ನಲವತ್ತರ ದಶಕದ ಕೊನೆಯಲ್ಲಿ ನಟನೆ ಆರಂಭಿಸಿದ ಶಮ್ಮಿ 2012ರಲ್ಲಿ ತೆರೆಕಂಡ ಚಿತ್ರದಲ್ಲಿ ನಟಿಸಿದ್ದರು. ನಾಯಕನಟಿಯಾಗಿ ಸಿನಿಮಾ ಪ್ರವೇಶಿಸಿದ ಅವರಿಗೆ ಅದೃಷ್ಟ ಒಲಿಯಲಿಲ್ಲ. ಹಾಗೆಂದು ಅವರು ಹಿಂದೆ ಸರಿಯಲಿಲ್ಲ. ತಮ್ಮ ಮಿತಿಗಳನ್ನು ಅರಿತ ಅವರು ಪೋಷಕ, ಹಾಸ್ಯ ಪಾತ್ರಗಳಲ್ಲಿ ಸುಮಾರು ಇನ್ನೂರು ಚಿತ್ರಗಳಲ್ಲಿ ಅಭಿನಯಿಸಿದರು. ಬಾಲಿವುಡ್ ಕಲಾವಿದರು ಹಾಗೂ ತಂತ್ರಜ್ಞರಿಗೆ ಅವರು ಪ್ರೀತಿಯ ‘ಶಮ್ಮಿ ಆಂಟಿ’ ಆಗಿದ್ದರು.
ಪಾರ್ಸಿ ಕುಟುಂಬದಲ್ಲಿ ಜನಿಸಿದ ಅವರ ಬಾಲ್ಯನಾಮ ನರ್ಗಿಸ್ ರಬಾಡಿ. ತಾರಾ ಹರೀಶ್ ನಿರ್ದೇಶನದ ‘ಉಸ್ತಾದ್ ಪೆಡ್ರೋ’ (1949) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದಾಗ ಅವರಿಗೆ ಹದಿನೆಂಟು ವರ್ಷ. ಆಗ ಬಾಲಿವುಡ್‌ನಲ್ಲಿ ನರ್ಗಿಸ್ ನಾಯಕನಟಿಯಾಗಿ ಮಿಂಚುತ್ತಿದ್ದರು. ಹಾಗಾಗಿ ನರ್ಗಿಸ್ ರಬಾಡಿ ಎನ್ನುವ ಇವರ ಹೆಸರನ್ನು ನಿರ್ದೇಶಕ ‘ಶಮ್ಮಿ’ ಎಂದು ಬದಲಿಸಿದರು. ಚೊಚ್ಚಲ ಸಿನಿಮಾ ಯಶಸ್ವಿಯಾಯ್ತು. ಎರಡನೇ ಸಿನಿಮಾ ‘ಮಲ್ಹಾರ್’ನಲ್ಲಿ ಅವರು ಗುರುತಿಸಿಕೊಂಡರು. ದಿಲೀಪ್ ಕುಮಾರ್ ಮತ್ತು ಮಧುಬಾಲಾ ಜೊತೆಗೆ ಅವರು ನಟಿಸಿದ ಮೂರನೇ ಸಿನಿಮಾ ‘ಸಾಂಗ್ದಿಲ್’ (1952) ವಿಫಲವಾಯ್ತು. ಈ ಸೋಲು ಶಮ್ಮಿ ನಟನಾ ಬದುಕಿನ ಮೇಲೆ ಪರಿಣಾಮ ಬೀರಿತು.

ನಾಯಕಿಯಾಗಿ ಅವಕಾಶ ಸಿಗದಾದಾಗ ಶಮ್ಮಿ ಪೋಷಕ ನಟಿಯಾಗಲು ಸಿದ್ಧರಾದರು. ಒಂದಾದ ಮೇಲೊಂದು ಪೋಷಕ ಪಾತ್ರಗಳ ಅವಕಾಶಗಳಿಂದ ಅವರು ಸಿನಿಮಾಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಇಝಾಮ್, ಪೆಹ್ಲೀ ಝಲಕ್, ಬಂಧಿಶ್, ಆಜಾದ್, ಸನ್ ಆಫ್ ಸಿಂದ್‌ಬಾದ್, ರಾಜ್ ತಿಲಕ್, ಖಜಾಂಚಿ, ಘರ್ ಸನ್ಸಾರ್, ಆಖ್ರೀ ದಾವೋ, ಕಂಗನ್, ಭಾಯಿ ಬೆಹನ್, ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ… ಅವರ ಕೆಲವು ಪ್ರಮುಖ ಚಿತ್ರಗಳು.
1962ರಿಂದ 1970ರ ಅವಧಿಯಲ್ಲಿ ಕಾಮಿಡಿ, ವ್ಯಾಂಪ್ ಪಾತ್ರಗಳಲ್ಲಿ ಅವರು ಹೆಚ್ಚು ಗುರುತಿಸಿಕೊಂಡರು. ಹಾಫ್ ಟಿಕೆಟ್, ಇಶಾರಾ, ಜಬ್ ಜಬ್ ಫೂಲ್ ಖಿಲೆ, ಪ್ರೀತ್ ನಾ ಜಾನೇ ರೀತ್, ಆಮ್ನೇ ಸಾಮ್ನೇ, ಉಪ್ಕಾರ್, ಇತ್ತೆಫಾಕ್, ಸಾಜನ್, ಡೋಲಿ, ರಾಜಾ ಸಾಬ್, ದಿ ಟ್ರೈನ್… ಚಿತ್ರಗಳಲ್ಲಿ ಅವರ ಪಾತ್ರಗಳು ಸಿನಿಪ್ರೇಮಿಗಳಿಗೆ ನೆನಪಾಗುತ್ತವೆ. 1970ರಲ್ಲಿ ನಿರ್ಮಾಪಕ ಸುಲ್ತಾನ್ ಅಹ್ಮದ್ ಅವರೊಂದಿಗೆ ಶಮ್ಮಿ ವಿವಾಹವಾಯ್ತು. ಮದುವೆ ನಂತರವೂ ಅವರ ನಟನೆ ಮುಂದುವರೆಯಿತು. 1985ರಲ್ಲಿ ಅವರು ‘ಪಿಘಾಲ್ತಾ ಆಸ್ಮಾನ್’ ಸಿನಿಮಾ ನಿರ್ಮಿಸಿದರು. ಈ ಚಿತ್ರದ ಸೋಲಿನಿಂದ ಅವರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಯ್ತು. ನಟ ರಾಜೇಶ್ ಖನ್ನಾ ಅವರು ತಾವು ನಿರ್ಮಿಸುತ್ತಿದ್ದ ಕಿರುತೆರೆ ಸರಣಿಗಳಲ್ಲಿ ಶಮ್ಮಿ ಅವರಿಗೆ ನಟಿಸುವಂತೆ ಕರೆ ನೀಡಿದರು. ಕಿರುತೆರೆ ನಟಿಯಾಗಿ ಶಮ್ಮಿ ಆರ್ಥಿಕವಾಗಿ ಕೊಂಚ ಚೇತರಿಸಿಕೊಂಡರು.
ದೇಖ್ ಭಾಯ್ ದೇಖ್, ಜಬಾನ್ ಸಂಬಾಲ್ ಕೆ, ಶ್ರೀಮಾನ್ ಶ್ರೀಮತಿ, ಕಭೀ ಯೆಹ್ ಕಭೀ ವೊ, ಫಿಲ್ಮೀ ಚಕ್ಕರ್… ಕಿರುತೆರೆ ಸರಣಿಗಳಲ್ಲಿ ಅಮ್ಮ, ಅಜ್ಜಿ ಪಾತ್ರಗಳಲ್ಲಿ ಶಮ್ಮಿ ವೀಕ್ಷಕರ ಪ್ರೀತಿಗೆ ಪಾತ್ರರಾದರು. ತೊಂಬತ್ತರ ದಶಕದಲ್ಲಿ ಶಮ್ಮಿ ಹಲವು ಚಿತ್ರಗಳಲ್ಲೂ ನಟಿಸಿದರು. ಕೂಲಿ ನಂ.1, ಹಮ್, ಮರ್ದೋ ವಾಲಿ ಬಾತ್, ಗುರುದೇವ್, ಗೋಪಿ ಕಿಶನ್, ಹಮ್ ಸಾಥ್ ಸಾಥ್ ಹೈ, ಇಮ್ತಿಹಾನ್… ಹೆಸರಿಸಬಹುದಾದ ಕೆಲವು ಚಿತ್ರಗಳು. ಅಮಿತಾಭ್ ಬಚ್ಚನ್‌ರ ‘ಖುದಾ ಗವಾ’ ಚಿತ್ರದಲ್ಲಿ ಅವರಿಗೆ ದೊಡ್ಡ ಪಾತ್ರವಿತ್ತು. ಅವರು ನಟಿಸಿದ ಕೊನೆಯ ಸಿನಿಮಾ ‘ಶಿರಿನ್ ಫರ್ಹದ್ ಕಿ ತೋ ನಿಕಲ್ ಪಡಿ’ (2012). ಪರ್ಹಾ ಖಾನ್ ನಿರ್ದೇಶನದ ಚಿತ್ರದಲ್ಲಿ ಶಮ್ಮಿ ಅವರು ಪಾರ್ಸಿ ಮಹಿಳೆಯ ಪಾತ್ರದಲ್ಲಿ ನಟಿಸಿದ್ದರು. 2018ರ ಮಾರ್ಚ್ 6ರಂದು ಇಹಲೋಕ ತ್ಯಜಿಸಿದಾಗ ಅವರಿಗೆ 88 ವರ್ಷ.
ಶಮ್ಮಿ | ಜನನ: 24/04/1929 | ನಿಧನ: 06/03/2018
