ಹಿಂದಿ ಚಿತ್ರರಂಗದಲ್ಲಿ ಮಿಂಚು ಹರಿಸಿದ ದಕ್ಷಿಣದ ತಾರೆಯರ ಪೈಕಿ ವೈಜಯಂತಿಮಾಲಾ ಪ್ರಮುಖರು. ಮೂಲತಃ ಭರತನಾಟ್ಯ ಕಲಾವಿದೆಯಾದ ಅವರು ಆರಂಭದಲ್ಲಿ ತಮಿಳು ಚಿತ್ರಗಳಲ್ಲಿ ಅಭಿನಯಿಸಿದರು. ಇಲ್ಲಿನ ಯಶಸ್ಸು ಅವರನ್ನು ಹಿಂದಿ ಚಿತ್ರರಂಗಕ್ಕೆ ಕರೆದೊಯ್ದಿತು. ಗ್ಲಾಮರ್‌ಗಿಂತ ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಪಾತ್ರಗಳಲ್ಲೇ ವೈಜಯಂತಿಮಾಲಾ ಹೆಸರು ಮಾಡಿದ್ದರು ಎನ್ನುವುದು ವಿಶೇಷ.

ವೈಜಯಂತಿಮಾಲಾ ಹುಟ್ಟಿದ್ದು 1936, ಆಗಸ್ಟ್ 13ರಂದು ಚೆನ್ನೈನಲ್ಲಿ. ಚಿಕ್ಕಂದಿನಲ್ಲೇ ಅವರು ಭರತನಾಟ್ಯ ಅಭ್ಯಾಸ ಮಾಡಿದರು. ತಮ್ಮ 15ರ ಹರೆಯದಲ್ಲೇ `ವಝಕೈ’ ತಮಿಳು ಚಿತ್ರದಲ್ಲಿ ಆಕೆ ದೊಡ್ಡ ಹೆಸರು ಗಳಿಸಿದರು. ಇದೇ ಚಿತ್ರ 1951ರಲ್ಲಿ `ಬಹಾರ್’ ಶೀರ್ಷಿಕೆಯಡಿ ಹಿಂದಿಯಲ್ಲಿ ತಯಾರಾಯಿತು. ಚೊಚ್ಚಲ ಹಿಂದಿ ಚಿತ್ರದಲ್ಲೇ ಅವರು ಸಿನಿಮಾ ವಿಶ್ಲೇಷಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

`ಲಡ್ಕಿ’, `ನಾಗಿನ್’ (1954) ಹಿಂದಿ ಚಿತ್ರಗಳ ಪಾತ್ರಗಳ ಮೂಲಕ ಅವರು ಪ್ರೇಕ್ಷಕರಿಗೆ ಚಿರಪರಿಚಿತರಾದರು. ಹೇಮಂತ್‌ಕುಮಾರ್ ಸಂಗೀತ ಸಂಯೋಜನೆಯಲ್ಲಿ ವೈಜಯಂತಿ ನರ್ತಿಸಿದ `ಮನ್ ಡೋಲೆ, ಮೇರೆ ತನ್ ಡೋಲೆ’ (ನಾಗಿನ್) ಇಂದಿಗೂ ಸಿನಿರಸಿಕರಿಗೆ ನೆನಪಾಗುತ್ತದೆ. ನಿರ್ದೇಶಕ ಬಿಮಲ್ ರಾಯ್ `ದೇವದಾಸ್’ ಚಿತ್ರದಲ್ಲಿ ದಿಲೀಪ್‌ಕುಮಾರ್‌ಗೆ ನಾಯಕಿಯಾಗಿ ವೈಜಯಂತಿ ಅವರನ್ನು ಆಯ್ಕೆ ಮಾಡಿದರು. ಈ ಚಿತ್ರದ ಯಶಸ್ಸಿನ ನಂತರ ವೈಜಯಂತಿ ಅವರು ದಿಲೀಪ್ ಜತೆ ಮಧುಮತಿ, ಗಂಗಾ ಜಮುನ, ಲೀಡರ್ ಮತ್ತು ನಯಾ ದೌರ್ ಚಿತ್ರಗಳಲ್ಲಿ ಅಭಿನಯಿಸಿದರು. ಮಧುಮತಿ ಮತ್ತು ಗಂಗಾ ಜಮುನ ಚಿತ್ರಗಳ ಉತ್ತಮ ಪಾತ್ರಪೋಷಣೆಗಾಗಿ ಅವರು ಫಿಲ್ಮ್‌ಫೇರ್‌ನಿಂದ ಪುರಸ್ಕೃತರಾದರು.

ರಾಜ್‌ಕಪೂರ್ ಜತೆ ನಟಿಸಿದ `ಸಂಗಂ’ ಚಿತ್ರಕ್ಕಾಗಿ ಮತ್ತೊಮ್ಮೆ ವೈಜಯಂತಿ ಫಿಲ್ಮ್‌ಫೇರ್‌ನಿಂದ ಗೌರವಿಸಲ್ಪಟ್ಟರು. ತಾವು ಅಭಿನಯಿಸಿದ ಐತಿಹಾಸಿಕ `ಅಮ್ರಪಾಲಿ’ ಚಿತ್ರದ ಬಗ್ಗೆ ಅವರಿಗೆ ಅಪಾರ ಭರವಸೆಯಿತ್ತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ಇದರಿಂದ ವೈಜಯಂತಿಗೆ ತೀವ್ರ ಅಸಮಾಧಾನವಾಗಿತ್ತು. ದೇವ್ ಆನಂದ್ ಜತೆಗಿನ ಜ್ಯೂಯೆಲ್ ಥೀಫ್, ಸೂರಜ್ (ರಾಜೇಂದ್ರ ಕುಮಾರ್), ಪ್ರಿನ್ಸ್ (ಶಮ್ಮಿ ಕಪೂರ್), ನ್ಯೂ ಡೆಲ್ಲಿ (ಕಿಶೋರ್ ಕುಮಾರ್), ವೈಜಯಂತಿ ಅವರ ಕೆಲವು ಪ್ರಮುಖ ಹಿಂದಿ ಚಿತ್ರಗಳು.

ಇರುಬುಥಿರೈ, ಥೆನಿಲವು, ವಾಝಕೈ, ಪೆಣ್, ಪಾರ್ಥಿಬನ್ ಕನವು, ಬಾಗ್ದಾದ್ ಥಿರುದನ್ ತಮಿಳು ಚಿತ್ರಗಳಲ್ಲಿ ಅವರಿಗೆ ಗಮನಾರ್ಹ ಪಾತ್ರಗಳಿದ್ದವು. ನಟ ರಾಜ್‌ಕಪೂರ್ ಕುಟುಂಬದ ಖಾಸಗಿ ವೈದ್ಯ ಡಾ.ಚಮನ್‌ಲಾಲ್ ಬಾಲಿ ಅವರನ್ನು ವೈಜಯಂತಿ ಪ್ರೀತಿಸಿ ವಿವಾಹವಾದರು. ಈ ದಾಂಪತ್ಯಕ್ಕೆ ಪುತ್ರ ಸುಚೀಂದ್ರ ಜನಿಸಿದ. ವಿವಾಹದ ನಂತರ ಸಿನಿಮಾ ತೊರೆದ ವೈಜಯಂತಿ ಚೆನ್ನೈನಲ್ಲಿ ನೆಲೆಸಿದರು. ಪತಿಯ ನಿಧನದ ನಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ವೈಜಯಂತಿಮಾಲಾ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಜ್ಯೋತಿ ಸಬರ್‌ವಾಲ್ ಅವರೊಡಗೂಡಿ ವೈಜಯಂತಿ ತಮ್ಮ ಆತ್ಮಕತೆ `ಬಾಂಡಿಂಗ್’ ರಚಿಸಿದ್ದಾರೆ. 1995ರಲ್ಲಿ ಫಿಲ್ಮ್‌ಫೇರ್‌ನಿಂದ ಅವರಿಗೆ ಜೀವಮಾನ ಸಾಧನೆ ಗೌರವ ಸಂದಿತು.
