
ರಟ್ಟಿಹಳ್ಳಿ ನಾಗೇಂದ್ರರಾಯರು ಕನ್ನಡ ಚಿತ್ರರಂಗದಲ್ಲಿ `ಆರ್‍ಎನ್‍ಆರ್’ ಎಂದೇ ಖ್ಯಾತರಾದವರು. ಮಾತಿನ ಯುಗಕ್ಕೂ ಮುನ್ನ ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಮೊನಚು ನೋಟ, ಕಂಚಿನ ಕಂಠದ ನಾಗೇಂದ್ರರಾಯರು ಪೌರಾಣಿಕ – ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಆ ಪಾತ್ರಗಳಿಗೆ ವಿಶೇಷ ಮೆರುಗು ಸಿಗುತ್ತಿತ್ತು.
ಆಗಷ್ಟೇ ನಾನು ನಟನಾಗಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದೆ. ನಾಗೇಂದ್ರರಾಯರ ಚಿತ್ರವೊಂದರಲ್ಲಿ ನಟಿಸಬೇಕೆನ್ನುವುದು ನನ್ನ ಆಸೆಯಾಗಿತ್ತು. ರಾಯರು ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದ `ಮಹಿರಾವಣ’ (1957) ಚಿತ್ರಕ್ಕೆ ಮದರಾಸಿನ ನೆಫ್ಚ್ಯೂನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದಲ್ಲೊಂದು ಪಾತ್ರ ಕೊಡುವಂತೆ ನಿರ್ದೇಶಕ ನಟರಾಜು ಅವರನ್ನು ವಿನಂತಿಸಿಕೊಂಡಿದ್ದೆ. ಮನವಿಗೆ ಸ್ಪಂದಿಸಿದ ಅವರು ಮರುದಿನ ಸ್ಟುಡಿಯೋಗೆ ಬರುವಂತೆ ಹೇಳಿದರು.
ಸ್ಟುಡಿಯೋದಲ್ಲಿ ಭವ್ಯ ಸೆಟ್ ಹಾಕಲಾಗಿತ್ತು. ಮಹಿರಾವಣನ ಪಾತ್ರದಲ್ಲಿದ್ದ ನಾಗೇಂದ್ರರಾಯರು ಸಿಂಹಾಸನದ ಮೇಲೆ ವಿರಾಜಮಾನರಾಗಿದ್ದರು. ಚಿತ್ರದಲ್ಲಿ ನನಗೆ ಸಿಕ್ಕಿದ್ದು ಲಂಕಾಧೂತನ ಪಾತ್ರ. ನನಗೆ ಮೇಕಪ್ ಹಾಕಿ ದೊಡ್ಡ ಮೀಸೆ ಅಂಟಿಸಿದರು. `ಪರ್ಸನಾಲಿಟಿ ಇಲ್ಲದಿದ್ದರೂ ನೀನು ಡೈಲಾಗ್ ಚೆನ್ನಾಗಿ ಹೇಳ್ತೀಯಾ’ ಎನ್ನುವ ಮೆಚ್ಚುಗೆಯೂ ನಿರ್ದೇಶಕರಿಂದ ಸಿಕ್ಕಿತು. ಮೊದಲ ಸನ್ನಿವೇಶದಲ್ಲೇ ನಾನು ಮಹಿರಾವಣನನ್ನು (ನಾಗೇಂದ್ರರಾಯರು) ಎದುರುಗೊಂಡು ಸಂಭಾಷಣೆ ಹೇಳಬೇಕು. ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ನಾನು ರಾಯರ ಎದುರು ಹೋದೆ.
ನನ್ನನ್ನು ನೋಡುತ್ತಲೇ ರಾಯರು ಕಣ್ಣು ಕೆಂಪು ಮಾಡಿದರು. `ಈತನಿಗೆ ನನಗಿಂತಲೂ ದಪ್ಪಗಿನ ಮೀಸೆ ಇಟ್ಟಿದ್ದೀರಿ! ಮಹಿರಾವಣನಾದ ನನ್ನ ಮೀಸೆ ಆತನ ಮೀಸೆಗಿಂತ ಚಿಕ್ಕದಿದೆ. ಅವನ ಮೀಸೆಯನ್ನು ಚಿಕ್ಕದು ಮಾಡಿ’ ಎಂದು ರಾಯರು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. `ಕ್ಲೋಸ್‍ಅಪ್‍ನಲ್ಲಿ ಶೂಟ್ ಮಾಡ್ಬೇಕು. ಆತನ ಮೀಸೆ ಸೈಜ್ ಸರಿಯಾಗಿಯೇ ಇದೆ’ ಎನ್ನುವುದು ನಿರ್ದೇಶಕರ ಸಮಜಾಯಿಷಿ. ಇದರಿಂದ ಮತ್ತಷ್ಟು ಕೋಪಗೊಂಡ ರಾಯರು ಸಿಂಹಾಸನದಿಂದಿಳಿದು ಬಿರಬಿರನೆ ಮೇಕಪ್ ರೂಂಗೆ ಹೋದರು.
ನಾಗೇಂದ್ರರಾಯರೊಂದಿಗೆ ನಟಿಸಬೇಕೆನ್ನುವ ಮಹದಾಸೆಯಿಂದ ಬಂದಿದ್ದ ನಾನು ಕಂಗಾಲಾದೆ. ಮೀಸೆ ಕಾರಣದಿಂದ ಅವಕಾಶ ಕೈತಪ್ಪುತ್ತದೇನೋ ಎನ್ನುವುದು ನನ್ನ ಆತಂಕ. `ದಯವಿಟ್ಟು ನನ್ನ ಮೀಸೆ ಸೈಜ್ ಕಡಿಮೆ ಮಾಡಿ…’ ಎಂದು ನಿರ್ದೇಶಕರಲ್ಲಿ ಪರಿಪರಿಯಾಗಿ ಬೇಡಿಕೊಂಡೆ. ನನ್ನ ಒತ್ತಾಯದ ಮೇರೆಗೆ ಮೇಕಪ್‍ಮ್ಯಾನ್ ಕೊಂಚ ಕಡಿಮೆ ಸೈಜ್‍ನ ಮೀಸೆ ಅಂಟಿಸಿದ. ತದನಂತರ ರಾಯರು ಸೆಟ್‍ಗೆ ಬಂದರು. ಶೂಟಿಂಗ್ ಮುಗಿದ ನಂತರ ಬಿಗುಮಾನದಿಂದಲೇ ಅವರು ನನ್ನ ಪರಿಚಯ ಕೇಳಿದರು. `ನಾನು ಸುಬ್ಬಯ್ಯನಾಯ್ಡು ನಾಟಕ ಕಂಪನಿಯಲ್ಲಿದ್ದೆ’ ಎಂದೆ. ರಾಯರಿಗೆ ಸುಬ್ಬಯ್ಯನಾಯ್ಡು ಅತ್ಯಂತ ಆಪ್ತ ಗೆಳೆಯ. `ಮೊದಲೇ ಹೇಳಬಾರದಿತ್ತೇನಯ್ಯಾ?’ ಎಂದು ರಾಯರು ಪ್ರೀತಿಯಿಂದ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತನಾಡಿಸಿದರು.