
ಕತೆಗಾರ
ಕನ್ನಡದಲ್ಲಿ ಎಸ್ಪಿಬಿ ಗಾಯನಸುಧೆ ಆರಂಭವಾಗಿದ್ದು ‘ನಕ್ಕರದೇ ಸ್ವರ್ಗ’ ಚಿತ್ರದ ‘ಕನಸಿದೋ ನನಸಿದೋ’ ಹಾಡಿನೊಂದಿಗೆ. ಅರುಣ್ ಕುಮಾರ್ ಮತ್ತು ಜಯಂತಿ ಜೋಡಿ ಮೇಲೆ ಚಿತ್ರಣವಾದ ಹಾಡಿದು. ಹಾಗೆ ಎಸ್ಪಿಬಿ ಅವರ ಮೊದಲ ಕನ್ನಡ ಚಿತ್ರಗೀತೆಯ ಹೀರೋ ಅರುಣ್ ಕುಮಾರ್ ಆದರು.
ಮೇರು ಗಾಯಕ ಎಸ್ಪಿಬಿ ಹಾಡಿದ ಮೊದಲ ಕನ್ನಡ ಚಿತ್ರಗೀತೆ ‘ಕನಸಿದೋ ನನಸಿದೋ’. ಎಂ.ಆರ್.ವಿಠ್ಠಲ್ ನಿರ್ದೇಶನದ ‘ನಕ್ಕರದೇ ಸ್ವರ್ಗ’ (1966) ಚಿತ್ರದ ಹಾಡಿದು. ಎಂ.ರಂಗರಾವ್ ಸಂಗೀತ ಸಂಯೋಜನೆಯಲ್ಲಿ ಪಿ.ಸುಶೀಲಾ ಅವರ ಜೊತೆ ಎಸ್ಪಿಬಿ ಈ ಗೀತೆ ಹಾಡಿದ್ದಾರೆ. ವಿಜಯ ನಾರಸಿಂಹ ಅವರ ರಚನೆ. ವಿಶೇಷವೇನೆಂದರೆ ನಟಿ ಜಯಂತಿ ಅವರ ಜೊತೆ ಈ ಹಾಡಿನಲ್ಲಿ ನಟಿಸಿದವರು ಖ್ಯಾತ ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು. ಗಾಯಕ ಎಸ್ಪಿಬಿ ಅವರು ಡಾ. ರಾಜಕುಮಾರ್ ಸೇರಿದಂತೆ ಕನ್ನಡದ ಹಲವಾರು ಹಿರೋಗಳಿಗೆ ಹಾಡಿದ್ದರೂ ಅವರು ಮೊದಲು ಹಾಡಿದ್ದು ಯಾವ ಹೀರೋಗೆ ಅಂತ ಕೇಳಿದರೆ, ಗುರುರಾಜುಲು ನಾಯ್ಡು ಅವರ ಹೆಸರು ಹೇಳಬೇಕು.
ಗುರುರಾಜುಲು ನಾಯ್ಡು ಅವರು ಚಿತ್ರರಂಗದಲ್ಲಿ ಅರುಣ್ ಕುಮಾರ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. ಪ್ರೇಮಮಯಿ, ಮಧುಮಾಲತಿ, ಇಮ್ಮಡಿ ಪುಲಕೇಶಿ, ಮಹಾಸತಿ ಅರುಂಧತಿ, ಹಣ್ಣೆಲೆ ಚಿಗುರಿದಾಗ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ಮೂರುವರೆ ವಜ್ರಗಳು, ಮಿಸ್ ಲೀಲಾವತಿ, ಆಷಾಡಭೂತಿ, ಕಾವೇರಿ.. ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಬೆಳ್ಳಿತೆರೆಯಲ್ಲಿ ನಾಯಕನಟನಾಗುವ ಅವರ ಬಯಕೆ ಈಡೇರಲಿಲ್ಲ. ಕೊನೆಗೆ ತಮ್ಮ ತವರು ಹರಿಕಥೆ ಕ್ಷೇತ್ರಕ್ಕೆ ಮರಳಿದ ಅವರ ಹರಿಕಥೆಯಲ್ಲಿ ಬಹುದೊಡ್ಡ ಹೆಸರು ಮಾಡಿದರು.
