
ಹಿರಿಯ ಮೇಕಪ್ ಕಲಾವಿದ
ಕನ್ನಡ ಸಿನಿಮಾ ಮೇಕಪ್ ಕಲೆಯಲ್ಲಿ ಎಂ.ಎಸ್.ಕೇಶವರ ಅವರದ್ದು ಚಿರಪರಿಚಿತ ಹೆಸರು. ತಂದೆ, ಮೇಕಪ್ ಕಲಾವಿದ ಎಂ.ಎಸ್.ಸುಬ್ಬಣ್ಣ ಅವರೇ ಕೇಶವರಿಗೆ ಮೊದಲ ಗುರು. ಅಪ್ಪನಿಗೆ ಸಹಾಯಕರಾಗಿ ಕೆಲಸ ಆರಂಭಿಸಿ ಮುಂದೆ ಛೀಫ್ ಮೇಕಪ್ ಕಲಾವಿದರಾಗಿ ಸಾಕಷ್ಟು ಹೆಸರು ಮಾಡಿದವರು. ‘ಶ್ರೀನಿವಾಸ ಕಲ್ಯಾಣ’ ಚಿತ್ರೀಕರಣ ಸಂದರ್ಭವೊಂದನ್ನು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ.
ವಿಜಯ್ ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದಲ್ಲಿ ನಟ ರಾಜಾಶಂಕರ್ ಅವರು ‘ಬಾವಾಜಿ’ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ದಾಡಿ ಮೇಕಪ್ ಮಾಡಬೇಕಿತ್ತು. ಸಾಮಾನ್ಯವಾಗಿ ಜುಟ್ಟು, ಜಡೆ ಇಂತಹ ಮೇಕಪ್‌ಗೆ ಆಗ ದಕ್ಷಿಣದಲ್ಲಿ ದೊರೆಸ್ವಾಮಿ ಅವರೇ ಹೆಸರುವಾಸಿಯಾಗಿದ್ದರು. ಅವರು ರಾಜಾಶಂಕರ್ ಅವರ ಸನ್ನಿವೇಶಗಳನ್ನು ಚಿತ್ರಿಸಿಬೇಕಿದ್ದ ದಿನ ಕಾರಣಾಂತರಗಳಿಂದ ಬಂದಿರಲಿಲ್ಲ. ಆಗಿನ್ನೂ ನನಗೆ ಹೆಚ್ಚಿನ ಅನುಭವ ಇರಲಿಲ್ಲ. ಹಾಗಾಗಿ ನನಗೂ ಮೇಕಪ್ ಮಾಡಲು ಅಳುಕು.
ಹೊಸಬನಾದ ನಾನು ಎಷ್ಟರ ಮಟ್ಟಿಗೆ ಬಾವಾಜಿಯ ಸೌಮ್ಯತೆಯನ್ನು ಮೇಕಪ್ ಮೂಲಕ ತರಲು ಸಾಧ್ಯ ಎನ್ನುವ ಬಗ್ಗೆ ನಿರ್ದೇಶಕ ವಿಜಯ್ ಅವರಿಗೂ ಗೊಂದಲವಿತ್ತು. ನನಗೂ ಕೈ ನಡುಗುತ್ತಿತ್ತು. ರಾಜಾ ಶಂಕರ್ ಧೈರ್ಯ ತುಂಬಿ ಮಾಡು ನೋಡೋಣ ಎಂದು ಹುರಿದುಂಬಿಸಿದರು. ರಾಜಾಶಂಕರ್ ಅವರದ್ದು ಚೌಕಾಕಾರದ ಮುಖ. ನಾನು ಕವಿ ರವೀಂದ್ರನಾಥ ಟ್ಯಾಗೂರರ ಗಡ್ಡದಂತೆ ದಾಡಿ ವಿಗ್ ಮಾಡಿಸಿದೆ. ಇದು ಅವರಿಗೆ ಸೊಗಸಾಗಿ ಹೊಂದಿಕೆಯಾಯ್ತು. ವಿಗ್ ಹಾಕಿ ಮೀಸೆ, ಹಣೆ, ಹುಬ್ಬು ಹೊಂದಿಸಿದೆ. ನಾನು ಕಲ್ಪಿಸಿದ್ದಕ್ಕಿಂತ ಪಾತ್ರ ಚೆನ್ನಾಗಿ ಕಾಣಿಸಿತ್ತು!
ಮೇಕಪ್ ಮುಗಿದ ನಂತರ ‘ಬಾವಾಜಿ’ಯನ್ನು ನಾನು ಮೊದಲು ತೋರಿಸಿದ್ದು ನಟ ರಾಜಕುಮಾರ್‌ರಿಗೆ. ಅವರಂತೂ ಅದ್ಭುತವಾಗಿದೆ ಎಂದು ಖುಷಿಪಟ್ಟರು. ನಂತರ ಸೆಟ್‌ನಲ್ಲಿ ನಿರ್ದೇಶಕ ವಿಜಯ್ ಅವರು ಮೇಕಪ್ ನೋಡಿ ಅವಾಕ್ಕಾದರು. ಸಾಮಾನ್ಯವಾಗಿ ಒಳ್ಳೆಯ ಕೆಲಸ ಮಾಡಿದ ತಂತ್ರಜ್ಞನಿಗೆ ಒಂದು ರೂಪಾಯಿ ಬಳುವಳಿ ಕೊಡುವುದು ಅವರ ಸಂಪ್ರದಾಯ. ಅಂದು ವಿಜಯ್ ಸಂಪ್ರದಾಯ ಮುರಿದು ಐದು ರೂ. ಗಿಫ್ಟ್ ಕೊಟ್ಟರು. ಮರುದಿನ ಸೆಟ್‌ಗೆ ಬಂದ ಹಿರಿಯ ಮೇಕಪ್ ಕಲಾವಿದ ದೊರೆಸ್ವಾಮಿ ಅವರನ್ನು ಕುರಿತು ರಾಜಕುಮಾರ್, “ದೊರೆಸ್ವಾಮಣ್ಣ, ನಮ್ಮ ಕೇಶವ ಬಹುಬೇಗ ಕೆಲಸ ಕಲಿತುಬಿಟ್ಟ. ಎಷ್ಟು ಚೆನ್ನಾಗಿ ಮೇಕಪ್ ಮಾಡಿದಾನೆ ನೋಡಿ..” ಎಂದರು. ದೊರೆಸ್ವಾಮಿ ಅವರು ಕೂಡ ಬೆನ್ನುತಟ್ಟಿ ಅಭಿನಂದಿಸಿದರು.
