ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಜ್ ಕುಳಿತ ಎಮ್ಮೆ ಆದ್ದರಿಂದ ಡಿಮಾಂಡ್ ಬಂತು!

ಪೋಸ್ಟ್ ಶೇರ್ ಮಾಡಿ
ಬಿ.ಮಲ್ಲೇಶ್‌
ಚಿತ್ರನಿರ್ದೇಶಕ

ರಾಜ್‌ ಕನ್ನಡ ನಾಡಿನ ಅತ್ಯಂತ ಜನಪ್ರಿಯ ತಾರೆ. ಅವರ ಜನಪ್ರಿಯತೆಗೆ ಸಾಕ್ಷಿಯಾದ ತಮಾಷೆಯ ಘಟನೆಯೊಂದು ಇಲ್ಲಿದೆ. ಹಿರಿಯ ಚಿತ್ರನಿರ್ದೇಶಕ ಬಿ.ಮಲ್ಲೇಶ್‌ ‘ಸಂಪತ್ತಿಗೆ ಸವಾಲ್’ ಸಿನಿಮಾದ ಚಿತ್ರೀಕರಣ ಸಂದರ್ಭವೊಂದನ್ನು ಮೆಲುಕು ಹಾಕಿದ್ದಾರೆ.

ರಾಜಕುಮಾರ್ ವೃತ್ತಿ ಜೀವನದಲ್ಲಿ ‘ಸಂಪತ್ತಿಗೆ ಸವಾಲ್’ (1974) ಮಹತ್ವದ ತಿರುವು. ಈ ಚಿತ್ರದೊಂದಿಗೆ ಅವರು ಗಾಯಕರೂ ಆದರು ಎನ್ನುವುದು ವಿಶೇಷ. ಚಿತ್ರದ ನಿರ್ದೇಶಕ ಎ.ವಿ.ಶೇಷಗಿರಿರಾವ್ ಅವರಿಗೆ ನಾನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಚಿತ್ರದಲ್ಲಿನ ‘ಯಾರೇ ಕೂಗಾಡಲಿ..’ ಹಾಡಿಗೆ ಅವರ ಹುಟ್ಟೂರು ಗಾಜನೂರಿನಲ್ಲೇ ಚಿತ್ರೀಕರಣ ನಡೆದದ್ದು. ರಾಜ್ ಎಮ್ಮೆಯೊಂದರ ಮೇಲೆ ಕುಳಿತು ಹಾಡುವುದನ್ನು ಚಿತ್ರಿಸಬೇಕಿತ್ತು. ಎಮ್ಮೆಯೊಂದನ್ನು ಹೊಂದಿಸುವಂತೆ ಶೇಷಗಿರಿರಾಯರು ನನಗೆ ಸೂಚಿಸಿದರು.

ಗಾಜನೂರಿನಲ್ಲಿ ಎಮ್ಮೆಗಾಗಿ ಹುಡುಕಾಡಿದೆ. ಕೊಂಬು ನೆಟ್ಟಗಿರುವಂಥ ಲಕ್ಷ್ಮಣವಾದ ಎಮ್ಮೆ ಸಿಗಲಿಲ್ಲ. ಕೊನೆಗೆ ಪಕ್ಕದ ಹಳ್ಳಿಯೊಂದರಲ್ಲಿ ಅಂಥದ್ದೊಂದು ಎಮ್ಮೆ ಸಿಕ್ಕಿತು. ಅದನ್ನು ತಂದು ನಿರ್ದೇಶಕರೆದುರು ನಿಲ್ಲಿಸಿದೆ. ಅಂದು ಸಂಜೆ ಹಾಡಿನ ಮೂರ್ನಾಲ್ಕು ಸನ್ನಿವೇಶಗಳನ್ನಷ್ಟೇ ಚಿತ್ರಿಸಲು ಸಾಧ್ಯವಾಗಿದ್ದು. ಶೂಟಿಂಗ್ ಮುಗಿದ ನಂತರ ಎಮ್ಮೆಯನ್ನು ಮರಳಿ ಅದರ ಮಾಲೀಕರಿಗೆ ತಲುಪಿಸಿದೆ. ಮಾರನೆಯ ದಿನ ಬೆಳಗ್ಗೆ ಬಂದು ಮತ್ತೆ ಎಮ್ಮೆ ಕರೆದೊಯ್ಯುವುದಾಗಿ ಹೇಳಿಯೇ ಬಂದಿದ್ದೆ.

ಮಾರನೆಯ ದಿನ ಎಮ್ಮೆ ಕರೆತರಲು ಹೋದಾಗ ಎಡವಟ್ಟಾಗಿತ್ತು. ಹಿಂದಿನ ದಿನ ಕರೆದೊಯ್ದ ಎಮ್ಮೆ ಕೊಟ್ಟಿಗೆಯಲ್ಲಿಲ್ಲ! ಏನಾಯ್ತು ಎಂದು ಕೇಳಿದಾಗ, “ರಾಜ್ ಕುಳಿತ ಎಮ್ಮೆ ಆದ್ದರಿಂದ ಡಿಮಾಂಡ್ ಬಂತು! ಒಂದೂವರೆ ಸಾವಿರಕ್ಕೆ ಅದನ್ನು ಮಾರಿಬಿಟ್ಟೆ! ಬೇರೆ ಎಮ್ಮೆ ಹೊಡೆದುಕೊಂಡು ಹೋಗಿ..” ಎಂದ ಮಾಲೀಕ. “ಅಯ್ಯೋ ಮಾರಾಯ.. ಶೂಟಿಂಗ್ ಅರ್ಧ ಆಗಿದೆ ಕಣಯ್ಯಾ, ಕಂಟ್ಯೂನಿಟಿಗೆ ಪ್ರಾಬ್ಲಂ ಆಗುತ್ತೆ” ಎಂದು ಅಲವತ್ತುಕೊಂಡೆ. ಆದರೆ, ಏನೂ ಮಾಡುವಂತಿರಲಿಲ್ಲ. ಕೊನೆಗೆ ಮತ್ತೆಲ್ಲೋ ಅವಸರಕ್ಕೆ ಹುಡುಕಿ ಹಿಂದಿನ ದಿನದ ಎಮ್ಮೆಯನ್ನೇ ಹೋಲುವಂಥ ಬೇರೊಂದು ಎಮ್ಮೆಯನ್ನು ಕರೆದೊಯ್ದೆ!

ಶೂಟಿಂಗ್ ಆರಂಭವಾಯ್ತು. ಎಮ್ಮೆ ಹತ್ತಿ ಕುಳಿತ ರಾಜ್‌ರಿಗೆ ಅದೇನೋ ಇರುಸುಮುರುಸಾಗಿದೆ! ನನ್ನನ್ನು ಹತ್ತಿರ ಕರೆದು, “ಇದು ನಿನ್ನೆ ತಂದಿದ್ದ ಎಮ್ಮೆ ಏನಯ್ಯಾ? ಯಾಕೋ ಇದರ ಕೂದಲು ಚುಚ್ತಾ ಇದ್ಯಲ್ಲಾ!” ಎಂದು ಅನುಮಾನಿಸಿದರು. “ಏನೋ ಎಡವಟ್ಟಾಗಿದೆ ಅಣ್ಣ. ನಿರ್ದೇಶಕರಿಗೆ ಹೇಳ್ಬೇಡಿ, ಬಯ್ತಾರೆ” ಎಂದು ನಾನು ಬೇಡಿಕೊಂಡೆ. ಅವರ ಬೇಡಿಕೆಗೆ ಸ್ಪಂದಿಸಿದ ರಾಜ್ ನಗುತ್ತಲೇ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಸೂಕ್ಷ್ಮವಾಗಿ ಗಮನಿಸಿದರೆ ಹಾಡಿನಲ್ಲಿ ಎರಡು ಎಮ್ಮೆಗಳನ್ನು ಗುರುತಿಸಬಹುದು!

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಕಲ್ಲು – ಮುಳ್ಳೆನ್ನದೆ ಓಡಿದ್ದೆ…

ಚಿತ್ರೀಕರಣದಲ್ಲಿ ಆಗ ನನ್ನಲ್ಲಿರುತ್ತಿದ್ದ ಹುರುಪು, ಉತ್ಸಾಹ ನೆನಪಿಸಿಕೊಂಡರೆ ಈಗಲೂ ಖುಷಿಯಾಗುತ್ತದೆ. ಹೆಚ್ಚಿನ ತಂತ್ರಜ್ಞಾನ, ಅನುಕೂಲತೆಗಳು ಇಲ್ಲದ ಅಂದಿನ ಸಂದರ್ಭಗಳಲ್ಲಿ ಈ

ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು!

ನಿರ್ದೇಶಕರು ಹೆಚ್ಚು ಅವಧಿಯ ಶಾಟ್‍ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‍ಗಳು ಪೋಲಾಗುತ್ತವೆಂದು ಕೆಲವು ಬಾರಿ ಆ ನಿರ್ಮಾಪಕ ಕ್ಯಾಮರಾಗೆ

ಡೆಲ್ಲಿ ಪೂರಾ ಸುತ್ನಾ..!

ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ

ಬಾಲಣ್ಣ ನೆರವಿಗೆ ಬಂದರು…

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಬಾಲಕೃಷ್ಣ ಅವರೊಂದಿಗೆ ಚಿತ್ರವೊಂದರಲ್ಲಿ ನಟಿಸುವ ಪುಟ್ಟ ಅವಕಾಶ ಸಿಕ್ಕಿತ್ತು. ಆಗಿನ್ನೂ ನಾನು ಸಿನಿಮಾಗೆ