
ಚಿತ್ರಸಾಹಿತಿ
`ಏನಪ್ಪ ಶಿವಶಂಕ್ರು, ಇವರೇನು ಹರಿಕಥೆ ಮಾಡ್ತಾ ಇದಾರಾ? ಇವರ ಬಾಯಿ ಮುಚ್ಸೋದು ಹೇಗೆ?’ ಎಂದು ಬಾಲಣ್ಣ ಅಲವತ್ತುಕೊಂಡರು. ನನಗೂ ಅವರ ಗಲಾಟೆಯಿಂದ ತಲೆ ಕೆಟ್ಟುಹೋಗಿತ್ತು – ಚಿತ್ರಸಾಹಿತಿ ಸಿ.ವಿ.ಶಿವಶಂಕರ್ ಅವರು ಹೇಳಿಕೊಂಡ ‘ಸಂತ ತುಕಾರಾಂ’ ಸಿನಿಮಾ ಸಂದರ್ಭದ ಅನುಭವ.
`ಸಂತ ತುಕಾರಾಂ’ ಚಿತ್ರೀಕರಣದ ಸಂದರ್ಭ. ರಾಧಾಕೃಷ್ಣ ನಿರ್ಮಾಣದ ಈ ಚಿತ್ರದ ನಿರ್ದೇಶಕ ಸುಂದರರಾವ್ ನಾಡಕರ್ಣಿ. ಕೊಲ್ಲಾಪುರದಲ್ಲಿನ (ಮಹಾರಾಷ್ಟ್ರ) ಶಾಂತಾರಾಂ ಒಡೆತನದ ಶಾಲಿನಿ ಸ್ಟುಡಿಯೋದಲ್ಲಿ ಶೂಟಿಂಗ್. ನೇಟಿವಿಟಿ ಬೇಕೆಂದು ನಿರ್ದೇಶಕರು ಕೊಲ್ಲಾಪುರದಲ್ಲೇ ಚಿತ್ರಿಸಬೇಕೆಂದು ಪಟ್ಟು ಹಿಡಿದಿದ್ದರು. ಚಿತ್ರೀಕರಣದಲ್ಲಿ ಪಾಲ್ಗೊಳ್ಳಲೆಂದು ನಾನು, ಬಾಲಕೃಷ್ಣ, ಹನುಮಂತರಾಯರು ಮತ್ತು ವಾದಿರಾಜ್ ಮದರಾಸಿನಿಂದ ಕೊಲ್ಲಾಪುರಕ್ಕೆ ಹೊರಟೆವು. ಟ್ರೈನ್‍ನ ರಿಸರ್ವೇಷನ್ ಕಂಪಾರ್ಟ್‍ಮೆಂಟ್‍ನಲ್ಲಿ ನಾವಿದ್ದೆವು. ನಮ್ಮ ಕಂಪಾರ್ಟ್‍ಮೆಂಟ್‍ನಲ್ಲೇ ಮರಾಠಿ ಮಾತನಾಡುವ ಇಬ್ಬರು ಪ್ರಯಾಣಿಸುತ್ತಿದ್ದರು. ವಿಪರೀತ ಮಾತನಾಡುತ್ತಿದ್ದ ಅವರ ಹರಟೆ ರಾತ್ರಿ ಹನ್ನೆರಡಾದರೂ ನಿಲ್ಲಲಿಲ್ಲ. ಬಾಲಣ್ಣನಿಗೆ ಸಿಟ್ಟು ಬಂದಿತ್ತು.
`ಏನಪ್ಪ ಶಿವಶಂಕ್ರು, ಇವರೇನು ಹರಿಕಥೆ ಮಾಡ್ತಾ ಇದಾರಾ? ನನಗೆ ಸರಿಯಾಗಿ ಕಿವಿ ಕೇಳಿಸದೇ ಇದ್ರೂ, ತಲೆ ಚಿಟ್ಟು ಹಿಡೀತಾ ಇದೆ. ಹೀಗೇ ಆದ್ರೆ ನಮಗೆ ನಿದ್ದೆ ಬರೋಲ್ಲ. ಇವರ ಬಾಯಿ ಮುಚ್ಸೋದು ಹೇಗೆ?’ ಎಂದು ಬಾಲಣ್ಣ ಅಲವತ್ತುಕೊಂಡರು. ನನಗೂ ಅವರ ಗಲಾಟೆಯಿಂದ ತಲೆ ಕೆಟ್ಟುಹೋಗಿತ್ತು. ನನಗೆ ಬರುತ್ತಿದ್ದ ಅರೆಬರೆ ಮರಾಠಿ ಜತೆ ಕನ್ನಡವನ್ನೂ ಬೆರೆಸಿ ಅವರಿಗೆ ಏನೇನೋ ಹೇಳಿದೆ! ಬಾಲಣ್ಣನೂ ನನ್ನೊಂದಿಗೆ ದನಿಗೂಡಿಸಿದರು. ಖಂಡಿತವಾಗಿ ನಾವು ಹೇಳಿದ್ದೇನೆಂದು ನಮಗೂ ಅರ್ಥವಾಗಿರಲಿಲ್ಲ ! ವಿಚಿತ್ರ ಭಾಷೆಯಲ್ಲಿ ನಾವು ಮಾತನಾಡಿದ್ದನ್ನು ಕೇಳಿ ಆ ಮರಾಠಿಗರು ಗಾಬರಿಯಾದರು. ಕೊಲ್ಲಾಪುರ ತಲುಪುವವರೆಗೂ ಮತ್ತೆ ಅವರು ಏರುದನಿಯಲ್ಲಿ ಮಾತನಾಡಲೇ ಇಲ್ಲ!
(ಫೋಟೊಗಳು: ಭವಾನಿ ಲಕ್ಷ್ಮೀನಾರಾಯಣ)