ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ರಾಜ್ – ಕಂಡದ್ದು ಆರು ಸಲ…

ಪೋಸ್ಟ್ ಶೇರ್ ಮಾಡಿ
ಡಾ.ಕೆ.ಪುಟ್ಟಸ್ವಾಮಿ
ಲೇಖಕ

ನನಗೆ ರಾಜ್ ಮೇಲಿದ್ದ ಅಭಿಮಾನದ ಹಿಂದಿನ ತರ್ಕವೇನೂ ತಿಳಿಯದು. ಆದರೆ ಅವರನ್ನು, ಅವರ ಚಿತ್ರಗಳನ್ನು ಆರಾಧಿಸಿದ್ದು ಸತ್ಯ.ಒಮ್ಮೆ ಈ ರಾಜಕುಮಾರ ಎಂಬ ಮಾಂತ್ರಿಕ ಕಲಾವಿದನ ಮೋಡಿಗೆ ಸಿಕ್ಕಮೇಲೆ ದಿನನಿತ್ಯವೂ ಅವರ ಚಿತ್ರಗಳು ಮತ್ತು ಅವರದೇ ಧ್ಯಾನವಾಗಿತ್ತು.

ನಾನು ರಾಜಕುಮಾರರ ಬಗ್ಗೆ ಅಭಿಮಾನದಿಂದ ಮಾತನಾಡುವಾಗ ಅನೇಕ ಗೆಳೆಯರು ಹಂಗಿಸುತ್ತಿದ್ದರು. ಅಭಿಮಾನ ಒಳ್ಳೆಯದಲ್ಲವೆನ್ನುತ್ತಿದ್ದರು. ಹಾಗೆ ಮಾಡುವ ಮೂಲಕ ನಮ್ಮ ವ್ಯಕ್ತಿತ್ವವನ್ನು ನಾವೇ ಹೀಗಳದಂತೆ…. ಹೀಗೆ ಅನೇಕ ತಾತ್ವಿಕ ಚಿಂತನೆ, ಸಿದ್ಧಾಂತ ಇತ್ಯಾದಿ ಮುಂದಿಡುತ್ತಿದ್ದರು. ಆದರೆ ರಾಜ್ ನಿರ್ಗಮಿಸಿದ ನಂತರ ಅದೇ ಗೆಳೆಯರು ಬದುಕಿದ್ದಾಗ ಅವರನ್ನು ಭೇಟಿಯಾಗಲಿಲ್ಲವಲ್ಲ, ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಾಗಲಿಲ್ಲವಲ್ಲ ಎಂದು ಪರಿತಪಿಸಿದ್ದನ್ನು ನೋಡಿದ್ದೇನೆ. ನನಗೆ ರಾಜ್ ಮೇಲಿದ್ದ ಅಭಿಮಾನದ ಹಿಂದಿನ ತರ್ಕವೇನೂ ತಿಳಿಯದು. ಆದರೆ ಅವರನ್ನು, ಅವರ ಚಿತ್ರಗಳನ್ನು ಆರಾಧಿಸಿದ್ದು ಸತ್ಯ. ಒಮ್ಮೆ ಈ ರಾಜಕುಮಾರ ಎಂಬ ಮಾಂತ್ರಿಕ ಕಲಾವಿದನ ಮೋಡಿಗೆ ಸಿಕ್ಕಮೇಲೆ ದಿನನಿತ್ಯವೂ ಅವರ ಚಿತ್ರಗಳು ಮತ್ತು ಅವರದೇ ಧ್ಯಾನವಾಗಿತ್ತು. ಈ ಮೋಡಿಯಿಂದ ಹೊರಬರಲು ಪ್ರಯತ್ನಪಟ್ಟಷ್ಟೂ ಅವರ ಬಿಂಬ ನನ್ನಭಾವದಾಳಕ್ಕೆ ಹೆಚ್ಚು ಹೆಚ್ಚು ಇಳಿಯತೊಡಗಿತು. ಇದರಿಂದ ಮುಕ್ತಿಯೇ ಇಲ್ಲವೇನೋ ಅನಿಸತೊಡಗಿತು. ಅವರನ್ನು ಜೀವಂತವಾಗಿ ನೋಡುವ ಅವಕಾಶ ಸಿಗುವ ಬಗ್ಗೆ ಖಾತ್ರಿ ಇರಲಿಲ್ಲ. ಅವರು ಆಗ ನೆಲೆಯಾಗಿದ್ದದ್ದು ಮದರಾಸಿನಲ್ಲಿ. ಬೆಂಗಳೂರು ಸಹ ದೂರದ ಊರೆ!.

ಹೀಗಿರುವಾಗ 1973 ರಲ್ಲಿ ‘ಸ್ವಯಂವರ’ ಚಿತ್ರವನ್ನು ಕೆ.ಜಿ.ಎಫ್.ನಲ್ಲಿ ಚಿತ್ರೀಕರಿಸುವ ಸುದ್ದಿ ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಸರಿ ರಾಜಕುಮಾರ್ ಯಾವಾಗ ಬರುತ್ತಾರೆ ಎಂದು ತಿಳಿಯುವ ಕಾತರ ತಹತಹ ಶುರುವಾಯಿತು. ಬಂದರೆ ಎಲ್ಲಿ ಉಳಿಯುತ್ತಾರೆಂದು ತಿಳಿದುಕೊಂಡರೆ ಹತ್ತಿರದಿಂದ ರಾಜ್ ಅವರನ್ನು ನೋಡಬಹುದೆಂಬ ಆಸೆ. ಆಗತಾನೆ SSಐಅ ಮುಗಿಸಿ ಪಿಯುಸಿ ಸೇರಿದ್ದ ಕಾಲ. ನನ್ನಂತೆ ರಾಜಕುಮಾರರ ಭಕ್ತನಾದ ನಾಗೇಂದ್ರ ಎಂಬ ವಾರಿಗೆಯ ಪರಿಚಿತನನ್ನು ಜೊತೆ ಮಾಡಿಕೊಂಡು ಶನಿವಾರ ಮತ್ತು ಭಾನುವಾರ ಸರ್ಕಾರಿ ಅತಿಥಿ ಗೃಹಗಳು, ಗಣಿ ಕಂಪನಿಯ ಗೆಸ್ಟ್ ಹೌಸುಗಳಿಗೆ ಭೇಟಿಕೊಡತೊಡಗಿದೆವು. ಅತಿಥಿಗೃಹಗಳಿಗೆ ಹೋಗುವುದು, ಮೇಟಿಯನ್ನು ಅಳುಕಿನಿಂದಲೇ ಮಾತನಾಡಿಸುವುದು, ಇಲ್ಲಿ ಯಾರಾದರೂ ಚಿತ್ರೀಕರಣದ ಶೂಟಿಂಗ್ಗೆ ಬರುವವರಿದ್ದಾರ? ಎಂದು ತಮಿಳಿನಲ್ಲಿ ವಿಚಾರಿಸುವುದು ನಮ್ಮ ವಾರಾಂತ್ಯದ ಕಾರ್ಯಕ್ರಮವಾಗಿತ್ತು. ಇಲ್ಲ ಎಂಬ ಖಾಯಂ ಉತ್ತರ ನಮ್ಮ ಉತ್ಸಾಹಕ್ಕೆ ಭಂಗ ತರುತ್ತಿರಲಿಲ್ಲ.

ರಾಜ್ ಜೊತೆ ಡಾ.ಕೆ.ಪುಟ್ಟಸ್ವಾಮಿ

ಎಷ್ಟೊ ವಾರಗಳ ನಂತರ ಪತ್ರಿಕೆಯೊಂದರಲ್ಲಿ ಸ್ವಯಂವರ ಚಿತ್ರೀಕರಣ ಕೆಜಿಎಫ್‌ನಲ್ಲಿ ನಡೆಯಲಿರುವ ದಿನಾಂಕ ಪ್ರಕಟವಾಯಿತು. ಅದನ್ನು ಅನುಸರಿಸಿ ರಾಜ್ ಉಳಿಯುವುದೆಲ್ಲಿ ಎಂದು ತಿಳಿಯಲು ನಾವು ನಡೆಸಿದ ಕಾರ್ಯಾಚರಣೆ ಕೊನೆಗೂ ಸಫಲವಾಯಿತು. ಬಿಜಿಎಂಎಲ್ – ಗಣಿ ಕಂಪನಿಯ – ಗೆಸ್ಟ್ ಹೌಸ್ ಅವರಿಗಾಗಿ ಮೂರುದಿನ ಮೀಸಲಿಡಲಾಗಿತ್ತು. ಮೇಟಿ ಹತ್ತಿರದಲ್ಲೇ ಶೂಟಿಂಗ್ ನಡೆಯಲಿರುವ ಮಾಹಿತಿಯನ್ನೂ ನೀಡಿ ಉಪಕರಿಸಿದ. ಆ ದಿನ ಬಂತು. ಕಾಲೇಜಿಗೆ ಹೋಗುವ ನೆಪದಲ್ಲಿ ಬೇಗನೆ ಮನೆ ಬಿಟ್ಟೆ. ಗಣಿ ಗೆಸ್ಟ್ ಹೌಸ್ ತಲುಪುವ ವೇಳೆಗೆ ಸುಮಾರು 8.30 ಆಗಿತ್ತು. ಸಾಮಾನ್ಯವಾಗಿ ನಿರ್ಜನವಾಗಿರುತ್ತಿದ್ಧ ಆವರಣದಲ್ಲಿ ಜನಸಂದಣಿಯಿತ್ತು. ಮೂರ್ನಾಲ್ಕು ಅಂಬಾಸಡರ್ ಕಾರುಗಳಿದ್ದವು. ಸಾಮಾನ್ಯವಾಗಿ ಸಂಕೋಚದ ಮುದ್ದೆಯಾಗಿರುತ್ತಿದ್ದ ನಾನು ಧೈರ್ಯಮಾಡಿ ಅತಿಥಿಗೃಹದ ಮೆಟ್ಟಲೇರಿ ಪಡಸಾಲೆಗೆ ಬಂದೆ. ಬಾಗಿಲ ಪಕ್ಕದ ತೆರೆದ ದೊಡ್ಡ ಕಿಟಕಿಯಲ್ಲಿ ಇಣುಕಿದಾಗ ಕಿಟಕಿಯ ಒಳಬದಿ ಗೋಡೆಯ ಪಕ್ಕಹಾಕಿದ್ದ ಮರದ ಸೋಫಾದಲ್ಲಿ ರಾಜ್ ಕುಳಿತಿದ್ದರು. ಅವರ ತಲೆ ಮಾತ್ರ ಕಾಣುತ್ತಿತ್ತು. ಅವರಾಡುತ್ತಿದ್ದ ದನಿ ನಮಗೆಲ್ಲ ಸುಪರಿಚಿತವಲ್ಲವೇ? ಎದುರಿನಲ್ಲಿದ್ದ ಕುರ್ಚಿಯಲ್ಲಿ ಶ್ರೀಮತಿ ಪಾರ್ವತಮ್ಮನವರು ಕನ್ನಡ ಪುಸ್ತಕವನ್ನು ಹಿಡಿದು ಕುಳಿತಿದ್ದರು. ಕಾದಂಬರಿಯೇ ಇರಬೇಕು. ಅವರಿಗೆ ಹತ್ತಿರದಲ್ಲಿ ಮೇಕಪ್ ಹಾಕಿಕೊಂಡ ಬಾಲಣ್ಣ ಕುಳಿತಿದ್ದರು.

‘ಬೇಡರ ಕಣ್ಣಪ್ಪ’ ಚಿತ್ರದ ದೃಶ್ಯ

ಆ ವೇಳೆಗೆ ಕಾರೊಂದು ಬಂತು . ಗಂಭೀರ ಮುದ್ರೆಯ ಪುರುಷ ಮತ್ತು ಆತನೊಡನೆ ಇಳಿದ ಫುಲ್ ಸ್ಕರ್ಟ್ ತೊಟ್ಟ ಹೆಣ್ಣು ಮಗಳನ್ನು ಅಲ್ಲಿಯೇ ಕಾಯ್ದು ನಿಂತಿದ್ದ ವ್ಯಕ್ತಿಯೊಬ್ಬ ಬರಮಾಡಿಕೊಂಡು ಒಳಗೆ ಕರೆದೊಯ್ದ. ಗಣಿಸಂಸ್ಥೆಯ ಹಿರಿಯ ಅಧಿಕಾರಿ ಮತ್ತು ಅವರ ಮಗಳು ರಾಜ್ ಅವರನ್ನು ಭೇಟಿಮಾಡಲು ಬಂದದ್ದು ಅವರನ್ನು ಪರಿಚಯ ಮಾಡಿಕೊಟ್ಟಾಗ ತಿಳಿಯಿತು. ಅವರು ಬಂದ ತಕ್ಷಣ ರಾಜ್ ಎದ್ದರು. ಪಕ್ಕಕ್ಕೆ ತಿರುಗಿದಾಗ ಅವರ ಎಡಪಾರ್ಶ್ವ ದರ್ಶನವಾಯಿತು. ಆ ಬಿಂಬ ಶಾಶ್ವತವಾಗುವಂತೆ ಕಣ್ತುಂಬಿಕೊಂಡೆ. ಅದಾಗಲೇ ಮೇಕಪ್ ಮಾಡಿಕೊಂಡು ಕಾರ್ಮಿಕನ ಉಡುಪು ತೊಟ್ಟು ಚಿತ್ರೀಕರಣಕ್ಕೆ ಸಿದ್ಧವಾಗಿದ್ದರು. ಭೇಟಿಗೆ ಬಂದ ಅಧಿಕಾರಿಗೆ ರಾಜ್ ತಮ್ಮ ಪತ್ನಿಯನ್ನೂ ಪರಿಚಯಿಸಿದರು. ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ನನ್ನ ಕಣ್ಣು ಸೆರೆಹಿಡಿಯುತ್ತಾ ಹೋಯಿತು. ಚಹಾ ಸೇವನೆಯ ನಂತರ ಅತಿಥಿಯನ್ನು ಬೀಳ್ಕೊಟ್ಟ ರಾಜ್ ಚಿತ್ರೀಕರಣಕ್ಕೆ ಹೊರಟುನಿಂತರು. ಅದೆಲ್ಲೋ ಇದ್ದ ನಿರ್ದೇಶಕ ವೈ.ಆರ್.ಸ್ವಾಮಿ ಅವರೂ ಬಂದರು. ಫಿಯೆಟ್ ಕಾರಿನಲ್ಲಿ ಕುಳಿತು ರಾಜ್ ಹೊರಟರು. ಚಿತ್ರೀಕರಣದ ತಂಡದ ವಾಹನಗಳೂ ಹೊರಟವು. ಫೈವ್ ಲೈಟ್ಸ್ ಗಣಿಯ ಬಳಿ ಚಿತ್ರೀಕರಣ ನಡೆಯುವುದು ತಿಳಿದಿದ್ದರಿಂದ ನಾನೂ ಓಡಿದೆ. ಫೈವ್ ಲೈಟ್ಸ್ ಬಳಿ ಅದಾಗಲೆ, ಕ್ಯಾಮರಾ ಟ್ರಾಲಿ, ಲೈಟ್ಸ್, ರಿಫ್ಲೆಕ್ಟರ್ ಮುಂತಾದ ಪರಿಕರಗಳು ಹರಡಿದ್ದರಿಂದ ಸಾಕಷ್ಟು ಜನ ಕುತೂಹಲದಿಂದ ನೆರೆದಿದ್ದರು. ಕನ್ನಡ ಭಾಷೆಯ ಪೊಲೀಸರು ಸಂಭ್ರಮದಿಂದ ಜನರನ್ನು ನಿಯಂತ್ರಿಸುತ್ತಿದ್ದರು.

ಅಲ್ಲಿ ನೆರೆದಿದ್ದವರಲ್ಲಿ ಬಹುತೇಕ ಜನ ತಮಿಳರೇ ಆಗಿದ್ದ ಕಾರಣ ನಟನಟಿಯರ ಬಗೆಗಿನ ಕುತೂಹಲಕ್ಕಿಂತ ಚಿತ್ರೀಕರಣದ ವಿಧಾನವೇ ಹೆಚ್ಚು ಅವರಿಗೆ ಆಸಕ್ತಿದಾಯಕವಾಗಿತ್ತು. ಗಣಿಯಲ್ಲಿ ಕೆಲಸ ಮಾಡಲು ಸಂಗಡಿಗರ ಜೊತೆ ಹೊರಟ ನಾಯಕನನ್ನು ಕಾರಿನಲ್ಲಿ ಹೋಗುತ್ತಿದ್ದ ಬಾಲಕೃಷ್ಣ ಅವರು ಕಾರು ನಿಲ್ಲಿಸಿ ಇಳಿದು ನಾಯಕನ ಜೊತೆ ಮಾತನಾಡುವ ದೃಶ್ಯ. ಅದಷ್ಟು ಚಿತ್ರೀಕರಣ ಮುಗಿಯುವ ವೇಳೆಗೆ ಮಧ್ಯಾಹ್ನ ಸಮೀಪಿಸುತ್ತಿತ್ತು. ನಾವು ಹತ್ತಿರದಿಂದ ರಾಜ್ ಅವರನ್ನು ನೋಡಿದ ಸಂಭ್ರಮದಲ್ಲಿ ಹೊಟ್ಟೆ ತಾಳ ಹಾಕುತ್ತಿದ್ದದ್ದು ಅರಿವಿಗೇ ಬಂದಿರಲಿಲ್ಲ. ಇದ್ದಕ್ಕಿದ್ದಂತೆ ನನ್ನ ಅಣ್ಣನ ಬಾವಮೈದ ಮರಿಮಾದಯ್ಯನು ನನ್ನನ್ನು ತಿವಿದು ಎಚ್ಚರಿಸಿದಾಗಲೇ ರಾಜ್ ಮೋಡಿಯಲ್ಲಿ ಕಳೆದುಹೋಗಿದ್ದ ನಾನು ಎಚ್ಚರಗೊಂಡದ್ದು. ನನ್ನನ್ನು ಕಾಲೇಜಿನ ಹತ್ತಿರ ಹುಡುಕಿ ಸಿಗದೆ ನನ್ನ ಚಟವನ್ನು ಬಲ್ಲ ಆತ ಸರಿಯಾಗಿಯೇ ಊಹಿಸಿ ಬಂದಿದ್ದ. ಊರಿನಲ್ಲಿ ಅಜ್ಜಿ ತೀರಿಕೊಂಡ ಸುದ್ದಿ ಬಂದಿದ್ದು ಊರಿಗೆ ಹೊರಟಿರುವ ಮನೆಯವರೊಡನೆ ಹೊರಡಲು ಅವಸರಮಾಡಿದ. ಆ ಕ್ಷಣಕ್ಕೆ ಅಜ್ಜಿ ಇನ್ನೊಂದೆರಡು ದಿನ ತಡಮಾಡಿ ನಿರ್ಗಮಿಸಬಾರದಿತ್ತೇ ಎನಿಸಿತು. ಕಾಲೆಳುದುಕೊಂಡು ಬಂದೆ. ಅಣ್ಣನ ಬೈಗುಳದ ಜೊತೆ ಬೆಂಗಳೂರಿನ ಬಸ್ಸು ಹತ್ತಿದೆ.

ವಾಪಸ್ಸು ಬಂದಾಗ ಕೆಜಿಎಫ್ ಕನ್ನಡ ಸಂಘವು ಚಿತ್ರೀಕರಣದ ಮೊದಲನೇ ದಿನವೇ ಅಲ್ಲಿನ ಸ್ಕೇಟಿಂಗ್ ರಿಂಕ್ನಲ್ಲಿ ರಾಜ್ ಅವರಿಗೆ ಸನ್ಮಾನ ಮಾಡಿದ್ದು, ರಾಜ್ ’ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ’ ಹಾಡು ಹಾಡಿದ್ದನ್ನು ಅವರ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡದ್ದನ್ನು ಹೇಳಿ ಸ್ನೇಹಿತರು ಹೊಟ್ಟೆ ಉರಿಸಿದರು. ಮತ್ತೆ ರಾಜ್ ಅವರನ್ನು ನೋಡಿದ್ದು ಪ್ರಜಾವಾಣಿ ಸೇರಿದ ನಂತರ. ವರದಿ ಮಾಡುವ ಅವಕಾಶ ಇಲ್ಲದಿದ್ದರೂ ರಾಜ್ ಇರುವ ಸಮಾರಂಭಕ್ಕೆ ಪತ್ರಕರ್ತನ ಪ್ರಿವಿಲೇಜನ್ನು ಬಳಸಿ ಮೊದಲು ಹಾಜರಾದ ಸಮಾರಂಭವೆಂದರೆ ಸಚಿವಾಲಯದ ನೌಕರರಿಗಾಗಿ ಯೋಗ ತರಬೇತಿಗಳ ಉದ್ಘಾಟನಾ ಸಮಾರಂಭ. ಅನಂತರ ರವೀಂದ್ರಕಲಾಕ್ಷೇತ್ರದಲ್ಲಿ ನಡೆದ ಕವಿ ಕೆ.ಎಸ್.ನ. ಅವರ ಸನ್ಮಾನ ಸಮಾರಂಭದಲ್ಲಿ. ಮತ್ತೆ ಲಾಲ್ಬಾಗ್ನ ಸಭಾಭವನದಲ್ಲಿ ನಾಟಕಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿದ ಸಮಾರಂಭ. ಅಂದು ಕುರಿದೊಡ್ಡಿ ಕುರುಕ್ಷೇತ್ರದಲ್ಲಿನ ನಟನೆಗಾಗಿ ರಂಗನಟಿ ಉಮಾಶ್ರೀಯವರು ಪ್ರಶಸ್ತಿ ಪಡೆದದ್ದು ನೆನಪಿದೆ. ಆದರೆ ಎಲ್ಲಿಯೂ ರಾಜ್ ಅವರೊಡನೆ ಮಾತನಾಡುವ, ಉತ್ಕಟ ಬಯಕೆಯಿದ್ದರೂ ಜೊತೆಯಲ್ಲಿ ಚಿತ್ರ ತೆಗೆಸಿಕೊಳ್ಳುವ ಅವಕಾಶವಾಗಲೀ ದೊರೆಯಲಿಲ್ಲ. ಮತ್ತೆ 1989ರಲ್ಲಿ ಗುಲ್ಬರ್ಗಾದಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ. ಆಗತಾನೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗದ್ದರು. ಅವರ ತವರು ಜಿಲ್ಲೆಯಲ್ಲಿ ಸಮಾರಂಭ. ರಾಜ್ ಅವರಿಗೆ ‘ದೇವತಾ ಮನುಷ್ಯ’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ಪ್ರಶಸ್ತಿ ಸ್ವೀಕರಿಸಲು ಅವರು ಕುಟುಂಬ ಸಮೇತ ಬೆಂಗಳೂರಿನಿಂದ ಎಲ್ಲರೊಡನೆ ಎರಡನೇ ದರ್ಜೆಯ ಬೋಗಿಯಲ್ಲೇ ಮಲಗಿ ಪ್ರಯಾಣಿಸಿದರು.

ಗುಲ್ಬರ್ಗಾದಲ್ಲಿ ಸಂಜೆ ನಡೆದ ಪತ್ರಿಕಾಗೋಷ್ಠಿ ಮುಗಿಸಿ ಹೊರಬರುವಾಗ ನಾನು ಹಿಂದೆಯೇ ಇದ್ದೆ. ರಾಜ್ ಅವರ ಅನುಚರ, ನಮ್ಮ ಇಲಾಖೆಯ ಸಹುದ್ಯೋಗಿ ಚನ್ನ ಸ್ವಲ್ಪ ದೂರವೇ ಇದ್ದರು. ಹೊರಗಡೆ ಬಂದಾಗ ಜನರ ನೂಕು ನುಗ್ಗಲು ಹೆಚ್ಚಾದಾಗ ಅಚಾನಕ್ ರಾಜ್ ನನ್ನ ಕಡೆ ವಾಲಿದರು. ಅವರ ಕೈ ಹಿಡಿದುಕೊಂಡೆ, ಅಷ್ಟೆ. ಅವರು ನಕ್ಕು ನಾನು ಕೈ ಹಿಡಿದಿದ್ದರೂ ಅವರೇ ನನ್ನನ್ನು ನಡೆಸಿಕೊಂಡು ಹೋಗುವ ರೀತಿಯಲ್ಲಿ ನನ್ನನ್ನೂ ಮುನ್ನಡೆದರು. ಇದೇನು ಕನಸೋ ಅಲ್ಲವೋ ಎಂದು ಯೋಚಿಸುವ ವೇಳೆಗೆ ದೃಶ್ಯ ಬದಲಾಗಿತ್ತು!

ರಾಜ್ ಅವರೊಡನೆ ಹೆಚ್ಚು ಹೊತ್ತು ಮಾತನಾಡುವ ಕಾಲಕಳೆಯುವ ಅವರ ಸೌಜನ್ಯವನ್ನು ಅನುಭವಿಸುವ ಅವಕಾಶ ಬಂದದ್ದು ನಾನು ಬೆಂಗಳೂರು ಮಹಾನಗರ ಪಾಲಿಕೆಗೆ ಬಂದ ನಂತರ. ಆದರೆ ಆ ವೇಳೆಗೆ ರಾಜ್ ಕುಮಾರ ಅವರ ಬಗೆಗಿನ ಮೋಹ ಕಡಿಮೆಯಾಗಿತ್ತು. ಅವರ ‘ಅಪೂರ್ವ ಸಂಗಮ’ ಚಿತ್ರ ನೋಡಿದ ಮೇಲೆ ನನಗೆ ನಿರಾಶೆಯಾಗಿತ್ತು. ಅದು ಹಿಂದಿಯಲ್ಲಿ ದೇವಾನಂದ್ – ಹೇಮಾಮಾಲಿನಿ, ಪ್ರಾಣ್ ನಟಿಸಿದ್ದ ’ಜಾನೀ ಮೇರಾ ನಾಮ್’  ಜನಪ್ರಿಯ ಚಿತ್ರದ ರೀಮೇಕ್. ರಾಜ್, ಶಂಕರ್ ನಾಗ್ ನಟಿಸಿದ್ದರೂ ನನಗೆ ಎಳ್ಳಷ್ಟೂ ಹಿಡಿಸಿರಲಿಲ್ಲ. ಜನಪ್ರಿಯತೆಯ ಬಂಧನ, ಅಭಿಮಾನಿಗಳ ಸಂಕೋಲೆಯಲ್ಲಿ ರಾಜ್ ಅವರಲ್ಲಿದ್ದ ಹಿಂದಿನ ಅಭಿಜಾತ ಕಲಾವಿದ ವಿಶ್ರಾಂತಿಗೆ ತೆರಳಿದಂತೆ ಕಾಣುತ್ತಿತ್ತು. ಚಿತ್ರಗಳ ಬಗ್ಗೆ ಮೋಹ ಕಡಿಮೆಯಾದರೂ ರಾಜ್ ವ್ಯಕ್ತಿತ್ವದ ಆಕರ್ಷಣೆ ಮುಕ್ಕಾಗಿರಲಿಲ್ಲ. ಬಸವನಗುಡಿಯ ಶಾಸಕ ಮತ್ತು ಹಿಂದಿನ ಮೇಯರ್ ಆಗಿದ್ದ ಚಂದ್ರಶೇಖರ್ ಅವರು ಬಸವನಗುಡಿ ಕ್ಷೇತ್ರದಲ್ಲಿ ಹತ್ತು ಸಾವಿರ ಮರ ನೆಡುವ ಅಭಿಯಾನ ಕೈಗೊಂಡಿದ್ದು ಐದು ಸಾವಿರದ ಒಂದನೇ ಮರವನ್ನು ಸಜ್ಜನರಾವ್ ಸರ್ಕಲ್ನ ಉದ್ಯಾನದಲ್ಲಿ ರಾಜ್ ಅವರ ಹಸ್ತದಿಂದಲೇ ನೆಡಸಲು ಅವರ ದಿನವನ್ನು ಹೊಂದಿಸುವ ಜವಾಬ್ದಾರಿಯನ್ನು ನನಗೇ ಹೇರಿದ. ಆ ಶಾಸಕನ ತಿಕ್ಕಲು ವರ್ತನೆ ಹೇಳಲು ಹೊರಟರೇ ಅದೇ ದೊಡ್ಡ ಪ್ರಕರಣವಾಗುತ್ತದೆ.

ನಮ್ಮ ಸಹೋದ್ಯೋಗಿ ಚನ್ನನ ನೆರವಿನಿಂದ ಅವರನ್ನು ಕರೆ ತಂದೆವು. ವೀರಪ್ಪನ್ ಅಪಹರಣದ ನಂತರ ವಿಶ್ರಾಂತಿಯಲ್ಲಿದ್ದ ರಾಜ್ ಅವರಿಗೆ ಆಸೆಯಿದ್ದರೂ ಹೆಚ್ಚು ಮಾತನಾಡುವಂತಿರಲಿಲ್ಲ. ಆದರೆ 2006ರಲ್ಲಿ ಶ್ರೀಮತಿ ಮುಮ್ತಾಜ್ ಬೇಗಂ ಅವರು ಮೇಯರ್ ಆದಾಗ ಮೊದಲು ರಾಜಕಾರಣಿಗಳನ್ನು ಭೇಟಿಯಾದ ನಂತರ ರಾಜ್ ಅವರ ಮನೆಗೆ ಹೋಗಿ ಆಶೀರ್ವಾದ ಪಡೆಯಬೇಕೆಂದು ಭೇಟಿ ಗೊತ್ತು ಮಾಡಲು ಸೂಚಿಸಿದರು. ಯಥಾಪ್ರಕಾರ ಚನ್ನ ಅವರ ನೆರವಿನಿಂದ ಭೇಟಿ ನಿಗದಿಯಾಯಿತು. ಹಿಂದಿನ ದಿನ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಮೇಯರ್ ಅವರ ಪತಿಯವರು ನನ್ನನ್ನು ಭೇಟಿಯಾಗಿ ರಾಜ್ ಅವರನ್ನು ಭೇಟಿಯಾಗಲೂ ನನಗೂ ಅವಕಾಶ ಮಾಡಿಕೊಡಿ ಎಂದರು. ಮಹಿಳಾ ರಾಜಕಾರಣಿಗೆ ಅಧಿಕಾರ ಸಿಕ್ಕರೆ ತಾವೇ ಅಧಿಕಾರ ಚಲಾಯಿಸುವ ಗಂಡಂದಿರನ್ನು ನೋಡಿದ್ದ ನನಗೆ ಇವರ ಸೌಜನ್ಯದಿಂದ ಮೂಕನಾದೆ. ಬನ್ನಿ ಸಾರ್ ಎಂದೆ. ಆದರೆ ಅವರು ಹೇಳಿದ ಮಾತು ನನ್ನನ್ನು ಆಶ್ಚರ್ಯದ ಕೂಪಕ್ಕೆ ತಳ್ಳಿತು. ‘ಇಲ್ಲ ನೋಡಿ ನಾವೆಷ್ಟೋ ನಟನಟಿಯರನ್ನು ಸಿನಿಮಾದಲ್ಲಿ ನೋಡಿದ್ದೇವೆ. ಆದರೆ ನಿಜಜೀವನದಲ್ಲಿ ಒಬ್ಬ ನಟನನ್ನು ನೋಡಬೇಕು ಅನಿಸಿದ್ದು ರಾಜಕುಮಾರ್ ವಿಷಯದಲ್ಲಿ ಮಾತ್ರ. ಅವರು ನಟನೆ ಮುಗಿದ ನಂತರ ಬಿಳಿ ಶರ್ಟು ಪಂಚೆ ಉಟ್ಟು ಇರ್ತಾರಲ್ಲ ಅದು ನಿಜವಾದ ಮನುಷ್ಯ. ಬೇರೆಯವರೆಲ್ಲ ಹಾಗಲ್ಲ’

ನಾವು ಎಷ್ಟೇ ಹೇಳಿದರೂ 50 – 60 ಕಾರ್ಪೊರೇಟರುಗಳು ಅವರ ಅನುಯಾಯಿಗಳು ಸದಾಶಿವನಗರದ ಮನೆಗೆ ಲಗ್ಗೆಯಿಟ್ಟರು. ಚೇಲಾ ಬಾಲಗಳೆಲ್ಲ ಬೇಡವೆಂದು ಹೇಳಿದರೂ ಯಾರೂ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ರಾಜ್ ಇಡೀ ಕನ್ನಡಿಗರ ಆಸ್ತಿಯಲ್ಲವೇ? ಆದರೆ ರಾಜ್ ಮನೆಯವರು ಎಲ್ಲರನ್ನೂ ಆದರದಿಂದ ಸ್ವಾಗತಿಸಿದ ರೀತಿ ವಿಸ್ಮಯಕಾರಿಯಾಗಿತ್ತು. ಎಲ್ಲರು ಬಗೆಬಗೆಯಲ್ಲಿ ನಿಂತು ಚಿತ್ರ ತೆಗೆಸಿಕೊಂಡರು. ಸಿಹಿ ತಿಂದರು, ಚಹಾ ಸೇವನೆಯಾಯಿತು. ಕೊನೆಗೆ ಒಲ್ಲದ ಮನಸ್ಸಿನಿಂದ ಎಲ್ಲರೂ ತೆರಳಿದ ಮೇಲೆ ಚನ್ನ ನನ್ನನ್ನು ಉಳಿಸಿಕೊಂಡು ಅಣ್ಣಾವ್ರಿಗೆ ಪರಿಚಯಿಸಿದರು. ಇವರು ಡಾ. ಪುಟ್ಟಸ್ವಾಮಿ ಅವರು ಎಂದರು. ತಕ್ಷಣವೇ ರಾಜ್ ‘ಏನು ವೈದ್ಯರು, ಕಣ್ಣೋ …ಮೂಳೆಯೋ?’ ಎಂದು ಕೇಳಿದರು. ಇಲ್ಲ ಸಾರ್ ನಾನು ಸಾಹಿತ್ಯದ ವಿದ್ಯಾರ್ಥಿ ಎಂದೆ. ತಕಣವೇ ನಕ್ಕು ‘ಓಹೋ.. ನನ್ನ ಹಾಗೆ ನೀವೂ.. ಹೆಸರಿಗೆ ಡಾಕ್ಟರ್. ಯಾರಿಗೂ ಔಷಧ ಚೀಟಿ ಕೋಡುವ ಹಾಗಿಲ್ಲ. ಬದುಕಿಸುವಂತೆಯೂ ಇಲ್ಲ.. ತೆಗೆಯುವಂತೆಯೂ ಇಲ್ಲ’ ಎಂದು ಅಭಿನಯಪೂರ್ವವಾಗಿ ಹೇಳಿದರು. ಅದೇ ವೇಳೆಗೆ ಹುಶಾರು ತಪ್ಪಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮನ ಆರೋಗ್ಯದ ಬಗ್ಗೆ ರಾಜ್ ವ್ಯಾಕುಲಗೊಂಡಿದ್ದ ವಿಷಯವನ್ನು ಚನ್ನ ನಮ್ಮ ಗಮನಕ್ಕೆ ತಂದಿದ್ದರು. ಆದರೆ ಅದ್ಯಾವ ನೋವನ್ನೂ ತೋರಿಸಿಕೊಳ್ಳದೆ ರಾಜ್ ತಮ್ಮ ಬಾಲ್ಯಕ್ಕೆ ಜಾರಿದರು.

ಮಾತನಾಡುತ್ತಾ ಹೋದಂತೆ ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ಕೊನೆಗೆ ಏನನ್ನೋ ಜ್ಞಾಪಿಸಿಕೊಂಡವರಂತೆ ‘ನಿಮ್ಮ ಹೆಸರೇನು ಹೇಳಿದ್ರೀ’ ಎಂದರು. ಪುಟ್ಟಸ್ವಾಮಿ ಎಂದೆ. ‘ಓಹೋ ನಮ್ಮ ಅಪ್ಪಾಜಿಯವರದೇ ಹೆಸರು..’ ನನ್ನ ದೇಹವನ್ನು ಅಪಾದಮಸ್ತಕ ನೋಡುತ್ತಾ ಮತ್ತೇ ಅಭಿನಯಪೂರ್ವಕವಾಗಿ ಪ ರ್ಸನಾಲಿಟೀನೂ ಸ್ವಲ್ಪ ಹಾಗೇ ಇದೆ. ಎರಡು ದೊಡ್ಡ್ ಮೀಸೆ ಇಡಬೇಕು ಅಷ್ಟೆ’ ಎಂದು ಜೋರಾಗಿ ನಕ್ಕರು. ನಾನು ಮೂಕನಾದೆ. ಗೆಳೆಯ ಎಂ.ಸಿ.ಎಸ್.ಆರಾಧ್ಯ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿ ಈ ಅಪೂರ್ವ ಮಿಲನಕ್ಕೆ ಸಾಕ್ಷ್ಯ ದಾಖಲಿಸಿಕೊಂಡರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಜಾಗತಿಕ ಸಿನಿಮಾರಂಗ ಪ್ರಭಾವಿಸಿದ ನಿರ್ದೇಶಕ ಬರ್ಗ್‌ಮನ್‌

’ಮೆಟಾಫಿಸಿಕಲ್‌ ಪ್ರಶ್ನೆಗಳು ಇಂಗ್ಮರ್‌ ಬರ್ಗ್‌ಮನ್ ಸಿನಿಮಾಗಳ ಹಾಲ್‌ಮಾರ್ಕ್‌’ ಎಂದು ಗುರುತಿಸುತ್ತಾರೆ ಕನ್ನಡದ ಹಿರಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್‌. ಇಂದು (ಜುಲೈ 14)

ಸಿನಿಮಾ – ಕ್ಯಾಸೆಟ್ ಲೋಕದಲ್ಲಿ ಮಿಂಚಿದ ಧೀರೇಂದ್ರ ಗೋಪಾಲ್

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು,

ರಂಗಭೂಮಿ – ಸಿನಿಮಾ ನಟಿ ಶಾಂತಮ್ಮ

ಕನ್ನಡ ಚಿತ್ರರಂಗದ ಆರಂಭದ ದಿನಗಳು, ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಕಲಾವಿದೆ ಶಾಂತಮ್ಮ. ಅವರ ಪತಿ ಬಿ.ಅನಿಲ್ ಕುಮಾರ್ ವೃತ್ತಿರಂಗಭೂಮಿ ನಟ ಮತ್ತು