
ಪಾಂಡುರಂಗ ಪ್ರೊಡಕ್ಷನ್ಸ್ ಅವರ `ಅನುರಾಧ’ ಚಿತ್ರೀಕರಣದ ಸಂದರ್ಭ. ರಾಜಾಶಂಕರ್, ಪಂಢರೀಬಾಯಿ, ಅಶ್ವಥ್ ಇತರರು ಪ್ರಮುಖ ಪಾತ್ರಗಳಲ್ಲಿದ್ದರು. ನರಸಿಂಹರಾಜು ಮತ್ತು ನಾನು ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದೆವು. ಈ ಚಿತ್ರಕ್ಕಾಗಿ ನಾನು ಸೈಕಲ್ ಕಲಿಯುವ ಅನಿವಾರ್ಯತೆ ಎದುರಾಗಿತ್ತು. ಮದ್ರಾಸ್‍ನಲ್ಲಿ ನಟ ಬೆಂಗಳೂರು ನಾಗೇಶ್ ಸಹಕಾರದಲ್ಲಿ ಲೇಡಿಸ್ ಸೈಕಲ್ ಹೊಡೆಯುವುದನ್ನು ಕಲಿತಿದ್ದೆ. ಆದರೆ `ಅನುರಾಧ’ ಚಿತ್ರಕ್ಕೆ ಮೈಸೂರಿನಲ್ಲಿ ಚಿತ್ರೀಕರಣ ನಡೆದಿತ್ತು. ಸೈಕಲ್ ಬರುತ್ತದೆಂದು ನಿರ್ದೇಶಕರಿಗೆ ಧೈರ್ಯದಿಂದ ಭರವಸೆ ಕೊಟ್ಟಿದ್ದೆ. ದುರದೃಷ್ಟವತಾಶ್ ಮೈಸೂರಿನಲ್ಲಿ ನನಗೆ ಲೇಡೀಸ್ ಸೈಕಲ್ ಸಿಗಲಿಲ್ಲ! ಕೊನೆಗೆ ಗಂಡಸರ ಸೈಕಲ್ ಅನ್ನೇ ಹೊಡೆಯುವುದೆಂದು ನಿರ್ಧಾರವಾಯಿತು.
ಚಿತ್ರದಲ್ಲಿ ನರಸಿಂಹರಾಜು ಕಾರು ಡ್ರೈವ್ ಮಾಡುತ್ತಾರೆ. ಸನ್ನಿವೇಶವೊಂದರಲ್ಲಿ ನಾನು ಸೈಕಲ್‍ನಲ್ಲಿ ಅವರ ಕಾರಿಗೆ ಡ್ಯಾಷ್ ಹೊಡೆಯಬೇಕು. ಗಂಡಸರ ಸೈಕಲ್ ಆದ್ದರಿಂದ ಕುಳ್ಳಿಯಾದ ನನಗೆ ಪೆಡಲ್ ಸಿಗುತ್ತಲೇ ಇರಲಿಲ್ಲ. ಅಲ್ಲದೆ ಬ್ರೇಕ್ ಹಿಡಿಯೋದನ್ನು ಕೂಡ ಮದ್ರಾಸ್‍ನಲ್ಲಿ ಸರಿಯಾಗಿ ಕಲಿತಿರಲಿಲ್ಲ. ಆಗ ಈ ಸನ್ನಿವೇಶದ ಚಿತ್ರೀಕರಣದುದ್ದಕ್ಕೂ ತಮಾಷೆಗಳು ನಡೆದವು. ಸೈಕಲ್ ಮೇಲೆ ಕುಳಿತಿದ್ದ ನನ್ನನ್ನು ಯಾರೊ ಒಬ್ಬರು ಎತ್ತರದ ಪ್ರದೇಶದಿಂದ ದಬ್ಬುತ್ತಿದ್ದರು. ಶಾಟ್ ಮುಗಿಯುತ್ತಿದ್ದಂತೆ ಮತ್ತಿಬ್ಬರು ಓಡಿಬಂದು ಸೈಕಲ್ ಹಿಡಿದುಕೊಳ್ಳಬೇಕಿತ್ತು!
ಮೊದಲ ಟೇಕ್‍ನಲ್ಲಿ ಸೈಕಲ್ ಮೇಲೆ ಕುಳಿತಿದ್ದ ನನ್ನನ್ನು ಯಾರೋ ದಬ್ಬಿದರು. ಪೆಡಲ್ ಸಿಗದೆ ನಾನು ಪರದಾಡುತ್ತಾ ಗಾಬರಿಗೊಂಡೆ. ಬ್ರೇಕ್ ಹಿಡಿಯಲು ಗೊತ್ತಾಗದೆ ರಸ್ತೆ ಬಿಟ್ಟು ಪಕ್ಕದ ಮಣ್ಣಿನ ಗುಂಡಿಯಲ್ಲಿ ಸೈಕಲ್ ಜತೆಗೇ ಬಿದ್ದೆ! ನರಸಿಂಹರಾಜು ಕಾರಿನಿಂದಿಳಿದು ಕೂಗುತ್ತಾ ಓಡಿ ಬಂದರು. ಕೈ-ಕಾಲು ಪರಚಿಕೊಂಡ ನನ್ನನ್ನು ಮೆಲ್ಲಗೆ ನಡೆಸಿಕೊಂಡು ಬಂದರು. ನೋವು ತೋರಿಸಿಕೊಳ್ಳದೆ ಮತ್ತೊಂದು ಟೇಕ್‍ಗೆ ರೆಡಿಯಾದೆ. ನಾನು ಸೈಕಲ್ ಓಡಿಸುವ ಪರಿಯಿಂದ ಕಾರಿನ ಡ್ರೈವರ್ ಸೀಟಿನಲ್ಲಿದ್ದ ನರಸಿಂಹರಾಜು ನನಗಿಂತಲೂ ಹೆಚ್ಚು ಗಾಬರಿಗೊಂಡಿದ್ದರು! ಎರಡನೇ ಟೇಕ್‍ನಲ್ಲಿ ನಾಲ್ಕೈದು ಸಹಾಯಕರೊಂದಿಗೆ ಅಂತೂ ಶಾಟ್ ಓಕೆ ಆಯ್ತು.