(ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ)
ಗಾಂಧಿನಗರದಲ್ಲಿದ್ದ ನಮ್ಮ ‘ಪ್ರಗತಿ’ ಸ್ಟುಡಿಯೋಗೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅಗಾಗ್ಗೆ ಭೇಟಿ ನೀಡುತ್ತಿದ್ದರು. ಹಾಗೆ ಬರಲು ಕಾರಣವಿತ್ತು. ನಮ್ಮ ಸ್ಟುಡಿಯೋ ಎದುರು ಮನೆಯಲ್ಲಿ ಅವರ ಶ್ರೀಮತಿಯವರ ಸಂಬಂಧಿಗಳು ವಾಸವಾಗಿದ್ದರು. ಶ್ರೀಮತಿಯವರನ್ನು ಅವರ ಮನೆಯಲ್ಲಿ ಬಿಟ್ಟು ಬಂದು ವಿಜಯಭಾಸ್ಕರ್ ನಮ್ಮ ಸ್ಟೂಡಿಯೋದಲ್ಲಿ ಎರಡು, ಮೂರು ಗಂಟೆ ಕಾಲ ಕಳೆಯುತ್ತಿದ್ದರು. ನಮ್ಮ ಸ್ಟುಡಿಯೋದಲ್ಲಿ ಯಾವಾಗಲೂ ಯಾರಾದರೂ ಚಿತ್ರರಂಗದ ಗೆಳೆಯರು ಇದ್ದೇ ಇರುತ್ತಿದ್ದರು. ನನ್ನ ಅಣ್ಣ, ಚಿತ್ರನಿರ್ದೇಶಕ ನಾಗೇಶ್ ಬಾಬ ಹಾಗೂ ವಿಜಯಭಾಸ್ಕರ್ ಆತ್ಮೀಯ ಮಿತ್ರರು.
ಅದೇ ರೀತಿ ಒಮ್ಮೆ ನಮ್ಮ ಸ್ಟುಡಿಯೋಗೆ ಬಂದರು. ಅಪರೂಪಕ್ಕೆ ಅಂದು ನಾನು ಒಬ್ಬನೇ ಇದ್ದೆ. ಸ್ಟುಡಿಯೋಗೆ ಬಂದವರೆ, “ಎನ್ರೀ ಅಶ್ವತ್ಥ್ ನಿಮ್ಮ ಸ್ಟುಡಿಯೋದ ಟ್ಯೂಬ್‌ಲೈಟ್ ನಾಲ್ಕನೆಯ ಮನೆಯಲ್ಲಿ ಸಂಗೀತ ಹಾಡುತ್ತಿದೆ!” ಎಂದರು. ನಾನು ತಬ್ಬಿಬ್ಬಾದೆ. ವಿಷಯ ಇಷ್ಟು – ಟ್ಯೂಬ್‌ಲೈಟ್‌ನ ಚೋಕ್ ಹಳೆಯದಾಗಿ ‘ಗುಯ್ಯಂ’ ಎಂದು ನಿರಂತರವಾಗಿ ಶಬ್ಧ ಮಾಡುತಿತ್ತು. ಅದನ್ನು ಅವರು ಗುರುತಿಸಿದ್ದರು. “ಏನ್ ಸಾರ್ ನೀವು? ಪ್ರತಿಯೊಂದು ಶಬ್ಧದಲ್ಲೂ ಸಂಗೀತವನ್ನೇ ಗುರುತಿಸುತ್ತೀರಿ. ನನಗೆ ತಿಳಿಯುವುದಿಲ್ಲ. ನಿಮ್ಮ ಪ್ರಕಾರ ಸಂಗೀತವೆಂದರೆ ಏನು?” ಎಂದು ಕೇಳಿದೆ. “ಯಾವ ಶಬ್ದ ಕಿವಿಗೆ ಇಂಪಾಗಿ ಇರುತ್ತದೆಯೋ, ಅದುವೇ ಸಂಗೀತ. ಅದು ವ್ಯಕ್ತಿಯ ಅಭಿರುಚಿ, ಗ್ರಹಿಕೆಗೆ ಬಿಟ್ಟದ್ದು” ಎಂದರು ವಿಜಯಭಾಸ್ಕರ್.