ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಫೈಟರ್ ಶಿವಯ್ಯ

ಸಾಹಸ ನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಕನ್ನಡ ಚಿತ್ರರಂಗದ ಅಗ್ರಪಂಕ್ತಿಯ ಸಾಹಸ ಸಂಯೋಜಕ ಶಿವಯ್ಯ. ಸಿನಿಮಾ ವಲಯದಲ್ಲಿ `ಫೈಟರ್ ಶಿವಯ್ಯ’ ಎಂದೇ ಹೆಸರಾಗಿದ್ದರು. ಮಂಡ್ಯ ಜಿಲ್ಲೆ ನಾಗಮಂಗಲ ಸಮೀಪದ ಎಲೆಕೊಪ್ಪ ಹುಟ್ಟೂರು. ಜನಿಸಿದ್ದು 1932ರಲ್ಲಿ. ಎಂಟನೇ ತರಗತಿ ಓದಿದ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕ ಹಂಗಾಮಿ ವೃತ್ತಿ ಸಿಕ್ಕಿತ್ತು. ಸಾಹಸ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿಯಿದ್ದ ಅವರಿಗೆ ಕ್ರಮೇಣ ಶಿಕ್ಷಕ ವೃತ್ತಿ ಬೇಸರ ತಂದಿತು. ಹಿತೈಷಿಗಳ ಸಲಹೆ ಮೇರೆಗೆ ಶಿಕ್ಷಕ ವೃತ್ತಿ ತೊರೆದು ಮದರಾಸಿಗೆ ತೆರಳಿದರು. ಸಾಹಸ ಸಂಯೋಜಕರಾದ ಸ್ವಾಮಿನಾಥನ್, ಸೋಮು ಅವರಲ್ಲಿ ಸಹಾಯಕರಾಗಿ ಕೆಲಸ ಕಲಿತರು.

ಈ ವೇಳೆ ಅವರಿಗೆ ನಿರ್ದೇಶಕ ಬಿ.ವಿಠಲಾಚಾರ್ಯರ ಸಂಪರ್ಕ ಸಿಕ್ಕಿತು. ಕನ್ನಡಿಗ ಎನ್ನುವ ಅಭಿಮಾನದಿಂದ ವಿಠಲಾಚಾರ್ಯರು ತಮ್ಮ ನಿರ್ಮಾಣ, ನಿರ್ದೇಶನದ ‘ಜಯವಿಜಯ’ (1956) ತೆಲುಗು ಚಿತ್ರದಲ್ಲಿ ಸಾಹಸ ನಿರ್ದೇಶನಕ್ಕೆ ಅವಕಾಶ ಕಲ್ಪಿಸಿದರು. ಈ ಚಿತ್ರದ ಯಶಸ್ಸಿನೊಂದಿಗೆ ಶಿವಯ್ಯ ಬೇಡಿಕೆಯ ಸಾಹಸ ನಿರ್ದೇಶಕರಾದರು. ಬಿ.ವಿಠಲಾಚಾರ್ಯ ನಿರ್ದೇಶನದ `ಮನೆ ತುಂಬಿದ ಹೆಣ್ಣು’ ಅವರು ಸ್ವತಂತ್ರವಾಗಿ ಸಾಹಸ ಸಂಯೋಜಿಸಿದ ಮೊದಲ ಸಿನಿಮಾ. ವೈ.ಆರ್.ಸ್ವಾಮಿ ನಿರ್ದೇಶನದ `ಕಠಾರಿವೀರ’ ಚಿತ್ರ ಶಿವಯ್ಯನವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಶಿವಯ್ಯನವರು ವಿಶೇಷವಾಗಿ ‘ಫೆನ್ಸಿಂಗ್ ಕತ್ತಿ ಫೈಟ್‌’ನಲ್ಲಿ ಹೆಚ್ಚು ಪರಿಣತಿ ಹೊಂದಿದ್ದವರು. ‘ಕಠಾರಿವೀರ’ ಚಿತ್ರದಲ್ಲಿನ ಈ ಪ್ರಯೋಗಕ್ಕೆ ಜನಮನ್ನಣೆ ಸಿಕ್ಕಿತು.

ಕನ್ನಡ ಮತ್ತು ತೆಲುಗಿನ ಪ್ರಮುಖ ಹೀರೋಗಳ ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಶಿವಯ್ಯ ಸಾಹಸ ಸಂಯೋಜಿಸಿದ್ದಾರೆ. ಬಂಗಾರದ ಹೂವು, ಬಹದ್ದೂರು ಗಂಡು, ಸನಾದಿ ಅಪ್ಪಣ್ಣ, ಮಯೂರ, ಶಂಕರ್‍ಗುರು, ಆಪರೇಷನ್‌ ಡೈಮಂಡ್ ರಾಕೆಟ್‌ ಸೇರಿದಂತೆ ಡಾ.ರಾಜ್‍ರ ಎಂಬತ್ತೈದಕ್ಕೂ ಹೆಚ್ಚು ಚಿತ್ರಗಳಿಗೆ ಶಿವಯ್ಯನವರ ಸಾಹಸ ಸಂಯೋಜನೆಯಿದೆ ಎನ್ನುವುದು ವಿಶೇಷ. `ನಾ ನಿನ್ನ ಮರೆಯಲಾರೆ’ ಚಿತ್ರದ ಬೈಕ್ ಸ್ಟಂಟ್‍ಗಳು ಶಿವಯ್ಯನವರ ಸಾಹಸ ಪರಿಣತಿಗೆ ಸಾಕ್ಷ್ಯ ನುಡಿಯುತ್ತವೆ. 1994ರಲ್ಲಿ ಶಿವಯ್ಯ ಅಗಲಿದರು.

ಸಿದ್ದಲಿಂಗಯ್ಯ ನಿರ್ದೇಶನದ `ಬಿಳಿಗಿರಿಯ ಬನದಲ್ಲಿ’ ಚಿತ್ರೀಕರಣದ ಸಂದರ್ಭ. ಜೋಗ ಜಲಪಾತದ ಆಸುಪಾಸಿನಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದದ್ದು. ಚಿತ್ರದ ನಾಯಕ ವಿಷ್ಣುವರ್ಧನ್‌ಗೆ ಸಾಹಸ ಸಂಯೋಜಕ ಶಿವಯ್ಯ (ಟೋಪಿ ತೊಟ್ಟವರು) ಸಾಹಸ ಸನ್ನಿವೇಶವೊಂದನ್ನು ವಿವರಿಸುತ್ತಿದ್ದಾರೆ. ಎಡಭಾಗದಲ್ಲಿರೋದು ಶಿವಯ್ಯನವರ ಅಸಿಸ್ಟೆಂಟ್ ಸ್ವಾಮಿ. ಹುಲಿ ವೇಷ ತೊಟ್ಟು ಮರದ ಮೇಲೆ ಕುಳಿತವರು ಸಹ ಫೈಟರ್‌ಗಳು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮರೆಯಲಾಗದ ಮಿನುಗುತಾರೆ

`ಶರಪಂಜರ’ ಚಿತ್ರ ವೀಕ್ಷಿಸಿದ ಹಿಂದಿ ತಾರೆ ಶರ್ಮಿಳಾ ಟ್ಯಾಗೋರ್, `ಕಲ್ಪನಾರ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಲು ನನ್ನಿಂದ ಆದೀತೋ, ಇಲ್ಲವೋ?’