ಸುಮಾರು ಐದು ದಶಕಗಳ ಕಾಲ ಕನ್ನಡ ಸಿನಿಮಾ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದವರು ಶ್ರೀಕೃಪಾ. ಪತ್ರಕರ್ತರಾಗಿ ಮಾತ್ರವಲ್ಲದೆ ಸಿನಿಮಾ – ಕಿರುತೆರೆ ಬರಹಗಾರರಾಗಿಯೂ ಅವರು ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಆಗಸ್ಟ್ 3ರಂದು ಅವರು ನಮ್ಮನ್ನು ಅಗಲಿದರು.
ಸಿನಿಮಾ ಪತ್ರಕರ್ತರಾಗಿ ಹಾಗೂ ಸಿನಿಮಾ – ಕಿರುತೆರೆ ಬರಹಗಾರರಾಗಿ ದಶಕಗಳ ಕಾಲ ಕಾರ್ಯನಿರ್ವಹಿಸಿದ ಶ್ರೀಕೃಪಾ ಇತ್ತೀಚೆಗೆ ಆಗಸ್ಟ್ 3ರಂದು ನಮ್ಮನ್ನು ಅಗಲಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 93ರ ಹರೆಯದಲ್ಲಿ ಇಹಲೋಕ ತ್ಯಜಿಸಿದರು. ‘ಶ್ರೀಕೃಪಾ’ ಎಂದೇ ಚಿರಪರಿಚಿತರಾಗಿದ್ದ ಅವರ ಜನ್ಮನಾಮ ಕೆ.ಉಪೇಂದ್ರ ಉರಾಳ. ಉಡುಪಿ ಜಿಲ್ಲೆ ಕೋಟಾ ಸಮೀಪದ ಹಂದಟ್ಟು, ಅವರ ಹುಟ್ಟೂರು. ತಂದೆ ಕೃಷ್ಣ ಉರಾಳ ಅವರು ರಂಗಭೂಮಿ ಕಲಾವಿದ, ನಾಟಕ ಸಂಸ್ಥೆಯ ಮಾಲೀಕರೂ ಹೌದು. ಮುಂದೆ ಬೆಂಗಳೂರು ಮಲ್ಲೇಶ್ವರದಲ್ಲಿ ಹೋಟೆಲ್ ಉದ್ಯಮ ಶುರುಮಾಡಿದರು. ತಂದೆಯವರಿಂದಾಗಿ ಪುತ್ರನಿಗೂ ಚಿಕ್ಕಂದಿನಲ್ಲೇ ಕಲೆ, ನಟನೆ ಬಗ್ಗೆ ಆಸಕ್ತಿ ಬೆಳೆಯಿತು.
ಶ್ರೀಕೃಪಾ ಅವರು ಹೈಸ್ಕೂಲ್ ದಿನಗಳಲ್ಲೇ ಸಾಹಿತ್ಯಕೃಷಿಗೆ ತೊಡಗಿಸಿಕೊಂಡರು. ಮಲ್ಲಿಗೆ ಬಳ್ಳಿ, ಕೊರವಂಜಿ ಶೀರ್ಷಿಕೆಗಳ ಕೈಬರಹದ ಪತ್ರಿಕೆಗಳನ್ನು ಹೊರತಂದರು. ಕಾಲೇಜು ವಿದ್ಯಾಭ್ಯಾಸ ಮಾಡುವಾಗ ಕಲಾನಿಕೇತನ ಸಂಸ್ಥೆ ಕಟ್ಟಿ ರಂಗಚಟುವಟಿಕೆಗಳತ್ತ ಹೊರಳಿದರು. ಓದಿದ್ದು ರೇಡಿಯೋ ಎಂಜಿನಿಯರಿಂಗ್. ಆದರೆ ಪತ್ರಿಕೋದ್ಯಮ, ಚಲನಚಿತ್ರರಂಗದಲ್ಲಿ ಬದುಕು ಕಂಡುಕೊಂಡರು. ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗಲೇ ಸಿನಿಮಾ ಬರವಣಿಗೆ ಶುರುಮಾಡಿದ್ದ ಅವರು ಕತೆ, ಕವನ, ಕಾದಂಬರಿ ರಚನೆಯಲ್ಲೂ ಗಮನ ಸೆಳೆದಿದ್ದರು.
ಶ್ರೀಕೃಪಾ ಅವರ ಸಿನಿಮಾ ಪತ್ರಿಕೋದ್ಯಮ ಶುರುವಾಗಿದ್ದು ‘ರೂಪಲೇಖ’ ಪತ್ರಿಕೆಯ ಸಹಸಂಪಾದಕತ್ವದೊಂದಿಗೆ. ಮುಂದೆ ‘ಚಿತ್ರಪ್ರಗತಿ’ ಸಂಪಾದಕರಾದರು. ‘ಚಲನಚಿತ್ರ’ ಪತ್ರಿಕೆ ಸಂಪಾದಕೀಯ ವಿಭಾಗದಲ್ಲೂ ಒಂದಷ್ಟು ಸಮಯ ಕೆಲಸ ಮಾಡಿದರು. ‘ತಾಯಿನಾಡು’ ದಿನಪತ್ರಿಕೆಯ ‘ವಾರದ ವಾಙ್ಮಯ’ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು ಅವರ ವೃತ್ತಿಬದುಕಿನ ಮತ್ತೊಂದು ಮಜಲು. ಈ ಅವಧಿಯಲ್ಲಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಿದರು. ಶ್ರೀಕೃಪಾ ಎಂದಾಕ್ಷಣ ಸಿನಿಮಾ ಪತ್ರಿಕೋದ್ಯಮದಲ್ಲಿ ‘ಲಾವಣ್ಯ’ ಪತ್ರಿಕೆ ನೆನಪಾಗುತ್ತದೆ. ‘ಲಾವಣ್ಯ’ ಚಲನಚಿತ್ರ ವಾರಪತ್ರಿಕೆ ಸಂಪಾದಕರಾಗಿ ದಶಕಗಳ ಕಾಲ ಅವರು ಕಾರ್ಯನಿರ್ವಹಿಸಿದರು. ಪತ್ರಿಕೆಯಲ್ಲಿ ವಿಶೇಷ ಅಂಕಣಗಳು, ಸುದ್ದಿ – ವಿಶ್ಲೇಷಣೆಗಳೊಂದಿಗೆ ಸಿನಿಮಾಸಕ್ತರ ಮೆಚ್ಚುಗೆಗೆ ಪಾತರಾದರು.
ಪತ್ರಿಕೋದ್ಯಮದ ಜೊತೆಗೆ ಸಿನಿಮಾ ಬರಹಗಾರರಾಗಿ ತೊಡಗಿಸಿಕೊಂಡಿದ್ದರು ಎನ್ನುವುದು ವಿಶೇಷ. ಗೀತರಚನೆ, ಸಂಭಾಷಣೆ, ಸಹನಿರ್ದೇಶನ, ನಿರ್ಮಾಣ ನಿರ್ವಹಣೆ… ಹೀಗೆ ವಿವಿಧ ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಕಲ್ಯಾಣಿ, ಯಾವ ಜನ್ಮದ ಮೈತ್ರಿ, ಗಂಧರ್ವ ಗಿರಿ, ಭಾಗ್ಯದ ಬೆಳಕು, ಸದಾನಂದ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ, ಮಲಯ ಮಾರುತ, ಆಸೆಯ ಬಲೆ, ಆತಂಕ… ಇವು ಅವರು ಬರಹಗಾರರಾಗಿ ಕೆಲಸ ನಿರ್ವಹಿಸಿದ ಪ್ರಮುಖ ಸಿನಿಮಾಗಳು. ಪಾಪ ಪಾಂಡು, ಸಿಲ್ಲಿ ಲಲ್ಲಿ, ಯಾಕ್ಹಿಂಗ್ ಆಡ್ತಿರೋ, ಪರಮಪದ, ಪಾಂಡು ಐಲವ್‌ಯೂ, ಚಿರಸ್ಮರಣೆ, ಸೆಂಟರ್ ಸ್ಟೇಜ್, ಪರಮಪದ, ಸಾತು ಪಾತು, ಪಾಯಿಂಟ್ ಪರಿಮಳ… ಅವರು ಕಾರ್ಯನಿರ್ವಹಿಸಿರುವ ಕೆಲವು ಪ್ರಮುಖ ಕಿರುತೆರೆ ಸರಣಿಗಳು.
ಸುಮಾರು ಐದು ದಶಕಗಳ ಕಾಲ ಕನ್ನಡ ಚಿತ್ರರಂಗದ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಾ ಬಂದವರು ಶ್ರೀಕೃಪಾ. ಕನ್ನಡ ಚಲನಚಿತ್ರ ಇತಿಹಾಸ ಕೃತಿ ರಚನೆಯ ಸಂಪಾದಕ ಮಂಡಳಿಯಲ್ಲಿ ದುಡಿದಿದ್ದ ಅವರು ಮೈಸೂರು ವಿಶ್ವವಿದ್ಯಾಲಯ ಹೊರತಂದ ವಿಶ್ವಕೋಶದಲ್ಲಿ ಕನ್ನಡ ಚಲನಚಿತ್ರರಂಗ ನಡೆದು ಬಂದ ಹಾದಿಯನ್ನು ದಾಖಲಿಸಿದ್ದಾರೆ. ಸಿನಿಮಾ ಪತ್ರಕರ್ತರಾಗಿ, ಸಿನಿಮಾ ಬರಹಗಾರರಾಗಿ ಸದ್ದಿಲ್ಲದೆ ಕೆಲಸ ಮಾಡಿದ ಶ್ರೀಕೃಪಾ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅವರ ಅಗಲಿಕೆಯೊಂದಿಗೆ ಕನ್ನಡ ಸಿನಿಮಾ ಪತ್ರಿಕೋದ್ಯಮದ ಹಳೆಯ ಕೊಂಡಿಯೊಂದು ಕಳಚಿದಂತಾಗಿದೆ.

‘ಮಲಯ ಮಾರುತ’ ಸಿನಿಮಾ ಚಿತ್ರೀಕರಣದ ವೇಳೆ ಚಿತ್ರತಂಡದೊಂದಿಗೆ ಶ್ರೀಕೃಪಾ (ಎಡ ತುದಿಯಲ್ಲಿ)







