡನಾಟ ಚಿತ್ರರಂಗ ಸೇರಬೇಕೆಂಬ ಕನಸಿಗೆ ಗರಿ ಮೂಡಿಸಿತು.

ಮುಂದೆ, ಅವರು ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿನಲ್ಲಿ ಸಿನಿಮಾಟೋಗ್ರಫಿ ಡಿಪ್ಲೋಮಾ ಕೋರ್ಸಿಗೆ ಸೇರಿಕೊಂಡಾಗ ಸಿನಿಮಾ ವಾತಾವರಣಕ್ಕೆ ಸಮೀಪವಾದರು. ನಟ ಶ್ರೀನಾಥ್, ಬೆಂಗಳೂರು ನಾಗೇಶ್, ಗೋವಿಂದ ನೆಹಲಾನಿಯರು ಇವರ ಕ್ಲಾಸ್ ಮೇಟುಗಳಾಗಿದ್ದರು. ಅಲ್ಲಿಯೂ ಹಾಡಿ ಸಂಸ್ಥೆಯಿಂದ ಸ್ಕಾಲರ್ಷಿಪ್ ಪಡೆದು ಫೀಸು ಕಟ್ಟುತ್ತಿದ್ದದ್ದು ಇವರಿಗಿದ್ದ ಹಾಡುಗಾರಿಕೆಗೆ ಸಂದ ಗೌರವ. ಕೋರ್ಸು ಮುಗಿಯಿತು. ಮುಂದೇನು ಮಾಡಬೇಕೆಂದು ತೋಚದಿದ್ದಾಗ ಮದ್ರಾಸಿನಿಂದ ಗೆಳೆಯ ಬೆಂಗಳೂರು ನಾಗೇಶ್ ಬರೆದ ಕಾಗದ ಬಂತು. ಛಾಯಾಗ್ರಾಹಕನಾಗುವ ಅವಕಾಶವಿರುವುದಾಗಿಯೂ, ಐದು ಸಾವಿರ ಸಂಭಾವನೆ ಸಿಕ್ಕುವುದಾಗಿಯೂ, ತಕ್ಷಣ ಮದ್ರಾಸಿಗೆ ಬರಬೇಕಾಗಿಯೂ ಅದರಲ್ಲಿ ಬರೆದಿತ್ತು. ಪರಿಣಾಮವಾಗಿ 1961ರ ಮೇ 21ರ ಬೆಳಗ್ಗೆ ನಾಗಭೂಷಣ್ ಮದ್ರಾಸು ತಲುಪಿದರು. ಅಲ್ಲಿ ಯಾವ ಅವಕಾಶವಾಗಲೀ, ಐದು ಸಾವಿರ ಸಂಭಾವನೆಯಾಗಲೀ ಇರಲಿಲ್ಲ. ಬದಲಿಗೆ ನಾಗಭೂಷಣ್ ರನ್ನು ಮದ್ರಾಸಿಗೆ ಕಳಿಸಿಕೊಡಲು ತಂದೆ ಶ್ರೀಕಂಠಯ್ಯನವರು ನಿರಾಕರಿಸದಿರಲಿ ಅಂತ ಬೆಂಗಳೂರು ನಾಗೇಶ್ ಹೂಡಿದ ತಂತ್ರವಷ್ಟೇ ಆಗಿತ್ತದು.

ಬಂದದ್ದಾಯಿತು. ಹೊಟ್ಟೆಪಾಡಿಗೆ ಏನಾದರೂ ಮಾಡಲೇಬೇಕಾದ ಪ್ರಸಂಗ ಎದುರಾಗಿ ತಮ್ಮ ಹಳೆಯ ಆಸಕ್ತಿಯಾಗಿದ್ದ ಹಾಡುಗಾರಿಕೆಗೆ ಜೀವ ಬರಬಹುದೆಂಬ ಆಸೆ ಹೊತ್ತು ಅನೇಕ ಸಂಗೀತ ನಿರ್ದೇಶಕರ ಮನೆಗಳಿಗೆ ಹೋಗಿ ಹಾಡಲು ಅವಕಾಶ ಕೇಳಲಾರಂಭಿಸಿದರು. ಜಿ.ಕೆ.ವೆಂಕಟೇಶ್, ವಿಜಯ್ ಭಾಸ್ಕರ್ ಮುಂತಾದ ಸಂಗೀತ ನಿರ್ದೇಶಕರಡಿ ಟ್ರ್ಯಾಕ್ ಸಿಂಗರಾಗಿ ಕೆಲಸ ಮಾಡುವ ಸುಯೋಗ ಒದಗಿ ಬಂತು. ಅದೇ ಸಂದರ್ಭದಲ್ಲಿ ನಟ ರಾಜಾಶಂಕರ್ ಪರಿಚಯವಾಗಿ ವಾದಿರಾಜರ ಬಳಿ ಕರೆದುಕೊಂಡು ಹೋದರು. ಆ ಮೂಲಕ ‘ನಾಂದಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವ ಅವಕಾಶ ಸಿಕ್ಕಿ ಆಯ ತಪ್ಪಿದ ಬದುಕಿಗೊಂದು ದಿಕ್ಕು ದೊರಕಿತಂತಾಯಿತು. ಮುಖ್ಯವಾಗಿ ಡಾ.ರಾಜಕುಮಾರ್ ರವರ ಸಖ್ಯ ಲಭಿಸಿದ್ದು ಕುಣಿಗಲ್ ನಾಗಭೂಷಣ್ ಅವರ ಸಿನಿಮಾ ಬದುಕಿಗೆ ನೀಡಿತು. ಅಣ್ಣಾವ್ರು ನಟಿಸಿದ ಸಿಪಾಯಿ ರಾಮು, ಬಾಳ ಬಂಧನ, ಚಕ್ರತೀರ್ಥ, ಕುಲಗೌರವ, ಮೂರೂವರೆ ವಜ್ರ, ನಂದಗೋಕುಲ, ಸ್ವಯಂವರ, ಶ್ರೀನಿವಾಸ ಕಲ್ಯಾಣ, ದಾರಿ ತಪ್ಪಿದ ಮಗ ಸೇರಿದಂತೆ ಸುಮಾರು ನಲವತ್ತೈದು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕತು.

‘ಋಣಮುಕ್ತಳು’ ಸಿನಿಮಾ ಮುಹೂರ್ತದಲ್ಲಿ ಕುಣಿಗಲ್ ನಾಗಭೂಷಣ್, ಛಾಯಾಗ್ರಾಹಕ ಮಾರುತಿರಾವ್‌, ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಟಿ ಜಯಮಾಲಾ, ಚಂದ್ರಕಾಂತ್ ದೇಸಾಯಿ ಮತ್ತಿತರರು. (ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ)

ಹೀಗೆ ಪಳಗಿದ ನಾಗಭೂಷಣ್ ರೊಳಗೆ ಸ್ವತಂತ್ರ ನಿರ್ದೇಶಕನಾಗುವ ಕನಸು ಚಿಗಿತದ್ದರಲ್ಲಿ ಅಚ್ಚರಿ ಪಡಬೇಕಿಲ್ಲ. ಆ ದೆಸೆಯಲ್ಲಿ 1975ರಲ್ಲಿ ಉದಯ್ ಕುಮಾರ್, ರಾಜೇಶ್ ಪ್ರಮುಖ ತಾರಾಗಣದಲ್ಲಿದ್ದ ‘ಆಶೀರ್ವಾದ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು; ಅವರಿಗಾಗ ಮೂವತ್ತೈದು ವರ್ಷ ವಯಸ್ಸು. ಚಿತ್ರ ಬಾಕ್ಸಾಫೀನಲ್ಲಿ ಸೋತಿತು. ಆದರೂ ಛಲ ಬಿಡದೆ ಎರಡನೇ ಚಿತ್ರಕ್ಕೆ ಕೈ ಹಾಕಿ ಮರುವರ್ಷವೇ  ‘ಬಾಳು ಜೇನು’ ಅಂತ ಹೆಸರಿಟ್ಟರು. ಈ ಚಿತ್ರದ ವಿಶೇಷವೆಂದರೆ ಆರತಿ, ಗಂಗಾಧರ್ ಮುಂತಾದವರ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಮೊಟ್ಟಮೊದಲಬಾರಿಗೆ ಬಣ್ಣ ಹಚ್ಚಿ 1116 ರೂಪಾಯಿಗಳ ಸಂಭಾವನೆ ಪಡೆದದ್ದು. ರಜನಿ ಮಾಡಿದ್ದ ಪಾತ್ರವನ್ನು ಅಂಬರೀಶ್ ಮಾಡಬೇಕಾದ ಸ್ಥಿತಿ ಇತ್ತಾದರೂ ರಜನಿಯವರ ಸ್ಟೈಲ್ ಗೆ ಮಾರುಹೋಗಿದ್ದ ನಾಗಭೂಷಣ್ ಆ ಚಿತ್ರದ ನಿರ್ಮಾಪಕ ಬಾಲನ್ ಮುಂದೆ ರಜನಿಯವರನ್ನು ನಿಲ್ಲಿಸಿ ಒಂದು ಡೈಲಾಗ್ ಕೊಟ್ಟು ಸ್ಟೈಲಿಶ್ ಆಗಿ ಅಭಿನಯಿಸುವಂತೆ ಹುರಿದುಂಬಿಸಿ ಪಾತ್ರ ಕೊಡಿಸಿದ್ದು ಈಗ ಇತಿಹಾಸ; ಆ ಚಿತ್ರವೂ ಗೆಲ್ಲಲಿಲ್ಲ.

ನಿರ್ದೇಶಕರಾಗಿ ಅಷ್ಟೇನೂ ಫಲ ಸಿಕ್ಕದೆ ಕಂಗಾಲಾಗಿದ್ದ ಕುಣಿಗಲ್ ನಾಗಭೂಷಣ್ ರಿಗೆ ಮರು ಜೀವ ಕೊಟ್ಟದ್ದು ಸಂಭಾಷಣಾಕಾರನಾಗುವ ಯೋಗ. ವೈ.ಆರ್.ಸ್ವಾಮಿ ನಿರ್ದೇಶನದ ‘ಮಮತೆ’ ಸಂಭಾಷಣಾಕಾರರಾಗಿ ಅವರಿಗೆ ಪ್ರಥಮ ಚಿತ್ರ. ಚಿತ್ರ ನೂರು ದಿನ ಓಡಿತಾದರೂ ನಾಗಭೂಷಣ್ ಸತತ ಐದು ವರ್ಷಗಳ ಕಾಲ ಕೆಲಸವಿಲ್ಲದೇ ಮನೆಯಲ್ಲಿ ಕೂರಬೇಕಾಗಿ ಬಂದದ್ದು ವಿಪರ್ಯಾಸ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿ 1979ರಲ್ಲಿ ಮದ್ರಾಸು ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಬೇಕಾಯಿತು. ಕುಣಿಗಲ್ ನಾಗಭೂಷಣ್ ಸಂಭಾಷಣಾಕಾರರಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭವಾದದ್ದು ವಿಷ್ಣುವರ್ಧನ್ ಅಭಿನಯದ ‘ಸಿಂಹಜೋಡಿ’ ಚಿತ್ರದ ಮೂಲಕ. ಚಿತ್ರ ಭರ್ಜರಿಯಾಗಿ ಓಡಿತು. ನಾಗಭೂಷಣ್ ಸಂಭಾಷಣಾಕಾರನಾಗಿ ಬ್ಯುಸಿಯಾದರು. ವಿಷ್ಣು ನಟಿಸಿದ ಸಾಹಸಸಿಂಹ, ಸಿಂಹಗರ್ಜನೆ, ಹೃದಯಗೀತೆ, ಚಿನ್ನದಂತ ಮಗ, ನಾಗಕಾಳಭೈರವ, ರುದ್ರನಾಗ, ಊರಿಗೆ ಉಪಕಾರಿ, ಮಹಾಪ್ರಚಂಡರು ಒಳಗೊಂಡಂತೆ ಸರಿಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಡೈಲಾಗ್ಸ್ ಬರೆದರು.

ಶಂಕರ್ ನಾಗ್ ರವರ ಸಾಂಗ್ಲಿಯಾನ, ಸಿ.ಬಿ.ಐ.ಶಂಕರ್, ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ, ಹಸಿದ ಹೆಬ್ಬುಲಿ, ನ್ಯಾಯಕ್ಕಾಗಿ ನಾನು ಥರದ ಆಕ್ಷನ್ ಚಿತ್ರಗಳಿಂದ ಹಿಡಿದು ಜಗ್ಗೇಶ್ ನಟಿಸಿರುವ ಭಂಡ ನನ್ನ ಗಂಡ, ಸೂಪರ್ ನನ್ಮಗ, ಬಲ್ ನನ್ಮಗ, ಬೇಡ ಕೃಷ್ಣ ರಂಗಿನಾಟದಂಥ ಕಾಮಿಡಿ ಚಿತ್ರಗಳವರೆಗೆ ವಿಭಿನ್ನತೆ ಮೆರೆದ ಇವರೊಳಗಿನ ಸಂಭಾಷಣಾಕಾರ ನಿಜಕ್ಕೂ ಬೆರಗು ಮೂಡಿಸುತ್ತಾನೆ. ಇಬ್ಬರ ಹೆಂಡಿರ ಮುದ್ದಿನ ಪೊಲೀಸ್, ಪೊಲೀಸನ ಹೆಂಡತಿ, ಕೊಲ್ಲೂರ ಕಾಳ, ಕಿತ್ತೂರಿನ ಹುಲಿ ಚಿತ್ರಗಳಿಗೆ ಇವರು ಬರೆದ ಮಾತುಗಳಿಂದ ಶಶಿಕುಮಾರ್ ಇಮೇಜೇ ಬದಲಾದದ್ದು ಗಮನಿಸಬೇಕಾದ ಅಂಶ. ಈ ನಿಟ್ಟಿನಲ್ಲಿ ಟೈಗರ್, ಮುತ್ತಿನಂಥ ಮನುಷ್ಯ, ಅಗ್ನಿಪರೀಕ್ಷೆ, ಟೈಗರ್ ಗಂಗು, ಕಲಿಯುಗ ಭೀಮ ಚಿತ್ರಗಳ ಮೂಲಕ ಪ್ರಭಾಕರ್ ಇಮೇಜಿಗೆ ಒಗ್ಗುವಂಥ ಡೈಲಾಗ್ಸ್ ಬರೆದು ಜನಮೆಚ್ಚಿಗೆ ಪಡೆದದ್ದೂ ವಿಶೇಷ. ಹೀಗೆ, ಸರಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಕುಣಿಗಲ್ ನಾಗಭೂಷಣ್ ರಿಗೆ ‘ಗೌರಿ ಗಣೇಶ (1991-92)’ ಹಾಗೂ ‘ಯಾರಿಗೂ ಹೇಳ್ಬೇಡಿ (1994-95) ಚಿತ್ರಗಳಿಗೆ ಕರ್ನಾಟಕ ಸರ್ಕಾರ ‘ಅತ್ಯುತ್ತಮ ಸಂಭಾಷಣಾಕಾರ’ ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಕುಣಿಗಲ್ ನಾಗಭೂಷಣ್ – ಅನಂತ್ ನಾಗ್ ಕಾಂಬಿನೇಶನ್ನಿನಲ್ಲಿ ಬಂದ ಫಣಿ ರಾಮಚಂದ್ರ ನಿರ್ದೇಶನದ ಗಣೇಶ ಸೀರೀಸ್ ಸಿನಿಮಾಗಳು ಜನಮಾನಸದಲ್ಲಿ ಹಾಸು ಹೊಕ್ಕಾಗಿರುವುದು ವಿಶಿಷ್ಟ ಸಂಗತಿ. ಜೊತೆಗೆ ಚಿತ್ರಗಳಲ್ಲಿ ಪಾತ್ರಗಳನ್ನೂ ಮಾಡುವ ಮೂಲಕ ಪ್ರಸಿದ್ಧ ನಟರ ಪಟ್ಟಿಯಲ್ಲೂ ಇವರು ಸೇರಲ್ಪಡುತ್ತಾರೆ. ಇವರಿಗಿದ್ದ ಸೆನ್ಸ್ ಆಫ್ ಹ್ಯೂಮರ್ ಪ್ರಿಯವೆನಿಸುತ್ತದೆ. ಬರವಣಿಗೆ, ನಟನೆ, ನಿರ್ದೇಶನ… ಹೀಗೆ ಕಲೆಯ ವಿವಿಧ ಪ್ರಕಾರಗಳಲ್ಲಿ ಹಿಡಿತ ಸಾಧಿಸಿದ್ದ ಕುಣಿಗಲ್ ನಾಗಭೂಷಣ್ ತಮ್ಮ 70ನೇ ವಯಸ್ಸಿನಲ್ಲಿ 2013ರ ಜೂನ್‌ 23ರಂದು ಹೃದಯಾಘಾತದಿಂದ ತೀರಿಕೊಂಡರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ