
ನಟ
ಬಾಲಣ್ಣ ತಮ್ಮ ನೆಚ್ಚಿನ ಬರ್ಕ್‍ಲೀ ಬ್ರಾಂಡ್ ಸಿಗರೇಟು ಸೇದುವ ಶೈಲಿಯೂ ನನಗೆ ಇಷ್ಟವಾಗುತ್ತಿತ್ತು. ಬಾಲಣ್ಣ ಸೇದಿದ ಸಿಗರೇಟಿನ ಬೂದಿ ಕೆಳಗೆ ಬೀಳದಂತೆ ನಾನು ಹಿಡಿದುಕೊಳ್ಳುತ್ತಿದ್ದೆ. ಒಂದೆರಡು ಬಾರಿ ಈ ಬೂದಿಯನ್ನು ಹಣೆಗೆ ನಾಮದಂತೆ ಬಳಿದುಕೊಂಡಿದ್ದೂ ಇದೆ!
ನಟ ಬಾಲಕೃಷ್ಣರ ದಿನ ಹೆಚ್ಚಾಗಿ ಆರಂಭವಾಗುತ್ತಿದ್ದುದೇ ಹೋಟೆಲ್ ಹೈಲ್ಯಾಂಡ್ಸ್ ಆವರಣದಿಂದ. ಹೈಲ್ಯಾಂಡ್ಸ್‍ನ ಆವರಣದಲ್ಲಿ ಆಗ ದೊಡ್ಡದೊಂದು ಮರವಿತ್ತು. ಆ ಮರದ ಕಟ್ಟೆಯೇ ತಮ್ಮ ಆಫೀಸು ಎನ್ನುತ್ತಿದ್ದರಂತೆ ಬಾಲಣ್ಣ. ಅಲ್ಲಿ ಅವರು ತಮ್ಮ ಸಿನಿಮಾ ಸ್ನೇಹಿತರನ್ನು ಭೇಟಿ ಮಾಡುತ್ತಿದ್ದರು. ಅಲ್ಲಿಗೊಂದು ವಿಸಿಟ್ ಕೊಟ್ಟ ನಂತರವೇ ಬಾಲಣ್ಣ ಶೂಟಿಂಗ್‍ಗೆ ಹೊರಡುತ್ತಿದ್ದುದು. ಆಗ ಒಂದಷ್ಟು ವರ್ಷ ನಾನು ಹೈಲ್ಯಾಂಡ್ಸ್‍ನ ರೂಂ. ನಂಬರ್ 46ರಲ್ಲಿ ಇರುತ್ತಿದ್ದೆ. ಬಾಲಣ್ಣನಿಗೆ ನನ್ನನ್ನು ಕಂಡರೆ ವಿಶೇಷ ಪ್ರೀತಿ. ಮರದ ಆವರಣಕ್ಕೆ ಬರುತ್ತಿದ್ದಂತೆಯೇ, `ಏ ರೂಂ ಕೃಷ್ಣ, ಬಾರೋ!’ ಎಂದು ಕೂಗುತ್ತಿದ್ದರು. ಬಾಲಣ್ಣನ ಕರೆ ಕೇಳಿಸುತ್ತಲೇ ನಾನು ಕೆಳಗೆ ಓಡುತ್ತಿದ್ದೆ.
ನನಗೋ, ಬಾಲಣ್ಣನೆಂದರೆ ಅಪಾರ ಗೌರವ. ಅಂಬಾಸಿಡರ್ ಕಾರು, ಬಟನ್ ಇರದ ಅಂಗಿ, ಅಂಗಿಗೆ ಎರಡು ಜೇಬು, ಟೋಪಿ.. ಬಾಲಣ್ಣನ ಸ್ಟೈಲೇ ಚೆಂದ. ಅವರು ತಮ್ಮ ನೆಚ್ಚಿನ ಬರ್ಕ್‍ಲೀ ಬ್ರಾಂಡ್ ಸಿಗರೇಟು ಸೇದುವ ಶೈಲಿಯೂ ನನಗೆ ಇಷ್ಟವಾಗುತ್ತಿತ್ತು. ಬಾಲಣ್ಣ ಸೇದಿದ ಸಿಗರೇಟಿನ ಬೂದಿ ಕೆಳಗೆ ಬೀಳದಂತೆ ನಾನು ಹಿಡಿದುಕೊಳ್ಳುತ್ತಿದ್ದೆ! ಒಂದೆರಡು ಬಾರಿ ಈ ಬೂದಿಯನ್ನು ಹಣೆಗೆ ನಾಮದಂತೆ ಬಳಿದುಕೊಂಡಿದ್ದೂ ಇದೆ. ಆಗ ನನಗೆ ಬಾಲಣ್ಣನವರೇ ಆದರ್ಶ. ಹೇಗಾದರೂ ಮಾಡಿ ಅವರನ್ನು ನಗಿಸಬೇಕೆನ್ನುವುದು ಒಂದು ನೆಪವಾದರೆ, ಅವರೆಡೆಗಿನ ಅಭಿಮಾನದ ಪರಮಾವಧಿ ಮತ್ತೊಂದು ಕಾರಣ!