ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಟೈಗರ್ ಪ್ರಭಾಕರ್

ನಟ, ನಿರ್ದೇಶಕ
ಪೋಸ್ಟ್ ಶೇರ್ ಮಾಡಿ

(ಬರಹ: ಟಿ.ಜಿ.ನಂದೀಶ್‌, ತೀರ್ಥಹಳ್ಳಿ)

ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಕಠಿಣ ಪರಿಶ್ರಮದಿಂದ ದೊಡ್ಡ ಯಶಸ್ಸು ಕಂಡ ಕಲಾವಿದ. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು ವಿಶಿಷ್ಟ ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ ಗಮನ ಸೆಳೆದು ಪ್ರಮುಖ ಖಳನಾಗಿ ಪ್ರಮೋಟ್ ಆಗಿ ಬಹುಬೇಡಿಕೆಯ ಖಳನಟನಾಗಿ ಹೆಸರು ಮಾಡಿದರು. ಕ್ರಮೇಣ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ನೆಲೆಯಾದವರು ಪ್ರಭಾಕರ್.

ಕನ್ನಡ ಸಿನಿಮಾವೊಂದರ ಚಿತ್ರೀಕರಣದಲ್ಲಿ ವರನಟ ರಾಜಕುಮಾರ್ ಅವರೊಂದಿಗೆ ಪ್ರಭಾಕರ್ (ಫೋಟೊ: ಭವಾನಿ ಲಕ್ಷ್ಮೀನಾರಾಯಣ)‌
  • ಪ್ರಭಾಕರ್ ತಮ್ಮ ನಟನಾ ಬದುಕಿನ ಸಮಯದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದ ಪ್ರಭಾಕರ್ ಪಂಚಭಾಷಾ ನಟ. ಮತ್ತು ದಕ್ಷಿಣ ಭಾರತ ಸಿನಿರಂಗದಲ್ಲಿ ಅವರಿಗೆ ಮಾಸ್ ಇಮೇಜ್ ಇತ್ತು.
  • ಕನ್ನಡದಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಅವರಂತಹ ಹಿರಿಯ ಸ್ಟಾರ್ ನಟರುಗಳ ಎದುರು ವಿಲನ್ ಆಗಿ ಮಿಂಚಿದ ಪ್ರಭಾಕರ್ ಈ ಎಲ್ಲಾ ನಟರು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ಖಳನಾಯಕನ ಇಮೇಜ್ ದಾಟಿ ನಾಯಕನ ಸ್ಥಾನಕ್ಕೆ ಬಡ್ತಿ ಪಡೆದರು. ಬರೀ ನಟನೆಗೆ ಸೀಮಿತವಾಗದೆ ನಿರ್ದೇಶನ, ಚಿತ್ರನಿರ್ಮಾಣದಲ್ಲೂ ತೊಡಗಿಸಿಕೊಂಡು ಅಲ್ಲಿಯೂ ತಕ್ಕಮಟ್ಟಿಗೆ ಯಶಸ್ಸು ಕಂಡರು.
  • ಆಗಿನ ಕಾಲದಲ್ಲಿ ಒಬ್ಬ ಹೊಸ ಹೀರೋ ಇರಲಿ, ಹೊಸ ವಿಲನ್ ಉದಯಿಸುವುದು ಕಷ್ಟವಾಗಿತ್ತು. ಯಾಕೆಂದರೆ ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಸುಂದರ್ ಕೃಷ್ಣ ಅರಸ್, ಸುಧೀರ್ ಮುಂತಾದವರು ಖಳನಾಯಕರಾಗಿ ಬಹುದೊಡ್ಡ ಖ್ಯಾತಿ ಗಳಿಸಿದ್ದರು. ಅಂಥ ಸಂದರ್ಭದಲ್ಲಿಯೂ ಪ್ರಭಾಕರ್ ವಿಶಿಷ್ಟ ನಟನಾಶೈಲಿ ಎಲ್ಲರ ಗಮನ ಸೆಳೆಯಿತು, ಅವರನ್ನು ಬೆಳೆಸಿತು.
ತೆಲುಗು ನಟ ಚಿರಂಜೀವಿ ಅವರೊಂದಿಗೆ (ಫೋಟೊ ಕೃಪೆ: ಟೈಗರ್ ಪ್ರಭಾಕರ್ ಫ್ಯಾನ್ ಪೇಜ್‌)
  • ಖಳನಾಗಿ ಮಿಂಚಿದ ಪ್ರಭಾಕರ್ ನಾಯಕನ‌ ಪಟ್ಟಕ್ಕೆ ಏರಿದ ಬಳಿಕ ಪೋಲಿಸ್ ಮತ್ತು ಸಿಬಿಐ ಅಧಿಕಾರಿಯ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯರಾದರು‌. ಅತಿ ಕಡಿಮೆ ಅವಧಿಯಲ್ಲಿ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಇದರಲ್ಲಿ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ ಚಿತ್ರಗಳಿದೆ.
  • ಪ್ರಭಾಕರ್ ಕನ್ನಡದ ನಂತರ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ್ದರು. ಅಲ್ಲಿ ಚಿರಂಜೀವಿ ಚಿತ್ರಗಳೆಂದರೆ ಖಳನಾಗಿ ಪ್ರಭಾಕರ್ ಇರಲೇಬೇಕು ಎನ್ನುವ ಮಟ್ಟಕ್ಕೆ ಹವಾ ಸೃಷ್ಟಿಸಿದ್ದರು. ತೆರೆ ಮೇಲೆ ಈ ಜೋಡಿ ಅಭಿಮಾನಿಗಳ ಮನಸೂರೆ ಮಾಡಿತ್ತು. ತೆಲುಗು ಚಿತ್ರರಂಗದಲ್ಲಿ ಪ್ರಭಾಕರ್ ಎಂಬುದು ಕಾಮನ್ ನೇಮ್ ಆಗಿತ್ತು. ಪ್ರಭಾಕರ್, ಪ್ರಭಾಕರ್ ರೆಡ್ಡಿ ಹೆಸರುಗಳನ್ನು ಹೊಂದಿದ್ದ ಕಲಾವಿದರು ಅಲ್ಲಿದ್ದರು. ಈ ಕಾರಣಕ್ಕೆ ನಮ್ಮ ಪ್ರಭಾಕರ್ ಅಲ್ಲಿ ‘ಕನ್ನಡಂ ಪ್ರಭಾಕರ್’ ಎಂದೇ‌ ಮನೆಮಾತಾಗಿದ್ದರು.
  •  ಚಿರಂಜೀವಿ ಅವರಿಗೆ ಪ್ರಭಾಕರ್ ಒಂದು ರೀತಿ ಲಕ್ಕಿ ಚಾರ್ಮ್ ಆಗಿದ್ದರು. ಚಿರಂಜೀವಿ ಎದುರು ಪ್ರಭಾಕರ್ ಖಳನಾಗಿ ಅಭಿನಯಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಚಟ್ಟಾನಿಕಿ ಕಲ್ಲು ಲೇವು, ರೋಷಗಾಡು, ಬಿಲ್ಲಾ ಬಾಷಾ, ಜ್ವಾಲಾ, ಜಗದೇಕವೀರುಡು ಅತಿಲೋಕ ಸುಂದರಿ, ರಾಕ್ಷಸುಡು, ಕೊಡಮ ಸಿಂಹ, ಜೇಬು ದೊಂಗ ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಎದುರಾಳಿಗಳಾಗಿ ಮಿಂಚಿದ್ದಾರೆ‌.
ನಿರ್ದೇಶಕ ವಿ.ಸೋಮಶೇಖರ್‌, ನಟರಾದ ಸುಧೀರ್ ಮತ್ತು ವಜ್ರಮುನಿ ಅವರೊಂದಿಗೆ (ಫೋಟೊ ಕೃಪೆ: ಟೈಗರ್ ಪ್ರಭಾಕರ್ ಫ್ಯಾನ್ ಪೇಜ್‌)
  • ರಜನೀಕಾಂತ್ ಮತ್ತು ಪ್ರಭಾಕರ್ ಬದುಕಿನಲ್ಲಿ ಅನೇಕ ಸಾಮ್ಯತೆಗಳಿದೆ. ಇಬ್ಬರು ಯಾವುದೇ ಪ್ರಭಾವ, ಸಿನಿಮಾ ಹಿನ್ನೆಲೆ ಇಲ್ಲದೆ ಪ್ರತಿಭೆ ಮತ್ತು ಪರಿಶ್ರಮದಿಂದ ಬೆಳೆದವರು. ಖಳನಾಗಿ ಮನೆಮಾತಾಗಿ ನಾಯಕನಾಗಿ ಹೊಸ ಬೆಲೆ – ನೆಲೆ ಕಂಡುಕೊಂಡವರು. ರಜನೀಕಾಂತ್ ನಾಯಕನಾಗಿ ಬೆಳೆದ ಬಳಿಕ ಅವರ ಹಲವು ಚಿತ್ರಗಳಿಗೆ ಪ್ರಭಾಕರ್ ವಿಲನ್ ಆಗಿದ್ದರು. ಇವರಿಬ್ಬರ ನಡುವಿನ ತೆರೆ ಮೇಲಿನ‌ ಕಾದಾಟ ನೋಡುಗರ ಮೆಚ್ಚುಗೆ ಗಳಿಸಿತ್ತು.
  • ಕನ್ನಡದಲ್ಲಿ ಪ್ರಭಾಕರ್ ನಟಿಸಿ, ನಿರ್ದೇಶಿಸಿದ ‘ಬಾಂಬೆ ದಾದಾ’ ಚಿತ್ರವು ‘ಪಾಂಡ್ಯನ್’ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಆಯ್ತು. ಅಲ್ಲಿ ನಾಯಕನಾಗಿ ಮಿಂಚಿದ್ದು ರಜನೀಕಾಂತ್. ಕನ್ನಡ ಚಿತ್ರರಂಗದ ನಾಯಕ ಬರೆದ ಕಥೆಗೆ ರಜನೀಕಾಂತ್ ಹೀರೋ ಆಗಿದ್ದು ಒಂದು ವಿಶಿಷ್ಟ ದಾಖಲೆಯಾಗಿದೆ.
  • ರಜನೀಕಾಂತ್ ನಟನೆಯ ‘ಅಣ್ಣಾಮಲೈ’ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದು, ರಜನಿಗೆ ಸರಿಸಮನಾಗಿ ಮಿಂಚಿದ್ದರು ಪ್ರಭಾಕರ್. ರಜನೀಕಾಂತ್ ನಟನೆಯ ಸೂಪರ್ ಹಿಟ್ ‘ಮುತ್ತು’ ಚಿತ್ರದಲ್ಲಿಯೂ ಪ್ರಭಾಕರ್ ಅವರು ಎಸ್‌ಪಿ ಪ್ರತಾಪ್ ರಾಯುಡು ಪಾತ್ರ ಮಾಡಿದ್ದರು.
  • ‘ಚಕ್ರವ್ಯೂಹ’ ಚಿತ್ರ ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಬಳಿಕ ಈಶ್ವರಿ ಪ್ರೊಡಕ್ಷನ್ಸ್‌ ಮಾಲೀಕರಾದ ಎನ್.ವೀರಾಸ್ವಾಮಿ ಮತ್ತು ವಿ. ರವಿಚಂದ್ರನ್ ಇದೇ ಚಿತ್ರವನ್ನು ಹಿಂದಿಯಲ್ಲಿ ‘ಇನ್ಕ್ವಿಲಾಬ್’ ಹೆಸರಲ್ಲಿ, ಅಮಿತಾಭ್ ಬಚ್ಚನ್ ನಾಯಕತ್ವದಲ್ಲಿ ನಿರ್ಮಿಸಿದರು. ಆಗ ‘ಚಕ್ರವ್ಯೂಹ’ ಚಿತ್ರದಲ್ಲಿ ತಾವು ನಿರ್ವಹಿಸಿದ್ದ ಖಳನಟನ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿಯೂ ಪ್ರಭಾಕರ್ ಅವರೇ ನಿರ್ವಹಿಸಿದರು. ಆ ಮೂಲಕ ಬಾಲಿವುಡ್‌ನ ಬಿಗ್ ಬಿ ಎದುರು ನಟಿಸಿ ಸೈ ಎನಿಸಿಕೊಂಡರು. ‘ಶರಾರಾ’, ‘ಜವಾಬ್‌ ಹಮ್‌ ದೇಂಗೆ’ ಪ್ರಭಾಕರ್ ನಟಿಸಿದ ಮತ್ತೆರೆಡು ಹಿಂದಿ ಚಿತ್ರಗಳು. ಅವರು ಮಲಯಾಳಂನ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.
ನಟ ರಜನೀಕಾಂತ್‌ ಜೊತೆ (ಫೋಟೊ ಕೃಪೆ: ಟೈಗರ್ ಪ್ರಭಾಕರ್ ಫ್ಯಾನ್ ಪೇಜ್‌)
  • ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಸ್ಟಾರ್ ಗಳಾದ ಡಾ.ರಾಜ ಕುಮಾರ್, ಅಮಿತಾಭ್ ಬಚ್ಚನ್, ರಜನೀಕಾಂತ್, ಚಿರಂಜೀವಿ, ಮುಮ್ಮುಟಿಯವರೊಡನೆ ನಟಿಸಿದ ಏಕೈಕ ಸ್ಟಾರ್ ನಟ ಟೈಗರ್ ಪ್ರಭಾಕರ್. ಇದಲ್ಲದೆ ತೆಲುಗಿನ ದೊಡ್ಡ ನಟರಾದ ಕೃಷ್ಣ, ಕೃಷ್ಣಂ ರಾಜು, ನಂದಮೂರಿ ಬಾಲಕೃಷ್ಣ, ತಮಿಳು ಸ್ಟಾರ್ ನಟ ವಿಜಯಕಾಂತ್ ಸೇರಿದಂತೆ ಹಲವರೊಂದಿಗೆ ಪ್ರಭಾಕರ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಕನ್ನಡದಲ್ಲಿ ರಾಜ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತನಾಗ್, ಶಂಕರ್ ನಾಗ್, ರಾಜೇಶ್, ಲೋಕೇಶ್, ರವಿಚಂದ್ರನ್, ಶಿವರಾಜ್ ಕುಮಾರ್, ದೇವರಾಜ್, ರಮೇಶ್ ಸೇರಿದಂತೆ ಬಹುತೇಕರೊಡನೆ ಪ್ರಭಾಕರ್ ನಟಿಸಿದ್ದಾರೆ.
  • * ಎತ್ತರದ ಆಳ್ತನ, ಆಕರ್ಷಕ ಮೈಕಟ್ಟು, ಪ್ರತಿಭೆ, ಮ್ಯಾನರಿಸಂ ಎಲ್ಲವೂ ಮೇಳೈಸಿದ್ದ ನಟ. ‘ಟೈಗರ್’ ಚಿತ್ರ ಮಾಡಿ ಆ ಬಳಿಕ ಟೈಗರ್ ಪ್ರಭಾಕರ್ ಎಂದೇ ಜನಪ್ರಿಯರಾದರು. ಆಕ್ಷನ್‌ ಪಾತ್ರಗಳ ಜೊತೆಗೆ ಎಮೋಷನಲ್ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಪ್ರಭಾಕರ್ ಕನ್ನಡ ಚಿತ್ರರಂಗದ ಹೆಮ್ಮೆ. * ಕತೆ, ಚಿತ್ರಕಥೆ ರಚನೆಯ ಜೊತೆಗೆ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಇದರ ಜೊತೆಗೆ ಒಂದು ಸಿನಿಮಾದಲ್ಲಿ ಸಿನಿಮಾಟೋಗ್ರಫಿ‌ ಮಾಡಿದ ಹೆಗ್ಗಳಿಕೆಯು ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಅವರೊಬ್ಬ ಒಳ್ಳೆಯ ನಟನಷ್ಟೇ ಅಲ್ಲ, ಸಿನಿಮಾಗ ಬಗ್ಗೆ ಅಪಾರ ಪ್ಯಾಷನ್‌ ಇದ್ದಂತಹ ವ್ಯಕ್ತಿ. ವಿಶಿಷ್ಟ ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿಯಲ್ಲಿನ ವೈವಿಧ್ಯತೆಯಿಂದ ಇವತ್ತಿಗೂ ನೆನಪಾಗುತ್ತಾರೆ.

    ಟೈಗರ್ ಪ್ರಭಾಕರ್‌ | ಜನನ: 30/03/1948 | ನಿಧನ: 25/03/2001

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮೇರು ತಾರೆ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ