ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟರಾಗಿ ಅದೃಷ್ಟ ಪರೀಕ್ಷಿಸಿದ್ದ ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು

ಪೋಸ್ಟ್ ಶೇರ್ ಮಾಡಿ

ಕರ್ನಾಟಕದ ಹರಿಕಥಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಗುರುರಾಜುಲು ನಾಯ್ಡು. ಕಂಚಿನ ಕಂಠ, ಭಾವಪೂರ್ಣ ಮಾತಿನ ಶೈಲಿಯಿಂದ ಹರಿಕಥೆಯನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ಅವರದು. ಗುರುರಾಜುಲು ಅವರ ಧ್ವನಿಯಲ್ಲಿ 100ಕ್ಕೂ ಹೆಚ್ಚು ಹರಿಕಥೆಯ ಧ್ವನಿಸುರಳಿಗಳು ದಾಖಲಾಗಿವೆ! ಹರಿಕಥೆಯಲ್ಲಿ ಖ್ಯಾತಿ ಪಡೆಯುವ ಮುನ್ನ ಅವರು ಚಿತ್ರನಟರಾಗಿ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಟನೆ ಅವರ ಪ್ರೀತಿಯ ಹವ್ಯಾಸವಾಗಿತ್ತು. ಬೆಳ್ಳಿತೆರೆಯಲ್ಲಿ ಅವರು ‘ಅರುಣ್‌ ಕುಮಾರ್‌’ ಎಂದು ಗುರುತಿಸಿಕೊಂಡಿದ್ದರು.

ಅವರ ತಂದೆ ರಾಮಸ್ವಾಮಿನಾಯ್ಡು ಮೈಸೂರು ವಾಸಿ. ಮೇಷ್ಟ್ರಾಗಿದ್ದ ಅವರು ಹರಿಕಥೆಯನ್ನೂ ಮಾಡುತ್ತಿದ್ದರು. ಹಾಗಾಗಿ ಗುರುರಾಜುಲು ಅವರಿಗೆ ಹರಿಕಥೆ ತಂದೆಯಿಂದ ಬಂದ ಬಳುವಳಿ. ಬಾಲ್ಯದಲ್ಲೇ ಅವರು ತಂದೆಯ ಜೊತೆಗೆ ಹರಿಕಥೆ ಕಚೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾಲಾನಂತರ ಅವರ ಕುಟುಂಬ ಮೈಸೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿತು. ಶಾಲೆಯಲ್ಲಿ ಕಲಿಯುತ್ತಿದ್ದಾಗ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಗುರುರಾಜುಲು ಅವರು ನಾಟಕಗಳಲ್ಲಿ ಅಭಿನಯಿಸತೊಡಗಿದರು. ತಾವೇ ನಾಟಕ ಕಂಪನಿಯೊಂದನ್ನು ಕಟ್ಟಿ ಎಚ್ಚಮನಾಯಕ, ಛತ್ರಪತಿ ಶಿವಾಜಿ, ರಾಜಾ ಕೆಂಪೇಗೌಡ ಮುಂತಾದ ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದರು.

‘ಮರ್ಯಾದೆ ಮಹಲ್‌’ ಚಿತ್ರದಲ್ಲಿ ಅರುಣ್ ಕುಮಾರ್‌

ತಂದೆ ಅನಾರೋಗ್ಯಕ್ಕೀಡಾದಾಗ ಮನೆಯ ಆರ್ಥಿಕ ಸಂಕಷ್ಟ ತೂಗಿಸಲು ಎಚ್‌ಎಎಲ್‌ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಯೂ ತಂಡವೊಂದನ್ನು ಕಟ್ಟಿ ನಾಟಕಗಳನ್ನು ಮಾಡಿದ ಅವರು ನಟನಾಗುವ ಇರಾದೆಯಿಂದ ಕೆಲಸ ಬಿಟ್ಟರು. ಆಗ ಅವರಿಗೆ ನೆರವಾಗಿದ್ದು ನಟ, ನಿರ್ದೇಶಕ ನಾಗೇಂದ್ರರಾಯರು. ಅವರು ತಮ್ಮ ‘ಆನಂದಭಾಷ್ಪ’ (1963) ಚಿತ್ರದ ದೊಡ್ಡ ಪಾತ್ರದ ಅವಕಾಶ ಕಲ್ಪಿಸಿದರು. ಸಿನಿಮಾರಂಗ ಪ್ರವೇಶಿಸಿದಾಗ ಗುರುರಾಜುಲು ಅವರ ಹೆಸರು ‘ಅರುಣ್‌ ಕುಮಾರ್‌’ ಎಂದು ಬದಲಾಯಿತು.

ಹರಿಕಥೆ ಕಚೇರಿಯಲ್ಲಿ ಗುರುರಾಜುಲು ನಾಯ್ಡು

ಪ್ರೇಮಮಯಿ, ಮಧುಮಾಲತಿ, ಇಮ್ಮಡಿ ಪುಲಕೇಶಿ, ಮಹಾಸತಿ ಅರುಂಧತಿ, ಹಣ್ಣೆಲೆ ಚಿಗುರಿದಾಗ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ಮೂರುವರೆ ವಜ್ರಗಳು, ಮಿಸ್ ಲೀಲಾವತಿ, ಆಷಾಡಭೂತಿ, ಕಾವೇರಿ ಅವರು ನಟಿಸಿದ ಪ್ರಮುಖ ಚಿತ್ರಗಳು. ಈ ಮಧ್ಯೆ ‘ಅರುಣ್ ಕುಮಾರ್ ಮಿತ್ರಮಂಡಳಿ’ ತಂಡ ರೂಪಿಸಿ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿದರು. ಬೆಳ್ಳಿತೆರೆಯಲ್ಲಿ ನಾಯಕನಟನಾಗುವ ಅವರ ಬಯಕೆ ಈಡೇರಲಿಲ್ಲ. ಕೊನೆಗೆ ತಮ್ಮ ತವರು ಹರಿಕಥೆ ಕ್ಷೇತ್ರಕ್ಕೆ ಮರಳಿದ ಅವರು ಹರಿಕಥೆಯಲ್ಲಿ ಬಹುದೊಡ್ಡ ಹೆಸರು ಮಾಡಿದರು.

ಗುರುರಾಜುಲು ನಾಯ್ಡು (ಅರುಣ್ ಕುಮಾರ್‌) | ಜನನ: 30/10/1931 | ನಿಧನ: 14/04/1985
(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ ಕೃತಿ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಡಿ.ಕೆ.ಸಪ್ರು

ಕಾಶ್ಮೀರ ಮೂಲದ ದಯಾ ಕಿಶನ್ ಸಪ್ರು ಹಿಂದಿ ಸಿನಿಮಾ ನಟ. ಆರಂಭದಲ್ಲಿ ನಾಯಕನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ ಸಪ್ರು ಮುಂದೆ

Exit mobile version